ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಜಿಎಸ್‌ಟಿ– ಯುಟಿಲಿಟಿ ವಾಹನಗಳ ಮೇಲೆ ತೆರಿಗೆ ಏರಿಕೆ
ಆಳ–ಅಗಲ: ಜಿಎಸ್‌ಟಿ– ಯುಟಿಲಿಟಿ ವಾಹನಗಳ ಮೇಲೆ ತೆರಿಗೆ ಏರಿಕೆ
ಯುಟಿಲಿಟಿ ವಾಹನಗಳ ಖರೀದಿಗಾಗಿ ಜನರು ಈ ಹಿಂದಿಗಿಂತಲೂ ಹೆಚ್ಚಿನ ಹಣ ನೀಡಬೇಕಿದೆ
Published 17 ಜುಲೈ 2023, 0:40 IST
Last Updated 17 ಜುಲೈ 2023, 0:40 IST
ಅಕ್ಷರ ಗಾತ್ರ

ದೇಶದಲ್ಲಿ ಮಾರಾಟವಾಗುವ ಎಲ್ಲಾ ಸ್ವರೂಪದ ವಾಹನಗಳಲ್ಲಿ ಎಸ್‌ಯುವಿಗಳಿಗೆ (ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್) ಗರಿಷ್ಠ ಪ್ರಮಾಣದ ತೆರಿಗೆ ಅನ್ವಯವಾಗುತ್ತದೆ. ಯುಟಿಲಿಟಿ ವಾಹನಗಳಿಗೆ ಶೇ 48ರಷ್ಟು ಅನ್ವಯವಾಗುತ್ತಿತ್ತು. ಎಸ್‌ಯುವಿ ವ್ಯಾಖ್ಯಾನದಲ್ಲಿನ ಗೊಂದಲದಿಂದಾಗಿ ಕೆಲವು ನೈಜ ಎಸ್‌ಯುವಿಗಳಿಗೆ ಕಡಿಮೆ ದರದ ತೆರಿಗೆ ಅನ್ವಯವಾಗುತ್ತಿತ್ತು. ಇದನ್ನು ಸರಿಪಡಿಸಬೇಕು ಎಂಬ ಬೇಡಿಕೆಯೂ ಜಿಎಸ್‌ಟಿ ಮಂಡಳಿ ಎದುರು ಇತ್ತು. ಆದರೆ, ಈಗ ಎಸ್‌ಯುವಿ ಎಂಬ ವ್ಯಾಖ್ಯಾನವನ್ನೇ ತೆಗೆದುಹಾಕಿರುವ ಜಿಎಸ್‌ಟಿ ಮಂಡಳಿಯು, ಯುಟಿಲಿಟಿ ವಾಹನಗಳನ್ನೂ ಗರಿಷ್ಠ ತೆರಿಗೆ ದರದ ವ್ಯಾಪ್ತಿಗೆ ತಂದಿದೆ. ಈ ಮೂಲಕ ಜಿಎಸ್‌ಟಿ ಮಂಡಳಿಯು ಯುಟಿಲಿಟಿ ವಾಹನಗಳ ಮೇಲಿನ ತೆರಿಗೆ ಹೊರೆಯನ್ನು ಹೆಚ್ಚಿಸಿದೆ. ಈ ತೆರಿಗೆ ಹೆಚ್ಚಳವನ್ನು ಕೇಂದ್ರ ಮತ್ತು ಎಲ್ಲಾ ರಾಜ್ಯಗಳೂ ಒಪ್ಪಿಕೊಂಡಿವೆ. ಅಂತಿಮವಾಗಿ ಯುಟಿಲಿಟಿ ವಾಹನಗಳ ಖರೀದಿಗಾಗಿ ಜನರು ಈ ಹಿಂದಿಗಿಂತಲೂ ಹೆಚ್ಚಿನ ಹಣ ನೀಡಬೇಕಿದೆ

––––––

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ ದೇಶದಲ್ಲಿ ಮಾರಾಟವಾಗುವ ಎಲ್ಲಾ ಕಾರುಗಳಿಗೆ ಶೇ 28ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಕೆಲವು ವಾಹನಗಳ ಮೇಲೆ ಜಿಎಸ್‌ಟಿ ಜತೆಗೆ, ಭಿನ್ನ ದರದ ಜಿಎಸ್‌ಟಿ ಪರಿಹಾರ ಸೆಸ್‌ ಅನ್ನೂ ವಿಧಿಸಲಾಗುತ್ತಿದೆ. ಹೀಗೆ ಅತಿಹೆಚ್ಚು ತೆರಿಗೆ ಬೀಳುವುದು ಎಸ್‌ಯುವಿಗಳ ಮೇಲೆ. ಎಸ್‌ಯುವಿಗಳಿಗೆ ಶೇ 28ರಷ್ಟು ಜಿಎಸ್‌ಟಿ ಮತ್ತು ಶೇ 22ರಷ್ಟು ಜಿಎಸ್‌ಟಿ ಪರಿಹಾರ ಸೆಸ್‌ ವಿಧಿಸಲಾಗುತ್ತಿದೆ. ಆದರೆ ಇಷ್ಟು ತೆರಿಗೆ ವಿಧಿಸಲು ಜಿಎಸ್‌ಟಿ ಮಂಡಳಿಯು ಎಸ್‌ಯುವಿ ಅಂದರೆ ಏನು ಎಂಬುದನ್ನು ವ್ಯಾಖ್ಯಾನಿಸಿತ್ತು. ಆದರೆ ಈ ವ್ಯಾಖ್ಯಾನದಲ್ಲಿದ್ದ ಕೆಲವು ಷರತ್ತುಗಳ ಕಾರಣದಿಂದ ಕೆಲವು ನೈಜ ಎಸ್‌ಯುವಿಗಳು, ಈ ವ್ಯಾಖ್ಯಾನದಿಂದ ಹೊರಗೆ ಉಳಿದಿದ್ದವು. ಹೀಗಾಗಿ ಅವಕ್ಕೆ ಕಡಿಮೆ ದರದ ತೆರಿಗೆ ಜಿಎಸ್‌ಟಿ ಪರಿಹಾರ ಸೆಸ್‌ ಅನ್ವಯವಾಗುತ್ತಿತ್ತು. ಈ ನೈಜ್‌ ಎಸ್‌ಯುವಿಗಳನ್ನೂ ಒಳಗೊಳ್ಳುವಂತೆ ವ್ಯಾಖ್ಯಾನಕ್ಕೆ ತಿದ್ದುಪಡಿ ತರಬೇಕು ಎಂಬ ಬೇಡಿಕೆ ಇತ್ತು. ಆದರೆ, ಜಿಎಸ್‌ಟಿ ಮಂಡಳಿಯು ಈ ವ್ಯಾಖ್ಯಾನವನ್ನೇ ಕೈಬಿಟ್ಟಿದೆ.

ಈ ಮೊದಲು ‘ಎಸ್‌ಯುವಿ ಎಂದು ಜನಪ್ರಿಯವಾದ, 1,500 ಸಿ.ಸಿ. ಮತ್ತು ಅದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯದ ಎಂಜಿನ್‌, 170 ಮಿಲಿಮೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಗ್ರೌಂಡ್‌ ಕ್ಲಿಯರೆನ್ಸ್‌, 4,000 ಮಿಲಿಮೀಟರ್‌ (4 ಮೀಟರ್‌) ಮತ್ತು ಅದಕ್ಕಿಂತ ಹೆಚ್ಚು ಉದ್ದದ ವಾಹನಗಳೇ ಎಸ್‌ಯುವಿ’ ಎಂದು ವ್ಯಾಖ್ಯಾನ ಮಾಡಲಾಗಿತ್ತು. ಜಿಎಸ್‌ಟಿ ಪರಿಹಾರ ಅಧಿಸೂಚನೆಯ 52ಬಿ ಸೆಕ್ಷನ್‌ನಲ್ಲಿ ಈ ವ್ಯಾಖ್ಯಾನವನ್ನು ನೀಡಲಾಗಿದೆ. ಈ ವರ್ಗದ ವಾಹನಗಳಿಗೆ ಜಿಎಸ್‌ಟಿ ಮತ್ತು ಜಿಎಸ್‌ಟಿ ಪರಿಹಾರ ಸೆಸ್‌ ಸೇರಿ ಒಟ್ಟು ಶೇ 50ರಷ್ಟು ತೆರಿಗೆ ಅನ್ವಯವಾಗುತ್ತಿತ್ತು. ಈ ನಾಲ್ಕೂ ಷರತ್ತುಗಳಲ್ಲಿ ಒಂದು ಷರತ್ತು ಅನ್ವಯವಾಗದಿದ್ದರೂ, ಅಂತಹ ವಾಹನವು ಎಸ್‌ಯುವಿ ವ್ಯಾಖ್ಯಾನದಿಂದ ಹೊರಗೆ ಉಳಿಯುತ್ತಿತ್ತು. ಅವುಗಳಿಗೆ ಕಡಿಮೆ ದರದ ತೆರಿಗೆ ಅನ್ವಯವಾಗುತ್ತಿತ್ತು. ಹೀಗಾಗಿ ಆ ನೈಜ ಎಸ್‌ಯುವಿಗಳನ್ನೂ ಈ ವ್ಯಾಪ್ತಿಗೆ ತರಬೇಕು ಎಂಬ ಬೇಡಿಕೆ ಇತ್ತು.

ಯುಟಿಲಿಟಿ ವಾಹನಗಳಿಗೆ ಈಗ ಕಡಿಮೆ ದರದ ಜಿಎಸ್‌ಟಿ ಪರಿಹಾರ ಸೆಸ್‌ (ಶೇ20) ಅನ್ವಯವಾಗುತ್ತಿದೆ. 1,500 ಸಿ.ಸಿ. ಮತ್ತು ಅದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯದ ಎಂಜಿನ್‌ ಹೊಂದಿರುವ ಎಲ್ಲಾ ಕಾರುಗಳಿಗೆ (ಯುಟಿಲಿಟಿ ವಾಹನಗಳೂ ಸೇರಿ) ಶೇ 20ರಷ್ಟು ಜಿಎಸ್‌ಟಿ ಪರಿಹಾರ ಸೆಸ್‌ ಅನ್ವಯ ಮಾಡಲಾಗುತ್ತಿತ್ತು. ಜಿಎಸ್‌ಟಿ ಪರಿಹಾರ ಅಧಿಸೂಚನೆಯ 52ಎ ಸೆಕ್ಷನ್‌ನಲ್ಲಿ ಇದನ್ನು ವಿವರಿಸಲಾಗಿತ್ತು.

ಈಗ ಜಿಎಸ್‌ಟಿ ಮಂಡಳಿಯು ಜಿಎಸ್‌ಟಿ ಪರಿಹಾರ ಅಧಿಸೂಚನೆಯ 52ಬಿ ವಿವರಣೆಗೆ ತಿದ್ದುಪಡಿ ತಂದಿದೆ. ಎಸ್‌ಯುವಿ ಎಂದು ಜನಪ್ರಿಯವಾಗಿರಬೇಕು ಎಂಬ ಷರತ್ತನ್ನು ಕೈಬಿಟ್ಟಿದೆ. ‘1,500 ಸಿ.ಸಿ. ಮತ್ತು ಅದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯದ ಎಂಜಿನ್‌, 170 ಮಿಲಿಮೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಗ್ರೌಂಡ್‌ ಕ್ಲಿಯರೆನ್ಸ್‌, 4,000 ಮಿಲಿಮೀಟರ್‌ (4 ಮೀಟರ್‌) ಮತ್ತು ಅದಕ್ಕಿಂತ ಹೆಚ್ಚು ಉದ್ದದ ವಾಹನಗಳನ್ನು ಯುಟಿಲಿಟಿ ವಾಹನಗಳು’ ಎಂದು ವ್ಯಾಖ್ಯಾನ ಮಾಡಿದೆ. ಈ ತಿದ್ದುಪಡಿಯ ಪ್ರಕಾರ, 52ಎ ಸೆಕ್ಷನ್‌ನಲ್ಲಿ ಇದ್ದ ಯುಟಿಲಿಟಿ ವಾಹನಗಳನ್ನು, ಶೇ 22ರಷ್ಟು ಜಿಎಸ್‌ಟಿ ಪರಿಹಾರ ಸೆಸ್‌ ವ್ಯಾಪ್ತಿಗೆ ತರಲಾಗಿದೆ. ಪರಿಣಾಮವಾಗಿ ಯುಟಿಲಿಟಿ ವಾಹನಗಳ ಮೇಲಿನ ತೆರಿಗೆ ಹೆಚ್ಚಳವಾಗಲಿದೆ. ಅವುಗಳ ಎಕ್ಸ್‌ಷೋರೂಂ ಬೆಲೆ ಮತ್ತು ರಸ್ತೆ ತೆರಿಗೆಯೂ ಹೆಚ್ಚಳವಾಗಲಿದೆ. ಅಂತಿಮವಾಗಿ ಅವುಗಳ ಖರೀದಿಗೆ ಜನರು ಹೆಚ್ಚು ಹಣ ವ್ಯಯಿಸಬೇಕಿದೆ. 

ಆದರೆ, ಎಸ್‌ಯುವಿ ವ್ಯಾಪ್ತಿಯಿಂದ ಹೊರಗುಳಿದಿದ್ದ ನೈಜ ಎಸ್‌ಯುವಿಗಳನ್ನು ಯುವಿ ವ್ಯಾಪ್ತಿಗೆ ತರುವ ಕೆಲಸವನ್ನೂ ಜಿಎಸ್‌ಟಿ ಮಂಡಳಿ ಮಾಡಿಲ್ಲ. ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುವ ಇಂತಹ ವಾಹನಗಳಿಗೆ ಕಡಿಮೆ ದರದ ತೆರಿಗೆಯೇ ಅನ್ವಯವಾಗುತ್ತಿದೆ.

ಆಧಾರ: ಜಿಎಸ್‌ಟಿ ಮಂಡಳಿ ಸಭೆಯ ಪ್ರಕಟಣೆ, ಜಿಎಸ್‌ಟಿ ಪರಿಹಾರ ಅಧಿಸೂಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT