ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ | ಕಾಣಲಾಗದವರಿಗೂ, ಕೇಳಲಾಗದವರಿಗೂ ಸಿನಿಮಾ ದಕ್ಕಿಸಿ ಕೊಡುವ ಈ ಬಗೆ...
ಆಳ–ಅಗಲ | ಕಾಣಲಾಗದವರಿಗೂ, ಕೇಳಲಾಗದವರಿಗೂ ಸಿನಿಮಾ ದಕ್ಕಿಸಿ ಕೊಡುವ ಈ ಬಗೆ...
ಫಾಲೋ ಮಾಡಿ
Published 12 ಸೆಪ್ಟೆಂಬರ್ 2024, 19:30 IST
Last Updated 12 ಸೆಪ್ಟೆಂಬರ್ 2024, 19:30 IST
Comments
ಸಿನಿಮಾ ನೋಡುವಾಗ ಅದರ ಸಂಗೀತ, ಸಂಭಾಷಣೆ, ಶಬ್ದಗಳು ಕೇಳದೇ ಇದ್ದರೆ ಹೇಗೆ? ಅದೇ ರೀತಿ ಶಬ್ದಗಳಷ್ಟೇ ಕೇಳುತ್ತಿದ್ದು, ದೃಶ್ಯ ಕಾಣದೇ ಇದ್ದರೆ ಹೇಗೆ? ಈ ಎರಡೂ ಸಂಭವಿಸದಿದ್ದರೆ ಸಿನಿಮಾವೊಂದನ್ನು ಪ್ರೇಕ್ಷಕ ಗರಿಷ್ಠಮಟ್ಟದಲ್ಲಿ ಅನುಭವಿಸಲು ಸಾಧ್ಯವಾಗುವುದೇ ಇಲ್ಲ. ಕಿವಿ ಕೇಳಿಸದವರು ಸಿನಿಮಾ ನೋಡಲು ಕೂತಾಗ ಮತ್ತು ಕಣ್ಣು ಕಾಣಿಸದವರು ಸಿನಿಮಾ ಕೇಳಲು ಕೂತಾಗ, ಅದನ್ನು ಅನುಭವಿಸುವಲ್ಲಿ ಅವರು ಎದುರಿಸುವ ದೊಡ್ಡ ತೊಡಕುಗಳು ಇವು. ಈ ತೊಡಕುಗಳನ್ನು ನಿವಾರಿಸುವ, ಸಿನಿಮಾವನ್ನು ಅನುಭವಿಸಲು ನೆರವಾಗುವ ಸವಲತ್ತುಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಹೇಳುತ್ತಿದೆ. ಇದೇ 15ರ ನಂತರ ಈ ವ್ಯವಸ್ಥೆ ಜಾರಿಯಾಗಬೇಕಿದೆ.

ಸಾಮಾನ್ಯರಿಗೆ ಇರುವಂತಹ ಎಲ್ಲ ಹಕ್ಕುಗಳೂ ಅಂಗವಿಕಲರಿಗೂ ಇವೆ ಎನ್ನುತ್ತದೆ ವಿಶ್ವಸಂಸ್ಥೆ. ಬೇರೆಲ್ಲಾ ಹಕ್ಕುಗಳ ಜತೆಗೆ ಮಾಹಿತಿ ಪಡೆಯುವ ಮತ್ತು ಮನೋರಂಜನೆಯ ಹಕ್ಕನ್ನೂ ಅಂಗವಿಕಲರು ಹೊಂದಿದ್ದಾರೆ ಎಂದೂ ಇದನ್ನು ಅರ್ಥೈಸಲಾಗುತ್ತದೆ. ಇದೇ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿದ್ದ ಭಾರತ ಸರ್ಕಾರವು 2015ರಲ್ಲೇ ‘ಸುಗಮ್ಯ ಭಾರತ ಅಭಿಯಾನ’ವನ್ನು ಆರಂಭಿಸಿತ್ತು. ಎಲ್ಲ ಸಾರ್ವಜನಿಕ ಸ್ಥಳಗಳಲ್ಲೂ ಅಂಗವಿಕಲರಿಗೆ ಸುಗಮ ಪ್ರವೇಶ, ಸುಗಮ ವಿವರಣೆ ದೊರೆಯುವಂತೆ ಮಾಡುವ ಅಭಿಯಾನವದು. ಮುಂದುವರಿದು 2016ರಲ್ಲಿ ಅಂಗವಿಕಲರ ಹಕ್ಕುಗಳ ಕಾಯ್ದೆಯನ್ನೇ ಜಾರಿಗೆ ತರಲಾಯಿತು. ಇದರ ಭಾಗವಾಗಿ, ಕಿವಿ ಕೇಳಿಸದವರು ಮತ್ತು ಕಣ್ಣು ಕಾಣಿಸದವರು ಗರಿಷ್ಠ ಪ್ರಮಾಣದಲ್ಲಿ ಸಿನಿಮಾವನ್ನು ಅನುಭವಿಸಲು ಅನುಕೂಲ ಮಾಡಿಕೊಡಲು ಕ್ರಮ ತೆಗೆದುಕೊಳ್ಳಲಾಗಿದೆ.

ಸಿನಿಮಾದ ಎಲ್ಲ ಶಬ್ದಗಳೂ ಕಿವಿ ಕೇಳಿಸದವರಿಗೆ ಅರ್ಥವಾಗುವಂತೆ ಮಾಡುವ ಮತ್ತು ಕಣ್ಣು ಕಾಣಿಸಿದವರಿಗೆ ಎಲ್ಲಾ ದೃಶ್ಯಗಳನ್ನು ವಿವರಿಸುವಂತಹ ವ್ಯವಸ್ಥೆಗಳನ್ನು ಸಿನಿಮಾಗಳಿಗೆ ಅಳವಡಿಸಬೇಕು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇದೇ ಮಾರ್ಚ್‌ 15ರಂದು ಆದೇಶಿಸಿತ್ತು. ಆ ಪ್ರಕಾರ ಸೆಪ್ಟೆಂಬರ್ 15ರಿಂದ ಇದು ಜಾರಿಯಾಗಲಿದೆ. ಜಾರಿಯ ದಿನ ಹತ್ತಿರವಾಗುತ್ತಿರುವಂತೆಯೇ ಸಿನಿಮಾ ಮಂದಿ, ಚಿತ್ರಮಂದಿರ ಮಾಲೀಕರ ಮಧ್ಯೆ ಈ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಇದರ ಮಧ್ಯೆಯೇ ಸಿನಿಮಾವನ್ನು ಗರಿಷ್ಠ ಪ್ರಮಾಣದಲ್ಲಿ ಅನುಭವಿಸುವ ದಿನವನ್ನು ಕಿವಿ ಕೇಳದವರು ಮತ್ತು ಕಣ್ಣು ಕಾಣಿಸದವರು ಎದುರು ನೋಡುತ್ತಿದ್ದಾರೆ.

ಈ ಸವಲತ್ತುಗಳನ್ನು ಜಾರಿಗೆ ತರಬೇಕಾಗಿರುವುದು ಸಿನಿಮಾ ನಿರ್ಮಾಪಕರು ಮತ್ತು ಚಿತ್ರಮಂದಿರಗಳ ಮಾಲೀಕರು. ಸಿನಿಮಾ ನಿರ್ಮಾಣದ ಹಂತದಲ್ಲೇ ‘ದೃಶ್ಯ ವಿವರಣೆ’, ‘ಕ್ಲೋಸ್ಡ್‌ ಅಥವಾ ಓಪನ್‌ ಕ್ಯಾಪ್ಷನಿಂಗ್‌’ ಮತ್ತು ಸಂಜ್ಞಾ ಭಾಷಾ ವಿವರಣೆಯನ್ನು ಸೇರಿಸುವ ಕೆಲಸವನ್ನು ನಿರ್ದೇಶಕ ಮತ್ತು ನಿರ್ಮಾಪಕ ಮಾಡಬೇಕಾಗುತ್ತದೆ. ಇವುಗಳನ್ನು ಅಳವಡಿಸುವಲ್ಲಿ ಇರುವ ತಾಂತ್ರಿಕ ಅಡೆತಡೆಗಳು ಒಂದಾದರೆ, ಸಿನಿಮಾದ ಅಂದಕ್ಕೆ ಧಕ್ಕೆಯಾಗದಂತೆ ಇವನ್ನು ಅಳವಡಿಸುವ ಕಲಾತ್ಮಕತೆಯೂ ಬೇಕಾಗುತ್ತದೆ.

ಚಿತ್ರಮಂದಿರಗಳ ಮಾಲೀಕರೂ ಇದಕ್ಕಾಗಿ ಶ್ರಮ ಹಾಕಬೇಕಾಗುತ್ತದೆ. ಕಣ್ಣು ಕಾಣಿಸದವರು ಚಿತ್ರಮಂದಿರಗಳಲ್ಲಿ ‘ಆಡಿಯೊ ಡಿಸ್ಕ್ರಿಪ್ಷನ್‌’ ಕೇಳಿಸಿಕೊಳ್ಳಲು ಅನುಕೂಲ ಮಾಡಿಕೊಡುವ ಪ್ರತ್ಯೇಕ ಹೆಡ್‌ಫೋನ್‌ಗಳನ್ನು ಅಳವಡಿಸಬೇಕಾಗುತ್ತದೆ. ಕ್ಲೋಸ್ಡ್‌ ಕ್ಯಾಪ್ಷನಿಂಗ್‌ ಕಾಣುವ ಸ್ಮಾರ್ಟ್‌ ಕನ್ನಡಕಗಳನ್ನು ಅಥವಾ ಪ್ರತ್ಯೇಕ ಕಿರಿದಾದ ಹೆಚ್ಚುವರಿ ಪರದೆಗಳನ್ನು ಕಿವಿ ಕೇಳದವರಿಗೆ ಒದಗಿಸಬೇಕಾಗುತ್ತದೆ. ಈ ಸಂಬಂಧ ಚಿತ್ರಮಂದಿರಗಳ ಮಾಲೀಕರೇ ಒಂದು ಮಾರ್ಗಸೂಚಿಯನ್ನು ರೂಪಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಆದೇಶ ಹೇಳುತ್ತದೆ.

ಎಲ್ಲಿ, ಯಾವುದಕ್ಕೆ ಅನ್ವಯ...

  • ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳು, ನಿಯಮ ಜಾರಿಯಾದ ಆರು ತಿಂಗಳಲ್ಲಿ ಈ ಸವಲತ್ತುಗಳನ್ನು ಅಳವಡಿಸಿಕೊಳ್ಳಬೇಕು

  • ಒಂದೇ ಭಾಷೆಯ ಸಿನಿಮಾಗಳು ಈ ಸವಲತ್ತುಗಳನ್ನು ಅಳವಡಿಸಿಕೊಳ್ಳಲು ಎರಡು ವರ್ಷಗಳ ಕಾಲಾವಕಾಶ

  • 72 ನಿಮಿಷಕ್ಕಿಂತ ಹೆಚ್ಚು ಅವಧಿಯ ಎಲ್ಲ ಸಿನಿಮಾಗಳು

  • 2025ರ ಜನವರಿ 1ರ ನಂತರ ನಡೆಯುವ ರಾಷ್ಟ್ರೀಯ ಸಿನಿಮಾ ಸ್ಪರ್ಧೆಗಳು ಮತ್ತು ಅಂತರರಾಷ್ಟ್ರೀಯ ಸಿನಿಮೋತ್ಸವಗಳಿಗೆ ಪ್ರವೇಶ ಬಯಸುವ ಎಲ್ಲ ಸಿನಿಮಾಗಳು ಈ ಸವಲತ್ತುಗಳನ್ನು ಕಡ್ಡಾಯವಾಗಿ ಹೊಂದಿರಲೇಬೇಕು

ದೃಶ್ಯ ವಿವರಣೆ

ಸಿನಿಮಾಟೊಗ್ರಫಿ ಪರಿಭಾಷೆಯಲ್ಲಿ ಇದನ್ನು ‘ಆಡಿಯೊ ಡಿಸ್ಕ್ರಿಪ್ಷನ್‌’ ಎಂದು ಕರೆಯಲಾಗುತ್ತದೆಯಾದರೂ, ಇದನ್ನು ‘ಧ್ವನಿ ವಿವರಣೆ’ ಎಂದು ಹೇಳಲಾಗದು. ಬದಲಿಗೆ ದೃಶ್ಯವನ್ನು ಧ್ವನಿ ಮೂಲಕ ವಿವರಿಸುವ ಬಗೆ ಇದು. ಹೀಗಾಗಿಯೇ ಇದನ್ನು ದೃಶ್ಯ ವಿವರಣೆ ಎನ್ನಬಹುದು.

ಚಲನಚಿತ್ರದಲ್ಲಿ ಕಲಾವಿದರ ಸಂಭಾಷಣೆಗಳು, ಹಿನ್ನೆಲೆ ಸಂಗೀತ ಮತ್ತು ಇತರ ಶಬ್ದಗಳು ಮಾತ್ರ ಕೇಳುತ್ತವೆ. ಕಣ್ಣು ಕಾಣಿಸದವರಿಗೆ ಇವು ಕೇಳುತ್ತವೆಯೇ ಹೊರತು, ಸಿನಿಮಾದ ಪ್ರತಿ ದೃಶ್ಯದಲ್ಲಿರುವ ಮೌನ, ಕಲಾವಿದರ ಚಲನವಲನಗಳು, ಕ್ರಿಯೆಗಳು ಗೊತ್ತಾಗುವುದಿಲ್ಲ.

ಉದಾಹರಣೆಗೆ: ಕಳ್ಳನ ಪಾತ್ರಧಾರಿಯೊಬ್ಬ ಕತ್ತಲಲ್ಲಿ, ಮನೆಯೊಂದರ ಬಾಗಿಲನ್ನು ಒಂದಿನಿತೂ ಸದ್ದಾಗದಂತೆ ತೆಗೆಯುತ್ತಾನೆ. ಸಾಮಾನ್ಯರು ಈ ದೃಶ್ಯವನ್ನು ನೋಡಿ, ಅನುಭವಿಸಲು ಸಾಧ್ಯವಾಗುತ್ತದೆ. ಆದರೆ, ಕಣ್ಣು ಕಾಣಿಸದವರು ಇದನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ‘ಒಂದೊಮ್ಮೆ ಆಡಿಯೊ ಡಿಸ್ಕ್ರಿಪ್ಷನ್‌’ ಸವಲತ್ತು ಇದ್ದರೆ, ಕಣ್ಣು ಕಾಣಿಸದವರೂ ಈ ದೃಶ್ಯವನ್ನು ಅನುಭವಿಸಲು ಸಾಧ್ಯವಾಗುತ್ತದೆ.

ಚಿತ್ರ ನಿರ್ಮಾಣದ ಸಂದರ್ಭದಲ್ಲೇ ‘ದೃಶ್ಯ ವಿವರಣೆ’ಯನ್ನು ಸೇರಿಸಲು ಅವಕಾಶವಿದೆ. ಡಿಜಿಟಲ್‌ ಸ್ವರೂಪದಲ್ಲಿ ಬಿತ್ತರವಾಗುವ ಸಿನಿಮಾಗಳಲ್ಲಿ ‘ದೃಶ್ಯವಿವರಣೆ’ಯನ್ನು ಅಳವಡಿಸಿದ್ದರೆ, ಆ್ಯಂಡ್ರಾಯ್ಡ್‌ ಮತ್ತು ಐಫೋನ್‌ ಅಪ್ಲಿಕೇಷನ್‌ಗಳ ಮೂಲಕ ಅದರ ಪ್ರಯೋಜನ ಪಡೆಯಬಹುದು. 

ಕಣ್ಣು ಕಾಣಿಸದವರಿಗೆ ಸಿನಿಮಾದ ಗರಿಷ್ಠ ಅನುಭವವನ್ನು ದಕ್ಕಿಸಿಕೊಡಲು ಈಗ ಇರುವ ಪರಿಣಾಮಕಾರಿ ಸವಲತ್ತು ಇದು. ಸಿನಿಮಾ ಮಂದಿರಗಳಲ್ಲಿ ಇದಕ್ಕೆಂದೇ ಪ್ರತ್ಯೇಕ ಹೆಡ್‌ಫೋನ್‌ ಇರುವ ಕುರ್ಚಿಗಳನ್ನೂ ಅಳವಡಿಸಲು ಸಾಧ್ಯವಿದೆ. ಅದರಿಂದ ಸಾಮಾನ್ಯ ವೀಕ್ಷಕರಿಗೆ ಯಾವುದೇ ತೊಂದರೆಯಾಗುವುದಿಲ್ಲ.

ಸಂಜ್ಞಾ ವಿವರಣೆ

ಭಾರತೀಯ ಸಂಜ್ಞಾ ಭಾಷೆಯಲ್ಲಿ ಸಿನಿಮಾದ ಸಂಭಾಷಣೆ, ಹಿನ್ನೆಲೆ ಸಂಗೀತ ಮತ್ತು ಇತರ ಶಬ್ದಗಳನ್ನು ವಿವರಿಸುವ ಸವಲತ್ತನ್ನು ಸಿನಿಮಾಗೆ ಅಳವಡಿಸುವುದೇ ಸಂಜ್ಞಾ ವಿವರಣೆ. ಇಡೀ ಸಿನಿಮಾವನ್ನು ಸಂಜ್ಞಾಭಾಷೆಯಲ್ಲಿ ವಿವರಿಸುವ ಸಂಜ್ಞಾ ಭಾಷೆಯ ವಿಡಿಯೊವನ್ನು ಸಿನಿಮಾದ ವಿಡಿಯೊ ಜತೆಗೇ ಸೇರಿಸುವ ವ್ಯವಸ್ಥೆ ಇದು. ಪರದೆಯ ಮೇಲೆ ಸಿನಿಮಾ ಬರುವಾಗ, ಪರದೆಯ ಒಂದು ಮೂಲೆಯಲ್ಲಿ ಸಂಜ್ಞಾ ಭಾಷೆಯ ವಿಡಿಯೊವನ್ನೂ ತೋರಿಸಬೇಕಾಗುತ್ತದೆ.

ಇದು ವಿಶ್ವದ ಕೆಲವೆಡೆ ಚಾಲ್ತಿಯಲ್ಲಿದ್ದರೂ, ಕಿವಿ ಕೇಳಿಸದವರಿಗೂ ಸಿನಿಮಾವನ್ನು ಪರಿಣಾಮಕಾರಿಯಾಗಿ ತಲುಪಿಸುವ ವ್ಯವಸ್ಥೆಯಾಗಿದೆ. ಕೆಲವು ದೇಶಗಳ ಚಿತ್ರ ಮಂದಿರಗಳಲ್ಲಿ ಕಿವಿ ಕೇಳಿಸದವರಿಗೇ ಪ್ರತ್ಯೇಕ–ವಿಶೇಷ ಆಸನಗಳನ್ನು ಅಳವಡಿಸಿ, ಸಂಜ್ಞಾ ಭಾಷೆಯ ವಿಡಿಯೊ ತೋರಿಸುವ ಸಣ್ಣ ಪರದೆಗಳನ್ನು ಅಳವಡಿಸಲಾಗಿರುತ್ತದೆ.

ಮೇಲೆ ವಿವರಿಸಲಾದ ಎರಡು ಸವಲತ್ತುಗಳಲ್ಲಿ ಯಾವುದಾದರೂ ಒಂದು ವ್ಯವಸ್ಥೆ ಅಳವಡಿಸಿಕೊಂಡರೂ ಸಿನಿಮಾವನ್ನು ಕಿವಿ ಕೇಳದವರು ಗರಿಷ್ಠ ಮಟ್ಟದಲ್ಲಿ ಅನುಭವಿಸಲು ಸಾಧ್ಯವಾಗುತ್ತದೆ.

‘ಕ್ಲೋಸ್ಡ್‌ ಕ್ಯಾಪ್ಷನಿಂಗ್‌’ ಮತ್ತು ‘ಓಪನ್‌ ಕ್ಯಾಪ್ಷನಿಂಗ್‌’

ಕಿವಿ ಕೇಳದವರಿಗೆ ಸಿನಿಮಾದ ಹಿನ್ನೆಲೆ ಸಂಗೀತ ಮತ್ತು ಎಲ್ಲ ಶಬ್ದಗಳು ಕೇಳುವಂತೆ ಮಾಡುವ ಸವಲತ್ತು ಇದು. ಈಗಿನ ಬಹುತೇಕ ಸಿನಿಮಾಗಳಲ್ಲಿ ಸಬ್‌ಟೈಟಲ್‌ ಇದ್ದೇ ಇರುತ್ತದೆ. ಆದರೆ ಸಾಮಾನ್ಯವಾಗಿ ಸಂಭಾಷಣೆಗಳನ್ನು ಮಾತ್ರ ಸಬ್‌ಟೈಟಲ್‌ ಒಳಗೊಂಡಿರುತ್ತದೆ. ಸಬ್‌ಟೈಟಲ್‌, ಹಿನ್ನೆಲೆ ಸಂಗೀತವನ್ನು ಒಳಗೊಂಡಿರುವುದಿಲ್ಲ. ಕಾರಿನ ಶಬ್ದ, ಹಕ್ಕಿಗಳ ಚಿಲಿಪಿಲಿ, ಸ್ಫೋಟ, ನೀರು ಧುಮ್ಮಿಕ್ಕುವ ರಭಸ, ಮಳೆಹನಿ ಮುಂತಾದ ಕ್ರಿಯೆಗಳ ಶಬ್ದಗಳನ್ನೂ ಸಬ್‌ಟೈಟಲ್‌ ಒಳಗೊಂಡಿರುವುದಿಲ್ಲ. ಈ ಕೊರತೆಗಳ ಕಾರಣದಿಂದಾಗಿ, ಸಿನಿಮಾವನ್ನು ಗರಿಷ್ಠ ಮಟ್ಟದಲ್ಲಿ ಅನುಭವಿಸಲು ಕಿವಿ ಕೇಳದವರಿಗೆ ಸಾಧ್ಯವಾಗುವುದಿಲ್ಲ.

ಈ ಎಲ್ಲಾ ವಿವರಗಳನ್ನು ಒಳಗೊಂಡ ಸಬ್‌ಟೈಟಲ್‌ ಇರುವ ವ್ಯವಸ್ಥೆಯನ್ನು ‘ಕ್ಲೋಸ್ಡ್‌ ಕ್ಯಾಪ್ಷನಿಂಗ್‌’ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆ ಇದ್ದರೆ, ಸಂಬಂಧಿತ ಮೊಬೈಲ್‌ ಅ‍‍ಪ್ಲಿಕೇಷನ್‌ ಇದ್ದವರು ಕ್ಲೋಸ್ಡ್‌ ಕ್ಯಾಪ್ಷನಿಂಗ್‌ ಅನ್ನು ಕೇಳಬಹುದು. ಇದರಿಂದ ಸಾಮಾನ್ಯ ವೀಕ್ಷಕರಿಗೆ ಯಾವುದೇ ಅಡಚಣೆ ಆಗುವುದಿಲ್ಲ. ಹಾಲಿವುಡ್‌ನ ಹಲವು ಸಿನಿಮಾಗಳು ಈ ರೀತಿಯ ‘ಕ್ಲೋಸ್ಡ್‌ ಕ್ಯಾಪ್ಷನಿಂಗ್‌’ ಅನ್ನು ಬಳಸುತ್ತವೆ.

ಇದೇ ರೀತಿ ಎಲ್ಲಾ ಸಂಗೀತ ಮತ್ತು ಶಬ್ದಗಳನ್ನು ವಿವರಿಸುವ ಸಬ್‌ಟೈಟಲ್‌ ವ್ಯವಸ್ಥೆಯನ್ನು ಎಲ್ಲರಿಗೂ ಕಾಣುವಂತೆಯೇ ಹಾಕಿದರೆ, ಅದನ್ನು ‘ಓಪನ್‌ ಕ್ಯಾಪ್ಷನಿಂಗ್‌’ ಎಂದು ಕರೆಯಲಾಗುತ್ತದೆ. ಸಿನಿಮಾ ನೋಡುವ ಪ್ರತಿಯೊಬ್ಬರೂ, ಅಂದರೆ ಸಾಮಾನ್ಯ ಪ್ರೇಕ್ಷಕರು ಮತ್ತು ಕಿವಿ ಕೇಳದ ಪ್ರೇಕ್ಷಕರೂ ಈ ಸಬ್‌ಟೈಟಲ್‌ ಅನ್ನು ನೋಡಬಹುದಾಗಿರುತ್ತದೆ. ವಿಶ್ವದ ಹಲವು ದೇಶಗಳಲ್ಲಿ ‘ಓಪನ್‌ ಕ್ಯಾಪ್ಷನಿಂಗ್‌’ ಅಳವಡಿಸುವುದು ಕಡ್ಡಾಯವಾಗಿದೆ.

ಕಿವಿ ಕೇಳದವರೂ ಸಿನಿಮಾವನ್ನು ಗರಿಷ್ಠ ಮಟ್ಟದಲ್ಲಿ ಅನುಭವಿಸಲು ‘ಓಪನ್‌ ಕ್ಯಾಪ್ಷನಿಂಗ್‌’ ವ್ಯವಸ್ಥೆ ಅನುಕೂಲ ಮಾಡಿಕೊಡುತ್ತದೆ.  ಆದರೆ ಪರದೆಯ ಹೆಚ್ಚಿನ ಭಾಗವನ್ನು ಈ ಸ್ವರೂಪದ ಸಬ್‌ಟೈಟಲ್‌ ಆವರಿಸಿಕೊಳ್ಳುವುದರಿಂದ, ಸಾಮಾನ್ಯ ಪ್ರೇಕ್ಷಕರಿಗೆ ಕಿರಿಕಿರಿಯಾಗುತ್ತದೆ ಎಂಬ ಆಕ್ಷೇಪವೂ ಇದೆ. ಆದರೆ ಬಹುಪಾಲು ಮಂದಿ ಈ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದು, ಎಲ್ಲರೂ ಸಿನಿಮಾವನ್ನು ಅನುಭವಿಸುವುದು ಸಾಧ್ಯವಾಗುತ್ತಿದೆ.

‘ಅನುಕೂಲ ಎಂಬುದೇ ಮುಖ್ಯ’
ಈ ಸವಲತ್ತುಗಳನ್ನು ಅಳವಡಿಸಿಕೊಳ್ಳಲು ನಿರ್ಮಾಪಕರು ಮತ್ತು ಚಿತ್ರಮಂದಿರಗಳ ಮಾಲೀಕರು ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ. ಸಾಮಾನ್ಯ ಪ್ರೇಕ್ಷಕರಿಂದ ಆರಂಭದಲ್ಲಿ ಆಕ್ಷೇಪ ಬರಬಹುದು. ಆದರೆ ದಿನಕಳೆದಂತೆ ಅದೂ ರೂಢಿಯಾಗಿಹೋಗುತ್ತದೆ. ಇದರ ಜಾರಿಯಲ್ಲಿ ಇಷ್ಟೆಲ್ಲಾ ಸವಾಲುಗಳು ಇದ್ದರೂ, ಸಿನಿಮಾವನ್ನು ಎಲ್ಲರೂ ಅನುಭವಿಸಲು ಇದು ಅನುಕೂಲ ಮಾಡಿಕೊಡುತ್ತದೆ ಎಂಬುದೇ ಮಹತ್ವ ನೀಡಬೇಕಾದ ವಿಷಯ.
–ಯಶವಂತ್ ಶೆಹನಾಯಿ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಬೆಂಗಳೂರು ಪ್ರಾದೇಶಿಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT