ತಾಯಿ ಮತ್ತು ಮಗುವಿನ ಪ್ರಾಣ ರಕ್ಷಣೆಯಲ್ಲಿ ಸಿಸೇರಿಯನ್ ಪಾತ್ರ ಬಹಳ ಮುಖ್ಯವಾದದ್ದು. ಆದರೆ, ಅದನ್ನು ಬಳಸುವ ರೀತಿಯಲ್ಲಿ ವ್ಯತ್ಯಾಸಗಳಾಗುತ್ತಿವೆ. ಜಾಗತಿಕ, ದೇಶ, ರಾಜ್ಯಮಟ್ಟದಲ್ಲಿ ಸಿಸೇರಿಯನ್ ಹೆರಿಗೆಗಳ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಅದೀಗ ಅತ್ಯಂತ ಸಹಜ ಶಸ್ತ್ರಚಿಕಿತ್ಸೆಯಾಗಿ ಮಾರ್ಪಟ್ಟಿದೆ ಎಂದು ಹೇಳುತ್ತವೆ ಅಧ್ಯಯನ ವರದಿಗಳು. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ತಾಯಿ ಮತ್ತು ಮಗುವಿನ ಪ್ರಾಣ ಉಳಿಸುವುದಕ್ಕಾಗಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗುತ್ತದೆ. ಆದರೆ ಈಗ ವೈದ್ಯಕೀಯ ಅಲ್ಲದ ಕಾರಣಗಳಿಗೂ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗುತ್ತಿದೆ. ಅನಗತ್ಯವಾಗಿ ಸಿಸೇರಿಯನ್ ಮೂಲಕ ಹೆರಿಗೆ ಪ್ರಮಾಣ ಹೆಚ್ಚಾಗುತ್ತಿರುವ ಬಗ್ಗೆ ಕಳವಳವೂ ವ್ಯಕ್ತವಾಗಿದೆ.