ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ:  ಸಿರಿವಂತ ದೇಶಗಳತ್ತ ಭಾರತೀಯರ ವಲಸೆ
ಆಳ–ಅಗಲ: ಸಿರಿವಂತ ದೇಶಗಳತ್ತ ಭಾರತೀಯರ ವಲಸೆ
Published 25 ಅಕ್ಟೋಬರ್ 2023, 23:51 IST
Last Updated 25 ಅಕ್ಟೋಬರ್ 2023, 23:51 IST
ಅಕ್ಷರ ಗಾತ್ರ
ಶ್ರೀಮಂತ, ಅಭಿವೃದ್ಧಿ ಹೊಂದಿದ ಮತ್ತು ರಾಜಕೀಯ ಸ್ಥಿರತೆ ಹೊಂದಿರುವ ದೇಶಗಳ ಪೌರತ್ವ ಪಡೆಯುವವರಲ್ಲಿ ಭಾರತೀಯರೇ ಮೊದಲಿಗರು. 2021ರಲ್ಲಿ 1.32 ಲಕ್ಷ ಭಾರತೀಯರು ಇಂತಹ ದೇಶಗಳ ಪೌರತ್ವ ಪಡೆದಿದ್ದಾರೆ. 2021ರಲ್ಲಿ ಯಾವುದೋ ಒಂದು ದೇಶದ ಪ್ರಜೆಗಳು ಬೇರೆ ದೇಶಗಳ ಪೌರತ್ವ ಪಡೆದ ಅತ್ಯಂತ ದೊಡ್ಡ ಸಂಖ್ಯೆ ಇದು. ಉತ್ತಮ ಜೀವನಮಟ್ಟ, ಉದ್ಯಮ ಮತ್ತು ಉದ್ಯೋಗದ ಕಾರಣಕ್ಕೆ ಭಾರತೀಯರು ಶ್ರೀಮಂತ ದೇಶಗಳ ಪೌರತ್ವ ಪಡೆಯುತ್ತಿದ್ದಾರೆ ಎಂದು ವರದಿ ಒಂದರಲ್ಲಿ ವಿಶ್ಲೇಷಿಸಲಾಗಿದೆ

ವಿಶ್ವದ ಶ್ರೀಮಂತ ದೇಶಗಳು ಆರ್ಥಿಕ ಚಟುವಟಿಕೆಗಳ ಸಹಕಾರಕ್ಕಾಗಿ ಒಂದು ಸಂಘ ರಚಿಸಿಕೊಂಡಿವೆ. ಆರ್ಥಿಕ, ಸಹಕಾರ ಮತ್ತು ಅಭಿವೃದ್ಧಿ ಸಂಘ (ಒಇಸಿಡಿ) ಎಂಬುದೇ ಅದರ ಹೆಸರು. ಅಮೆರಿಕ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ... ಹೀಗೆ 38 ದೇಶಗಳು ಈ ಸಂಘದ ಸದಸ್ಯರಾಗಿವೆ. ಅಭಿವೃದ್ಧಿ ಹೊಂದುತ್ತಿರುವ ಮತ್ತು ಹಿಂದುಳಿದ ದೇಶಗಳ ಲಕ್ಷಾಂತರ ಜನರು ಪ್ರತಿ ವರ್ಷ ಈ ಒಇಸಿಡಿ ದೇಶಗಳ ಪೌರತ್ವ ಪಡೆಯುತ್ತಾರೆ. 

2021ರಲ್ಲಿ ಈ ರೀತಿ ಒಇಸಿಡಿ ದೇಶಗಳ ಪೌರತ್ವ ಪಡೆದವರ ಸಂಖ್ಯೆ 48 ಲಕ್ಷ. ಅದರಲ್ಲಿ ಭಾರತೀಯರ ಸಂಖ್ಯೆ 1.32 ಲಕ್ಷ. ಈ ರೀತಿ ಅತಿಹೆಚ್ಚು ಪೌರತ್ವ ಪಡೆದವರ ಪಟ್ಟಿಯಲ್ಲಿ ಭಾರತೀಯರದ್ದೇ ಮೊದಲ ಸ್ಥಾನ. 2019ರಲ್ಲಿ ಈ ಸಂಖ್ಯೆ 1.55 ಲಕ್ಷದಷ್ಟಿತ್ತು. 2019ಕ್ಕೆ ಹೋಲಿಸಿದರೆ 2021ರಲ್ಲಿ ಶ್ರೀಮಂತ ದೇಶಗಳ ಪೌರತ್ವ ಪಡೆದ ಭಾರತೀಯರ ಸಂಖ್ಯೆಯಲ್ಲಿ ಶೇ 14.8ರಷ್ಟು ಇಳಿಕೆಯಾಗಿದೆ. ಹೀಗಿದ್ದೂ, ಭಾರತೀಯರು ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. 2022ರಲ್ಲಿ ಈ ರೀತಿ ಅತಿಹೆಚ್ಚು ಪೌರತ್ವ ಪಡೆದವರ ಪಟ್ಟಿಯಲ್ಲಿ ಭಾರತೀಯರೇ ಮೊದಲಿಗರು ಎಂದು ವರದಿಯಲ್ಲಿ ಹೇಳಲಾಗಿದೆಯಾದರೂ, ನಿಖರ ಅಂಕಿ–ಅಂಶವನ್ನು ವರದಿಯಲ್ಲಿ ನೀಡಿಲ್ಲ.

2021ರಲ್ಲಿ ಒಇಸಿಡಿ ದೇಶಗಳಲ್ಲಿ ಶಾಶ್ವತ ಮತ್ತು ತಾತ್ಕಾಲಿಕ ಪೌರತ್ವ ಪಡೆದವರು ಹಾಗೂ ಆಶ್ರಯ ಪಡೆದ ಭಾರತೀಯರ ಸಂಖ್ಯೆ ನಾಲ್ಕು ಲಕ್ಷ ದಾಟುತ್ತದೆ. ಇವುಗಳಲ್ಲಿ ಉದ್ಯೋಗ, ಶಿಕ್ಷಣದ ಕಾರಣಕ್ಕೆ ವಲಸೆ ಹೋದವರೂ ಸೇರಿದ್ದಾರೆ. ಭಾರತೀಯರು ಸಿರಿವಂತ ದೇಶಗಳಲ್ಲಿ ನೆಲೆಸಲು ಬಯಸುತ್ತಾರೆ ಎಂಬುದನ್ನು ಈ ದತ್ತಾಂಶಗಳು ಸೂಚಿಸುತ್ತವೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ. 2021ರಲ್ಲಿ 48 ಲಕ್ಷ ಜನರು ಒಇಸಿಡಿ ದೇಶಗಳ ಪೌರತ್ವ ಪಡೆದಿದ್ದರೆ, 2022ರಲ್ಲಿ ಈ ರೀತಿ 62 ಲಕ್ಷಕ್ಕೂ ಹೆಚ್ಚು ಜನರು ಈ ದೇಶಗಳ ಪೌರತ್ವ ಪಡೆದಿದ್ದಾರೆ. 2013ರಿಂದ ಈವರೆಗಿನ ಅತ್ಯಂತ ದೊಡ್ಡ ಸಂಖ್ಯೆ ಇದು. 2022ರಲ್ಲಿ ಉಕ್ರೇನ್‌–ರಷ್ಯಾ ಯುದ್ಧ, ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿನ ಆರ್ಥಿಕ ಬಿಕ್ಕಟ್ಟು, ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರಕ್ಕೆ ಬಂದಿದ್ದು, ಇರಾನ್‌ ಮೇಲಿನ ಆರ್ಥಿಕ ನಿರ್ಬಂಧ, ಲ್ಯಾಟಿನ್‌ ಅಮೆರಿಕದ ದೇಶಗಳಲ್ಲಿ ಬರದ ಸ್ಥಿತಿ ಇವೆಲ್ಲವೂ ವಲಸೆ ಹೆಚ್ಚಾಗಲು ಕಾರಣವಾಗಿವೆ. ಈ ಪ್ರದೇಶದ ಜನರು ಉದ್ಯೋಗ, ಸುರಕ್ಷಿತ ನೆಲೆಯನ್ನು ಅರಸಿ ಒಇಸಿಡಿ ದೇಶಗಳತ್ತ ವಲಸೆ ಹೋಗಿದ್ದಾರೆ.

2023ರಲ್ಲೂ ವಿಶ್ವದ ಹಲವೆಡೆ ಇಂಥದ್ದೇ ಪರಿಸ್ಥಿತಿ ಇದೆ. 2023ರ ಆರಂಭದಿಂದಲೇ ವಿಶ್ವದ ಎಲ್ಲಾ ದೇಶಗಳು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿವೆ. ಉಕ್ರೇನ್‌–ರಷ್ಯಾದ ಯುದ್ಧ ಮುಂದುವರೆದಿದೆ. ಲ್ಯಾಟಿನ್‌ ಅಮೆರಿಕದ ದೇಶಗಳಲ್ಲಿ ತೀವ್ರ ಬರ ಎದುರಾಗಿದೆ. ಇವು ಉದ್ಯೋಗ ಮತ್ತು ನೆಲೆ ಅರಸಿಕೊಂಡು ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಲು ಕಾರಣವಾಗಲಿದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ. ಇನ್ನೊಂದೆಡೆ ಪ್ಯಾಲೆಸ್ಟೀನ್‌ನ ಹಮಾಸ್‌ ಬಂಡುಕೋರರ ಅಪ್ರಚೋದಿತ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್‌ ಯುದ್ಧ ಘೋಷಿಸಿದೆ. ಪರಿಣಾಮವಾಗಿ ಪ್ಯಾಲೆಸ್ಟೀನ್‌ನ ಗಾಜಾಪಟ್ಟಿಯಲ್ಲಿನ 10 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಜತೆಗೆ ಯುದ್ಧವು ಈಗ ಲೆಬನಾನ್‌ಗೂ ವಿಸ್ತರಿಸಿದೆ. ಇವೆಲ್ಲವೂ ನಿರಾಶ್ರಿತರ ಮತ್ತು ಯುದ್ಧಪೀಡಿತರ ವಲಸೆಯನ್ನು ಹೆಚ್ಚಿಸಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಒಇಸಿಡಿ ದೇಶಗಳ ಪೌರತ್ವ ಪಡೆದವರ ಮೂಲ ದೇಶ;2021ರಲ್ಲಿ ಪೌರತ್ವ ಪಡೆದವರ ಸಂಖ್ಯೆ

2021ರಲ್ಲಿ ಯಾವ ದೇಶಗಳಿಂದ ಎಷ್ಟು ಜನರು ಬೇರೆ ದೇಶಗಳ ಪೌರತ್ವ ಪಡೆದಿದ್ದಾರೆ ಎಂಬುದನ್ನು ವಿವರಿಸುವ ಗ್ರಾಫಿಕ್ಸ್‌

2021ರಲ್ಲಿ ಯಾವ ದೇಶಗಳಿಂದ ಎಷ್ಟು ಜನರು ಬೇರೆ ದೇಶಗಳ ಪೌರತ್ವ ಪಡೆದಿದ್ದಾರೆ ಎಂಬುದನ್ನು ವಿವರಿಸುವ ಗ್ರಾಫಿಕ್ಸ್‌

–ಪ್ರಜಾವಾಣಿ ಗ್ರಾಫಿಕ್ಸ್‌

ಭಾರತೀಯರಿಗೆ ಅಮೆರಿಕವೇ ಅಚ್ಚುಮೆಚ್ಚು

ಭಾರತೀಯರು ಅಮೆರಿಕದ ಪೌರತ್ವ ಪಡೆಯಲು ಬಯಸುತ್ತಾರೆ ಎಂಬುದನ್ನು ಈ ದತ್ತಾಂಶಗಳು ಹೇಳುತ್ತವೆ. 2021ರಲ್ಲಿ ಒಇಸಿಡಿ ದೇಶಗಳಲ್ಲಿ ಪೌರತ್ವ ಪಡೆದ ಒಟ್ಟು ಭಾರತೀಯರಲ್ಲಿ ಮೂರನೇ ಎರಡಕ್ಕಿಂತಲೂ ಹೆಚ್ಚು ಮಂದಿ, ಅಮೆರಿಕದ ಪೌರತ್ವ ಪಡೆದಿದ್ದಾರೆ. ಹಲವು ವರ್ಷಗಳಿಂದ ಭಾರತೀಯರಿಗೆ ಹೆಚ್ಚು ಪೌರತ್ವ ನೀಡುತ್ತಿರುವ ದೇಶಗಳಲ್ಲಿ ಅಮೆರಿಕವು ಮೊದಲ ಸ್ಥಾನವನ್ನು ಕಾಯ್ದುಕೊಂಡೇ ಬಂದಿದೆ. 

ಅಮೆರಿಕದ ನಂತರ ಭಾರತೀಯರಿಗೆ ಅತಿಹೆಚ್ಚು ಪೌರತ್ವ ನೀಡುತ್ತಿರುವ ದೇಶ ಆಸ್ಟ್ರೇಲಿಯಾ. 2021ರಲ್ಲಿ 24,000 ಭಾರತೀಯರು ಆಸ್ಟ್ರೇಲಿಯದ ಪೌರತ್ವ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವುದು ಕೆನಡಾ. 2021ರಲ್ಲಿ 21,000 ಭಾರತೀಯರು ಕೆನಡಾದ ಪೌರತ್ವ ಪಡೆದಿದ್ದಾರೆ. 2022ರಲ್ಲೂ ಗಣನೀಯ ಸಂಖ್ಯೆಯಲ್ಲಿ ಭಾರತೀಯರು ಕೆನಡಾದ ಪೌರತ್ವ ಪಡೆದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ನಿಖರ ಅಂಕಿ–ಅಂಶವನ್ನು ನೀಡಿಲ್ಲ. ಆದರೆ ಈಗ ಭಾರತ ಮತ್ತು ಕೆನಡಾದ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡಿದೆ. ಈ ಬಿಕ್ಕಟ್ಟು ಭಾರತೀಯರಿಗೆ ಕೆನಡಾದ ಪೌರತ್ವ ದೊರೆಯುವಲ್ಲಿ ತೊಡಕಾಗಬಹುದು ಎಂದು ಅಂದಾಜಿಸಲಾಗಿದೆ.

2021ರಲ್ಲಿ ಯಾವ ರಾಷ್ಟ್ರಗಳು ಎಷ್ಟು ಭಾರತೀಯರಿಗೆ ಪೌರತ್ವ ನೀಡಿವೆ ಎಂಬುದನ್ನು ವಿವರಿಸುವ ಗ್ರಾಫಿಕ್ಸ್‌

2021ರಲ್ಲಿ ಯಾವ ರಾಷ್ಟ್ರಗಳು ಎಷ್ಟು ಭಾರತೀಯರಿಗೆ ಪೌರತ್ವ ನೀಡಿವೆ ಎಂಬುದನ್ನು ವಿವರಿಸುವ ಗ್ರಾಫಿಕ್ಸ್‌

 –ಪ್ರಜಾವಾಣಿ ಗ್ರಾಫಿಕ್ಸ್‌

ವಿದೇಶಗಳಲ್ಲಿ ಆಶ್ರಯ ಮತ್ತು ರಕ್ಷಣೆ ಕೋರಿದ 55,000 ಭಾರತೀಯರು

2022ರಲ್ಲಿ ಒಇಸಿಡಿ ದೇಶಗಳಲ್ಲಿ ಆಶ್ರಯ ಮತ್ತ ರಕ್ಷಣೆ ಕೋರಿ 21 ಲಕ್ಷಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ವಿಶ್ವ ಸಂಸ್ಥೆ, ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಮತ್ತು ಒಇಸಿಡಿ ದೇಶಗಳ ವಲಸೆ ನೀಡಿದ ದತ್ತಾಂಶಗಳನ್ನು ಆಧಾರವಾಗಿ ಇರಿಸಿಕೊಂಡು ಈ ವರದಿಯನ್ನು ಸಿದ್ದಪಡಿಸಲಾಗಿದೆ.

ವಿದೇಶಗಳಲ್ಲಿ ಪೌರತ್ವ ಪಡೆಯುವುದಕ್ಕೂ ಮತ್ತು ಈ ರೀತಿಯ ಆಶ್ರಯ ಪಡೆಯುವುದಕ್ಕೂ ಬಹಳ ವ್ಯತ್ಯಾಸವಿದೆ. ಯುದ್ಧ ಮತ್ತು ಸಂಘರ್ಷಪೀಡಿತ, ಆರ್ಥಿಕ ಬಿಕ್ಕಟ್ಟಿನಲ್ಲಿ ಇರುವ ದೇಶಗಳ ಪ್ರಜೆಗಳು ಸಿರಿವಂತ ದೇಶಗಳಲ್ಲಿ ಆಶ್ರಯ ಮತ್ತು ರಕ್ಷಣೆ ಕೋರುವುದು ಸಾಮಾನ್ಯ. ಆದರೆ, 55,000ಕ್ಕೂ ಹೆಚ್ಚು ಭಾರತೀಯರು ವಿದೇಶಗಳಲ್ಲಿ ಆಶ್ರಯ ಮತ್ತು ರಕ್ಷಣೆ ಕೋರಿದ್ದರ ಬಗ್ಗೆ ಈ ವರದಿಯಲ್ಲಿ ಆಶ್ಚರ್ಯ ವ್ಯಕ್ತಪಡಿಸಲಾಗಿದೆ.

2021ರಲ್ಲಿ ಇಂತಹ ಅರ್ಜಿ ಸಲ್ಲಿಸಿದ್ದ ಭಾರತೀಯರ ಸಂಖ್ಯೆ 11,197ರಷ್ಟು ಇತ್ತು. ಆದರೆ 2022ರಲ್ಲಿ ಆ ಸಂಖ್ಯೆ 55,541ಕ್ಕೆ ಏರಿಕೆಯಾಗಿದೆ. ಅಂತಹ ಅರ್ಜಿದಾರರ ಸಂಖ್ಯೆಯಲ್ಲಿ ನಾಲ್ಕುಪಟ್ಟು ಏರಿಕೆಯಾಗಿದೆ. ಈ ರೀತಿ ಆಶ್ರಯ ಕೋರಿದ ಭಾರತೀಯರ ಸಂಖ್ಯೆಯಲ್ಲಿ ದಿಢೀರ್‌ ಎಂದು ಭಾರಿ ಪ್ರಮಾಣದ ಏರಿಕೆ ಕಾಣಲು ಕಾರಣವೇನು ಎಂಬುದನ್ನು ವರದಿಯಲ್ಲಿ ವಿವರಿಸಿಲ್ಲ. ಜತೆಗೆ ಯಾವ ಅಂಶದ ಆಧಾರದಲ್ಲಿ ಭಾರತೀಯರು ರಕ್ಷಣೆ ಮತ್ತು ಆಶ್ರಯ ಕೋರಿದ್ದಾರೆ, ಯಾವ ವರ್ಗ ಮತ್ತು ಸಮುದಾಯಕ್ಕೆ ಸೇರಿದ ಜನ ಈ ರೀತಿಯ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಿಲ್ಲ.

ಆಶ್ರಯ ಮತ್ತು ರಕ್ಷಣೆ ಕೋರಿ ಎಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ವಿವರಿಸುವ ಗ್ರಾಫಿಕ್ಸ್‌

ಆಶ್ರಯ ಮತ್ತು ರಕ್ಷಣೆ ಕೋರಿ ಎಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ವಿವರಿಸುವ ಗ್ರಾಫಿಕ್ಸ್‌   

–ಪ್ರಜಾವಾಣಿ ಗ್ರಾಫಿಕ್ಸ್‌

ಭಾರತೀಯರು ಪೌರತ್ವ ಪಡೆಯಲು ಬಯಸುವ ವಿದೇಶಗಳಲ್ಲಿ ಮೊದಲ ಸ್ಥಾನ ಅಮೆರಿಕದ್ದು. ಆದರೆ, ಆಶ್ರಯ ಮತ್ತು ರಕ್ಷಣೆ ಕೋರಿ ಒಬ್ಬ ಭಾರತೀಯನೂ ಅಮೆರಿಕಕ್ಕೆ ಅರ್ಜಿ ಸಲ್ಲಿಸಿಲ್ಲ. ಬದಲಿಗೆ ಆಶ್ರಯ ಮತ್ತು ರಕ್ಷಣೆ ಕೋರಿ ಭಾರತೀಯರಿಂದ ಹೆಚ್ಚು ಅರ್ಜಿ ಸಲ್ಲಿಕೆಯಾದ ದೇಶ ಆಸ್ಟ್ರೇಲಿಯಾ. 

ಆಶ್ರಯ ಮತ್ತು ರಕ್ಷಣೆ ಕೋರಿ ಎಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ವಿವರಿಸುವ ಗ್ರಾಫಿಕ್ಸ್‌

ಆಶ್ರಯ ಮತ್ತು ರಕ್ಷಣೆ ಕೋರಿ ಎಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ವಿವರಿಸುವ ಗ್ರಾಫಿಕ್ಸ್‌

   –ಪ್ರಜಾವಾಣಿ ಗ್ರಾಫಿಕ್ಸ್‌

ಪ್ರಜಾವಾಣಿ ಗ್ರಾಫಿಕ್ಸ್‌: ಶಶಿಕಿರಣ್ ದೇಸಾಯಿ ಬಿ.

ಆಧಾರ: ಒಇಸಿಡಿ ಜಾತಿಕ ವಲಸೆ ಮುನ್ನೋಟ ವರದಿ–2023

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT