ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ ಅಗಲ | ಎಫ್‌ಎಸ್‌ಎಲ್‌ ವರದಿ ಏನು, ಎತ್ತ...

Published 5 ಮಾರ್ಚ್ 2024, 21:52 IST
Last Updated 5 ಮಾರ್ಚ್ 2024, 21:52 IST
ಅಕ್ಷರ ಗಾತ್ರ
ವಿಧಿ ವಿಜ್ಞಾನ ಪ್ರಯೋಗಾಲಯಗಳ ಬಗ್ಗೆ ರಾಜ್ಯದಲ್ಲಿ ಈಗ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ವಿಧಿ ವಿಜ್ಞಾನ ಎಂಬುದು ನ್ಯಾಯ ತೀರ್ಮಾನದಲ್ಲಿ ಮಹತ್ವದ ಪಾತ್ರವಹಿಸುವ ಒಂದು ವೈಜ್ಞಾನಿಕ ವಿಭಾಗ. ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ಭೌತಿಕ ಸಾಕ್ಷ್ಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ ವರದಿ ನೀಡುವುದು ವಿಧಿ ವಿಜ್ಞಾನ ಪ್ರಯೋಗಾಲಯಗಳ ಪ್ರಾಥಮಿಕ ಕರ್ತವ್ಯ. ರಾಜ್ಯ ಮಟ್ಟದಲ್ಲಿ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯಗಳು ಇದ್ದರೆ, ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯಗಳಿವೆ. ಕೆಲವು ಸ್ವರೂಪದ ಪ್ರಕರಣಗಳಲ್ಲಿ ಖಾಸಗಿ ವಿಧಿ ವಿಜ್ಞಾನ ತಜ್ಞರು ನೀಡಿದ ವರದಿಯನ್ನು ಅಥವಾ ತಜ್ಞ ಅಭಿಪ್ರಾಯವನ್ನು ಪರಿಗಣಿಸಲಾಗುತ್ತದೆ. ಆದರೆ ಡಿಜಿಟಲ್ ಸಾಕ್ಷ್ಯಗಳಿಗೆ ಸಂಬಂಧಿಸಿದಂತೆ ಇಂತಹ ವರದಿ ನೀಡುವ ಅಧಿಕಾರ ದೇಶದ ಕೆಲವೇ ಸರ್ಕಾರಿ ವಿಧಿ ವಿಜ್ಞಾನ ಪ್ರಯೋಗಾಲಯಗಳಿಗೆ ಇದೆ. ಈ ಪ್ರಯೋಗಾಲಯಗಳು ನೀಡುವ ವರದಿಗಳನ್ನಷ್ಟೇ ನ್ಯಾಯಾಲಯಗಳು ಮಾನ್ಯ ಮಾಡುತ್ತವೆ. ಖಾಸಗಿ ಪ್ರಯೋಗಾಲಯಗಳ ವರದಿಗಳನ್ನು ತನಿಖೆಗೆ ಬಳಸಿಕೊಳ್ಳಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ನ್ಯಾಯಾಲಯಗಳ ಮುಂದೆ ಹಾಜರುಪಡಿಸಬಹುದು

ವಿಧಾನಸೌಧದ ಆವರಣದಲ್ಲಿ ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂದು ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ (ಫಾರೆನ್ಸಿಕ್‌ ಸೈನ್ಸ್‌ ಲ್ಯಾಬ್‌–ಎಫ್‌ಎಸ್‌ಎಲ್‌) ವರದಿಯು ಈಗ ಭಾರಿ ಚರ್ಚೆಯಲ್ಲಿದೆ. ಆ ರೀತಿ ಘೋಷಣೆ ಕೂಗಿದ್ದು ನಿಜ ಎಂದು ಸರ್ಕಾರಿ ಎಫ್‌ಎಸ್‌ಎಲ್‌ ವರದಿ ಹೇಳುತ್ತದೆ ಎಂದು ರಾಜ್ಯ ಸರ್ಕಾರ ದೃಢಪಡಿಸಿದೆ. ಆದರೆ ಇದರ ಮಧ್ಯೆ ಖಾಸಗಿ ಎಫ್‌ಎಸ್‌ಎಲ್‌ ವರದಿಯೊಂದೂ ದೊಡ್ಡಮಟ್ಟದಲ್ಲಿ ಹಂಚಿಕೆಯಾಗುತ್ತಿದೆ. ವಿಡಿಯೊ–ಆಡಿಯೊನಂತಹ ಡಿಜಿಟಲ್‌ ಸಾಕ್ಷ್ಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಅಧಿಸೂಚನೆಯ ಅನ್ವಯ ಅನುಮತಿ ಪಡೆದ ಪ್ರಯೋಗಾಲಯ ಗಳಷ್ಟೇ ಇಂತಹ ವರದಿ ನೀಡುವ ಅಧಿಕಾರ ಹೊಂದಿವೆ.

ವಿಧಿ ವಿಜ್ಞಾನ ಪರೀಕ್ಷೆಯ ವರದಿಗಳನ್ನು ನ್ಯಾಯಾಲಯಗಳು ಭಾರತೀಯ ಸಾಕ್ಷ್ಯ ಸಂಹಿತೆ (ಈ ಹಿಂದಿನ ಭಾರತೀಯ ಸಾಕ್ಷ್ಯ ಕಾಯ್ದೆ) ಅಡಿ ಪರಿಗಣಿಸುತ್ತವೆ. ಈ ಕಾಯ್ದೆಯ 45ನೇ ಸೆಕ್ಷನ್‌ನಲ್ಲಿ ಇದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಯಾವುದೇ ಸಾಕ್ಷ್ಯ ಅಥವಾ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಅಭಿಪ್ರಾಯದ ಅಗತ್ಯವಿದ್ದರೆ ಅದು ತಜ್ಞರ ಅಭಿಪ್ರಾಯವನ್ನು ಕೇಳಬಹುದು. ಅದು ವಿದೇಶಿ ಕಾನೂನು, ವಿಜ್ಞಾನ, ಕಲೆ (ಬರವಣಿಗೆ ಮತ್ತು ಸಹಿಗೆ ಸಂಬಂಧಿಸಿದಂತೆ), ಧಾರ್ಮಿಕ ಶಾಸ್ತ್ರಗಳು... ಮೊದಲಾದ ವಿಚಾರಗಳಲ್ಲಿ ನ್ಯಾಯಾಲಯವು ತಜ್ಞರಅಭಿಪ್ರಾಯವನ್ನು ಪರಿಗಣಿಸುತ್ತದೆ. ಮೊದಲು ವಿಡಿಯೊ ಮತ್ತು ಆಡಿಯೊಗಳನ್ನೂ ಇದೇ ಸೆಕ್ಷನ್‌ಗಳ ಅಡಿಯಲ್ಲಿ ಪರಿಗಣಿಸಲಾಗುತ್ತಿತ್ತು. ಆದರೆ, 2009ರಲ್ಲಿ ಡಿಜಿಟಲ್‌ ಸಾಕ್ಷ್ಯಗಳಿಗೆ ಸಂಬಂಧಿಸಿದಂತೆ ತಜ್ಞರ ಅಭಿಪ್ರಾಯ ಪಡೆಯಲು ಹೊಸ ಸೆಕ್ಷನ್‌ ಅನ್ನು ರಚಿಸಲಾಯಿತು.

2009ರಲ್ಲಿ ಭಾರತೀಯ ಸಾಕ್ಷ್ಯ ಕಾಯ್ದೆಗೆ ತಿದ್ದುಪಡಿ ತಂದು 45ಎ ಎಂಬ ಹೊಸ ಸೆಕ್ಷನ್‌ ಅನ್ನು ಸೇರಿಸಲಾಯಿತು. ‘ಎಲೆಕ್ಟ್ರಾನಿಕ್ಸ್‌ ಸಾಕ್ಷ್ಯಗಳ ಪರಿಶೀಲನಾ ಅಭಿಪ್ರಾಯ’ ಎಂದು ಈ ಸೆಕ್ಷನ್‌ ಅನ್ನು ಹೆಸರಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 79ಎ ಅಡಿ ಮಾನ್ಯತೆ ಪಡೆದ ಪ್ರಯೋಗಾಲಯಗಳಿಗಷ್ಟೇ ಇಂತಹ ಪರಿಶೀಲನೆ ನಡೆಸಲು ಅವಕಾಶವಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಗೆಜೆಟ್‌ನಲ್ಲಿ ಅಧಿಸೂಚನೆ ಹೊರಡಿಸುವ ಮೂಲಕ ಕೇಂದ್ರೀಯ ಅಥವಾ ರಾಜ್ಯ ಎಫ್‌ಎಸ್‌ಎಲ್‌ಗಳಿಗೆ ಇಂತಹ ಮಾನ್ಯತೆ ನೀಡಬಹುದು.

ವಿಧಾನಸೌಧದ ಆವರಣದಲ್ಲಿ ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂದು ಘೋಷಣೆ ಕೂಗಿದ್ದರ ಸಂಬಂಧ ಲಭ್ಯವಿರುವುದು ವಿಡಿಯೊ ಸಾಕ್ಷ್ಯ. ಈ ಸಾಕ್ಷ್ಯದ ಪರಿಶೀಲನೆಯನ್ನು ಭಾರತೀಯ ನ್ಯಾಯ ಸಂಹಿತೆಯ 45ಎ ಸೆಕ್ಷನ್‌ ಅಡಿಯಲ್ಲಿ ನಡೆಸಬೇಕಾಗುತ್ತದೆ. ಅಂತಹ ಪರಿಶೀಲನೆ ನಡೆಸಿ, ವರದಿ ನೀಡುವ ಅಧಿಕಾರ ಇರುವುದು ದೇಶದ 15 ವಿಧಿ ವಿಜ್ಞಾನ ಪ್ರಯೋಗಾಲಯ ಗಳಿಗೆ ಮಾತ್ರ. ಇವುಗಳಲ್ಲಿ ಭಾರತೀಯ ಸೇನೆಯ ಕೆಲವು ಪ್ರಯೋಗಾಲಯಗಳೂ ಸೇರಿವೆ. ಇನ್ನುಳಿದ ಪ್ರಯೋಗಾಲಯಗಳೆಲ್ಲವೂ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಅಧೀನದಲ್ಲಿರುವ ಸಂಸ್ಥೆಗಳಾಗಿವೆ. ಬೆಂಗಳೂರಿನ ಸರ್ಜಾಪುರದಲ್ಲಿ ಇರುವ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ಇಂತಹ ಡಿಜಿಟಲ್‌ ಸಾಕ್ಷ್ಯಗಳ ಕುರಿತು ವರದಿ ನೀಡುವ ಅಧಿಕಾರವಿದೆ. ಈ ಪ್ರಯೋಗಾಲಯವು ನೀಡುವ ವರದಿಗಳಿಗೆ ನ್ಯಾಯಾಲಯಗಳಲ್ಲಿ ತೂಕ ಹೆಚ್ಚು.

ಖಾಸಗಿ ಪ್ರಯೋಗಾಲಯಗಳೂ ಇಂತಹ ವಿಧಿ ವಿಜ್ಞಾನ ಪರೀಕ್ಷೆಯನ್ನು ನಡೆಸಬಹುದು. ಆದರೆ ಅವುಗಳನ್ನು ನೇರವಾಗಿ ನ್ಯಾಯಾಲಯಗಳಲ್ಲಿ ‘ತಜ್ಞರ ಅಭಿಪ್ರಾಯ’ ಎಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ. ಇಂತಹ ವರದಿಗಳಲ್ಲಿನ ಅಂಶಗಳನ್ನು ಬಳಸಿಕೊಂಡು ತನಿಖೆಯನ್ನು ನಡೆಸಬಹುದು. ಸರ್ಕಾರಿ ಎಫ್‌ಎಸ್‌ಎಲ್‌ ನೀಡಿದ ವರದಿಗೆ ವ್ಯತಿರಿಕ್ತ ಆಗಿರುವಂತಹ ವರದಿಯನ್ನು ಖಾಸಗಿ ಎಫ್‌ಎಸ್‌ಎಲ್‌ ನೀಡಿದ್ದರೆ, ಖಾಸಗಿ ವರದಿಯನ್ನು ಪರಿಶೀಲಿಸಿ ಎಂದು ನ್ಯಾಯಾಲಯವನ್ನು ಕೋರಬ ಹುದು. ಅದರ ಆಧಾರದಲ್ಲಿ ಮತ್ತೆ ವಿಧಿ ವಿಜ್ಞಾನ ಪರೀಕ್ಷೆ ನಡೆಸುವಂತೆ ನ್ಯಾಯಾಲಯವು ಸೂಚಿಸಬಹುದು. ಆದರೆ ಅವೆಲ್ಲವೂ ನ್ಯಾಯಾಧೀಶರ, ನ್ಯಾಯಮೂರ್ತಿಗಳ ವಿವೇಚನೆಗೆ ಬಿಟ್ಟಿದ್ದು ಎಂಬುದು ತಜ್ಞರ ಅಭಿಪ್ರಾಯ.

ವರದಿಯೊಂದರಿಂದಲೇ ಶಿಕ್ಷೆಯಾಗುವುದಿಲ್ಲ...

ಸಾಕ್ಷ್ಯಗಳ ಪರಿಶೀಲನೆಯಲ್ಲಿ ನ್ಯಾಯಾಲಯಗಳು ಎಫ್‌ಎಸ್‌ಎಲ್‌ ವರದಿಗಳನ್ನು ‘ತಜ್ಞರ ಅಭಿಪ್ರಾಯ’ ಎಂದಷ್ಟೇ ಪರಿಗಣಿಸುತ್ತವೆ. ಆ ವರದಿಯಲ್ಲಿನ ಅಭಿಪ್ರಾಯವನ್ನು ಒಪ್ಪಿಕೊಳ್ಳುವುದು ಅಥವಾ ಅದರ ಆಧಾರದಲ್ಲಿ ತನ್ನದೇ ಪ್ರತ್ಯೇಕ ಅಭಿಪ್ರಾಯ ವನ್ನು ರೂಪಿಸಿಕೊಳ್ಳಲು ನ್ಯಾಯಾಲಯಕ್ಕೆ ಅವಕಾಶವಿದೆ. ‘ಎಫ್‌ಎಸ್‌ಎಲ್‌ ವರದಿಗಳಲ್ಲಿನ ಅಭಿಪ್ರಾಯಕ್ಕೆ ಪೂರಕವಾಗಿ ಇತರ ಸಾಕ್ಷ್ಯಗಳೂ ಇರಬೇಕು’ ಎಂದು ಭಾರತೀಯ ಸಾಕ್ಷ್ಯ ಸಂಹಿತೆಯಲ್ಲಿ ಹೇಳಿಲ್ಲ. ಆದರೂ, ಬಹುತೇಕ ಪ್ರಕರಣಗಳಲ್ಲಿ ನ್ಯಾಯಾಲಯಗಳು ಎಫ್‌ಎಸ್‌ಎಲ್‌ ವರದಿಗಳ ಆಧಾರದಲ್ಲಿ ಮಾತ್ರ ಪ್ರಕರಣವನ್ನು ಇತ್ಯರ್ಥಪಡಿಸುವುದಿಲ್ಲ. 

‘ತಜ್ಞರ ಅಭಿಪ್ರಾಯದ ಆಧಾರದ ಮೇಲೆ ಮಾತ್ರ ಯಾವುದೇ ವ್ಯಕ್ತಿಯ ಅಪರಾಧವನ್ನು ನಿಗದಿಮಾಡುವುದು ಮತ್ತು ಶಿಕ್ಷೆ ನೀಡುವುದು ಅಪಾಯಕಾರಿ. ಪೂರಕ ಸಾಕ್ಷ್ಯಗಳ ಅಗತ್ಯವಿದೆ’ ಎಂದು ಮೊಹಮ್ಮದ್‌ ವರ್ಸಸ್ ಸ್ಟೇಟ್‌ ಆಫ್‌ ಉತ್ತರ ಪ್ರದೇಶ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತ್ತು. ದೇಶದ ಬೇರೆ ಬೇರೆ ನ್ಯಾಯಾಲಯಗಳೂ ಇದೇ ರೀತಿಯ ಅಭಿಪ್ರಾಯವನ್ನು ಹತ್ತಾರು ಪ್ರಕರಣಗಳಲ್ಲಿ ವ್ಯಕ್ತಪಡಿಸಿವೆ. ಹೀಗಾಗಿ ಎಫ್‌ಎಸ್‌ಎಲ್‌ ವರದಿ ಅಥವಾ ತಜ್ಞರ ಅಭಿಪ್ರಾಯವೊಂದರ ಆಧಾರದಲ್ಲಿ ನ್ಯಾಯಾಲಯಗಳು ಶಿಕ್ಷೆ ನೀಡುವುದಿಲ್ಲ ಎಂದು ದೃಢವಾಗಿ ಹೇಳಬಹುದು ಎಂದು ‘ಎವಿಡೆನ್‌ಷಿಯರಿ ವ್ಯಾಲ್ಯೂ ಆಫ್‌ ಫಾರೆನ್ಸಿಕ್‌ ರಿಪೋರ್ಟ್ಸ್‌ ಇನ್‌ ಇಂಡಿಯನ್‌ ಕೋರ್ಟ್‌’ ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ. 

ಡಿಜಿಟಲ್‌ ಸಾಕ್ಷ್ಯ ಪರಿಶೀಲನೆ

ಇದು ಡಿಜಿಟಲ್‌ ಯುಗ. ನಮ್ಮೆಲ್ಲಾ ಸಂವಹನ–ವ್ಯವಹಾರವೂ ಡಿಜಿಟಲೀಕರಣಗೊಂಡಿವೆ. ಡಿಜಿಟಿಲ್‌ ಯುಗದಿಂದ ಎಷ್ಟು ಅನುಕೂಲಗಳು ಇವೆಯೋ ಅಷ್ಟೇ ಅನನುಕೂಲಗಳೂ ಇವೆ. ಯಾರನ್ನೇ ಆಗಲಿ, ಬಹುಬೇಗ ಮೋಸಗೊಳಿಸುವ ಗುಣಲಕ್ಷಣಗಳು ಈ ಯುಗದ್ದು. ಹಾಗೆಯೇ, ಇದರ ಬಹುದೊಡ್ಡ ಅನುಕೂಲವು ಇದರ ನಿಖರತೆ. ಇದೇ ಕಾರಣಕ್ಕೆ ಇತ್ತೀಚಿನ ವರ್ಷಗಳಲ್ಲಿ ಅಪರಾಧ ತನಿಖೆಯಲ್ಲಿ ಡಿಜಿಟಲ್‌ ರೂಪದ ಸಾಕ್ಷ್ಯವು ಹೆಚ್ಚು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿವೆ. ಹಲವು ಅಪರಾಧ ಪ್ರಕರಣ ಗಳಲ್ಲಿ ಇಂಥ ಆಡಿಯೊ ಅಥವಾ ವಿಡಿಯೊ ಸಾಕ್ಷ್ಯಗಳು ಅಂತಿಮ ನಿರ್ಧಾರಕ್ಕೆ ಬರುವುದಕ್ಕೆ ನೆರವಾಗುತ್ತಿವೆ.

ಎಲ್ಲರ ಕೈಯಲ್ಲಿರುವ ಮೊಬೈಲ್, ಹೆಚ್ಚುತ್ತಿರುವ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಡಿಜಿಟಲ್‌ ಸಾಕ್ಷ್ಯಗಳ ಮೂಲ ಆಧಾರಗಳಾಗಿವೆ. ಮೊಬೈಲ್‌ ಮೂಲಕ ಮಾಡುವ ಕರೆಗಳು, ವಾಯ್ಸ್‌ಮೇಲ್‌ಗಳು, ರೆಕಾರ್ಡಿಂಗ್‌ಗಳು, ಕಂಪ್ಯೂಟರ್‌ಗಳಲ್ಲಿನ ಫೈಲ್‌ಗಳು– ಇವು ಡಿಜಿಟಲ್‌ ರೂಪದ ಸಾಕ್ಷ್ಯಗಳ ಇತರ ಆಧಾರಗಳು.

ಎಂಥದ್ದೇ ಅಪರಾಧ ಪ್ರಕರಣವಿರಲಿ, ಆಡಿಯೊ ಅಥವಾ ವಿಡಿಯೊ ಸಾಕ್ಷ್ಯಗಳು ಪ್ರತ್ಯಕ್ಷ್ಯ ಸಾಕ್ಷಿಯಂತೆಯೇ ಮಹತ್ವದ್ದಾಗಿರುತ್ತವೆ. ಇವುಗಳು ಡಿಜಿಟಲ್‌ ರೂಪದಲ್ಲಿ ಇರುವುದರಿಂದಲೇ ಅವನ್ನು ತಿರುಚುವ ಸಂಭವವೂ ಹೆಚ್ಚು. ಆಧುನಿಕ ತಂತ್ರಜ್ಞಾನಗಳು ಹೀಗೆ ತಿರುಚುವ ಸಂಭವವನ್ನು ಹೆಚ್ಚು ಮಾಡಿವೆ. ಇದೇ ವೇಳೆ ಹೀಗೆ ತಿರುಚಿದ್ದನ್ನೂ ಅದೇ ಆಧುನಿಕ ತಂತ್ರಜ್ಞಾನದ ಮೂಲಕ ಪತ್ತೆ ಮಾಡಲೂ ಸಾಧ್ಯವಿದೆ. ಇದೇ ಕಾರಣಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ.

ಸತ್ಯಾಸತ್ಯತೆ ಪತ್ತೆ ಹಚ್ಚುವುದು ಹೇಗೆ?

ವಿಧಿವಿಜ್ಞಾನ ಪ್ರಯೋಗಾಲಯಗಳು ಯಾವುದೇ ವಿಡಿಯೊ ಅಥವಾ ಆಡಿಯೊ ಸಾಕ್ಷ್ಯವನ್ನು ಪರಿಶೀಲಿಸಲು ಕೆಲವು ವೈಜ್ಞಾನಿಕ ಮಾದರಿಗಳನ್ನು ರೂಪಿಸಿಕೊಂಡಿವೆ. ಸಾಕ್ಷ್ಯಗಳ ಪರಿಶೀಲನೆಯು ಹೆಚ್ಚು ನಿಖರವಾಗಿ ಆಗುವ ಉದ್ದೇಶದಿಂದ ‘ಕಾರ್ಯವಿಧಾನ ಕೈಪಿಡಿ’ಯನ್ನೂ ಕೇಂದ್ರ ಸರ್ಕಾರ ರೂಪಿಸಿದೆ.

  • ಆಡಿಯೊ ಅಥವಾ ವಿಡಿಯೊ ಫೈಲ್‌ಗಳು ಯಾವುದೇ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳಲ್ಲಿ ಇದ್ದರೂ ಅದನ್ನು ಡಿಜಿಟಲ್‌ ವಿಧಿ ವಿಜ್ಞಾನದ ಮೂಲಕ ಪಡೆದುಕೊಳ್ಳಲಾಗುತ್ತದೆ

  • ವಿವಿಧ ತಂತ್ರಜ್ಞಾನಗಳ ಮೂಲಕ, ವಿಧಿ ವಿಜ್ಞಾನ ಪರಿಕರಗಳ ಮೂಲಕ ಆಡಿಯೊ ಅಥವಾ ವಿಡಿಯೊ ಫೈಲ್‌ಗಳನ್ನು ಪರಿಶೀಲಿಸಲಾಗುತ್ತದೆ‌

  • ವಿಡಿಯೊ ಸಾಕ್ಷ್ಯದ ಪ್ರತಿ ಫ್ರೇಮ್‌ ಅನ್ನೂ ಸತ್ಯವೋ ಅಲ್ಲವೊ ಎಂದು ಪರಿಶೀಲಿಸಲಾಗುತ್ತದೆ. ವಿಡಿಯೊದಲ್ಲಿರುವವರ ಮುಖಗಳ ಗುಣಲಕ್ಷಣಗಳನ್ನು ಪತ್ತೆಹಚ್ಚಲಾಗುತ್ತದೆ

  • ಆಡಿಯೊ ಸಾಕ್ಷ್ಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತದೆ. ಜೊತೆಗೆ, ಆಡಿಯೊದಲ್ಲಿನ ಧ್ವನಿಯನ್ನು ಪತ್ತೆ ಹಚ್ಚಲಾಗುತ್ತದೆ. ಆಡಿಯೊದಲ್ಲಿರುವ ಧ್ವನಿಗೂ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುವವರ ಧ್ವನಿಯನ್ನು ಹೋಲಿಕೆ ಮಾಡುವ ಕೆಲಸವನ್ನೂ ಮಾಡಲಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT