ಸಿಜೆಐ ಸಂಜೀವ್ ಖನ್ನಾ ಅವರ ನಿವೃತ್ತಿ ನಂತರ ನ್ಯಾ. ಬಿ.ಆರ್.ಗವಾಯಿ ಅವರು ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಜೀವ್ ಖನ್ನಾ ಅವರು ಆರು ತಿಂಗಳು ಎರಡು ದಿನಗಳಿಗೆ ದೇಶದ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಹಾಲಿ ಸಿಜೆಐ ಗವಾಯಿ ಅವರ ಅಧಿಕಾರಾವಧಿಯೂ ಆರು ತಿಂಗಳು ಒಂಬತ್ತು ದಿನಗಳಿಗೆ ಮುಗಿಯುತ್ತದೆ. ಮುಂದಿನ ಆರು ವರ್ಷಗಳಲ್ಲಿ ದೇಶವು ಏಳು ಸಿಜೆಐಗಳನ್ನು ಕಾಣಲಿದೆ. ಎಲ್ಲರ ಅಧಿಕಾರ ಅವಧಿ ಕಡಿಮೆ ಇರುವುದು ಇದಕ್ಕೆ ಕಾರಣ. ಅಲ್ಪಾವಧಿಗೆ ಸಿಜೆಐ ಹುದ್ದೆಯಲ್ಲಿರುವುದರಿಂದ ಸಾಂವಿಧಾನಿಕವಾಗಿ ಮಹತ್ವವಿರುವ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ವಿಳಂಬವಾಗುತ್ತದೆ. ಹಾಗಾಗಿ, ಬೇರೆ ಸಾಂವಿಧಾನಿಕ ಹುದ್ದೆಗಳಿಗೆ ಇರುವ ರೀತಿಯಲ್ಲಿ ಸಿಜೆಐ ಹುದ್ದೆಗಳ ಸೇವಾವಧಿಯನ್ನೂ ನಿರ್ದಿಷ್ಟ ಅವಧಿಗೆ ನಿಗದಿಪಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
34: ಸುಪ್ರೀಂ ಕೋರ್ಟ್‌ನ ಒಟ್ಟು ನ್ಯಾಯಮೂರ್ತಿಗಳು | 32: ಈಗಿರುವ ನ್ಯಾಯಮೂರ್ತಿಗಳು
ಕಾನೂನು ತಜ್ಞರ ಅಭಿಪ್ರಾಯಗಳು
ಪ್ರಸ್ತುತ ಸಾಂವಿಧಾನಿಕ ಚೌಕಟ್ಟಿನಲ್ಲಿ ಸಿಜೆಐ ಅವರ ನಿರ್ದಿಷ್ಟ ಸೇವಾವಧಿ ವ್ಯವಸ್ಥೆಗೆ ಅನುಮತಿ ಇಲ್ಲ. ಜೊತೆಗೆ, ಇದು ಅಪೇಕ್ಷಣೀಯ ಅಲ್ಲ. ಸರಿಯಾದ ಕಾರ್ಯವಿಧಾನವೆಂದರೆ, ನ್ಯಾಯಮೂರ್ತಿಗಳನ್ನು ಹೇಗೆ ನೇಮಕಾತಿ ಮಾಡಬೇಕು ಎಂದರೆ ಅವರು ಕನಿಷ್ಠ 18 ತಿಂಗಳ ಅವಧಿಗೆ ಸಿಜೆಐ ಆಗಿ ಕೆಲಸ ನಿರ್ವಹಿಸುವಂತಿರಬೇಕು. ನ್ಯಾಯಮೂರ್ತಿಗಳ ನೇಮಕ ಸಂದರ್ಭದಲ್ಲಿ ಕೊಲಿಜಿಯಂ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು.– ಮೋಹನ್ ಕಾತರಕಿ, ಸುಪ್ರೀಂ ಕೋರ್ಟ್ ಹಿರಿಯ ವಕೀಲ
ಹಿರಿತನದ ಆಧಾರದಲ್ಲಿ ಮುಖ್ಯ ನ್ಯಾಯಮೂರ್ತಿಗಳ ನೇಮಕ ಆಗುತ್ತದೆ. ಅವರು 65 ವರ್ಷಕ್ಕೆ ನಿವೃತ್ತರಾಗಲೇಬೇಕು. ಈ ವ್ಯವಸ್ಥೆ ಬದಲಾಗಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಅಲ್ಪಾವಧಿಯ ಸಿಜೆಐಗಳು ಉತ್ತಮ ಕೆಲಸ ಮಾಡಿಲ್ಲ ಎಂದು ಹೇಳುವುದು ಸರಿಯಲ್ಲ. ಅದ್ಭುತ ತೀರ್ಪು ನೀಡಿ ಉತ್ತಮ ಸಾಧನೆ ಮಾಡಿದವರ ಪಟ್ಟಿಯೇ ಇದೆ. ದೀರ್ಘಾವಧಿ ಸಿಜೆಐಗಳ ಬಗ್ಗೆ ಟೀಕೆಗಳು ಇವೆ. ಇಚ್ಛಾಶಕ್ತಿ ಇದ್ದರೆ ಸೇವಾವಧಿ ಮುಖ್ಯ ಅಲ್ಲ.– ಸಂಜಯ್ ಹೆಗ್ಡೆ, ಸುಪ್ರೀಂ ಕೋರ್ಟ್ ಹಿರಿಯ ವಕೀಲ
ಸಿಜೆಐಗಳು ಅಲ್ಪಾವಧಿ ಇದ್ದರೆ ನ್ಯಾಯಾಂಗ ಕ್ಷೇತ್ರದಲ್ಲಿ ಆಡಳಿತಾತ್ಮಕ ಸುಧಾರಣೆ ಕಷ್ಟ. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನೇಮಕಕ್ಕೆ ಸಿಜೆಐ ನೇತೃತ್ವದ ಕೊಲಿಜಿಯಂ ತೀರ್ಮಾನ ತೆಗೆದುಕೊಳ್ಳುತ್ತದೆ. ಅಲ್ಪಾವಧಿಯ ಸಿಜೆಐಗಳು ತರಾತುರಿಯಲ್ಲಿ ತೀರ್ಮಾನ ತೆಗೆದುಕೊಂಡರೆ ಈ ನೇಮಕಾತಿ ಪ್ರಕ್ರಿಯೆ ವಿವಾದಕ್ಕೆ ಒಳಗಾಗುವ ಸಾಧ್ಯತೆಯೂ ಇದೆ. ಜತೆಗೆ, ಅಲ್ಪಾವಧಿಯ ಸಿಜೆಐಗಳಿಗೆ ಸಾಂವಿಧಾನಿಕ ಪ್ರಕರಣಗಳ ಬಗ್ಗೆ ವಿಚಾರಣೆಗೆ ಸಮಯ ಇರುವುದಿಲ್ಲ. ಸಿಜೆಐಗಳಿಗೆ ಕನಿಷ್ಠ ಸೇವಾವಧಿ ನಿಗದಿಪಡಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕಿದೆ.– ಪಿ.ಪುನೀತ್, ಜೆಎನ್‌ಯು ಪ್ರಾಧ್ಯಾಪಕ
ಭಾರತದ ಮುಖ್ಯ ನ್ಯಾಯಮೂರ್ತಿಯವರು ಸುಪ್ರೀಂ ಕೋರ್ಟ್‌ನ ಆಡಳಿತಾತ್ಮಕ ವ್ಯವಸ್ಥೆಯ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸುತ್ತಾರೆ. ಅವರು ಪ್ರಕರಣ ಹಂಚಿಕೆ, ನ್ಯಾಯಾಲಯ ನಿರ್ವಹಣೆ ಮತ್ತು ಸುಪ್ರೀಂ ಕೋರ್ಟ್‌ನ ಕಾರ್ಯಾಚರಣೆಗಳ ಒಟ್ಟಾರೆ ಮೇಲ್ವಿಚಾರಣೆಯಂತಹ ಮಹತ್ವದ ಜವಾಬ್ದಾರಿಗಳು ಮತ್ತು ನಿರ್ಣಾಯಕ ಕಾರ್ಯಗಳನ್ನು ಹೊಂದಿದ್ದಾರೆ. ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಅನೇಕ ಸುಧಾರಣೆಗಳು ಅಗತ್ಯವಿದೆ. ಒಬ್ಬ ಸಿಜೆಐ ತಮ್ಮ ಕೆಲಸ ಪ್ರಾರಂಭಿಸುವ ಹೊತ್ತಿಗೆ, ಅವರ ನಿವೃತ್ತಿ ಹತ್ತಿರವಾಗಿರುತ್ತದೆ. ಪರಿಣಾಮಕಾರಿ ನೀತಿ ಅನುಷ್ಠಾನಕ್ಕೆ ಯೋಜನೆ, ಕಾರ್ಯಗತಗೊಳಿಸುವಿಕೆ ಮತ್ತು ನಂತರದ ಮೌಲ್ಯಮಾಪನಕ್ಕೆ ಸಮಯ ಬೇಕಾಗುತ್ತದೆ. ಹೀಗಾಗಿ, ಕನಿಷ್ಠ ಎರಡು ವರ್ಷವಾದರೂ ಅವರ ಅಧಿಕಾರದ ಅವಧಿ ಇರಬೇಕು.– ಚಂದ್ರಶೇಖರ್, ಸುಪ್ರೀಂ ಕೋರ್ಟ್ ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.