ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ| ಆನ್‌ಲೈನ್‌ ಗೇಮ್ ಅನುಮತಿ, ನಿರ್ಬಂಧದ ಸುತ್ತ
ಆಳ–ಅಗಲ| ಆನ್‌ಲೈನ್‌ ಗೇಮ್ ಅನುಮತಿ, ನಿರ್ಬಂಧದ ಸುತ್ತ
Published 26 ಜೂನ್ 2023, 23:30 IST
Last Updated 26 ಜೂನ್ 2023, 23:30 IST
ಅಕ್ಷರ ಗಾತ್ರ

ಜನರು ಆನ್‌ಲೈನ್‌ ಗೇಮಿಂಗ್‌ಗಳತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಕುರಿತು ಪರ ವಿರೋಧ ಚರ್ಚೆಗಳು ಇವೆ. ಆನ್‌ಲೈನ್‌ ಗೇಮಿಂಗ್‌ ಎಂಬುದು ಜೂಜಾಟ ಎಂಬುದು ಒಂದು ವಾದ. ಇದರಿಂದಾಗಿ ಜನರು ಹಲವು ಸಂಕಷ್ಟಗಳಿಗೆ ಒಳಗಾಗಿದ್ದಾರೆ, ಹಾಗಾಗಿ ಇಂತಹ ಆಟಗಳಿಗೆ ನಿಯಂತ್ರಣ ಇರಬೇಕು ಎಂದು ಇವರು ಪ್ರತಿಪಾದಿಸುತ್ತಿದ್ದಾರೆ. ಇದು ಬುದ್ಧಿಶಕ್ತಿ ಉಪಯೋಗಿಸಿ ಆಡುವ ಆಟವಾದ್ದರಿಂದ ಜೂಜಾಟ ಅಲ್ಲ ಎನ್ನುವವರೂ ಇದ್ದಾರೆ. ಆನ್‌ಲೈನ್‌ ಗೇಮಿಂಗ್‌ಗೆ ಇತ್ತೀಚಿನವರೆಗೆ ಸರ್ಕಾರದ ನಿಯಂತ್ರಣ ಇರಲಿಲ್ಲ. ಆದರೆ, ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ಸಚಿವಾಲಯವು ಇಂತಹ ಗೇಮ್‌ಗಳಿಗೆ ಈಗ ಮೂಗುದಾರ ಹಾಕಿದೆ. ಆನ್‌ಲೈನ್ ಗೇಮ್‌ಗಳನ್ನು ನಿಯಂತ್ರಿಸಲು ನಿಯಮಗಳನ್ನು ಪ್ರಕಟಿಸಿದೆ. 

ಹಣವನ್ನು ಪಣಕ್ಕಿಟ್ಟು ಆಡುವ ಆನ್‌ಲೈನ್ ಗೇಮ್‌ಗಳಿಗೆ ಅವಕಾಶವಿಲ್ಲ ಎಂದು ಹೊಸ ನಿಯಮಗಳು ಹೇಳುತ್ತವೆ. ಜೂಜಾಟ ಉದ್ದೇಶದಿಂದ ನಡೆಯುತ್ತಿರುವ ರಿಯಲ್ ಮನಿ ಗೇಮ್‌ಗಳಿಗೆ (ಆರ್‌ಎಂಜಿ) ದೇಶದಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ, ಯಾವ ಯಾವ ಗೇಮ್‌ಗಳು ನಿಷೇಧಿತ ಗೇಮ್‌ಗಳ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಸಚಿವಾಲಯ ಪ್ರಕಟಿಸಿಲ್ಲ. ಬದಲಾಗಿ, ಯಾವ ಸ್ವರೂಪದ ಆನ್‌ಲೈನ್‌ ಗೇಮ್‌ಗಳಿಗೆ ಭಾರತದಲ್ಲಿ ಅವಕಾಶವಿದೆ ಹಾಗೂ ಯಾವ ಸ್ವರೂಪದ ಆನ್‌ಲೈನ್ ಗೇಮ್‌ಗಳಿಗೆ ನಿಷೇಧವಿದೆ ಎಂಬುದನ್ನು ನಿರ್ಧರಿಸಲು ಒಂದು ಪ್ರತ್ಯೇಕ ಘಟಕವನ್ನು ರಚಿಸಲಾಗುತ್ತದೆ. ಈ ಹೊಸ ವ್ಯವಸ್ಥೆಯ ರೂಪುರೇಷೆಗಳನ್ನು ಹೊಸ ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ. 

ಸ್ವಯಂ ನಿಯಂತ್ರಣ ಸಂಸ್ಥೆ (ಎಸ್‌ಆರ್‌ಒ) ಎಂದು ಕರೆಯಲಾಗುವ ಮೂರು ಘಟಕಗಳನ್ನು ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಯಾವ ಸ್ವರೂಪದ ಆನ್‌ಲೈನ್ ಗೇಮ್ ನಿಷೇಧಿಸಬೇಕು ಹಾಗೂ ಯಾವ ಸ್ವರೂಪದ ಆನ್‌ಲೈನ್ ಗೇಮ್ ಬಳಕೆಗೆ ಅಡ್ಡಿಯಿಲ್ಲ ಎಂಬುದನ್ನು ಎಸ್‌ಆರ್‌ಒ ತಜ್ಞರು ನಿರ್ಣಯಿಸುತ್ತಾರೆ. ಅನ್‌ಲೈನ್ ಗೇಮ್, ಜೂಜಿಗೆ ಆಹ್ವಾನ ನೀಡುವಂತಿದೆಯೇ ಅಥವಾ ಇಲ್ಲವೇ ಎಂಬುದರ ಆಧಾರದ ಮೇಲೆ ಅದಕ್ಕೆ ಅನುಮತಿ ನೀಡುವ ಅಥವಾ ನಿರಾಕರಿಸುವ ನಿರ್ಧಾರವನ್ನು ಈ ಘಟಕಗಳು ಕೈಗೊಳ್ಳುತ್ತವೆ. ಹಣದ ಮೂಲಕ ಆಡುವ ಆಟವಾಗಿದ್ದರೂ, ಅದು ಜೂಜು ಎಂದು ಪರಿಗಣಿತವಾಗದಿದ್ದಲ್ಲಿ, ಅದಕ್ಕೆ ಅನುಮತಿ ಸಿಗುವ ಸಾಧ್ಯತೆ ಹೆಚ್ಚು ಎಂದು ಆನ್‌ಲೈನ್ ಗೇಮಿಂಗ್ ವಲಯದ ಪರಿಣತರು ಅಂದಾಜಿಸಿದ್ದಾರೆ.

ಆಟಗಳನ್ನು ಕೌಶಲ ಆಧಾರಿತ ಆಟ (ಸ್ಕಿಲ್ ಬೇಸ್ಡ್) ಮತ್ತು ಅದೃಷ್ಟ ಆಧಾರಿತ ಆಟ (ಚಾನ್ಸ್ ಬೇಸ್ಡ್) ಎಂಬುದಾಗಿ ಪ್ರತ್ಯೇಕಿಸುವ ಗೋಜಿಗೆ ಸರ್ಕಾರ ಹೋಗಿಲ್ಲ ಎಂಬುದು ಇಲ್ಲಿ ಗಮನಾರ್ಹ. ಸಾಮಾನ್ಯವಾಗಿ ಆನ್‌ಲೈನ್ ಗೇಮ್‌ಗಳನ್ನು ಕೌಶಲ ಆಧಾರಿತ ಹಾಗೂ ಅದೃಷ್ಟ ಆಧಾರಿತ ಎಂದು ವಿಭಾಗಿಸಲಾಗುತ್ತದೆ. ತಮ್ಮ ವ್ಯಾಪ್ತಿಯಲ್ಲಿ ಆನ್‌ಲೈನ್ ಗೇಮ್‌ಗಳನ್ನು ಈಗಾಗಲೇ ನಿಷೇಧ ಮಾಡಿರುವ ಕೆಲವು ರಾಜ್ಯ ಸರ್ಕಾರಗಳು ಇದೇ ಮಾನದಂಡ ಅನುಸರಿಸಿವೆ. ಕೌಶಲ ಅಗತ್ಯವಿರುವ ಆಟಗಳನ್ನು ನಿಷೇಧದ ವ್ಯಾಪ್ತಿಯಿಂದ ಹೊರಗಿಟ್ಟಿವೆ. ಅದೃಷ್ಟ ನಂಬಿ ಆಡುವ ಆನ್‌ಲೈನ್ ಆಟಗಳನ್ನು ನಿಷೇಧದ ವ್ಯಾಪ್ತಿಗೆ ತಂದಿವೆ. 

ಕೌಶಲ ಆಧಾರಿತ ಆಟಗಳಲ್ಲಿ, ಆಟಗಾರರಿಗೆ ಆಟದ ಬಗ್ಗೆ ಜ್ಞಾನ, ತರಬೇತಿ ಹಾಗೂ ಅನುಭವ ಇರಬೇಕಾಗುತ್ತದೆ. ಆದರೆ ಅದೃಷ್ಟ ಆಧಾರಿತ ಆಟಗಳಿಗೆ ಯಾವುದೇ ಕೌಶಲದ ಅಗತ್ಯವಿರುವುದಿಲ್ಲ. ಇವು ಬಹುತೇಕ ಜೂಜು ಎಂದೇ ಪರಿಗಣಿತವಾಗಿವೆ. ಇಂತಹ ಆಟಗಳಿಗೆ ಕೆಲವು ರಾಜ್ಯ ಸರ್ಕಾರಗಳು ನಿಷೇಧ ವಿಧಿಸಿವೆ. ಕೇಂದ್ರ ಸರ್ಕಾರವು ಇದೀಗ ಪ್ರಕಟಿಸಿರುವ ನಿಯಮಗಳಲ್ಲಿ ಕೌಶಲ ಆಧಾರಿತ ಅಥವಾ ಅದೃಷ್ಟ ಆಧಾರಿತ ಆನ್‌ಲೈನ್ ಆಟ ಯಾವುವು ಎಂಬುದಕ್ಕೆ ವ್ಯಾಖ್ಯಾನ ಇಲ್ಲ. ಈ ನಡೆಯು, ಜನರ ಜೀವಕ್ಕೆ ಎರವಾಗಬಹುದಾದ ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸುವ ಬೇಡಿಕೆಯನ್ನು ಎಷ್ಟರ ಮಟ್ಟಿಗೆ ಈಡೇರಿಸುತ್ತದೆ ಎಂಬುದು ಪ್ರಶ್ನೆಯಾಗಿದೆ. 

ಆದರೆ ಈ ವಿಚಾರದಲ್ಲಿ ಸರ್ಕಾರದ ವಾದ ಭಿನ್ನವಾಗಿದೆ. ಆನ್‌ಲೈನ್ ಆಟಗಳನ್ನು ಕೌಶಲ ಆಧಾರಿತ ಹಾಗೂ ಅದೃಷ್ಟ ಆಧಾರಿತ ಎಂಬುದಾಗಿ ಪ್ರತ್ಯೇಕಿಸುವ ಮಾನದಂಡವೇ ಸರಿಯಿಲ್ಲ ಎಂಬುದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಮಣ್ ಅವರ ಅಭಿಪ್ರಾಯ. ಆಟಗಳನ್ನು ಹೀಗೆ ವಿಭಾಗಿಸಿರುವ ರಾಜ್ಯಗಳ ನಿರ್ಧಾರವೇ ಸರಿಯಿಲ್ಲ ಎಂದು ಅವರು ಹೇಳುತ್ತಾರೆ. ವಿವಿಧ ನ್ಯಾಯಾಲಯಗಳ ತೀರ್ಪುಗಳು, ಶಾಸನಾತ್ಮಕ ಅವಕಾಶಗಳ ಆಧಾರದಲ್ಲಿ ಯೋಚಿಸಬೇಕೇ ವಿನಾ, ಕೌಶಲ ಆಧಾರಿತ ಮತ್ತು ಅದೃಷ್ಟ ಆಧಾರಿತ ಎಂಬುದಾಗಿ ವಿಭಾಗಿಸುವ ರಾಜ್ಯ ಸರ್ಕಾರಗಳ ನಡೆಯೇ ಪ್ರಶ್ನಾರ್ಹ ಎಂಬುದು ಅವರ ವಿವರಣೆ. 

ಗೇಮ್ ಭವಿಷ್ಯ ನಿರ್ಧರಿಸಲಿದೆ ಎಸ್‌ಆರ್‌ಒ

ಆನ್‌ಲೈನ್ ಗೇಮ್‌ಗಳು ದೇಶದಲ್ಲಿ ಕಾರ್ಯಾಚರಣೆ ನಡೆಸಬೇಕಾದರೆ, ಎಸ್‌ಆರ್‌ಒಗಳ ಅನುಮತಿ ಕಡ್ಡಾಯ. ಅನುಮತಿ ಕೋರಿರುವ ಆನ್‌ಲೈನ್ ಗೇಮ್‌, ಸರ್ಕಾರ ನಿಗದಿಪಡಿಸಿರುವ ಮಾನದಂಡಗಳಿಗೆ ಪೂರಕವಾಗಿದೆಯೇ, ಇಲ್ಲವೇ ಎಂಬುದನ್ನು ಎಸ್‌ಆರ್‌ಒ ನಿರ್ಧರಿಸುತ್ತದೆ. ಯಾವ ಯಾವ ಗೇಮ್‌ಗೆ ಅನುಮತಿ ನೀಡಲಾಗಿದೆ ಎಂಬ ಪಟ್ಟಿಯನ್ನು ಎಸ್‌ಆರ್‌ಒಗಳು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿವೆ. ನೀಡಲಾಗಿದ್ದ ಅನುಮತಿಯನ್ನು ಯಾವ ಕಾರಣಕ್ಕೆ ಹಿಂಪಡೆಯಲಾಗಿದೆ ಎಂಬ ಮಾಹಿತಿಯನ್ನೂ ಎಸ್‌ಆರ್‌ಒಗಳು ವೆಬ್‌ಸೈಟ್‌ ಅಥವಾ ಅ್ಯಪ್‌ನಲ್ಲಿ ಉಲ್ಲೇಖಿಸಬೇಕಿದೆ. ಅಗತ್ಯಬಿದ್ದರೆ, ಎಸ್‌ಆರ್‌ಒಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರ ಕ್ರಮೇಣ ಹೆಚ್ಚಿಸಲಿದೆ.

ಇಂತಹ ಪ್ರತೀ ಎಸ್‌ಆರ್‌ಒಗಳಲ್ಲಿ ಗೇಮಿಂಗ್ ಉದ್ಯಮವೂ ಸೇರಿದಂತೆ ವಿವಿಧ ವಲಯಗಳ ತಜ್ಞರು ಇರಲಿದ್ದಾರೆ. ಗೇಮಿಂಗ್ ಉದ್ಯಮದವರು, ಶಿಕ್ಷಣ ತಜ್ಞರು, ಮನಶಾಸ್ತ್ರಜ್ಞರು, ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡಿದವರು ಸೇರಿದಂತೆ ಸಮಾಜದ ವಿವಿಧ ವಲಯಗಳ ತಜ್ಞರನ್ನು ಎಸ್‌ಆರ್‌ಒ ಹೊಂದಿರುತ್ತದೆ. ಆನ್‌ಲೈನ್ ಆಟದಲ್ಲಿ ಫಲಿತಾಂಶದ ಮೇಲೆ ಬಾಜಿ ಕಟ್ಟುವುದಕ್ಕೆ ಸಂಬಂಧಿಸಿಲ್ಲ ಎಂಬುದು ಖಚಿತಪಟ್ಟರೆ ಮಾತ್ರ ತಜ್ಞರು ಅದರ ಬಳಕೆಯನ್ನು ಅನುಮೋದಿಸುತ್ತಾರೆ. ಬೆಟ್ಟಿಂಗ್ ಕಟ್ಟುವಂತೆ ಆಹ್ವಾನ ನೀಡುವ ಆಟಕ್ಕೆ ಅವಕಾಶವಿಲ್ಲ ಎಂದು ನಿಯಮಗಳು ಸ್ಪಷ್ಟವಾಗಿ ಹೇಳುತ್ತವೆ. 

ಬಳಕೆದಾರರು ಆನ್‌ಲೈನ್‌ ಗೇಮ್‌ನ ಗೀಳಿಗೆ ಒಳಗಾಗುವ ಅಪಾಯವನ್ನು ತಪ್ಪಿಸುವುದು, ಹಣಕಾಸು ನಷ್ಟ ಹಾಗೂ ಹಣಕಾಸು ವಂಚನೆಗೆ ಒಳಗಾಗುವುದನ್ನು ತಡೆಯುವ ಉದ್ದೇಶದಿಂದ ಎಸ್‌ಆರ್‌ಒಗಳು ಕೆಲವು ಕಟ್ಟುಪಾಡುಗಳನ್ನು ರೂಪಿಸಲಿವೆ. ಗೇಮ್ ಆಡುವವರು ಗರಿಷ್ಠ ಅವಧಿಯವರೆಗೆ ಆಟದಲ್ಲಿ ತೊಡಗಿಸಿಕೊಂಡಾಗ ಅವರನ್ನು ಎಚ್ಚರಿಸುವ ಹಾಗೂ ಇಂತಿಷ್ಟು ಹಣದ ಮಿತಿಯನ್ನು ದಾಟಿದಾಗ ಎಚ್ಚರಿಕೆ ಸಂದೇಶವನ್ನು ಕಳುಹಿಸುವುದು ಈ ಕಟ್ಟುಪಾಡುಗಳಲ್ಲಿ ಇರಲಿವೆ ಎಂದು ಸಚಿವಾಲಯ ಹೇಳಿದೆ.  

ಸರ್ಕಾರ ಹೇಳುವುದೇನು?

ಬಾಜಿ ಉದ್ದೇಶ ಹೊಂದಿರುವ ರಿಯಲ್ ಮನಿ ಗೇಮ್‌ಗಳನ್ನು ನಿಯಂತ್ರಿಸುವುದಷ್ಟೇ ನಮ್ಮ ಉದ್ದೇಶ ಎಂದು ಕೇಂದ್ರ ಸಚಿವರು ಸ್ಪಷ್ಟ‍ಡಿಸಿದ್ದಾರೆ. ಆಟವೊಂದು ಅದರ ಫಲಿತಾಂಶದ ಆಧಾರದಲ್ಲಿ ಬಹುಮಾನದ ಹಣ ನೀಡುವಂತಿದ್ದರೆ ಅಂತಹ ಗೇಮ್‌ಗೆ ಅವಕಾಶವಿಲ್ಲ ಎಂದು ವಿದ್ಯುನ್ಮಾನ ಹಾಗೂ ಮಾಹಿತಿ ಇಲಾಖೆಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ. ಮಕ್ಕಳು ಗೀಳಿನ ರೀತಿ ಆನ್‌ಲೈನ್ ಗೇಮ್‌ಗೆ ಅಂಟಿಕೊಳ್ಳಬಾರದು, ಜೂಜಾಟಕ್ಕೆ ಅವಕಾಶ ಇರಬಾರದು ಹಾಗೂ ಗೇಮ್ ಆಡುವ ಬಳಕೆದಾರರಿಗೆ ಅದರಲ್ಲಿರುವ ಕಂಟೆಂಟ್ ಹಾನಿ ಮಾಡುವಂತಿರಬಾರದು ಎಂಬ ನಿಯಮಗಳನ್ನು ಸೇರಿಸಲಾಗಿದೆ ಎಂದು ಹೇಳಿದ್ದಾರೆ.  

ಉದ್ಯಮದ ಪ್ರತಿಕ್ರಿಯೆ

ಕೇಂದ್ರ ಜಾರಿಗೊಳಿಸಿರುವ ನಿಯಮಗಳು ಮಹತ್ವದ ಮೈಲಿಗಲ್ಲು ಎಂದು ಭಾರತದ ಗೇಮಿಂಗ್ ಉದ್ಯಮ ಸ್ವಾಗತಿಸಿದೆ. ಜೂಜಾಟ ಹಾಗೂ ಆನ್‌ಲೈನ್ ಗೇಮಿಂಗ್ ಅನ್ನು ಪ್ರತ್ಯೇಕವಾಗಿ ಗುರುತಿಸಿದ್ದಕ್ಕಾಗಿ ಉದ್ಯಮ ಧನ್ಯವಾದ ಹೇಳಿದೆ. ಎಲ್ಲ ಆನ್‌ಲೈನ್ ಆಟಗಳನ್ನೂ ಜೂಜಾಟ ಎಂದು ಪರಿಗಣಿಸುವುದು ಇದರಿಂದ ತಪ್ಪಿದೆ. ನೈಜ ಮನರಂಜನೆ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿರುವ ಗೇಮ್‌ಗಳಿಗೆ ಈ ನಿಯಮಗಳು ಒತ್ತಾಸೆಯಾಗಿ ನಿಲ್ಲಲಿವೆ. ದೇಶದಲ್ಲಿ ಗೇಮಿಂಗ್ ಉದ್ಯಮವು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಈ ನಿಯಮಗಳು ನೆರವಾಗಲಿವೆ ಎಂದು ಉದ್ಯಮ ವಲಯ ಪ್ರತಿಕ್ರಿಯಿಸಿದೆ. 

ಕೆಲವು ರಾಜ್ಯಗಳಲ್ಲಿ ಆನ್‌ಲೈನ್‌ ಗೇಮ್‌ ಇಲ್ಲ

ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವುದು ಅಥವಾ ಅನುಮತಿ ನೀಡುವುದು ಆಯಾ ರಾಜ್ಯಗಳ ವ್ಯಾಪ್ತಿಗೆ ಒಳಪಟ್ಟಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳು ಕೆಲವು ಸ್ವರೂಪದ ಆನ್‌ಲೈನ್ ಗೇಮ್‌ಗೆ ತಮ್ಮ ರಾಜ್ಯಗಳಲ್ಲಿ ನಿಷೇಧ ವಿಧಿಸಿವೆ. ಆಂಧ್ರ, ಅಸ್ಸಾಂ, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳು ಕೌಶಲ ಆಧಾರಿತ ಮತ್ತು ಅದೃಷ್ಟ ಆಧಾರಿತ – ಹೀಗೆ ಎರಡೂ ಸ್ವರೂಪದ ಗೇಮ್‌ಗಳನ್ನು ನಿಷೇಧಿಸಿವೆ. 

‘ಜೂಜು ಇರುವ ಆನ್‌ಲೈನ್ ಗೇಮ್‌ಗಳ ಹಾವಳಿಯಿಂದ ರಾಜ್ಯದಲ್ಲಿ ಹೆಚ್ಚಳವಾದ ಆತ್ಮಹತ್ಯೆ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶ’ದಿಂದ ತಮಿಳುನಾಡು ಸರ್ಕಾರವು ಮಸೂದೆಯನ್ನು ರಚಿಸಿತ್ತು. ಇದಕ್ಕೆ ಸಹಿ ಹಾಕಲು ರಾಜ್ಯಪಾಲರು ಆರಂಭದಲ್ಲಿ ವಿಳಂಬ ಧೋರಣೆ ಅನುಸರಿಸಿದ್ದರು ಎಂದು ಆಡಳಿತ ಪಕ್ಷ ಆರೋಪಿಸಿತ್ತು. ಕರ್ನಾಟಕದಲ್ಲಿ 2021ರಲ್ಲಿ ನಿಷೇಧ ಜಾರಿಯಾಯಿತು. ಆದರೆ ಅದಕ್ಕೆ ಹೈಕೋರ್ಟ್‌ ತಡೆ ನೀಡಿತ್ತು. ಹೈಕೋರ್ಟ್ ತಡೆ ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. 

2017ರಲ್ಲಿ ತೆಲಂಗಾಣ ರಾಜ್ಯವು ದೇಶದಲ್ಲೇ ಮೊದಲ ಬಾರಿಗೆ ನಿಷೇಧ ಹೇರಿತ್ತು. 2020ರಲ್ಲಿ, ಆಂಧಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ನಿಷೇಧ ವಿಧಿಸಿದವು. ಕೇಂದ್ರಾಡಳಿತ ಪ್ರದೇಶ ಪುದುಚೇರಿಯೂ ಇದೇ ಹಾದಿ ಅನುಸರಿಸಿತು. ಇತ್ತೀಚೆಗೆ ಛತ್ತೀಸಗಡ ಸರ್ಕಾರವು ಜೂಜು ತಡೆ ಕಾಯ್ದೆ–2023 ಜಾರಿಗೊಳಿಸಿದ್ದರೂ, ಕೌಶಲ ಆಧಾರಿತ ಆಟವನ್ನು ನಿಷೇಧದ ಪಟ್ಟಿಯಿಂದ ಹೊರಗಿಟ್ಟಿದೆ. ಗೋವಾ, ಸಿಕ್ಕಿಂ, ಮೇಘಾಲಯ, ನಾಗಾಲ್ಯಾಂಡ್ ರಾಜ್ಯಗಳು ಆನ್‌ಲೈನ್ ಗೇಮ್ ನಿಯಂತ್ರಿಸುವ ನಿಯಮಗಳನ್ನು ಸ್ಥಳೀಯವಾಗಿ ಜಾರಿಗೊಳಿಸಿವೆ. 

ನಿಷೇಧ ಅಥವಾ ಅನುಮತಿ ಗೊಂದಲದ ನಡುವೆ, ಆನ್‌ಲೈನ್ ಗೇಮ್, ಕುದುರೆ ರೇಸ್ ಹಾಗೂ ಕ್ಯಾಸಿನೊ ಆಟಗಳ ಮೇಲೆ ಶೇ 28ರವರೆಗೆ ಜಿಎಸ್‌ಟಿ ವಿಧಿಸುವ ಪ್ರಸ್ತಾಪವು ಕೇಂದ್ರ ಜಿಎಸ್‌ಟಿ ಮಂಡಳಿ ಮುಂದೆ ಇದೆ.

ನಿಯಮಗಳಲ್ಲಿ ಏನಿದೆ?

  • ‘ಕಂಪ್ಯೂಟರ್ ಅಥವಾ ಮಧ್ಯವರ್ತಿಯ ಮೂಲಕ ಬಳಸಬಹುದಾದ ಇಂಟರ್‌ನೆಟ್ ಆಧಾರಿತ ಗೇಮ್ ಅನ್ನು ಆನ್‌ಲೈನ್ ಗೇಮ್’ ಎಂದು ವ್ಯಾಖ್ಯಾನಿಸಲಾಗಿದೆ

  • ಯಾವ ಸ್ವರೂಪದ ಆನ್‌ಲೈನ್ ಗೇಮ್‌ ನಿಷಿದ್ಧ ಹಾಗೂ ಯಾವ ಸ್ವರೂಪದ ಗೇಮ್ ಬಳಕೆಗೆ ಸೂಕ್ತ ಎಂಬುದನ್ನು ನಿರ್ಣಯಿಸಲು ಎಸ್‌ಆರ್‌ಒ ಪದ್ಧತಿ ಜಾರಿಗೆ ನಿರ್ಧಾರ

  • ಎಸ್‌ಆರ್‌ಒ ಅಡಿಯಲ್ಲಿ ನೋಂದಾಯಿತಗೊಂಡ ಆನ್‌ಲೈನ್ ಗೇಮಿಂಗ್ ಕಂಪನಿಯು ತನ್ನ ನೋಂದಣಿ ಸಂಖ್ಯೆ, ಖಾಸಗಿತನ ನೀತಿಗಳು, ನಿಯಮಗಳು ಹಾಗೂ ಸೇವೆಗಳು, ಬಳಕೆದಾರರ ಒಪ್ಪಂದದ ಮಾಹಿತಿಯನ್ನು ತನ್ನ ವೆಬ್‌ಸೈಟ್ ಅಥವಾ ಮೊಬೈಲ್ ಗೇಮಿಂಗ್ ಆ್ಯಪ್‌ನಲ್ಲಿ ಉಲ್ಲೇಖಿಸಬೇಕು

  • ಎಸ್‌ಆರ್‌ಒ ಅಡಿ ಮಾಡಲಾದ ನೋಂದಣಿ ಸಂಖ್ಯೆ ಹಾಗೂ ಯಾವ ಉದ್ದೇಶಕ್ಕೆ ನೋಂದಣಿ ಮಾಡಿಸಲಾಗಿದೆ ಎಂಬ ಮಾಹಿತಿ ಹಂಚಿಕೊಳ್ಳಬೇಕು

  • ಆನ್‌ಲೈನ್ ಗೇಮ್ ಮಧ್ಯವರ್ತಿಯು ಭಾರತದಲ್ಲಿ ತನ್ನ ಭೌತಿಕ ವಿಳಾಸವನ್ನು ವೆಬ್‌ಸೈಟ್‌ನಲ್ಲಿ ನಮೂದಿಸಬೇಕು

  • ನಿಯಮ ಉಲ್ಲಂಘನೆ ಕುರಿತಂತೆ ಬಳಕೆದಾರರು ದೂರು ನೀಡುವ ವ್ಯವಸ್ಥೆಯನ್ನು ಜಾರಿಗೆ ತರಬೇಕು

  • ಕುಂದುಕೊರತೆ ಅಧಿಕಾರಿಯು ಭಾರತದಲ್ಲಿ ನೆಲೆಸಿರಬೇಕು

  • ಬಳಕೆದಾರರ ಕುಂದುಕೊರತೆಗಳನ್ನು ಕಾಲಮಿತಿಯಲ್ಲಿ ಬಗೆಹರಿಸಬೇಕು

  • ಸರ್ಕಾರದ ಕಾನೂನು ಜಾರಿ ವಿಭಾಗದ ಜೊತೆ ದಿನದ 24 ಗಂಟೆಯೂ ಸಂಪರ್ಕಕ್ಕೆ ಸಿಗುವಂತಹ ನೋಡಲ್ ಸಂಪರ್ಕ ಅಧಿಕಾರಿಗಳನ್ನು ಕಂಪನಿಗಳು ನೇಮಿಸಬೇಕು

ಆಧಾರ: ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ರೂಪಿಸಿರುವ ಹೊಸ ನಿಯಮಗಳು, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT