ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ: ಭಾರತದ ಮಳೆ ಮಾರುತಗಳ ಪ್ರಭಾವಿಸುವ ಪೆಸಿಫಿಕ್‌ ಸಾಗರದ ಆಗುಹೋಗುಗಳು

Published 17 ಮೇ 2024, 22:30 IST
Last Updated 17 ಮೇ 2024, 22:30 IST
ಅಕ್ಷರ ಗಾತ್ರ

ಈ ಬಾರಿ ಭಾರತದಲ್ಲಿ ಮುಂಗಾರು ಮಳೆ ಉತ್ತಮ ವಾಗಿರಲಿದೆ ಎಂದು ಹವಾಮಾನ ಇಲಾಖೆಯು ಹೇಳಿದೆ. ಭಾರತಕ್ಕೆ ಮುಂಗಾರು ತರುವ ನೈರುತ್ಯ ಮಾರುತಗಳು ರೂಪುಗೊಳ್ಳುವುದು ಹಿಂದೂ ಮಹಾಸಾಗರದಲ್ಲಿ. ಈಗ ಅಲ್ಲಿ ಸಾಮಾನ್ಯ ವಾತಾವರಣವೇ ಇದೆ. ಹೀಗಾಗಿ ಮುಂಗಾರು ಮಳೆ ಚೆನ್ನಾಗಿ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಆಗಸ್ಟ್‌ ವೇಳೆಗೆ ಲಾ ನಿನೊ ಪರಿಸ್ಥಿತಿ ತೀವ್ರವಾಗುವುದರಿಂದ, ವಾಡಿಕೆಗಿಂತಲೂ ಹೆಚ್ಚು ಮಳೆಯಾಗಲಿದೆ ಎಂದೂ ಲೆಕ್ಕ ಹಾಕಲಾಗಿದೆ.

ಈಗ ತೀವ್ರ ಬರಕ್ಕೆ ಕಾರಣವಾಗಿದ್ದ ಎಲ್‌ ನಿನೊ ಮತ್ತು ಮುಂದಿನ ದಿನಗಳಲ್ಲಿ ತೀವ್ರ ಮಳೆ ತರಲಿದೆ ಎಂದು ಅಂದಾಜಿಸಿರುವ ಲಾ ನಿನೊ, ಎರಡೂ ಪರಿಸ್ಥಿತಿಗಳು ಸಾಮಾನ್ಯವಾದುವಲ್ಲ. ಬದಲಿಗೆ ಸಮುದ್ರದಲ್ಲಿನ ಬಿಸಿನೀರಿನ ಪ್ರವಾಹ ಮತ್ತು ತಣ್ಣೀರಿನ ಪ್ರವಾಹದಲ್ಲಿ, ಸಮುದ್ರದ ಮೇಲೆ ಬೀಸುವ ಮಾರುತಗಳಲ್ಲಿ ಆಗುವ ಏರುಪೇರಿನಿಂದ ಉಂಟಾಗುವ ಅಸಾಧಾರಣ ವಾತಾವರಣ ಸ್ಥಿತಿಗಳಿವು. ಇವು ಕೆಲವೆಡೆ ತೀವ್ರ ಮಳೆ ತಂದರೆ, ಕೆಲವೆಡೆ ತೀವ್ರ ಬರಕ್ಕೆ ಕಾರಣವಾಗುತ್ತವೆ. ಅಂತಹ ಒಂದು ಸ್ಥಿತಿಯಿಂದ (ಎಲ್‌ ನಿನೊ) ಮತ್ತೊಂದು ಸ್ಥಿತಿಗೆ (ಲಾ ನಿನೊ) ಬದಲಾಗುತ್ತಿರುವ ಕಾಲಘಟ್ಟದಲ್ಲಿ ಈಗ ನಾವಿದ್ದೇವೆ.

ಎಲ್‌ ನಿನೊ ಮತ್ತು ಲಾ ನಿನೊ ಎಂಬಂತಹ ಸ್ಥಿತಿಗಳನ್ನು ಮೊದಲು ದಾಖಲಿಸಿದ್ದು 15ನೇ ಶತಮಾನದಲ್ಲಿ. ಆಗ ಎಲ್‌ ನಿನೊ 4–8 ವರ್ಷಗಳಿಗೆ ಒಮ್ಮೆ ಸಂಭವಿಸುತ್ತಿತ್ತು ಎಂದು ದಾಖಲಾಗಿದೆ. ಕೈಗಾರಿಕಾ ಕ್ರಾಂತಿಯ ನಂತರ ಜಾಗತಿಕ ತಾಪಮಾನವು ಏರಿಕೆಯಾಗಿದೆ. ಇದು ಪ್ರಾಕೃತಿಕ ವಿದ್ಯಮಾನಗಳನ್ನು ತೀವ್ರವಾಗಿ ಪ್ರಭಾವಿಸಿವೆ. ಎಲ್‌ ನಿನೊವನ್ನೂ ಇದು ಪ್ರಭಾವಿಸಿದೆ. 20ನೇ ಶತಮಾನದ ವೇಳೆಗೆ ಎಲ್‌ ನಿನೊ ತಲೆದೋರುವ ಕಾಲವು 2–7 ವರ್ಷಗಳಿಗೆ ಕುಸಿದಿದೆ. ಅಂದರೆ ಒಂದು ಎಲ್‌ ನಿನೊವಿನಿಂದ ಮತ್ತೊಂದು ಎಲ್‌ ನಿನೊ ಸಂಭವಿಸುವ ನಡುವಿನ ಅಂತರ ಕುಸಿಯುತ್ತಿದೆ. ಮುಂದಿನ ದಶಕಗಳಲ್ಲಿ ಎರಡು ಎಲ್‌ ನಿನೊಗಳ ನಡುವಣ ಅಂತರವು 1–3 ವರ್ಷಕ್ಕೆ ಕುಸಿಯುವ ಅಪಾಯವೂ ಇದೆ. ಪರಿಣಾಮವಾಗಿ ಭೂಮಿಯು ಪದೇ–ಪದೇ ತೀವ್ರ ಬರವನ್ನು ಎದುರಿಸಬೇಕಾಗುತ್ತದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಲಾ ನಿನೊ ಪರಿಸ್ಥಿತಿಯೂ ಇದೇ ರೀತಿ ಇದೆ. 2021–22ರಲ್ಲಷ್ಟೇ ಲಾ ನಿನೊ ಸಂಭವಿಸಿತ್ತು. ಈಗ ಮತ್ತೆ 2024ರಲ್ಲಿ ಲಾ ನಿನೊ ಸಂಭವಿಸುತ್ತಿದೆ. ಲಾ ನಿನೊ ಮಳೆ ಪ್ರಮಾಣವನ್ನು ಉತ್ತಮ ಪಡಿಸಿದರೂ, ಹಲವೆಡೆ ವಿಧ್ವಂಸಕವಾಗಿ ಪರಿಣಮಿಸುತ್ತದೆ. ಈ ಕಾರಣದಿಂದ ಲಾ ನಿನೊ ಸಹ ಪದೇ–ಪದೇ ಸಂಭವಿಸುವುದು ಅಪಾಯಕಾರಿಯೇ ಹೌದು ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಿಸುವ ಮೂಲಕ, ಹವಾಮಾನ ವೈಪರೀತ್ಯವನ್ನು ತಡೆಗಟ್ಟಬೇಕು. ಇಲ್ಲದಿದ್ದಲ್ಲಿ ಇಂತಹ ಅಸಾಧಾರಣ ಹವಾಮಾನ ವಿದ್ಯಮಾನಗಳಿಗೆ ಪದೇ–ಪದೇ ಗುರಿ ಯಾಗಬೇಕಾಗುತ್ತದೆ ಎಂಬುದು ವಿಜ್ಞಾನಿಗಳ ಎಚ್ಚರಿಕೆ.

ಪದೇ ಪದೇ ಕಾಡುವ ಎಲ್‌ ನಿನೊ

ಇದು ಸ್ಪ್ಯಾನಿಷ್‌ ಪದ. ಇದರರ್ಥ ‘ಪುಟ್ಟ ಹುಡುಗ’ ಎಂದು. ಎಲ್‌ ನಿನೊ ಪರಿಸ್ಥಿತಿ ಉಂಟಾದಾಗ ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಮತ್ತು ಸುತ್ತಲಿನ ಫೆಸಿಫಿಕ್‌ ಸಾಗರದಲ್ಲಿನ ನೀರಿನ ಉಷ್ಣಾಂಶ ವಾಡಿಕೆಗಿಂತ ಹೆಚ್ಚಾಗುತ್ತದೆ. ಇದು ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಖಂಡಗಳಿಗೆ ಮಳೆ ತರುವ ಧ್ರುವೀಯ ಶೀತ ಮಾರುತಗಳ ದಿಕ್ಕನ್ನು ಬದಲಿಸುತ್ತದೆ. ಪರಿಣಾಮವಾಗಿ ಅಮೆರಿಕದ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ, ಕೆನಡಾದಲ್ಲಿ, ದಕ್ಷಿಣ ಅಮೆರಿಕದ ದಕ್ಷಿಣ ಭಾಗದಲ್ಲಿ ಮಳೆ ಕೊರತೆಯಾಗುತ್ತದೆ.

ಸಾಮಾನ್ಯ ಪರಿಸ್ಥಿತಿಯಲ್ಲಿ ಪೆಸಿಫಿಕ್‌ ಸಾಗರದಾಳದಲ್ಲಿನ ತಣ್ಣನೆಯ ನೀರು ದಕ್ಷಿಣ ಅಮೆರಿಕದ ಪೂರ್ವ ಕರಾವಳಿ ಪ್ರದೇಶದಲ್ಲಿ ಮೇಲ್ಮೈಗೆ ಬರುತ್ತದೆ. ಈ ನೀರು ಸಾಗರದಾಳದಲ್ಲಿ ಪೋಷಕಾಂಶಗಳನ್ನು ಮೇಲಕ್ಕೆ ತರುತ್ತದೆ. ಇದರಿಂದ ಮೀನು ಮತ್ತಿತರ ಜಲಚರಗಳ ಬೆಳವಣಿಗೆ ಮತ್ತು ವೃದ್ಧಿ ವೇಗವಾಗಿ ಆಗುತ್ತದೆ.

ಆದರೆ ಎಲ್‌ ನಿನೊ ಸಂದರ್ಭದಲ್ಲಿ ಇದು ಸಂಭವಿಸುವುದಿಲ್ಲ. ಪೋಷಕಾಂಶಗಳ ಕೊರತೆಯಿಂದ ಮೀನಿನ ಬೆಳವಣಿಗೆ ಕುಂಠಿತವಾಗುತ್ತದೆ. ಮೀನುಗಾರರು ಮೀನುಗಾರಿಕೆಯನ್ನೇ ನಿಲ್ಲಿಸಬೇಕಾದ ಸ್ಥಿತಿ ಎದುರಾಗುತ್ತದೆ. 15ನೇ ಶತಮಾನದ ವೇಳೆಗೆ ಇಂತಹ ಸ್ಥಿತಿ 7–8 ವರ್ಷಗಳಿಗೆ ಒಮ್ಮೆ ಸಂಭವಿಸುತ್ತಿತ್ತು. ಆಗಾಗ್ಗೆ ಬಂದುಹೋಗುತ್ತಿದ್ದ ಈ ಸ್ಥಿತಿಯನ್ನು ದಕ್ಷಿಣ ಅಮೆರಿಕದಲ್ಲಿನ ಸ್ಪ್ಯಾನಿಷ್‌ ಜನರು ‘ಪುಟ್ಟ ಹುಡುಗ– ಎಲ್‌ ನಿನೊ’ ಎಂದು ಕರೆದರು.

ಪ್ರಜಾವಾಣಿ ಗ್ರಾಫಿಕ್ಸ್: ಕಣಕಾಲಮಠ

ಪ್ರಜಾವಾಣಿ ಗ್ರಾಫಿಕ್ಸ್: ಕಣಕಾಲಮಠ

ಅಪರೂಪಕ್ಕೆ ಬರುವ ಲಾ ನಿನೊ

ಇದೂ ಸಹ ಸ್ಪ್ಯಾನಿಷ್‌ ಮೀನುಗಾರರು ಕೊಟ್ಟ ಪದ. ‘ಪುಟ್ಟ ಹುಡುಗಿ’ ಎಂಬುದು ಇದರರ್ಥ. ಇದು ತಲೆದೋರಿದಾಗ ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯಿಂದ ಆಸ್ಟ್ರೇಲಿಯಾದತ್ತ ಬೀಸುವ ಮಾರುತಗಳು ತೀವ್ರವಾಗುತ್ತದೆ. ಈ ಮಾರುತಗಳು ಸಮುದ್ರದ ಮೇಲ್ಮೈನಲ್ಲಿನ ಬಿಸಿಗಾಳಿಯನ್ನು ಆಸ್ಟ್ರೇಲಿಯಾ, ಇಂಡೊನೇಷ್ಯಾದತ್ತ ಸೆಳೆದೊಯ್ಯುತ್ತವೆ. ಪರಿಣಾಮವಾಗಿ ಅಮೆರಿಕ ಖಂಡಗಳ ಪಶ್ಚಿಮದ ಕರಾವಳಿಯಲ್ಲಿ ಶೀತದ ಸ್ಥಿತಿ ನಿರ್ಮಾಣವಾಗುತ್ತದೆ. 

ಈ ವೇಳೆ ಪೆಸಿಫಿಕ್‌ ಸಾಗರದಾಳದಲ್ಲಿನ ತಣ್ಣನೆಯ ನೀರು ಹೆಚ್ಚಿನ ಪ್ರಮಾಣದಲ್ಲಿ ಸಮುದ್ರದ ಮೇಲ್ಮೈಗೆ ಬರುತ್ತದೆ. ಜತೆಗೆ ಸಾಗರದಾಳದಲ್ಲಿನ ಪೋಷಕಾಂಶಗಳನ್ನು ಯಥೇಚ್ಛವಾಗಿ ಮೇಲ್ಮೈಗೆ ತರುತ್ತವೆ. ಪರಿಣಾಮವಾಗಿ ಜಲಚರಗಳ ಬೆಳವಣಿಗೆ ವೇಗವಾಗಿ ಆಗುತ್ತದೆ. ಸ್ಪ್ಯಾನಿಷ್‌ ಮೀನುಗಾರರಿಗೆ ಇದು ಸಮೃದ್ಧಿ ತರುವ ಕಾಲ. ಹೀಗಾಗಿಯೇ ಅವರು ಇದನ್ನು ‘ಪುಟ್ಟ ಹುಡುಗಿ’ ಎಂದು ಕರೆದರು. ಎಲ್‌ ನಿನೊ ಆಗಾಗ್ಗೆ ಸಂಭವಿಸುತ್ತದೆಯಾದರೂ, ಲಾ ನಿನೊ (ಲಾ ನಿನಾ ಎಂದೂ ಕರೆಯಲಾಗುತ್ತದೆ) ಅಪರೂಪಕ್ಕೆ ಸಂಭವಿಸುತ್ತದೆ. ಹೀಗಾಗಿ ಇದನ್ನು ಅಪರೂಪಕ್ಕೆ ಬರುವ ‘ಹಳೇ ಮುದುಕ– ಎಲ್‌ ವಿಜೊ’ ಎಂದೂ ಕರೆಯುತ್ತಾರೆ. 

ಎಲ್‌ ನಿನೊವನ್ನು ವಿಧ್ವಂಸಕ ವಿದ್ಯಮಾನ ಎಂದು ಪರಿಗಣಿಸಿದರೆ, ಲಾ ನಿನೊವನ್ನು ಸಮೃದ್ಧಿಯ ವಾಹಕ ಎಂದು ಸಂಭ್ರಮಿಸಲಾಗುತ್ತದೆ. ಆದರೆ ಇದರ ತೀವ್ರತೆ ಹೆಚ್ಚಾದರೆ, ಇದೂ ವಿಧ್ವಂಸಕವಾಗಿಯೇ ಪರಿವರ್ತಿತವಾಗುತ್ತದೆ. ಅಮೆರಿಕ, ಕೆನಡಾ ಮತ್ತು ದಕ್ಷಿಣ ಅಮೆರಿಕದ ದೇಶಗಳಲ್ಲಿ ಚಂಡಮಾರುತಗಳನ್ನು ಇದು ಸೃಷ್ಟಿಸುತ್ತದೆ.

ದೇಶದಲ್ಲಿ ಮಳೆ ಹೆಚ್ಚಿಸಿದ್ದ ಲಾ ನಿನೊ, ಬರ ತಂದಿದ್ದ ಎಲ್‌ ನಿನೊ

ಎಲ್‌ ನಿನೊ ಮತ್ತು ಲಾ ನಿನೊ ಪರಿಸ್ಥಿತಿಗಳು ಅಮೆರಿಕ ಖಂಡಗಳ ಸಮೀಪ ಪೆಸಿಫಿಕ್‌ ಸಾಗರದಲ್ಲಿ ತಲೆದೋರಿದರೂ, ಭಾರತದ ಮಳೆ ಮಾರುತಗಳನ್ನು ತೀವ್ರವಾಗಿ ಪ್ರಭಾವಿಸುತ್ತವೆ. ಎಲ್‌ ನಿನೊ ಸಂಭವಿಸಿದಾಗ ಭಾರತದಲ್ಲಿ ತೀವ್ರ ಬರದ ಸ್ಥಿತಿ ಎದುರಾಗುತ್ತದೆ. ಮತ್ತು ಬಿಸಿಗಾಳಿಯೂ ತಲೆದೋರುತ್ತದೆ. 2022ರ ಡಿಸೆಂಬರ್‌ನಲ್ಲಿ ಆರಂಭವಾಗಿದ್ದ ಎಲ್‌ ನಿನೊ ಪರಿಸ್ಥಿತಿ ಈವರೆಗೂ ಸಕ್ರಿಯವಾಗಿಯೇ ಇತ್ತು. ಈ ಕಾರಣದಿಂದಲೇ ಭಾರತವು 2023ರಲ್ಲಿ ತೀವ್ರ ಬರವನ್ನು ಎದುರಿಸಬೇಕಾಯಿತು. ಜತೆಗೆ 2024ರಲ್ಲಿ ಬಿರುಬೇಸಿಗೆಯನ್ನೂ ಎದುರಿಸಬೇಕಾಯಿತು.

2021ರ ನವೆಂಬರ್‌ನಿಂದ 2022ರ ಅಂತ್ಯದವರೆಗೂ ಭಾರತದ ಹಲವೆಡೆ ತೀವ್ರ ಮಳೆಯಾಗಿತ್ತು. ಅದರಲ್ಲೂ ಭಾರತದ ಪೂರ್ವ ಕರಾವಳಿ, ಪಶ್ಚಿಮ ಕರಾವಳಿ ಮತ್ತು ದಕ್ಷಿಣದ ಒಳನಾಡಿನಲ್ಲಿ ವಾಡಿಕೆಗಿಂತ ಒಂದು ಪಟ್ಟು ಹೆಚ್ಚು ಮಳೆಯಾಗಿತ್ತು. ಹಲವೆಡೆ ಪ್ರವಾಹದ ಸ್ಥಿತಿ ತಲೆದೋರಿತ್ತು. ಆ ಸಂದರ್ಭದಲ್ಲಿ ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಲಾ ನಿನೊ ಸ್ಥಿತಿ ಸಕ್ರಿಯವಾಗಿತ್ತು. ಈ ಕಾರಣದಿಂದಲೇ ಭಾರತವು ಆಗ ವಾಡಿಕೆಗಿಂತ ಹೆಚ್ಚು ಮಳೆಗೆ ಸಾಕ್ಷಿಯಾಗಿತ್ತು. ಈಗ ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಲಾ ನಿನೊ ರೂಪುಗೊಳ್ಳುತ್ತಿದೆ. ಆಗಸ್ಟ್‌–ಸೆಪ್ಟೆಂಬರ್‌ ವೇಳೆಗೆ ಅದು ಪೂರ್ಣ ರೂಪ ಪಡೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಈ ಅಂದಾಜು ನಿಜವೇ ಆದರೆ ಭಾರತದಲ್ಲಿ ಮುಂಗಾರು ಚುರುಕುಗೊಳ್ಳಲಿದೆ. ಮತ್ತು ಹಿಂಗಾರು ತೀವ್ರ ಸ್ವರೂಪಕ್ಕೆ ತಿರುಗಲಿದೆ. ಒಟ್ಟಾರೆ ಉತ್ತಮ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂಬುದು ಹವಾಮಾನ ತಜ್ಞರ ಮುನ್ಸೂಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT