ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ| ಟಿಪ್ಪುವನ್ನು ಗುರಿಯಾಗಿಸಿ ನಡೆದ ಹೆಸರು ಕೆಡಿಸುವ ಕೆಲಸ

ಮೈಸೂರಿನಲ್ಲಿ ಪುರಾಣ ಸೃಷ್ಟಿಯ ಯತ್ನ
Last Updated 12 ಏಪ್ರಿಲ್ 2023, 13:08 IST
ಅಕ್ಷರ ಗಾತ್ರ

90 ವರ್ಷಗಳಷ್ಟು ಹಳೆಯದಾದ, ಸರ್ಕಾರಿ ಸ್ವಾಮ್ಯದ ಮೈಸೂರು ಸಕ್ಕರೆ ಕಾರ್ಖಾನೆಯ ಹೆಸರನ್ನು ಹೊತ್ತಿರುವ ‘ಫ್ಯಾಕ್ಟರಿ ಸರ್ಕಲ್’ ಎಂಬ ಟ್ರಾಫಿಕ್‌ ವೃತ್ತವೊಂದು ಮಂಡ್ಯದಲ್ಲಿ ಇದೆ. ಈ ವೃತ್ತಕ್ಕೆ ಹೇಳಿಕೊಳ್ಳುವಂತಹ ವೈಶಿಷ್ಟ್ಯವೇನೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 12ರಂದು ಮಂಡ್ಯಕ್ಕೆ ಬರುವ ಮೊದಲು ಇಲ್ಲಿ ನಿರ್ಮಿಸಲಾದ ಮಹಾದ್ವಾರವೊಂದರ ಕಾರಣದಿಂದಾಗಿ ಈ ವೃತ್ತವು ರಾಜ್ಯದಾದ್ಯಂತ ಹಾಗೂ ರಾಜ್ಯದ ಆಚೆಗೂ ಜನಜನಿತವಾಯಿತು. ಪ್ರಧಾನಿಯವರನ್ನು ಸ್ವಾಗತಿಸುವ ನಾಲ್ಕು ಮಹಾದ್ವಾರಗಳ ಪೈಕಿ ಒಂದನ್ನು ಈ ವೃತ್ತದಲ್ಲಿ ನಿರ್ಮಿಸಲು ಬಿಜೆಪಿಯ ಸ್ಥಳೀಯ ನಾಯಕರು ತೀರ್ಮಾನಿಸಿದರು. ಇದಕ್ಕೆ ಅವರು ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ ಮಹಾದ್ವಾರ’ ಎಂಬ ಹೆಸರಿತ್ತರು. 18ನೆಯ ಶತಮಾನದಲ್ಲಿ ಮೈಸೂರನ್ನು ಆಳಿದ ಟಿಪ್ಪು ಸುಲ್ತಾನನನ್ನು ಕೊಂದವರು ಎಂದು ಆಡಳಿತಾರೂಢ ಬಿಜೆಪಿ ಈಗ ಹೇಳುತ್ತಿರುವ ಒಕ್ಕಲಿಗ ಸಮುದಾಯದ ಇಬ್ಬರನ್ನು ಗೌರವಿಸಲು ಮಹಾದ್ವಾರಕ್ಕೆ ಈ ಹೆಸರಿಡಲಾಗಿದೆ ಎಂದು ಭಾವಿಸಲಾಗಿತ್ತು. ಆದರೆ, 18ನೆಯ ಶತಮಾನದಿಂದ ವಸಾಹತು ಶಕ್ತಿಗಳು ಸಿದ್ಧಪಡಿಸಿದ ದಾಖಲೆಗಳು, ಭಾರತೀಯ ದಾಖಲೆಗಳು ಹಾಗೂ ಮೈಸೂರಿನ ಇತಿಹಾಸದ ಬಗ್ಗೆ ಹಲವು ಇತಿಹಾಸಕಾರರು ನಡೆಸಿದ ಅಧ್ಯಯನಗಳ ಪ್ರಕಾರ, ಟಿಪ್ಪು ಸುಲ್ತಾನನನ್ನು ನಾಲ್ಕನೆಯ ಆಂಗ್ಲೊ–ಮೈಸೂರು ಯುದ್ಧದಲ್ಲಿ 1799ರ ಮೇ 4ರಂದು ಕೊಂದಿದ್ದು ಬ್ರಿಟಿಷ್ ಸೇನೆ.

ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು ಎಂಬ ವಾದಕ್ಕೆ ಐತಿಹಾಸಿಕ ಸಾಕ್ಷ್ಯಗಳು ಇಲ್ಲ ಎಂಬ ಕಾರಣ ನೀಡಿ ಇತಿಹಾಸಕಾರರು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಪ್ರಾಯವನ್ನು ಸಕ್ರಿಯವಾಗಿ ದಾಖಲಿಸುವವರು ಈ ಮಹಾದ್ವಾರಕ್ಕೆ ಇರಿಸಿದ ಹೆಸರನ್ನು ಟೀಕಿಸಿದಾಗ, ಬಿಜೆಪಿ ನಾಯಕರು ಮಹಾದ್ವಾರಕ್ಕೆ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠಾಧೀಶರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಹೆಸರು ಇರಿಸಿದರು. ಆದರೆ ಬಿಜೆಪಿಯ ಕೆಲವು ನಾಯಕರು ಸೋಲೊಪ್ಪಿಕೊಳ್ಳಲಿಲ್ಲ. ಸಿನಿಮಾ ನಿರ್ಮಾಪಕ ಕೂಡ ಆಗಿರುವ ತೋಟಗಾರಿಕಾ ಸಚಿವ ಮುನಿರತ್ನ ಅವರು ಉರಿಗೌಡ ಮತ್ತು ನಂಜೇಗೌಡರ ಜೀವನ ಆಧರಿಸಿದ ಸಿನಿಮಾ ಮಾಡುವುದಾಗಿ ಪ್ರಕಟಿಸಿದರು. ಸಿನಿಮಾಕ್ಕೆ ಚಿತ್ರಕಥೆಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಬರೆಯಲಿದ್ದಾರೆ ಎಂದು ಆ ಸಿನಿಮಾದ ಪೋಸ್ಟರ್‌ನಲ್ಲಿ ಹೇಳಲಾಗಿತ್ತು.

ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವ ಉದ್ದೇಶದಿಂದ, ಕಾಲ್ಪನಿಕ ಪಾತ್ರಗಳನ್ನು ಬಳಸಿ ಇತಿಹಾಸವನ್ನು ಪರಿಷ್ಕರಿಸುವ ಪ್ರಯತ್ನ ಇದು ಎಂದು ಹೇಳಿದ ಇತಿಹಾಸಕಾರರು ಮತ್ತು ವಿರೋಧ ಪಕ್ಷಗಳ ನಾಯಕರು, ಈ ಪ್ರಯತ್ನವನ್ನು ವಿರೋಧಿಸಲು ಮುಂದಾದರು. ಆಗ ಪ್ರಭಾವಿ ಧಾರ್ಮಿಕ ಮುಖಂಡರೊಬ್ಬರು ನಡೆಸಿದ ಸತ್ಯಶೋಧನೆಯ ಕಾರಣದಿಂದಾಗಿ ವಿವಾದವು ತಕ್ಷಣಕ್ಕೆ ತಾನಾಗಿಯೇ ಬಗೆಹರಿಯಿತು. ರಾಜ್ಯದಲ್ಲಿನ ಒಕ್ಕಲಿಗ ಸಮುದಾಯದವರ ಪಾಲಿಗೆ ಪ್ರಮುಖ ಧಾರ್ಮಿಕ ಸಂಸ್ಥೆ ಎಂದು ಪರಿಗಣಿತವಾಗಿರುವ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರು ವಿಡಿಯೊ ಒಂದನ್ನು ಬಿಡುಗಡೆ ಮಾಡಿ ‘ಸರಿಯಾದ ಆಧಾರಗಳಿಲ್ಲದೆ ಇತಿಹಾಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು’ ಎಂದು ಎಲ್ಲ ರಾಜಕಾರಣಿಗಳಿಗೆ ಮನವಿ ಮಾಡಿದರು.

ಆದರೆ, ಈ ಕಿಡಿ ಹೊತ್ತಿದ್ದು ಮಹಾದ್ವಾರದ ಕಾರಣದಿಂದಾಗಿ ಅಲ್ಲ. ‘ಟಿಪ್ಪು ಸುಲ್ತಾನ್ ಬಗ್ಗೆ ಸತ್ಯವನ್ನು ಹೇಳಲು ಬಯಸಿದ್ದ’ ಒಬ್ಬ ನಾಟಕಕಾರ 2022ರ ನವೆಂಬರ್‌ನಲ್ಲಿ ಕನ್ನಡ ನಾಟಕವೊಂದರ ಮೂಲಕ ಮೊದಲು ಈ ಕಿಡಿ ಹೊತ್ತಿಸಿದ್ದರು. ರಾಜ್ಯ ಸರ್ಕಾರದ ಆರು ನಾಟಕಶಾಲೆಗಳಲ್ಲಿ ಅತ್ಯಂತ ಪ್ರಮುಖವಾದ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ತಮ್ಮ ಹೊಸ ಕನ್ನಡ ನಾಟಕ ‘ಟಿಪ್ಪು ನಿಜಕನಸುಗಳು’ ಬಿಡುಗಡೆ ಮಾಡಿದ ನಂತರ ಇವೆಲ್ಲ ಶುರುವಾಗಿದ್ದವು. ಈ ಶೀರ್ಷಿಕೆಯು ಗಿರೀಶ ಕಾರ್ನಾಡ ಅವರು 1997ರಲ್ಲಿ ಬರೆದ ‘ಟಿಪ್ಪುವಿನ ಕನಸುಗಳು’ ನಾಟಕಕ್ಕೆ ಪ್ರತ್ಯುತ್ತರದಂತೆ ಇದೆ.

ಕಾರ್ಯಪ್ಪ, 2019ರಲ್ಲಿ ಮೈಸೂರು ರಂಗಾಯಣದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ರಾಜ್ಯ ಸರ್ಕಾರದ ನಾಟಕಶಾಲೆಗಳ ಆಡಳಿತ ಮಂಡಳಿಯಾಗಿರುವ ರಂಗಸಮಾಜ ಶಿಫಾರಸು ಮಾಡಿದ ಮೂರು ಹೆಸರುಗಳಲ್ಲಿ ಕಾರ್ಯಪ್ಪ ಅವರ ಹೆಸರು ಇರಲಿಲ್ಲ, ಅವರು ನೇಮಕ ಆಗಿರುವುದು ರಾಜಕಾರಣಿಗಳ ಮೂಲಕ ಎಂದು ಆಗ ಹಿರಿಯ ರಂಗಕರ್ಮಿಗಳು ಆರೋಪಿಸಿದ್ದರು. ಮೈಸೂರು ರಂಗಾಯಣ ಆಯೋಜಿಸುವ ವಾರ್ಷಿಕ ನಾಟಕೋತ್ಸವ ‘ಬಹುರೂಪಿ’ಗೆ ಕಾರ್ಯಪ್ಪ ಅವರು ಚಕ್ರವರ್ತಿ ಸೂಲಿಬೆಲೆ ಅವರನ್ನು 2021ರ ಡಿಸೆಂಬರ್‌ನಲ್ಲಿ ಆಹ್ವಾನಿಸಿದ್ದರು. ಸೂಲಿಬೆಲೆ ಅವರು ಹಲಾಲ್ ಪ್ರಮಾಣಪತ್ರ ನೀಡುವ ಪದ್ಧತಿ ವಿರುದ್ಧವಾಗಿ ಹಾಗೂ ಲವ್ ಜಿಹಾದ್ ನಿಯಂತ್ರಣಕ್ಕೆ ಕಾನೂನು ತರಬೇಕು ಎಂದು ಮಾತನಾಡಿದ್ದವರು. ಸೂಲಿಬೆಲೆ ಅವರು ರಂಗಭೂಮಿಗೆ ಎಷ್ಟು ‍ಪ್ರಸ್ತುತ ಎಂದು ರಂಗಾಯಣದ ಹಿಂದಿನ ಕಲಾವಿದರು, ನಿರ್ದೇಶಕರು ಮತ್ತು ಕೆಲವು ಸಾಮಾಜಿಕ ಕಾರ್ಯಕರ್ತರು ಪ್ರಶ್ನಿಸಿದ್ದರು. ರಂಗಾಯಣದ ಆವರಣದಲ್ಲಿ ಪ್ರತಿಭಟನೆ ದಾಖಲಿಸಿದ್ದರು. ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು. ಆದರೆ ಭಿನ್ನ ನಿಲುವು ವ್ಯಕ್ತಪಡಿಸಿದ್ದವರನ್ನು ಕಾರ್ಯಪ್ಪ ಅವರು ‘ಮಾವೊವಾದಿಗಳು’ ಎಂದು ಕರೆದಿದ್ದರು.

ಅಯೋಧ್ಯಾ ಪ್ರಕಾಶನ ಪ್ರಕಟಿಸಿರುವ, ಕಾರ್ಯಪ್ಪ ಅವರ ಕನ್ನಡ ನಾಟಕ ‘ಟಿಪ್ಪು ನಿಜಕನಸುಗಳು’ ಅನ್ನು ನಾನು ಓದಿದೆ. ಆ ನಾಟಕದ ಮುಖಪುಟದಲ್ಲಿ ಟಿಪ್ಪು ಓದುಗನನ್ನು ದುರುಗುಟ್ಟಿಕೊಂಡು ನೋಡುತ್ತಿರುವ ಚಿತ್ರವಿದೆ. ಟಿಪ್ಪುವಿನ ಹಲ್ಲುಗಳು ಕಾಣುತ್ತಿವೆ, ಕಣ್ಣುಗಳು ಕೆಂಪಾಗಿವೆ. ಅಸಾಮಾನ್ಯ ಅನ್ನಿಸುವ, ‘ಸತ್ಯ ಚರಿತ್ರೆಯ ರಂಗಕಥಾನಕ’ ಎಂಬ ಶೀರ್ಷಿಕೆಯಲ್ಲಿರುವ ನಾಟಕಕಾರನ ಟಿಪ್ಪಣಿಯಲ್ಲಿ ಕಾರ್ಯಪ್ಪ ಅವರು, ‘ಭಾರತದ ಮೇಲೆ ದಾಳಿ ಮಾಡಿದ ಇತರ ದಾಳಿಕೋರರ ಬಗ್ಗೆ’– ಮುಸ್ಲಿಂ ಸಾಮ್ರಾಜ್ಯಗಳನ್ನು ಉದ್ದೇಶಿಸಿ ಬಳಸಿರುವ ಪದಗಳು– ‘ಮಾನವೀಯತೆ ಹಾಗೂ ಜಾತ್ಯತೀತತೆಯ ಹೆಸರಿನಲ್ಲಿ ಸುಳ್ಳು ಸುಳ್ಳೇ ಚರಿತ್ರೆ ರಚಿಸಲಾಗಿದೆ’ ಎಂದು ಆರೋಪಿಸುತ್ತಾರೆ. ಭಾರತವು ವಸಾಹತು ಆಡಳಿತದಿಂದ ಸ್ವಾತಂತ್ರ್ಯ ಪಡೆದ ನಂತರದಲ್ಲಿ, ದೇಶವು ವಂಶಾಡಳಿತ ಹಾಗೂ ಡೋಂಗಿ ಜಾತ್ಯತೀತವಾದದ ಹೊಸ ‘ನಕಲಿ’ ಸಾಮ್ರಾಜ್ಯಕ್ಕೆ ಬಲಿಯಾಯಿತು, ಈ ಆಡಳಿತವು ಟಿಪ್ಪು ಸುಲ್ತಾನನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ವೈಭವೀಕರಿಸಿತು ಎಂದು ಅವರು ಬರೆಯುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಐವತ್ತು ವರ್ಷಗಳಾದ ಸಂದರ್ಭದಲ್ಲಿ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಆಗ್ರಹದ ಮೇಲೆ ಟಿಪ್ಪು ಬಗ್ಗೆ ನಾಟಕ ರಚಿಸಿದ್ದಕ್ಕಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡ ಅವರನ್ನು ಕಾರ್ಯಪ್ಪ ಅವರು ಟೀಕಿಸುತ್ತಾರೆ. ಟಿಪ್ಪು ನಡೆಸಿದ್ದ ಎನ್ನಲಾದ ದುರಾಡಳಿತ, ದೇವಸ್ಥಾನಗಳ ಮೇಲೆ ಮಾಡಿದ ಆಕ್ರಮಣ ಮತ್ತು ಬಲವಂತದ ಮತಾಂತರ ಕೃತ್ಯಗಳನ್ನು ಕೈಬಿಟ್ಟಿದ್ದಕ್ಕೆ ಕಾರ್ಯಪ್ಪ ಅವರು ಕಾರ್ನಾಡ ಅವರನ್ನು ದೂಷಿಸುತ್ತಾರೆ.

ಆದರೆ ತಾವು ಬರೆದಿರುವ ನಾಟಕವು ವಿಸ್ತೃತವಾದ ಅಧ್ಯಯನ, ಅದರಲ್ಲೂ ಮುಖ್ಯವಾಗಿ ಕೆ.ಎಂ. ಪಣಿಕ್ಕರ್ ಅವರ ಬರಹಗಳನ್ನು ಆಧರಿಸಿದೆ ಎಂದು ಕಾರ್ಯಪ್ಪ ಹೇಳಿಕೊಂಡಿದ್ದಾರೆ. ಪಣಿಕ್ಕರ್ ಅವರು ಲಂಡನ್ನಿನ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿ ಸಿಕ್ಕ ಟಿಪ್ಪು ಬರೆದ ಪತ್ರಗಳನ್ನು ಪರ್ಷಿಯನ್ ಭಾಷೆಯಿಂದ ಮಲಯಾಳಕ್ಕೆ ಅನುವಾದಿಸಿದವರು ಎಂದು ಹೇಳಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ 75ನೆಯ ವರ್ಷದ ಹೊತ್ತಿನಲ್ಲಿ ಟಿಪ್ಪು ಕುರಿತು ಸತ್ಯವನ್ನು ತೋರಿಸುವ ಉದ್ದೇಶದಿಂದ ಈ ನಾಟಕ ಬರೆದಿರುವುದಾಗಿ ಕಾರ್ಯಪ್ಪ ಹೇಳಿದ್ದಾರೆ. ಈ ನಾಟಕದಲ್ಲಿ 15 ದೃಶ್ಯಗಳಿವೆ. ಇವೆಲ್ಲವೂ ಹೇಳುವುದು ಇಷ್ಟನ್ನು: ನಾಲ್ಕನೆಯ ಆಂಗ್ಲೊ–ಮೈಸೂರು ಯುದ್ಧದ ಸಂದರ್ಭದಲ್ಲಿ ಓಡಿಹೋಗಲು ಯತ್ನಿಸುತ್ತಿದ್ದ ಹೇಡಿ ಟಿಪ್ಪು; ಮುಸ್ಲಿಮರಿಗೂ ಹಿಂದೂಗಳಿಗೂ ಟಿಪ್ಪು ಆಡಳಿತವು ಅತೃಪ್ತಿ ಮೂಡಿಸಿತ್ತು; ಟಿಪ್ಪು ಒಬ್ಬ ಮತಾಂಧನಾಗಿದ್ದ, ಆತನ ಮೂಲ ಉದ್ದೇಶವು ಇಡೀ ಪ್ರದೇಶವನ್ನು ಇಸ್ಲಾಮೀಕರಣಗೊಳಿಸುವುದಾಗಿತ್ತು; ಕೊನೆಯಲ್ಲಿ, ಕಿರು ದೃಶ್ಯವೊಂದರಲ್ಲಿ ಟಿಪ್ಪುವನ್ನು ಒಕ್ಕಲಿಗರಾದ ಉರಿಗೌಡ ಮತ್ತು ನಂಜೇಗೌಡ ಹತ್ಯೆ ಮಾಡುತ್ತಾರೆ, ಟಿಪ್ಪುವನ್ನು ಕೊಂದಿದ್ದು ಬ್ರಿಟಿಷರಲ್ಲ.

ಈ ನಾಟಕವನ್ನು 2022ರ ನವೆಂಬರ್‌ 20ರಂದು ಮೈಸೂರು ರಂಗಾಯಣದಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ನಂತರದಲ್ಲಿ ಈ ನಾಟಕವು ರಾಜ್ಯದ 20 ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ಬಾರಿ ಪ್ರದರ್ಶನ ಕಂಡಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ಶಾಸಕ ಅರವಿಂದ ಬೆಲ್ಲದ ಈ ನಾಟಕ ವೀಕ್ಷಿಸಿದವರ ಸಾಲಿನಲ್ಲಿದ್ದಾರೆ. ಬಹುತೇಕ ಕಡೆಗಳಲ್ಲಿ ಈ ನಾಟಕ ಪ್ರದರ್ಶನದ ಸಂದರ್ಭದಲ್ಲಿ ಸಭಾಂಗಣ ತುಂಬಿರುತ್ತಿತ್ತು ಎಂದು ಕಾರ್ಯಪ್ಪ ಹೇಳುತ್ತಾರೆ.

ಕಾರ್ಯಪ್ಪ ಅವರು ತಮ್ಮ ವಾದ ಮುಂದಿರಿಸುವವರೆಗೆ, ಬ್ರಿಟಿಷ್ ಸೇನೆಯ ಸೈನಿಕ ಹಾರಿಸಿದ ಗುಂಡಿಗೆ ಟಿಪ್ಪು ಬಲಿಯಾದ ಎಂದು ಇತಿಹಾಸದ ದಾಖಲೆಗಳು ಹೇಳುತ್ತಿದ್ದವು. ಗುಂಡು ಹಾರಿಸಿದ ಸೈನಿಕ ಯಾರು ಎಂಬುದು ತಿಳಿದಿಲ್ಲ. ಲೆಫ್ಟಿನೆಂಟ್ ಕರ್ನಲ್ ಅಲೆಕ್ಸಾಂಡರ್ ಬೀಟ್ಸನ್‌ ಬರೆದ ‘ಎ ವೀವ್ ಆಫ್ ಆರಿಜಿನ್ ಆ್ಯಂಡ್ ಕಾಂಡಕ್ಟ್ ಆಫ್ ವಾರ್ ವಿತ್ ಟಿಪೂ ಸುಲ್ತಾನ್’ ಹೆಸರಿನ ಕೃತಿಯಲ್ಲಿ ಟಿಪ್ಪುವಿನ ಸಾವಿನ ಕುರಿತ ಮೊದಲ ಲಿಖಿತ ವಿವರಗಳಿವೆ. ನಾಲ್ಕನೆಯ ಆಂಗ್ಲೊ–ಮೈಸೂರು ಯುದ್ಧದಲ್ಲಿ ಪಾಲ್ಗೊಂಡ ಬ್ರಿಟಿಷ್ ಅಧಿಕಾರಿಗಳಲ್ಲಿ, ಘಟನೆಯನ್ನು ಪ್ರತ್ಯಕ್ಷವಾಗಿ ಕಂಡವರು ಹೇಳಿದ್ದನ್ನು ಆಧರಿಸಿ ಬರೆದ ಈ ಕೃತಿಯನ್ನು 1800ರ ಆರಂಭದಲ್ಲಿ ಪ್ರಕಟಿಸಲಾಗಿದೆ. ಬೀಟ್ಸನ್ ಅವರೂ ಈ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಬ್ರಿಟಿಷರು ಸೆರಿಂಗಪಟಂ (ಶ್ರೀರಂಗಪಟ್ಟಣವನ್ನು ಆಂಗ್ಲರು ಕರೆದ ರೀತಿ) ಕೋಟೆಯೊಳಗೆ ನುಗ್ಗಿದ ನಂತರದಲ್ಲಿ, ಜನರಲ್ ಡೇವಿಡ್ ಬೇಯರ್ಡ್‌ ಅವರು ಟಿಪ್ಪು ಎಲ್ಲಿದ್ದಾನೆ ಎಂಬುದನ್ನು ಪತ್ತೆ ಮಾಡಲು ಒಂದಿಷ್ಟು ಜನ ಸೈನಿಕರನ್ನು ಕಳುಹಿಸಿದರು. ಟಿಪ್ಪು ‘ವಾಟರ್ ಗೇಟ್’ ಬಳಿ ಗಾಯಗೊಂಡು ಬಿದ್ದಿದ್ದಾನೆ ಎಂಬುದನ್ನು ಕೋಟೆಯ ಉಸ್ತುವಾರಿಯಿಂದ ತಿಳಿದ ನಂತರದಲ್ಲಿ, ಅರಸಲು ಬಂದಿದ್ದ ಸೈನಿಕರು ಅಲ್ಲಿಗೆ ತಲುಪಿದರು. ಅಲ್ಲಿ ಟಿಪ್ಪು ದೇಹವು ಮೈಸೂರು ರಾಜ್ಯದ ಇತರ ಸೈನಿಕರ ಜೊತೆ ಬಿದ್ದಿತ್ತು. ಕೋಟೆಯನ್ನು ಪ್ರವೇಶಿಸಲು ಯತ್ನಿಸುತ್ತಿದ್ದ ಹೊತ್ತಿನಲ್ಲಿ ಯುರೋಪಿನ ಸೈನಿಕರ ಗುಂಪೊಂದು ಟಿಪ್ಪುವನ್ನು ಗಾಯಗೊಳಿಸಿತು ಎಂದು ಟಿಪ್ಪುವಿನ ಮುಖ್ಯ ಸೇವಕರಲ್ಲಿ ಒಬ್ಬನಾಗಿದ್ದ ರಾಜಾ ಖಾನ್ ಬ್ರಿಟಿಷ್ ಅಧಿಕಾರಿಗಳಿಗೆ ವಿವರಿಸಿದ್ದಾನೆ. ಟಿಪ್ಪುವಿನ ಎದೆಯ ಎಡಭಾಗಕ್ಕೆ ಗುಂಡು ಹಾರಿಸಲಾಗಿತ್ತು, ಟಿಪ್ಪುವಿನ ಕಾಲಿಗೆ ಗಾಯಗಳಾಗಿದ್ದವು. ಈ ಹೊತ್ತಿನಲ್ಲಿ ಯುರೋಪಿನ ಸೈನಿಕರ ಇನ್ನೊಂದು ಗುಂಪು ಒಳನುಗ್ಗಿತು, ಬ್ರಿಟಿಷ್ ಸೈನಿಕನೊಬ್ಬ ಟಿಪ್ಪುವಿನ ಖಡ್ಗ ಸಿಕ್ಕಿಸುವ ಬೆಲ್ಟ್‌ನಿಂದ ಚಿನ್ನದ ಬಕಲ್‌ ಕಿತ್ತುಕೊಳ್ಳಲು ಮುಂದಾದ. ಟಿಪ್ಪು ಆತನಿಗೆ ಖಡ್ಗದಿಂದ ಹೊಡೆದ. ಇದರಿಂದ ಕುಪಿತನಾದ ಆ ಸೈನಿಕ ಟಿಪ್ಪುವಿನ ಕಿವಿಯ ಹಿಂಭಾಗಕ್ಕೆ ಗುಂಡು ಹಾರಿಸಿ, ತಕ್ಷಣವೇ ಟಿಪ್ಪುವನ್ನು ಕೊಂದ. ಈ ವಿವರವು ಬ್ರಿಟಿಷ್ ಹಾಗೂ ಫ್ರೆಂಚರ ಬಹುತೇಕ ದಾಖಲೆಗಳಲ್ಲಿ ಮತ್ತೆ ಮತ್ತೆ ಉಲ್ಲೇಖವಾಗಿದೆ. ಟಿಪ್ಪುವಿನ ಲೆಕ್ಕಾಧಿಕಾರಿ ಆಗಿದ್ದ, ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪುಂಗನೂರಿ ರಾಮಚಂದ್ರ ರಾವ್ ಬರೆದ ‘ಮೆಮೊಯಿರ್ಸ್‌ ಆಫ್ ಹೈದರ್ ಆ್ಯಂಡ್ ಟಿಪೂ, ರೂಲರ್ಸ್ ಆಫ್ ಸೆರಿಂಗಪಟಂ’ (1848) ಮತ್ತು ಟಿಪ್ಪುವಿನ ಆಸ್ಥಾನ ಇತಿಹಾಸಕಾರ ಮೀರ್ ಹುಸೇನ್ ಆಲಿ ಖಾನ್ ಕಿರ್ಮಾನಿ ಬರೆದ ‘ತಾರೀಖ್ ಇ ಟಿಪ್ಪು ಸುಲ್ತಾನ್‌’ ಕೃತಿಯಲ್ಲಿ ಬೀಟ್ಸನ್ ಬರೆದಿರುವಷ್ಟು ವಿವರಗಳು ಇಲ್ಲ. ಆದರೆ, ಈ ಕೃತಿಗಳು ಕೂಡ ಟಿಪ್ಪುವನ್ನು ಯುದ್ಧದಲ್ಲಿ ಕೊಂದಿದ್ದು ಬ್ರಿಟಿಷ್ ಸೈನಿಕರು ಎಂದು ಹೇಳುತ್ತವೆ.

* * * * *

ಮೈಸೂರಿನಲ್ಲಿ ನಡೆದ ‘ಟಿಪ್ಪು ನಿಜ ಕನಸುಗಳು’ ನಾಟಕದ ಐವತ್ತನೆಯ ಪ್ರದರ್ಶನದ ಸಂದರ್ಭದಲ್ಲಿ ನಾನು ಕಾರ್ಯಪ್ಪ ಅವರನ್ನು, ಅವರ ಕಚೇರಿಯಲ್ಲಿ ಭೇಟಿ ಮಾಡಿದೆ.

ಬ್ರಿಟಿಷ್ ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್‌ನ ಭಾವಚಿತ್ರದ ಕೆಳಗೆ ಕುಳಿತಿದ್ದ ಕಾರ್ಯಪ್ಪ ಅವರ ಪಕ್ಕದಲ್ಲಿ ಅವರ ‘ವಿಶ್ವ ಹಿಂದೂ ಪರಿಷದ್’ ಬ್ಯಾಗ್ ಇತ್ತು. ರಂಗಾಯಣದ ನಿರ್ದೇಶಕರಾಗಿ ತಮ್ಮ ಗುರಿಯು ‘ನನ್ನ ಸೈದ್ಧಾಂತಿಕ ನಂಬಿಕೆಗಳನ್ನು ಅನುಷ್ಠಾನಕ್ಕೆ ತರುವುದು ಮತ್ತು ಇದನ್ನು, ರಂಗಭೂಮಿಯ ಮುಖಾಂತರ ರಾಷ್ಟ್ರದ ಬಗ್ಗೆ ಆಲೋಚಿಸುವುದಕ್ಕೆ ಸಂಬಂಧಿಸಿದ ಸಂಸ್ಥೆಯನ್ನಾಗಿ ಪರಿವರ್ತಿಸುವುದು’ ಎಂದು ಕಾರ್ಯಪ್ಪ ಹೇಳುತ್ತಾರೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಜನಿಸಿದ ಕಾರ್ಯಪ್ಪ ಅವರು ಸಮೀಪದ ಗೋಣಿಕೊಪ್ಪಲು ಸರ್ಕಾರಿ ಕಾಲೇಜಿನಲ್ಲಿ ಮಿಲಿಟರಿ ವಿಜ್ಞಾನ ಅಧ್ಯಯನ ಮಾಡಿದ್ದಾರೆ. ಹೆಗ್ಗೋಡಿನ ಪ್ರತಿಷ್ಠಿತ ನೀನಾಸಂ ಸಂಸ್ಥೆಯಿಂದ ರಂಗಭೂಮಿ ಕುರಿತ ತರಬೇತಿ ಪಡೆದಿದ್ದಾರೆ. 35 ವರ್ಷಗಳಿಂದ ತಮ್ಮ ಮಾತೃಭಾಷೆ ‘ಕೊಡವ’ದಲ್ಲಿ ನಾಟಕಗಳನ್ನು ಬರೆದು, ನಿರ್ದೇಶಿಸಿದ್ದಾರೆ. ಕೊಡವ ಭಾಷೆಯಲ್ಲಿ ಸಿನಿಮಾ ಮಾಡಿರುವುದಾಗಿ, ಮಡಿಕೇರಿಯ ರೇಡಿಯೊ ಕೇಂದ್ರದಲ್ಲಿ ಸ್ಥಳೀಯ ಭಾಷೆಯಲ್ಲಿ ಸುದ್ದಿ ಕಾರ್ಯಕ್ರಮಗಳನ್ನು ಆರಂಭಿಸಿದ್ದಾಗಿ ಅವರು ಹೇಳಿಕೊಳ್ಳುತ್ತಾರೆ. ಕೊಡವ ಭಾಷೆಯ ಉಳಿವಿಗಾಗಿ ಮಾಡಿದ ಕೆಲಸಗಳಿಗಾಗಿ ಕಾರ್ಯಪ್ಪ ಅವರು ಸಾಹಿತ್ಯ ಅಕಾಡೆಮಿ ನೀಡುವ ‘ಭಾಷಾ ಸಮ್ಮಾನ’ ಸೇರಿದಂತೆ, ತಮ್ಮ ಪ್ರಯತ್ನಗಳಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಮೈಸೂರು ರಂಗಾಯಣದ ಮುಖ್ಯಸ್ಥರಾಗಿ ತಾವು ‘ನಕ್ಸಲಿಸಂ ಬಗ್ಗೆ ಅನುಕಂಪ ಹೊಂದಿರುವ ನಾಟಕಗಳು, ಜಾತ್ಯತೀತ ಹಾಗೂ ಪ್ರಗತಿಪರ ಮಾತುಗಳ ಹೆಸರಿನಲ್ಲಿ ದೇಶವನ್ನು ತುಂಡು ತುಂಡು ಮಾಡಲು ಕರೆ ನೀಡುವ ನಾಟಕಗಳಿಗೆ’ ಅವಕಾಶ ನೀಡುವುದಿಲ್ಲ ಎಂದು ಕಾರ್ಯಪ್ಪ ಹೇಳುತ್ತಾರೆ. ಮುಂದುವರಿದು ಅವರು, ‘ಇದನ್ನು ನಾನು ದಿಟ್ಟ ಮಾತುಗಳಲ್ಲಿ ಹೇಳಬೇಕು ಎಂದಾದರೆ, ದೇಶದ್ರೋಹಿಗಳು ಹಾಗೂ ಭಯೋತ್ಪಾದಕರ ಜೊತೆ ಬಹುತೇಕ ಸಂದರ್ಭಗಳಲ್ಲಿ ನಿಂತುಕೊಳ್ಳುವ’ಯಾಗಿ ಪರಿವರ್ತಿಸಲು ತಾವು ಬಯಸಿರುವುದಾಗಿ ಅವರು ನಮ್ಮ ದೀರ್ಘ ಮಾತುಕತೆಯ ಸಂದರ್ಭದಲ್ಲಿ ಅನುಮಾನಕ್ಕೆ ಎಡೆಯಿಲ್ಲದಂತೆ ಹೇಳಿದ್ದಾರೆ. ರಂಗಾಯಣದ ವಿಚಾರವಾಗಿ ತಾವು ಹೊಂದಿರುವ ಯೋಜನೆಯನ್ನು ವಿವರಿಸುವ ಕಾರ್ಯಪ್ಪ ಅವರು, ‘ಇತರರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದ ಸತ್ಯವನ್ನು ನಾನು ಅನಾವರಣ ಮಾಡುತ್ತೇನೆ. ಆ ಯೋಜನೆಯ ಭಾಗ ಟಿಪ್ಪು ನಿಜಕನಸುಗಳು ನಾಟಕ. ನನ್ನ ಕಾರ್ಯಕ್ರಮಗಳ ವಿಷಯವನ್ನು ಗಮನಿಸಿ. ಅವು ಗಾಂಧಿ ಪಥ, ತಾಯಿ ಮತ್ತು ಭಾರತೀಯತೆ’. ಹಿಂದಿನ ನಾಟಕಕಾರರು ಟಿಪ್ಪು ಸುಲ್ತಾನನ ಹಿಂದೂ ವಿರೋಧಿ ಕೃತ್ಯಗಳಾದ ‘ಕೊಡವರ ಮೇಲೆ ನಡೆಸಿದ ದೌರ್ಜನ್ಯ, ಮಂಡ್ಯದ ಅಯ್ಯಂಗಾರರ ಹತ್ಯೆಗಳು, ಹಿಂದೂಗಳನ್ನು ಇಸ್ಲಾಂಗೆ ಮತಾಂತರ ಮಾಡಿದ್ದು ಮತ್ತು ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದನ್ನು’ ಮರೆಮಾಚಿದ್ದಾರೆ ಎಂದು ಕಾರ್ಯಪ್ಪ ಅವರು ಆರೋಪಿಸುತ್ತಾರೆ. ಟಿಪ್ಪುವಿನ ಸಾವಿನ ಕುರಿತು ಬ್ರಿಟಿಷರು ದಾಖಲಿಸಿರುವ ವಿವರಗಳನ್ನು ಕಾರ್ಯಪ್ಪ ಪ್ರಶ್ನಿಸುತ್ತಾರೆ. ‘ನಾವು ನಮ್ಮ ಸ್ಥಳೀಯ ಮೌಖಿಕ ದಾಖಲೆಗಳನ್ನು ಏಕೆ ಉಪೇಕ್ಷೆ ಮಾಡುತ್ತೇವೆ’ ಎಂದು ಕೇಳುತ್ತಾರೆ.

‘ಕಿತ್ತೂರು ಚೆನ್ನಮ್ಮ ಅಥವಾ ಅವರಂತಹ ಇತರ ಯಾವುದೇ ಹಿಂದೂ ಆಡಳಿತಗಾರರು ಯಾವುದಾದರೂ ಮಸೀದಿಯನ್ನು ನಾಶ ಮಾಡಿದ್ದಾರೆಯೇ’ ಎಂದು ಕೂಡ ಕಾರ್ಯಪ್ಪ ಪ್ರಶ್ನಿಸುತ್ತಾರೆ. ಬಾಬರಿ ಮಸೀದಿ ಧ್ವಂಸದ ಕುರಿತು ನಾನು ಅವರಲ್ಲಿ ಪ್ರಶ್ನಿಸಿದಾಗ, ‘ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಆಜೀವ ಸದಸ್ಯ’ ಎಂದು ಉತ್ತರಿಸಿದರು.

‘ಉರಿಗೌಡ ಮತ್ತು ದೊಡ್ಡ ನಂಜೇಗೌಡರನ್ನು ಸೃಷ್ಟಿ ಮಾಡಿದ್ದು ನಾನಲ್ಲ’ ಎಂದು ಹೇಳುವ ಅವರು, ಈ ಇಬ್ಬರು ಹಿಂದಿನ ಐತಿಹಾಸಿಕ ದಾಖಲೆಗಳಲ್ಲಿ ಅದಾಗಲೇ ಇದ್ದಾರೆ ಎಂದು ವಿವರಿಸಿದರು. ಕಾರ್ಯಪ್ಪ ಅವರು ಉಲ್ಲೇಖಿಸಿದ ಮೊದಲ ದಾಖಲೆ ‘ಸುವರ್ಣ ಮಂಡ್ಯ’. ಪ್ರಬಂಧಗಳ ಸಂಕಲನವಾಗಿರುವ ಇದು ಮೊದಲು ಪ್ರಕಟವಾಗಿದ್ದು 1990ರ ದಶಕದಲ್ಲಿ. ನಂತರ ಇದನ್ನು 2006ರಲ್ಲಿ ರಾಜ್ಯದ ಅಂದಿನ ಸರ್ಕಾರವು ಮರುಪ್ರಕಟಿಸಿದೆ. ಕಾರ್ಯಪ್ಪ ಅವರು ಉಲ್ಲೇಖಿಸುವ ಪ್ರಬಂಧಗಳ ಪೈಕಿ ಒಂದು ಪ್ರಬಂಧವನ್ನು ಬರೆದಿರುವ ದಿವಂಗತ ಎಚ್.ಕೆ. ರಾಜೇಗೌಡ ಅವರು ಕನ್ನಡ ಸಾಹಿತ್ಯದಲ್ಲಿ ವಿದ್ವತ್ತು ಹೊಂದಿದ್ದರು, ಅವರು ಒಕ್ಕಲಿಗ ಸಮುದಾಯದ ಜಾನಪದ ದಾಖಲೆಗಳನ್ನು ಒಗ್ಗೂಡಿಸಿ, ಅರ್ಥೈಸುವ ಕೆಲಸದಲ್ಲಿ ಆಸಕ್ತಿಯನ್ನು ಹೊಂದಿದ್ದರು ಎಂದು 2006ರ ಆವೃತ್ತಿಯ ಸಂಪಾದಕರಾಗಿರುವ ಪ್ರೊ. ಜಯಪ್ರಕಾಶ ಗೌಡ ಹೇಳುತ್ತಾರೆ. ಬ್ರಿಟಿಷರಿಂದ ತಪ್ಪಿಸಿಕೊಳ್ಳುತ್ತಿದ್ದ ಉರಿಗೌಡ ಮತ್ತು ನಂಜೇಗೌಡ ಎನ್ನುವ ಸ್ಥಳೀಯ ಜಾಣ ಯುವಕರ ಬಗ್ಗೆ ಅವರು ಕೇಳಿದ್ದರು. ರಾಜೇಗೌಡ ಅವರು ತಮ್ಮ ಪ್ರಬಂಧದಲ್ಲಿ ‘ಟಿಪ್ಪು ವಿರುದ್ಧ ಉರಿಗೌಡ ಮತ್ತು ನಂಜೇಗೌಡ ಅವರು ಸೆಟೆದು ನಿಂತವರು. ಇದಕ್ಕೆ ಟಿಪ್ಪುವಿನ ಧಾರ್ಮಿಕ ಮತ್ತು ಭಾಷಾ ನೀತಿಯು ಕಾರಣವಿರಬೇಕು’ ಎಂದು ಬರೆದಿದ್ದಾರೆ. ‘ಆದರೆ ಇವರು ಟಿಪ್ಪುವನ್ನು ಕೊಂದರು ಎಂದು ಬರೆದಿಲ್ಲ’ ಎಂದು ಪ್ರೊ. ಜಯಪ್ರಕಾಶ ಗೌಡ ಹೇಳುತ್ತಾರೆ. ರಾಜೇಗೌಡ ಅವರು ಇತಿಹಾಸಕಾರ ಆಗಿರಲಿಲ್ಲ, ಅವರ ಊಹೆಯನ್ನು ಐತಿಹಾಸಿಕ ಸತ್ಯವೆಂದು ಭಾವಿಸಬಾರದು ಎಂದು ಜಯಪ್ರಕಾಶ ಗೌಡ ಹೇಳುತ್ತಾರೆ.

ಲಾವಣಿಯೊಂದರಲ್ಲಿ ಒಕ್ಕಲಿಗ ಸಹೋದರರ ಹೆಸರು ಬರುತ್ತದೆ ಎಂಬುದು ಕಾರ್ಯಪ್ಪ ಅವರ ಎರಡನೆಯ ಉಲ್ಲೇಖ. ತಪ್ಪು ಎಂದು ಈಗಾಗಲೇ ನಂಬಲಾಗಿರುವ ಹೇಳಿಕೆಯೊಂದನ್ನು ಕಾರ್ಯಪ್ಪ ಮತ್ತೆ ಹೇಳುತ್ತಿದ್ದರು. ಕನ್ನಡ ಸಂಸ್ಕೃತಿ ಕುರಿತ ವೆಬ್‌ಸೈಟ್‌ ‘ಋತುಮಾನ’ ಈ ಲಾವಣಿಯನ್ನು ಪ್ರಕಟಿಸಿದ್ದು, ಕಾರ್ಯಪ್ಪ ಅವರು ಉಲ್ಲೇಖಿಸುವ ಸಾಲುಗಳು ಈ ಲಾವಣಿಯಲ್ಲಿ ಇಲ್ಲ ಎಂದು ಮಾರ್ಚ್‌ 19ರಂದು ಸ್ಪಷ್ಟಪಡಿಸಿದೆ. ಅಲ್ಲದೆ, ‘ಯಾರೋ ಅವರಿಗೆ ತಪ್ಪು ಮಾಹಿತಿ ನೀಡಿರಬೇಕು’ ಎಂದು ಕೂಡ ಹೇಳಿದೆ.
ಕಾರ್ಯಪ್ಪ ಅವರಿಗೆ ತಮ್ಮ ನಿಲುವು ಬದಲಿಸುವಂತೆ, ಐತಿಹಾಸಿಕ ಮೂಲಗಳ ಬಗ್ಗೆ ಮತ್ತು ಅವರ ನಾಟಕದಲ್ಲಿ ಟಿಪ್ಪುವನ್ನು ಏಕಮುಖವಾಗಿ ಚಿತ್ರಿಸಿರುವ ಬಗೆಯ ಬಗ್ಗೆ ಕೇಳಲು ಯತ್ನಿಸಿದಾಗಲೆಲ್ಲ ಅವರು ತಮಗೆ ಯಾವಾಗಲೂ ಕಿರಿಕಿರಿ ಉಂಟುಮಾಡುವ ಸಂಗತಿಯೆಡೆ ಮರಳುತ್ತಿದ್ದರು. ತಮ್ಮನ್ನು ಮಾತ್ರ ಏಕೆ ಪ್ರಶ್ನಿಸಲಾಗುತ್ತಿದೆ, ಇತರರನ್ನು ಏಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಕೇಳಿದರು.

ಟಿಪ್ಪು ಆಡಳಿತದ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯ ಏನು ಎಂದು ಪ್ರಶ್ನಿಸಿದಾಗ, ಕಾರ್ಯಪ್ಪ ಅವರು ಮೊದಲಿಗೆ ಒಂದು ಸ್ಪಷ್ಟನೆಯನ್ನು ನೀಡಿದರು. ಅಂದರೆ, ತಾವು ಮುಸ್ಲಿಂ ವಿರೋಧಿಯಲ್ಲ ಎಂದರು. ‘ನನಗೆ ಮುಸ್ಲಿಮರ ಪೈಕಿ ಸ್ನೇಹಿತರಿದ್ದಾರೆ. ನನ್ನ ನಾಟಕದಲ್ಲಿ ಮುಸ್ಲಿಂ ಕಲಾವಿದರೊಬ್ಬರು ಅಭಿನಯಿಸುತ್ತಿದ್ದಾರೆ’ ಎಂದರು. ನಂತರ ಅವರು ‘ಟಿಪ್ಪು ಮತಾಂಧನಾಗಿದ್ದ. ಮತಾಂಧ ವ್ಯಕ್ತಿಯೊಬ್ಬ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಿರಬಹುದು. ಆದರೆ ಆತ ಒಂದು ಪ್ರದೇಶವನ್ನು ಅಭಿವೃದ್ಧಿಪಡಿಸಿದ ಎಂದ ಮಾತ್ರಕ್ಕೆ ನಾನು ಮತಾಂಧನನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಈ ಜನ ಹೇಳುತ್ತಿರುವಂತೆ ಟಿಪ್ಪು ಧರ್ಮನಿರಪೇಕ್ಷ ರಾಜನೂ ಆಗಿರಲಿಲ್ಲ, ಸ್ವಾತಂತ್ರ್ಯ ಹೋರಾಟಗಾರನೂ ಆಗಿರಲಿಲ್ಲ’ ಎಂದು ಒಂದಿಷ್ಟು ವಿವರ ಸೇರಿಸಿದರು. ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಹಿಂದೆ ‘ಮುಸ್ಲಿಂ ಮತ ಬ್ಯಾಂಕ್‌ ತುಷ್ಟೀಕರಣಕ್ಕೆ’ ಟಿಪ್ಪುವನ್ನು ಬಳಸಿಕೊಂಡಿದ್ದು ಕಾರ್ಯಪ್ಪ ಅವರಿಗೆ ಬೇಸರ ಮೂಡಿಸಿದೆ. ಅವರ ಪ್ರಕಾರ, ಟಿಪ್ಪುವಿನ ಜನ್ಮದಿನಕ್ಕೆ ಆಚರಣೆಯ ರೂಪ ನೀಡಲು ಸಿದ್ದರಾಮಯ್ಯ ಅವರು 2015ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ತೀರ್ಮಾನವು ಇಂತಹ ನಡೆಗಳ ಪೈಕಿ ಒಂದು.

ಕಾರ್ಯಪ್ಪ ಅವರಿಗೆ ಟಿಪ್ಪು ಸುಲ್ತಾನ್ ಬಗ್ಗೆ ಆಸಕ್ತಿ ಮೂಡಿದ್ದರ ಮೂಲ ಇರುವುದು ರಾಜಕೀಯ ಕಾರ್ಯಸೂಚಿಯೊಂದರಲ್ಲಿ ಎಂಬುದರಲ್ಲಿ ಅನುಮಾನ ಇಲ್ಲ. ಐತಿಹಾಸಿಕ ವ್ಯಕ್ತಿತ್ವವೊಂದನ್ನು ವಿಮರ್ಶಾತ್ಮಕವಾಗಿ ನಿಕಷಕ್ಕೆ ಒಡ್ಡುವ, ಕಲಾವಿದನೊಬ್ಬನ ಕೌತುಕವು ಅವರಿಗೆ ಟಿಪ್ಪು ಸುಲ್ತಾನ್ ಬಗ್ಗೆ ಆಸಕ್ತಿ ಮೂಡಿದ್ದಕ್ಕೆ ಕಾರಣವಲ್ಲ.

ನಾಟಕ ರಚಿಸಿದವರ ನಿಜ ಧೋರಣೆಯನ್ನು ನಾಟಕವೇ ಹೇಳುತ್ತದೆ. ಗೌಡ ಸಹೋದರರ ವ್ಯಕ್ತಿತ್ವದ ಚಿತ್ರಣವು ಈ ನಾಟಕದ ಆದಿಯಿಂದ ಬೆಳೆಯುತ್ತ ಬರುವುದಿಲ್ಲ. 14ನೆಯ ದೃಶ್ಯದಲ್ಲಿ ಈ ಪಾತ್ರಗಳು ಇದ್ದಕ್ಕಿದ್ದಂತೆ ತೆರೆಯ ಎದುರು ಬರುತ್ತವೆ. ಹರಹರ ಮಹಾದೇವ ಎಂಬ ಘೋಷಣೆಗಳ ನಡುವೆ, ಕೋಟೆಯಿಂದ ಓಡಿಹೋಗುತ್ತಿರುವ ಟಿಪ್ಪುವಿಗೆ ಇವರು ಎದುರಾಗುತ್ತಾರೆ. ಉರಿಗೌಡನು ಟಿಪ್ಪುವನ್ನು ಉದ್ದೇಶಿಸಿ, ‘ಸುಲ್ತಾನರೇ ನಿಲ್ಲಿ, ನೀವು ಎಲ್ಲಿಗೆ ಓಡುತ್ತಿದ್ದೀರಿ? ನೀವು ಹುಲಿ, ಹುಲಿ! ಇಲಿಯಂತೆ ಓಡಿಹೋಗುತ್ತಿರುವುದು ಏಕೆ?’ ಎಂದು ಹೇಳುತ್ತಾನೆ. ಇದಾದ ತಕ್ಷಣ ಸಹೋದರರು ತಾವು ಒಡೆಯರ್ ರಾಣಿ ಲಕ್ಷ್ಮಿ ಅಮ್ಮಣ್ಣಿ ದೇವಿಯ ನಿಷ್ಠಾವಂತ ಸೇವಕರು, ಟಿಪ್ಪು ತಮ್ಮ ಶತ್ರುವೇ ವಿನಾ ಬ್ರಿಟಿಷರಲ್ಲ ಎಂದು ಘೋಷಿಸುತ್ತಾರೆ. ನಂತರ ಅವರು ಟಿಪ್ಪುವನ್ನು ಗುಂಡಿಟ್ಟು ಸಾಯಿಸುತ್ತಾರೆ.

ನಾಟಕಕಾರನು, ನಾಟಕದ ಅತ್ಯಂತ ಪ್ರಮುಖ ಭಾಗವೊಂದರಲ್ಲಿ ಕಾಣಿಸಿಕೊಳ್ಳುವ ಪಾತ್ರಗಳನ್ನು ಸಂದರ್ಭೋಚಿತವಾಗಿ ಬಳಸಿಕೊಳ್ಳಲು ಅಥವಾ ಆ ಪಾತ್ರಗಳ ಬಗ್ಗೆ ಪೂರ್ಣವಾದ ವಿವರಗಳನ್ನು ನೀಡಲು ಯತ್ನವನ್ನೇ ನಡೆಸುವುದಿಲ್ಲ. ಬದಲಿಗೆ, ಆ ಪಾತ್ರಗಳನ್ನು ನಾಟಕಕಾರನು ರಾಜಕೀಯ ಪರಿಕಲ್ಪನೆಯೊಂದರ ಪ್ರತಿನಿಧಿಗಳ ರೀತಿಯಲ್ಲಿ ಬಳಸಿಕೊಳ್ಳುತ್ತಾನೆ. ಹೀಗಾಗಿ, ಆಡಳಿತಾರೂಢ ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ ಒಕ್ಕಲಿಗರ ಮತಗಳನ್ನು ಒಗ್ಗೂಡಿಸುವುದಕ್ಕೆ ನೆರವಾಗಲು ಒಂದು ವಿಷಯವನ್ನು ಹೆಕ್ಕಿಕೊಡುವ ಯತ್ನ ಇದು ಎಂದು ಟೀಕಾಕಾರರು ಹೇಳಿರುವುದರಲ್ಲಿ ಆಶ್ಚರ್ಯ ಮೂಡಿಸುವಂಥದ್ದು ಏನೂ ಇಲ್ಲ.

ಕೇರಳದಲ್ಲಿ ನಡೆದ ಯುದ್ಧಗಳ ವಿಚಾರವಾಗಿ ಟಿಪ್ಪು ತನ್ನ ಅಧಿಕಾರಿಗಳಿಗೆ ಬರೆದ ಕೆಲವು ಪತ್ರಗಳಂತಹ ಐತಿಹಾಸಿಕ ದಾಖಲೆಗಳನ್ನು ಕಾರ್ಯಪ್ಪ ಉಲ್ಲೇಖಿಸುತ್ತಾರೆ. ಆದರೆ, ಇಸ್ಲಾಂಗೆ ಮತಾಂತರಗೊಳಿಸುವಂತೆ ಸೂಚಿಸುವುದೂ ಸೇರಿದಂತೆ ಬಂಡೆದ್ದವರನ್ನು ಶಿಕ್ಷಿಸುವಂತೆ ಟಿಪ್ಪು ಸೂಚನೆ ನೀಡಿರುವ ಪತ್ರಗಳನ್ನು ಮಾತ್ರ ಕಾರ್ಯಪ್ಪ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ದೇವಸ್ಥಾನದ ಜೀರ್ಣೋದ್ಧಾರಕ್ಕೆ ಟಿಪ್ಪು ನೀಡಿದ ದಾನದ ವಿವರಗಳನ್ನು ಹೊಂದಿರುವ, ಶೃಂಗೇರಿ ಮಠಾಧೀಶರ ಜೊತೆ ನಡೆಸಿದ ಪತ್ರ ವ್ಯವಹಾರಗಳ ಉದಾಹರಣೆಯನ್ನು ಕಾರ್ಯಪ್ಪ ಉಲ್ಲೇಖಿಸುವುದಿಲ್ಲ. ಟಿಪ್ಪು ತನ್ನ ಕಡೆಯ ದರ್ಬಾರಿನಲ್ಲಿ, ಇಸ್ಲಾಮಿಕ್ ಪ್ರಭುತ್ವ ಮಾತ್ರವೇ ಕೊನೆಯ ಆಶಾಕಿರಣ ಎಂದು ಆಸ್ಥಾನಿಕರಿಗೆ ಹೇಳಿದ್ದ ಎಂದು ತಪ್ಪಾಗಿ ಚಿತ್ರಿಸಿದ್ದಾರೆ. ಆದರೆ, 1799ರ ಸುಮಾರಿಗೆ, ಅಂದರೆ ನಾಲ್ಕನೆಯ ಆಂಗ್ಲೊ–ಮೈಸೂರು ಯುದ್ಧವು ಹತ್ತಿರವಾಗುತ್ತಿದ್ದ ಹೊತ್ತಿನಲ್ಲಿ, ಟಿಪ್ಪು ಪತ್ರ ವ್ಯವಹಾರ ನಡೆಸುತ್ತಿದ್ದುದು ಫ್ರೆಂಚರ ಜೊತೆ ಮಾತ್ರ. ಇಸ್ಲಾಮಿಕ್ ‍ಪ್ರಭುತ್ವದಿಂದ ಬೆಂಬಲ ಸಿಗುವ ಯಾವ ಭ್ರಮೆಯೂ ಟಿಪ್ಪುವಿಗೆ ಆಗ ಇರಲಿಲ್ಲ.

ಪಿತೂರಿ ಹಾಗೂ ನಂಬಿಕೆದ್ರೋಹದ ವಿವರಗಳಿರುವ ಒಂದು ಕುತೂಹಲಕಾರಿ ದೃಶ್ಯದಲ್ಲಿ ಕಾರ್ಯಪ್ಪ ಅವರು ಧಾರ್ಮಿಕವಾಗಿ ವಿಭಜನಕಾರಿಯಾಗಿರುವ ಕಥೆಯೊಂದನ್ನು ತಂದಿದ್ದಾರೆ. ಈ ಕಥೆಯು ಕೊಡವರ ಒಂದು ವರ್ಗದಲ್ಲಿ ಜನಪ್ರಿಯವಾಗಿದೆ. ದೇವಟ್ಟಿಪರಂಬುನಲ್ಲಿ ಸೇರಿದ್ದ ಸಹಸ್ರಾರು ಮಂದಿ ಕೊಡವರನ್ನು ಟಿಪ್ಪು ಮತ್ತು ಅವನ ಕಡೆಯವರು ಮೋಸದಿಂದ ಕೊಲೆ ಮಾಡಿದ್ದನ್ನು ಈ ದೃಶ್ಯವು ತೋರಿಸುತ್ತದೆ. ಕೊಡವ ಜಾನಪದ ಹಾಡುಗಳ ಸಂಕಲನವಾಗಿರುವ, 1924ರಲ್ಲಿ ನಡಿಕೇರಿಯಂಡ ಚಿನ್ನಪ್ಪ ಅವರು ಪ್ರಕಟಿಸಿದ ಪಟ್ಟೋಲೆ ಪಳಮೆ ಕೃತಿಯಲ್ಲಿ ಈ ಕುರಿತು ವಿವರಗಳಿವೆ. ಹಾಗೆಯೇ, 2015ರಲ್ಲಿ ಕಾರ್ಯಪ್ಪ ಅವರು ಬರೆದ ‘ಟಿಪ್ಪು ಮತ್ತು ಕೊಡವರು’ ಕೃತಿಯಲ್ಲಿಯೂ ಇದರ ಬಗ್ಗೆ ಉಲ್ಲೇಖವಿದೆ. ಕೊಡವರನ್ನು ಜೈಲಿಗೆ ತಳ್ಳಿದ್ದರ ದಾಖಲೆಗಳು ಇವೆಯಾದರೂ, ನಿರಾಯುಧ ಕೊಡವರ ಹತ್ಯಾಕಾಂಡ ನಡೆದ ಬಗ್ಗೆ ಸಮಕಾಲೀನ ಐತಿಹಾಸಿಕ ಮೂಲಗಳಲ್ಲಿ ಉಲ್ಲೇಖವಿಲ್ಲ. ಈ ಎರಡು ಪುಸ್ತಕಗಳಲ್ಲಿ ನಮೂದಾಗಿರುವ ಸಂಖ್ಯೆಗಳು, ಅಂದರೆ 80 ಸಾವಿರಕ್ಕೂ ಹೆಚ್ಚಿನ ಕೊಡವರನ್ನು ಜೈಲಿಗೆ ಹಾಕಿದ್ದು ಹಾಗೂ 60 ಸಾವಿರಕ್ಕೂ ಹೆಚ್ಚಿನ ಕೊಡವರನ್ನು ಕೊಂದಿದ್ದು, ತೀರಾ ಉತ್ಪ್ರೇಕ್ಷಿತ. 18ನೆಯ ಶತಮಾನದಲ್ಲಿ ಕೊಡವರ ಜನಸಂಖ್ಯೆಯು ಅಷ್ಟೊಂದು ಇರಲೇ ಇಲ್ಲ. ಆದರೆ ಕಾಲ ಸಾಗಿದಂತೆಲ್ಲ ಈ ಕಥೆಗಳಿಗೆ ಹೆಚ್ಚು ಮಹತ್ವ ಬಂದಿದೆ. ಈ ಕಥೆಗಳು ಟಿಪ್ಪುವಿನ ಹೆಸರು ಕೆಡಿಸುವ ಕಾರ್ಯಕ್ಕೆ ಕೊಡುಗೆ ನೀಡಿವೆ.

ಕಾರ್ಯಪ್ಪ ತಮ್ಮ ಈ ನಾಟಕವನ್ನು ಮಾಧ್ಯಮಗಳ ಮೂಲಕ ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರಾದರೂ, ಆಡಳಿತಾರೂಢ ರಾಜಕೀಯ ವರ್ಗವು ಈಗ ಈ ವಿಷಯದ ಬಗ್ಗೆ ಹೆಚ್ಚು ಪ್ರಸ್ತಾಪಿಸುವುದು ಬೇಡವೆಂದು ತೀರ್ಮಾನಿಸಿರುವಂತೆ ಕಾಣುತ್ತಿದೆ.

ಈ ನಾಟಕ, ಪ್ರಧಾನಿ ಮೋದಿ ಅವರ ಭೇಟಿ ಸಂದರ್ಭದಲ್ಲಿ ಬಿಜೆಪಿ ನಿಲ್ಲಿಸಿದ್ದ ವಿಶೇಷ ಮಹಾದ್ವಾರದ ಉದ್ದೇಶವು ಜೆಡಿಎನ್‌ನ ಭದ್ರಕೋಟೆಯಂತೆ ಇರುವ, ಒಕ್ಕಲಿಗರ ಪ್ರಾಬಲ್ಯವಿರುವ ಮಂಡ್ಯ ಭಾಗದಲ್ಲಿ ಬಿಜೆಪಿಗೆ ಹೆಚ್ಚಿನ ಬೆಂಬಲ ತಂದುಕೊಡುವುದಾಗಿದ್ದಿದ್ದರೆ, ಅದು ಈಡೇರಿಲ್ಲ ಎನ್ನಬೇಕಾಗುತ್ತದೆ. ಕಾರ್ಯಪ್ಪ ಅವರ ನಾಟಕವು ರಾಜ್ಯದಲ್ಲಿ ಪ್ರದರ್ಶನ ಆರಂಭಿಸಿದ ನಂತರದಲ್ಲಿ ಮಂಡ್ಯದಲ್ಲಿ ಎರಡು ಪ್ರದರ್ಶನಗಳು ಆಗಿವೆ. ಆದರೆ ಅಲ್ಲಿ ಜನರಿಂದ ಬಂದಿರುವ ಪ್ರತಿಕ್ರಿಯೆಯು ಅಷ್ಟೇನೂ ಹೆಚ್ಚಿಲ್ಲ. ಮಂಡ್ಯ ಜನರು ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಎಂದಿನಿಂದಲೂ ಪ್ರೀತಿ ಬೆಳೆಸಿಕೊಂಡಿದ್ದಾರೆ, ಟಿಪ್ಪುವಿನ ಆಡಳಿತದ ಅವಧಿಯಲ್ಲಿ ಮಂಡ್ಯದ ಜನ ಆತನನ್ನು ವಿರೋಧಿಸಿರಬಹುದು. ಹೀಗಿದ್ದರೂ, ಉರಿಗೌಡ ಮತ್ತು ನಂಜೇಗೌಡ ಎಂಬ ಹೆಸರುಗಳು ‘ಸಾರ್ವಜನಿಕರ ನೆನಪುಗಳಲ್ಲಿ ಇರಲಿಲ್ಲ. ಮಂಡ್ಯದ ಬಹುತೇಕ ಜನ ಈ ಇಬ್ಬರ ಬಗ್ಗೆ ಇದುವರೆಗೆ ಕೇಳಿಯೂ ಇರಲಿಲ್ಲ’ ಎಂದು ಸ್ಥಳೀಯ ಪತ್ರಕರ್ತ ವಾಗೀಶ್ ವಿವರಿಸುತ್ತಾರೆ. ಮಾರ್ಚ್‌ ತಿಂಗಳಲ್ಲಿ ಸ್ಥಳೀಯ ಮತದಾರರು, ಸಕ್ಕರೆ ಕಾರ್ಖಾನೆಯೊಂದು ಬಾಗಿಲು ಮುಚ್ಚಿದ್ದು ಹಾಗೂ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ನಗರದ ಆಚೆಯಿಂದ ಸಾಗಿರುವ ಕಾರಣದಿಂದಾಗಿ ಜೀವನೋಪಾಯಕ್ಕೆ ಧಕ್ಕೆ ಉಂಟಾಗಿರುವ ವಿಷಯಗಳ ಬಗ್ಗೆ ಹೆಚ್ಚು ಚಿಂತಿತರಾಗಿರುವಂತೆ ಕಂಡುಬಂತು. ಲೇಖಕ ಹಾಗೂ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರ ಪ್ರಕಾರ, ಗೌಡ ಅಧ್ಯಾಯವು ಮುಸ್ಲಿಂ ಆಡಳಿತಗಾರನ ಬಗ್ಗೆ ಅನುಮಾನ ಹಾಗೂ ಸಂಶಯ ಸೃಷ್ಟಿಸುವ ಉದ್ದೇಶದ ಹಿಂದುತ್ವ ಯೋಜನೆ. ಆದರೆ ಅವರು ಈ ಯೋಜನೆಯು ವಿಫಲಗೊಂಡಿದೆ ಎಂದು ಹೇಳುತ್ತಿಲ್ಲ. ‘ಹಳೆಯ ಮಂಡಲ್ ಕಾಲದ ರಾಜಕಾರಣಿಗಳಾದ ಎಚ್.ಡಿ. ದೇವೇಗೌಡ ಅವರಂಥವರು ಇನ್ನೂ ಇರುವ ಕಾರಣ ಈಗ ಈ ಯೋಜನೆಯ ವಿಚಾರವಾಗಿ ಹಿಂದಕ್ಕೆ ಹೆಜ್ಜೆ ಇರಿಸಬೇಕಾಗಿದೆ. ಆದರೆ, ಪುರಾಣವನ್ನು ಸೃಷ್ಟಿಸುವ ಎಲ್ಲ ಪ್ರಯೋಗಗಳಲ್ಲಿಯೂ ಆರಂಭವು ಇದೇ ರೀತಿಯಲ್ಲಿ ಇರುತ್ತದೆ’ ಎಂದು ಸುಗತ ಅವರು ಹೇಳುತ್ತಾರೆ.

ಕಾರ್ಯಪ್ಪ ಅವರ ನಾಟಕ ಬಿಡುಗಡೆ ಆದಾಗ, ಚಿಕ್ಕಬಳ್ಳಾಪುರ ಜಿಲ್ಲಾ ವಕ್ಫ್‌ ಮಂಡಳಿಯ ಮಾಜಿ ಅಧ್ಯಕ್ಷ ಬಿ.ಎಸ್. ರಫಿಯುಲ್ಲಾ ಅವರು, ನಗರ ಸಿವಿಲ್‌ ನ್ಯಾಯಾಲಯದಿಂದ ಈ ನಾಟಕದ ಪ್ರಕಾಶನಕ್ಕೆ ತಾತ್ಕಾಲಿಕ ತಡೆ ತಂದಿದ್ದರು. ಆದರೆ ನಂತರದಲ್ಲಿ ನ್ಯಾಯಾಲಯವು ತಡೆಯಾಜ್ಞೆಯನ್ನು ತೆರವು ಮಾಡಿತು. ನಾಟಕದಲ್ಲಿನ ಚಿತ್ರಣ ಹಾಗೂ ಸಂಭಾಷಣೆಗಳು ‘ಲೇಖಕರ ಕಲ್ಪನೆಯಾಗಿವೆ, ಮುನ್ನುಡಿಯಲ್ಲಿ ಹೇಳಿರುವಂತೆ ವಾಸ್ತವ ಇತಿಹಾಸವನ್ನು ಅವು ಆಧರಿಸಿಲ್ಲ’ ಎಂದು ಆಗ ಕೋರ್ಟ್‌ ಹೇಳಿತ್ತು.

ನಾಟಕದ ಮುಂದಿನ ಆವೃತ್ತಿಯಲ್ಲಿ, ಐತಿಹಾಸಿಕ ಸತ್ಯದ ಬಗೆಗಿನ ಪ್ರತಿಪಾದನೆಯನ್ನು ತೆಗೆದುಹಾಕಲಾಗುತ್ತದೆಯೆ ಎಂಬ ಪ್ರಶ್ನೆಗೆ ಅಯೋಧ್ಯಾ ಪ್ರಕಾಶನದ ರೋಹಿತ್ ಚಕ್ರತೀರ್ಥ ಅವರು ‘ಮುಂದಿನ ಆವೃತ್ತಿಯನ್ನು ಪ್ರಕಟಿಸುವ ವಿಚಾರವಾಗಿ ನಾವು ತೀರ್ಮಾನಿಸಿಲ್ಲ. ಮುನ್ನುಡಿ ಹಾಗೂ ನಾಟಕಕಾರನ ಟಿಪ್ಪಣಿಯಲ್ಲಿ ಯಾವುದೇ ಬದಲಾವಣೆ ತರುವ ಬಗ್ಗೆ ನಾವು ನಮ್ಮ ವಕೀಲರೊಂದಿಗೆ ಸಮಾಲೋಚಿಸುತ್ತೇವೆ’ ಎಂದು ತಿಳಿಸಿದರು. ನಾಟಕದಲ್ಲಿ ತಮಗಾಗಲಿ, ಸಂಪಾದಕೀಯ ಮಂಡಳಿಯ ಇತರ ಯಾವುದೇ ಸದಸ್ಯರಿಗಾಗಲಿ ದೋಷ ಕಾಣಿಸಲಿಲ್ಲ ಎಂದು ತಿಳಿಸಿದ ರೋಹಿತ್, ಪೂರ್ವಗ್ರಹ ಇಲ್ಲದೆ ಇದನ್ನು ವೀಕ್ಷಿಸಿದರೆ ‘ನಾಟಕವು ಟಿಪ್ಪು ಸುಲ್ತಾನನ್ನು ಉದ್ದೇಶಪೂರ್ವಕವಾಗಿ ಕೆಟ್ಟದ್ದಾಗಿ ಚಿತ್ರಿಸಿರುವಂತೆ ಕಾಣುವುದಿಲ್ಲ’ ಎಂದರು.

ಇತಿಹಾಸಕಾರ್ತಿ ಮತ್ತು ಪ್ರೊಫೆಸರ್ ಜಾನಕಿ ನಾಯರ್ ಅವರು ಮೈಸೂರಿನ ಆಧುನಿಕ ಇತಿಹಾಸ ಕುರಿತಾಗಿ ವಿಸ್ತೃತವಾಗಿ ಕೆಲಸ ಮಾಡಿದ್ದಾರೆ. ಇತಿಹಾಸದ ಪರಿಕಲ್ಪನೆಗಳು ಬೇರೆ ಬೇರೆ ಜಗತ್ತುಗಳಲ್ಲಿ ಸುತ್ತುತ್ತಿರುತ್ತವೆ. ಪ್ರವಾಸಿ ಮಾರ್ಗದರ್ಶಿಯ ವಿವರಣೆಗಳಲ್ಲಿ, ಜಾನಪದದಲ್ಲಿ, ಅಕಾಡೆಮಿಕ್ ವಿದ್ವಾಂಸರಲ್ಲಿ ಅದು ಇರುತ್ತದೆ. ಈ ಬೇರೆ ಬೇರೆ ಜಗತ್ತುಗಳಲ್ಲಿ ಇರುವ ಇತಿಹಾಸದ ಕಲ್ಪನೆಗಳು ಒಂದಕ್ಕೊಂದು ಪೂರಕವಾಗಿರಬೇಕು ಎಂದೇನೂ ಇಲ್ಲ ಎಂದು ನಾಯರ್ ವಿವರಿಸುತ್ತಾರೆ. ‘ಆದರೆ ಈಗ, ಈ ಬೇರೆ ಬೇರೆ ಜಗತ್ತುಗಳನ್ನು ಇಲ್ಲವಾಗಿಸಿ ಒಂದೇ ಸಂಕಥನದ ಅಡಿಯಲ್ಲಿ ಎಲ್ಲವನ್ನೂ ತರಲಾಗುತ್ತಿದೆ. ಅಂದರೆ, ಹೀರೊಗಳು ಇರುತ್ತಾರೆ ಅಥವಾ ಖಳರು ಇರುತ್ತಾರೆ’ ಎಂದು ನಾಯರ್ ಹೇಳುತ್ತಾರೆ. ಸ್ಥಳೀಯ ಹಾಗೂ ಮೌಖಿಕ ದಾಖಲೆಗಳನ್ನು ಇತಿಹಾಸಕಾರರು ಅಲಕ್ಷಿಸಿದ್ದಾರೆ ಎಂಬ ಆರೋಪಗಳು ನಿರಾಧಾರ ಎಂದು ನಾಯರ್ ತಿಳಿಸುತ್ತಾರೆ. ನಾಯರ್ ಅವರು ಕೂಡ ಜಾನಪದ ಮೂಲಗಳ ಜೊತೆ ಕೆಲಸ ಮಾಡಿದ್ದಾರೆ. ಅದೇ ರೀತಿ ದಿವಂಗತ ಎಂ.ಎಂ. ಕಲಬುರ್ಗಿ ಅವರೂ ಅಂಥದ್ದೇ ಕೆಲಸ ಮಾಡಿದ್ದರು. ಪ್ರೊ. ಕಲಬುರ್ಗಿ ಅವರು ‘ಕೈಫಿಯತ್ತುಗಳನ್ನು ಅಪಾರ ಕಾಳಜಿಯಿಂದ ಸಂಗ್ರಹಿಸಿದ್ದರು. ಸ್ಥಳೀಯತೆ ವಿಚಾರದಲ್ಲಿ ಇವು ಯಾವುದಕ್ಕೂ ಕಡಿಮೆಯಲ್ಲ’. ‘ಎಲ್ಲ ಬಗೆಯ ಮೂಲಗಳನ್ನು ಪ್ರಶ್ನೆಗೆ ಗುರಿಪಡಿಸಲು ಇತಿಹಾಸಕಾರರು ಕಠಿಣ ಪದ್ಧತಿಯನ್ನು ಅನುಸರಿಸಬೇಕು’ ಎಂದು ನಾಯರ್ ಎಚ್ಚರಿಸುತ್ತಾರೆ. ಅದರಲ್ಲೂ, ಫ್ರೆಂಚ್, ಇಂಗ್ಲಿಷ್, ಮರಾಠಿ, ಕನ್ನಡ ಮತ್ತು ಪಾರ್ಸಿ ಭಾಷೆಗಳಲ್ಲಿ ಹಲವು ಮೂಲಗಳು ಇರುವ ಟಿಪ್ಪು ಸುಲ್ತಾನನ ಇತಿಹಾಸದಂತಹ ವಿಷಯಗಳಲ್ಲಿ ಬಹಳ ಎಚ್ಚರಿಕೆ ಬೇಕು ಎಂದು ಅವರು ಹೇಳುತ್ತಾರೆ.

ಕಾಲ್ಪನಿಕ ಗೌಡ ಸಹೋದರರನ್ನು, ‘ಟಿ‍ಪ್ಪು ಸುಲ್ತಾನನ್ನು ಕೊಂದ ಒಕ್ಕಲಿಗ, ಹಿಂದೂ ಹೀರೊಗಳು’ ಎಂದು ಎತ್ತರಕ್ಕೇರಿಸುವ ಪ್ರಯತ್ನಗಳಿಂದ ಚುನಾವಣೆಯಲ್ಲಿ ಪ್ರಯೋಜನ ಆಗುತ್ತದೆಯೋ ಇಲ್ಲವೋ ಎಂಬುದು ಒಂದು ವಿಚಾರ. ಆದರೆ ಇದು ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಜನಪ್ರಿಯ ಅಭಿಪ್ರಾಯವು ರೂಪುಗೊಳ್ಳುವ ಬಗೆಯನ್ನು ಬದಲಾಯಿಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬೆಂಬಗಲಿಗರು ಒಟ್ಟಾಗಿ ನಡೆಸುವ ಯತ್ನದ ಚಿತ್ರಣವನ್ನು ನೀಡುತ್ತದೆ. ಈ ಸಹೋದರರ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಮಾಣದ ವಸ್ತು–ವಿಷಯ ಪ್ರಕಟವಾಗಿದೆ. ಕಾರ್ಯಪ್ಪ ಅವರ ನಾಟಕಕ್ಕೆ ಸರ್ಕಾರದ ಬೆಂಬಲ ಇದೆ. ಸಹೋದರರ ಬಗ್ಗೆ ಪುಸ್ತಕವೊಂದಿದೆ. ಹೀಗಾಗಿ, ಈಗ ಸಾರ್ವಜನಿಕವಾಗಿ ಟಿಪ್ಪು ಸುಲ್ತಾನ್ ಬಗ್ಗೆ ಚರ್ಚೆ ನಡೆದಲ್ಲೆಲ್ಲ ಉರಿಗೌಡ ಮತ್ತು ನಂಜೇಗೌಡ ಅವರ ಹೆಸರೂ ಉಲ್ಲೇಖವಾಗಬಹುದು. ಸತ್ಯವನ್ನು ಇಷ್ಟಪಡುವ ಒಕ್ಕಲಿಗ ಸಮುದಾಯದ ಧಾರ್ಮಿಕ ಮುಖಂಡ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದಂತೆ, ನಮ್ಮನ್ನು ವಿಭಜಿಸುವ ಹೀರೊಗಳನ್ನು ಸೃಷ್ಟಿಸುವುದು ಬೇಡ ಎನ್ನುವುದು ನೆನಪಿನಲ್ಲಿ ಇದ್ದರೆ ಒಳ್ಳೆಯದು.

(ಈ ಬರಹದ ಪೂರ್ಣಪಠ್ಯವು ಮೊದಲು ಔಟ್‌ಲುಕ್‌ ಪತ್ರಿಕೆಯಲ್ಲಿ ಪ್ರಕಟವಾಗಿದೆ)

ಲೇಖಕ: ಸಂಶೋಧಕ ಮತ್ತು ಸಾಕ್ಷ್ಯಚಿತ್ರ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT