ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಿಂದ ಜೈಲು ಸೇರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಸಾವಿರಾರು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತವಾಗಿ ಹರಿದಾಡುತ್ತಿವೆ. ಇದು ಸಂತ್ರಸ್ತೆಯರ ಬದುಕನ್ನು ಅಸಹನೀಯಗೊಳಿಸಿರುವುದಷ್ಟೇ ಅಲ್ಲ, ತೀವ್ರ ತೇಜೋವಧೆಗೆ ಗುರಿ ಮಾಡುತ್ತಿದೆ. ತಂತ್ರಜ್ಞಾನದಲ್ಲಿ ಪರಿಣತರಾಗಿರುವ, ಬಹುಶಿಸ್ತೀಯ ಸಂಶೋಧಕಿ ಮತ್ತು ಅಂತರ್ಜಾಲ ತಜ್ಞೆ ರೋಹಿಣಿ ಲಕ್ಷಣೆ ಅವರು ಈ ರೀತಿಯ ವಿಡಿಯೊಗಳು ಮುಕ್ತವಾಗಿ ಹರಡುವುದನ್ನು ತಡೆಯುವುದು ಹೇಗೆ ಎನ್ನುವುದರ ಬಗ್ಗೆ ವಿವರಿಸಿದ್ದಾರೆ
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಕ್ಕೆ ಗುರಿಯಾಗಿದ್ದಾರೆ. ‘ಪೆನ್ ಡ್ರೈವ್ ಕೇಸ್’ ಎಂದೇ ಕೆಲವು ಮಾಧ್ಯಮಗಳು ಉಲ್ಲೇಖಿಸುತ್ತಿರುವ ಈ ಪ್ರಕರಣದಲ್ಲಿ ಸುಮಾರು 3,000 ವಿಡಿಯೊಗಳಿದ್ದು, ಅವು ಏಪ್ರಿಲ್‌ನಿಂದ ಜಾಲತಾಣಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದವು.
ಬಹುತೇಕ ವಿಡಿಯೊಗಳಲ್ಲಿ ಸಂತ್ರಸ್ತೆಯರನ್ನು ಸ್ವಷ್ಟವಾಗಿ ಕಾಣಬಹುದು ಮತ್ತು ಅವರ ಧ್ವನಿಯನ್ನೂ ಕೇಳಬಹುದು. ಏಕೆಂದರೆ, ವಿಡಿಯೊಗಳಲ್ಲಿನ ಅವರ ಮುಖವನ್ನು ಮಸುಕು ಮಾಡಲಾಗಿಲ್ಲ ಮತ್ತು ಅವರ ಧ್ವನಿಯನ್ನು ಬದಲಾಯಿಸಿಲ್ಲ. ವಾಟ್ಸ್ ಆ್ಯಪ್, ಟೆಲಿಗ್ರಾಂನಂತಹ ಮೆಸೇಜಿಂಗ್ ಆ್ಯಪ್‌ಗಳು, ಮೆಸೇಜ್ ಬೋರ್ಡ್‌ಗಳು ಮತ್ತು ಗುಂಪುಗಳು, ಸಾಮಾಜಿಕ ಜಾಲತಾಣ ವೇದಿಕೆಗಳು, ಪೋರ್ನ್ ವೆಬ್‌ಸೈಟ್‌ಗಳು, ಟೊರೆಂಟ್‌ಗಳು ಮತ್ತು ಕ್ಲೌಡ್ ಸ್ಟೋರೇಜ್ ಸೇವೆಯಂತಹ ಮಾಧ್ಯಮಗಳ ಮೂಲಕ ವಿಡಿಯೊಗಳನ್ನು ದೊಡ್ಡ ಪ್ರಮಾಣದಲ್ಲಿ ಹಂಚಿಕೊಳ್ಳಲಾಗಿದೆ. ಅದು ಸಂತ್ರಸ್ತೆಯರು ಮತ್ತು ಅವರ ಕುಟುಂಬಗಳ ಮೇಲೆ, ಅವರ ಬದುಕಿನ ಎಲ್ಲ ವಲಯಗಳ ಮೇಲೆ ಬೀರುತ್ತಿರುವ ವಿನಾಶಕಾರಿ ಪರಿಣಾಮಗಳ ಬಗ್ಗೆ ಕೆಲವು ಪತ್ರಿಕೆಗಳು ವರದಿ ಮಾಡಿವೆ.
ವಿಡಿಯೊಗಳಲ್ಲಿರುವ ಕೆಲವು ಸಂತ್ರಸ್ತೆಯರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಮತ್ತು ಕರೆ ಮಾಡುವ ಮೂಲಕ ಕಿರುಕುಳ ನೀಡಿರುವ ಬಗ್ಗೆ ವರದಿಯಾಗಿದೆ. ಪ್ರಜ್ವಲ್ ರೇವಣ್ಣ ವಿಡಿಯೊ ಚಿತ್ರೀಕರಣ ಮಾಡುತ್ತಿರುವ ಬಗ್ಗೆ ಕೆಲವು ಸಂತ್ರಸ್ತೆಯರಿಗೆ ತಿಳಿದಿರಲಿಲ್ಲ; ಮತ್ತೆ ಕೆಲವು ಸಂತ್ರಸ್ತೆಯರನ್ನು ಬಲವಂತವಾಗಿ ಹಾಗೂ ಬೆದರಿಸಿ ಸುಮ್ಮನಿರಿಸಲಾಗಿತ್ತು ಎಂಬ ಆರೋಪಗಳಿವೆ. ಈ ಘಟನೆಯ ನಂತರ ಕೆಲವು ಸಂತ್ರಸ್ತೆಯರು ಮತ್ತು ಅವರ ಕುಟುಂಬದವರು ಜನರ ಸಂಪರ್ಕದಿಂದ ದೂರ ಸರಿದಿದ್ದರೆ, ಮತ್ತೆ ಕೆಲವರು ತಮ್ಮ ಮನೆಗಳನ್ನೇ ಖಾಲಿ ಮಾಡಿದ್ದಾರೆ. ಕೆಲವರು ಆತ್ಮಹತ್ಯೆ ಪ್ರಯತ್ನ ಮಾಡಿದ್ದೂ ಉಂಟು. ಇತರರು ಸಾಮಾಜಿಕ ಬಹಿಷ್ಕಾರ, ನಿಂದನೆ ಮತ್ತು ಹೀಯಾಳಿಕೆ, ಚಾರಿತ್ರ್ಯಹರಣದಂಥ ತೀವ್ರವಾದ ತೇಜೋವಧೆಯನ್ನು ಎದುರಿಸುತ್ತಿದ್ದಾರೆ.
ಇದುವರೆಗೂ ಕಡೆಗಣಿಸಲಾಗಿದ್ದ ಒಂದು ಮುಖ್ಯ ವಿಷಯವನ್ನು ಈ ಪ್ರಕರಣ ಮುನ್ನೆಲೆಗೆ ತಂದಿದೆ. ಮಾಧ್ಯಮಗಳು, ಪೊಲೀಸರು, ನ್ಯಾಯಾಂಗ ಹಾಗೂ ನಾಗರಿಕ ಸಮಾಜ ಐಬಿಎಸ್‌ಎಗೆ (ಚಿತ್ರ ಆಧಾರಿತ ಲೈಂಗಿಕ ಕಿರುಕುಳ– image based sexual abuse) ಸಂಬಂಧಿಸಿದ ಘಟನೆಗಳನ್ನು ಸರಿಯಾದ ರೀತಿಯಲ್ಲಿ ಎದುರಿಸಲು ಸಿದ್ಧವಾಗಿಲ್ಲ. ಲೈಂಗಿಕ ಹಲ್ಲೆಗೆ ಒಳಗಾದ ವ್ಯಕ್ತಿಗೆ ಸೂಕ್ತವಾದ ರಕ್ಷಣೆ, ತ್ವರಿತ ನ್ಯಾಯಸಿಗುವಂತೆ ಮಾಡುವುದು ಮತ್ತು ಇನ್ನೂ ಹೆಚ್ಚಿನ ಹಿಂಸೆ ಮತ್ತು ಕಿರುಕುಳ
ಆಗದಂತೆ ನೋಡಿಕೊಳ್ಳುವುದು ಮುಂತಾದ ವಿಷಯಗಳನ್ನು ನಿಭಾಯಿಸಲು ಈಗಿರುವ ವ್ಯವಸ್ಥೆ ಅಷ್ಟು ಸಮರ್ಪಕ ವಾಗಿಲ್ಲ.
ಐಬಿಎಸ್‌ಎ ಘಟನೆ ಆದ ಕೂಡಲೇ ಅಥವಾ ಆಗಬಹುದಾದ ಸಂದರ್ಭ ನಿರ್ಮಾಣವಾಗುತ್ತಿದೆ ಎನ್ನುವಂಥ ಪರಿಸ್ಥಿತಿಯಲ್ಲಿ ಹಲ್ಲೆಗೆ ಒಳಗಾಗಿರುವ ವ್ಯಕ್ತಿಗೆ ತಕ್ಷಣವೇ ರಕ್ಷಣೆ ನೀಡಬೇಕು. ಏಕೆಂದರೆ;
1. ಚಿತ್ರ/ವಿಡಿಯೊಗಳ ನಿರಂತರ ಹಂಚಿಕೆ
ಐಬಿಎಸ್‌ಎ ವಿಷಯವು ಒಮ್ಮೆ ಆನ್‌ಲೈನ್‌ನಲ್ಲಾಗಲಿ (ಅಂತರ್ಜಾಲ, ವಾಟ್ಸ್ಆ್ಯಪ್, ಟೆಲಿಗ್ರಾಂ) ಅಥವಾ ಆಫ್‌ಲೈನ್‌ನಲ್ಲಾಗಲಿ (ಪೆನ್ ಡ್ರೈವ್, ಸಿ.ಡಿ, ಮುದ್ರಿತ ಫೋಟೊಗಳು) ಬಿಡುಗಡೆ ಆಯಿತೆಂದರೆ, ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗುತ್ತದೆ. ಅದನ್ನು ಅಂತರ್ಜಾಲದಿಂದ ಮತ್ತು ಆಫ್‌ಲೈನ್ ತಾಣಗಳಿಂದ ಸಂಪೂರ್ಣವಾಗಿ ತೆಗೆದುಹಾಕುವುದು ಭಾರಿ ಸವಾಲಿನ ಕೆಲಸ. ವಿಭಿನ್ನ ವೇದಿಕೆಗಳಲ್ಲಿ ಹಂಚಿಕೊಳ್ಳುವ ಮೂಲಕ ಮತ್ತು ವಿಭಿನ್ನ ವೆಬ್‌ಸೈಟ್/ಪೋರ್ಟಲ್‌ಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅದನ್ನು ಚಲನಶೀಲವಾಗಿ ಇಡಲಾಗುತ್ತದೆ. ಅದನ್ನು ‘ಕೆಳಮುಖಿ ಹಂಚಿಕೆ’ (downstream distribution) ಎನ್ನಲಾಗುತ್ತದೆ. ಈ ರೀತಿಯ ಹಂಚಿಕೆ/ಪ್ರಸರಣ ನಿಲ್ಲಿಸದಿದ್ದರೆ, ಒಂದು ಚಿತ್ರ/ವಿಡಿಯೊವನ್ನು ನೋಡಿರುವವರ ಸಂಖ್ಯೆ ಒಂದು ದಿನದಲ್ಲಿ ಅಥವಾ ಕೆಲವೇ ಗಂಟೆಗಳಲ್ಲಿ 200ರಿಂದ 20 ಲಕ್ಷದವರೆಗೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಕಾಲದಲ್ಲಿ ಮಧ್ಯಪ್ರವೇಶ ಮಾಡುವುದು ಹಾಗೂ ಹಂಚಿಕೆ ತಡೆಯುವುದು ಬಹು ಮುಖ್ಯ.
ಐಬಿಎಸ್‌ಎ ಹಂಚಿಕೆ ಭಾರತದಲ್ಲಿ ವ್ಯಾಪಕವಾದ ಹಾಗೂ ಲಾಭದಾಯಕ ವ್ಯವಹಾರವಾಗಿದೆ. ಈ ಹಂಚಿಕೆ ವ್ಯವಸ್ಥೆಯಲ್ಲಿ ಹಲವು ವಿತರಣಾ ವಿಧಾನಗಳಿವೆ. ಇಂಥ ವಿಷಯಗಳನ್ನು ವೆಬ್‌ಸೈಟ್‌ಗಳಲ್ಲಿ, ಮೆಸೇಜಿಂಗ್ ಆ್ಯಪ್‌ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ವಿವಿಧ ರೀತಿಯ ವೇದಿಕೆಗಳಲ್ಲಿ ಮತ್ತು ಆಫ್‌ಲೈನ್ ಜಾಲದಲ್ಲಿ ಹಂಚಿಕೊಳ್ಳುವ ಮೂಲಕ ಹಣ ಸಂಪಾದನೆ ಮಾಡಲಾಗುತ್ತಿದೆ. ಹಲವು ಬಾರಿ ಇಂಥ ಚಿತ್ರ/ವಿಡಿಯೊ ಬಳಸಿ ಸಂತ್ರಸ್ತರನ್ನು ಬೆದರಿಸಿ ಹಣ ಸುಲಿಗೆ ಮಾಡಲಾಗುತ್ತದೆ.
ಪ್ರಜ್ವಲ್ ರೇವಣ್ಣ, ಅಭಿಷೇಕ್ ಮನು ಸಿಂಘ್ವಿ ಅವರಂತಹ ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾಗ, ಅಂಥ ವಿಡಿಯೊ/ಚಿತ್ರವನ್ನು ಹಂಚುವುದರ ಹಿಂದೆ ರಾಜಕೀಯ ಹಿತಾಸಕ್ತಿಗಳೂ ಕೆಲಸ ಮಾಡುತ್ತವೆ.
ಐಬಿಎಸ್‌ಎ ಚಿತ್ರ/ವಿಡಿಯೊ ಹಂಚಿಕೆಗೆ ಲೈಂಗಿಕ ದರ್ಶನದ ತೃಪ್ತಿಯಂತಹ (voyeurism) ಹಲವು ವ್ಯವಹಾರೇತರ ಕಾರಣಗಳಿರುತ್ತವೆ. ಮಾಡಿದ ತಪ್ಪಿಗೆ ಅಥವಾ ಕಲ್ಪಿತ ತಪ್ಪಿಗೆ ಶಿಕ್ಷೆ ಅನುಭವಿಸಬೇಕು ಎನ್ನುವ ಸೇಡಿನ ಭಾವ, ಇತರರ ನಡುವಣ ಸಂಬಂಧವನ್ನು ಪತ್ತೆ ಹಚ್ಚುವ ಉಮೇದು, ಸಂತ್ರಸ್ತರ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದು ಅಥವಾ ಅವರ ಮೇಲೆ ಹಿಡಿತ ಸಾಧಿಸುವುದು ಮತ್ತು ಬೇರೊಬ್ಬರ ನೋವಿನಲ್ಲಿ ಸುಖ ಕಾಣುವ ಮನಃಸ್ಥಿತಿ ಇತರ ಪ್ರಮುಖ ಕಾರಣಗಳಾಗಿವೆ.
2. ಗಂಭೀರ ಪರಿಣಾಮ
ಐಬಿಎಸ್‌ಎಗೆ ಒಳಗಾದವರ ಮೇಲೆ ಆಗುವ ಪರಿಣಾಮಗಳು ಗಂಭೀರವಾಗಿರುತ್ತವೆ ಹಾಗೂ ನಿರಂತರವಾಗಿರುತ್ತವೆ ಮತ್ತು ಅವರ ಬದುಕು ಹಿಂದಿನಂತೆ ಉಳಿಯುವುದಿಲ್ಲ ಎನ್ನುವುದನ್ನು ಹಲವು ಸಂಶೋಧನೆಗಳು ಮತ್ತು ಪ್ರಕರಣಗಳು ಸಾಬೀತುಪಡಿಸಿವೆ. ಸಂತ್ರಸ್ತರು ಶಾಲೆ, ಕಾಲೇಜುಗಳಿಂದ ಹೊರಬೀಳುವುದು, ಉದ್ಯೋಗ ನಷ್ಟ, ಸಾಮಾಜಿಕ ಜೀವನದಿಂದ ದೂರವಾಗಿ ಒಂಟಿಯಾಗಿರುವುದು, ಕುಟುಂಬಸ್ಥರಿಂದ ಬಹಿಷ್ಕೃತರಾಗುವುದು, ಸ್ನೇಹಿತರು, ಆಪ್ತರು ದೂರ ಸರಿಯುವುದು, ಅವಮಾನ, ನಿಂದನೆಗಳಿಗೆ ಗುರಿಯಾಗುವುದರಂಥ ಪರಿಣಾಮಗಳು ಘಟಿಸುತ್ತವೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಮೊದಲೇ ಹಿಂಸೆ ಅನುಭವಿಸಿರುತ್ತಾರೆ. ಚಿತ್ರ/ವಿಡಿಯೊ ಹಂಚಿಕೆಯಾಗುವುದರಿಂದ ಅವರು ಮತ್ತೆ ಮತ್ತೆ ಅಂಥದ್ಧೇ ಹಿಂಸೆಗೆ ಗುರಿಯಾಗುತ್ತಾರೆ.
ಐಬಿಎಸ್‌ಎ ಘಟನೆಗಳು ನಡೆದಾಗ ಅಥವಾ ಅಂಥ ಸಂದರ್ಭ ಉಂಟಾದಾಗ, ಸಹಜವಾಗಿಯೇ ಸಂತ್ರಸ್ತರು ಕಂಗಾಲಾಗಿರುತ್ತಾರೆ. ಅಂಥ ಸಂದರ್ಭದಲ್ಲಿ ಅವರಿಗೆ ಕ್ಷಿಪ್ರವಾಗಿ ಭಾವನಾತ್ಮಕ, ತಾಂತ್ರಿಕ ಮತ್ತು ಕಾನೂನು ನೆರವಿನ ಅಗತ್ಯವಿರುತ್ತದೆ. ಕೆಲವರಿಗೆ ವೈಯಕ್ತಿಕ ಮತ್ತು ಡಿಜಿಟಲ್ ರಕ್ಷಣೆಯ ಅವಶ್ಯಕತೆಯಿರುತ್ತದೆ. ಮತ್ತೆ ಕೆಲವರಿಗೆ, ವೈದ್ಯಕೀಯ ನೆರವಿನ ಅವಶ್ಯಕತೆಯಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಚಿತ್ರ/ವಿಡಿಯೊಗಳನ್ನು ಆದಷ್ಟು ಬೇಗ ತೆಗೆದುಹಾಕುವ ಅಗತ್ಯವಿರುತ್ತದೆ.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡವು (ಎಸ್‌ಐಟಿ) ಸಂತ್ರಸ್ತರಿಗಾಗಿಯೇ ಒಂದು ಸಹಾಯವಾಣಿ ರೂಪಿಸಿದೆ. ಸಂತ್ರಸ್ತರು ರಕ್ಷಣೆ ಮತ್ತು ನೆರವು ಪಡೆಯಲು, ಸಾಕ್ಷ್ಯಾಧಾರಗಳನ್ನು ಒದಗಿಸಲು ಅಥವಾ ಪ್ರಕರಣದ ನಂತರದ ಪರಿಣಾಮಗಳನ್ನು ಎದುರಿಸಲು ಬೇಕಾದ ನೆರವನ್ನು ಕೇಳಲು ಸಹಾಯವಾಣಿಯಂಥ ಒಂದು ವ್ಯವಸ್ಥೆಯ ಅಗತ್ಯ ಖಂಡಿತ ಇದೆ. ಆದರೆ, ಇದು ಜನಪ್ರಿಯ ವ್ಯಕ್ತಿಗಳ ಪ್ರಕರಣಗಳಿಗೆ ಮಾತ್ರ ಸೀಮಿತವಾಗಿರಬಾರದು.
ಭಾರತದಲ್ಲಿ ಕೆಲವು ಸರ್ಕಾರೇತರ ಸಂಸ್ಥೆಗಳು ಸಹಾಯವಾಣಿಗಳನ್ನು ಒದಗಿಸಿವೆ. ಆದರೆ, ಅವುಗಳ ಮೂಲಕ ಎಷ್ಟು ಪ್ರಕರಣಗಳು ದಾಖಲಾಗಿವೆ ಮತ್ತು ಎಷ್ಟು ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂಬ ಮಾಹಿತಿ ಲಭ್ಯವಿಲ್ಲ ಅಥವಾ ಅದು ಅಸ್ಪಷ್ಟವಾಗಿದೆ.
ಚಿತ್ರ ಆಧಾರಿತ ಲೈಂಗಿಕ ಕಿರುಕುಳ (ಐಬಿಎಸ್‌ಎ) ಪ್ರಕರಣಗಳಲ್ಲಿ ಸಂತ್ರಸ್ತೆಯರ ಮೇಲೆ ಯಾವ ರೀತಿಯ ಪರಿಣಾಮ ಆಗುತ್ತದೆಯೋ, ಈ ಪ್ರಕರಣದಲ್ಲಿಯೂ ಅದೇ ನಡೆದಿದೆ.
ಐಬಿಎಸ್‌ಎ ಅನ್ನು ‘ರಿವೆಂಜ್ ಪೋರ್ನ್’ ಎಂದು ತಪ್ಪಾಗಿ ಕರೆಯಲಾಗುತ್ತದೆ. ನಗ್ನತೆ ಅಥವಾ ಲೈಂಗಿಕ ಕ್ರಿಯೆಗೆ ಸಂಬಂಧಿಸಿದ (ಅದರಲ್ಲಿ ತೊಡಗಿರುವ ಒಬ್ಬರು ಅಥವಾ ಅದಕ್ಕಿಂತ ಹೆಚ್ಚಿನವರ ಒಪ್ಪಿಗೆ ಇಲ್ಲದೆಯೇ) ಚಿತ್ರ ಅಥವಾ ವಿಡಿಯೊ ಅನ್ನು ಸೆರೆ ಹಿಡಿಯುವುದು, ಪ್ರಕಟಿಸುವುದು ಮತ್ತು ಹಂಚುವುದನ್ನು ಇದು ಒಳಗೊಂಡಿದೆ. ‘ರಿವೆಂಜ್ ಪೋರ್ನ್’ ಎಂದರೆ, ಒಪ್ಪಿಗೆ ಇಲ್ಲದ ನಗ್ನ ಅಥವಾ ಲೈಂಗಿಕ ಕ್ರಿಯೆಯ ಚಿತ್ರ, ವಿಡಿಯೊಗಳು ದಾರಿ ತಪ್ಪಿಸುವಂಥವು ಮತ್ತು ಅಪಾಯಕಾರಿ ಎಂದು ಅರ್ಥ. ಕೆಲವು ಮಾಧ್ಯಮಗಳು ಇದನ್ನು ‘ಲೈಂಗಿಕ ಹಗರಣ’, ‘ಅಶ್ಲೀಲ ವಿಡಿಯೊಗಳು’ ಮತ್ತು ‘ಸರಸದ ಚಿತ್ರಗಳು’ ಎಂದು ಕರೆಯುತ್ತಿವೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ವಿಡಿಯೊಗಳನ್ನು ಹಾಗೆ ಕರೆಯುವುದು ಸರಿ ಅಲ್ಲ. ಜತೆಗೆ ಹಾನಿಕಾರಕ.
ನಗ್ನ, ಅರೆನಗ್ನ ಅಥವಾ ಲೈಂಗಿಕ ಕ್ರಿಯೆಗೆ ಸಂಬಂಧಿಸಿದ ಚಿತ್ರ, ವಿಡಿಯೊ ಸೆರೆ ಹಿಡಿಯುವುದು, ಪ್ರಕಟಿಸುವುದು ಅಥವಾ ಹಂಚಿಕೆ ಮಾಡುವುದಕ್ಕೆ, ನಾಲ್ಕು ಹಂತಗಳಲ್ಲಿ ಸಮ್ಮತಿಯನ್ನು ಪಡೆಯಬೇಕಾಗುತ್ತದೆ:
1. ಲೈಂಗಿಕ ಕ್ರಿಯೆ ಅಥವಾ ನಗ್ನವಾಗುವುದು, ಅಥವಾ ಅರೆನಗ್ನ ಸ್ಥಿತಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಒಪ್ಪಿಗೆ ಇರಬೇಕು. ಫ್ರೇಮ್‌ನೊಳಗೆ ಇರುವ ವ್ಯಕ್ತಿ/ವ್ಯಕ್ತಿಗಳು ತಮ್ಮ ಚಿತ್ರ ಅಥವಾ ವಿಡಿಯೊ ತಾವೇ ಚಿತ್ರೀಕರಣ ಮಾಡಿಕೊಳ್ಳಬಹುದು ಅಥವಾ ಚಿತ್ರ ಅಥವಾ ವಿಡಿಯೊದಲ್ಲಿ ದಾಖಲಾಗಲು ಒಪ್ಪಿಗೆ ಸೂಚಿಸಬಹುದು.
2. ಫ್ರೇಮ್‌ನಲ್ಲಿರುವವರನ್ನು ಪತ್ತೆ ಹಚ್ಚಲು ನೆರವಾಗಬಹುದಾದ ಮುಖ, ದೈಹಿಕ ಚಿಹ್ನೆಗಳನ್ನು (ಹಚ್ಚೆ, ಮಚ್ಚೆ ಇತ್ಯಾದಿ) ಮುಚ್ಚಿಕೊಳ್ಳಬಹುದು ಅಥವಾ ಮಸುಕುಗೊಳಿಸಬಹುದು ಅಥವಾ ಕತ್ತರಿಸಬಹುದು. ಚಿತ್ರ ಅಥವಾ ವಿಡಿಯೊದಲ್ಲಿ ಇರುವ ವ್ಯಕ್ತಿ/ವ್ಯಕ್ತಿಗಳು ಅದನ್ನು ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚಿನವರಿಗೆ (ನಿದರ್ಶನಕ್ಕೆ, ತಮ್ಮ ಸಂಗಾತಿ ಅಥವಾ ಓನ್ಲಿಫ್ಯಾನ್ಸ್‌ನಂತಹ ವಯಸ್ಕ ಸೇವೆಗಳ ಗ್ರಾಹಕರಿಗೆ) ಒಪ್ಪಿಗೆಯಿಂದಲೇ ಕಳಿಸಬಹುದು. ಹೀಗಾದಲ್ಲಿ, ತಾವು ಕಳಿಸಿದ ವ್ಯಕ್ತಿ ಬಿಟ್ಟು ಬೇರೆಯವರಿಗೆ ಚಿತ್ರ ಅಥವಾ ವಿಡಿಯೊ ಹಂಚಿಕೆಯಾಗಲು ಅವರು ಅಸಮ್ಮತಿ ವ್ಯಕ್ತಪಡಿಸಬಹುದು.
3. ಚಿತ್ರದಲ್ಲಿ ಅಥವಾ ವಿಡಿಯೊದಲ್ಲಿ ಇರುವವರು ತಮ್ಮ ಚಿತ್ರ ಅಥವಾ ವಿಡಿಯೊವನ್ನು ಅಂತರ್ಜಾಲದಲ್ಲಿ ಹಾಕಲು ಒಪ್ಪಿಗೆ ಸೂಚಿಸಬಹುದು. ಸಾಮಾನ್ಯವಾಗಿ, ಇಂಥವರು ಪ್ರದರ್ಶನದ ಸ್ವಭಾವವುಳ್ಳವರಾಗಿರುತ್ತಾರೆ. ಇಲ್ಲವೇ ವೃತ್ತಿಪರ ಅಥವಾ ಹವ್ಯಾಸಿ ಪೋರ್ನ್ ಕಾರ್ಯಕರ್ತರಾಗಿರುತ್ತಾರೆ.
4. ಕೆಲವು ಸಂದರ್ಭಗಳಲ್ಲಿ ಒಪ್ಪಿಗೆ ಇಲ್ಲದೆಯೂ ಅನ್ಯೋನ್ಯವಾಗಿರುವ ಚಿತ್ರಗಳನ್ನು ದಾಖಲಿಸಿಕೊಳ್ಳಬಹುದು. ಹೋಟೆಲ್ ಕೊಠಡಿಗಳಲ್ಲಿ, ಸ್ಪಾಗಳಲ್ಲಿ, ಬಟ್ಟೆ ಅಂಗಡಿಗಳ ಟ್ರಯಲ್ ಕೋಣೆಗಳಲ್ಲಿ, ಶೌಚಾಲಯಗಳಲ್ಲಿ, ಹಂಚಿಕೆಯ ವಾಸದ ಮನೆಗಳಲ್ಲಿ ಮುಂತಾದ ಕಡೆ ರಹಸ್ಯ ಕ್ಯಾಮರಾ ಇಡುವುದು; ಜನ ಇಂಥ ಕಡೆ ಖಾಸಗಿ ಕ್ಷಣಗಳನ್ನು ಕಳೆಯಲು ಬಂದರೆ, ಅದನ್ನು ಚಿತ್ರೀಕರಿಸಿ, ವಿಡಿಯೊಗಳನ್ನು ಅಂತರ್ಜಾಲದಲ್ಲಿ ಹರಿಬಿಡುವುದು. ಖಾಸಗಿ ವಿಡಿಯೊಗಳಿಗಾಗಿ ಹ್ಯಾಕರ್‌ಗಳು ವ್ಯಕ್ತಿಗಳ ಖಾತೆಗಳಿಗೆ ನುಗ್ಗಿ, ನಂತರ ಹಣಕ್ಕಾಗಿ ಸಂತ್ರಸ್ತರಿಗೆ ಬೇಡಿಕೆ ಇಡುವುದುಂಟು; ಇಲ್ಲವೇ ಸಂತ್ರಸ್ತರಿಗೆ ಕಿರುಕುಳ ನೀಡುವ ಉದ್ದೇಶ ಹೊಂದಿರುವವರಿಗೆ ವಿಡಿಯೊಗಳನ್ನು ರವಾನಿಸಬಹುದು.
ಐಬಿಎಸ್‌ಎ ಘಟನೆಗಳಲ್ಲಿ, ಸಂತ್ರಸ್ತರು ಒಬ್ಬರೇ ಇರಲಿ ಅಥವಾ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿರುವಂತೆ ಸಂತ್ರಸ್ತರ ಸಮೂಹವೇ ಇರಲಿ (ವಿಡಿಯೊಗಳ ಸಂಖ್ಯೆ, ಅವುಗಳ ಹಂಚಿಕೆಯ ಪ್ರಮಾಣ, ಸಂತ್ರಸ್ತರ ಸಂಖ್ಯೆ ಅಧಿಕವಾಗಿರುವಂಥ ಪ್ರಕರಣ), ವ್ಯವಸ್ಥಿತ ಮಧ್ಯಪ್ರವೇಶ ಹಾಗೂ ಕ್ರಮದ ಅವಶ್ಯಕತೆಯಿದೆ.
ನಮ್ಮಲ್ಲಿ ವೈಯಕ್ತಿಕ ಪೋಸ್ಟ್‌ಗಳ ಬಗ್ಗೆ ಆಕ್ಷೇಪಣೆ ದಾಖಲು ಮಾಡಲು ಸೂಕ್ತ ವ್ಯವಸ್ಥೆ ಇಲ್ಲ. ಹೆಚ್ಚು ಚಿತ್ರ/ವಿಡಿಯೊ ಇದ್ದ ಸಂದರ್ಭದಲ್ಲಿ ಸೂಕ್ತ ಸಮಯದಲ್ಲಿ ಮಧ್ಯಪ್ರವೇಶ/ಕ್ರಮ ಜರುಗಿಸದೇ ಇರುವುದು ಕಂಡುಬಂದಿದೆ. ಐಬಿಎಸ್‌ಎ ವಿಷಯಗಳಿಗಾಗಿಯೇ ನಿರ್ದಿಷ್ಟವಾದ ವೇದಿಕೆಗಳು, ಪೋರ್ನ್ ವೆಬ್‌ಸೈಟ್‌ಗಳು, ಫೈಲ್ ಶೇರಿಂಗ್ ಸೌಲಭ್ಯಗಳು, ಕ್ಲೌಡ್ ಸ್ಟೋರೇಜ್ ಸೇವೆಗಳು ಇವೆ. ವೆಬ್‌ಸೈಟ್‌ಗಳು, ವೇದಿಕೆಗಳಿಂದ ಐಬಿಎಸ್‌ಎ ವಿಷಯವನ್ನು ತೆಗೆದುಹಾಕಲು ಸಂತ್ರಸ್ತರು ಅಥವಾ ಅವರ ಪರವಾಗಿ ಇತರರು ಅವರನ್ನು ಸಂಪರ್ಕಿಸಲು ನಡೆಸುವ ಪ್ರಯತ್ನಗಳು ಸಫಲವಾಗುವುದೇ ಇಲ್ಲ.
ಜೊತೆಗೆ, ಇಂತಹ ಆನ್‌ಲೈನ್ ವೇದಿಕೆಗಳನ್ನು ಸಂಪರ್ಕಿಸಿದಾಗ, ಸಂತ್ರಸ್ತರು ಯಾವ ವಿಷಯಗಳನ್ನು ತೆರವುಗೊಳಿಸಬೇಕು ಎಂದು ಬಯಸುವರೋ, ಆ ವೇದಿಕೆಗಳು ಅವುಗಳಿಗೆ ಇನ್ನೂ ಹೆಚ್ಚು ಪ್ರಾಶಸ್ತ್ಯ ಕೊಡುವ ಸಾಧ್ಯತೆ ಇರುತ್ತದೆ. ಅಲ್ಲದೆ, ಹೀಗೆ ಮಾಡುವ ವೇಳೆ ವೇದಿಕೆಗಳು ಸಂತ್ರಸ್ತರ ಹೆಸರು, ವಿಳಾಸ, ಸಾಮಾಜಿಕ ಜಾಲತಾಣಗಳ ಅಕೌಂಟುಗಳು ಮತ್ತು ಇತರ ಮಾಹಿತಿ ಪಡೆದುಕೊಳ್ಳಬಹುದು.
ಐಬಿಎಸ್‌ಎ ವಿಷಯಗಳನ್ನು ವಿವಿಧ ವೇದಿಕೆಗಳು, ವೆಬ್‌ಸೈಟ್‌ಗಳಿಗೆ ಅಪ್‌ಲೋಡ್ ಮತ್ತು ಮರುಅಪ್‌ಲೋಡ್ ಮಾಡುವುದನ್ನು ತಡೆಯಲು stopncii.orgಗೆ ವರದಿ ಮಾಡುವುದು ಒಂದು ಮುಖ್ಯ ವಿಧಾನವಾಗಿದೆ. ಈ ಮೂಲಕ ಚಿತ್ರ/ವಿಡಿಯೊ ಫೇಸ್‌ಬುಕ್, ಟಿಕ್‌ಟಾಕ್, ರೆಡ್ಡಿಟ್, ಇನ್‌ಸ್ಟಾಗ್ರಾಂ, ಬಂಬಲ್ ಸ್ನ್ಯಾಪ್, ಥ್ರೆಡ್ಸ್, ಓನ್ಲಿಫ್ಯಾನ್ಸ್, ಪೋರ್ನ್‌ಹಬ್ ಮತ್ತು ನಿಯಾನ್‌ಟಿಕ್‌ನಂಥ ವೇದಿಕೆಗಳಲ್ಲಿ ಹಂಚಿಕೆಯಾಗುವುದನ್ನು ತಡೆಯಬಹುದಾಗಿದೆ.
ಐಬಿಎಸ್‌ಎ ವಿಷಯಗಳನ್ನು ತೆಗೆದುಹಾಕಲು ಈ ಕೆಳಕಂಡ ವೇದಿಕೆಗಳಿಗೆ ನೇರವಾಗಿ ಮನವಿ ಮಾಡಿಕೊಳ್ಳ ಬಹುದು: ಫೇಸ್‌ಬುಕ್, ಗೂಗಲ್, ಮೈಕ್ರೋಸಾಫ್ಟ್, ಎಕ್ಸ್, ಯಾಹೂ, 4Chan, About.me, Ask, AOL, Flickr, Lycos, MySpace and Snapchat. Reddit, PornHub, Imgur, Photobucket ಮತ್ತು ವಿಕಿಪೀಡಿಯಾ ವೇದಿಕೆಗಳಲ್ಲಿಯೂ ಚಿತ್ರ/ವಿಡಿಯೊ ತೆಗೆದು ಹಾಕುವ ತಂತ್ರಜ್ಞಾನ ಲಭ್ಯವಿದೆ.
ಮತ್ತೊಂದು ರೀತಿಯಲ್ಲಿಯೂ ಹಂಚಿಕೆಗೆ ತಡೆ ಹಾಕಬಹುದು. ಪ್ರತಿ ಸರ್ಚ್ ಇಂಜಿನ್‌ಗೂ ಈ ಚಿತ್ರಗಳು ಮತ್ತು ವಿಡಿಯೊಗಳು ಮತ್ತು ಅವು ಇರುವ ಯುಆರ್‌ಎಲ್‌ಗಳನ್ನು ಡೀ–ಇಂಡೆಕ್ಸ್ ಮಾಡುವಂತೆ ಕೋರಿಕೆ ಸಲ್ಲಿಸುವುದು. ಡೀ–ಇಂಡೆಕ್ಸ್ ಆಗಿರುವ ವಿಷಯಗಳು ಅಂತರ್ಜಾಲದಲ್ಲಿ ಇದ್ದರೂ ಹುಡುಕಾಟ ಮಾಡಿದಾಗ ಸಿಗುವುದಿಲ್ಲ. ಇದರಿಂದ ಇವು ಜನರಿಗೆ ತಲುಪುವುದು ನಿಧಾನವಾಗಿ, ಹರಡುವಿಕೆ ಕಡಿಮೆಯಾಗುತ್ತದೆ. ಉದಾಹರಣೆಗೆ, ವೈಯಕ್ತಿಕ ವಿಷಯವನ್ನು ತೆಗೆದುಹಾಕಲು ಮನವಿ ಮಾಡಬಹುದಾದ ಅವಕಾಶವನ್ನು ಗೂಗಲ್ ಸರ್ಚ್ ತನ್ನ ಸೇವಾ ನಿಯಮದಲ್ಲಿ ಕಲ್ಪಿಸಿದೆ.
ಘಟನೆ ನಂತರ ನಡೆಯಬಹುದಾದ ಆನ್‌ಲೈನ್ ಹಿಂಸೆ, ಕಿರುಕುಳ ಮತ್ತು ನಿಂದನೆಗಳನ್ನು ಎದುರಿಸಲು, ತಡೆಯಲು ಹಾಗೂ ನಿಲ್ಲಿಸಲು ಸಂತ್ರಸ್ತೆಯರಿಗೆ ತಾಂತ್ರಿಕ ಬೆಂಬಲದ ಅಗತ್ಯವೂ ಇರುತ್ತದೆ. ಘಟನೆಯು ಅವರನ್ನು ‘ಡಿಜಿಟಲ್ ದಾಳಿ’ಗೆ ಈಡು ಮಾಡಬಹುದಾಗಿದೆ.
ಡಿಜಿಟಲ್ ದಾಳಿಯು ಈ ಕೆಳಕಂಡ ರೀತಿಗಳಲ್ಲಿ ನಡೆಯಬಹುದು: ಪಾಸ್‌ವರ್ಡ್ ಕದಿಯುವುದು,
ಇ–ಮೇಲ್ ಅಕೌಂಟ್, ಸಾಮಾಜಿಕ ಜಾಲತಾಣದ ಖಾತೆಗಳನ್ನು ಮತ್ತು ಸಾಧನಗಳನ್ನು ಹ್ಯಾಕ್ ಮಾಡುವುದು; ಅವರಿಗೆ ಮತ್ತಷ್ಟು ಕಿರುಕುಳ ನೀಡಲು ಏನಾದರೂ ಸಿಗುವುದೇ ಎಂದು ಹುಡುಕುವುದು, ಅವರ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವುದು, ಅವರ ಚಿತ್ರಗಳನ್ನು, ವಿಡಿಯೊಗಳನ್ನು ನಗ್ನ ರೂಪದಲ್ಲಾಗಲಿ, ಲೈಂಗಿಕ ಕ್ರಿಯೆಗಳಲ್ಲಿ ತೊಡಗಿರುವಂತೆ ಆಗಲಿ ಅಂತರ್ಜಾಲದಲ್ಲಿ ಪೋಸ್ಟ್ ಮಾಡುವ ಸಾಧ್ಯತೆಗಳಿರುತ್ತವೆ.
ಒಂದು ವೇಳೆ ಚಿತ್ರಗಳನ್ನಾಗಲಿ, ವಿಡಿಯೊಗಳನ್ನಾಗಲಿ, ಸಂತ್ರಸ್ತರಿಂದಲೋ ಅಥವಾ ಅವರ ಪರಿಚಿತರಿಂದಲೋ ಕಳ್ಳತನ ಮಾಡಿದ್ದಾದರೆ, ಅದನ್ನು ಪುನರಾವರ್ತಿಸುವುದನ್ನು ತಡೆಗಟ್ಟಬೇಕಿದೆ. ಸಂತ್ರಸ್ತರಿಗೆ ಎದುರಾಗಬಹುದಾದ ಅಪಾಯಗಳೇನು ಮತ್ತು ಅವರಿಗೆ ಖಚಿತವಾಗಿ ಬೇಕಾದ ನೆರವು ಎಂಥದ್ದು ಎನ್ನುವುದನ್ನು ಡಿಜಿಟಲ್ ರಕ್ಷಣೆಯ ತಜ್ಞರು ಪರಿಶೀಲಿಸಿ ಹೇಳಬೇಕು. ಹೀಗೆ ಪರಿಶೀಲಿಸುವಾಗ ಮತ್ತು ನಂತರದ ಕ್ರಮ ಜರುಗಿಸುವಾಗ ಯಾರಿಗೂ ತೊಂದರೆಯಾಗದಂತೆ ಎಚ್ಚರ ವಹಿಸಬೇಕು.
ದಕ್ಷಿಣ ಕೊರಿಯಾದಂತಹ ದೇಶಗಳಲ್ಲಿ ಐಬಿಎಸ್‌ಎ ಪ್ರಕರಣಗಳು ಅಧಿಕವಾಗಿದ್ದು, ಅಲ್ಲಿ ಅತಿ ವೈಯಕ್ತಿಕ ಎನ್ನುವ ಚಿತ್ರಗಳನ್ನು ಅವರ ಸಮ್ಮತಿಯಿಲ್ಲದೇ ಚಿತ್ರೀಕರಿಸದಂತೆ ಮತ್ತು ಬಿತ್ತರಿಸದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರಿಕೆಯ ಫಲಕಗಳನ್ನು ಪ್ರದರ್ಶಿಸಲಾಗಿದೆ. ಎಲ್ಲ ರೀತಿಯ ಮಧ್ಯಪ್ರವೇಶ/ನೆರವಿನ ಹಂತಗಳಲ್ಲಿ, ಸಂತ್ರಸ್ತರ ದ್ವನಿ, ಅನುಭವ ಮತ್ತು ಅವಶ್ಯಕತೆಗಳೇ ಪ್ರಮುಖ ಆಗಬೇಕಿದ್ದು, ತಕ್ಷಣಕ್ಕೆ ಮತ್ತು ದೀರ್ಘಕಾಲದವರೆಗೆ ಅವರ ಘನತೆ, ಗೋಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡುವ ಅಗತ್ಯವಿದೆ.
ಈ ಲೇಖನದ ಇಂಗ್ಲಿಷ್ ಅವತರಣಿಕೆಯು ‘ಫ್ರೀ ಸ್ಪೀಚ್ ಕಲೆಕ್ಟೀವ್’ ವೆಬ್ ಪೋರ್ಟಲ್‌ನಲ್ಲಿ ಪ್ರಕಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.