ಶುಕ್ರವಾರ, 4 ಜುಲೈ 2025
×
ADVERTISEMENT
ಆಳ–ಅಗಲ | ಚಿರತೆಗಳ ಸಂಖ್ಯೆ ಏರುತ್ತಿದೆ, ಜತೆಗೆ ಸಂಘರ್ಷವೂ
ಆಳ–ಅಗಲ | ಚಿರತೆಗಳ ಸಂಖ್ಯೆ ಏರುತ್ತಿದೆ, ಜತೆಗೆ ಸಂಘರ್ಷವೂ
ಫಾಲೋ ಮಾಡಿ
Published 29 ಫೆಬ್ರುವರಿ 2024, 23:30 IST
Last Updated 29 ಫೆಬ್ರುವರಿ 2024, 23:30 IST
Comments
ಅಧಿಕಗೊಂಡ ಮಾನವ–ಚಿರತೆ ಸಂಘರ್ಷ:
ಚಿರತೆಗಳ ಸಂಖ್ಯೆ ಅಧಿಕಗೊಂಡಿದೆ ಎನ್ನುವುದು ನಿಜವಾದರೂ ಚಿರತೆಗಳನ್ನು ಬೇಟೆಯಾಡುವುದು, ಅವುಗಳನ್ನು ಕೊಲ್ಲುವ ಮನೋವೃತ್ತಿ ಹಾಗೆಯೇ ಇದೆ. ಮಧ್ಯ ಭಾರತದ ಪ್ರದೇಶದಲ್ಲಿ ಚಿರತೆಗಳನ್ನು ಬೇಟೆಯಾಡುವ ಪ್ರವೃತ್ತಿಯು ಅಧಿಕಗೊಂಡಿದೆ. ಜೊತೆಗೆ, ನಾಲ್ಕೂ ವಲಯಗಳಲ್ಲಿ ಮಾನವ–ಚಿರತೆ ಸಂರ್ಘರ್ಷವು ಭಾರಿ ಸಂಖ್ಯೆಯಲ್ಲಿದೆ.
ಕರ್ನಾಟಕ: ಸಂರಕ್ಷಿತ ಪ್ರದೇಶಗಳಾಚೆಯೇ ಚಿರತೆಗಳು ಹೆಚ್ಚು
ರಾಜ್ಯದಲ್ಲಿನ ಸಂರಕ್ಷಿತ ಪ್ರದೇಶಗಳಲ್ಲಿ ಚಿರತೆಗಳು ದೊಡ್ಡ ಸಂಖ್ಯೆಯಲ್ಲಿ ಇವೆಯಾದರೂ, ಸಂರಕ್ಷಿತ ಪ್ರದೇಶಗಳ ಹೊರಗೇ ಹೆಚ್ಚು ಚಿರತೆಗಳಿವೆ ಎನ್ನುತ್ತದೆ ಈ ವರದಿ. ಅಲ್ಲದೆ, ಈ ಹಿಂದೆ ಚಿರತೆಗಳು ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದ ಪ್ರದೇಶಗಳಲ್ಲೂ ಈಗ ಚಿರತೆಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಚಿರತೆಗಳ ಆವಾಸಸ್ಥಾನ ವಿಸ್ತರಿಸುತ್ತಿರುವುದನ್ನು ಇದು ಸೂಚಿಸುತ್ತದೆ. ಸಂರಕ್ಷಿತ ಪ್ರದೇಶಗಳು ಮತ್ತು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಚಿರತೆಗಳು ಆಹಾರಕ್ಕಾಗಿ ಕಾಡು ಪ್ರಾಣಿಗಳನ್ನೇ ಅವಲಂಬಿಸಿವೆ. ಆದರೆ ಅರೆಮಲೆನಾಡು ಮತ್ತು ಬಯಲುಸೀಮೆಯ ಜಿಲ್ಲೆಗಳಲ್ಲಿ ಚಿರತೆಗಳು ತಮ್ಮ ಆಹಾರಕ್ಕಾಗಿ ಪ್ರಧಾನವಾಗಿ ಜಾನುವಾರುಗಳು ಮತ್ತು ನಾಯಿಗಳನ್ನೇ ಅವಲಂಬಿಸಿವೆ. 2018ಕ್ಕೆ ಹೋಲಿಸಿದರೆ, 2022ರಲ್ಲಿ ಇಂತಹ ಅವಲಂಬನೆ ಹೆಚ್ಚಾಗಿದೆ. ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಮಂಡ್ಯ ಮತ್ತು ಮೈಸೂರಿನಲ್ಲಿ ಇಂತಹ ಪ್ರವೃತ್ತಿ ಢಾಳಾಗಿ ಕಾಣುತ್ತಿದೆ. ಕೋಲಾರ, ಕೊಪ್ಪಳ ಮತ್ತು ಬಳ್ಳಾರಿಯಲ್ಲಿ ಚಿರತೆಗಳು ಈ ರೀತಿ ವರ್ತಿಸುತ್ತಿರಲಿಲ್ಲ. ಆದರೆ ಈಚಿನ ವರ್ಷಗಳಲ್ಲಿ ಇಲ್ಲೂ ಅದೇ ರೀತಿಯ ವರ್ತನೆ ತಲೆದೋರುತ್ತಿದೆ. ಈ ಕಾರಣದಿಂದಲೇ ಈ ಪ್ರದೇಶಗಳಲ್ಲಿ ಚಿರತೆ–ಮಾನವ ಸಂಘರ್ಷ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದಕ್ಕೆ ಅಭಿವೃದ್ಧಿ ಚಟುವಟಿಕೆಗಳೇ ಪ್ರಮುಖ ಕಾರಣ. ಗಣಿಗಾರಿಕೆ, ರಸ್ತೆ–ಹೆದ್ದಾರಿ ನಿರ್ಮಾಣ, ಜಲಾಶಯ–ಕಿರುಜಲಾಶಯಗಳ ನಿರ್ಮಾಣದಿಂದ ಚಿರತೆಗಳ ಬಲಿ ಪ್ರಾಣಿಗಳ ಆವಾಸಸ್ಥಾನಕ್ಕೆ ಧಕ್ಕೆಯಾಗಿದೆ. ಬಲಿ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ ಚಿರತೆಗಳು ಆಹಾರ ಅರಸುತ್ತಾ ಮಾನವ ವಸತಿ ಪ್ರದೇಶಗಳತ್ತ ಬರುತ್ತಿವೆ. ಜಾನುವಾರುಗಳು ಮತ್ತು ನಾಯಿಗಳನ್ನು ಬೇಟೆಯಾಡುತ್ತಿವೆ (2019–2022ರ ನಡುವೆ ಮಂಡ್ಯ ಜಿಲ್ಲೆಯೊಂದರಲ್ಲೇ ಚಿರತೆಗಳು 516 ಜಾನುವಾರುಗಳನ್ನು ಬಲಿ ಪಡೆದಿವೆ). ಇದೇ ಸಂದರ್ಭದಲ್ಲಿ ಚಿರತೆ–ಮಾನವ ಸಂಘರ್ಷ ನಡೆಯುತ್ತಿದೆ. ದೇಶದಲ್ಲಿ ಅತಿಹೆಚ್ಚು ಚಿರತೆ–ಮಾನವ ಸಂಘರ್ಷ ಪ್ರಕರಣಗಳು ದಾಖಲಾಗಿರುವುದು ಕರ್ನಾಟಕದಲ್ಲಿ. 2018–2023ರ ಮಧ್ಯೆ ರಾಜ್ಯದಲ್ಲಿ ಇಂತಹ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಇಂತಹ ಸಂಘರ್ಷಗಳನ್ನು ತಪ್ಪಿಸಲು ಪರಿಣಾಮಕಾರಿಯಾದ ಪರಿಹಾರ ಕ್ರಮವನ್ನು ರೂಪಿಸಬೇಕಿದೆ. ಅಂತಹ ಕೆಲಸಗಳು ತುರ್ತಾಗಿ ಆಗಬೇಕಿದೆ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT