ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಹಮಾಸ್‌–ಇಸ್ರೇಲ್‌ ಸಂಘರ್ಷ– ಕ್ರೌರ್ಯ ಮೆರೆದ ಯುದ್ಧಾಪರಾಧ
ಆಳ–ಅಗಲ: ಹಮಾಸ್‌–ಇಸ್ರೇಲ್‌ ಸಂಘರ್ಷ– ಕ್ರೌರ್ಯ ಮೆರೆದ ಯುದ್ಧಾಪರಾಧ
ಗಾಜಾ ಮತ್ತು ಗಾಜಾಪಟ್ಟಿಯ ಮೇಲೆ ದಾಳಿ ನಡೆಸುವಾಗಲೆಲ್ಲಾ ಇಸ್ರೇಲ್‌ ಯುದ್ಧಾಪರಾಧ ಎಸಗಿದೆ, ಎಸಗುತ್ತಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ.
Published 16 ಅಕ್ಟೋಬರ್ 2023, 0:31 IST
Last Updated 16 ಅಕ್ಟೋಬರ್ 2023, 0:31 IST
ಅಕ್ಷರ ಗಾತ್ರ

ಗಾಜಾ ಮತ್ತು ಗಾಜಾಪಟ್ಟಿಯ ಮೇಲೆ ದಾಳಿ ನಡೆಸುವಾಗಲೆಲ್ಲಾ ಇಸ್ರೇಲ್‌ ಯುದ್ಧಾಪರಾಧ ಎಸಗಿದೆ, ಎಸಗುತ್ತಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ಆದರೆ, ‘ಹಮಾಸ್‌ ಉಗ್ರರು ಇಸ್ರೇಲ್‌ ನಾಗರಿಕರ ಮೇಲೆ ದಾಳಿ ನಡೆಸಿದ್ದಾರೆ. ಮಕ್ಕಳನ್ನು ಕೊಂದಿದ್ದಾರೆ’ ಎಂದು ಇಸ್ರೇಲ್‌ ಹೇಳುತ್ತಲೇ ಇದೆ. ಇನ್ನೊಂದೆಡೆ ಇಸ್ರೇಲ್‌ ದಾಳಿಗೆ ಬಲಿಯಾದ ಮಕ್ಕಳ ಮತ್ತು ನಾಗರಿಕರ ಚಿತ್ರಗಳನ್ನು ಪ್ಯಾಲೆಸ್ಟೀನಿಯನ್ನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನಮ್ಮ ನೆಲವನ್ನು ನಮಗೆ ನೀಡಿ ಎಂದು ಆಗ್ರಹಿಸುತ್ತಿದ್ದಾರೆ. ಇದರ ಮಧ್ಯೆ ಇಸ್ರೇಲ್‌ನ ನಡೆಯನ್ನು ಖಂಡಿಸಿ ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯಾದಲ್ಲಿ ಲಕ್ಷಾಂತರ ಮಂದಿ ಭಾನುವಾರ ಪ್ರತಿಭಟನೆ ನಡೆಸಿದ್ದಾರೆ. ಇಸ್ರೇಲ್‌ಗೆ ನೀಡುತ್ತಿರುವ ಬೆಂಬಲವನ್ನು ವಾಪಸ್‌ ಪಡೆಯಿರಿ ಎಂದು ತಮ್ಮ ಸರ್ಕಾರವನ್ನು ಒತ್ತಾಯಿಸಿದ್ದಾರೆ.

––––––

‘ಅದು 2014ರ ರಂಜಾನ್‌ ದಿನಗಳು. ಗಾಜಾ ನಗರವನ್ನು ಒಳಗೊಂಡಂತೆ ಇಡೀ ಗಾಜಾಪಟ್ಟಿಯ ಮೇಲೆ ಇಸ್ರೇಲ್‌ನ ವಾಯುಪಡೆ 51 ದಿನ ನಿರಂತರವಾಗಿ ದಾಳಿ ನಡೆಸಿತ್ತು. ಈ ಅವಧಿಯಲ್ಲಿ ಇಸ್ರೇಲ್‌ ವಾಯುಪಡೆಯೊಂದೇ 6,000ಕ್ಕೂ ಹೆಚ್ಚು ವೈಮಾನಿಕ ದಾಳಿಗಳನ್ನು ನಡೆಸಿತ್ತು. ಈ ಎಲ್ಲಾ ದಾಳಿಗಳಲ್ಲಿ ಅತ್ಯಂತ ನಿಖರವಾಗಿ ಗುರಿ ತಲುಪಬಲ್ಲ ಗುರಿನಿರ್ದೇಶಿತ ಬಾಂಬ್‌ಗಳು ಮತ್ತು ಕಿರು ಕ್ಷಿಪಣಿಗಳನ್ನು ಇಸ್ರೇಲ್‌ ಬಳಸಿತ್ತು. ದಾಳಿ ಕರಾರುವಕ್ಕಾಗಿ ನಡೆಯಲಿ ಎಂದು ಇಸ್ರೇಲ್‌ ಉಪಗ್ರಹ ಚಿತ್ರಗಳನ್ನೂ ಬಳಸಿಕೊಂಡಿತ್ತು. ಆದರೆ ಬಹುತೇಕ ದಾಳಿಗಳು ಜನವಸತಿ ಪ್ರದೇಶದ ಮೇಲೆಯೇ ನಡೆದಿದ್ದವು. ಜನರು ಉಪವಾಸ ಮುರಿಯಲು ಒಟ್ಟಿಗೆ ಸೇರಿದ ಮತ್ತು ಇಫ್ತಾರ್‌ ಕೂಟದ ಸಂದರ್ಭದಲ್ಲಿಯೇ ಈ ದಾಳಿಗಳು ನಡೆದಿದ್ದವು. ಜನರನ್ನು ಗುರಿಯಾಗಿಸಿಕೊಂಡು ವಸತಿ ಪ್ರದೇಶದ ಮೇಲೆ ದಾಳಿ ನಡೆಸಿದ ಕಾರಣಕ್ಕೇ ಈ ದಾಳಿಗಳಲ್ಲಿ ಮೃತಪಟ್ಟ ನಾಗರಿಕರ ಸಂಖ್ಯೆ ಹೆಚ್ಚು ಇರಬಹುದು.

‘ಮನೆಯಲ್ಲಿ ಇರುವುದಕ್ಕೇ ಭಯವಾಗುತ್ತದೆ. ಹಮಾಸ್‌ಗಳು ಸುರಂಗದೊಳಗಿಂದ ಬಂದು ರಾಕೆಟ್‌ ದಾಳಿ ನಡೆಸುತ್ತಾರೆ. ಆ ರಾಕೆಟ್‌ಗಳು ನಮ್ಮ ತಲೆಯ ಮೇಲೆ ಎಲ್ಲಿ ಬೀಳುತ್ತದೆಯೋ ಎಂಬ ಭಯದಲ್ಲಿ ಬದುಕಬೇಕಾಗುತ್ತದೆ. ಇಸ್ರೇಲ್‌ ಸೈರನ್‌ ಕೂಗಿಸಿ ನಡೆಸುವ ವಾಯುದಾಳಿಗಿಂತ, ಹಮಾಸ್‌ ಸುರಂಗದ ಮೂಲಕ ನಡೆಸುವ ರಾಕೆಟ್‌ ದಾಳಿಯೇ ಹೆಚ್ಚು ಭೀಕರವಾಗಿರುತ್ತದೆ’ ಎಂಬುದು ಇಸ್ರೇಲಿ ಮಹಿಳೆಯ ಆತಂಕ’.

ಇಸ್ರೇಲ್‌–ಪ್ಯಾಲೆಸ್ಟೀನ್‌ನ ಮಧ್ಯೆ 2014ರಲ್ಲಿ ನಡೆದ ಸಂಘರ್ಷದಲ್ಲಿನ ಯುದ್ಧಾಪರಾಧಗಳ ಬಗ್ಗೆ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಸಿದ್ಧಪಡಿಸಿದ ಸತ್ಯಶೋಧನಾ ವರದಿಯ ಆಯ್ದ ಭಾಗಗಳಿವು. 

ನಾವು ಎಚ್ಚರಿಕೆ ನೀಡಿ, ದಾಳಿ ನಡೆಸುವುದರಿಂದ ಪ್ಯಾಲೆಸ್ಟೀನಿಯನ್ನರಿಗೆ ತಪ್ಪಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಇಸ್ರೇಲ್‌ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿತ್ತು ಎಂದು 2014ರ ಸತ್ಯಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇಸ್ರೇಲ್‌ ನಡೆಸುತ್ತಿರುವ ದಾಳಿಗಳಿಗೇ ಹೆಚ್ಚು ಜನರು ಬಲಿಯಾಗುತ್ತಿದ್ದಾರೆ ಎಂಬುದನ್ನು ಅಂಕಿಅಂಶಗಳು ಹೇಳುತ್ತವೆ. 2014ರಲ್ಲಿ ನಡೆದ ಸಂಘರ್ಷದಲ್ಲಿ ಹಮಾಸ್‌ ನಡೆಸಿದ ದಾಳಿಯಲ್ಲಿ ಮೃತಪಟ್ಟ ಇಸ್ರೇಲಿಗಳ ಸಂಖ್ಯೆ 88. ಆದರೆ, ಆಗ ಇಸ್ರೇಲ್‌ ದಾಳಿಯಲ್ಲಿ ಮೃತಪಟ್ಟ ಪ್ಯಾಲೆಸ್ಟೀನಿಯನ್ನರ ಸಂಖ್ಯೆ 2,239.

ಪ್ಯಾಲೆಸ್ಟೀನ್‌ ಸಂಘರ್ಷದಲ್ಲಿ ಇಸ್ರೇಲ್‌, ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳು ಮತ್ತು ಮಾನವ ಹಕ್ಕುಗಳ ರಕ್ಷಣೆಯ ಬದ್ಧತೆಯನ್ನು ಪಾಲಿಸುತ್ತಿಲ್ಲ. ನಾಗರಿಕರ ಮೇಲೆ, ನಿರಾಶ್ರಿತ ಶಿಬಿರಗಳ ಮೇಲೆ, ಆಸ್ಪತ್ರೆ, ಶಾಲೆಗಳ ಮೇಲೆ ದಾಳಿ ನಡೆಸಿದೆ. ತಾನು ನಡೆಸಿದ ದಾಳಿಗಳ ಬಗ್ಗೆ ಇಸ್ರೇಲ್‌ ಪಾರದರ್ಶಕವಾಗಿಲ್ಲ. ಅಗತ್ಯ ಮಾಹಿತಿಗಳನ್ನು ಒದಗಿಸುವುದಿಲ್ಲ ಎಂದು ಸಾಮಾನ್ಯ ಸಭೆಯ ಸತ್ಯಶೋಧನಾ ವರದಿಯುದ್ದಕ್ಕೂ ಪದೇ–ಪದೇ ಹೇಳಲಾಗಿದೆ. ಹಮಾಸ್‌ ಸಹ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಮೂಲಕ ಯುದ್ಧಾಪರಾಧಕ್ಕೆ ಕಾರಣವಾಗಿದೆ ಎಂದೂ ವರದಿಯಲ್ಲಿ ಹೇಳಿದೆ. ಸಾಮಾನ್ಯ ಸಭೆಯಲ್ಲಿ ಈ ವರದಿಯಲ್ಲಿ ಮಂಡಿಸಿ, ಮತಕ್ಕೆ ಹಾಕಲಾಗಿತ್ತು. ಯುದ್ಧಾಪರಾಧಕ್ಕೆ ಹೊಣೆಗಾರಿಕೆ ನಿಗದಿ ಮಾಡುವುದು ಈ ವರದಿಯ ಉದ್ದೇಶವಾಗಿತ್ತು. ಆದರೆ, ಬ್ರಿಟನ್‌ ಒಳಗೊಂಡಂತೆ ಐರೋಪ್ಯ ಒಕ್ಕೂಟದ ಎಲ್ಲಾ ದೇಶಗಳೂ ಸೇರಿ ಒಟ್ಟು 41 ದೇಶಗಳು ಈ ವರದಿಯನ್ನು ಒಪ್ಪಿಕೊಂಡವು. ವರದಿಯ ವಿರುದ್ಧ ಮತ ಚಲಾಯಿಸಿದ್ದು ಅಮೆರಿಕ ಮತ್ತು ಭಾರತ ಮಾತ್ರ. ಇಸ್ರೇಲ್‌ ಯುದ್ಧಾಪರಾಧ ಎಸಗಿಲ್ಲ ಎಂದು ಅಮೆರಿಕ ಹೇಳಿತ್ತು.

ಇದೇ ತಿಂಗಳ ಆರಂಭದಲ್ಲಿ ಹಮಾಸ್‌, ಇಸ್ರೇಲ್‌ ಮೇಲೆ ಅಪ್ರಚೋದಿತವಾಗಿ ದಾಳಿ ನಡೆಸಿತು. ಅದಕ್ಕೆ ಪ್ರತೀಕಾರವಾಗಿ ಇಸ್ರೇಲ್‌, ಹಮಾಸ್‌ ಮೇಲೆ ಯುದ್ಧ ಘೋಷಿಸಿತು. ಆದರೆ, ಗಾಜಾ ಮತ್ತು ಗಾಜಾಪಟ್ಟಿಯ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಗಳಿಗೆ ಗುರಿಯಾಗುತ್ತಿರುವವರಲ್ಲಿ ಹೆಚ್ಚಿನ ಸಂಖ್ಯೆ ಮಕ್ಕಳದು ಮತ್ತು ನಾಗರಿಕರದು. ಗಾಜಾವನ್ನು ಬಿಟ್ಟು ಹೋಗಿ ಎಂದು ಪ್ಯಾಲೆಸ್ಟೀನ್‌ ನಾಗರಿಕರಿಗೆ ಇಸ್ರೇಲ್‌ ಎಚ್ಚರಿಕೆ ನೀಡಿದೆ. ಆದರೆ, ಗಾಜಾಪಟ್ಟಿಯ ಎಲ್ಲೆಡೆ ದಾಳಿ ನಡೆಸಲಾಗುತ್ತಿದೆ. 2014ರ ಸತ್ಯಶೋಧನಾ ವರದಿಯ ಅಂಗೀಕಾರದ ಸಂದರ್ಭದಲ್ಲಿ, ಇಸ್ರೇಲ್‌ ಯುದ್ಧಾಪರಾಧ ಎಸಗಿಲ್ಲ ಎಂದು ಹೇಳಿದ್ದ ದೇಶಗಳು ಇಂದೂ ಇಸ್ರೇಲ್‌ ಪರವಾಗಿ ನಿಂತಿವೆ. ಆ ಗುಂಪಿಗೆ ಈಗ ಬ್ರಿಟನ್‌ ಸೇರ್ಪಡೆಯಾಗಿದೆ.

ಇಸ್ರೇಲ್‌ಗೆ ನಾಗರಿಕರೇ ಗುರಿ


ಇಸ್ರೇಲ್‌ ಹಾಗೂ ಹಮಾಸ್‌ ಬಂಡುಕೋರರ ನಡುವಣ ಯುದ್ಧದಲ್ಲಿ ಎರಡೂ ಕಡೆಯವರಿಗೆ ನಾಗರಿಕರೇ ಮುಖ್ಯ ಗುರಿಯಾಗಿದ್ದಾರೆ.  ಗಾಜಾಪಟ್ಟಿಯಲ್ಲಿನ ನಾಗರಿಕ ಮೇಲೆ ಇಸ್ರೇಲ್‌ ದಾಳಿ ನಡೆಸುತ್ತಲೇ ಬಂದಿದ್ದು, ಯುದ್ಧಾಪರಾಧ ಎಸಗಿದೆ ಎನ್ನುತ್ತದೆ ವಿಶ್ವಸಂಸ್ಥೆ. ವಿಶ್ವಸಂಸ್ಥೆಯ ವರದಿಯ ಮುಖ್ಯಾಂಶಗಳು ಇಂತಿವೆ

l ನಾಗರಿಕರ ಮೇಲೆ ದಾಳಿ ನಡೆಸಬಾರದು ಎಂಬುದು ಯುದ್ಧದ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮ. ಆದರೆ ಇಸ್ರೇಲ್‌, ನಾಗರಿಕರನ್ನೇ ಗುರಿಮಾಡಿಕೊಂಡು ದಾಳಿ ನಡೆಸುತ್ತದೆ. ‘ಮನೆಗಳನ್ನು ತೊರೆಯುವಂತೆ ನಾವು ಜನರಿಗೆ ಎಚ್ಚರಿಕೆ ಸಂದೇಶ ನೀಡಿದ ನಂತರವೇ ದಾಳಿ ಮಾಡುತ್ತೇವೆ. ಆನಂತರ ನಮ್ಮ ಎದುರಿಗೆ ಜನರು ಕಂಡರೆ ಅವರನ್ನು ನಮ್ಮ ಶತ್ರು ಎಂದೇ ಭಾವಿಸಬೇಕಾಗುತ್ತದೆ. ಯಾಕೆಂದರೆ, ಎಚ್ಚರಿಕೆ ನೀಡಿದ ಮೇಲೆಯೂ ಅವರು ಜಾಗ ಬಿಡಲಿಲ್ಲ ಎಂದರೆ ಅವರು ಶತ್ರುವೇ ಆಗಿರುತ್ತಾರೆ’ ಎನ್ನುತ್ತದೆ ಇಸ್ರೇಲ್‌

l ಜನವಸತಿ ಪ್ರದೇಶ, ಕಟ್ಟಡವೇ ಇಸ್ರೇಲ್‌ ಸೇನೆಯ ಗುರಿ. ವಿದ್ಯುತ್‌ ಸಂಪರ್ಕ ವ್ಯವಸ್ಥೆ, ನೀರು ಮತ್ತು ನೈಮರ್ಲ್ಯ ವ್ಯವಸ್ಥೆಯ ಮೂಲಸೌಕರ್ಯಗಳ ಮೇಲೆ ಕೂಡ ಇಸ್ರೇಲ್‌ ದಾಳಿ ನಡೆಸುತ್ತದೆ

l ರಾತ್ರಿ ಅಥವಾ ಬೆಳಗಿನ ಜಾವದಲ್ಲಿ ಯುದ್ಧ ಮಾಡಬಾರದು ಎಂಬ ನಿಯಮವಿದೆ. ಆದರೆ, ಇಸ್ರೇಲ್‌ ಸೇನೆಯು ಇದೇ ಸಮಯದಲ್ಲಿ ನಾಗರಿಕ ಮೇಲೆ ದಾಳಿ ನಡೆಸುತ್ತದೆ. ಕುಟುಂಬದ ಎಲ್ಲ ಸದಸ್ಯರು ಮನೆಯಲ್ಲಿ ಇರುವ, ಊಟ ಮಾಡುವ ವೇಳೆ, ಮಲಗಿರುವಾಗ ದಾಳಿ ನಡೆಸಲಾಗುತ್ತದೆ ಮತ್ತು ಇಡೀ ಕುಟುಂಬವನ್ನು ಕೊಲ್ಲಲಾಗುತ್ತದೆ. ವಸತಿ ಪ್ರದೇಶದ ಮೇಲೆ ವಿಧ್ವಂಸಕಾರಿ ಶಸ್ತ್ರಾಸ್ತ್ರಗಳನ್ನು ಇಸ್ರೇಲ್‌ ಪ್ರಯೋಗಿಸುತ್ತದೆ

l ನಾಗರಿಕರ ಮೇಲೆ ದಾಳಿ ನಡೆಸುವ ಮುನ್ನ ಎಚ್ಚರಿಕೆ ಸಂದೇಶ ನೀಡಬೇಕು ಎಂಬ ನಿಯಮವನ್ನು ಇಸ್ರೇಲ್‌ ಎಂದಿಗೂ ಪಾಲಿಸಿಲ್ಲ. ಸಣ್ಣ ಯುದ್ಧವಿಮಾನವೊಂದು ಮೊದಲಿಗೆ ಛಾವಣಿಗಳ ಮೇಲೆ ರಬ್ಬರ್‌ ಗುಂಡುಗಳನ್ನು ಹಾಕುತ್ತದೆ. ಇದಾದ, ಕೆಲವೇ ಸೆಕೆಂಡ್‌ಗಳಲ್ಲಿ ಬಾಂಬ್‌ ಬಂದು ಬೀಳುತ್ತದೆ. ಬಿಳಿ ಬಾವುಟ ತೋರಿಸಿ ನಾಗರಿಕರು ಓಡಾಡಿದರೂ ಇಸ್ರೇಲ್‌ ಸೇನೆ ದಾಳಿ ನಡೆಸುತ್ತದೆ

l ಏನಿದು ಹ್ಯಾನಿಬಲ್‌ ಡೈರೆಕ್ಟಿವ್‌?

ಇಸ್ರೇಲ್‌ನ ಕ್ರೂರ ಯುದ್ಧವಿಧಾನಗಳಲ್ಲಿ ಇದೂ ಒಂದು. ಇಸ್ರೇಲ್‌ ಸೇನೆಯ ಸೈನಿಕನೊಬ್ಬನನ್ನು ಎದುರಾಳಿಯು ಅಪಹರಿಸಿದ, ಇಸ್ರೇಲ್ ಸೇನೆಯು ಎಂತದ್ದೇ ಪರಿಸ್ಥಿತಿಯಲ್ಲೂ ತನ್ನ ಸೈನಿಕನನ್ನು ವಾಪಸು ತರಲು ಕಾರ್ಯಾಚರಣೆ ನಡೆಸುತ್ತದೆ. ಸಾಧ್ಯವಾಗದಿದ್ದರೆ ಪ್ರತೀಕಾರ ತೀರಿಸಿಕೊಳ್ಳುತ್ತದೆ. ತನ್ನ ಸೈನಿಕನ ಜೀವವನ್ನೂ ಅದು ಲೆಕ್ಕಿಸುವುದಿಲ್ಲ. ಸೈನಿಕನನ್ನು ಅಪಹರಿಸಿ ಇಟ್ಟುಕೊಂಡಿರುವ ಪ್ರದೇಶದ ಮೇಲೆನಾಗರಿಕರ ಜೀವವನ್ನೂ ಲೆಕ್ಕಿಸದೇ ಇಸ್ರೇಲ್‌ ತೀವ್ರ ದಾಳಿ ನಡೆಸುತ್ತದೆ

ಹಮಾಸ್‌ ಸಹ ಬೇರೆಯಲ್ಲ

l ನಾವು ನಾಗರಿಕರನ್ನು ಗುರಿಮಾಡಿಕೊಂಡೇ ದಾಳಿ ನಡೆಸುತ್ತೇವೆ ಎಂದು ಹಮಾಸ್‌ ಬಂಡುಕೋರರು ಹೇಳಿದ್ದಾರೆ.ಯುದ್ಧದಲ್ಲಿ ನಾಗರಿಕರನ್ನು ಅಪಹರಿಸಿ, ಒತ್ತೆಯಾಳಾಗಿ ಇರಿಸಿಕೊಳ್ಳಲಾಗುತ್ತದೆ

l ಸಾರ್ವಜನಿಕ ಸ್ಥಳಗಳನ್ನು ಯುದ್ಧಕ್ಕೆ, ದಾಳಿಗೆ ನೆಲೆಯಾಗಿ ಬಳಸಿಕೊಳ್ಳುವಂತಿಲ್ಲ. ಆದರೆ, ಹಮಾಸ್‌ ಬಂಡುಕೋರರು ಶಾಲೆ, ಮಸೀದಿ, ಆಸ್ಪತ್ರೆಗಳಲ್ಲಿ ಅಡಗಿರುತ್ತಾರೆ. ಜನರ ಮಧ್ಯದಿಂದಲೇ ಅವರು ದಾಳಿ ನಡೆಸುತ್ತಾರೆ ಮತ್ತು ಅಲ್ಲಿಯೇ ಅವರ ಅಡಗುದಾಣ. ಜನರನ್ನೇ ತಮ್ಮ ರಕ್ಷಾ ಕವಚವನ್ನಾಗಿ ಮಾಡಿಕೊಳ್ಳುತ್ತಾರೆ ಎಂದು ಇಸ್ರೇಲ್‌ ಹಲವು ಆರೋಪಗಳನ್ನು ಮಾಡಿದೆ. ಆದರೆ, ಅದರ ಆರೋಪಗಳಿಗೆ ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ

ವಿಶ್ವಸಂಸ್ಥೆಯು ಗಾಜಾಪಟ್ಟಿಯನ್ನು ಬಂದೀಖಾನೆ ಎಂದು ಕರೆಯುತ್ತದೆ. ಏಕೆ ಹಾಗೆ ಕರೆಯಲಾಗುತ್ತದೆ ಎಂಬುದನ್ನು ಈ ಅಂಶಗಳು ನಿರೂಪಿಸುತ್ತವೆ.

l ಗಾಜಾಪಟ್ಟಿಯ ವಿಸ್ತೀರ್ಣ 365 ಚದರ ಕಿ.ಮೀ. (ಬೆಂಗಳೂರಿನ ವಿಸ್ತೀರ್ಣ 741 ಚದರ ಕಿ.ಮೀ.). ಇದರಲ್ಲಿ ಶೇ 40ರಷ್ಟು ಕೃಷಿಭೂಮಿಯೂ ಇದೆ. ಇಷ್ಟು ಸಣ್ಣ ಪ್ರದೇಶದಲ್ಲಿ 23 ಲಕ್ಷದಷ್ಟು ಜನರು ವಾಸಿಸುತ್ತಿದ್ದಾರೆ. ಈ ಪ್ರದೇಶವು 52 ಕಿ.ಮೀ.ನಷ್ಟು ಉದ್ದದ ಭೂಗಡಿ ಹೊಂದಿದೆ. ಗಡಿ ಉದ್ದಕ್ಕೂ 18 ಅಡಿ ಎತ್ತರದ ಬೇಲಿಯನ್ನು ಇಸ್ರೇಲ್‌ ನಿರ್ಮಿಸಿದೆ

l ಗಾಜಾಪಟ್ಟಿಗೆ ನೀರು, ವಿದ್ಯುತ್ ಮತ್ತು ಆಹಾರ ಪದಾರ್ಥವು ಇಸ್ರೇಲ್‌ ಮೂಲಕವೇ ಪೂರೈಕೆಯಾಗಬೇಕು. ಇವುಗಳ ಪೂರೈಕೆ ಮೇಲೆ ಇಸ್ರೇಲ್‌ ಆಗಾಗ್ಗೆ ನಿರ್ಬಂಧ ಹೇರುತ್ತದೆ. ಈಗಲೂ ಅಂತಹ ನಿರ್ಬಂಧ ಹೇರಿದೆ. ವಿಶ್ವಸಂಸ್ಥೆಯು ಆಹಾರ, ಔಷಧ ಪೂರೈಸುವುದಕ್ಕೂ ಇಸ್ರೇಲ್‌ ಬಿಡುತ್ತಿಲ್ಲ

l ಗಾಜಾಪಟ್ಟಿಯಲ್ಲಿರುವ ಪ್ಯಾಲೆಸ್ಟೀನಿಯನ್‌ ಕೂಲಿಕಾರರು ಕೆಲಸಕ್ಕಾಗಿ ಪ್ರತಿದಿನ ಇಸ್ರೇಲ್‌ಗೆ ಬರಬೇಕು. ಗಡಿಯಲ್ಲಿ ತಪಾಸಣೆ ಮಾಡಿ ಅವರನ್ನು ಇಸ್ರೇಲ್‌ನೊಳಕ್ಕೆ ಬಿಡಲಾಗುತ್ತದೆ. ಸಂಜೆ ಅವರು ವಾಪಸಾಗಬೇಕು. ಇಲ್ಲದಿದ್ದಲ್ಲಿ ಅವರನ್ನು ಜೈಲಿಗೆ ಹಾಕಲಾಗುತ್ತದೆ. ಸಂಘರ್ಷದ ಸಂದರ್ಭದಲ್ಲಿ ಗಡಿದಾಟಲು ಇಸ್ರೇಲ್‌ ಬಿಡುವುದೇ ಇಲ್ಲ. ಆಗ ಪ್ಯಾಲೆಸ್ಟೀನ್‌ನ ಬಡ ಕೂಲಿಕಾರರು ಕೆಲಸ ಮತ್ತು ದುಡಿಮೆ ಇಲ್ಲದೆ ಹಸಿವಿನಿಂದ ಇರಬೇಕಾಗುತ್ತದೆ

l ಗಾಜಾಪಟ್ಟಿಯ ದಕ್ಷಿಣದಲ್ಲಿ ಈಜಿಪ್ಟ್‌ ಗಡಿ ಇದೆ. ಪ್ಯಾಲೆಸ್ಟೀನಿಯನ್ನರು ಆ ಗಡಿಯನ್ನು ದಾಟದಂತೆಯೂ ಇಸ್ರೇಲ್‌ ನೋಡಿಕೊಳ್ಳುತ್ತದೆ

ಆಧಾರ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸತ್ಯಶೋಧನಾ ವರದಿ–2014, ಸತ್ಯಶೋಧನಾ ವಿಸ್ತೃತ ವರದಿ–2015, ವಿಶ್ವಸಂಸ್ಥೆಯ ‘ಪ್ಯಾಲೆಸ್ಟೀನ್‌–ಇಸ್ರೇಲ್‌ ಸಂಘರ್ಷ ದತ್ತಾಂಶ ಡ್ಯಾಶ್‌ಬೋರ್ಡ್‌’, ರಾಯಿಟರ್ಸ್‌, ಎಎಫ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT