ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ವಿಶ್ವ ಜಾನಪದ ದಿನ– ಜಾನಪದಕ್ಕೆ ಸಾಂಸ್ಕೃತಿಕ ಪರಂಪರೆಯ ಪಟ್ಟ

ವಿಶ್ವ ಜಾನಪದ ದಿನದ ನೆಪದಲ್ಲಿ, ಅಮೂರ್ತ ಸಾಂಸ್ಕೃತಿಕ ಪರಂಪರೆಗಳಿಗೆ ನೀಡಲಾಗುವ ಯುನೆಸ್ಕೊ ಮಾನ್ಯತೆಯ ಬಗೆಗಿನ ಕೆಲ ಮಾಹಿತಿ ಇಲ್ಲಿದೆ
Published 22 ಆಗಸ್ಟ್ 2023, 0:20 IST
Last Updated 22 ಆಗಸ್ಟ್ 2023, 0:20 IST
ಅಕ್ಷರ ಗಾತ್ರ

ಲಂಡನ್‌ ನಿಯತಕಾಲಿಕೆಯ 1846 ಆಗಸ್ಟ್‌ 22ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನದಲ್ಲಿ ವಿಲಿಯಮ್‌ ಜಿ.ಥಾರ್ನ್ಸ್‌ ಮೊದಲ ಬಾರಿಗೆ ‘ಫೋಕ್‌ಲೋರ್‌’ ಎಂಬ ಪದವನ್ನು ಬಳಸಿದ್ದ. ಜಾನಪದ ಎಂಬುದರ ಸಂವಾದಿಯಾದ ಈ ಪದ ಚಾಲ್ತಿಗೆ ಬಂದ ದಿನವನ್ನೇ ಪ್ರತಿ ವರ್ಷ ‘ವಿಶ್ವ ಜಾನಪದ ದಿನ’ವನ್ನಾಗಿ ಆಚರಿಸಲಾಗುತ್ತದೆ. ಎಲ್ಲಾ ದೇಶಗಳು ಈ ದಿನದಂದು ತಮ್ಮಲ್ಲಿನ ಜಾನಪದ ಪರಂಪರೆಗಳು, ಜನಪದ ಕಲೆಗಳನ್ನು ಸಂಭ್ರಮಿಸುತ್ತವೆ. ವಿಶ್ವ ಜಾನಪದ ದಿನದ ನೆಪದಲ್ಲಿ, ಅಮೂರ್ತ ಸಾಂಸ್ಕೃತಿಕ ಪರಂಪರೆಗಳಿಗೆ ನೀಡಲಾಗುವ ಯುನೆಸ್ಕೊ ಮಾನ್ಯತೆಯ ಬಗೆಗಿನ ಕೆಲ ಮಾಹಿತಿ ಇಲ್ಲಿದೆ

––––

‘ಜಾನಪದವನ್ನು ಉಳಿಸಬೇಕು’– ಈ ವಾಕ್ಯವನ್ನು ಅರ್ಥೈಸಿಕೊಳ್ಳುವುದು ಹೇಗೆ? ಜಾನಪದವನ್ನು ಉಳಿಸುವುದು ಎಂದರೆ ಏನು? ಅಂದರೆ, ಜಾನಪದ ಒಂದು ಕಾಲಮಿತಿಗೆ ಒಳಪಟ್ಟಿರುವುದೇ? ಉಳಿಸುವುದು ಅಂದರೆ ಹೇಗೆ? ಹೀಗೆ ನಾನಾ ಚರ್ಚೆಗಳು ಹುಟ್ಟಿಕೊಳ್ಳುತ್ತವೆ. ಜಾನಪದಕ್ಕೆ ಕಾಲಮಿತಿ ಅಂದರೆ, ಹಿಂದಿನದೇ ಜಾನಪದ ಎನ್ನುವ ವಾದವೂ ಇದೆ, ಜನ ಇದ್ದಾರೆ ಎಂದಾದರೆ ಜಾನಪದ ಇದ್ದೇ ಇದೆ ಎನ್ನುವುದು ಮತ್ತೊಂದು ವಾದ. ಈ ಎಲ್ಲಾ ವಾದಗಳಿಗೂ ಪರ–ವಿರೋಧದ ಚರ್ಚೆಯ ಪರಂಪರೆಯೇ ಇದೆ. ಈ ವಾದ–ಪ್ರತಿವಾದಗಳು ಎಂತೇ ಇದ್ದರೂ ಜನಪದರ ಜ್ಞಾನ, ಸಂಸ್ಕೃತಿ, ಅವರ ಸಾಮಾಜಿಕ ಕಾಳಜಿಗಳು ಮುಂದಿನ ಪೀಳಿಗೆಗೂ ಮುಂದುವರೆಯಬೇಕು ಎನ್ನುವ ಚರ್ಚೆಗೆ ಬೇಧವಿಲ್ಲ. ಇದೇ ಅಭಿಪ್ರಾಯವನ್ನು ಯುನೆಸ್ಕೊ ಕೂಡ ಮುಂದಿಟ್ಟಿದೆ.

‘ಜಾನಪದವನ್ನು ಮುಂದಿನ ಪೀಳಿಗೆಗೆ ದಾಟಿಸುವುದು ಎಂದರೆ, ಜಾನಪದವನ್ನು ಹೆಚ್ಚು ಹೆಚ್ಚು ಜೀವಂತವಾಗಿರಿಸುವುದು ಎಂದೇ ಅರ್ಥ. ಹೀಗೆ, ಜಾನಪದವನ್ನು ಜೀವಂತವಾಗಿರಿಸಿ, ಅದು ಕಾಲಕ್ಕೆ ತಕ್ಕಂತೆ ಒಗ್ಗಿಕೊಳ್ಳುವಂತೆ ಅನುವು ಮಾಡಿಕೊಡುವುದು’ ಎಂದು ಯುನೆಸ್ಕೊ ವಿವರಿಸುತ್ತದೆ. ಹೀಗೆ ಜಾನಪದವನ್ನು ಜೀವಂತವಾಗಿರಿಸುವ ಸಲುವಾಗಿ ಪ್ರತಿವರ್ಷ ‘ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿ’ಯೊಂದನ್ನೂ ಯುನೆಸ್ಕೊ ಪ್ರಕಟಿಸುತ್ತದೆ. ಈ ಪಟ್ಟಿಯಲ್ಲಿ ಜನಪದ ಕಲೆಗಳೂ ಸೇರಿದಂತೆ ಹಲವು ಪರಂಪರೆಗಳಿಗೆ ಈವರೆಗೆ ಸ್ಥಾನ ದೊರೆತಿದೆ. ಹೀಗೆ ಪಟ್ಟಿಯಲ್ಲಿ ಸ್ಥಾನ ದೊರೆತವುಗಳ ಜೀವಂತಿಕೆಗಾಗಿ ಯುನೆಸ್ಕೊ ಶ್ರಮಿಸುತ್ತದೆ. ಇದಕ್ಕಾಗಿ ಅನುದಾನವನ್ನೂ ಅದು ಬಿಡುಗಡೆ ಮಾಡುತ್ತದೆ.

ಏನಿದು ಸಾಂಸ್ಕೃತಿಕ ಪರಂಪರೆ?: ಅಮೂರ್ತ ಸಾಂಸ್ಕೃತಿಕ ಪರಂಪರೆ ಅಂದರೆ ಏನು ಎಂಬುದನ್ನು ಯುನೆಸ್ಕೊ ವಿವರಿಸಿದೆ.

* ಅಮೂರ್ತ ಸಾಂಸ್ಕೃತಿಕ ಪರಂಪರೆಯು ಸ್ಥಗಿತವಾಗಿರಬಾರದು. ಬದಲಿಗೆ ಅದು ತನ್ನ ಮೂಲ ಆಶಯಗಳೊಂದಿಗೆ ವರ್ತಮಾನದ ಸನ್ನಿವೇಶಗಳಿಗೆ ಪ್ರತಿಕ್ರಿಯಿಸುವ ರೀತಿಯಲ್ಲಿ ವಿಕಾಸವಾಗುತ್ತಾ ಹೋಗಬೇಕು ಮತ್ತು ಈ ಪ್ರಕ್ರಿಯೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಹಿನ್ನಲೆ ಇರುವ ಜನರೂ ಭಾಗಿಯಾಗುವಂತಿರಬೇಕು

* ಕಾಲಾಂತರದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಬರುವ ಜನ, ಸಮೂಹವು ವಲಸೆ ಬಂದ ಪ್ರದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸರಕ್ಕೆ ಒಗ್ಗಿಕೊಂಡು ತಮ್ಮ ಪರಂಪರೆಯನ್ನು ಮುಂದುವರೆಸುವುದು ಮತ್ತು ಅದನ್ನೇ ಮುಂದಿನ ಪೀಳಿಗೆ ದಾಟಿಸುವಂತಿರಬೇಕು

* ಸಮುದಾಯವೊಂದು ಆಚರಿಸಿಕೊಂಡು ಬರುತ್ತಿರುವ ಪರಂಪರೆಯನ್ನು ತನ್ನದೇ ಸಮುದಾಯದ ಮುಂದಿನ ಪೀಳಿಗೆಗೆ ದಾಟಿಸುವುದನ್ನು ಅಮೂರ್ತ ಸಾಂಸ್ಕೃತಿಕ ಪರಂಪರೆ ಎನ್ನಬಹುದು. ಇದರ ಜತೆಯಲ್ಲಿ ಅಂತಹ ಪರಂಪರೆಯು ಒಂದು ಸಮುದಾಯ ಅಥವಾ ಒಂದು ಜನರ ಗುಂಪುಗೆ ಸೀಮಿತವಾಗಿರಬೇಕು. ಅಂತಹ ಪರಂಪರೆ ಮತ್ತು ಆ ಸಮುದಾಯ ಅಥವಾ ಗುಂಪಿನ ಅಸ್ಮಿತೆ ಪರಸ್ಪರ ಅವಲಂಬಿತವಾಗಿರಬೇಕು. ಉದಾಹರಣೆಗೆ: ರಾಜಸ್ಥಾನದ ಥಾರ್‌ ಮರುಭೂಮಿಯ ಹಾವಾಡಿಗರ ಸಮುದಾಯವು, ಆ ಸಮುದಾಯಕ್ಕೇ ವಿಶಿಷ್ಟವಾದ ಮತ್ತು ಸೀಮಿತವಾದ ‘ಕಲಿಬೇಲಿಯಾ’ ಎಂಬ ನೃತ್ಯಕ್ಕೆ ಹೆಸರುವಾಸಿಯಾಗಿದೆ. ಆ ಸಮುದಾಯದ ಎಲ್ಲರೂ ಆ ನೃತ್ಯವನ್ನು ಮಾಡುತ್ತಾರೆ. ಆ ನೃತ್ಯಕ್ಕೆ ಯುನೆಸ್ಕೊ ಮಾನ್ಯತೆ ದೊರೆತಿದೆ.

‘ಮೌಖಿಕ ಪರಂಪರೆ, ಪ್ರದರ್ಶನ ಕಲೆಗಳು, ಸಾಮಾಜಿಕ ಅಭ್ಯಾಸಗಳು, ಆಚರಣೆಗಳು, ಹಬ್ಬಗಳು, ನಿಸರ್ಗ ಅಥವಾ ಈ ಜಗತ್ತಿನ ಕುರಿತ ಜ್ಞಾನವನ್ನು ಅಥವಾ ಪಾರಂಪರಿಕ ಕರಕುಶಲ ಜ್ಞಾನ ಎಲ್ಲವನ್ನೂ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂಬ ವ್ಯಾಖ್ಯಾನ ಒಳಗೊಳುತ್ತದೆ’ ಎಂದು ಯುನೆಸ್ಕೊ ವಿವರಿಸಿದೆ. 

‘ಹೆಚ್ಚುತ್ತಿರುವ ಜಾಗತೀಕರಣ ಕಾಲಘಟ್ಟದಲ್ಲಿ ಸಾಂಸ್ಕೃತಿಕ ವೈವಿಧ್ಯವನ್ನು ಉಳಿಸಿಕೊಳ್ಳಲು ಇಂಥ ಸಾಂಸ್ಕೃತಿಕ ಪರಂಪರೆಯು ಮುಖ್ಯವಾಗುತ್ತದೆ. ಯಾವುದೇ ಪರಂಪರೆ ಅಥವಾ ಜಾನಪದವು ಅದರ ಪ್ರದರ್ಶನ ಮಾತ್ರವಷ್ಟೇ ಅಲ್ಲ. ಅದರಲ್ಲಿ ಅಡಗಿರುವ ಜ್ಞಾನ ಸಂಪತ್ತು, ಕೌಶಲದ ಕಾರಣಕ್ಕೂ ಸಾಂಸ್ಕೃತಿ ಪರಂಪರೆಯು ಪ್ರಾಮುಖ್ಯ ಪಡೆಯುತ್ತವೆ. ಈ ಎಲ್ಲದರ ಜೊತೆಗೆ ಅದರ ಸಾಮಾಜಿಕ ಮತ್ತು ಆರ್ಥಿಕ ಮೌಲ್ಯವು ಈ ಕಾಲಕ್ಕೂ ಧಕ್ಕುತ್ತವೆ. ಇದರಿಂದ ದೇಶದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಈ ಕಾರಣದಿಂದಲೇ ಇಂತಹ ಪರಂಪರೆಗಳಿಗೆ ಮಹತ್ವವಿದೆ’ ಎನ್ನುತ್ತದೆ ಯುನೆಸ್ಕೊ.

ವಿಶ್ವದ ಎಲ್ಲಾ ಜಾನಪದ ಪರಂಪರೆಗಳಿಗೂ ಯುನೆಸ್ಕೊ ಮಾನ್ಯತೆ ದೊರೆಯುವುದು ಸಾಧ್ಯವಿಲ್ಲ. ಹಾಗೆಂದು ಮಾನ್ಯತೆ ದೊರೆತ ಪರಂಪರೆಗಳೆಲ್ಲವೂ ಶ್ರೇಷ್ಠ, ಉಳಿದವು ಕನಿಷ್ಠ ಎಂಬಂತಿಲ್ಲ. ಬದಲಿಗೆ ಎಲ್ಲಾ ಅಮೂರ್ತ ಸಾಂಸ್ಕೃತಿಕ ಪರಂಪರೆಗಳೂ ಶ್ರೇಷ್ಠವೇ ಆಗಿರುತ್ತವೆ. ಅವುಗಳನ್ನು ಉಳಿಸಿಕೊಳ್ಳಬೇಕಾದ ಮತ್ತು ಆ ಮೂಲಕ ಬೆಳೆಸಬೇಕಾದ ತೀವ್ರತೆಯನ್ನು ಆಧರಿಸಿ ಅಂತಹ ಮಾನ್ಯತೆ ನೀಡಲಾಗುತ್ತದೆ ಎಂದು ಯುನೆಸ್ಕೊ ಅಭಿಪ್ರಾಯಪಟ್ಟಿದೆ. ಆಯಾ ಸರ್ಕಾರಗಳು ಸಲ್ಲಿಸುವ ಪ್ರಸ್ತಾವವನ್ನು ಪರಿಶೀಲಿಸಿ, ಪ್ರಸ್ತಾವಿತ ಪರಂಪರೆ ಅಥವಾ ಜನಪದ ಕಲೆಗಳು ಆ ಮಾನ್ಯತೆ ಪಡೆಯಲು ಅರ್ಹವಾಗಿವೆಯೇ ಎಂಬುದನ್ನು ಯುನೆಸ್ಕೊ ನಿರ್ಧರಿಸುತ್ತದೆ. 

ಅಮೂರ್ತ ಸಾಂಸ್ಕೃತಿಕ ಪಟ್ಟಿಗೆ ಸೇರಿದ ಮೇಲೆ, ಅಂತಹ ಪರಂಪರೆಗಳನ್ನು ಕಾಪಾಡಿಕೊಳ್ಳುವುದು ಆಯಾ ದೇಶದ ಜವಾಬ್ದಾರಿಯಾಗಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಪಟ್ಟಿಗೆ ಸೇರಿದ ಪರಂಪರೆಗಳ ಉಳಿವಿಗೆ ‘ಅಮೂರ್ತ ಸಾಂಸ್ಕೃತಿಕ ಪರಂಪರೆ ನಿಧಿ’ಯಿಂದ ಹಣ ಸಹಾಯಕ್ಕಾಗಿ ಮನವಿ ಮಾಡಬಹುದು. ಸಮಿತಿಯು ಹಣ ನೀಡುವ ಕುರಿತು ನಿರ್ಧಾರ ಕೈಗೊಳ್ಳುತ್ತದೆ. ಒಂದು ಲಕ್ಷ ಡಾಲರ್‌ವರೆಗೂ (ಅಂದಾಜು ₹82 ಲಕ್ಷ) ಹಣ ಸಹಾಯವನ್ನು ಯುನೆಸ್ಕೊ ನೀಡುತ್ತದೆ. ಅಂತಹ ಪಂರಂಪರೆಗಳ ಉಳಿವು ಮತ್ತು ಬೆಳವಣಿಗೆಗೆ ಕೈಗೊಂಡ ಕ್ರಮಗಳ ಬಗ್ಗೆ ಪ್ರತಿ ನಾಲ್ಕು ವರ್ಷಕ್ಕೆ ಒಮ್ಮೆ ಯುನೆಸ್ಕೊಗೆ ವರದಿಯೊಂದನ್ನು ನೀಡಬೇಕಾಗುತ್ತದೆ.

ಆಧಾರ: ಯುನೆಸ್ಕೊ

––––

ದಾಖಲೀಕರಣದ ಅಪಾಯಗಳು

ದಾಖಲೀಕರಣ ಎನ್ನುವುದು, ಅಮೂರ್ತ ಸಾಂಸ್ಕೃತಿಕ ಪರಂಪರೆಗಳ ಸಂರಕ್ಷಣೆಯ ಒಂದು ವಿಧಾನ. ಯಾವುದೇ ಮೌಖಿಕ ಸಂಸ್ಕೃತಿಯ ಕಲೆಗಳನ್ನು ಗ್ರಂಥರೂಪಕ್ಕೆ ಇಳಿಸುವುದು ಅಥವಾ ವಿಡಿಯೊ ಚಿತ್ರೀಕರಣ ಮಾಡುವುದೂ ಸಹ ದಾಖಲೀಕರಣದ ಒಂದು ವಿಧಾನ. ಇನ್ನೇನು ನಶಿಸಿಬಿಡುತ್ತವೆ ಎಂಬಂತಹ ಪರಂಪರೆಗಳನ್ನು ಈ ರೀತಿಯಲ್ಲಿ ದಾಖಲಿಸುವುದು ಅತ್ಯಗತ್ಯ. ಆದರೆ, ಎಲ್ಲಾ ಪರಂಪರೆಗಳನ್ನು ಹೀಗೆ ದಾಖಲಿಸುವುದರಲ್ಲಿ ಅಪಾಯವೂ ಇದೆ. ಇದು ಜನಪದ ಕಲೆಗಳಿಗೂ ಅನ್ವಯವಾಗುತ್ತದೆ. ಜಾನಪದವನ್ನು ಉಳಿಸುವುದು ಎಂದರೆ, ಅದನ್ನು ದಾಖಲಿಸುವುದು ಎನ್ನುವ ಸಾಮಾನ್ಯ ಉಪಾಯವನ್ನು ನಾವು ಹೊಳೆಸಿಕೊಂಡಿದ್ದೇವೆ. ಆದರೆ, ಜಾನಪದ ಅಥವಾ ಪರಂಪರೆಗಳು ಉಳಿಯುವುದು ಅವುಗಳ ದಾಖಲೀಕರಣದಿಂದ ಅಲ್ಲ ಎನ್ನುವ ಎಚ್ಚರವನ್ನೂ ಯುನೆಸ್ಕೊ ನೀಡಿದೆ. 

ಜಾನಪದಕ್ಕೆ ಒಂದೇ ಸಿದ್ಧಸೂತ್ರವಿಲ್ಲ. ಪ್ರದೇಶದಿಂದ ಪ್ರದೇಶಕ್ಕೆ ಅವುಗಳು ಬದಲಾಗುತ್ತವೆ; ರೂಪಾಂತರಗೊಳ್ಳುತ್ತವೆ. ಈಗ ರಾಮಾಯಣವನ್ನೇ ಉದಾಹರಿಸುವುದಾದರೆ, ಹಲವು ಆವೃತ್ತಿಯ ರಾಮಾಯಣ ಇವೆ. ಒಂದೊಂದು ದೇಶದಲ್ಲಿ ಒಂದೊಂದು ಕಥೆಗಳಿವೆ; ಒಂದೊಂದು ರೀತಿಯ ಪಾತ್ರ ಪೋಷಣೆಗಳಿವೆ. ಜನಪದರ ರಾಮಾಯಣದಲ್ಲೂ ಇದೇ ರೀತಿಯ ವೈವಿಧ್ಯ ಇದೆ. ಒಂದೊಮ್ಮೆ ಹೀಗೆ ಒಂದು ಆವೃತ್ತಿಯ ರಾಮಾಯಣವನ್ನು ಸಂರಕ್ಷಿಸಿದರೆ, ಆ ಆವೃತ್ತಿಯು ಬೇರೆಲ್ಲಾ ಆವೃತ್ತಿಗಳನ್ನು ಮೀರಿ ಅಧಿಕೃತತೆಯ ಮುದ್ರೆ ಪಡೆದುಬಿಡುತ್ತದೆ. ಆಗ ಬೇರೆ ಬೇರೆ ಅವತರಣಿಕೆಯ ರಾಮಾಯಣಗಳು ಹಿನ್ನೆಲೆಗೆ ಸರಿಯುತ್ತವೆ. ಕಾಲಾಂತರದಲ್ಲಿ ಅವು ಮಾನ್ಯತೆಯನ್ನು ಕಳೆದುಕೊಳ್ಳುವ ಅಪಾಯವೂ ಇದೆ ಎನ್ನುವುದು ಯುನೆಸ್ಕೊದ ದೃಢ ಅಭಿಪ್ರಾಯ. 

ಜಗತ್ತಿನ ಯಾವುದೋ ಒಂದು ಪರಂಪರೆಯನ್ನು ಅಥವಾ ಜಾನಪದವನ್ನು ಅಥವಾ ಜನಪದ ಕಲೆಯನ್ನು ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ ಪಟ್ಟಿಗೆ ಸೇರಿಸಲಾಯಿತು ಎಂದಿಟ್ಟುಕೊಳ್ಳಿ. ಹಾಗಾದರೆ, ಅದಷ್ಟೇ ಶ್ರೇಷ್ಠವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದ್ದರಿಂದ ಹೀಗೆ ದಾಖಲೀಕರಣಗೊಂಡ, ಪಟ್ಟಿಗೆ ಸೇರ್ಪಡೆಗೊಂಡ ಪರಂಪರೆಯು ಬೇರೆ ಪರಂಪರೆಯ ತುಲನೆಯಲ್ಲಿ ಶ್ರೇಷ್ಠವಾಗುವ ಪ್ರಮಾದವೂ ಆಗಬಹುದು ಎನ್ನುತ್ತದೆ ಯುನೆಸ್ಕೊ.

ಮಾನ್ಯತೆಯಿಂದ ಅನುಕೂಲಗಳಿವೆ

ಜನಪದ ಕಲೆಗಳಿಗೆ ಯುನೆಸ್ಕೊವಿನ ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ಯ ಸ್ಥಾನ ದೊರೆಯುವುದರಿಂದ ಹಲವು ಲಾಭಗಳಿವೆ. ಈ ಸ್ಥಾನ ಪಡೆದ ಜನಪದ ಕಲೆಗಳ ಪ್ರದರ್ಶನಕ್ಕೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಅವಕಾಶ ದೊರೆಯುತ್ತದೆ. ಯುನೆಸ್ಕೊ ಮಾನ್ಯತೆಯ ಕಾರಣದಿಂದ 180 ದೇಶಗಳು ತಮ್ಮ ಸಾಂಸ್ಕೃತಿಕ ಪರಂಪರೆಗಳ ಸಂರಕ್ಷಣೆ ಮತ್ತು ದಾಖಲೀಕರಣವನ್ನು ಆರಂಭಿಸಿವೆ. ಇದರಿಂದ ಅಂತಹ ಕಲಾರೂಪಗಳಿಗೆ ಅಂತರರಾಷ್ಟ್ರೀಯ ಮನ್ನಣೆ ದೊರೆಯುತ್ತಿದೆ. ಪರಿಣಾವಾಗಿ ನಶಿಸಿ ಹೋಗುತ್ತಿರುವ ಕಲೆ ಮತ್ತು ಕಲಾವಿದರಿಗೆ ಮರುಚೇತನ ದೊರೆತು, ಆ ಪರಂಪರೆಯು ಮತ್ತೆ ವಿಜೃಂಭಿಸಲು ಸಾಧ್ಯವಾಗುತ್ತದೆ.

ದೇಶದ ಬೇರೆ ಬೇರೆ ರಾಜ್ಯದ ಒಟ್ಟು 14 ಜನಪದ ಕಲಾರೂಪಗಳು ಮತ್ತು ಪರಂಪರೆಗಳಿಗೆ ಯುನೆಸ್ಕೊವಿನ ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ ಮಾನ್ಯತೆ ದೊರೆತಿದೆ. ನಮ್ಮ ಪಕ್ಕದ ಕೇರಳದ ‘ಕೂಡಿಯಾಟ್ಟಂ’ ವೈದಿಕ ಪಠಣ ಪರಂಪರೆಗೂ ಈ ಮಾನ್ಯತೆ ದೊರೆತಿದೆ. ಆದರೆ, ಕರ್ನಾಟಕದ ನಮ್ಮ ಕಲಾ ಪರಂಪರೆಗಳಿಗೆ ಯುನೆಸ್ಕೊ ಮಾನ್ಯತೆ ದೊರೆತಿಲ್ಲ. ನಮ್ಮ ಕಲಾ ಪರಂಪರೆಗಳಿಗೆ ಅಂತಹ ಮಾನ್ಯತೆ ಏಕೆ ದೊರೆತಿಲ್ಲ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಇದರಲ್ಲಿ ಇಚ್ಛಾಶಕ್ತಿಯ ಕೊರತೆ ಕಾಣುತ್ತಿದೆ. ಗಣರಾಜ್ಯ ದಿವಸದಂದು ದೆಹಲಿಯ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ನೀಡದೇ ಇದ್ದರೆ, ಎಲ್ಲರೂ ಸೇರಿ ದೊಡ್ಡದನಿಯಲ್ಲಿ ಹೋರಾಡುತ್ತೇವೆ ಮತ್ತು ಆ ಅವಕಾಶವನ್ನು ದಕ್ಕಿಸಿಕೊಳ್ಳುತ್ತೇವೆ. ಕರ್ನಾಟಕದ ಕಲಾ ಪರಂಪರೆಗಳಿಗೆ ಅಂತಹ ಮಾನ್ಯತೆ ಒದಗಿಸಿಕೊಡಲು ಜನರು, ಮಾಧ್ಯಮಗಳು, ಸಂಸ್ಕೃತಿ ಚಿಂತಕರು ಸೇರಿ ಹತ್ತೊಕ್ಕಾಯ ಮಾಡಬೇಕಾದ ಸಂದರ್ಭದ ನಮ್ಮೆದುರು ಇದೆ.

–ನಂದಕುಮಾರ ಹೆಗಡೆ,
ಕರ್ನಾಟಕ ಜಾನಪದ ಪರಿಷತ್ತಿನ ಆಡಳಿತಾಧಿಕಾರಿ

ಯುನೆಸ್ಕೊ ಪಟ್ಟಿಯಲ್ಲಿಲ್ಲ ಕನ್ನಡದ ಪರಂಪರೆಗಳು

ಪಶ್ಚಿಮ ಬಂಗಾಳದ ದುರ್ಗಾಪೂಜಾ ಮತ್ತು ಚಾವು ನೃತ್ಯ, ಯೋಗ, ಮಣಿಪುರದ ಸಂಕೀರ್ತನ, ಲಡಾಖ್‌ನ ಬೌದ್ಧಮಂತ್ರ ಪಠಣ, ರಾಜಸ್ಥಾನದ ಕಲಿಬೇಲಿಯಾ, ಕೇರಳದ ಮುಡುಯೇಟ್ಟು ಮತ್ತು ಕೂಡಿಯಾಟ್ಟಂ, ರಾಮಲೀಲಾ, ಹಿಮಾಚಲದ ರಮ್ಮನ್‌, ಕುಂಭ ಮೇಳ, ಪಂಜಾಬ್‌ನ ಸಾಂಪ್ರದಾಯಿಕ ಹಿತ್ತಾಳೆ ಮತ್ತು ತಾಮ್ರದ ಪಾತ್ರೆ ತಯಾರಿಕೆಗಳಿಗೆ ಯುನೆಸ್ಕೊದ ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ಯ ಮಾನ್ಯತೆ ಪಡೆದಿವೆ. ಆದರೆ ಕನ್ನಡದ ಯಾವ ಪರಂಪರೆಗಳು, ಜನಪದ ಕಲೆಗಳಿಗೆ ಈ ಮಾನ್ಯತೆ ದೊರೆತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT