ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುದ್ದಿ, ಶಿಕ್ಷೆ, ದಮನ ಮತ್ತು ಬೆಳ್ಳಿ ಬೆಳಕು

Published : 27 ಸೆಪ್ಟೆಂಬರ್ 2024, 20:15 IST
Last Updated : 27 ಸೆಪ್ಟೆಂಬರ್ 2024, 20:15 IST
ಫಾಲೋ ಮಾಡಿ
Comments

ಪತ್ರಿಕೋದ್ಯಮದ ಮೊದಲ ಜವಾಬ್ದಾರಿಯೇ ಸತ್ಯವನ್ನು ಹೇಳುವುದು. ಈ ಮೂಲಕ ಸಮಾಜಕ್ಕೆ ಕನ್ನಡಿ ಹಿಡಿಯುವುದು. ಸತ್ಯದ ಮಹತ್ವ ಮತ್ತು ಅದನ್ನು ಜನರಿಗೆ ಹೆಕ್ಕಿಕೊಡುವ ಪತ್ರಕರ್ತರ ಪಾತ್ರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ ಸೆಪ್ಟೆಂಬರ್ 28ರಂದು ‘ವಿಶ್ವ ಸುದ್ದಿ ದಿನ’ ಆಚರಿಸಲಾಗುತ್ತಿದೆ. ‘ವಿಶ್ವ ಸುದ್ದಿ ದಿನ’ದ ಪ್ರಯುಕ್ತ ಅದರ ಅಗತ್ಯ, ಹಲವು ಆಯಾಮ ಮತ್ತು ಅದು ಸಮಾಜಕ್ಕೆ ಹರಡುವ ಅನಿವಾರ್ಯ ಬೆಳಕಿನ ಬಗ್ಗೆ ಒಳನೋಟ ಇಲ್ಲಿದೆ. ‘ಪ್ರಜಾವಾಣಿ’ಯು ವಿಶ್ವ ಸುದ್ದಿ ದಿನ ಅಭಿಯಾನದ ಭಾಗವಾಗಿದೆ.

ಇಡೀ ಜಗತ್ತಿನ ಎಲ್ಲರನ್ನು ಮತ್ತು ಎಲ್ಲವನ್ನೂ ಒಳಗೊಳ್ಳಬಹುದಾದುದು ಏನಾದರೂ ಇದ್ದರೆ ಅದು ಸುದ್ದಿ ಮಾತ್ರ. ನಾವು ಸುದ್ದಿಯನ್ನು ಹೇಳುತ್ತೇವೆ, ಕೇಳುತ್ತೇವೆ, ಬರೆಯುತ್ತೇವೆ, ಓದುತ್ತೇವೆ, ನೋಡುತ್ತೇವೆ ಮತ್ತು ನಾವೇ ಸುದ್ದಿಯೂ ಆಗುತ್ತೇವೆ. ಬಾಯಿಂದ ಬಾಯಿಗೆ ಹರಡುವ ಸುದ್ದಿಯು ಜನಪದವಾಗುತ್ತದೆ. ಬಳಿಕ ಸುದ್ದಿಯು ಮಾಧ್ಯಮವಾಗುತ್ತದೆ, ಉದ್ಯಮವಾಗುತ್ತದೆ. ಕೆಲವೊಮ್ಮೆ ಮಾಫಿಯಾ ಕೂಡ ಆಗುತ್ತದೆ. ಸುದ್ದಿಯು ಅತ್ಯಂತ ಪರಿಣಾಮಕಾರಿಯಾದ ಪ್ರಬಲವಾದ ಮತ್ತು ಪ್ರಭಾವಿಯಾಗಿರುವ ಅಸ್ತ್ರ. ಹಾಗಾಗಿಯೇ, ಅಧಿಕಾರದಲ್ಲಿರುವ ರಾಜಕಾರಣಿಗಳು, ಈ ರಾಜಕಾರಣಿಗಳ ಆದೇಶಗಳನ್ನು ಜಾರಿಗೊಳಿಸುವ ಅಧಿಕಾರಿಗಳು, ಅಧಿಕಾರವಿಲ್ಲದ ರಾಜಕಾರಣಿಗಳು, ಉದ್ಯಮಿಗಳು, ಮಾಫಿಯಾಗಳು– ಹೀಗೆ ಎಲ್ಲರೂ ಸುದ್ದಿ ಅಥವಾ ಮಾಧ್ಯಮವನ್ನು ಓಲೈಸಲು, ಆಮಿಷ ಒಡ್ಡಲು, ತಮಗೆ ಬೇಕಾದಂತೆ ಬಾಗಿಸಲು, ಬಾಗದಿದ್ದರೆ ಬೆದರಿಸಲು ನಿರಂತರವಾಗಿ ಪ್ರಯತ್ನಿಸುತ್ತಾರೆ.

ಅದರ ಪರಿಣಾಮವಾಗಿಯೇ ನಿರಂಕುಶ ಆಡಳಿತ ಇರುವ ದೇಶಗಳಲ್ಲಿ, ತೋಳ್ಬಲವೇ ಪ್ರಧಾನವಾಗಿರುವಲ್ಲಿ ಸುದ್ದಿಯು ಎಂದೂ ಸುದ್ದಿಯಾಗುವುದಿಲ್ಲ. ಸುದ್ದಿಯು ಉಸಿರು ಬಿಗಿಹಿಡಿದೇ ಇರಬೇಕಾಗುತ್ತದೆ. ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌ ಎಂಬ ಸಂಸ್ಥೆಯು ವಿವಿಧ ದೇಶಗಳಲ್ಲಿ ಮಾಧ್ಯಮ ಸ್ವಾತಂತ್ರ್ಯ ಯಾವ ಮಟ್ಟದಲ್ಲಿದೆ ಎಂಬುದರ ಮೌಲ್ಯಮಾಪನವನ್ನು ಪ್ರತಿ ವರ್ಷವೂ ಮಾಡುತ್ತದೆ. ಸೂಚ್ಯಂಕವನ್ನು ಪ್ರಕಟಿಸುತ್ತದೆ. 2024ರಲ್ಲಿ 180 ದೇಶಗಳ ಮೌಲ್ಯಮಾಪನ ಮಾಡಲಾಗಿದೆ. ಸೂಚ್ಯಂಕದಲ್ಲಿ ಕೊನೆಯ 10 ಸ್ಥಾನಗಳಲ್ಲಿರುವ ದೇಶಗಳನ್ನು ಗಮನಿಸಿದರೆ ಯಾವ ರೀತಿಯ ದೇಶಗಳಲ್ಲಿ ಸುದ್ದಿಯನ್ನು ಉಸಿರುಗಟ್ಟಿಸಿ ಇರಿಸಲಾಗಿದೆ ಎಂಬುದು ಅರ್ಥವಾಗುತ್ತದೆ. ಆ ದೇಶಗಳು ಹೀಗಿವೆ: ಈಜಿಫ್ಟ್‌, ಮ್ಯಾನ್ಮಾರ್‌, ಚೀನಾ, ಬಹರೈನ್‌, ವಿಯೆಟ್ನಾಂ, ತುರ್ಕಮೆನಿಸ್ತಾನ, ಇರಾನ್‌, ಉತ್ತರ ಕೊರಿಯಾ, ಅಫ್ಘಾನಿಸ್ತಾನ, ಸಿರಿಯಾ, ಎರಿಟ್ರಿಯಾ.

ಆಕ್ರಮಿತ ವೆಸ್ಟ್‌ಬ್ಯಾಂಕ್‌ನ ರಮಲ್ಲಾಹ್‌ನಲ್ಲಿರುವ ಅಲ್‌ ಜಜೀರಾ ಮಾಧ್ಯಮ ಕಚೇರಿಯ ಮೇಲೆ ಇಸ್ರೇಲ್‌ನ ಶಸ್ತ್ರಸಜ್ಜಿತ, ಮುಖವಾಡ ಧರಿಸಿದ ಸೈನಿಕರು ಸೆಪ್ಟೆಂಬರ್‌ 22ರಂದು ದಾಳಿ ನಡೆಸಿ, ತಕ್ಷಣದಿಂದಲೇ ಕಾರ್ಯಾಚರಣೆ ನಿಲ್ಲಿಸುವಂತೆ ಕಟ್ಟಪ್ಪಣೆ ಮಾಡಿದ್ದಾರೆ. ಅಲ್ಲಿನ ಸಿಬ್ಬಂದಿ ತಮ್ಮ ವೈಯಕ್ತಿಕ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಕಚೇರಿಯಿಂದ ಹೊರಡಬೇಕು ಎಂದು ಬಲವಂತ ಮಾಡಿದ್ದಾರೆ. ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌ ಸಂಸ್ಥೆಯ ಸೂಚ್ಯಂಕದಲ್ಲಿ ಇಸ್ರೇಲ್‌ಗೆ 100ನೇ ಸ್ಥಾನವಿದೆ ಎಂಬುದು ಇಲ್ಲಿ ಗಮನಾರ್ಹ.

ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಹೇಳಿ ಹೇಳಿ ಅದು ಹಳಸಲಾಗಿದೆ. ಬಹುಶಃ ಹಾಗೆ ಹಳಸಲಾಗಿರುವ ಕಾರಣಕ್ಕೇ ಇರಬೇಕು ನಾಲ್ಕನೇ ಅಂಗ ಎಂಬ ಹಿರಿಮೆ ಮತ್ತು ಘನತೆಯನ್ನು ಅಧಿಕಾರಸ್ಥರು ಪತ್ರಿಕೋದ್ಯಮಕ್ಕೆ ತೋರುತ್ತಿಲ್ಲ. ವಾಸ್ತವದಲ್ಲಿ ಸಂವಿಧಾನವು ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮಾತ್ರ ಮಾಧ್ಯಮಕ್ಕೆ ಇರುವ ಬಲ. ಭಾರತದಲ್ಲಿ ತಳಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೆ ಮಾಧ್ಯಮ ಮತ್ತು ಮಾಧ್ಯಮ ಪ್ರವರ್ತಕರನ್ನು ದಮನಿಸುವ ಕೆಲಸ ಆಗಾಗ ನಡೆಯುತ್ತಲೇ ಇರುತ್ತದೆ.

ಕೋಮುವಾದ ಮತ್ತು ಮೂಲಭೂತವಾದದ ವಿರುದ್ಧ ಜಾಗೃತಿ ಮೂಡಿಸಲು ಪತ್ರಿಕೆ ಮತ್ತು ಭಾಷಣಗಳ ಮೂಲಕ ಪ್ರಯತ್ನಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಅಸಹಿಷ್ಣುತೆಯ ಹತ್ಯೆಗೆ ಒಂದು ಉದಾಹರಣೆ. 2017ರಲ್ಲಿ ನಡೆದ ಈ ಹತ್ಯೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದ ವರದಿ ಮಾಡಲು ಹೋಗಿದ್ದ ಕೇರಳದ ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ಅವರನ್ನು ಉಗ್ರರೊಂದಿಗೆ ನಂಟು ಇದೆ ಎಂಬ ಆರೋಪದಲ್ಲಿ ಬಂಧಿಸಲಾಯಿತು. ಅವರು ಜೈಲಿನಿಂದ ಹೊರಗೆ ಬರಲು 864 ದಿನಗಳು ಬೇಕಾದವು. ಸರ್ಕಾರವು ದಮನಕಾರಿ ನೀತಿ ಅನುಸರಿಸುತ್ತಿದೆ ಎಂಬುದು ವೇದ್ಯವಾದರೂ ನ್ಯಾಯಾಲಯಗಳು ಕೂಡ ‘ಸಂತ್ರಸ್ತರ’ ನೆರವಿಗೆ ಧಾವಿಸುವ ಕ್ರಿಯಾಶೀಲತೆಯನ್ನು ತೋರಲು ಸಾಧ್ಯವಾಗುತ್ತಿಲ್ಲ.

ನ್ಯೂಸ್‌ಕ್ಲಿಕ್‌ ಸುದ್ದಿ ಪೋರ್ಟಲ್‌ನ ಸಂಸ್ಥಾಪಕ ಪ್ರಬೀರ್‌ ಪುರಕಾಯಸ್ಥ ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ಬಂಧಿಸಲಾಗಿತ್ತು. ಅವರ ಬಂಧನವೇ ಕಾನೂನುಬಾಹಿರ ಎಂದು ಮೇ 15ರಂದು ಸುಪ್ರೀಂ ಕೋರ್ಟ್‌ ಹೇಳುತ್ತದೆ. 2023ರ ಅಕ್ಟೋಬರ್‌ನಲ್ಲಿ ಅವರನ್ನು ಬಂಧಿಸಲಾಗಿತ್ತು. ‍ಫ್ಯಾಕ್ಟ್‌ ಚೆಕ್‌ ವೆಬ್‌ಸೈಟ್‌ ಆಲ್ಟ್‌ನ್ಯೂಸ್‌ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ ಅವರನ್ನು ದೆಹಲಿ ಪೊಲೀಸರು 2022ರ ಜೂನ್‌ 27ರಂದು ಬಂಧಿಸಿದ್ದು 2018ರಲ್ಲಿ ಅವರು ಹನುಮಾನ್‌ ದೇವರಿಗೆ ಅವಮಾನ ಮಾಡಿದ್ದಾರೆ ಎಂಬ ಕಾರಣಕ್ಕೆ. ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರು ಪ್ರವಾದಿ ಮಹಮ್ಮದರನ್ನು ಅವಮಾನಿಸಿದ್ದನ್ನು ಜುಬೇರ್‌ ಟ್ವೀಟ್‌ ಮೂಲಕ ಬಹಿರಂಗಪಡಿಸಿದ್ದು ಕೋಮು ಸೌಹಾರ್ದಕ್ಕೆ ಧಕ್ಕೆ ತಂದಿದೆ ಎಂಬ ಕಾರಣವೂ ಇತ್ತು. ನೂಪುರ್‌ ಶರ್ಮಾ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡರೂ ಜುಬೇರ್‌ ವಿರುದ್ಧ ನಿರ್ದಾಕ್ಷಿಣ್ಯ ಕ್ರಮದ ವಿಚಾರದಲ್ಲಿ ಯಾವ ವಿನಾಯಿತಿಯೂ ಇರಲಿಲ್ಲ. ಅಂದ ಹಾಗೆ, ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌ನ 2024ರ ಸೂಚ್ಯಂಕದಲ್ಲಿ ನಮ್ಮ ದೇಶದ ಸ್ಥಾನ 159ನೆಯದಾಗಿದೆ.

ತನಿಖಾ ಪ್ರಕ್ರಿಯೆಯೇ ಶಿಕ್ಷೆಯಾಗಬಾರದು ಎಂದು ಸುಪ್ರೀಂ ಕೊರ್ಟ್‌ ಹಲವು ಬಾರಿ ಹೇಳಿದೆ. ಇನ್ನು ಮುಂದೆಯೂ ಹೇಳಬಹುದು. ಆದರೆ, ಭಾರತದಲ್ಲಿ ತನಿಖಾ ಪ್ರಕ್ರಿಯೆಯನ್ನೇ ಶಿಕ್ಷೆಯಾಗಿ ಪರಿವರ್ತಿಸುವ ದಂಡನೆಯ ಹೊಸ ದಾರಿಯೊಂದನ್ನು ಸರ್ಕಾರವು ಕಂಡುಕೊಂಡಿದೆ. ಕ್ಷುಲ್ಲಕ ಆರೋಪಗಳಿಂದ ನೀವು ದೋಷಮುಕ್ತರಾಗಿ ಹೊರಗೆ ಬರಬಹುದು. ಆದರೆ, ಅದಕ್ಕೂ ಮುಂಚೆ ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯಬೇಕಾಗುತ್ತದೆ. ಕುಟುಂಬ, ವೃತ್ತಿ, ಆರೋಗ್ಯ ಎಲ್ಲವೂ ಏರುಪೇರಾಗುತ್ತದೆ. ಈ ರೀತಿಯದ್ದೊಂದು ಭೀತಿ ಹುಟ್ಟಿಸಿಬಿಟ್ಟರೆ ಟೀಕಾಕಾರರು ಎಂದಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾತೇ ಆಡರು ಎಂಬ ಅಚಲ ವಿಶ್ವಾಸ ಪ್ರಭುತ್ವಕ್ಕೆ ಇದೆ. ಪತ್ರಿಕೆಗಳಿಗೆ, ಸುದ್ದಿ ವಾಹಿನಿಗಳಿಗೆ ಸರ್ಕಾರಿ ಜಾಹೀರಾತು ತಡೆಯಂತಹ ಆರ್ಥಿಕ ದಮನಕಾರಿ ನೀತಿ ಹೊಸದೇನೂ ಅಲ್ಲ.

ಇದು ಸುದ್ದಿ ಅಥವಾ ಮಾಧ್ಯಮದ ಒಂದು ಆಯಾಮವಾದರೆ, ಇನ್ನೊಂದು ಚೇತೋಹಾರಿ ಆಯಾಮವೂ ಇದೆ. ಇದು ಹೆಚ್ಚು ಆಶಾವಾದದಿಂದ ಕೂಡಿದ್ದಾಗಿದೆ. ಎಲ್ಲ ಉಸಿರುಗಟ್ಟಿಸುವಿಕೆ ಮಧ್ಯೆಯೂ ಸರ್ಕಾರಕ್ಕೆ ಎಚ್ಚರಿಕೆಯಾಗಿ, ಸಮುದಾಯಗಳಿಗೆ ಜಾಗೃತಿಯ ಸಾಧನವಾಗಿ ಮಾಧ್ಯಮವು ಕೆಲಸ ಮಾಡಬಹುದಾಗಿದೆ ಮತ್ತು ಮಾಡುತ್ತಿದೆ. ಇತ್ತೀಚೆಗೆ, ‘ಪ್ರಜಾವಾಣಿ’ ಪತ್ರಿಕೆಯಿಂದಾಗಿ ಉಂಟಾದ ಬದಲಾವಣೆಯ ಒಂದೆರಡು ಉದಾಹರಣೆಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತೇನೆ. ಕರ್ನಾಟಕ ಸರ್ಕಾರವು 2022ರಲ್ಲಿ ಹೈಸ್ಕೂಲ್‌ ವರೆಗಿನ ಹಲವು ಪಠ್ಯಪುಸ್ತಕಗಳನ್ನು ತನ್ನಿಚ್ಛೆಗೆ ಅನುಸಾರವಾಗಿ ಬದಲಾಯಿಸುತ್ತದೆ. ಈ ಕುರಿತು ನಿರಂತರವಾದ ವರದಿಗಳನ್ನು ಬರೆದ ಪರಿಣಾಮವಾಗಿ ಈ ಬದಲಾವಣೆಯಿಂದ ಸರ್ಕಾರವು ಹಿಂದೆ ಸರಿಯುತ್ತದೆ. ಇತ್ತೀಚೆಗೆ ನಡೆದ ಕೆಪಿಎಸ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿದ್ದ ದೋಷಗಳ ಕುರಿತು ಮಾಡಿದ ವರದಿ ಮತ್ತೊಂದು ಉದಾಹರಣೆ. ಸರ್ಕಾರವು ಪರೀಕ್ಷೆಯನ್ನು ರದ್ದು ಮಾಡಿ ಮರುಪರೀಕ್ಷೆಯ ದಿನಾಂಕ ಪ್ರಕಟಿಸಿದೆ. ಹಾಗಾಗಿಯೇ, ಎಲ್ಲ ದಮನಕಾರಿ ನೀತಿಗಳ ನಡುವೆಯೂ ಭರವಸೆಯ ಬೆಳ್ಳಿ ಬೆಳಕು ನಮ್ಮ ನಡುವೆ ಇದ್ದೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT