ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಷತ್ರಕ್ಕೂ ಇದೆ ಉಂಗುರ!

Published 12 ಡಿಸೆಂಬರ್ 2023, 23:30 IST
Last Updated 12 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ನಮ್ಮ ಸೌರವ್ಯೂಹದಲ್ಲಿ ಭೂಮಿ ಎಷ್ಟು ಸುಂದರವಾದ ಗ್ರಹವೋ ಅಂತೆಯೇ ಶನಿ ಗ್ರಹವೂ ಅಷ್ಟೇ ಅದ್ಭುತವಾಗಿದೆ. ಭೂಮಿಯು ತನ್ನ ನೀಲಿ, ಬಣ್ಣದಿಂದ ಸೆಳೆದರೆ ಶನಿ ಗ್ರಹವೂ ಅದರ ಸುತ್ತಲೂ ಇರುವ ಉಂಗುರಗಳಿಂದ ಮನಸೆಳೆಯುತ್ತದೆ. ನಮ್ಮ ಸೌರವ್ಯೂಹದಲ್ಲಿ ಇಂಥ ಉಂಗುರಗಳಿರುವ ಕೆಲವು ಗ್ರಹಗಳನ್ನು ಬಾಹ್ಯಾಕಾಶ ವಿಜ್ಞಾನಿಗಳು ಶೋಧಿಸಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ನಮ್ಮ ‘ಮಿಲ್ಕೀ ವೇ’ ನಕ್ಷತ್ರಪುಂಜದ ಆಚೆ, ನಕ್ಷತ್ರವೊಂದರ ಸುತ್ತಲೂ ಶನಿ ಗ್ರಹದ ಮಾದರಿಯ ಉಂಗುರ ಇರುವ ಅಚ್ಚರಿಯ ಸಂಗತಿಯನ್ನು ಶೋಧಿಸಿದ್ದಾರೆ.

ಇಂಗ್ಲೆಂಡ್‌ನ ಡ್ಯುರಾಮ್ ವಿಶ್ವವಿದ್ಯಾಲಯದ ಭೌತವಿಜ್ಞಾನ ಸಹ ಪ್ರಾಧ್ಯಾಪಕಿ ಡಾ. ಅನ್ನಾ ಮ್ಯಾಕ್‌ಲಿಯಾಡ್ ಅವರು ಚಿಲಿಯಲ್ಲಿನ ‘ಅಟಕಾಮ ಲಾರ್ಜ್‌ ಮಿಲಿಮೀಟರ್‌/ ಸಬ್‌ ಮಿಲಿಮೀಟರ್ ಅರೇ’ ದೂರದರ್ಶಕ ಯಂತ್ರದ ಮೂಲಕ ‘ಎಚ್‌ಎಚ್ 1177’ ನಕ್ಷತ್ರಪುಂಜದಲ್ಲಿ ಉಂಗುರ ಇರುವ ನಕ್ಷತ್ರವೊಂದನ್ನು ವೀಕ್ಷಿಸಿದ್ದಾರೆ. ‘ಎಚ್‌ಎಚ್‌ 1177’ ಎನ್ನುವುದು ನಕ್ಷತ್ರಪುಂಜವಲ್ಲ. ಇದು ನಮ್ಮ ‘ಮಿಲ್ಕೀ ವೇ’ ನಕ್ಷತ್ರಪುಂಜದ ಸಾಮಂತ ನಕ್ಷತ್ರಪುಂಜ. ವಿಶೇಷವಾದ ಯಾವುದೇ ಆಕಾರವಿಲ್ಲದೇ ಮೋಡದ ರೀತಿಯ ರಚನೆಯನ್ನು ಇದು ಹೊಂದಿದ್ದು, 3 ಸಾವಿರ ಕೋಟಿ ನಕ್ಷತ್ರಗಳು ಈ ಸಾಮಂತ ನಕ್ಷತ್ರಪುಂಜದೊಳಗಿವೆ ಎಂದು ಅಂದಾಜಿಸಲಾಗಿದೆ. ‘ಮಿಲ್ಕಿ ವೇ’ ನಕತ್ರಪುಂಜದಲ್ಲಿ ಸುಮಾರು 10 ರಿಂದ 40 ಸಾವಿರ ಕೋಟಿ ನಕ್ಷತ್ರಗಳಿವೆ ಎಂದು ಊಹಿಸಲಾಗಿದೆ. ಈ ಅಂಕಿ ಅಂಶವನ್ನು ನೀಡಿರುವುದು ‘ಮಿಲ್ಕೀ ವೇ’ ಹಾಗೂ ‘ಎಚ್‌ಎಚ್‌ 1177’ ನಡುವಿನ ಗಾತ್ರದ ವ್ಯತ್ಯಾಸ ಅಂದಾಜು ನಿಮಗಾಗಲಿ ಎಂದು.

ಈ ಸಂಶೋಧನೆ ಏಕೆ ಮಹತ್ವವನ್ನು ಪಡೆದುಕೊಳ್ಳುತ್ತದೆ ಎಂದರೆ 3 ಸಾವಿರ ಕೋಟಿ ನಕ್ಷತ್ರಗಳಿರುವ ‘ಎಚ್ಎಚ್‌ 1177’ ನಕ್ಷತ್ರಪುಂಜದಲ್ಲಿ ಉಂಗುರಗಳಿರುವ ಒಂದು ನಕ್ಷತ್ರವನ್ನು ಹುಡುಕಿ ವೀಕ್ಷಿಸುವುದು ಸಾಮಾನ್ಯವಾದ ವಿಚಾರವಲ್ಲ; ಭೂಮಿಯ ಮೇಲಿನ ಸಮುದ್ರದ ಮರಳಿನಲ್ಲಿ ಒಂದು ಮರಳಿನ ಕಣವನ್ನು ಸೋಸಿ ತೆಗೆದಂತೆ ಅದು.

ಸೌರಮಂಡಲದ ಹುಟ್ಟು – ಬೆಳವಣಿಗೆ ಅಧ್ಯಯನಕ್ಕೆ ಸಹಾಯ 

ಸೂರ್ಯನಿಗಿರುವ 8 ಗ್ರಹಗಳು ಈಗಿನ ಸ್ಥಿತಿಯಲ್ಲೇ ಅವುಗಳ ಆರಂಭದ ದಿನಗಳಲ್ಲಿ ಇರಲಿಲ್ಲ. ಕಾಲಾಂತರದಲ್ಲಿ ಅವು ರೂಪಾಂತರಗೊಳ್ಳುತ್ತಾ ಈಗಿನ ಸ್ಥಿತಿಯನ್ನು ತಲುಪಿವೆ. ಭೂಮಿಯ ಮೇಲೆ ಜೀವ ಉತ್ಪತ್ತಿಯಾಗಿದ್ದು ಭೂಮಿಯ ಒಟ್ಟಾರೆ ಜೀವನದ ಕೊನೆಯ ದಿನಗಳಲ್ಲಿ. ಗ್ರಹವೊಂದರ ಮೇಲೆ ಜೀವದ ಉತ್ಪತ್ತಿ ಆಗುವ ಪ್ರಕ್ರಿಯೆಯ ಬಗ್ಗೆ ಮಾನವನಿಗೆ ಮೊದಲಿನಿಂದಲೂ ಅತೀವ ಕುತೂಹಲವಿದೆ. ಅದೇ ಕಾರಣಕ್ಕೆ ನಮ್ಮ ಸೌರಮಂಡಲದ ಅಧ್ಯಯನ, ರಾಕೆಟ್‌ಗಳ ಸಂಶೋಧನೆ, ಗ್ರಹ, ಉಪಗ್ರಹಗಳಿಗೆ ಪ್ರಯಾಣ ಮುಂತಾದ ಸಂಶೋಧನೆಗಳಲ್ಲಿ ತೊಡಗಿದ್ದಾನೆ. ಆದರೆ, ನಮ್ಮ ಸೌರವ್ಯೂಹ ಈಗಾಗಲೇ ಬೆಳೆದು ಕಾಲದಲ್ಲಿ ಮುಂದೆ ಬಂದಿರುವ ಕಾರಣ, ಅದರ ಬೆಳವಣಿಗೆಯನ್ನು ಕಾಲದಲ್ಲಿ ಹಿಮ್ಮುಖವಾಗಿ ಚಲಿಸಿ ತಿಳಿದುಕೊಳ್ಳುವ ಸಾಮರ್ಥ್ಯ ನಮಗಿಲ್ಲ. ಹಾಗಾಗಿ, ಡಾ. ಅನ್ನಾ ಮ್ಯಾಕ್‌ಲಿಯಾಡ್ ಅವರ ಸಂಶೋಧನೆಯನ್ನು ‘ಸೌರಮಂಡಲದ ಬೆಳವಣಿಗೆಯ ಪಾಠಶಾಲೆ’ ಎಂದೇ ವಿಜ್ಞಾನಿಗಳು ವ್ಯಾಖ್ಯಾನಿದ್ದಾರೆ.

ಪಾಠಶಾಲೆ ಹೇಗೆ?:

‘ಎಚ್‌ಎಚ್‌ 1177’ ನಲ್ಲಿ ಇರುವ ನಕ್ಷತ್ರದ ಸುತ್ತಲಿನ ಉಂಗುರವು ಅತಿ ವೇಗದಲ್ಲಿ ಸುತ್ತುತ್ತಾ ಇರುವುದನ್ನು ಡಾ. ಅನ್ನಾ ಹಾಗೂ ಅವರ ತಂಡ ಗಮನಿಸಿದೆ. ಅಲ್ಲದೇ, ಈ ಉಂಗುರದಲ್ಲಿರುವ ಅನಿಲ ಹಾಗೂ ಘನ ರೂಪದಲ್ಲಿರುವ ವಸ್ತುಗಳು ಅತಿ ವೇಗವಾಗಿ ನಕ್ಷತ್ರದ ಕಡೆಗೆ ಸೆಳೆಯಲ್ಪಡುತ್ತಿರುವುದನ್ನೂ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಡಾ. ಅನ್ನಾ ಅವರ ಪ್ರಕಾರ ಉಂಗುರದ ಈ ಚಲನೆ ಹಾಗೂ ಲಕ್ಷಣವು ಈ ನಕ್ಷತ್ರದ ಸುತ್ತಲೂ ಗ್ರಹ, ಉಪಗ್ರಹ, ಕ್ಷುದ್ರಗ್ರಹ, ಉಲ್ಕೆಗಳಂತ ಆಕಾಶಕಾಯಗಳು ರೂಪುಗೊಳ್ಳುವ ಪ್ರಕ್ರಿಯೆಗೆ ಮುನ್ನುಡಿ. ಒಂದು ಕಾಲದಲ್ಲಿ ನಮ್ಮ ಸೂರ್ಯನ ಸುತ್ತಲೂ ಇದೇ ಮಾದರಿಯಲ್ಲಿ ಉಂಗುರಗಳಿದ್ದವು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ವಿಜ್ಞಾನಿಗಳ ಪ್ರಕಾರ ನಮ್ಮ ಸೂರ್ಯನಿಗೆ 450 ಕೋಟಿ ವರ್ಷಗಳಾಗಿವೆ. ‘ಎಚ್‌ಎಚ್‌ 1177’ ನಕ್ಷತ್ರಪುಂಜಕ್ಕೆ ಸುಮಾರು 150 ಕೋಟಿ ವರ್ಷಗಳಾಗಿವೆ. ಅದರಲ್ಲೂ ಈಗ ಶೋಧಿಸಿರುವ ಉಂಗುರವಿರುವ ನಕ್ಷತ್ರಕ್ಕೆ ಸುಮಾರು 100 ಕೋಟಿ ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿದ್ದಾರೆ. ‘ಈ ನಕ್ಷತ್ರವು ಅತಿ ವೇಗವಾಗಿ ಬದಲಾಗುತ್ತಿದ್ದು, ಉಂಗುರವು ಅತಿ ವೇಗದಲ್ಲಿ ಸುತ್ತುತ್ತಾ ಇರುವುದು ಅಚ್ಚರಿ ಮೂಡಿಸಿದೆ. ನಮ್ಮ ಜೀವಿತಾವಧಿಯಲ್ಲೇ, ಈ ಉಂಗುರವು ಬೇರೆ ಸ್ವರೂಪವನ್ನೇನಾದರೂ ಪಡೆದುಕೊಳ್ಳಬಹುದೇ ಎಂಬುದು ನಮ್ಮ ಪ್ರಮುಖ ಪ್ರಶ್ನೆಯಾಗಿದೆ’ ಎಂದು ಡಾ. ಅನ್ನಾ ಹೇಳಿದ್ದಾರೆ.

ನಮ್ಮ ಸೂರ್ಯನಿಗೆ ಹತ್ತಿರವಿರುವ ‘ಮಿಲ್ಕೀ ವೇ’ನ ನಕ್ಷತ್ರಗಳಲ್ಲಿ ಕೆಲವು ನಕ್ಷತ್ರಗಳಿಗೆ ಇದೇ ಮಾದರಿಯ ಉಂಗುರಗಳಿರುವುದನ್ನು ವಿಜ್ಞಾನಿಗಳು ಈಗಾಗಲೇ ಕಂಡುಹಿಡಿದಿದ್ದಾರೆ. ಆದರೆ, ಅವೆಲ್ಲಾ ಬೆರಳೆಣಿಕೆ ಸಂಖ್ಯೆಯಲ್ಲಿವೆ. ಜೊತೆಗೆ, ‘ಮಿಲ್ಕೀ ವೇ’ ಅತಿ ಬೃಹದಾಕಾರದ ನಕ್ಷತ್ರಪುಂಜವಾಗಿರುವ ಕಾರಣ, ಈ ನಕ್ಷತ್ರಗಳೆಲ್ಲಾ ತೀರಾ ದೂರದಲ್ಲಿವೆ. ಹಾಗಾಗಿ, ವೀಕ್ಷಣೆ ಕಷ್ಟ. ‘ಎಚ್‌ಎಚ್‌ 1177’ ನಕ್ಷತ್ರಪುಂಜದ ನಕ್ಷತ್ರವು ವೀಕ್ಷಣೆ ಹಾಗೂ ಸಂಶೋಧನೆಗೆ ಹೇಳಿ ಮಾಡಿಸಿದ ದೂರದಲ್ಲಿದೆ ಎಂದು ಡಾ. ಅನ್ನಾ ಅವರ ತಂಡ ಅಭಿಪ್ರಾಯಪಟ್ಟಿದೆ.

‘ನಕ್ಷತ್ರವೊಂದರ ಸುತ್ತಲಿನ ಉಂಗುರಗಳು ಸುತ್ತುತ್ತಾ ಬೇರೆ ಬೇರೆ ಆಕಾರಗಳನ್ನು ಪಡೆದುಕೊಂಡು ಗ್ರಹಗಳಂತಹ ಆಕಾಶ ಕಾಯಗಳಾಗುತ್ತವೆ. ಈ ಪ್ರಕ್ರಿಯೆಯನ್ನು ವೀಕ್ಷಿಸುವ ಅವಕಾಶ ನಮ್ಮ ಹಾಲಿ ಹಾಗೂ ಭವಿಷ್ಯದ ಬಾಹ್ಯಾಕಾಶ ವಿಜ್ಞಾನಿಗಳ ಪಾಲಿಗೆ ಸಿಕ್ಕಿರುವುದು ಅದೃಷ್ಟ’ ಎಂದು ಡಾ.ಅನ್ನಾ ತಮ್ಮ ಸಂಶೋಧನೆಯನ್ನು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT