ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಂಕಿತರನ್ನು ಜೈಲಿಗೆ ಕಳುಹಿಸಿ

ಕ್ರೀಡಾ ಸಂವಾದ
Last Updated 26 ಮೇ 2013, 19:59 IST
ಅಕ್ಷರ ಗಾತ್ರ

ಮಾನವ ಹುಟ್ಟು ಜೂಜುಗಾರ. ಪ್ರತಿ ನಿಮಿಷವೂ ಬಾಜಿ ಕಟ್ಟಲು ಸಿದ್ಧ. ಅನೇಕ ಪಂಟರ್‌ಗಳು ಮನೆಮಠ ಮಾರಿಕೊಂಡಿದ್ದುಂಟು. ಪಂದ್ಯದ ಪಾತ್ರ ಧಾರಿಗಳ ಕೈಯಲ್ಲಿ ಚುಕ್ಕಾಣಿ ಇರುತ್ತದೆ. ಹರಿಗೋಲು ಹಿಡಿದ ನಾವಿಕನೇ ಪ್ರಯಾಣಿಕರನ್ನು ಮುಳುಗಿಸಿದರೆ ಹೇಗಿರುತ್ತೆ ಹೇಳಿ. ಇದೇ ಹಾದಿಯಲ್ಲಿ ಐಪಿಎಲ್‌ನ ಇತ್ತೀಚೆಗಿನ ಮೋಸದಾಟದ ಪ್ರಕರಣವಿದೆ. ಕ್ರಿಕೆಟನ್ನು ಧರ್ಮದಂತೆ ಕಾಣುವ ಭಾರತೀಯ ಕ್ರಿಕೆಟ್ ಪ್ರೇಮಿಗಳಿಂದ ಈ ಕಳಂಕಿತ ಆಟಗಾರರಿಗೆ ಎಂತಹ ಶಿಕ್ಷೆಯನ್ನು ನೀಡಬೇಕೆನ್ನಬಹುದು ?

ಅದೇನೇ ಇದ್ದರೂ ನ್ಯಾಯಾಲಯದ ತೀರ್ಪಿಗೆ ಕಾಯುವುದು ಅನಿವಾರ್ಯ. ನಮ್ಮ ದೇಶದ ಸಡಿಲ ಕಾನೂನು ವ್ಯವಸ್ಥೆಯಿಂದ ಲಕ್ಷಗಟ್ಟಲೆ ಕೇಸುಗಳು ದಶಕಗಳಿಂದ ಇನ್ನೂ ನಿರ್ಣಾಯಕ ಹಂತ ಮುಟ್ಟಿಲ್ಲ. ಮೋಸದಾಟ ದವರನ್ನು ಶಿಕ್ಷಿಸಲು ಬಲವಾದ ಕಾನೂನಿನ ಕೊರತೆ ಇದೆ. ಗಡ್ಡಕ್ಕೆ ಬೆಂಕಿ ಹೊತ್ತಿಕೊಂಡಾಗ ಬಾವಿ ತೋಡುವ ಪ್ರಯತ್ನವನ್ನು ಸರ್ಕಾರ ಮಾಡಬಹುದು. ಇಷ್ಟು ದಿನ ಕಳಂಕಿತ ಆಟಗಾರರಿಗೆ ಅಲ್ಪ ಸ್ವಲ್ಪ ನಿಷೇಧ ಬಿಟ್ಟು ಬೇರೆ ಶಿಕ್ಷೆಯಾಗಿಲ್ಲ. ಈಗ ಜನರಿಗೂ ಸಿಟ್ಟು ಬಂದಿದೆ. ಕೆಲವೇ ಆಟಗಾರರ ತಪ್ಪಿನಿಂದ ಉಳಿದೆಲ್ಲಾ ಆಟಗಾರರ ಮೇಲೂ ಜನರ ಕೆಂಗಣ್ಣು ಬೀಳುವುದು ಸಹಜ.

ತಂತ್ರಜ್ಞಾನ ಮುಂದುವರಿದ ಹಾಗೆ ಬುಕ್ಕಿಗಳೂ ಅದರ ಲಾಭ ಪಡೆದು, ಇನ್ನೂ ಚುರುಕಾಗಿ ಅದರಲ್ಲಿರುವ ನ್ಯೂನತೆಗಳ ಲಾಭ ಪಡೆದಿದ್ದಾರೆ. ಸೈಬರ್ ಕ್ರೈಮ್ ಎಷ್ಟೊಂದು ಮುಂದುವರಿದಿದೆಯೆಂದರೆ ಒಬ್ಬ ಹ್ಯಾಕರ್ ನಿಮ್ಮ ಖಾತೆಯನ್ನು ಕೇವಲ ಐನೂರು ರೂಪಾಯಿಗಳಿಗೆ ಹತ್ತು ನಿಮಿಷಗಳಲ್ಲಿ ನುಚ್ಚುನೂರು ಮಾಡಬಹುದು.

ಸೈಬರ್ ಕ್ರೈಮ್ ಮುರಿಯಲು ಬೇರೆ ದೇಶಗಳಲ್ಲಿ ಇದ್ದಷ್ಟು ಬಿಗಿಯಾದ ನಿಯಮಗಳು ನಮ್ಮ ದೇಶದಲ್ಲಿಲ್ಲ. ಮೈದಾನದಲ್ಲಿರುವ ನಿಜವಾದ ಆಟಕ್ಕೂ ಟೆಲಿವಿಷನ್‌ನಲ್ಲಿ ನೋಡುವ ದೃಶ್ಯಕ್ಕೂ ಕೆಲವು ಸೆಕೆಂಡುಗಳ ಅಂತರ ಇರುತ್ತದೆ. ಇದರ ಉಪಯೋಗ ಪಡೆದ ಬುಕ್ಕಿಗಳು ಕಾರಿನಲ್ಲಿಯೇ ಕುಳಿತು ಹಳೆಯದೊಂದು ಲ್ಯಾಪ್‌ಟಾಪ್ ಮೂಲಕ `ಸ್ಪಾಟ್' ಮತ್ತು `ಸೆಷನ್' ಫಿಕ್ಸ್ ಮಾಡುವ ಅವಕಾಶವಿರುತ್ತದೆ. ಪರಿಸ್ಥಿತಿ ಈ ರೀತಿ ಇರುವಾಗ ಪೊಲೀಸರಿಗೆ ಬುಕ್ಕಿಗಳ ಮೇಲೆ ಸತತ ನಿಗಾ ಇಡಲೇಬೇಕು.

ತಮ್ಮ ತಂತ್ರಜ್ಞಾನವನ್ನು ಸುಧಾರಣೆ ಮಾಡಿಕೊಳ್ಳಲೇ ಬೇಕು. ಶ್ರೀಶಾಂತ್ ದಸ್ತಗಿರಿಯಂತೂ ಐತಿಹಾಸಿಕವೇ ಹೌದು. ನ್ಯಾಯಾಲಯದಲ್ಲಿ ಶ್ರೀಶಾಂತ್ ಪರವಾದ ವಕೀಲರು ಹೋರಾಡ ಬಹುದು. ಈ ಕೇಸ್‌ನಲ್ಲಿ ಪೊಲೀಸರಿಗೆ ಕೂಡಾ ಗೆಲ್ಲು ವುದು ಅನಿವಾರ್ಯ. ಕಳಂಕಿತರಿಗೆ ಕನಿಷ್ಠ 10ವರ್ಷ ಕಠಿಣ ಜೈಲು ಶಿಕ್ಷೆಯಾಗಲೇ ಬೇಕು. ಇಂತಹ ಶಿಕ್ಷೆ ಮಾತ್ರ ಆಟಗಾರರಲ್ಲಿ ಭಯ ಹುಟ್ಟಿಸಬಹುದು.

ಐಸಿಸಿಯ ಭ್ರಷ್ಟಾಚಾರ ತಡೆ ಘಟಕ ಇರುವಾಗ, ನಾವೇನೂ ಮಾಡಲಾಗುವುದಿಲ್ಲ  ಎಂದು ಬಿಸಿಸಿಐ ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ. ಈಗಾಗಲೇ ಪ್ರತಿ ತಂಡಕ್ಕೆ ಒಬ್ಬ ಅಧಿಕಾರಿಯನ್ನು ಆಟಗಾರರ ಮೇಲೆ ನಿಗಾ ಇಡಲು ನೇಮಿಸಲಾಗಿದೆ. 19 ವರ್ಷ ದೊಳಗಿನವರ ವಿಭಾಗ ಮತ್ತು ಮೊದಲ ದರ್ಜೆಯ ಆಟಗಾರರಿಗೆ ಮೋಸದಾಟದ ಬಗ್ಗೆ ಅರಿವು ಮೂಡಿಸಿ, ಅವರನ್ನು ಅಂತಹ ಚಟುವಟಿಕೆಗಳಿಂದ ದೂರ ಇರಿಸುವ ಬಗ್ಗೆ ರಾಜ್ಯಮಟ್ಟಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ.

ಮೊದಲಿನಿಂದಲೂ ಲಲಿತ್ ಮೋದಿಯವರ ಕೂಸಾದ ರಾಜಸ್ತಾನ್ ರಾಯಲ್ಸ್ ವಿವಾದಕ್ಕೆ ಒಳಗಾಗಿದೆ. ಮಾಲೀಕರು, ಪಾಲುದಾರರ ಹಣಕಾಸಿನ ವ್ಯವಹಾರದ ಬಗ್ಗೆ ಬಿಸಿಸಿಐ ಶಂಕಿಸಿದಾಗ ನ್ಯಾಯಾಲಯದ ಮೆಟ್ಟಲು ಹತ್ತಬೇಕಾಯಿತು. ಈ ಬಾರಿಯ ಐಪಿಎಲ್‌ನಲ್ಲಿ ಈ ತಂಡದ ಮೂವರು ಆಟಗಾರರಿಂದಾಗಿ ಇಡೀ ಐಪಿಎಲ್‌ನ ಅವ್ಯವಹಾರಗಳು ಬಯಲು ಗೊಂಡಂತಾಗಿದೆ. ಭಾರ ಎತ್ತುವ ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವಿಸಿ ಪದೇಪದೇ ಸಿಕ್ಕಿ ಹಾಕಿಕೊಂಡರೆ, ತಂಡದ ಮೇಲೆಯೇ ನಿಷೇಧ ಹೇರಲಾಗುತ್ತದೆ. ಕ್ರಿಕೆಟ್‌ನಲ್ಲಿ ಇಂತಹ ಕಾನೂನು ಅನ್ವಯಿಸುವುದಿಲ್ಲವಲ್ಲ.

ಭಾರತದಲ್ಲಿ ಕೋಟ್ಯಂತರ ಅವ್ಯವಹಾರ ಮಾಡಿದ ರಾಜಕಾರಣಿಗಳು, ಉದ್ಯಮಿಗಳು, ಅಧಿಕಾರಿಗಳು ಎದೆ ಉಬ್ಬಿಸಿ ಓಡಾಡುವಾಗ ಈ ಆಟಗಾರರನ್ನು ಏಕೆ ಜೈಲಿಗೆ ಹಾಕಬೇಕು ಎಂದು ಕೆಲವರು ವಾದಿಸಬಹುದು. ಆದರೆ ಇವರನ್ನು ಜೈಲಿಗೆ ಕಳುಹಿಸುವುದರಿಂದ ಕ್ರೀಡಾಕ್ಷೇತ್ರದ ಭವಿಷ್ಯ ಇನ್ನಷ್ಟು ಭವ್ಯವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT