ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ-20 ಸಭ್ಯತೆಯ ಚೌಕಟ್ಟಿನಾಚೆ...

Last Updated 16 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ದಶಕಗಳ ಹಿಂದೆ ರಾಜ ಮಹಾರಾಜರ ಆಸ್ಥಾನಗಳಲ್ಲಿ ನಾಟಕ ಪ್ರದರ್ಶನ ಮಾಡಲು ಅಂದಿನ ನಾಟಕ ಮಂಡಳಿಯವರು ಹೋಗುತ್ತಿದ್ದರು. ಆಗ ನಾಟಕದಲ್ಲಿ ಬರುವ ಕೆಲವು ಅಸಭ್ಯ ಎನಿಸುವ ಪದಗಳನ್ನು ಬದಿಗಿಟ್ಟು ಭಾರಿ ಶಿಸ್ತಿನಿಂದ ನಾಟಕ ಆಡುತ್ತಿದ್ದರು. ನಾಟಕ ಸಭೆಯಲ್ಲಿ ಇರುತ್ತಿದ್ದ ಪ್ರೇಕ್ಷಕ ಮಹಾಶಯರು ಕೂಡ ಅಷ್ಟೇ ಶಿಸ್ತಿನಿಂದ ಆಸೀನರಾಗಿ ನೋಡುತ್ತಿದ್ದವು. ವಿಶೇಷವೆಂದರೆ ಚಪ್ಪಾಳೆ ತಟ್ಟಬೇಕು ಎನ್ನಿಸಿದರೆ ಒಂದು ಕೈಯಲ್ಲಿ ಕರವಸ್ತ್ರ ಇಟ್ಟುಕೊಂಡು ಅದರ ಮೇಲೆ ಹೆಚ್ಚು ಸದ್ದಾಗದಂತೆ ತಟ್ಟುತ್ತಿದ್ದರು.

ಅದೇ ನಾಟಕ ಹಳ್ಳಿಯ ಅಂಚಿನ ಹೊಲದಲ್ಲಿ ಹೆಂಡಿ ಜೋಡಿಸಿಟ್ಟ ವೇದಿಕೆಯಲ್ಲಿ ಪ್ರದರ್ಶನವಾದಾಗ ಇರುತ್ತಿದ್ದ ಪ್ರೇಕ್ಷಕರಿಗೆ ಆ ಸಭ್ಯತೆಯ ಚೌಕಟ್ಟು ಇರಲಿಲ್ಲ.

ಮೆಚ್ಚುಗೆಯಾದ ದೃಶ್ಯಕ್ಕೆ ಚಪ್ಪಾಳೆ-ಶಿಳ್ಳೆ ಹಾಕುತ್ತಿದ್ದರು. ಅವರಲ್ಲಿ ಹೆಚ್ಚಿನವರಿಗೆ ಎರಡು ಅರ್ಥ ಹೊಮ್ಮಿಸುವ ಸಂಭಾಷಣೆಗಳು ಭಾರಿ ಇಷ್ಟ. ಹೀಗೆ ಜನರಿಗೆ ಇಷ್ಟವೆಂದು ಡಬಲ್ ಮೀನಿಂಗ್ ಡೈಲಾಗ್ ಹೆಚ್ಚಾದವು. ಈಗಲೂ ಕೆಲವು ಕಂಪೆನಿ ನಾಟಕಗಳಲ್ಲಿ ಅಂಥ ಸಂಭಾಷಣೆಗಳನ್ನು ಕೇಳಬಹುದಾಗಿದೆ. ಆದರೆ ಜನರು ಬಯಸುತ್ತಾರೆಂದು ಅಸಭ್ಯತೆಯು ಅಟ್ಟಹಾಸ ಮಾಡುವಂಥ ದೃಶ್ಯಗಳ ಜೋಡಣೆ ಅತಿಯಾಗಿದ್ದರ ಪರಿಣಾಮ ಏನೆನ್ನುವುದಕ್ಕೆ ನಾಟಕ ಮಂಡಳಿಗಳ ಇಂದಿನ ಸ್ಥಿತಿಯೇ ಸಾಕ್ಷಿ.

ಇದೇನು ಕ್ರಿಕೆಟ್ ಆಟಕ್ಕೂ ಹಾಗೂ ಕಂಪೆನಿ ನಾಟಕಕ್ಕೂ ಎಲ್ಲಿಂದೆಲ್ಲಿಯ ಸಂಬಂಧವೆಂದು ಯೋಚಿಸುವ ಅಗತ್ಯವಿಲ್ಲ. ಕ್ರಿಕೆಟ್ ಆಟವನ್ನು ಬದಲಿಸುತ್ತಾ ಜನರಿಗೆ ಬೇಕೆಂದು ಸಭ್ಯತೆಯ ಚೌಕಟ್ಟಿನಿಂದ ಎಳೆದು ತಂದಿರುವುದಕ್ಕೆ ಸ್ವಲ್ಪವಾದರೂ ಹೋಲಿಕೆ ಇದೆ. ಟೆಸ್ಟ್ ಎನ್ನುವ ಶಾಸ್ತ್ರದ ಸೂತ್ರದಲ್ಲಿನ ಕ್ರಿಕೆಟ್‌ಗೂ ಹಾಗೂ ಜನರು ಬಯಸುತ್ತಾರೆಂದು ಇಪ್ಪತ್ತು ಓವರುಗಳ ತುಂಡು ಉಡುಗೆ ತೊಡಿಸಿ ನಿಲ್ಲಿಸಿರುವ ಟ್ವೆಂಟಿ-20 ಪ್ರಕಾರಕ್ಕೂ ನಾಟಕ ಕಂಪೆನಿಗಳು ಸಾಗಿದ ಇತಿಹಾಸದ ಮಾದರಿ ಒಂದು ಮಟ್ಟದಲ್ಲಿ ಹೋಲಿಕೆ ಆಗುತ್ತದೆ. ಆದ್ದರಿಂದಲೇ ಈ ಚುಟುಕು ಕ್ರಿಕೆಟ್ ಎನ್ನುವುದು ಸಭ್ಯರ ಆಟವನ್ನು ಕುಲಗೆಡಿಸುತ್ತ ಸಾಗಿದೆ ಎನಿಸುತ್ತಿದೆ.

ಯಾವುದೋ ಒಂದು ಜಾಹೀರಾತಿನಲ್ಲಿ ಮುಂಬರುವ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ ಪ್ರಚಾರಕ್ಕಾಗಿ ಒಂದು ಸಾಲು ಬಳಸಲಾಗಿದೆ. `ಸಭ್ಯತೆಯಿಂದ ಆಡಲಾಗದು; ಸಭ್ಯತೆಯಿಂದ ನೋಡಲಾಗದು~ ಎನ್ನುವ ಅರ್ಥ ನೀಡುವ ಆ ಹಿಂದಿ ಭಾಷೆಯ ನಾಲ್ಕು ಪದಗಳು ಕ್ರಿಕೆಟ್ ಆಟವನ್ನು ಶಿಸ್ತಿನಿಂದ ಆಸ್ವಾದಿಸುವವರ ಮನಸ್ಸಿಗೆ ಚುಚ್ಚಿವೆ. ಇಲ್ಲಿ ಜಾಹೀರಾತನ್ನು ಹಾಗೂ ಅದರ ಜೊತೆಗೆ ನಂಟಿರುವ ಉತ್ಪಾದನೆಯನ್ನು ದೂರಲಾಗುತ್ತಿಲ್ಲ. ಬದಲಿಗೆ ಅಲ್ಲಿ ಹುಟ್ಟುಹಾಕಿರುವ ಭಾವನೆ ಬಗ್ಗೆ ಮಾತ್ರ ಇಲ್ಲಿ ವಿಶ್ಲೇಷಣೆ.

ಕ್ರೀಡಾಪಟುವು ಸಭ್ಯತೆಯಿಂದ ಆಡಬೇಕು ಹಾಗೂ ಪ್ರೇಕ್ಷಕರು ಸಭ್ಯತೆಯಿಂದ ನೋಡಬೇಕು ಎನ್ನುವುದು ಕ್ರೀಡೆಯ ಜೊತೆಗೆ ಬೆಸೆದುಕೊಂಡಿರುವ ಮೂಲ ತತ್ವ. ಆದರೆ ಆ ತತ್ವವನ್ನೇ ಈ ಚುಟುಕು ಕ್ರಿಕೆಟ್ ಗಾಳಿಗೆ ತೂರುವ ಯತ್ನದಲ್ಲಿದೆ. ಆಟ ಎನ್ನುವುದು ರಂಜನೆ ನಿಜ. ಆದರೆ ಅದನ್ನು ಶಿಸ್ತಿನ ಚೌಕಟ್ಟಿನಿಂದ ಹೊರಗೆ ಎಳೆದು ಬೆತ್ತಲಾಗಿ ನಿಲ್ಲಿಸುವುದು ಖಂಡಿತ ಒಪ್ಪಲಾಗದು. ಕಳೆದ ಐದು ವರ್ಷಗಳಲ್ಲಿ ಟ್ವೆಂಟಿ-20 ಸಾಕಷ್ಟು ಜನಪ್ರಿಯತೆ ಗಳಿಸಿದ್ದರೂ, ಅದು ಅತಿರೇಕದ ಅನೇಕ ಘಟನೆಗಳಿಗೆ ಸಾಕ್ಷಿಯಾಗಿದೆ.

ಬೆಟ್ಟಿಂಗ್ ಪ್ರಿಯರ ಅಚ್ಚುಮೆಚ್ಚಿನ ಕ್ರಿಕೆಟ್ ಪ್ರಕಾರದ ಹಿಂದೆ `ಫಿಕ್ಸಿಂಗ್~ ಭೂತವೂ ಬೆನ್ನತ್ತಿದೆ. ಶ್ರೀಲಂಕಾದಲ್ಲಿ ಸೆಪ್ಟೆಂಬರ್ 18ರಂದು ಆರಂಭವಾಗಲಿರುವ ಈ ಬಾರಿಯ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ ಮೇಲೂ ಫಿಕ್ಸಿಂಗ್ ಎನ್ನುವ ಭಯದ ನೆರಳು ಆವರಿಸುವ ಭಯ ಇದ್ದೇ ಇದೆ. ಆದ್ದರಿಂದಲೇ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯು ತನ್ನ ಭ್ರಷ್ಟಾಚಾರ ತಡೆ ಘಟಕವು ಆಟಗಾರರ ಮೇಲೆ ಹದ್ದುಗಣ್ಣು ಇಡುವಂತೆ ಮಾಡಿದೆ. ಅಷ್ಟೇ ಅಲ್ಲ ತನ್ನ ಸದಸ್ಯ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳ ಸಹಕಾರವನ್ನೂ ಕೋರಿದೆ.

ಈ ನಡುವೆ ಕೆಲ ಕ್ರಿಕೆಟ್ ಮಂಡಳಿಗಳು ತಮ್ಮ ಆಟಗಾರರಿಗೆ ಕೆಲವು ಎಚ್ಚರಿಕೆಯ ಸೂತ್ರಗಳನ್ನು ಕಿವಿಯಲ್ಲಿ ಗುಟುರು ಹಾಕಿದ್ದಾಗಿದೆ. ಲಂಕಾದಲ್ಲಿ ನೈಟ್‌ಕ್ಲಬ್‌ಗಳ ಆಕರ್ಷಣೆ ಹೆಚ್ಚು. ಅತ್ತ ಹೆಜ್ಜೆ ಹಾಕಿದರೂ ಸ್ವಲ್ಪ ಜಾಗರೂಕತೆ ಎಂದು ಹೇಳಿದೆ. ಅಪರಿಚಿತ ವ್ಯಕ್ತಿಗಳ ಜೊತೆಗೆ ಮಾತನಾಡುವುದು ಹಾಗೂ ಗೊತ್ತಿಲ್ಲದ ವ್ಯಕ್ತಿಗಳ ಸ್ನೇಹ ಬೆಳೆಸುವುದು ಅಪಾಯಕ್ಕೆ ಕಾರಣವಾದೀತೆಂದು ಕೂಡ ತಿಳಿಸಿಯಾಗಿದೆ. ವಿಶ್ವಕಪ್‌ನಲ್ಲಿ ಆಡುವ ದಿನಗಳಲ್ಲಿ ನೈಟ್‌ಲೈಫ್‌ಗೆ ಕಡಿವಾಣ ಹಾಕುವುದೇ ಸೂಕ್ತವೆಂದು ಸೂಚನೆ ನೀಡಿದ್ದು ಅಚ್ಚರಿಯೇನಲ್ಲ.

ಕತ್ತಲೆಯ ಮತ್ತಿನಲ್ಲಿ ಸುತ್ತಲಿರುವ ಆಪತ್ತುಗಳು ಗೊತ್ತಾಗುವುದಿಲ್ಲ ಎನ್ನುವುದಕ್ಕೆ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತನ್ನು ಕಾಡಿದ ಕೆಲವು ಘಟನೆಗಳು ಇನ್ನೂ ನೆನಪಿನ ಪುಟದಿಂದ ಮಾಸಿಲ್ಲ. ಆದ್ದರಿಂದ ಸ್ವಲ್ಪ ಜಾಗರೂಕತೆ `ಇದು ಸಭ್ಯರ ಆಟ~ ಎನ್ನುವ ಮಾತನ್ನು ಮನದಲ್ಲಿ ನೆಟ್ಟುಕೊಂಡಿರುವುದೇ ಸರಿ.

ಚುಟುಕು ಕ್ರಿಕೆಟ್ ಆಟವನ್ನು ನೋಡಲು ಪ್ರೇರೇಪಿಸುವ ಉದ್ದೇಶಕ್ಕಾಗಿ `ಸಭ್ಯತೆಯಿಂದ ಆಡಲಾಗುವುದಿಲ್ಲ; ಸಭ್ಯತೆಯಿಂದ ನೋಡಲಾಗುವುದಿಲ್ಲ~ ಎನ್ನುವ ಮಂತ್ರ ಪಠಣ ನಡೆದಿದ್ದರೂ ಒಂದು ಅಂಶ ಖಂಡಿತ ಮರೆಯಬಾರದು. ಇದು ಕ್ರಿಕೆಟ್; ಸಭ್ಯರ ಆಟ...!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT