ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬೆಂಗಳೂರು' ತಂಡದ ಏಳುಬೀಳು

Last Updated 5 ಮೇ 2013, 19:59 IST
ಅಕ್ಷರ ಗಾತ್ರ

ರಣಜಿ ಟ್ರೋಫಿ ಹಾಗೂ ಟೆಸ್ಟ್ ಪಂದ್ಯಗಳಿಗೆ ಈಗ ಮುಗಿ ಬೀಳದ ಜನ, ಐಪಿಎಲ್ ಪಂದ್ಯಗಳಿಗೆ ಟಿಕೆಟ್‌ಗಾಗಿ ಹೊಡೆದಾಡುವ ದೃಶ್ಯಗಳನ್ನು ನೋಡಿದರೆ ಈಗ ಕ್ರಿಕೆಟ್ ಯಾವ ಮಟ್ಟವನ್ನು ಮುಟ್ಟಿದೆ ಎಂಬುದರ ಅರಿವಾಗುತ್ತದೆ. ಜನರಿಗೆ ಮೂರು ಗಂಟೆಗಳ ಹಾಡು ಕುಣಿತಗಳು ಮತ್ತು ಇವುಗಳ ನಡುವೆ ಸ್ವಲ್ಪ ಕ್ರಿಕೆಟ್ ಎಂಬ ಮನರಂಜನೆ ಮತ್ತು ಆಕರ್ಷಣೆಗೆ ಮನಸೋತಿದ್ದಾರೆ. ಇದಕ್ಕೆ ಬೆಂಗಳೂರು ಹೊರತಾಗಿಲ್ಲ. ಬೆಂಗಳೂರಿನ ಜತೆಗೆ ಆರ್‌ಸಿಬಿ ತಂಡ ಗುರುತಿಸಿಕೊಂಡಿರುವುದರಿಂದ ಕನ್ನಡಿಗರ ಮಟ್ಟಿಗೆ ಈ ತಂಡವನ್ನು ಗಂಭೀರವಾಗಿಯೇ ಪರಿಗಣಿಸಬಹುದು.

ವಿಜಯ್ ಮಲ್ಯ ಒಡೆತನದ ರಾಯಲ್ ಚಾಲೆಂಜರ್ಸ್ ತಂಡ ಐಪಿಎಲ್ ಆರಂಭವಾದಾಗಿನಿಂದ ಏಳುಬೀಳುಗಳನ್ನು ಅನುಭವಿಸುತ್ತಲೇ ಇದೆ. ಚೆನ್ನೈ ತಂಡವನ್ನು ಸ್ಪಲ್ಪಮಟ್ಟಿಗೆ ಹೊರತು ಪಡಿಸಿದರೆ, ಮಿಕ್ಕ ಎಲ್ಲಾ ತಂಡಗಳು ಸ್ಥಿರಪ್ರದರ್ಶನವನ್ನು ತೋರಲು ಸಾಧ್ಯವಾಗಿಲ್ಲ. ಇದು ತಂಡಗಳ ಬಲಾಬಲಗಳಿಗಿಂತ ಈ ಟಿ-20 ಆಟದ ಅಸ್ಥಿರತೆಯೇ ಕಾರಣ.

ಬೆಂಗಳೂರು ತಂಡ ಮೊದಲ ಬಾರಿಗೆ ಏಳನೇ ಸ್ಥಾನಕ್ಕೆ ಇಳಿದ ನಂತರ ಎರಡು ಬಾರಿ ರನ್ನರ್‌ಅಪ್ ಹಾಗೂ ಒಂದು ಬಾರಿ ಸೆಮಿಫೈನಲ್ ಹಂತ ಪ್ರವೇಶ ಮಾಡಿದರೂ 2012ರಲ್ಲಿ ಐದನೇ ಸ್ಥಾನಕ್ಕೆ ಇಳಿಯಬೇಕಾಯಿತು. ಆಗ ಚೆನ್ನೈ ಹಾಗೂ ಬೆಂಗಳೂರು ತಂಡಗಳು 17 ಅಂಕ ಗಳಿಸಿದಾಗ ರನ್‌ಗಳಿಕೆಯ ಆಧಾರದ ಮೇಲೆ ಹಿಂದುಳಿಯಿತು.

ಅದಕ್ಕೆ ಕಾರಣವೆಂದರೆ ಕೊನೆಯ ಪಂದ್ಯದಲ್ಲಿ ಕೊನೆಯ ಸ್ಥಾನದಲ್ಲಿದ್ದ ಡೆಕ್ಕನ್ ಚಾರ್ಜರ್ಸ್ ತಂಡದ ಮೇಲೆ ಸೋತ ಪ್ರತಿಫಲ. ಈ ಬಾರಿಯಂತೆ ಕಳೆದ ಸಲವೂ ಗೇಲ್, ಎ.ಬಿ.ಡಿವಿಲಿಯರ್ಸ್, ದಿಲ್ಶಾನ್ ಮೇಲೆ ಹೆಚ್ಚು ಅವಲಂಬಿಸಿದ್ದರಿಂದ ಆ ಪಂದ್ಯದಲ್ಲಿ ಅವರೂ ವಿಫಲರಾದಾಗ ತಂಡ ಮುಗ್ಗರಿಸಿತು. ಕಳೆದ ಬಾರಿ ವಿರಾಟ್ ಕೊಹ್ಲಿಯವರು ಉಳಿದುಕೊಂಡಿದ್ದರು. ಉದ್ದ ಕೂದಲಿನ ಸೌರವ್ ತಿವಾರಿಗೆ ಏಳು ಕೋಟಿ ರೂಪಾಯಿ ಸುರಿದು ಖರೀದಿಸಿದ್ದು ಎಲ್ಲರಿಗೂ ಯಕ್ಷ ಪ್ರಶ್ನೆಯಾಗಿತ್ತು.

ಕೊಹ್ಲಿ ಮತ್ತು ತಿವಾರಿ ಇಬ್ಬರೂ `ಫಾರ್ಮ್' ಕಂಡು ಕೊಳ್ಳಲಿಲ್ಲ. ಬೌಲಿಂಗ್‌ನಲ್ಲಿ ಮುರಳೀಧರನ್ ಅವರನ್ನು ಪಡೆದುಕೊಂಡರೂ ಐದನೇ ಬೌಲರ್‌ನ ಕೊರತೆಯಿಂದ ನರಳಿದರು. ಕಳೆದ ವರ್ಷದ ಒಂದೇ ಸಮಾಧಾನಕರ ನೋಟವೆಂದರೆ 5.4 ಕೋಟಿ ರೂಪಾಯಿ ಕೊಟ್ಟು ನಮ್ಮ ದಾವಣಗೆರೆ ಎಕ್ಸ್‌ಪ್ರೆಸ್ ವಿನಯ ಕುಮಾರ್ ಅವರನ್ನು ಮರಳಿ ಪಡೆದದ್ದು ಹಾಗೂ ವಿನಯ್ 19 ವಿಕೆಟ್ ಪಡೆದು ಆ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು.

ಆದರೆ ನಾಯಕ ಡೇನಿಯಲ್ ವೆಟೋರಿ ತಮ್ಮ ಸ್ಥಾನ ಕಳೆದುಕೊಳ್ಳಬೇಕಾಯಿತು. ಈ ವರ್ಷದ ಕೆಲವು ಬದಲಾವಣೆಗಳು ಸ್ವಲ್ಪ ಮಟ್ಟಿಗೆ ಅಚ್ಚರಿಗೊಳಿಸಿದವು. ಭಾರತ ತಂಡದ ಮುಂದಿನ ನಾಯಕ ಎಂದೇ ಬಿಂಬಿಸಲಾಗುತ್ತಿರುವ ವಿರಾಟ್ ಕೊಹ್ಲಿ ಅವರನ್ನು ಆರ್‌ಸಿಬಿ ತಂಡದ ಕಪ್ತಾನ ಪಟ್ಟಕ್ಕೇರಿಸಲಾಯಿತು. ಕೊಹ್ಲಿಯವರು ರಾಹುಲ್ ದ್ರಾವಿಡ್ ಅವರಂತೆ ಗಂಭೀರ ನಡೆನುಡಿಯ ಸಮರ್ಥ ನಾಯಕನಾಗಲು ಸಾಧ್ಯವಿಲ್ಲದಿರಬಹುದು. ಆದರೆ ಅವರು ಲಘು ವ್ಯಕ್ತಿತ್ವದ ನಾಯಕನಂತೂ ಆಗುವುದಿಲ್ಲ. ಅಷ್ಟರಮಟ್ಟಿಗೆ ಅವರು ಸಮರ್ಥರೇ ಹೌದು.

  ಈ ವರ್ಷವೂ ಮುಂದುವರಿದಿರುವ ತರಬೇತುದಾರ ದಕ್ಷಿಣ ಆಫ್ರಿಕಾದ ರೇ ಜೆನಿಂಗ್ಸ್ ಬಹಳಷ್ಟು ಆಸೆ ಹೊತ್ತಿದ್ದರು. ನಿಜವಾಗಿಯೂ ತಂಡದ ಬಗ್ಗೆ ಜೆನಿಂಗ್ಸ್ ಅವರ ಮಾತುಗಳು ವೃತ್ತಿಪರನೊಬ್ಬನ ಪ್ರಾಮಾಣಿಕ ಅಭಿವ್ಯಕ್ತಿಯಂತೆನಿಸುತ್ತದೆ.

ಅವರಿಗೆ ಆಟದ ಬಗ್ಗೆ ಇರುವ ಆಳವಾದ ಅನುಭವ ಮನದಾಳದ ನೇರ ಮಾತಿನ ವೈಖರಿ ಮನಹಿಡಿಸುವಂತಿದೆ. ಆದರೂ ಆರ್‌ಸಿಬಿ ಯಾಕೆ ಮನೆಯಂಗಣದಲ್ಲಿ ಮಾತ್ರ ಹುಲಿಗಳ ತರಹ ಆಡಿ, ಹೊರಗೆ ಮುಗ್ಗರಿಸುತ್ತಿದೆ. ಉತ್ತರಗಳು ಸರಳವಾಗಿವೆ. ಮೊದಲನೆಯದಾಗಿ ಬೆಂಗಳೂರು ತಂಡದ ಹೊಂದಾಣಿಕೆಯಲ್ಲಿ ಚೆನ್ನೈ ತಂಡದ ತರಹ `ಫ್ಲೆಕ್ಸಿಬಿಲಿಟಿ' ಇಲ್ಲ.

ಈ ವರ್ಷದ ಹರಾಜಿನಲ್ಲಿ ಕೊನೆ ಕೊನೆಯಲ್ಲಿ ಮಾಲೀಕರು ಬೌಲರ್‌ಗಳ ದಂಡನ್ನೇ ಪಡೆದಾಗ ಬೌಲಿಂಗ್ ಬಲ ಪಡಿಸುತ್ತಿದ್ದಾರೆ ಎಂದೆನಿಸುತಿತ್ತು. ಆದರೆ ಆರ್‌ಸಿಬಿಯ ಬ್ಯಾಟಿಂಗ್ ಅಸ್ಥಿರತೆಯಿಂದ ವಿದೇಶಿ ಬೌಲರ್‌ಗಳನ್ನು ಆಡಿಸಲು ಸಾಧ್ಯವಾಗುತ್ತಿಲ್ಲ. ಗೇಲ್, ಡಿವಿಲಿಯರ್ಸ್, ದಿಲ್ಶಾನ್ ಇರಲೇ ಬೇಕು. ಮೊದ ಮೊದಲು ಸ್ಥಾನಗಳಿಸಿ ಮಿಂಚಿದ್ದ ಮುರಳೀಧರನ್‌ಗೆ ಈಗ ಅವಕಾಶವಿಲ್ಲ. ಜಹೀರ್‌ಖಾನ್ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ.

ವಿನಯಕುಮಾರ್ ಒಬ್ಬರೇ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಆರ್.ಪಿ.ಸಿಂಗ್ ಮತ್ತು ಜಯದೇವ್ ಉನದ್ಕತ್ ದುಬಾರಿಯಾಗಿದ್ದಾರೆ. ಕಳೆದ ಬಾರಿಯ ನಾಯಕ ವೆಟೋರಿ ಇನ್ನೂ ಈ ಕೂಟದಲ್ಲಿ ಚೆಂಡನ್ನೇ ಮುಟ್ಟಿಲ್ಲ. ನಮ್ಮ ಹದಿ ಹರೆಯದ ಹುಡುಗರಾದ ಕರುಣ್ ನಾಯರ್ ಹಾಗೂ ಕೆ.ಎಲ್.ರಾಹುಲ್ ಅವರಿಗೆ ಅವಕಾಶ ಸಿಕ್ಕರೂ ಈ ಐಪಿಎಲ್‌ನ ಒತ್ತಡವೇ ಬೇರೆ. ಅದು ಆರ್‌ಸಿಬಿಗಷ್ಟೇ ಸೀಮಿತವಾದ ಕಥೆಯಲ್ಲ. ಎಲ್ಲೆಡೆಯಲ್ಲಿಯೂ ಅದೇ ಸಮಸ್ಯೆ.

19 ವರ್ಷದೊಳಗಿನ ಭಾರತೀಯ ತಂಡದ ನಾಯಕ ದೆಹಲಿಯ ಉನ್ಮುಕ್ತ್ ಚಾಂದ್ ಅವರಿಗೇ ದೆಹಲಿ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ. ರವಿ ರಾಂಪಾಲ್ ಒಬ್ಬರೇ ತಂಡಕ್ಕೆ ಕೊನೆಯವರಾಗಿ ಸೇರ್ಪಡೆಗೊಂಡು ಆಯ್ಕೆ ಸಮರ್ಥಿಸಿಕೊಂಡಿದ್ದಾರೆ. ಇನ್ನುಳಿದ ಯುವ ಆಟಗಾರರಾದ ಸಂದೀಪ್ ವಾರಿಯರ್, ಪ್ರಶಾಂತ್ ಪರಮೇಶ್ವರನ್, ಸನ್ನಿಸೊಹೇಲ್, ಸೆಲ್ಡನ್ ಜಾಕ್ಸನ್, ಅಭಿನವ್ ಮುಕುಂದ್ ಮೂಕಪ್ರೇಕ್ಷಕರಾಗಿದ್ದಾರೆ.

ಹಿಂದಿನ ಆರ್‌ಸಿಬಿ ತಂಡದ `ಚೇತನ' ಅನಿಲ್ ಕುಂಬ್ಳೆ ಅವರು ಮುಂಬೈ ತಂಡಕ್ಕೆ ವಲಸೆ ಹೋಗಿದ್ದು ಯುವ ಆಟಗಾರರಿಗೆ ಆಘಾತವಾಗಿರಬಹುದು. ಹೊರಗಡೆ ಗೆಲ್ಲಲು ಪುಣೆ ಮತ್ತು ದೆಹಲಿ ಇವೆ. ಈಗಲೇ ಆರ್‌ಸಿಬಿ ತಂಡ `ಪ್ಯಾನಿಕ್' ಬಟನ್ ಒತ್ತುವ ಹಾಗಿಲ್ಲ. ಇಷ್ಟೆಲ್ಲಾ ಆದರೂ ಆರ್‌ಸಿಬಿ  ಮೊದಲ ನಾಲ್ಕರ ಘಟ್ಟ ತಲುಪುವುದು ಖಚಿತ.

ಒಂದೊಂದು ಬಾರಿ ಇದು ನಮ್ಮ ಕರ್ನಾಟಕದ ಬೆಂಗಳೂರು ತಂಡವೇ ಎಂಬ ಶಂಕೆ ಮೂಡುತ್ತದೆ. ಅದು ಹೇಗೆ ಚೆನ್ನೈ ತಂಡ ಹರಾಜಿನಲ್ಲಿ ತಮ್ಮವರೇ ಆದ ಅಶ್ವಿನ್, ಬದರೀನಾಥ್, ಎಂ.ವಿಜಯ್, ಅವರನ್ನು ಪಡೆದುಕೊಳ್ಳಲು ಸಾಧ್ಯ. ಆದರೆ ನಮಗೆ ಮಾತ್ರ ಉತ್ತಪ್ಪ, ಮನೀಷ್ ಪಾಂಡೆ ಹಾಗೂ ಗೌತಮ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಮಾಲೀಕರದೇ ಕಾರುಬಾರು. ತಂಡ ಗೆದ್ದರೆ ಮಾಲೀಕರ ಪ್ರತಿಷ್ಠೆ ಹೆಚ್ಚುತ್ತದೆ. ಆದರೆ ಬೆಂಗಳೂರು ತಂಡ ಮಾಲೀಕರ ವಿಮಾನದಂತೆ ನೆಲ ಕಚ್ಚದಿದ್ದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT