ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ-ಸುದ್ದಿ: ಉತ್ತರ ಪ್ರದೇಶ, ಕೇರಳ, ಪಶ್ಚಿಮ ಬಂಗಾಳ..ಅಭಿವೃದ್ಧಿ ಮಾದರಿಯ ತಾಳೆ

Last Updated 15 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

‘ನಾವು ಅಧಿಕಾರಕ್ಕೆ ಬರದೇ ಇದ್ದರೆ, ಉತ್ತರ ಪ್ರದೇಶವು ಜಮ್ಮು–ಕಾಶ್ಮೀರ, ಪಶ್ಚಿಮ ಬಂಗಾಳ ಮತ್ತು ಕೇರಳದಂತೆ ಆಗುತ್ತದೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿದ್ದು ಬಾರಿ ಚರ್ಚೆಗೆ ಕಾರಣವಾಗಿದೆ. ಯೋಗಿ ಅವರ ಹೇಳಿಕೆಗೆ ಈ ರಾಜ್ಯಗಳ ಮುಖ್ಯಮಂತ್ರಿಗಳು, ನಾಯಕರು ಮತ್ತು ನಾಗರಿಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಉತ್ತರ ಪ್ರದೇಶ ಮತ್ತು ಈ ಮೂರು ರಾಜ್ಯಗಳ ಅಭಿವೃದ್ಧಿಯ ವಿವಿಧ ಆಯಾಮಗಳನ್ನು ಹೋಲಿಕೆ ಮಾಡಿ ನೋಡುವವರೆಗೂ ಈ ಚರ್ಚೆ ಹೋಗಿದೆ.

‘ಉತ್ತರ ಪ್ರದೇಶವು ಬೇರೆ ರಾಜ್ಯಗಳಿಗೆ ಹೋಲಿಸಿದರೆ ತೀರಾ ಹಿಂದೆ ಉಳಿದಿದೆ. ಅದಕ್ಕಿಂತ ಹೆಚ್ಚು ಅಭಿವೃದ್ಧಿ ಹೊಂದಿರುವ ಕೇರಳ, ಪಶ್ಚಿಮ ಬಂಗಾಳ ಮತ್ತು ಜಮ್ಮು–ಕಾಶ್ಮೀರದಂತೆ ಆಗುವುದಾದರೆ, ಉತ್ತರ ಪ್ರದೇಶದ ಜನರು ಖುಷಿ ಪಡಲಿದ್ದಾರೆ’ ಎಂದು ಬಿಜೆಪಿಯೇತರಪಕ್ಷಗಳ ನಾಯಕರು ಹೇಳಿದ್ದಾರೆ.

‘ಯೋಗಿ ಆದಿತ್ಯನಾಥ ಅವರು ಹೋಲಿಕೆಗೆ ಆಯ್ಕೆ ಮಾಡಿಕೊಂಡ ಈ ಮೂರೂ ರಾಜ್ಯಗಳು ಬಹುತೇಕ ಕ್ಷೇತ್ರಗಳಲ್ಲಿ ಉತ್ತರ ಪ್ರದೇಶಕ್ಕಿಂತ ಮುಂದೆ ಇವೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವಿದ್ದರೂ, ಉತ್ತರ ಪ್ರದೇಶ ಅಭಿವೃದ್ಧಿಯಾಗಿಲ್ಲ’ ಎಂದು ಹಲವು ಜನರು ಸಾಮಾಜಿಕ ಜಾಲತಾಣಗಳಲ್ಲಿ ಬೊಟ್ಟುಮಾಡಿ ತೋರಿಸುತ್ತಿದ್ದಾರೆ. ವಿರೋಧ ಪಕ್ಷಗಳು ಅಧಿಕಾರದಲ್ಲಿ ಇರುವ ರಾಜ್ಯಗಳು, ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಿಗಿಂತ ಈ ಕ್ಷೇತ್ರಗಳಲ್ಲಿ ಹೆಚ್ಚು ಪ್ರಗತಿ ಸಾಧಿಸಿವೆ. ಹೀಗಾಗಿ ಅಭಿವೃದ್ಧಿಯಲ್ಲಿನ ಈ ಅಂತರವನ್ನು ಎತ್ತಿ ತೋರಿಸಲಾಗುತ್ತಿದೆ. ಉತ್ತರ ಪ್ರದೇಶದ ಸ್ಥಿತಿಗತಿಯ ಜತೆಗೆ ಕೇರಳ,ಪಶ್ಚಿಮ ಬಂಗಾಳ ಮತ್ತು ಜಮ್ಮು–ಕಾಶ್ಮೀರದಲ್ಲಿ ಆಗಿರುವ ಅಭಿವೃದ್ಧಿಯನ್ನು ಹೋಲಿಸಲಾಗುತ್ತಿದೆ.

2014ರ ಲೋಕಸಭಾ ಚುನಾವಣೆಗೂ ಮುನ್ನ ಗುಜರಾತ್ ಮಾದರಿಯ ಅಭಿವೃದ್ಧಿ ಎಂಬುದು ಬಿಜೆಪಿಯ ಪ್ರಚಾರದ ಕೇಂದ್ರಬಿಂದು ಆಗಿತ್ತು. ಆದರೆ ಗುಜರಾತ್ ಮಾದರಿ ಏನು ಎಂಬುದನ್ನು ಬಿಜೆಪಿ ವಿವರಿಸಿರಲಿಲ್ಲ. ಆದರೆ, ಗುಜರಾತ್ ಸಹ ಅಭಿವೃದ್ಧಿಯ ಈ ಆಯಾಮಗಳಲ್ಲಿ ಕೇರಳ ಮತ್ತು ಜಮ್ಮು–ಕಾಶ್ಮೀರಕ್ಕಿಂತ ಹಿಂದೆ ಉಳಿದಿದೆ. ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿಯ ದತ್ತಾಂಶಗಳೂ ಇದನ್ನೇ ಹೇಳುತ್ತವೆ. ಹೀಗಾಗಿ ಬಿಜೆಪಿ ಹೇಳುತ್ತಿರುವ ಅಭಿವೃದ್ಧಿಯ ಮಾದರಿಗಳನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ಲೇವಡಿ ಮಾಡುತ್ತಿದ್ದಾರೆ.

ಉತ್ತರ ಪ್ರದೇಶ ಮತ್ತು ಬೇರೆ ರಾಜ್ಯಗಳು ಅಭಿವೃದ್ಧಿಯ ವಿವಿಧ ಆಯಾಮಗಳಲ್ಲಿ ಸಾಧಿಸಿರುವ ಪ್ರಗತಿಯ ಚಿತ್ರಣ ಇಲ್ಲಿದೆ.

ಸಾಕ್ಷರತೆ

ಸಾಕ್ಷರತೆಯಲ್ಲಿ ಉತ್ತರ ಪ್ರದೇಶವು ತೀರಾ ಹಿಂದೆ ಉಳಿದಿದೆ. ಕೇರಳದಲ್ಲಿ ಸಾಕ್ಷರತೆ ಪ್ರಮಾಣವು ಶೇ 97.3ರಷ್ಟು ಇದ್ದರೆ, ಉತ್ತರ ಪ್ರದೇಶದಲ್ಲಿ ಸಾಕ್ಷರತೆ ಪ್ರಮಾಣವು ಶೇ 73ರಷ್ಟು ಇದೆ. ಮಹಿಳಾ ಸಾಕ್ಷರತೆ ಪ್ರಮಾಣದಲ್ಲಿ ಉತ್ತರ ಪ್ರದೇಶವು (ಶೇ 66.1) ಬೇರೆಲ್ಲಾ ರಾಜ್ಯಗಳಿಗಿಂತ ತೀರಾ ಹಿಂದೆ ಉಳಿದಿದೆ. ಗುಜರಾತ್‌ನಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ಶೇ 73.5ರಷ್ಟು ಇದೆ. ಆದರೆ ಈವರೆಗೆ ಬಿಜೆಪಿಯೇತರ ಪಕ್ಷಗಳೇ ಆಡಳಿತ ನಡೆಸಿರುವ ಕೇರಳದಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ಶೇ 97.4ರಷ್ಟು ಇದ್ದರೆ, ಪಶ್ಚಿಮ ಬಂಗಾಳದಲ್ಲಿ
ಶೇ 72.9ರಷ್ಟು ಮತ್ತು ಜಮ್ಮು–ಕಾಶ್ಮೀರದಲ್ಲಿ ಶೇ 74.3ರಷ್ಟು ಇದೆ.


ಎಲ್‌ಪಿಜಿ ಬಳಕೆ

‘ಡಬಲ್ ಎಂಜಿನ್’ ಸರ್ಕಾರವಿದ್ದರೆ ಅಭಿವೃದ್ಧಿಗೆ ವೇಗ ಬರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ನಾಯಕರು ಪದೇ ಪದೇ ಹೇಳುತ್ತಿರುತ್ತಾರೆ. ಈಗ ಚುನಾವಣೆ ಎದುರಿಸುತ್ತಿರುವ ಐದು ರಾಜ್ಯಗಳಲ್ಲೂ ಇದು ಪ್ರಚಾರದ ಕೇಂದ್ರದಲ್ಲಿದೆ. ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ, ಎಲ್‌ಪಿಜಿ ಬಳಕೆಯಲ್ಲಿ ಉತ್ತರ ಪ್ರದೇಶ ಹಿಂದೆ ಉಳಿದಿದೆ. ಮೋದಿ ಅವರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯೂ ಉತ್ತರ ಪ್ರದೇಶದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ. ರಾಜ್ಯದ ಶೇ 49ರಷ್ಟು ಕುಟುಂಬಗಳು ಮಾತ್ರ ಎಲ್‌ಪಿಜಿ ಅಥವಾ ನೈಸರ್ಗಿಕ ಅನಿಲದ ಸಂಪರ್ಕ ಹೊಂದಿವೆ. ಆದರೆ ಕೇರಳದಲ್ಲಿ ಈ ಪ್ರಮಾಣವು ಶೇ 72.1ರಷ್ಟು ಇದೆ. ಈ ಕ್ಷೇತ್ರದಲ್ಲಿ ಪಶ್ಚಿಮ ಬಂಗಾಳವು ತೀರಾ ಹಿಂದೆ ಉಳಿದಿದೆ. ರಾಜ್ಯದ ಶೇ 40ರಷ್ಟು ಕುಟುಂಬಗಳು ಮಾತ್ರ ಎಲ್‌ಪಿಜಿ ಸಂಪರ್ಕ ಹೊಂದಿವೆ.


ಲಿಂಗಾನುಪಾತ

ಲಿಂಗಾನುಪಾತದಲ್ಲಿ ಉತ್ತರ ಪ್ರದೇಶದ ಸ್ಥಿತಿ ಉತ್ತಮವಾಗಿದೆ. ಆದರೆ, ಪಶ್ಚಿಮ ಬಂಗಾಳ ಮತ್ತು ಕೇರಳ ಸ್ಥಿತಿ ಉತ್ತರ ಪ್ರದೇಶಕ್ಕಿಂತಲೂ ಉತ್ತಮವಾಗಿದೆ.


ಮಕ್ಕಳ ಮರಣ ದರ

ಉತ್ತರ ಪ್ರದೇಶದಲ್ಲಿ ಐದು ವರ್ಷದೊಳಗಿನ ಮಕ್ಕಳ ಮರಣ ದರವು ಗರಿಷ್ಠ ಮಟ್ಟದಲ್ಲಿದೆ. ರಾಜ್ಯದಲ್ಲಿ ಜನಿಸುವ 1000 ಮಕ್ಕಳಲ್ಲಿ, 59.8ರಷ್ಟು ಮಕ್ಕಳು ಐದು ವರ್ಷದೊಳಗೇ ಮೃತಪಡುತ್ತಿದ್ದಾರೆ. ಕೇರಳ, ಪಶ್ಚಿಮ ಬಂಗಾಳ ಮತ್ತು ಜಮ್ಮು–ಕಾಶ್ಮೀರದಲ್ಲಿ ಈ ದರ ಕಡಿಮೆ ಇದೆ. ಕೇರಳದಲ್ಲಿ ಈ ದರವು 5.2ರಷ್ಟು ಇದ್ದು, ಇದು ಅತ್ಯಂತ ಕನಿಷ್ಠಮಟ್ಟವಾಗಿದೆ. ಬಿಜೆಪಿ 20ಕ್ಕಿಂತಲೂ ಹೆಚ್ಚು ವರ್ಷಗಳಿಂದ ಅಧಿಕಾರದಲ್ಲಿರುವ ಗುಜರಾತ್‌ನಲ್ಲಿ ಈ ದರವು 37.6ರಷ್ಟು ಇದೆ. ಬಿಜೆಪಿ ಸರ್ಕಾರವೇ ಇರುವ ಕರ್ನಾಟಕದಲ್ಲೂ ಈ ದರ 29.5ರಷ್ಟು ಇದೆ.


ಶೌಚಾಲಯ

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತದ ಅಡಿ ಶೌಚಾಲಯ ನಿರ್ಮಿಸುವ ಕಾರ್ಯಕ್ರಮವು ಉತ್ತರ ಪ್ರದೇಶದಲ್ಲಿ ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ರಾಜ್ಯದ ಶೇ 68.8ರಷ್ಟು ಕುಟುಂಬಗಳು ಮಾತ್ರ ಶೌಚಾಲಯ ಹೊಂದಿವೆ. ಆದರೆ ಕೇರಳದಲ್ಲಿ ಶೌಚಾಲಯ ಹೊಂದಿರುವ ಕುಟುಂಬಗಳ ಪ್ರಮಾಣ ಶೇ 98.7ರಷ್ಟು. ಪಶ್ಚಿಮ ಬಂಗಾಳದಲ್ಲಿ ಈ ಪ್ರಮಾಣವು ಉತ್ತರ ಪ್ರದೇಶಕ್ಕಿಂತ ಕಡಿಮೆ ಇದೆ.


ಅಪರಾಧ: ಅಜಗಜಾಂತರ

ಕೇರಳ, ಪಶ್ಚಿಮ ಬಂಗಾಳ ಹಾಗೂ ಜಮ್ಮು ಕಾಶ್ಮೀರದಲ್ಲಿ 2020ರಲ್ಲಿ ನಡೆದ ಅಪರಾಧ ಪ್ರಕರಣಗಳನ್ನು ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶ, ಗುಜರಾತ್ ಹಾಗೂ ಕರ್ನಾಟಕದಲ್ಲಿ ಅದೇ ವರ್ಷ ನಡೆದ ಅಪರಾಧ ಪ್ರಕರಣಗಳ ನಡುವೆ ಹೋಲಿಸಿ ನೋಡಿದರೆ ಸಾಕಷ್ಟು ಅಂತರವಿದೆ. ಉತ್ತರ ಪ್ರದೇಶ ಹಾಗೂ ಗುಜರಾತ್‌ನಲ್ಲಿ ವರ್ಷದಲ್ಲಿ 3.5 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಆದರೆ ಕೇರಳ, ಪಶ್ಚಿಮ ಬಂಗಾಳದಲ್ಲಿ ಈ ಪ್ರಕರಣಗಳ ಸಂಖ್ಯೆ 1.5 ಲಕ್ಷದ ಆಸುಪಾಸಿನಲ್ಲಿದೆ. ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿ 25 ಸಾವಿರ ಪ್ರಕರಣಗಳು ಮಾತ್ರ ವರದಿಯಾಗಿವೆ. ಕರ್ನಾಟಕದಲ್ಲಿ 2018, 2019ರಲ್ಲಿ ತಲಾ 1.20 ಲಕ್ಷದಷ್ಟಿದ್ದ ಪ್ರಕರಣಗಳು 2020ರಲ್ಲಿ ಒಂದು ಲಕ್ಷಕ್ಕೆ ಇಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT