ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಭಾರತದ ದೂರದರ್ಶಕಕ್ಕೆ ಜಾಗತಿಕ ಮನ್ನಣೆ

Last Updated 1 ಡಿಸೆಂಬರ್ 2020, 20:15 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲೇ ಅತ್ಯಂತ ದೊಡ್ಡದೆನಿಸಿರುವ, ಪುಣೆಯ ಬೃಹತ್ ಮೀಟರ್‌ವೇವ್ ರೇಡಿಯೊ ದೂರದರ್ಶಕಕ್ಕೆ (ಜಿಎಂಆರ್‌ಟಿ) ‘ಜಾಗತಿಕ ಮೈಲಿಗಲ್ಲು’ ಮಾನ್ಯತೆ ದೊರೆತಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಈ ರೇಡಿಯೊ ದೂರದರ್ಶಕದ ಕೊಡುಗೆಯನ್ನು ಪರಿಗಣಿಸಿ ಇನ್‌ಸ್ಟಿಟ್ಯೂಟ್‌ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್ (ಐಇಇಇ) ಜಾಗತಿಕ ಮಾನ್ಯತೆ ನೀಡಿದೆ. ಈ ಮಾನ್ಯತೆ ಪಡೆಯುತ್ತಿರುವ ಭಾರತದ ಮೂರನೇ ವೈಜ್ಞಾನಿಕ ಯೋಜನೆ ಇದಾಗಿದೆ.

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಇರುವ ಜಿಎಂಆರ್‌ಟಿ, ವಿಶ್ವದ ಅತ್ಯಂತ ದೊಡ್ಡ ರೇಡಿಯೊ ಉಪಗ್ರಹಗಳಲ್ಲಿ ಒಂದು ಎನಿಸಿದೆ. ಅತ್ಯಂತ ಸೂಕ್ಷ್ಮ ರೇಡಿಯೊ ತರಂಗಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಕೆಲವೇ ರೇಡಿಯೊ ದೂರದರ್ಶಕಗಳಲ್ಲಿ ಇದೂ ಒಂದು.

ವೈಜ್ಞಾನಿಕ ಕ್ಷೇತ್ರಗಳಲ್ಲಿ ಮಾಡಲಾದ ಮಹತ್ವದ ಸಂಶೋಧನೆಗಳು ಮತ್ತು ಯೋಜನೆಗಳಿಗೆ ಈ ಮಾನ್ಯತೆ ನೀಡಲಾಗುತ್ತದೆ. ಈವರೆಗೆ ಭಾರತದ ಎರಡು ವೈಜ್ಞಾನಿಕ ಸಂಶೋಧನೆಗಳಿಗಷ್ಟೇ ಈ ಮಾನ್ಯತೆ ದೊರೆತಿತ್ತು. ಸರ್ ಜಗದೀಶ್ ಚಂದ್ರ ಬೋಸ್ ಅವರ ರೇಡಿಯೋ ತರಂಗಗಳ ಸಂಶೋಧನೆ ಮತ್ತು ಸರ್ ಸಿ.ವಿ.ರಾಮನ್ ಅವರ ‘ರಾಮನ್ ಪರಿಣಾಮ’ಕ್ಕೆ ಮಾತ್ರ ಈ ಮಾನ್ಯತೆ ದೊರೆತಿತ್ತು. ಈ ಎರಡೂ ಸಂಶೋಧನೆಗಳಿಗೆ 2012ರಲ್ಲಿ ಐಇಇಇ ಜಾಗತಿಕ ಮಾನ್ಯತೆ ನೀಡಿತ್ತು.

ಜಗದೀಶ್ ಚಂದ್ರ ಬೋಸ್ ಅವರ ರೇಡಿಯೊ ತರಂಗಗಳ ಉತ್ಪಾದನೆ ಮತ್ತು ಗ್ರಹಿಕೆ ಸಂಶೋಧನೆಯನ್ನು 5ನೇ ತಲೆಮಾರಿನ (5ಜಿ) ಮೊಬೈಲ್‌ ನೆಟ್‌ವರ್ಕ್ ಜಾಲದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ.

ಮಾನವ ಜಗತ್ತಿಗೆ ನೆರವಾಗುವ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವಇಂತಹ ಮಹತ್ವದ ವೈಜ್ಞಾನಿಕ ಸಂಶೋಧನೆಗಳಿಗೆ ಐಇಇಇ ಈ ಮಾನ್ಯತೆ ನೀಡುತ್ತದೆ. ಕನಿಷ್ಠ 25 ವರ್ಷ ಸೇವೆ ಸಲ್ಲಿಸಿರುವ ಅಥವಾ ಬಳಕೆಯಲ್ಲಿ ಇರುವ ವೈಜ್ಞಾನಿಕ ವ್ಯವಸ್ಥೆ ಅಥವಾ ಪ್ರಯೋಗಗಳು ಈ ಮಾನ್ಯತೆ ಪಡೆಯಲು ಅರ್ಹವಾಗಿರುತ್ತವೆ. ಆದರೆ, ಇವುಗಳ ಐತಿಹಾಸಿಕ ಮಹತ್ವವನ್ನು ಸಾರುವ ವಿವರಣಾತ್ಮಕ ದಾಖಲಾತಿಗಳು ಮತ್ತು ಪ್ರಸ್ತಾವವನ್ನು ಸಿದ್ಧಪಡಿಸಬೇಕಾಗುತ್ತದೆ.

‘1897ರಿಂದ ಕಾರ್ಯನಿರ್ವಹಿಸುತ್ತಿರುವ ಕಲ್ಕತ್ತಾ ಎಲೆಕ್ಟ್ರಿಕ್ ಸಪ್ಲೈ ಕಾರ್ಪೊರೇಷನ್‌ಗೆ ಈ ಮಾನ್ಯತೆ ದೊರೆಯುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವವನ್ನು ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಇದರ ಹೊರತಾಗಿ ಭಾರತದ ಇನ್ನೂ 15 ಪ್ರಸ್ತಾವಗಳು ಸಿದ್ಧವಾಗುತ್ತಿವೆ’ ಎಂದು ಐಇಇಇ ಇಂಡಿಯಾದ ಹಿರಿಯ ನಿರ್ದೇಶಕ ಹರೀಶ್ ಮೈಸೂರು ಮಾಹಿತಿ ನೀಡಿದ್ದಾರೆ.

ಜಿಎಂಆರ್‌ಟಿಯು ಪುಣೆಯಿಂದ 80 ಕಿ.ಮೀ. ದೂರದಲ್ಲಿದೆ. ಜಿಎಂಆರ್‌ಟಿ ತಲಾ 45 ಮೀಟರ್ ಸುತ್ತಳತೆಯ 30 ಆಂಟೆನಾಗಳನ್ನು ಒಳಗೊಂಡಿದೆ.26 ವರ್ಷಗಳಿಂದ ಖಗೋಳವಿಜ್ಞಾನಿಗಳು ಈ ದೂರದರ್ಶಕವನ್ನು ಬಳಸುತ್ತಿದ್ದಾರೆ.

ಈ ಆಂಟೆನಾಗಳ ವಿನ್ಯಾಸ, ರಿಸೀವರ್ ವ್ಯವಸ್ಥೆ, ಆಪ್ಟಿಕಲ್ ಕೇಬಲ್‌ ಮೂಲಕ ಸಿಗ್ನಲ್ ರವಾನೆ ಮಾಡುವ ತಂತ್ರಜ್ಞಾನಕ್ಕೆ ಈ ಮಾನ್ಯತೆ ದೊರೆತಿದೆ. ಪಲ್ಸಾರ್, ಸೂಪರ್‌ನೋವಾ, ಗ್ಯಾಲಕ್ಸಿಗಳಿಗೆ ಸಂಬಂಧಿಸಿದಅತ್ಯಂತ ಪ್ರಮುಖ ಅಧ್ಯಯನಗಳನ್ನುಈ ದೂರದರ್ಶಕದ ಮೂಲಕ ನಡೆಸಲಾಗಿದೆ. ವಿಶ್ವವನ್ನು ಮನುಷ್ಯ ಅರ್ಥಮಾಡಿಕೊಳ್ಳುವಲ್ಲಿನ ಅತ್ಯಂತ ಮಹತ್ವದ ಅಧ್ಯಯನಗಳಲ್ಲಿ ಈ ರೇಡಿಯೊ ದೂರದರ್ಶಕ ನೆರವಾಗಿದೆ.

ಶ್ರೀ ಶೇಷಾದ್ರಿ ಸ್ಮಾರಕ ಜಲವಿದ್ಯುತ್ ಯೋಜನೆ

ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಪೂರೈಕೆ ಸಂಬಂಧ ರಚಿಸಲಾಗಿದ್ದ ಶ್ರೀ ಶೇಷಾದ್ರಿ ಸ್ಮಾರಕ ಜಲವಿದ್ಯುತ್ ಯೋಜನೆ ಕಾರ್ಯಕ್ರಮಕ್ಕೆ ಈ ಮಾನ್ಯತೆ ದೊರೆಯುವ ಸಾಧ್ಯತೆ ಇದೆ.ಶಿವನಸಮುದ್ರದಲ್ಲಿ ಧುಮ್ಮಿಕ್ಕುವ ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತದಿಂದ ವಿದ್ಯುತ್‌ ತಯಾರಿಸಿ, ಕೋಲಾರದ ಚಿನ್ನದ ಗಣಿಗೆ ಸರಬರಾಜು ಮಾಡುವ ಬೃಹತ್‌ ಯೋಜನೆಯ ಬೀಜ ಮೊಳೆತದ್ದು 1898ರಲ್ಲಿ.

ಆ ಕಾಲದಲ್ಲಿ ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಯೊಬ್ಬರು ಈ ಜಲಪಾತದ ಬಳಿಗೆ ಭೇಟಿ ನೀಡಿದ್ದಾಗ, ಈ ನೀರಿನಿಂದ ವಿದ್ಯುತ್‌ ಉತ್ಪಾದಿಸುವ ಯೋಚನೆ ಅವರಿಗೆ ಹೊಳೆದಿತ್ತು. ಅದನ್ನು ಅವರು ಮೈಸೂರಿನ ಅಂದಿನ ದಿವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್‌ ಅವರ ಮುಂದಿಟ್ಟರು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರೂ ಇದಕ್ಕೆ ಸಮ್ಮತಿ ಸೂಚಿಸಿದರು.

ಇದಾದ ನಂತರ, ನಯಾಗರಾ ಫಾಲ್ಸ್‌ನಲ್ಲಿ ಜಾರಿ ಮಾಡಿದ್ದ ಇಂಥ ಯೋಜನೆಯ ಅಧ್ಯಯನ ನಡೆಸಿಕೊಂಡು ಬರುವಂತೆ ಎಂಜಿನಿಯರ್‌ಗಳ ತಂಡವೊಂದನ್ನು ಶೇಷಾದ್ರಿ ಅಯ್ಯರ್‌ ಅವರು ನ್ಯೂಯಾರ್ಕ್‌ಗೆ ಕಳುಹಿಸಿದ್ದರು ಎಂದು ಇತಿಹಾಸಕಾರರು ಹೇಳುತ್ತಾರೆ. ಅವರು ಅಧ್ಯಯನ ನಡೆಸಿ ಮರಳಿ ಬಂದ ನಂತರ ಯೋಜನೆಗೆ ರೆಕ್ಕೆಪುಕ್ಕಗಳು ಹುಟ್ಟಿಕೊಂಡವು. ಅಮೆರಿಕದ ಜನರಲ್‌ ಎಲೆಕ್ಟ್ರಿಕ್‌ ಹಾಗೂ ಸ್ವಿಡ್ಜರ್ಲೆಂಡ್‌ನ ಇಷರ್‌ ವ್ಹಿಸ್‌ ಆ್ಯಂಡ್‌ ಕಂ. ಸಹ ಕೈಜೋಡಿಸಿದವು. 1900ರ ವೇಳೆಗೆ ಒಪ್ಪಂದಗಳೆಲ್ಲವೂ ನೆರವೇರಿ, 700 ಕೆ.ವಿ. ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಿರುವ, ಏಷ್ಯಾದ ಅತಿ ದೊಡ್ಡ ಜಲವಿದ್ಯುತ್‌ ಉತ್ಪಾದನಾ ಯೋಜನೆಗೆ ಚಾಲನೆ ಲಭಿಸಿತು. ಏಷ್ಯಾದ ಅತಿ ದೊಡ್ಡ ಯೋಜನೆ ಎಂಬ ಹೆಗ್ಗಳಿಕೆಯ ಜತೆಗೆ, ಅತಿ ಉದ್ದದ ಪ್ರಸರಣಾ ಮಾರ್ಗ ಹೊಂದಿದ ಯೋಜನೆ ಎಂಬ ಹಿರಿಮೆಯೂ ಇದಕ್ಕೆ ಪ್ರಾಪ್ತವಾಯಿತು. ಯೋಜನೆಯ ಮಂಜೂರಾತಿಯಿಂದ ಹಿಡಿದು ಪೂರ್ಣಗೊಳ್ಳುವವರೆಗೆ ಇದಕ್ಕೆ ತಗುಲಿದ್ದು ಮೂರು ವರ್ಷಗಳು ಮಾತ್ರ. 1902ರ ಜೂನ್‌ ತಿಂಗಳಲ್ಲಿ 30,000 ವೋಲ್ಟ್ ವಿದ್ಯುತ್‌ ಅನ್ನು ಶಿವನಸಮುದ್ರದಿಂದ ಕೋಲಾರಕ್ಕೆ ಹರಿಸಲಾಗಿತ್ತು.

ಇಲ್ಲಿ ಉತ್ಪಾದನೆಯಾಗುವ ಹೆಚ್ಚಿನ ವಿದ್ಯುತ್‌ ಅನ್ನು ಬೆಂಗಳೂರಿಗೆ ಸಾಗಿಸಿ, ಅಲ್ಲಿ ಬೀದಿದೀಪಗಳನ್ನು ಅಳವಡಿಸುವ ಯೋಜನೆಯನ್ನು ಆನಂತರ ರೂಪಿಸಲಾಯಿತು. ಮೂರೇ ವರ್ಷಗಳಲ್ಲಿ ಅದಕ್ಕೂ ಚಾಲನೆ ನೀಡಲಾಯಿತು. 1905ರ ಆಗಸ್ಟ್‌ 5ರಂದು ಬೆಂಗಳೂರಿನ ಕೆ.ಆರ್‌. ಮಾರುಕಟ್ಟೆಯಲ್ಲಿ ಮೊದಲಬಾರಿಗೆ ಬೀದಿದೀಪಗಳು ಬೆಳಗಿದವು. ಬೀದಿದೀಪಗಳನ್ನು ಹೊಂದಿದ ಏಷ್ಯಾದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಯಿತು.

ಸುಮಾರು ಅರ್ಧ ಶತಮಾನದ ಕಾಲ ಏಷ್ಯಾದ ಅತಿ ದೊಡ್ಡ ಜಲವಿದ್ಯುತ್‌ ಯೋಜನೆ ಎಂಬ ಹೆಚ್ಚುಗಾರಿಕೆ ಈ ಯೋಜನೆಗೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT