ಮಂಗಳವಾರ, ಆಗಸ್ಟ್ 4, 2020
26 °C

ಆಳ- ಅಗಲ | ಚಿನ್ನ : ಮೋಹದಲೋಹದ ನಾಗಾಲೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Gold

ಭಾರತದಲ್ಲಿ ಬಲು ಬೇಡಿಕೆಯ ಲೋಹ ಚಿನ್ನ. ಮದುವೆ, ಹಬ್ಬ, ಹರಿದಿನ ಎಲ್ಲದರಲ್ಲಿಯೂ ಈ ಲೋಹಕ್ಕೆ ಮಹತ್ವದ ಸ್ಥಾನ. ಬಂಗಾರದ ಕೊಡು–ಕೊಳುವಿಕೆ ಇಲ್ಲದೆ ನಮ್ಮಲ್ಲಿ ಮದುವೆಯೇ ನಡೆಯದು. ಭಾರತೀಯರಿಗೆ ಇತರ ಎಲ್ಲ ಲೋಹಗಳಿಗಿಂತ ಚಿನ್ನದ ಆಭರಣವೇ ಹೆಚ್ಚು ಪ್ರಿಯ. ಆಭರಣವಾಗಿ ಬಳಕೆಯಾಗುವ ಬಂಗಾರವು ಆಪತ್ ಕಾಲದಲ್ಲಿ ನಗದಾಗಿಸಿಕೊಳ್ಳಬಹುದಾದ ಹೂಡಿಕೆ ಎಂಬುದು ಈ ಲೋಹದ ಬೇಡಿಕೆಗೆ ಇನ್ನೊಂದು ಕಾರಣ. ಆದರೆ ಚಿನ್ನದ ದರ ನಿರ್ಣಯಿಸುವಲ್ಲಿ ಈ ಬೇಡಿಕೆಯ ಪಾತ್ರ ‍ಸಣ್ಣದು. ಜಾಗತಿಕವಾದ ಹಲವು ವಿಚಾರಗಳೇ ದರ ಏರಿಕೆ ಇಳಿಕೆಯನ್ನು ನಿರ್ಧರಿಸುತ್ತವೆ. ಆದರೆ, ದರ ಎಷ್ಟೇ ಇಳಿದರೂ ಮತ್ತೆ ಚೇತರಿಸಿಕೊಳ್ಳುವುದು ಇದರ ವಿಶೇಷ.

ಹಣದುಬ್ಬರ

ಮೌಲ್ಯದ ದೃಢತೆಯ ವಿಚಾರದಲ್ಲಿ ಚಿನ್ನದಷ್ಟು ವಿಶ್ವಾಸಾರ್ಹತೆಯ ಇನ್ನೊಂದು ವಸ್ತು ಇಲ್ಲ. ಕರೆನ್ಸಿಗಿಂತಲೂ ಇದು ಹೆಚ್ಚು ನಂಬಿಕೆಗೆ ಅರ್ಹ. ಹಾಗಾಗಿಯೇ ಹಣದುಬ್ಬರದ ಹೊಡೆತದಿಂದ ತಪ್ಪಿಸಿಕೊಳ್ಳಲು ಚಿನ್ನವನ್ನು ಆಶ್ರಯಿಸಲಾಗುತ್ತದೆ. ಹಣದುಬ್ಬರ ಹೆಚ್ಚಾದಾಗ ಹೂಡಿಕೆಯಾಗಿ ಚಿನ್ನದ ಬೇಡಿಕೆ ಹೆಚ್ಚುತ್ತದೆ ಮತ್ತು ಹಣದುಬ್ಬರ ಕಡಿಮೆಯಾದಾಗ ಚಿನ್ನದ ಬೇಡಿಕೆ ತಗ್ಗುತ್ತದೆ. ಚಿನ್ನದ ದರ ಇಳಿದಾಗ ಆಭರಣವಾಗಿ ಇದರ ಬೇಡಿಕೆ ಹೆಚ್ಚುತ್ತದೆ. ಪರಿಣಾಮವಾಗಿ ಮತ್ತೆ ಬೆಲೆ ಹೆಚ್ಚುತ್ತದೆ.  

ಜಾಗತಿಕ ಏರಿಳಿತ

ಭಾರತದ ಚಿನ್ನದ ಬೇಡಿಕೆಯ ಬಹುಭಾಗ ಆಮದಿನ ಮೂಲಕವೇ ಪೂರೈಕೆಯಾಗುತ್ತದೆ. ಜಾಗತಿಕ ಮಟ್ಟದಲ್ಲಿ ಚಿನ್ನದ ದರದಲ್ಲಿ ಆಗುವ ಯಾವುದೇ ಏರಿಳಿತ ಭಾರತದಲ್ಲಿಯೂ ಪ್ರತಿಫಲಿಸುತ್ತದೆ. ಕರೆನ್ಸಿ ಮತ್ತು ಇತರ ಆರ್ಥಿಕ ಉತ್ಪನ್ನಗಳ ಮೌಲ್ಯವು ಜಾಗತಿಕ ಮತ್ತು ದೇಶೀಯವಾದ ರಾಜಕೀಯ ಮತ್ತು ಆರ್ಥಿಕ ಏರಿಳಿತಗಳಿಂದಾಗಿ ಕುಸಿಯಬಹುದು. ಆದರೆ, ಚಿನ್ನವು ಒಂದು ಮಟ್ಟದ ದೃಢತೆಯನ್ನು ಸದಾ ಕಾಯ್ದುಕೊಳ್ಳುತ್ತದೆ. ಆದ್ದರಿಂದಲೇ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಶಾಂತಿಯ ಕಾಲಕ್ಕಿಂತ ರಾಜಕೀಯ ಗೊಂದಲದ ಸಂದರ್ಭದಲ್ಲಿ ಚಿನ್ನದ ಬೇಡಿಕೆ ಹೆಚ್ಚು. ಸರ್ಕಾರ ಮತ್ತು ಮಾರುಕಟ್ಟೆಯ ಮೇಲೆ ವಿಶ್ವಾಸ ಕಡಿಮೆಯಾದಾಗ ಗ್ರಾಹಕರಲ್ಲಿ ಬಂಗಾರ ಖರೀದಿಸುವ ಉತ್ಸಾಹ ಹೆಚ್ಚುತ್ತದೆ. ಹೀಗೆ, ಚಿನ್ನವು ಬಿಕ್ಕಟ್ಟಿನ ಕಾಲದ ಸರಕು. 

ಸರ್ಕಾರದ ಚಿನ್ನದ ಮೀಸಲು:

ಪ್ರಮುಖ ದೇಶಗಳ ಕೇಂದ್ರೀಯ ಬ್ಯಾಂಕುಗಳು ಕರೆನ್ಸಿಯ ಜತೆಗೆ ಚಿನ್ನವನ್ನು ಕೂಡ ಮೀಸಲು ರೂಪದಲ್ಲಿ ಇರಿಸಿಕೊಳ್ಳುತ್ತವೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ ಕೂಡ ದೊಡ್ಡ ಪ್ರಮಾಣದ ಚಿನ್ನದ ಮೀಸಲು ಇದೆ. ಕೇಂದ್ರೀಯ ಬ್ಯಾಂಕುಗಳು ಚಿನ್ನದ ಮೀಸಲನ್ನು ಹೆಚ್ಚಿಸುವುದಕ್ಕಾಗಿ ಖರೀದಿಗೆ ತೊಡಗಿದಾಗ ಚಿನ್ನದ ದರ ಏರಿಕೆಯಾಗುತ್ತದೆ. ಮಾರುಕಟ್ಟೆಗೆ ನಗದು ಹರಿವು ಹೆಚ್ಚಳವಾಗಿ ಚಿನ್ನದ ಪೂರೈಕೆ ಕಡಿಮೆಯಾಗುವುದು ಇದಕ್ಕೆ ಕಾರಣ. 

ಆಭರಣ ಮಾರುಕಟ್ಟೆ

ಹಬ್ಬ, ಮದುವೆ ಋತುವಿನಲ್ಲಿ ಭಾರತದಲ್ಲಿ ಚಿನ್ನದ ದರ ಏರಿಕೆ ಸಾಮಾನ್ಯ. ಗ್ರಾಹಕ ಬೇಡಿಕೆ ಹೆಚ್ಚಳದಿಂದಾಗಿ ಈ ಏರಿಕೆ ಉಂಟಾಗುತ್ತದೆ. ಬೇಡಿಕೆ–ಪೂರೈಕೆಯಲ್ಲಿ ಸಮತೋಲನ ಇಲ್ಲದಿರುವುದೇ ಇದಕ್ಕೆ ಕಾರಣ. ಆಭರಣ ಮಾತ್ರವಲ್ಲದೆ ಬೇರೆ ಕೆಲವು ಉದ್ದೇಶಗಳಿಗೂ ಚಿನ್ನದ ಬಳಕೆಯಾಗುತ್ತದೆ. ಟಿ.ವಿ., ಕಂಪ್ಯೂಟರ್‌, ಜಿಪಿಎಸ್‌ ಸಾಧನಗಳು ಮುಂತಾದ ಎಲೆಕ್ಟ್ರಾನಿಕ್‌ ವಸ್ತುಗಳ ತಯಾರಿಕೆಯಲ್ಲಿಯೂ ಬಂಗಾರವು ಅಲ್ಪ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಭಾರತದಲ್ಲಿ ಪ್ರತಿಷ್ಠೆಯ ಸಂಕೇತವಾಗಿ ಪ್ರದರ್ಶಿಸಲು ಕೂಡ ಚಿನ್ನಕ್ಕೆ ಬೇಡಿಕೆ ಇದೆ. ಔಷಧ ಕ್ಷೇತ್ರದಲ್ಲಿಯೂ ಚಿನ್ನದ ಬಳಕೆ ಇದೆ. ಈ ಎಲ್ಲವೂ ದೇಶೀಯವಾಗಿ ಚಿನ್ನದ ಬೆಲೆಯನ್ನು ನಿರ್ಣಯಿಸುತ್ತವೆ. ಭಾರತದಲ್ಲಿ ಚಿನ್ನದ ಒಟ್ಟು ಬಳಕೆಯಲ್ಲಿ ಕೈಗಾರಿಕಾ ಕ್ಷೇತ್ರದ ಬಳಕೆಯ ಪ್ರಮಾಣ ಶೇ 12ರಷ್ಟಿದೆ. 

ಬಡ್ಡಿ ದರ

ಬಡ್ಡಿ ದರದ ಏರಿಳಿತವು ಚಿನ್ನದ ಬೇಡಿಕೆಯ ಮೇಲೆ ನೇರ ಪರಿಣಾಮ ಉಂಟು ಮಾಡುತ್ತದೆ. ಚಿನ್ನದ ಈಗಿನ ಬೆಲೆಯು ಯಾವುದೇ ದೇಶದ ಬಡ್ಡಿ ದರದ ಸ್ಥಿತಿಯ ಮೇಲೆ ಹಿಡಿದ ಕನ್ನಡಿ. ಬ್ಯಾಂಕುಗಳಲ್ಲಿನ ಠೇವಣಿಗೆ ಸಿಗುವ ಬಡ್ಡಿಯ ದರ ಹೆಚ್ಚು ಎಂದಾದರೆ ಜನರು ಚಿನ್ನವನ್ನು ಮಾರಿ ನಗದು ಪಡೆದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆಗೆ ಚಿನ್ನದ ಪೂರೈಕೆ ಹೆಚ್ಚುತ್ತದೆ. ಬಡ್ಡಿ ದರ ಕಡಿಮೆಯಾದಂತೆಲ್ಲ ಜನರು ಬ್ಯಾಂಕುಗಳಲ್ಲಿ ಇರಿಸುವ ಠೇವಣಿಯ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಚಿನ್ನದತ್ತ ಜನರ ಆಕರ್ಷಣೆ ಹೆಚ್ಚುತ್ತದೆ. ಹಳದಿ ಲೋಹದ ಬೆಲೆ ಏರುತ್ತದೆ. 

ಹೂಡಿಕೆ: ಉತ್ತರ ಅಮೆರಿಕ ಪಾರಮ್ಯ

ಜಗತ್ತಿನಲ್ಲಿ ಕೋವಿಡ್‌ ವ್ಯಾಪಕವಾಗಿ ಹರಡಲು ಆರಂಭವಾದ ನಂತರ ಹೂಡಿಕೆ ಸ್ವರೂಪದಲ್ಲಿ ಬದಲಾವಣೆಯಾಗಿದೆ. ಎಕ್ಸ್‌ಚೇಂಜ್‌ ಟ್ರೇಡ್‌ ಫಂಡ್‌ (ಇಟಿಎಫ್‌) ಸ್ವರೂಪದಲ್ಲಿ ಚಿನ್ನದ ಮೇಲಿನ ಹೂಡಿಕೆ ಏರಿಕೆಯಾಗಿದೆ. ವಿಶ್ವದ ಬೇರೆ ಎಲ್ಲಾ ಕಡೆಗಳಿಗಿಂತ ಉತ್ತರ ಅಮೆರಿಕದ ರಾಷ್ಟ್ರಗಳು ಮತ್ತು ಐರೋಪ್ಯ ರಾಷ್ಟ್ರಗಳು ಹೆಚ್ಚು ಹೂಡಿಕೆ ಮಾಡಿವೆ. 2008ರ ಆರ್ಥಿಕ ಹಿಂಜರಿತದ ಸಂದರ್ಭದಲ್ಲೂ ಇದೇ ಸ್ವರೂಪದ ಹೂಡಿಕೆ ಕಂಡುಬಂದಿತ್ತು

* ಇಟಿಎಫ್ ರೂಪದಲ್ಲಿ ಚಿನ್ನದ ಮೇಲಿನ ಹೂಡಿಕೆ ಹಿಂದಿನ ಆರು ತಿಂಗಳಲ್ಲಿ ಭಾರಿ ಏರಿಳಿತ ಕಂಡಿದೆ

* ಉತ್ತರ ಅಮೆರಿಕದ ರಾಷ್ಟ್ರಗಳು ಮತ್ತು ಐರೋಪ್ಯ ರಾಷ್ಟ್ರಗಳು ಈ ಅವಧಿಯಲ್ಲಿ ಹೆಚ್ಚು ಹೂಡಿಕೆ ಮಾಡಿವೆ

* ಏಷ್ಯಾದ ರಾಷ್ಟ್ರಗಳು ಎಂದಿಗಿಂತ ಹೆಚ್ಚಿನ ಹೂಡಿಕೆ ಮಾಡಿದ್ದರೂ, ಪ್ರಮಾಣದ ಲೆಕ್ಕಾಚಾರದಲ್ಲಿ ಅತ್ಯಂತ ಕಡಿಮೆ ಹೂಡಿಕೆ. ಮೇ ಮತ್ತು ಜೂನ್‌ನಲ್ಲಿ ಹೂಡಿಕೆ ಕುಸಿತದ ಹಾದಿ ಹಿಡಿದಿದೆ

* ಆಸ್ಟ್ರೇಲಿಯ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ರಾಷ್ಟ್ರಗಳೂ ಆರಂಭದ ನಾಲ್ಕು ತಿಂಗಳು ಹೆಚ್ಚು ಹೂಡಿಕೆ ಮಾಡಿದ್ದರೂ, ನಂತರದ ತಿಂಗಳಲ್ಲಿ ಹೂಡಿಕೆ ಪ್ರಮಾಣ ಕಡಿಮೆ ಮಾಡಿವೆ

******

ಅಂಕಿ–ಅಂಶ

₹5.62 ಲಕ್ಷ ಕೋಟಿ -ಭಾರತದ ಚಿನ್ನಾಭರಣ ಮಾರುಕಟ್ಟೆ ಗಾತ್ರ

7% -ಭಾರತದ ಜಿಡಿಪಿಗೆ ಕೊಡುಗೆ

29% -ಜಾಗತಿಕ ಚಿನ್ನಾಭರಣ ಬಳಕೆಯಲ್ಲಿ ಭಾರತದ ಪಾಲು

============

ಭಾರತದಲ್ಲಿ ಚಿನ್ನದ ಹೂಡಿಕೆ ಮತ್ತು ಬೇಡಿಕೆ

ಭಾರತದ ಚಿನ್ನದ ಬೇಡಿಕೆ ಶೇ 70ರಷ್ಟು ಕುಸಿತ

2019 2ನೇ ತ್ರೈಮಾಸಿಕ;2020 2ನೇ ತ್ರೈಮಾಸಿಕ

213.2 ಟನ್;63.7 ಟನ್

––––––

ಭಾರತದ ಚಿನ್ನದ ಮೇಲೆ ಹೂಡಿಕೆ ಶೇ 32ರಷ್ಟು ಕುಸಿತ

2019 2ನೇ ತ್ರೈಮಾಸಿಕ;2020 2ನೇ ತ್ರೈಮಾಸಿಕ

148.8 ಟನ್;218.9 ಟನ್

––––––

10 ವರ್ಷಗಳಲ್ಲಿ ಭಾರತದ ಚಿನ್ನದ ಬೇಡಿಕೆ (ಟನ್‌ಗಳಲ್ಲಿ)

2010;1,001
2011;974
2012;914
2013;958
2014;833
2015;857
2016;666
2017;771
2018;760
2019;690

–––––

ಭಾರತದ ಚಿನ್ನಾಭರಣ ಆಮದು ಪ್ರಮಾಣ ಶೇ 14ರಷ್ಟು ಕುಸಿತ

2019–20;₹2.11 ಲಕ್ಷ ಕೋಟಿ

2018–19;₹2.46 ಲಕ್ಷ ಕೋಟಿ

–––––

ಭಾರತದ ಚಿನ್ನಾಭರಣ ರಫ್ತು ಪ್ರಮಾಣ ಶೇ 11ರಷ್ಟು ಕುಸಿತ

2019–20;₹2.61 ಲಕ್ಷ ಕೋಟಿ

2018–19;₹2.92 ಲಕ್ಷ ಕೋಟಿ  

--------

ಭಾರತದಲ್ಲಿ ಚಿನ್ನ ಉತ್ಪಾದನೆ ಪ್ರಮಾಣ

2017;1,400 ಕೆ.ಜಿ

2016;1,700 ಕೆ.ಜಿ.

============

ಜಾಗತಿಕವಾಗಿ ಚಿನ್ನದ ಹೂಡಿಕೆ ಮತ್ತು ಬೇಡಿಕೆ ಪ್ರಮಾಣ

 

ಜಾಗತಿಕ ಚಿನ್ನದ ಬೇಡಿಕೆ ಶೇ 11ರಷ್ಟು ಕುಸಿತ

2019 2ನೇ ತ್ರೈಮಾಸಿಕ;2020 2ನೇ ತ್ರೈಮಾಸಿಕ

1,136.9 ಟನ್; 1,015.7 ಟನ್

–––––

ಜಾಗತಿಕ ಚಿನ್ನದ ಹೂಡಿಕೆ ಗಣನೀಯ ಹೆಚ್ಚಳ

2019 2ನೇ ತ್ರೈಮಾಸಿಕ;2020 2ನೇ ತ್ರೈಮಾಸಿಕ

295 ಟನ್;582.9 ಟನ್

–––––––

ಜಾಗತಿಕ ಚಿನ್ನಾಭರಣ ಮಾರುಕಟ್ಟೆ ಮೌಲ್ಯ

2018;₹20 ಲಕ್ಷ ಕೋಟಿ

2025:₹36 ಲಕ್ಷ ಕೋಟಿ (ಅಂದಾಜು)

––––––

ಜಾಗತಿಕ ಚಿನ್ನಾಭರಣ ಬಳಕೆ ಪ್ರಮಾಣ

2018;2019

2,240 ಟನ್;2,107 ಟನ್

==========

 

ಬೇಡಿಕೆ ಸ್ವರೂಪದಲ್ಲಿ ಬದಲಾವಣೆ

ವಿವರ;2019–20ರ ಮೊದಲ ತ್ರೈಮಾಸಿಕ;2020–21ರ ಮೊದಲ ತ್ರೈಮಾಸಿಕ

ಕೇಂದ್ರೀಯ ಬ್ಯಾಂಕ್‌ಗಳ ಖರೀದಿ;157 ಟನ್‌;145 ಟನ್‌

ಇಟಿಎಫ್‌;42.9 ಟನ್‌;298 ಟನ್‌

ಬಾರ್‌–ನಾಣ್ಯಗಳು;267.6 ಟನ್‌;241.6 ಟನ್‌

ತಂತ್ರಜ್ಞಾನ ಬಳಕೆಗೆ;79.9 ಟನ್;73.4 ಟನ್‌

ಆಭರಣ;533.4 ಟನ್;325.8 ಟನ್‌

* ವಿಶ್ವದ ಎಲ್ಲೆಡೆ ಇಟಿಎಫ್ ಆಧರಿತ ಹೂಡಿಕೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ

 

ಆಭರಣ ಬೇಡಿಕೆ ಕುಸಿತ

ವಿವರ;2019–20 ಮೊದಲ ತ್ರೈಮಾಸಿಕ;2020–21 ಮೊದಲ ತ್ರೈಮಾಸಿಕ;ಕುಸಿತದ ಪ್ರಮಾಣ

ವಿಶ್ವ;533.3 ಟನ್‌;325.8 ಟನ್‌;39 %

ಚೀನಾ;183.6 ಟನ್‌;64 ಟನ್‌;65 %

ಭಾರತ;125.4 ಟನ್;73.9 ಟನ್;41 %

* 2019ರ ಮೊದಲ ತ್ರೈಮಾಸಿಕದಲ್ಲಿ ವಿಶ್ವದ ಒಟ್ಟು ಆಭರಣ ಬೇಡಿಕೆಯಲ್ಲಿ ಭಾರತ ಮತ್ತು ಚೀನಾದ ಪಾಲು 309 ಟನ್‌ಗಳಷ್ಟು

* 2020ರ ಮೊದಲ ತ್ರೈಮಾಸಿಕದಲ್ಲಿ ಆಭರಣ ಬೇಡಿಕೆಯಲ್ಲಿ 207.5 ಟನ್‌ಗಳಷ್ಟು ಕುಸಿತವಾಗಿದೆ. ಇದರಲ್ಲಿ ಭಾರತ ಮತ್ತು ಚೀನಾದ ಬೇಡಿಕೆಯಲ್ಲೇ 171 ಟನ್‌ನಷ್ಟು ಕುಸಿತವಾಗಿದೆ

–––––––

ಹೆಚ್ಚು ಚಿನ್ನ ಉತ್ಪಾದಿಸುವ ದೇಶಗಳು

(2019–20ರ ಅಂಕಿಅಂಶ)

ಚೀನಾ;383.2 ಟನ್‌

ರಷ್ಯಾ;329.5 ಟನ್

ಆಸ್ಟ್ರೇಲಿಯ;325.1 ಟನ್

ಅಮೆರಿಕ;200.1 ಟನ್‌

ಕೆನಡ;182.9 ಟನ್

ಪೆರು;143.3 ಟನ್

ಘಾನ;142.4 ಟನ್‌

ದಕ್ಷಿಣ ಆಫ್ರಿಕ;118.2 ಟನ್

ಮೆಕ್ಸಿಕೊ;111.4 ಟನ್

ಬ್ರೆಜಿಲ್;106.9 ಟನ್

ಉಜ್ಬೆಕಿಸ್ತಾನ;104 ಟನ್

––––––––––––––

‘ಬಂಗಾರದ ಬೆಲೆ’ ತಂದುಕೊಟ್ಟ ಕೋವಿಡ್‌

ಕೋವಿಡ್‌–19 ಹೊಡೆತಕ್ಕೆ ವಿಶ್ವದ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಇಂಥ ದುರಿತ ಕಾಲದಲ್ಲಿ ಚಿನ್ನದ ಮೇಲೆ ಹೂಡಿಕೆ ಸುರಕ್ಷಿತ ಎಂಬ ಭಾವನೆ ಹೂಡಿಕೆದಾರರಲ್ಲಿ ಮೂಡಿದೆ. ಚಿನ್ನದ ಮೇಲೆ ಹೂಡಿಕೆ ಹೆಚ್ಚಾದ ಕಾರಣ ಏಕಾಏಕಿ ಹಳದಿಲೋಹಕ್ಕೆ ‘ಬಂಗಾರದ ಬೆಲೆ’ ದೊರೆತಿದೆ.

‘ಈ ವರ್ಷದ ಅಂತ್ಯದವರೆಗೂ ಚಿನ್ನದ ಬೆಲೆ ಏರುಗತಿಯಲ್ಲಿರುತ್ತದೆ. ಮುಂದಿನ ಕೆಲ ದಿನಗಳಲ್ಲಿ ಇನ್ನೂ ಏರಿಕೆಯಾಗಲಿದೆ. ಬಹುಶಃ ವರ್ಷಾಂತ್ಯದ ವೇಳೆಗೆ ಬೆಲೆ ಸಹಜ ಸ್ಥಿತಿಗೆ ಹಿಂದಿರುಗಲಿದೆ’ ಎಂದು ಅಮೆರಿಕದ ಜೆ.ಪಿ. ಮೋರ್ಗನ್‌ ಮಾರುಕಟ್ಟೆ ವಿಶ್ಲೇಷಕರು ಈಚೆಗೆ ಬಿಡುಗಡೆಯಾದ ಮಾರುಕಟ್ಟೆ ಮುನ್ನೋಟದಲ್ಲಿ ಅಂದಾಜಿಸಿದ್ದಾರೆ.

2019ರ ಮಧ್ಯಭಾಗದಿಂದಲೇ ಬಂಗಾರ ದುಬಾರಿಯಾಗುವ ಎಲ್ಲ ಲಕ್ಷಣಗಳು ಗೋಚರಿಸಲು ಆರಂಭಿಸಿದ್ದವು. ಅಮೆರಿಕ–ಚೀನಾ ವಾಣಿಜ್ಯ ಸಂಘರ್ಷದಂತಹ ವಿದ್ಯಮಾನಗಳು ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ ಕಾರಣ ಚಿನ್ನದ ದರ ಏರುಗತಿಯಲ್ಲಿಯೇ ಸಾಗಿತ್ತು. ಕೋವಿಡ್‌–19 ಪಿಡುಗು ವಿಶ್ವವನ್ನು ಆವರಿಸಿಕೊಂಡ ನಂತರ ಈ ಬೆಲೆ ಏಕಾಏಕಿ ನೆಗೆತ ಕಂಡಿತು.

ಕಳೆದ ಒಂದು ದಶಕದಲ್ಲಿಯೇ ಚಿನ್ನ ಅತ್ಯಂತ ಗರಿಷ್ಠ ದಾಖಲೆಯ ಬೆಲೆ  ಪಡೆದುಕೊಂಡಿದೆ. ದಶಕದ ಹಿಂದೆ, 2011ರ ಸೆಪ್ಟೆಂಬರ್‌ನಲ್ಲಿ ತಲುಪಿದ್ದ ಗರಿಷ್ಠ ಏರಿಕೆಯ ದಾಖಲೆಯನ್ನು (ಅಂತರರಾಷ್ಟ್ರೀಯ ಮಟ್ಟದಲ್ಲಿ) ಈಗ ಮುರಿಯಬಹುದು ಎಂಬ ಅಳಕು ಮಾರುಕಟ್ಟೆಯಲ್ಲಿತ್ತು. ಆದರೆ, ಆ ಹಂತಕ್ಕೆ ಇನ್ನೂ ಹೋಗಿಲ್ಲ. 

ಮುಂದಿನ ವರ್ಷ ನಾಗಾಲೋಟಕ್ಕೆ ಬ್ರೇಕ್‌!

ಮುಂದಿನ ವರ್ಷದ ಮಧ್ಯ ಭಾಗದ ನಂತರ ಸ್ವಲ್ಪ ಮಟ್ಟಿಗೆ ಆರ್ಥಿಕತೆ ಚೇತರಿಸಿಕೊಳ್ಳುವುದರೊಂದಿಗೆ ಚಿನ್ನದ ಓಟಕ್ಕೆ ಕಡಿವಾಣ ಬೀಳುವ ಸಾಧ್ಯತೆ ಇದೆ. ಆಗ ಹೂಡಿಕೆದಾರರು ಬಂಡವಾಳ ಹೂಡಿಕೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲಿದ್ದಾರೆ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಣಾ ತಜ್ಞರು. 

‘2020ರಲ್ಲಿ ಜಾಗತಿಕ ಚಿನ್ನದ ಮಾರುಕಟ್ಟೆ ಹಲವಾರು ಅನಿರೀಕ್ಷಿತ ಬೆಳವಣಿಗೆಗಳನ್ನು ಕಂಡಿದೆ. ಈ ವರ್ಷವಿಡೀ ಇಂಥ ಮತ್ತಷ್ಟು ಅನಿರೀಕ್ಷಿತ ವಿದ್ಯಮಾನಗಳನ್ನು ನಿರೀಕ್ಷಿಸಬಹುದು’ ಎನ್ನುತ್ತಾರೆ ಜಾಗತಿಕ ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆಯ ತಜ್ಞೆ ಕ್ರಿಸ್ಟಿನಾ ಹೂಪರ್‌. ಇದು ಜಾಗತಿಕ ಮಾರುಕಟ್ಟೆಯ ಕತೆ. ಭಾರತದ ಮಾರುಕಟ್ಟೆಯ ಕತೆಯೂ ಇದಕ್ಕಿಂತ ವಿಭಿನ್ನವಾಗಿಲ್ಲ. ದೇಶೀ ಹೂಡಿಕೆದಾರರು ಕೂಡ ಕಳೆದ ಐದಾರು ತಿಂಗಳಿಂದ ಚಿನ್ನದ ಮೇಲೆ ಹೆಚ್ಚೆಚ್ಚು ಹೂಡಿಕೆಯಲ್ಲಿ ತೊಡಗಿದ್ದಾರೆ. 

ಹೂಡಿಕೆ ದುಪ್ಪಟ್ಟು

‘ಮೂರು ತಿಂಗಳಿಂದ ನಮ್ಮ ಗ್ರಾಹಕರು ಮತ್ತು ಹೂಡಿಕೆದಾರರಿಗೆ ಚಿನ್ನದಲ್ಲಿ ಹೂಡಿಕೆಯನ್ನು ದುಪ್ಪಟ್ಟುಗೊಳಿಸುವಂತೆ ಸಲಹೆ ಮಾಡುತ್ತಿದ್ದೇವೆ. ರಿಯಲ್‌ ಎಸ್ಟೇಟ್‌ ಕೂಡ ಮಂದಗತಿಯಲ್ಲಿದೆ. ಆ ಕ್ಷೇತ್ರ ಚೇತರಿಸಿಕೊಳ್ಳಲು ಇನ್ನೂ ಹಲವು ತಿಂಗಳು ಬೇಕಾಗಬಹುದು. ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಕೂಡ ಚಿನ್ನದ ಬೆಲೆ ಏರಿಕೆಗೆ ಇಂಬು ನೀಡುತ್ತದೆ. ಹಾಗಾಗಿ ಅಲ್ಲಿಯವರೆಗೆ ಚಿನ್ನದ ಮೇಲೆ ಹೂಡಿಕೆ ಅತ್ಯಂತ ಸುರಕ್ಷಿತ’ ಎನ್ನುತ್ತಾರೆ ಭಾರತದ ಮಾರುಕಟ್ಟೆ ಮತ್ತು ಹೂಡಿಕೆ ಸಲಹೆಗಾರ ಸಂಸ್ಥೆಗಳು. 

 

ಚಿನ್ನದ ಬೆಲೆಯಲ್ಲಿ ನಿಲ್ಲದ ಏರಿಕೆ

(ದರ ಪ್ರತಿ 10 ಗ್ರಾಂಗಳಿಗೆ, 24 ಕ್ಯಾರಟ್‌ ಚಿನ್ನ)

 
ಆಗಸ್ಟ್ 30;₹ 38,980

ಸೆಪ್ಟೆಂಬರ್ 28;₹ 37,722

ಅಕ್ಟೋಬರ್ 30;₹ 38,357

ನವೆಂಬರ್ 30;₹ 37,912

ಡಿಸೆಂಬರ್ 27;₹ 38,893

ಜನವರಿ 30;₹ 40,972

ಫೆಬ್ರುವರಿ 29;₹ 42,475

ಮಾರ್ಚ್‌ 21;₹ 40,388

ಏಪ್ರಿಲ್ 30;₹ 46,380

ಮೇ 20;₹ 47,600

ಜೂನ್‌ 30;₹ 48,339

ಜುಲೈ 30;₹ 53,272

ಇದನ್ನು ಕೇಳಿ: ಕನ್ನಡ ಧ್ವನಿ Podcast| ಮೋಹದ ಲೋಹ ಚಿನ್ನದ ನಾಗಾಲೋಟ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು