ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಅಡಿಕೆ ಆಮದಿಗೆ ಕೇಂದ್ರ ಸರ್ಕಾರದ ಉತ್ತೇಜನ

Last Updated 29 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ದೇಶೀಯ ಅಡಿಕೆ ಬೆಳೆಗಾರರ ಹಿತಾಸಕ್ತಿ ರಕ್ಷಣೆಗಾಗಿ ತರಲಾಗಿದ್ದ ಅಡಿಕೆ ಆಮದು ನಿರ್ಬಂಧ ನಿಯಮಗಳಿಗೆ ಕೇಂದ್ರ ವಾಣಿಜ್ಯ ಸಚಿವಾಲಯವು ತಿದ್ದುಪಡಿ ತಂದಿದೆ. ಕಡಿಮೆ ಬೆಲೆಗೆ ಅಡಿಕೆಯನ್ನು ಆಮದು ಮಾಡಿಕೊಳ್ಳುವುದನ್ನು ತಪ್ಪಿಸುವ ಸಲುವಾಗಿ ಕನಿಷ್ಠ ಆಮದು ಬೆಲೆ (ಮಿನಿಮಮ್ ಇಂಪೋರ್ಟ್‌ ಪ್ರೈಸ್‌–ಎಂಐಪಿ) ನೀತಿಯನ್ನು ಕೇಂದ್ರ ವಾಣಿಜ್ಯ ಸಚಿವಾಲಯ ಜಾರಿಗೆ ತಂದಿತ್ತು. ಈ ಪ್ರಕಾರ ಪ್ರತಿ ಕೆ.ಜಿ ಅಡಿಕೆಗೆ ₹251 ಎಂಐಪಿ ನಿಗದಿ ಮಾಡಲಾಗಿತ್ತು. ಆದರೆ, ಈಗ ಭೂತಾನ್‌ನಿಂದ ಎಂಐಪಿ ಇಲ್ಲದೆ ಪ್ರತಿವರ್ಷ 17,000 ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ವಾಣಿಜ್ಯ ಸಚಿವಾಲಯವು ಅನುಮತಿ ನೀಡಿದೆ.

ಕೇಂದ್ರ ಸರ್ಕಾರದ ಈ ನಡೆಯು ದೇಶದ ಅಡಿಕೆ ಬೆಳೆಗಾರರಿಗೆ ಮಾರಕವಾಗಲಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ ಸರ್ಕಾರದ ಈ ನಡೆಯು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಸರ್ಕಾರದ ದಾಖಲೆಗಳ ಪ್ರಕಾರ ಇದೇ ಮೊದಲ ಬಾರಿಗೆ ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ತನ್ನ ಬಳಕೆಗಾಗಿ ಬೇರೆ ದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುವ ಭೂತಾನ್‌ನಿಂದ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳಲು ಭಾರತ ಸರ್ಕಾರ ನಿರ್ಧರಿಸಿದೆ. ಭಾರತವು ಈವರೆಗೆ ಯಾವುದೇ ಒಂದು ದೇಶದಿಂದ ವಾರ್ಷಿಕ 17,000 ಟನ್‌ಗಳಷ್ಟು ಅಡಿಕೆ ಆಮದು ಮಾಡಿಕೊಂಡಿಲ್ಲ. ಈ ಹಿಂದಿನ ಆರ್ಥಿಕ ವರ್ಷಗಳವರೆಗೆ ಭಾರತವು ಆಮದು ಮಾಡಿಕೊಂಡ ಹಸಿ ಅಡಿಕೆಯ ಪ್ರಮಾಣ 4,000 ಟನ್‌ನ ಆಸುಪಾಸಿನಲ್ಲಿದೆ. ಪರಿಸ್ಥಿತಿ ಹೀಗೆ ಇರುವಾಗ ಏಕಾಏಕಿ ಒಂದು ದೇಶದಿಂದ 17,000 ಟನ್‌ಗಳಷ್ಟು ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಭೂತಾನ್‌, ಭಾರತದಿಂದ ಪ್ರತಿವರ್ಷ ಸರಾಸರಿ 100 ಟನ್‌ಗಳಷ್ಟು ಅಡಿಕೆ ಮತ್ತು ಅಡಿಕೆ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತದಿಂದ ಅಡಿಕೆ ಆಮದು ಮಾಡಿಕೊಳ್ಳುವ ಭೂತಾನ್‌ನಿಂದಲೇ ಪ್ರತಿ ವರ್ಷ 17,000 ಟನ್‌ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.

ಭೂತಾನ್‌ನಲ್ಲಿ 2015ರ ನಂತರ ಅಡಿಕೆ ಬೆಳೆ ಉತ್ತೇಜಿಸಲಾಗುತ್ತಿದೆ. ಭೂತಾನ್‌ನ ಈವರೆಗಿನ ವಾರ್ಷಿಕ ಗರಿಷ್ಠ ಇಳುವರಿ 17,445 ಟನ್‌ (2020–21). ನಂತರ ಭೂತಾನ್‌ಲ್ಲಿ ಅಡಿಕೆ ಬೆಳೆ ಪ್ರದೇಶ ವಿಸ್ತೀರ್ಣವಾಗಿಲ್ಲ ಎಂಬುದನ್ನು ಭೂತಾನ್‌ನ ಕೃಷಿ ಸಚಿವಾಲಯದ ವರದಿಗಳು ಹೇಳುತ್ತವೆ. ಹೀಗೆ ಭೂತಾನ್‌ನಲ್ಲಿ ಉತ್ಪಾದನೆಯಾಗುತ್ತಿರುವ ಅಡಿಕೆಯನ್ನು ಪೂರ್ಣವಾಗಿ ಆಮದು ಮಾಡಿಕೊಳ್ಳಲು ಸರ್ಕಾರವು ಅನುಮತಿ ನೀಡಿದೆ.

ಭಾರತದ ಒಟ್ಟು ದೇಶೀಯ ಉತ್ಪಾದನೆಗೆ ಹೋಲಿಸಿದರೆ, ಈ ಆಮದು ಪ್ರಮಾಣ ಕಡಿಮೆ ಇದೆ. ಆದರೆ, ಮುಂದಿನ ದಿನಗಳಲ್ಲಿ ಆಮದನ್ನು ಹೆಚ್ಚಳವಾಗಬಹುದು ಎಂಬುದು ಸರ್ಕಾರದ ನೀತಿಯಿಂದ ತಿಳಿಯುತ್ತದೆ. ಆಮದು ಮಾಡಿಕೊಳ್ಳುವ ಪ್ರತಿ ಕೆ.ಜಿ ಅಡಿಕೆಯ ಎಂಐಪಿಯನ್ನು ₹251ರಿಂದ ₹360ಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಇದರ ಮಧ್ಯೆಯೇ 17,000 ಟನ್‌ಗಳಷ್ಟು ಹಸಿ ಅಡಿಕೆಯನ್ನು ಪ್ರತಿ ವರ್ಷ ಎಂಐಪಿ ಷರತ್ತು ಇಲ್ಲದೆ ಆಮದು ಮಾಡಿಕೊಳ್ಳಲು ಅನುಕೂಲವಾಗುವಂತೆ, ನೀತಿಗೆ ಸರ್ಕಾರವು ತಿದ್ದುಪಡಿ ತಂದಿದೆ. ಇದು ಮುಂದಿನ ದಿನಗಳಲ್ಲಿ ಹಸಿ ಅಡಿಕೆ ಆಮದು ಮತ್ತಷ್ಟು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ. ದೀರ್ಘಾವಧಿಯಲ್ಲಿ ದೇಶೀಯ ಅಡಿಕೆಗೆ ಬೇಡಿಕೆ ಕಡಿಮೆಯಾಗುವ ಅಪಾಯವೂ ಇದೆ. ಅಡಿಕೆ ಆಮದಿನಲ್ಲಿ ಆಗುತ್ತಿರುವ ಭಾರಿ ಏರಿಕೆಯೂ ಈ ಅಪಾಯವನ್ನೇಸೂಚಿಸುತ್ತದೆ.

* ಭಾರತವು ಈವರೆಗೆ ಆಮದು ಮಾಡಿಕೊಂಡಿರುವ ಹಸಿ ಅಡಿಕೆಯ ಪ್ರಮಾಣ ಕಡಿಮೆ ಇದೆ

* 2021–22ರಲ್ಲಿ ಮಾಡಿಕೊಂಡಿದ್ದ ಆಮದೇ ಈವರೆಗಿನ ಗರಿಷ್ಠ (4,108 ಟನ್) ಪ್ರಮಾಣವಾಗಿತ್ತು

ವರ್ಷಾಂತ್ಯಕ್ಕೆ 50,000 ಟನ್‌ ಆಮದು?

ದೇಶವು ಆಮದು ಮಾಡಿಕೊಳ್ಳುತ್ತಿರುವ ಎಲ್ಲಾ ಸ್ವರೂಪದ ಅಡಿಕೆಯ ಪ್ರಮಾಣವು ಭಾರಿ ಏರಿಕೆಯಾಗಿದೆ. 2021–22ರಲ್ಲಿ ಒಟ್ಟು 25,978 ಟನ್‌ಗಳಷ್ಟು ಅಡಿಕೆ ಆಮದು ಮಾಡಿಕೊಳ್ಳಲಾಗಿತ್ತು. ಅದು ಆವರೆಗಿನ ಅಡಿಕೆ ಆಮದಿನ ಗರಿಷ್ಠ ಪ್ರಮಾಣವಾಗಿತ್ತು. ಆದರೆ, 2022–23ನೇ ಸಾಲಿನ ಮೊದಲ ತ್ರೈಮಾಸಿಕ (ಏಪ್ರಿಲ್‌–ಜುಲೈ) ಒಂದರಲ್ಲೇ 39,859 ಟನ್‌ಗಳಷ್ಟು ಅಡಿಕೆಯನ್ನು ಆಮದು ಮಾಡಿಕೊಳ್ಳಾಗಿದೆ. ಆಗಸ್ಟ್‌ ಮತ್ತು ಜುಲೈನಲ್ಲಿ ಮಾಡಿಕೊಂಡಿರುವ ಆಮದಿನ ಪ್ರಮಾಣ ಇದರಲ್ಲಿ ಸೇರಿಲ್ಲ. ಈ ಆರ್ಥಿಕ ವರ್ಷದಲ್ಲಿ ಇನ್ನೂ ಏಳು ತಿಂಗಳುಗಳಿದ್ದು, ಆರ್ಥಿಕ ವರ್ಷದ ಅಂತ್ಯಕ್ಕೆ ಈ ಪ್ರಮಾಣವು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಭೂತಾನ್‌ನಿಂದ 8,500 ಟನ್‌ ಅಡಿಕೆ ಆಮದಿಗೆ ಅನುಮತಿ ಇದೆ. ಬೇರೆ ದೇಶಗಳಿಂದಲೂ ಅಡಿಕೆ ಆಮದಾಗಲಿದೆ. ಹೀಗಾಗಿವರ್ಷಾಂತ್ಯದ ವೇಳೆಗೆ ಒಟ್ಟು ಅಡಿಕೆ ಆಮದು 50,000 ಟನ್‌ಗಳನ್ನು ದಾಟುವ ನಿರೀಕ್ಷೆ ಇದೆ.

ಕಾರ್ಯಸಾಧುವಲ್ಲದ ಷರತ್ತು

‘ಭೂತಾನ್‌ನ ಅಡಿಕೆಯನ್ನು ಪಶ್ಚಿಮ ಬಂಗಾಳದ ಜಯಗಾಂವ್‌ ಬಂದರಿನ ಮೂಲಕ ಆಮದು ಮಾಡಿಕೊಂಡಾಗ ಮಾತ್ರ ಎಂಐಪಿ ವಿನಾಯಿತಿ ಅನ್ವಯವಾಗುತ್ತದೆ’ ಎಂದು ಅಧಿಸೂಚನೆಯಲ್ಲಿ ಷರತ್ತು ಹಾಕಲಾಗಿದೆ. ಇದು ಕಾರ್ಯಸಾಧುವಲ್ಲ ಎನ್ನಲಾಗಿದೆ.

ಭೂತಾನ್‌ ಮೂರು ಕಡೆ ಭಾರತ ಮತ್ತು ಒಂದು ಕಡೆ ಟಿಬೆಟ್‌ನಿಂದ ಆವೃತವಾಗಿದೆ. ಭೂತಾನ್‌ನಿಂದ ಜಯಗಾಂವ್‌ ಬಂದರಿಗೆ ಹಸಿ ಅಡಿಕೆ ತರಲು, ಮೊದಲು ಅದನ್ನು ಭಾರತಕ್ಕೆ ರಸ್ತೆ ಮಾರ್ಗದ ಮೂಲಕ ತಂದು, ಆನಂತರ ಬಂಗಾಳಕೊಲ್ಲಿ ಸಮುದ್ರಕ್ಕೆ ಇಳಿಸಿ, ಜಯಗಾಂವ್‌ ಬಂದರಿಗೆ ತರಬೇಕಾಗುತ್ತದೆ. ಇದು ಸಾಗಣೆ ವೆಚ್ಚವನ್ನು ಹೆಚ್ಚಿಸುತ್ತದೆ.ಇದರ ಹೊರತಾಗಿ, ಈ ಷರತ್ತನ್ನು ಪಾಲಿಸಲು ವ್ಯಾಪಾರಿಗಳ ಎದುರು ಮತ್ತೊಂದು ಆಯ್ಕೆ ಇದೆ. ಭೂತಾನ್‌ನಲ್ಲಿ ಅಡಿಕೆಯನ್ನು ಖರೀದಿಸಬೇಕು. ಅದನ್ನು ಮೊದಲು ಟಿಬೆಟ್‌ಗೆ ಸಾಗಿಸಬೇಕು. ಆನಂತರ ಅದನ್ನು ಮ್ಯಾನ್ಮಾರ್‌ಗೆ ಸಾಗಿಸಬೇಕು. ಮ್ಯಾನ್ಮಾರ್‌ನ ಬಂದರುಗಳ ಮೂಲಕ ಬಂಗಾಳ ಕೊಲ್ಲಿ ಸಮುದ್ರಕ್ಕೆ ಇಳಿಸಬೇಕು. ನಂತರ ಪಶ್ಚಿಮ ಬಂಗಾಳಕ್ಕೆ ಹಡಗಿನ ಮೂಲಕ ತರಬೇಕು. ಇದು ಸಾಗಣೆ ವೆಚ್ಚವನ್ನು ಹಲವು ಪಟ್ಟು ಹೆಚ್ಚಿಸುತ್ತದೆ.ಭಾರತದಿಂದ ಭೂತಾನ್‌ಗೆ ಅಡಿಕೆಯು ರಸ್ತೆ ಮಾರ್ಗದ ಮೂಲಕವೇ ರಫ್ತಾಗುತ್ತದೆ. ಹೀಗಿದ್ದೂ, ಬಂದರಿನ ಮೂಲಕವೇ ಆಮದು ಮಾಡಿಕೊಳ್ಳಲು ಈ ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

‘ಭವಿಷ್ಯದಲ್ಲಿ ರೈತರಿಗೆ ಮಾರಕ’

ಭೂತಾನ್‌ನಿಂದ 17 ಸಾವಿರ ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರವು ಭವಿಷ್ಯದಲ್ಲಿ ದೇಶೀಯ ಅಡಿಕೆ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು.

ಪ್ರಸ್ತುತ 17 ಸಾವಿರ ಟನ್ ಹಸಿ ಅಡಿಕೆ ಆಮದು, ಕನಿಷ್ಠ ಪ್ರಮಾಣವಾಗಿದ್ದು, ಸ್ಥಳೀಯ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಆಗದು. ಆದರೆ, ಕನಿಷ್ಠ ಆಮದು ಸುಂಕ ಇಲ್ಲದೆ ಈ ರೀತಿ ಆಮದು ಮಾಡಿಕೊಳ್ಳುವುದರಿಂದ ಮುಂದೆ ಅಕ್ರಮ ನುಸುಳುವಿಕೆಯ ಸಾಧ್ಯತೆ ಇರುತ್ತದೆ. ಅಲ್ಲದೆ, ಕನಿಷ್ಠ ಆಮದು ಬೆಲೆಯನ್ನು ₹360ಕ್ಕೆ ಹೆಚ್ಚಳ ಮಾಡಬೇಕು ಎಂದು ಈಗಾಗಲೇ ಬೇಡಿಕೆ ಇಟ್ಟಿರುವ ಸಂದರ್ಭದಲ್ಲಿ ಈ ರೀತಿ ಕನಿಷ್ಠ ಆಮದು ಬೆಲೆ ಇಲ್ಲದೆ, ಅಡಿಕೆ ಆಮದು ಮಾಡಿಕೊಳ್ಳುವ ಕ್ರಮ ಸರಿಯಾದುದಲ್ಲ. ದೇಶದಲ್ಲಿ ವಾರ್ಷಿಕವಾಗಿ 8–10 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತದೆ. ಈ ಪ್ರಮಾಣದ ಉತ್ಪಾದನೆಯಿಂದ ಸ್ಥಳೀಯ ಬೇಡಿಕೆ ಪೂರೈಕೆ ಮಾತ್ರವಲ್ಲ, ರಫ್ತು ಕೂಡ ಮಾಡಬಹುದು. ಕರ್ನಾಟಕದ ಜತೆಗೆ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಅಡಿಕೆ ಬೆಳೆ ಪ್ರದೇಶ ವಿಸ್ತರಣೆಯಾಗಿದ್ದು, ಇನ್ನು ನಾಲ್ಕೈದು ವರ್ಷಗಳಲ್ಲಿ ದೇಶದಲ್ಲಿ 15 ಲಕ್ಷ ಟನ್ ಅಡಿಕೆ ಉತ್ಪಾದನೆ ಆಗಬಹುದೆಂದು ನಿರೀಕ್ಷಿಸಲಾಗಿದೆ.

- ಕಿಶೋರ್‌ಕುಮಾರ್ ಕೊಡ್ಗಿ,ಕ್ಯಾಂಪ್ಕೊ ಅಧ್ಯಕ್ಷ

‘ರೈತರ ಹಿತ ಕಾಯಬೇಕು’

ವಿದೇಶದಿಂದ ಅಡಿಕೆ ಆಮದಿಗೆ ನಿರ್ಬಂಧ ವಿಧಿಸುವಂತೆ ಪದೇ ಪದೇ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತಿರುವ ನಡುವೆಯೇ ಅಡಿಕೆ ಆಮದಿಗೆ ಅವಕಾಶ ನೀಡಿರುವ ಸರ್ಕಾರದ ನಿರ್ಧಾರ ಸರಿಯಲ್ಲ.ಹಸಿರು ಅಡಿಕೆ ವಿವಿಧ ಉತ್ಪನ್ನ ತಯಾರಿಕೆಗೆ ಕಚ್ಚಾವಸ್ತುವಾಗಿಯೂ ಬಳಸಿಕೊಳ್ಳಲು ಆಮದಿಗೆ ಒಪ್ಪಿಗೆ ನೀಡಿರುವ ಸಾಧ್ಯತೆ ಇರಬಹುದಾದರೂ, ಇದು ದೇಶೀಯ ಅಡಿಕೆ ಮಾರುಕಟ್ಟೆ ಮೇಲೆ ಅಡ್ಡ ಪರಿಣಾಮ ಬೀರಬಹುದು.

ಅಡಿಕೆ ಮಾರುಕಟ್ಟೆ ಸ್ಥಿರತೆ ಕಂಡುಕೊಳ್ಳುವ ಹಂತದಲ್ಲಿರುವಾಗ ಸರ್ಕಾರದ ನಿರ್ಧಾರ ರೈತರನ್ನು ಆತಂಕಕ್ಕೆ ತಳ್ಳಬಹುದು. ಅಡಿಕೆ ಬೆಳೆಗಾರರ ರಕ್ಷಣೆಗೆ ಸರ್ಕಾರ ಬದ್ಧವಾಗಿರಬೇಕು.

- ರಾಮಕೃಷ್ಣ ಹೆಗಡೆ ಕಡವೆ, ಕಾರ್ಯಾಧ್ಯಕ್ಷ, ದಿ ತೋಟಗಾರ್ಸ್ ಕೋ–ಆಪರೇಟಿವ್ ಸೇಲ್ಸ್ ಸೊಸೈಟಿಯ (ಟಿ.ಎಸ್.ಎಸ್.)

‘ಪ್ರಭಾವ ಬೀರದು’

ಭೂತಾನ್ ದೇಶದಿಂದ ಪ್ರತಿ ವರ್ಷ ಹಸಿ ಅಡಿಕೆ ಭಾರತಕ್ಕೆ ಆಮದು ಮಾಡಿಕೊಂಡರೂ ಇಲ್ಲಿನ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಷ್ಟೇ ಪ್ರಮಾಣದ ಒಣ ಅಡಿಕೆ ಮಾರುಕಟ್ಟೆ ಪ್ರವೇಶಿಸಿದ್ದರೆ ಮಾತ್ರ ಸಮಸ್ಯೆ ಆಗುತ್ತಿತ್ತು. ಭೂತಾನ್ ಅಡಿಕೆ ಇಳುವರಿ ಕಡಿಮೆ. ಒಂದು ಕ್ವಿಂಟಲ್ ಹಸಿ ಅಡಿಕೆಯಿಂದ 15 ಕೆ.ಜಿ ಒಣ ಅಡಿಕೆ ಸಿಕ್ಕರೆ ಹೆಚ್ಚು. ಸ್ಥಳೀಯ ಅಡಿಕೆ ದರ ಏರಿಕೆ ಆಗುತ್ತಿರುವ ಸಮಯದಲ್ಲಿ ಕೆಲ ಗುಟ್ಕಾ ಕಂಪನಿಗಳ ಲಾಬಿಯಿಂದ ವದಂತಿಗಳು ಹಬ್ಬುತ್ತವೆ. ಗುಣಮಟ್ಟದಲ್ಲಿ ಕರ್ನಾಟಕದ ಅಡಿಕೆಯನ್ನು ಹಿಂದೆ ಹಾಕಲು ಯಾರಿಗೂ ಸಾಧ್ಯವಿಲ್ಲ.

- ಜಿ.ಎಂ.ಲವ ಕುಮಾರ್‌,ಅಡಿಕೆ ಮಂಡಿ ವರ್ತಕ, ಭೀಮಸಮುದ್ರ, ಚಿತ್ರದುರ್ಗ

ಆಧಾರ: ಡಿಜಿಎಫ್‌ಟಿ ಅಧಿಸೂಚನೆ, ವಾಣಿಜ್ಯ ಸಚಿವಾಲಯದ ಆಮದು–ರಫ್ತು ದತ್ತಾಂಶ ಬ್ಯಾಂಕ್‌ ವಾರ್ಷಿಕ ವರದಿಗಳು ಮತ್ತು ಮಾಸಿಕ ವರದಿಗಳು, ಪಿಟಿಐ, ಭೂತಾನ್‌ ಕೃಷಿ ಸಚಿವಾಲಯದ ವಾರ್ಷಿಕ ವರದಿ, ಅಡಿಕೆ ಬೆಳೆ ಕುರಿತ ರಾಯಲ್ ಭೂತಾನ್‌ ವಿಶ್ವವಿದ್ಯಾಲಯದ ಅಧ್ಯಯನ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT