ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಬೆಳೆಯುತ್ತಲೇ ಇದೆ ಹಣದುಬ್ಬರದ ಭೂತ

Last Updated 11 ಏಪ್ರಿಲ್ 2022, 20:30 IST
ಅಕ್ಷರ ಗಾತ್ರ

‘ಕೋವಿಡ್‌ ಆವರಿಸುವ ಮೊದಲು ಮನೆ ಬಾಡಿಗೆ ಪಾವತಿಸಿದ ನಂತರದಲ್ಲಿ ತಿಂಗಳಿಗೆ ₹15 ಸಾವಿರ ಇದ್ದರೆ ಮನೆಯ ದಿನನಿತ್ಯದ ಖರ್ಚು ನಿಭಾಯಿಸಲು ಆಗುತ್ತಿತ್ತು. ಆದರೆ, ಈಗ ₹15 ಸಾವಿರದಲ್ಲಿ ಆ ಖರ್ಚುಗಳನ್ನು ನಿಭಾಯಿಸಲು ಆಗುತ್ತಲೇ ಇಲ್ಲ. ಜೀವನ ಮಟ್ಟದಲ್ಲಿ ಯಾವುದೇ ಸುಧಾರಣೆ ಮಾಡಿಕೊಂಡಿಲ್ಲ, ಮಾರುಕಟ್ಟೆಗೆ ಹೋಗಿ ಹೆಚ್ಚು ಖರೀದಿ ಮಾಡುತ್ತಿಲ್ಲ, ಹೆಚ್ಚು ಸುತ್ತಾಟ ಇಲ್ಲ, ಹೋಟೆಲ್‌ಗೆ ಹೋಗಿ ಕುಟುಂಬದವರೆಲ್ಲ ಸೇರಿ ಊಟ ಮಾಡುವುದು ಹೆಚ್ಚಾಗಿಲ್ಲ. ಹೀಗಿದ್ದರೂ, ತಿಂಗಳಿಗೆ ಕನಿಷ್ಠ ₹21 ಸಾವಿರ ಬೇಕಾಗುತ್ತಿದೆ. ಎರಡು ವರ್ಷಗಳ ಅವಧಿಯಲ್ಲಿ ಮನೆ ಖರ್ಚು ₹6 ಸಾವಿರದಷ್ಟು ಹೆಚ್ಚಾಗಿದೆ.’

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಧ್ಯ ವಯಸ್ಸಿನ, ಮಧ್ಯಮ ವರ್ಗದ ವ್ಯಕ್ತಿಯೊಬ್ಬರು ‘ಪ್ರಜಾವಾಣಿ’ಗೆ ನೀಡಿದ ವಿವರ ಇದು.

‘ಕೋವಿಡ್ ಆವರಿಸುವ ಮೊದಲು ವರ್ಷಕ್ಕೊಮ್ಮೆ ವೇತನ ಹೆಚ್ಚಳ ಆಗುತ್ತಿತ್ತು. ಎರಡು ವರ್ಷಗಳಿಂದ ವೇತನ ಏರಿಕೆ ಆಗಿಲ್ಲ. ವೇತನ ಹೆಚ್ಚಾದಾಗಲೆಲ್ಲ ಉಳಿತಾಯದ ಮೊತ್ತವನ್ನೂ ಹೆಚ್ಚು ಮಾಡುತ್ತಿದ್ದೆ. ಆದರೆ, ಈಗ ಅದು ಸಾಧ್ಯವೇ ಇಲ್ಲ. ಹೆಚ್ಚಾಗುತ್ತಿರುವ ಖರ್ಚು ನಿಭಾಯಿಸಿಕೊಂಡರೆ ಸಾಕು ಎಂಬಂತೆ ಆಗಿದೆ. ಉಳಿತಾಯ ಹೆಚ್ಚುತ್ತಿಲ್ಲದ ಕಾರಣ ಮುಂದಿನ ದಿನಗಳು ಹೇಗಪ್ಪಾ ಎಂಬ ಚಿಂತೆಯೂ ಒಂದೆಡೆ ಇದೆ. ನನ್ನ ಉಳಿತಾಯದಲ್ಲಿ ದೊಡ್ಡ ಪಾಲು ಇರುವುದು ನೌಕರರ ಭವಿಷ್ಯ ನಿಧಿಯಲ್ಲಿ (ಪಿ.ಎಫ್). ಈಗ ಅದರ ಬಡ್ಡಿಯನ್ನೂ ತಗ್ಗಿಸಲಾಗಿದೆ’ ಎಂದು ಅವರು ಆತಂಕ ತೋಡಿಕೊಂಡರು.

ಕೋವಿಡ್ ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್‌ಡೌನ್‌ ಜಾರಿಗೆ ತಂದಾಗಿನಿಂದ ದಿನಬಳಕೆ ವಸ್ತುಗಳ ಬೆಲೆಯು ಒಂದಲ್ಲ ಒಂದು ಕಾರಣಕ್ಕೆ ಏರಿಕೆ ಕಂಡಿದೆ. ಪೂರೈಕೆ ವ್ಯವಸ್ಥೆಯ ಮೇಲೆ ಬಿದ್ದ ಏಟಿನ ಕಾರಣದಿಂದಾಗಿ, ಕಾರ್ಮಿಕರ ಕೊರತೆಯಿಂದ, ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ, ರಷ್ಯಾ–ಉಕ್ರೇನ್ ಯುದ್ಧದ ಕಾರಣದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದೆ. ಈಗ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸುತ್ತಿವೆ (ಶುಕ್ರವಾರದಿಂದ ಸೋಮವಾರದವರೆಗೆ ಹೆಚ್ಚಳ ಆಗಿಲ್ಲ).

‘ಹಣದುಬ್ಬರ ಪ್ರಮಾಣವು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳ ಕಾಣಲಿದೆ. ಅದರಲ್ಲಿ ಅನುಮಾನ ಬೇಡ. ಆದರೆ ಎಷ್ಟು ಹೆಚ್ಚಾಗಲಿದೆ ಎಂಬುದಷ್ಟೇ ಈಗಿರುವ ಪ್ರಶ್ನೆ. ಹಣದುಬ್ಬರ ಪ್ರಮಾಣವು ಅಲ್ಪಾವಧಿಯಲ್ಲಿ ಶೇಕಡ 0.7ರಿಂದ ಶೇ 1ರಷ್ಟು ಹೆಚ್ಚಾಗಬಹುದು. ಮೊದಲಿಗೆ ಸಗಟು ಹಣದುಬ್ಬರ ದರದಲ್ಲಿ ಹೆಚ್ಚಳ ಕಂಡುಬರುತ್ತದೆ. ನಂತರದಲ್ಲಿ, ಚಿಲ್ಲರೆ ಹಣದುಬ್ಬರ ದರವು ಹೆಚ್ಚಳ ಆಗುತ್ತದೆ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಮಾಜಿ ಅಧ್ಯಕ್ಷ ಡಿ. ಮುರಳೀಧರ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು.

ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯು 137 ದಿನ ಏರಿಕೆ ಆಗಿರಲಿಲ್ಲ. ನಂತರ ಡೀಸೆಲ್ ಸಗಟು ಮಾರಾಟ ಬೆಲೆಯನ್ನು ಲೀಟರಿಗೆ ₹ 25ರಷ್ಟು ಒಂದೇ ಬಾರಿಗೆ ಹೆಚ್ಚಿಸಲಾಯಿತು. ಈಗ ಡೀಸೆಲ್ ಬೆಲೆಯನ್ನು ಸ್ವಲ್ಪಸ್ವಲ್ಪವಾಗಿ ಹೆಚ್ಚಿಸಲಾಗುತ್ತಿದೆ. ‘ಒಟ್ಟು ಹೆಚ್ಚಳವು ಲೀಟರಿಗೆ ₹25ರಷ್ಟು ಆದರೆ, ಹಣದುಬ್ಬರ ಹೆಚ್ಚಳವು ಭಾರಿ ಪ್ರಮಾಣದಲ್ಲಿ ಇರಲಿದೆ’ ಎಂದು ಮುರಳೀಧರ ಆತಂಕ ವ್ಯಕ್ತಪಡಿಸಿದರು. ಆದರೆ ಅಷ್ಟೊಂದು ಹೆಚ್ಚಳ ಆಗಲಿಕ್ಕಿಲ್ಲ ಎನ್ನುವ ಆಶಾಭಾವನೆಯನ್ನೂ ವ್ಯಕ್ತಪಡಿಸಿದರು.

ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಅಡಿಯಲ್ಲಿ ಸಂಗ್ರಹ ಆಗುವ ವರಮಾನದ ಮೊತ್ತವು ₹1 ಲಕ್ಷ ಕೋಟಿಯನ್ನು ಮೀರಿ ನಿಂತಿದೆ. ‘ಜಿಎಸ್‌ಟಿ ಸಂಗ್ರಹವು ಈಗ ಉತ್ತಮವಾಗಿರುವ ಕಾರಣ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಮತ್ತು ಮೌಲ್ಯವರ್ಧಿತ ತೆರಿಗೆ ಕಡಿಮೆ ಮಾಡಬಹುದು’ ಎಂದು ಅವರು ಸಲಹೆ ನೀಡಿದರು.

ಬೆಂಗಳೂರು ಮತ್ತು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಈಚೆಗೆ ಅನಿಯಮಿತ ವಿದ್ಯುತ್ ಕಡಿತ ಕೂಡ ಶುರುವಾಗಿರುವ ಮಾಹಿತಿ ಇದೆ ಎಂದು ಅವರು ಹೇಳಿದರು. ಬೇರೆ ಪ್ರದೇಶಗಳಲ್ಲಿ ವಿದ್ಯುತ್ ಕಡಿತದ ಅವಧಿಯು ಬೆಂಗಳೂರಿಗಿಂತ ಹೆಚ್ಚಿರಲಿಕ್ಕೂ ಸಾಕು. ಹೀಗಾಗಿ, ಕೈಗಾರಿಕೆಗಳು ಡೀಸೆಲ್ ಆಧಾರಿತ ವಿದ್ಯುತ್ ಜನರೇಟರ್‌ಗಳನ್ನು ಹೆಚ್ಚೆಚ್ಚು ಬಳಸಬೇಕಾಗಿದೆ. ಡೀಸೆಲ್ ಬೆಲೆ ಏರಿಕೆಯ ಕಾರಣದಿಂದಾಗಿ, ಜನರೇಟರ್‌ಗೆ ಮಾಡಬೇಕಿರುವ ವೆಚ್ಚ ಹೆಚ್ಚಾಗುತ್ತದೆ. ಹಾಗಾಗಿ, ಉತ್ಪಾದನಾ ವೆಚ್ಚ ಕೂಡ ಇನ್ನಷ್ಟು ಜಾಸ್ತಿ ಆಗಬಹುದು ಅವರು ಅಂದಾಜು ಮಾಡಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧವು ಯಾವಾಗ ಕೊನೆಗೊಳ್ಳಬಹುದು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಯುದ್ಧ ಶುರುವಾದ ನಂತರದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿದೆ. ‘ರಷ್ಯಾ–ಉಕ್ರೇನ್ ಯುದ್ಧ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ, ತೈಲ ಬೆಲೆ ಇಳಿಕೆಯಾಗುವ ಸಾಧ್ಯತೆಗಳೂ ಕಾಣಿಸುತ್ತಿಲ್ಲ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈಗ ಎಕ್ಸೈಸ್ ಸುಂಕವು ಕಡಿಮೆ ಪ್ರಮಾಣದಲ್ಲಿ ಇದೆ. ಇದು ಕಚ್ಚಾ ತೈಲದ ಬೆಲೆಯಲ್ಲಿನ ಹೆಚ್ಚಳವನ್ನು ದೇಶಿ ಮಾರುಕಟ್ಟೆಯಲ್ಲಿ ತುಸು ನಿಭಾಯಿಸಲು ನೆರವಾಗುತ್ತದೆ. ಆದರೂ, ಬ್ರೆಂಟ್ ಕಚ್ಚಾ ತೈಲದ ಬೆಲೆಯು ಬ್ಯಾರೆಲ್‌ಗೆ 90 ಡಾಲರ್‌ಗೂ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಇಂಧನ ಬೆಲೆಯಲ್ಲಿ ಆಗುವ ಏರಿಕೆಯನ್ನು ತಗ್ಗಿಸಲು ಇದು ಸಾಕಾಗದು. ಹೀಗಾಗಿ ಗ್ರಾಹಕರ ಮೇಲಿನ ಹೊರೆ ತಗ್ಗಿಸಲು ಸರ್ಕಾರಗಳು ಸುಂಕವನ್ನು ಇನ್ನಷ್ಟು ಕಡಿಮೆ ಮಾಡಬೇಕಾಗುತ್ತದೆ’ ಎಂದು ರೇಟಿಂಗ್ಸ್ ಸಂಸ್ಥೆ ಕ್ರಿಸಿಲ್‌ನ ಪ್ರಧಾನ ಅರ್ಥಶಾಸ್ತ್ರಜ್ಞೆ ದೀಪ್ತಿ ದೇಶಪಾಂಡೆ ಹೇಳಿದರು.

2021ರ ಸೆಪ್ಟೆಂಬರ್‌ನಿಂದ ದೇಶದ ಚಿಲ್ಲರೆ ಹಣದುಬ್ಬರ ಪ್ರಮಾಣವು ಏರಿಕೆ ಆಗುತ್ತಲೇ ಇದೆ. ಆ ತಿಂಗಳಿನಲ್ಲಿ ಶೇಕಡ 4.35ರಷ್ಟು ಇದ್ದ ಚಿಲ್ಲರೆ ಹಣದುಬ್ಬರ ದರವು ಈ ವರ್ಷದ ಫೆಬ್ರುವರಿಯಲ್ಲಿ ಶೇ 6.07ಕ್ಕೆ ಏರಿಕೆ ಆಗಿದೆ. ಅಂದರೆ, ಐದು ತಿಂಗಳಲ್ಲಿ ಶೇ 1.72ರಷ್ಟು ಏರಿಕೆ ಆಗಿದೆ. ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇ 4ಕ್ಕೆ ಮಿತಿಗೊಳಿಸುವ ಗುರಿ ನೀಡಿದೆ. ಈ ಪ್ರಮಾಣವು ಶೇ 2ರಷ್ಟು ಹೆಚ್ಚು ಅಥವಾ ಅಷ್ಟೇ ಪ್ರಮಾಣದಲ್ಲಿ ಕಡಿಮೆ ಆಗಲು ಅವಕಾಶ ಇದೆ. ಆದರೆ, ಈ ವರ್ಷದ ಜನವರಿ ಮತ್ತು ಫೆಬ್ರುವರಿ ತಿಂಗಳುಗಳಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ 6ರ ಗಡಿಯನ್ನೂ ದಾಟಿ ಹೋಗಿದೆ.

‘ಈಗ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 7ರ ಗಡಿಯನ್ನೂ ದಾಟಿರಬಹುದು’ ಎಂದು ಅಂದಾಜು ಮಾಡುತ್ತಾರೆ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಕೇಂದ್ರದ (ಐಸೆಕ್‌) ಅರ್ಥಶಾಸ್ತ್ರದ ಉಪನ್ಯಾಸಕ ಪ್ರೊ. ಕೃಷ್ಣ ರಾಜ್. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆಯು ಪುನರಾರಂಭ ಆದ ನಂತರದಲ್ಲಿ ಸಗಟು ಹಣದುಬ್ಬರ ದರವು ಶೇ 13.5ರ ಮಟ್ಟವನ್ನೂ ಮೀರಿರುವ ಸಾಧ್ಯತೆ ಇದೆ. ಇಂಧನ ಬೆಲೆ ಏರಿಕೆಯಿಂದಾಗಿ ಕೆಲವು ಉತ್ಪನ್ನಗಳ ಬೆಲೆಯು ಶೇ 2ರಿಂದ ಶೇ 5ರವರೆಗೆ ಹೆಚ್ಚಳ ಆಗಿರಬಹುದು. ಕೆಲವು ಪ್ರದೇಶಗಳಲ್ಲಿ ಈ ಹೆಚ್ಚಳವು ಶೇ 10ರಷ್ಟು ಕೂಡ ಆಗಿರಬಹುದು’ ಎಂದು ಅವರು ಅಂದಾಜಿಸಿದರು.

ಹಣದುಬ್ಬರದ ನಿರಂತರ ಏರಿಕೆಯು ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬೇಡಿಕೆ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆ. ‘ಜನರ ವೇತನ, ಆದಾಯ ಪ್ರತಿದಿನ ಬದಲಾಗುವುದಿಲ್ಲ. ಆದರೆ ಹಣದುಬ್ಬರದ ಕಾರಣದಿಂದಾಗಿ ಜೀವನ ವೆಚ್ಚ ಜಾಸ್ತಿ ಆಗುತ್ತದೆ. ಇದರಿಂದಾಗಿ, ಜನ ಖರೀದಿ ಮಾಡುವುದು ಕಡಿಮೆ ಆಗುತ್ತದೆ. ಜನ ತೀರಾ ಅಗತ್ಯವಲ್ಲದ ವಸ್ತುಗಳ ಖರೀದಿಯನ್ನು ಮುಂದಕ್ಕೆ ಹಾಕುತ್ತಾರೆ. ಹಣದುಬ್ಬರ ಪ್ರಮಾಣವು ಶೇ 10ಕ್ಕಿಂತ ಹೆಚ್ಚಿನ ಮಟ್ಟ ತಲುಪಿದರೆ, ಜೀವನಾವಶ್ಯಕ ಅಲ್ಲದ ಉತ್ಪನ್ನಗಳ ಒಟ್ಟು ಬೇಡಿಕೆಯು ಶೇ 20ರಷ್ಟು ಕಡಿಮೆ ಆಗುತ್ತದೆ’ ಎಂದು ರಾಜ್ ಹೇಳಿದರು.

ಮುಂದಿನ ಮೂರು ತಿಂಗಳಿನಿಂದ ಒಂದು ವರ್ಷದವರೆಗೆ ಚಿಲ್ಲರೆ ಹಣದುಬ್ಬರ ಪ್ರಮಾಣವು ಎರಡಂಕಿ ಮಟ್ಟದಲ್ಲಿ ಇರಲಿದೆ ಎನ್ನುವ ಅಭಿಪ್ರಾಯವು ಕಳೆದ ತಿಂಗಳು ಆರ್‌ಬಿಐ ನಡೆಸಿರುವ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಹಣದುಬ್ಬರವು ಶೇ 10ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಳಿದರೆ, ದೇಶದ ಜಿಡಿಪಿ ಬೆಳವಣಿಗೆ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಉತ್ಪಾದನೆ ಕಡಿಮೆ ಆಗುತ್ತದೆ. ಉದ್ಯೋಗ ಅವಕಾಶಗಳು ತಗ್ಗಬಹುದು. ನಿರುದ್ಯೋಗ ಜಾಸ್ತಿ ಆಗಿ ಬೇಡಿಕೆಯು ಇನ್ನಷ್ಟು ಕಡಿಮೆ ಆಗಬಹುದು. ಹಣದುಬ್ಬರವನ್ನು ನಿಯಂತ್ರಣ ದಲ್ಲಿ ಇರಿಸಲು ಸರ್ಕಾರಗಳು ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದುಕೃಷ್ಣ ರಾಜ್ ಅಭಿಪ್ರಾಯಪಟ್ಟರು.

ಉಳಿತಾಯಕ್ಕೆ ಹೊಡೆತ

ಹಣದುಬ್ಬರ ಮಿತಿ ಮೀರಿದ ಪ್ರಮಾಣದಲ್ಲಿ ಇರುವುದು ಜನರಲ್ಲಿನ ಉಳಿತಾಯ ಪ್ರವೃತ್ತಿಗೆ ಏಟು ಕೊಡುತ್ತಿದೆ. ಉಳಿತಾಯದ ಹಣಕ್ಕೆ ಬ್ಯಾಂಕ್‌ಗಳು ನೀಡುವ ವಾರ್ಷಿಕ ಬಡ್ಡಿಯ ಪ್ರಮಾಣ ಶೇ 5.75ರಷ್ಟು ಇದೆ. ಆದರೆ, ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 6ರ ಮಟ್ಟ ಮೀರಿ ನಿಂತಿದೆ.‌ ಅಂದರೆ, ಉಳಿತಾಯ ಮಾಡಿದವರಿಗೆ ಲಾಭ ಆಗುತ್ತಿಲ್ಲ.

‘ಹೆಚ್ಚಿನ ಹಣದುಬ್ಬರ ಹಾಗೂ ಉಳಿತಾಯದ ಹಣಕ್ಕೆ ಕಡಿಮೆ ಬಡ್ಡಿದರದ ಪರಿಸ್ಥಿತಿಯು ಉಳಿತಾಯ ಮಾಡುವವರಿಗೆ ದುಃಸ್ವಪ್ನ ಇದ್ದಂತೆ. ನಿಶ್ಚಿತ ಠೇವಣಿ ರೂಪದಲ್ಲಿ ಇರಿಸಿರುವ ಹಣಕ್ಕೆ ಸಿಗುವ ಬಡ್ಡಿಯನ್ನು ಹಣದುಬ್ಬರ ಜೊತೆ ಸರಿಹೊಂದಿಸಿ, ಆದಾಯ ತೆರಿಗೆಯನ್ನು ಪಾವತಿಸಿದ ನಂತರದಲ್ಲಿ ಸಿಗುವ ಲಾಭವು ಶೂನ್ಯಕ್ಕಿಂತಲೂ ಕಡಿಮೆ ಆಗಬಹುದು. ಅಂದರೆ, ಉಳಿತಾಯ ಮಾಡಿದ ವ್ಯಕ್ತಿಯ ಅಸಲು ಬಂಡವಾಳದ ಮೌಲ್ಯವೇ ಕಡಿಮೆ ಆಗಬಹುದು’ ಎಂದು ಹೂಡಿಕೆ ಮತ್ತು ಉಳಿತಾಯ ಸಲಹಾ ಸಂಸ್ಥೆ ಪ್ರೈಮ್‌ಇನ್ವೆಸ್ಟರ್‌.ಇನ್‌ನ ಸಹ ಸಂಸ್ಥಾಪಕಿ ವಿದ್ಯಾ ಬಾಲಾ ಅನಿಸಿಕೆ ಹಂಚಿಕೊಂಡರು.

‘ಪರಿಸ್ಥಿತಿ ಹೀಗಿರುವಾಗ ದೀರ್ಘಾವಧಿಗೆ ಹೂಡಿಕೆ ಮಾಡುವ ಶಕ್ತಿ ಇರುವವರು ಈಕ್ವಿಟಿಗಳಲ್ಲಿ ಹಣ ತೊಡಗಿಸಬಹುದು. ಆದರೆ, ನಿವೃತ್ತಿ ಜೀವನ ನಡೆಸುತ್ತಿರುವವರು ಹಾಗೂ ಬಡ್ಡಿಯಿಂದ ಬರುವ ಹಣವನ್ನು ನೆಚ್ಚಿಕೊಂಡವರು ಕಷ್ಟ ಅನುಭವಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT