ಭಾನುವಾರ, ಏಪ್ರಿಲ್ 5, 2020
19 °C

Explainer | ಕೇಳದೇ ಹೋದ ಮಲೆನಾಡಿನ‌ ಮಂಗನ ಕಾಯಿಲೆ ನರಳಾಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಗತ್ತಿನಲ್ಲಿ ಈಗ ಯಾರನ್ನೇ ನಿಲ್ಲಿಸಿ ಕೇಳಿ, ಸದ್ಯ ನಿಮಗೆ ಕಾಡುತ್ತಿರುವ ಭೀತಿ ಯಾವುದು ಎಂದು. ಎಲ್ಲರಿಂದಲೂ ಸಾಮಾನ್ಯವಾಗಿ ಸಿಗುವ ಉತ್ತರ ಕೋವಿಡ್‌–19. ಅದೇ ಇತ್ತ ನಮ್ಮ ಮಲೆನಾಡಿಗೆ ಬನ್ನಿ. ಅಲ್ಲಿನ ಜನರ ಮುಂದೆಯೂ ಇದೇ ಪ್ರಶ್ನೆಯನ್ನು ಕೇಳಿನೋಡಿ. ಅವರು ನೀಡುವ ಉತ್ತರ ಕೆಎಫ್‌ಡಿ ಎಂದು!

ಹೌದು, ಮಲೆನಾಡನ್ನು ಮತ್ತೆ ಈ ಕಾಯಿಲೆ ಕಾಡಲು ಆರಂಭಿಸಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ 1957ರಲ್ಲಿ ಮೊದಲ ಬಾರಿ ಈ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇದು ಮಂಗನ ಕಾಯಿಲೆ ಎಂದು ಮರುವರ್ಷ ದೃಢಪಟ್ಟಿತ್ತು. ಅಂದಿನಿಂದ ಈ ಕಾಯಿಲೆಯನ್ನು ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್‌ಡಿ) ಎಂದೇ ಕರೆಯಲಾಗುತ್ತಿದೆ.

ಮೊದಲು ಶಿವಮೊಗ್ಗ ಜಿಲ್ಲೆಗೆ ಮಾತ್ರವೇ ಸೀಮಿತಗೊಂಡಿದ್ದ ಈ ಕಾಯಿಲೆ, ನಂತರದ ದಿನಗಳಲ್ಲಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿಯೂ ಕಂಡು ಬಂದಿದೆ. 2012–13ರಲ್ಲಿ ನೆರೆರಾಜ್ಯಗಳಾದ ಕೇರಳ ಹಾಗೂ ತಮಿಳುನಾಡಿನ ಕೆಲವು ಜಿಲ್ಲೆಗಳಿಗೂ ಈ ಕಾಯಿಲೆ ಹರಡಿರುವುದು ದೃಢಪಟ್ಟಿದೆ.

1960ರ ದಶಕದ ಅಂತ್ಯದಲ್ಲಿ ನೂರಾರು ಜನ ಈ ಕಾಯಿಲೆಗೆ ಬಲಿಯಾಗಿದ್ದರು. ಆರೋಗ್ಯ ಇಲಾಖೆಯು ರೋಗ ನಿಯಂತ್ರಣಕ್ಕಾಗಿ 1990ರಿಂದ ಲಸಿಕೆಯನ್ನು ಹಾಕಲು ಆರಂಭಿಸಿತು. ಅಂದಿನಿಂದ ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ ತಾಲ್ಲೂಕುಗಳ ವ್ಯಾಪ್ತಿಯ ಗ್ರಾಮಗಳ ಜನರಿಗೆ ಲಸಿಕೆ ಹಾಕುತ್ತಾ ಬರಲಾಗುತ್ತಿದೆ. ಆದರೆ, ಈ ಕಾಯಿಲೆಗೆ ಆರು ದಶಕಗಳಲ್ಲಿ ಸುಮಾರು 800 ಜನ ಜೀವ ಕಳೆದುಕೊಂಡಿದ್ದಾರೆ.

ಮಲೆನಾಡಿನ ಅರಣ್ಯ ಪ್ರದೇಶಗಳ ಗ್ರಾಮಗಳಲ್ಲಿ ಈ ಕಾಯಿಲೆ ಸಾಮಾನ್ಯವಾಗಿ ಬೇಸಿಗೆ ಆರಂಭದಲ್ಲಿ (ಮಾರ್ಚ್‌, ಏಪ್ರಿಲ್‌) ಕಾಣಿಸಿಕೊಂಡು ಮಳೆ ಆರಂಭವಾಗುತ್ತಿದ್ದಂತೆ ಕಡಿಮೆಯಾಗುತ್ತದೆ. ಆದರೆ, ಮೂರು ವರ್ಷಗಳಿಂದ ಚಳಿಗಾಲದ ಆರಂಭದಲ್ಲೇ ಹಬ್ಬುತ್ತಿರುವುದು ಜನರ ನೆಮ್ಮದಿ ಕೆಡಿಸಿದೆ. ಹೋದವರ್ಷ ಮಂಗನ ಕಾಯಿಲೆಗೆ ಜಿಲ್ಲೆಯಲ್ಲಿ 18 ಜನ ಮೃತಪಟ್ಟಿದ್ದಾರೆ.


ಬ್ರಿಟನ್ ವಿಜ್ಞಾನಿಗಳಿಂದ ಉಣುಗು ಮಾದರಿ ಸಂಗ್ರಹ

ಮೂರು ಬಾರಿ ಲಸಿಕೆ

ರೋಗ ನಿಯಂತ್ರಣಕ್ಕೆ ನಾಲ್ಕು ವಾರಗಳ ಅಂತರದಲ್ಲಿ ಎರಡು ರೋಗ ನಿರೋಧಕ ಚುಚ್ಚುಮದ್ದುಗಳನ್ನು ಹಾಕಿಸಿಕೊಳ್ಳಬೇಕು. ನಂತರ 6ರಿಂದ 9 ತಿಂಗಳ ಅಂತರದಲ್ಲಿ ಮತ್ತೊಂದು ಚುಚ್ಚುಮದ್ದು ಹಾಕಿಸಿಕೊಳ್ಳಬೇಕು.

ಆರು ವರ್ಷದ ಕೆಳಗಿನ ಮಕ್ಕಳಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವುದು ನಿಷಿದ್ಧ. ಒಂದು ಬಾರಿ ತೆಗೆದುಕೊಂಡರೆ ಅವರಲ್ಲಿ ರೋಗ ನಿರೋಧಕಶಕ್ತಿ ವೃದ್ಧಿಸಲು ಕನಿಷ್ಠ 60 ದಿನ ಬೇಕು. ಅಷ್ಟರ ಒಳಗೆ ಸತ್ತ ಮಂಗಗಳ ಮೇಲಿದ್ದ ಉಣ್ಣೆ ಕಚ್ಚಿದರೆ ಚುಚ್ಚುಮದ್ದು ಪಡೆದಿದ್ದರೂ ಕಾಯಿಲೆಗೆ ಒಳಗಾಗುತ್ತಾರೆ.

ರೋಗ ಹರಡುವುದು ಹೀಗೆ...

ಸತ್ತ ಮಂಗನ ದೇಹದ ಮೇಲಿದ್ದ ವೈರಸ್‌ ಹೊತ್ತ ಉಣ್ಣೆಗಳು (ಒಣಗು) ಕಾಡಿನಲ್ಲಿ ಓಡಾಡುವ ಜನರಿಗೆ ಕಚ್ಚಿದರೆ ರೋಗ ಹರಡುತ್ತದೆ. ಕಾಯಿಲೆಯಿಂದ ಬಳಲುವ ಮಂಗಗಳು ಸಾಯುವುದಕ್ಕೂ ಮೊದಲು ವಿಪರೀತ ನರಳಾಡುತ್ತವೆ. ಬಾಯಿ, ಜನನಾಂಗಗಳಿಂದ ರಕ್ತಸ್ರಾವ ಸಹ ಆಗುತ್ತದೆ. ಆಗ ಹೊರಬೀಳುವ ವೈರಾಣುಗಳು ಮೊಲ, ಹೆಗ್ಗಣ, ಜಾನುವಾರುಗಳ ಮೂಲಕ ಕಾಯಿಲೆ ಹರಡಲು ಕಾರಣವಾಗುತ್ತವೆ. ರೋಗ ಲಕ್ಷಣ ಕಾಣಿಸಿಕೊಂಡವರು ಚಿಕಿತ್ಸೆ ಪಡೆಯದೇ ಇದ್ದರೆ ಎರಡನೇ ಹಂತದಲ್ಲಿ ಮೆದುಳು ಜ್ವರ, ರಕ್ತಸ್ರಾವ ಸಂಭವಿಸುತ್ತದೆ. ಸಾವು ಸಂಭವಿಸುವ ಸಾಧ್ಯತೆಯೂ ಇರುತ್ತದೆ.

ಉಣ್ಣೆಹುಳುಗಳು ಈ ಕಾಯಿಲೆಯನ್ನು ಹರಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಜನವರಿಯಿಂದ ಜೂನ್ ತಿಂಗಳವರೆಗಿನ ಹವಾಮಾನವು ಈ ಉಣ್ಣೆ ಹುಳುಗಳ ಸಂತಾನೋತ್ಪತ್ತಿಗೆ ಅನುಕೂಲಕರ. ಹೀಗಾಗಿ ಕೆ.ಎಫ್.ಡಿ. ಕಾಯಿಲೆಯು ವರ್ಷದ ಮೊದಲ ಆರು ತಿಂಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.


ಮಂಗನಕಾಯಿಲೆ ವ್ಯಾಪಿಸಿರುವ ಅರಳಗೋಡು ಗ್ರಾಮ.

ನಿರಂತರ ಸಂಶೋಧನೆ

ಆರೋಗ್ಯ ಇಲಾಖೆ, ಇಂಡಿಯನ್‌ ಕೌನ್ಸಿಲ್‌ ಆಫ್‌ ರಿಸರ್ಚ್‌, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ವೆಟರ್ನರಿ ಇನ್ಫರ್‌ಮ್ಯಾಟಿಕ್‌ ಸಂಸ್ಥೆಗಳು ಮಂಗನ ಕಾಯಿಲೆ ಕುರಿತು ನಿರಂತರ ಸಂಶೋಧನೆಯಲ್ಲಿ ತೊಡಗಿವೆ. ಬ್ರಿಟನ್‌ ಸರ್ಕಾರದ ಅಧೀನ ಸಂಸ್ಥೆ ಯುಕೆ ಮೆಡಿಕಲ್‌ ರಿಸರ್ಚ್ ಕೌನ್ಸಿಲ್‌ ಸಹ ಮಲೆನಾಡಿನ ಭಾಗಗಳಲ್ಲಿ ಬೀಡುಬಿಟ್ಟು ಸಂಶೋಧನೆ ನಡೆಸುತ್ತಿದೆ.

ಶಿವಮೊಗ್ಗದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಬಳಿ ₹ 4 ಕೋಟಿ ವೆಚ್ಚದಲ್ಲಿ ಪರಿಮಾಣು ಕ್ರಿಮಿ ಸಂಶೋಧನಾಲಯ ಆರಂಭಿಸಲಾಗಿದೆ. ಅಲ್ಲೇ ರಾಜ್ಯದ ಎಲ್ಲ ಪ್ರಕರಣಗಳ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗುತ್ತದೆ.

ಮಂಗನ ಕಾಯಿಲೆ ರೋಗ ಲಕ್ಷಣಗಳು

ವೈರಸ್‌ ಸೋಕಿದ 3ರಿಂದ 4 ದಿನಗಳಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿ ಇದ್ದವರಿಗೆ ಸಾಮಾನ್ಯ ಜ್ವರದ ಮಾತ್ರೆ ತೆಗೆದುಕೊಂಡರೂ ಕಡಿಮೆಯಾಗುತ್ತದೆ. ಇಲ್ಲದವರಿಗೆ ಮೈಕೈ ನೋವು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಬಿಳಿ ರಕ್ತ ಕಣಗಳ ಸಂಖ್ಯೆ ಕುಸಿಯುತ್ತದೆ. ವಾರದ ನಂತರ ಮೂಗು, ಬಾಯಿ, ಮಲದಲ್ಲಿ ರಕ್ತ ಸ್ರಾವವಾಗುತ್ತದೆ. ರಕ್ತದ ಒತ್ತಡ ಕುಸಿಯುತ್ತದೆ. ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 


ಸಾಗರ ತಾಲ್ಲೂಕಿನ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸವಳ್ಳಿ ಗ್ರಾಮದ ಗುಮಗೋಡು ಬಳಿ ಗುರುವಾರ ಕಂಡ ಮಂಗನ ಕಳೇಬರದ ಅಂತ್ಯಸಂಸ್ಕಾರವನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿ ಮಾಡಿದರು.

ರೋಗ ಬಾರದಂತೆ ಕ್ರಮಗಳು

ರೋಗ ಹರಡುವ ಉಣ್ಣೆಗಳು ಸಾಮಾನ್ಯವಾಗಿ ದರಗು, ಕಾಡು, ಅಡಿಕೆ ತೋಟಗಳಲ್ಲಿ ಕಂಡುಬರುತ್ತವೆ. ಮಲೆನಾಡಿನ ಜನರು ಕೆಲಸ ಕಾರ್ಯಗಳಿಗೆ ಕಾಡಿಗೆ ಹೋಗುವ ಮೊದಲು ಕೈ, ಕಾಲು, ಮೈ, ಬೆನ್ನಿಗೆ ಡಿಎಂಪಿ ತೈಲ ಹಚ್ಚಿಕೊಳ್ಳಬೇಕು. ಈ ತೈಲವನ್ನು ಆರೋಗ್ಯ ಇಲಾಖೆಯೇ ಪೂರೈಸುತ್ತದೆ. ಅಗತ್ಯಕ್ಕಿಂತ ಹೆಚ್ಚು ತೈಲದ ಬಾಟಲಿಗಳ ಸಂಗ್ರಹವಿದೆ. ಜನರು ತೈಲವನ್ನು ಕೈಕಾಲುಗಳಿಗೆ ಹಚ್ಚಿದರೂ ಬೆನ್ನಿಗೆ ಸವರಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ಉಣ್ಣೆಗಳು ಕಚ್ಚುವುದು ಬೆನ್ನಿಗೆ. ಮುಖಕ್ಕೆ ತೈಲ ಬಳಿದುಕೊಳ್ಳಬಾರದು. ಮುಖಗವಸು ಧರಿಸಬಹುದು. ತೈಲ ನಾಲ್ಕೈದು ತಾಸು ಕೆಲಸ ಮಾಡುತ್ತದೆ. 

ಈವರೆಗೆ ವರದಿಯಾದ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ, 1983-84ರಲ್ಲಿ ಅತಿ ಹೆಚ್ಚು ಜನರು ಈ ಕಾಯಿಲೆಯಿಂದ ಬಳಲಿದ್ದು ಎದ್ದು ಕಾಣುತ್ತದೆ. 1983-84ರಲ್ಲಿ 2,167 ಜನರಲ್ಲಿ ಈ ಕಾಯಿಲೆ ಇರುವುದು ದೃಢಪಟ್ಟಿತ್ತು. 69 ಜನರ ಸಾವಿಗೂ ಅದು ಕಾರಣವಾಗಿತ್ತು.

98 ಜನರಿಗೆ ದೃಢ, ಇಬ್ಬರ ಸಾವು

ಜಿಲ್ಲೆಯಲ್ಲಿ ಈ ಬಾರಿ 98 ಜನರಿಗೆ ಕೆಎಫ್‌ಡಿ ವೈರಸ್‌ ಇರುವುದು ದೃಢಪಟ್ಟಿದೆ. (ಮಾರ್ಚ್‌ 17ರವರೆಗೆ). ತೀರ್ಥಹಳ್ಳಿಯಲ್ಲಿ 78, ಸಾಗರ ತಾಲ್ಲೂಕಿನಲ್ಲಿ 20 ಜನರಲ್ಲಿ ಕಾಣಿಸಿಕೊಂಡಿದೆ. ಸಾಗರ ತಾಲ್ಲೂಕಿನ ಇಬ್ಬರು ಮೃತಪಟ್ಟಿದ್ದಾರೆ.

ಒಂದು ಲಕ್ಷಕ್ಕೂ ಅಧಿಕ ಬಾಟಲಿ ಡಿಎಂಪಿ ತೈಲ ಸಂಗ್ರಹಿಸಲಾಗಿತ್ತು. 90 ಸಾವಿರ ಬಾಟಲ್ ವಿತರಿಸಲಾಗಿದೆ. ಇನ್ನೂ 29 ಸಾವಿರ ಸಂಗ್ರಹವಿದೆ. 5.25 ಲಕ್ಷ ಡೋಸ್ ಲಸಿಕೆ ಬಂದಿದೆ. 3 ಲಕ್ಷ ಲಸಿಕೆ ಹಾಕಲಾಗಿದೆ. ಡಿಸೆಂಬರ್‌ನಿಂದ ಆರೋಗ್ಯ ಕಾರ್ಯಕರ್ತರು, ವೈದ್ಯರು ಕಾಯಿಲೆ ಪೀಡಿತ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂರು ಆಂಬುಲೆನ್ಸ್‌ಗಳನ್ನು ಕಾಯಿಲೆ ಪೀಡಿತರಿಗೇ ಮೀಸಲಿಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು