ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಗ್ರಾಮಸ್ವರಾಜ್ಯಕ್ಕೆ ಅಂಕುಶ

Last Updated 19 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಮೂರು ಸ್ತರಗಳ (ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ) ಪಂಚಾಯಿತಿಗಳ ಅಧ್ಯಕ್ಷ–ಉಪಾಧ್ಯಕ್ಷರ ಅವಧಿಯು ಹಾಲಿ ಇರುವ ಐದು ವರ್ಷಗಳಿಂದ ಎರಡೂವರೆ ವರ್ಷಗಳಿಗೆ ಮೊಟಕು ಹಾಗೂ ಕ್ಷೇತ್ರಗಳ ಮೀಸಲಾತಿ ಅವಧಿಯು ಸದ್ಯದ ಹತ್ತು ವರ್ಷಗಳಿಂದ ಐದು ವರ್ಷಗಳಿಗೆ ಕಡಿತ...

ವಿಧಾನಸಭೆಯಲ್ಲಿ ಮೊನ್ನೆಯಷ್ಟೇ ಮಂಡನೆಯಾದ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ಮಸೂದೆ–2020’ರಲ್ಲಿ ಪ್ರಸ್ತಾಪಗೊಂಡ ಈ ತಿದ್ದುಪಡಿಗಳಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಬಲಪಡಿಸಲು ಶ್ರಮಿಸುತ್ತಿರುವ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಮುಖಂಡರು, ಪಂಚಾಯತ್‌ ರಾಜ್‌ ಸುಧಾರಣಾ ಸಮಿತಿಯಲ್ಲಿ ಸದಸ್ಯರಾಗಿದ್ದವರು ಉದ್ದೇಶಿತ ತಿದ್ದುಪಡಿಗಳಿಗೆ ಎತ್ತಿರುವ ಆಕ್ಷೇಪಗಳು ಹೀಗಿವೆ:

1) ಪಂಚಾಯಿತಿಗಳ ಅಧ್ಯಕ್ಷ–ಉಪಾಧ್ಯಕ್ಷರ ಅಧಿಕಾರದ ಅವಧಿಯನ್ನು ಮೊಟಕುಗೊಳಿಸಿರುವುದು ಬಲುದೊಡ್ಡ ಪ್ರಮಾದ. ಆಡಳಿತ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ಸಮರ್ಪಕವಾಗಿ ಕೆಲಸ ಮಾಡಲು ಅವರಿಗೆ ಸಾಕಷ್ಟು ಕಾಲಾವಕಾಶ ಬೇಕು. ಅಷ್ಟರೊಳಗೆ ಅಧಿಕಾರದ ಅವಧಿಯೇ ಮುಗಿದುಹೋದರೆ ಅವರಿಂದ ಏನು ಸಾಧನೆ ಮಾಡಲು ಸಾಧ್ಯ? ಹೊಸಬರು ಬಂದ ಮೇಲೂ ಅದೇ ಪುನರಾವರ್ತನೆ ಆಗುತ್ತದೆ

2) ಕಾಯ್ದೆಗೆ 2015ರಲ್ಲಿ ಮಾಡಲಾದ ತಿದ್ದುಪಡಿಯಲ್ಲಿ ಅಧ್ಯಕ್ಷ–ಉಪಾಧ್ಯಕ್ಷರ ಅಧಿಕಾರದ ಅವಧಿಯನ್ನು ಐದು ವರ್ಷಗಳಿಗೆ ಏರಿಕೆ ಮಾಡಲಾಗಿತ್ತು. ಹೊಸದಾಗಿ ತರುವ ತಿದ್ದುಪಡಿಗಳು ಕಾಯ್ದೆಯನ್ನು ಬಲಪಡಿಸಬೇಕೇ ಹೊರತು ಹೀಗೆ ದುರ್ಬಲಗೊಳಿಸಬಾರದು

3) ಕ್ಷೇತ್ರದ ಮೀಸಲಾತಿ ಅವಧಿಯನ್ನು ಹತ್ತು ವರ್ಷಗಳಿಂದ ಐದು ವರ್ಷಗಳಿಗೆ ಇಳಿಸಿರುವುದು ಸಹ ನಾಯಕತ್ವ ಬೆಳವಣಿಗೆಗೆ, ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಸದಸ್ಯರ ಬೆಳವಣಿಗೆಗೆ, ದೊಡ್ಡ ಮಾರಕ. ಅಲ್ಲದೆ, ಅಭಿವೃದ್ಧಿ ಚಟುವಟಿಕೆಗಳು ಸಮರ್ಪಕವಾಗಿ ನಡೆಯುವಲ್ಲಿ ಎದುರಾದ ಕಂಟಕ. ತಳಮಟ್ಟದ ನಾಯಕತ್ವ ಬೆಳೆಯಲು ಹತ್ತು ವರ್ಷಗಳ ಮೀಸಲಾತಿ ಅತ್ಯಗತ್ಯ

4) ಪ್ರಸಕ್ತ ಸರ್ಕಾರ ಮಾಡಿರುವ ತಿದ್ದುಪಡಿಯು ನಾಯಕತ್ವವನ್ನು ಬೆಳೆಸುವ ಬದಲು, ಸಂಪೂರ್ಣವಾಗಿ ಚಿವುಟಿ ಹಾಕುತ್ತದೆ. ಅಲ್ಲದೆ, ಒಂದೇ ಅವಧಿಗೆ ಮೀಸಲಾತಿಯನ್ನು ನಿಗದಿಪಡಿಸಿದರೆ ಚುನಾಯಿತ ಪ್ರತಿನಿಧಿಗಳಿಗೆ ಆಯಾ ಪ್ರದೇಶದ ಅಭಿವೃದ್ಧಿ ಆಸಕ್ತಿ ಕುಂಠಿತಗೊಳ್ಳುವ ಸಾಧ್ಯತೆ ಇದೆ

5) ಅಧ್ಯಕ್ಷ–ಉಪಾಧ್ಯಕ್ಷರ ಅಧಿಕಾರಾವಧಿ 30 ತಿಂಗಳು ಪೂರ್ಣಗೊಳ್ಳುವ ಮುನ್ನ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡುವಂತಿಲ್ಲ ಎಂಬ ಹಾಲಿ ಕಾಯ್ದೆಯಲ್ಲಿನ ನಿಯಮವನ್ನೂ ತಿದ್ದುಪಡಿ ಪ್ರಸ್ತಾವದಲ್ಲಿ ಸಡಿಲಗೊಳಿಸಲಾಗಿದೆ. ಮಸೂದೆ ಅಂಗೀಕಾರವಾದರೆ ಅಧ್ಯಕ್ಷ–ಉಪಾಧ್ಯಕ್ಷರ ವಿರುದ್ಧ ಅವರ ಅಧಿಕಾರಾವಧಿಯು 15 ತಿಂಗಳು ಪೂರ್ಣಗೊಂಡ ಬಳಿಕ ಯಾವಾಗ ಬೇಕಾದರೂ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಬಹುದು. ಇದರಿಂದ ಆಡಳಿತ ವ್ಯವಸ್ಥೆ ಅಸ್ಥಿರಗೊಳ್ಳುತ್ತದೆ

6) ಅಧ್ಯಕ್ಷ–ಉಪಾಧ್ಯಕ್ಷರ ವಿರುದ್ಧ ಎರಡನೇ ಸಲ ಅವಿಶ್ವಾಸ ಗೊತ್ತುವಳಿಯನ್ನು ಮೊದಲನೆಯದು ಮಂಡನೆಯಾಗಿ ಎರಡು ವರ್ಷಗಳವರೆಗೆ ಮತ್ತೆ ಮಂಡನೆ ಮಾಡುವಂತಿಲ್ಲ ಎಂಬ ನಿಯಮವನ್ನೂ ಸಡಿಗೊಳಿಸಲಾಗಿದೆ. ಮೊದಲನೇ ಅವಿಶ್ವಾಸ ಗೊತ್ತುವಳಿಯಲ್ಲಿ ವಿಫಲವಾದರೆ ಆರು ತಿಂಗಳ ಬಳಿಕ ಮತ್ತೆ ಗೊತ್ತುವಳಿ ಮಂಡನೆಗೆ ಅವಕಾಶ ಕಲ್ಪಿಸಲಾಗಿದೆ. ಈ ಅಂಶ ಕೂಡ ಪಂಚಾಯತ್‌ ವ್ಯವಸ್ಥೆಯನ್ನು ಅಸ್ಥಿರತೆಗೆ ತಳ್ಳುತ್ತದೆ

7) ಮತದಾನಕ್ಕಿಂತ 48 ಗಂಟೆಗಳ ಮೊದಲಷ್ಟೇ ನೀತಿ ಸಂಹಿತೆ ಜಾರಿಯಿಂದ ಏನೂ ಪ್ರಯೋಜನವಿಲ್ಲ. ಅದನ್ನು ಕನಿಷ್ಠ 15 ದಿನ ಮುಂಚಿತವಾಗಿ ಜಾರಿಗೊಳಿಸಬೇಕು

8) ಸದ್ಯದ ಕಾಯ್ದೆಯ ಪ್ರಕಾರ, ಭ್ರಷ್ಟಾಚಾರದಿಂದ ಯಾವುದೇ ಸದಸ್ಯ ಅನರ್ಹಗೊಂಡರೆ ಆತ ಮುಂದೆಂದೂ ಚುನಾವಣೆಗೆ ನಿಲ್ಲುವಂತಿಲ್ಲ. ಆದರೆ, ತಿದ್ದುಪಡಿ ಪ್ರಸ್ತಾಪ ಅನರ್ಹತೆಯ ಅವಧಿಯನ್ನು ಆರು ವರ್ಷಗಳವರೆಗೆ ಮಾತ್ರ ಸೀಮಿತಗೊಳಿಸುತ್ತದೆ. ನಂತರ ಆತ ಮತ್ತೆ ಚುನಾವಣೆಗೆ ಸ್ಪರ್ಧಿಸಬಹುದು. ಇದು ಕೂಡ ಸರಿಯಾದ ನಡೆಯಲ್ಲ

ದುರ್ಬಳಕೆಗೆ ಇಲ್ಲಿವೆ ನಿದರ್ಶನ...

ರಾಮನಗರ ಜಿಲ್ಲಾ ಪಂಚಾಯಿತಿಗೆ 2016ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯಿತು. ಅಧ್ಯಕ್ಷ ಸ್ಥಾನಕ್ಕಾಗಿ ಎ.ಮಂಜುನಾಥ್ ಹಾಗೂ ಸಿ.ಪಿ. ರಾಜೇಶ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಚನ್ನಪಟ್ಟಣದ ಶಾಸಕ ಸಿ.ಪಿ. ಯೋಗೇಶ್ವರ್‌ ತಮ್ಮ ಸಹೋದರ ರಾಜೇಶ್‌ಗೆ ಅಧ್ಯಕ್ಷ ಪಟ್ಟ ಕೊಡಿಸುವಲ್ಲಿ ಯಶಸ್ವಿಯಾದರು.

ಆದರೆ ನಂತರದ ಬೆಳವಣಿಗೆಯಲ್ಲಿ ಯೋಗೇಶ್ವರ್‌ ಬಿಜೆಪಿಯತ್ತ ವಾಲಿದರು. ರಾಜೇಶ್‌ ಸಹ ಬಿಜೆಪಿ ಕಾರ್ಯಕರ್ತರೊಡನೆ ಕಾಣಿಸಿಕೊಳ್ಳತೊಡಗಿದರು. ಇದರಿಂದಾಗಿ ಕಾಂಗ್ರೆಸ್‌ಗೆ ಮುಜುಗರವಾಗಿ, ಅಧ್ಯಕ್ಷರ ರಾಜೀನಾಮೆಗೆ ಒತ್ತಡ ಹೆಚ್ಚಾಯಿತು. ಆದರೆ ರಾಜೀನಾಮೆ ಕೊಡಲು ರಾಜೇಶ್‌ ಸಿದ್ಧರಿರಲಿಲ್ಲ. ಕಾಂಗ್ರೆಸ್‌ ಮುಖಂಡರಿಗೇ ಸಡ್ಡು ಹೊಡೆದು ಅಧಿಕಾರ ಮುಂದುವರಿಸಿದರು. ಒಮ್ಮೆ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದರಾದರೂ ವಾಪಸ್ ಪಡೆದು ಅಚ್ಚರಿ ಮೂಡಿಸಿದರು.
ಇದರಿಂದಾಗಿ ಜಿ.ಪಂ. ಸದಸ್ಯರು ಹಾಗೂ ಅಧ್ಯಕ್ಷರ ನಡುವೆ ಮುನಿಸು ಹೆಚ್ಚಾಯಿತು. ಒಮ್ಮೆ ಜಿ.ಪಂ. ಆವರಣದಲ್ಲೇ ಅಧ್ಯಕ್ಷರಿಗೆ ಘೇರಾವ್ ಹಾಕಿದ ಸದಸ್ಯರು ರಾಜೀನಾಮೆ ಕೊಡಲೇ ಬೇಕು ಎಂಬ ಒತ್ತಡ ಹೇರಿದರು. ಅಲ್ಲಿಯವರೆಗೂ ಕೆಡಿಪಿ, ಸಾಮಾನ್ಯ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಬೆದರಿಕೆಯನ್ನೂ ಹಾಕಿದರು. ಅಂತಿಮವಾಗಿ ರಾಜೇಶ್ ಎರಡು ವರ್ಷದ ಬಳಿಕ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿ ಕೆಳಗಿಳಿಯಬೇಕಾಯಿತು.

ಹಾಸನದಲ್ಲಿ ಮೀಸಲಾತಿ ಬದಲು

ಹಾಸನ ಜಿಲ್ಲಾ ಪಂಚಾಯಿತಿ ಚುನಾವಣೆಯ ಫಲಿತಾಂಶ 2016ರ ಜೂನ್‌ 3ರಂದು ಪ್ರಕಟವಾಗಿತ್ತು. 40 ಸ್ಥಾನಗಳಲ್ಲಿ ಜೆಡಿಎಸ್‌ 23, ಕಾಂಗ್ರೆಸ್‌ 16 ಮತ್ತು ಬಿಜೆಪಿ ಒಂದು ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಬಹುಮತ ಹೊಂದಿದ್ದ ಜೆಡಿಎಸ್‌ಗೆ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಹುದ್ದೆ ಲಭಿಸಬೇಕಿತ್ತು. ಜೆಡಿಎಸ್‌ಗೆ ಈ ಹುದ್ದೆಯನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರವು ಈ ಹುದ್ದೆಯನ್ನು ಪರಿಶಿಷ್ಟ ಪಂಗಡದ ಮಹಿಳಾ ಸದಸ್ಯರಿಗೆ ಮೀಸಲಿರಿಸಿತು. ಜೆಡಿಎಸ್‌ನಲ್ಲಿ ಈ ವರ್ಗದ ಸದಸ್ಯರು ಇರಲಿಲ್ಲ. ಹೀಗಾಗಿ ಜೆಡಿಎಸ್‌ಗೆ ಈ ಹುದ್ದೆ ತಪ್ಪಿತು. ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಪರಿಶಿಷ್ಟ ಪಂಗಡದ ಶ್ವೇತಾ ದೇವರಾಜ್ ಅವರಿಗೆ ಈ ಹುದ್ದೆ ಲಭಿಸಿತು.

ಮಸೂದೆಯಲ್ಲಿ ಏನಿವೆ ಉತ್ತಮ ಅಂಶಗಳು?

ಮಸೂದೆಯನ್ನು ಕುರುಡಾಗಿ ವಿರೋಧಿಸುವುದಲ್ಲ. ಅದರಲ್ಲಿ ಕೆಲವು ಒಳ್ಳೆಯ ಅಂಶಗಳೂ ಇವೆ. ಅಲ್ಲದೆ, ತಾಂತ್ರಿಕವಾದ ಹಲವು ದೋಷಗಳನ್ನು ಸರಿಪಡಿಸಲಾಗಿದೆ ಕೂಡ ಎಂದು ಸಿ.ನಾರಾಯಣಸ್ವಾಮಿ ಹೇಳುತ್ತಾರೆ.

ಕುಷ್ಠರೋಗ ಸಾಂಕ್ರಾಮಿಕ ರೋಗವಲ್ಲ. ಅದನ್ನು ಸಾಂಕ್ರಾಮಿಕ ರೋಗಗಳ ಪಟ್ಟಿಯಿಂದ ಕೈಬಿಡಲಾಗಿದೆ. ಚುನಾವಣಾ ಪ್ರಕ್ರಿಯೆಯನ್ನು ಯಾವಾಗ ಮುಗಿಸಬೇಕು ಎನ್ನುವ ವಿಷಯದಲ್ಲಿ ತಿದ್ದುಪಡಿ ಪ್ರಸ್ತಾವಗಳು ಸ್ಪಷ್ಟತೆಯಿಂದ ಕೂಡಿವೆ. ಪಂಚಾಯತ್‌ನ ಅವಧಿ ಪೂರ್ಣಗೊಳ್ಳುವುದಕ್ಕೆ ಮೊದಲು ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎನ್ನುವ ನಿಯಮದ ಸೇರ್ಪಡೆ ಉತ್ತಮ ನಿರ್ಧಾರ ಎಂದು ಅವರು ವಿವರಿಸುತ್ತಾರೆ.

ಚುನಾವಣಾ ಅಧಿಸೂಚನೆಯನ್ನು ಹೊರಡಿಸುವುದಕ್ಕೆ ಮುಂಚೆ 45 ದಿನಗಳಿಗೆ ಕಡಿಮೆ ಇಲ್ಲದಂತೆ ಸ್ಥಾನಗಳ ಮೀಸಲಾತಿ ಮತ್ತು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಬೇಕು ಎನ್ನುವ ನಿಯಮದ ಸೇರ್ಪಡೆ ಕೂಡ ಉತ್ತಮ ತೀರ್ಮಾನ ಎಂದು ಅವರು ಹೇಳುತ್ತಾರೆ.

ಅವಿಶ್ವಾಸ ಗೊತ್ತುವಳಿಗೆ ಮೊದಲಿದ್ದ ಕನಿಷ್ಠ ಅವಧಿಯನ್ನು ಕಡಿತಗೊಳಿಸಿದ್ದು ಸರಿಯಲ್ಲ. ಆದರೆ, ಆ ಸಭೆಯ ಅಧ್ಯಕ್ಷತೆಯನ್ನು ಯಾರು ವಹಿಸಬೇಕು ಎಂಬುದಕ್ಕೆ ಸ್ಪಷ್ಟತೆ ಸಿಕ್ಕಿರುವುದು ಸಹ ಒಳ್ಳೆಯದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಅಧಿಕಾರದಾಹಿ ಪ್ರವೃತ್ತಿ

ಗ್ರಾಮ ಸ್ವರಾಜ್‌ ಕಾಯ್ದೆಗೆ ಸರ್ಕಾರ ಪ್ರಸ್ತಾವಿಸಿದ ತಿದ್ದುಪಡಿಗಳು ಪ್ರಮುಖವಾಗಿ ಅಧಿಕಾರದಾಹಿ ಪ್ರವೃತ್ತಿಯನ್ನು ಗ್ರಾಮಮಟ್ಟದಲ್ಲಿಯೂ ತಂದು ಜನರನ್ನೇ ಅದರಲ್ಲಿ ಒಳಗೊಳ್ಳುವಂತೆ ಮಾಡಲು ಹೊರಟಿರುವಂತಿದೆ. ಸರ್ಕಾರಿ ಆಡಳಿತದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳವರ ಅದರಲ್ಲಿಯೂ ಮಹಿಳೆಯರ ಸಬಲೀಕರಣಕ್ಕೆ ಒತ್ತು ಕೊಡುತ್ತಿದ್ದ ಕಾಯ್ದೆಯ ನಿಯಮವನ್ನೇ ಬದಲಾವಣೆ ಮಾಡಲು ಹೊರಟಿರುವುದು, ಈ ವರ್ಗಗಳ ಸಬಲೀಕರಣಕ್ಕೆ ಸರ್ಕಾರ ಎಷ್ಟು ಮಹತ್ವ ಕೊಟ್ಟಿದೆ ಎಂಬುದನ್ನು ಸೂಚಿಸುತ್ತದೆ ಎನ್ನುತ್ತಾರೆಗ್ರಾಮ ಪಂಚಾಯತ್‌ ಹಕ್ಕೊತ್ತಾಯ ಆಂದೋಲನದ ಸಂಯೋಜಕನಂದನಾ ರೆಡ್ಡಿ.

ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸುತ್ತಿದ್ದೇವೆ ಎಂದು ಹೇಳುತ್ತಲೇ ಆಡಳಿತದ ಹೊಣೆ ಹೊತ್ತವರು ಎಷ್ಟು ಬೆಳೆದಿವೆ ಎಂದು ಆ ಬೇರುಗಳನ್ನು ಮೇಲಿಂದ ಮೇಲೆ ಕಿತ್ತು ನೋಡುತ್ತಲೇ ಇದ್ದಾರೆ. ಹೀಗಾಗಿ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಇಂದಿಗೂ ನನಸಾಗುತ್ತಿಲ್ಲ ಎನ್ನುವುದುಪಂಚಾಯತ್‌ ರಾಜ್‌ ಸುಧಾರಣಾ ಸಮಿತಿಯ ಸದಸ್ಯರಾಗಿದ್ದಸಿ.ನಾರಾಯಣಸ್ವಾಮಿ ಅವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT