ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಆಳುವ ಸರ್ಕಾರಗಳ ಅಸ್ತ್ರ ‘ಮಾಧ್ಯಮ ಸೆನ್ಸಾರ್’

Last Updated 29 ಸೆಪ್ಟೆಂಬರ್ 2020, 20:15 IST
ಅಕ್ಷರ ಗಾತ್ರ

ಇತಿಹಾಸವನ್ನು ಗಮನಿಸಿದರೆ, ಮಾಧ್ಯಮ ಸೆನ್ಸಾರ್‌ ಅನ್ನು ಆಳುವ ಬಹುತೇಕ ಎಲ್ಲಾ ಪಕ್ಷಗಳು ಅನುಸರಿಸಿವೆ. ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಯತ್ನ ನಡೆಸಿವೆ.ಸುದರ್ಶನ್ ಟಿ.ವಿ ಕಾರ್ಯಕ್ರಮ ವಿವಾದವು ಮಾಧ್ಯಮ ಸ್ವಾತಂತ್ರ್ಯದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

ಸ್ವಾತಂತ್ರ್ಯಪೂರ್ವದಿಂದಲೂ ಮಾಧ್ಯಮಗಳು ಆಳುವವರ ಹಿಡಿತಕ್ಕೆ ಒಳಪಡುತ್ತಾ ಬಂದಿವೆ. ವಸಾಹತು ಭಾರತದಲ್ಲಿ ಅಂದಿನ ಸರ್ಕಾರ ಪತ್ರಿಕಾ ಪ್ರಕಟಣೆಯ ಮೇಲೆ ಏಕಸ್ವಾಮ್ಯ ಸಾಧಿಸಲು ಯತ್ನಿಸುತ್ತಿದ್ದ ಹಲವು ಉದಾಹರಣೆಗಳು ಇವೆ. 1782ರಲ್ಲಿ ‘ಬೆಂಗಾಲ್ ಗೆಜೆಟ್’ ಪತ್ರಿಕೆಯನ್ನು ಸ್ಥಗಿತಗೊಳಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸವನ್ನು ಬ್ರಿಟಿಷ್ ಸರ್ಕಾರ ಶುರು ಮಾಡಿತು. ಸ್ವಾತಂತ್ರ್ಯದ ಹಂಬಲದಲ್ಲಿದ್ದ ಹಲವು ಹೋರಾಟಗಾರರು ತೆರೆಮರೆಯಲ್ಲಿ ಪತ್ರಿಕಾ ಪ್ರಕಟಣೆ ಮಾಡಿ ಜನಜಾಗೃತಿಗೆ ಯತ್ನಿಸಿದ್ದರು.19ನೇ ಶತಮಾನದ ಮಧ್ಯಭಾಗದಲ್ಲಿ ಟೆಲಿಗ್ರಾಫ್‌ಗಳನ್ನು ನಿಯಂತ್ರಿಸಲು ಕಾನೂನುಗಳ ಮೂಲಕ ಯತ್ನಿಸಲಾಯಿತು.

1952ರಲ್ಲಿ ಅಂದಿನ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಬಿ.ವಿ. ಕೆಸ್ಕರ್ ಅವರ ಸಿನಿಮಾ ಸಂಗೀತ ಅಸಭ್ಯವೆಂದು ಭಾವಿಸಿ, ಅದರ ಶುದ್ಧೀಕರಣಕ್ಕೆ ಮುಂದಾಗಿದ್ದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸರ್ಕಾರದ ಉದ್ದೇಶಗಳನ್ನು ನಿರಂತರವಾಗಿ ಪ್ರಸಾರ ಮಾಡುವ ಮೂಲಕ ಮಾಧ್ಯಮಗಳನ್ನು ತಮ್ಮ ಅಂಕೆಯಲ್ಲಿ ಇರಿಸಿಕೊಂಡಿದ್ದರು.

90ರ ದಶಕದಲ್ಲಿ ಖಾಸಗಿ ಕೇಬಲ್ ಟಿ.ವಿಗಳು ಅಡಿಯಿಟ್ಟವು. ತನ್ನ ಏಕಸ್ವಾಮ್ಯ ಕೊನೆಯಾಗುವುದನ್ನು ಅರಿತ ಸರ್ಕಾರ, ಅವುಗಳನ್ನು ನಿರ್ಬಂಧಿಸಲು ಮುಂದಾಯಿತಾದರೂ ಅದರಲ್ಲಿ ಸಫಲವಾಗಲಿಲ್ಲ.ಖಾಸಗಿ ವಾಹಿನಿಗಳ ಪ್ರಸಾರವನ್ನು ಸಾಂವಿಧಾನಿಕವಾಗಿ ರಕ್ಷಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಘೋಷಿಸುವವರೆಗೂ 1995ರವರೆಗೆ
ಕೇಬಲ್ ಟೆಲಿವಿಷನ್‌ಗಳು ಡೋಲಾಯಮಾನ ಪರಿಸ್ಥಿತಿಯಲ್ಲೇ ಇದ್ದವು.

ಟೆಲಿವಿಷನ್ ಪ್ರಸಾರದ ಮೇಲೆ ತನ್ನ ಹಿಡಿತ ಕಳೆದುಕೊಂಡ ಬಳಿಕ 1995ರಲ್ಲಿ ಕೇಬಲ್ ಟೆಲಿವಿಷನ್ ಕಾಯ್ದೆಯನ್ನು ಸಂಸತ್ತು ಜಾರಿಗೆ ತಂದಿತು. ಈ ಕಾಯ್ದೆಯು ಸರ್ಕಾರಕ್ಕೆ ಸೆನ್ಸಾರ್‌ಶಿಪ್ ಅಧಿಕಾರವನ್ನು ನೀಡಿತು.ಚಾನೆಲ್ ಅನ್ನು ನಿಷೇಧಿಸುವ ಅಧಿಕಾರ ಜಿಲ್ಲಾ ಮಟ್ಟದ ಅಧಿಕಾರಿಗೂ ನೀಡಲಾಯಿತು. ಕೇಂದ್ರಕ್ಕೆ ಪರಮಾಧಿಕಾರ ನೀಡಿರುವ ಕಾಯ್ದೆಯು, ಚಾನೆಲ್‌ ಮಾತ್ರವಲ್ಲ ಕೇಬಲ್ ಕಾರ್ಯಾಚರಣೆಯನ್ನೂ ಸಹ ನಿಷೇಧಿಸಬಹುದಾಗಿದೆ.

ಇತ್ತೀಚಿನ ವರ್ಷಗಳಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಕಾರ್ಯಕ್ರಮ ಪ್ರಸಾರವನ್ನು ಸೆನ್ಸಾರ್‌ಗೆ ಒಳಪಡಿಸುವ ಹಾಗೂ ಪ್ರಸಾರದ ಮೇಲೆ ನಿರ್ಬಂಧ ವಿಧಿಸುವ ಕೆಲವು ಯತ್ನಗಳು ನಡೆದಿವೆ. ಮುಂಬೈ ಮೇಲಿನ ಉಗ್ರರ ದಾಳಿ ಘಟನೆಯ ‘ಲೈವ್’ ಪ್ರಸಾರ ಮಾಡಿದ ಸುದ್ದಿವಾಹಿನಿಗಳ ನಡೆ ಬಗ್ಗೆ ಆಗಿನ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ನೇರಪ್ರಸಾರದ ಕಾರ್ಯಕ್ರಗಳಿಗೆ ಕಠಿಣ ನಿಯಮಗಳನ್ನು ರೂಪಿಸುವ ಬಗ್ಗೆ ಚರ್ಚೆ ನಡೆದಿತ್ತು.

ರಿಪಬ್ಲಿಕ್ ಟಿವಿ

ಇಂಗ್ಲಿಷ್ ಸುದ್ದಿವಾಹಿನಿ ರಿಪಬ್ಲಿಕ್ ಟಿವಿಯನ್ನು ಮಹಾರಾಷ್ಟ್ರದಲ್ಲಿ ಪ್ರಸಾರ ಮಾಡದಂತೆ ಸ್ಥಳೀಯ ಕೇಬಲ್ ಆಪರೇಟರ್‌ಗಳಿಗೆ ಶಿವಸೇನಾ ಇತ್ತೀಚೆಗೆ ಸೂಚನೆ ನೀಡಿತ್ತು. ಸೂಚನೆಯನ್ನು ಪರಿಗಣಿಸದಿದ್ದರೆ ಗಂಭೀರ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿತ್ತು.

ನಟ ಸುಶಾಂತ್‌ ಸಿಂಗ್ ಸಾವಿನ ಪ್ರಕರಣ ಹಾಗೂ ನಟಿ ಕಂಗನಾ ರನೌತ್ ಅವರ ಕಚೇರಿಯನ್ನು ಒಡೆದುಹಾಕಿದ ಪ್ರಕರಣಗಳನ್ನು ನಿರಂತರವಾಗಿ ಪ್ರಸಾರ ಮಾಡಿದ ವಿಚಾರ ಸೇನಾ ಕೆಂಗಣ್ಣಿಗೆ ಗುರಿಯಾಗಿತ್ತು. ‘ರಿಪಬ್ಲಿಕ್ ಟಿವಿಯು ಪತ್ರಿಕೋದ್ಯಮದ ನೀತಿ ಹಾಗೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಮಾನಹಾನಿಕರ ಭಾಷೆ ಪ್ರಯೋಗಿಸಲಾಗುತ್ತಿದೆ’ ಎಂದು ಸೇನಾ ಆರೋಪ ಮಾಡಿತ್ತು. ಆದರೆ ಸೇನಾ ಹೊರಡಿಸಿರುವ ಆದೇಶವು ವಾಕ್‌ ಸ್ವಾತಂತ್ರ್ಯದ ಉಲ್ಲಂಘನೆ ಎಂದು ರಿಪಬ್ಲಿಕ್ ಟಿವಿ ಆರೋಪಿಸಿತ್ತು.

ಎನ್‌ಡಿಟಿವಿ

ಭಯೋತ್ಪಾದಕರ ಕೃತ್ಯಗಳನ್ನು ಹೇಗೆ ವರದಿ ಮಾಡಬೇಕು ಎಂಬ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ಪ್ರಸ್ತಾಪಿಸಿತು. ಪಠಾಣ್‌ಕೋಟ್‌ ವಾಯುನೆಲೆಯಲ್ಲಿ ನಡೆದ ಉಗ್ರರ ದಾಳಿಯನ್ನು ಎನ್‌ಡಿಟಿವಿ ವರದಿ ಮಾಡಿದ ರೀತಿಯು ಸರಿಯಿಲ್ಲ ಎಂದು ಸರ್ಕಾರ ಹೇಳಿತು. ಸರ್ಕಾರ ಗೊತ್ತುಪಡಿಸಿದ ಅಧಿಕಾರಿ ಅಥವಾ ವಕ್ತಾರರು ನೀಡುವ ಹೇಳಿಕೆಗಳನ್ನು ವರದಿ ಮಾಡಬೇಕು ಎಂದು ನಿರ್ದೇಶನ ನೀಡಲಾಗಿತ್ತು. ದಾಳಿಯ ವೇಳೆ ಕೆಲವು ಸೂಕ್ಷ್ಮ ಮಾಹಿತಿಗಳನ್ನು ಎನ್‌ಡಿಟಿವಿ ಇಂಡಿಯಾ ಪ್ರಸಾರ ಮಾಡಿತ್ತು ಎಂಬ ಆರೋಪದ ಮೇಲೆ ವಾಹಿನಿಯ ಪ್ರಸಾರದ ಮೇಲೆ 24 ಗಂಟೆ ನಿಷೇಧ ಹೇರಲಾಗಿತ್ತು. ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ವಾಹಿನಿಯ ಮೇಲೆ ಸರ್ಕಾರ ನಿಷೇಧ ವಿಧಿಸಿದ್ದು ಇದೇ ಮೊದಲು.

ವಾಹಿನಿ ಪ್ರಸಾರ ಮಾಡಿದ ಎಲ್ಲ ಮಾಹಿತಿಗಳನ್ನು ಸರ್ಕಾರದ ವಕ್ತಾರರೇ ಬಹಿರಂಗಪಡಿಸಿದ್ದರು ಎಂದು ಎನ್‌ಡಿಟಿವಿ ಸ್ಪಷ್ಟನೆ ನೀಡಿತು. ‘ನ್ಯೂಸ್ ಟೈಮ್ ಅಸ್ಸಾಂ’ ವಾಹಿನಿಯೂ ಇದೇ ಆರೋಪವನ್ನು ಎದುರಿಸಿತು. ‘ಸರ್ಕಾರದ ನಡೆಯು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ನೇರ ದಾಳಿ’ ಎಂದು ಸಂಪಾದಕರ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿತ್ತು. ಇದು ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತದೆ ಎಂದು ದೂ

ಏಷ್ಯಾನೆಟ್‌ ನ್ಯೂಸ್ ಮತ್ತು ಮೀಡಿಯಾ ಒನ್ ಟಿವಿ

ದೆಹಲಿ ಗಲಭೆಯನ್ನು ವರದಿ ಮಾಡುವಲ್ಲಿ ಪಕ್ಷಪಾತ ಧೋರಣೆ ಅನುಸರಿಸಿದ ಆರೋಪದಲ್ಲಿ ಮಲಯಾಳ ಭಾಷೆಯ ಏಷ್ಯಾನೆಟ್ ನ್ಯೂಸ್ ಟಿ.ವಿ ಹಾಗೂ ಮೀಡಿಯಾ ಒನ್ ಟಿ.ವಿ ವಿರುದ್ಧ ಕೇಂದ್ರ ಸರ್ಕಾರವು ಕಳೆದ ಮಾರ್ಚ್‌ನಲ್ಲಿ ಕ್ರಮ ಜರುಗಿಸಿತ್ತು. ಎರಡೂ ವಾಹಿನಿಗಳ ಪ್ರಸಾರದ ಮೇಲೆ 48 ಗಂಟೆಗಳ ನಿಷೇಧ ವಿಧಿಸಿತ್ತು.

ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ಅಪಾಯವನ್ನು ಉಂಟುಮಾಡುವ ವರದಿಗಳನ್ನು ಪ್ರಸಾರ ಮಾಡಲಾಗಿದೆ ಎಂಬುದು ಸರ್ಕಾರದ ಆರೋಪವಾಗಿತ್ತು. ನಿರ್ದಿಷ್ಟ ಸಮುದಾಯವೊಂದರ ಪರವಾಗಿ ವಾಹಿನಿಗಳು ಇದ್ದವು ಎಂದು ಸರ್ಕಾರ ಬೊಟ್ಟು ಮಾಡಿತ್ತು.

ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರು ನಗರದಲ್ಲಿ ಗಲಭೆ ನಡೆಯಲು ಕಾರಣವಾದ ಅಂಶಗಳನ್ನು ಪತ್ತೆಹಚ್ಚುವ ಬದಲಾಗಿ ಮಾಧ್ಯಮಗಳ ಮೇಲೆ ಸೆನ್ಸಾರ್ ಹೇರುತ್ತಿರುವುದು ಸರಿಯಲ್ಲ ಎಂದು ಪತ್ರಕರ್ತ ಸಂಘಟನೆಗಳು ಈ ಬಗ್ಗೆ
ದನಿ ಎತ್ತಿದ್ದವು.

ಎಬಿಎನ್ ಆಂಧ್ರಜ್ಯೋತಿ

ಶಾಸಕರನ್ನು ಅಪಹಾಸ್ಯ ಮಾಡುವ ಕಾರ್ಯಕ್ರಮ ಪ್ರಸಾರ ಮಾಡಿದ ಆರೋಪದ ಮೇಲೆ 2014ರಲ್ಲಿ ತೆಲಂಗಾಣದ ಎಬಿಎನ್ ಆಂಧ್ರಜ್ಯೋತಿ ವಾಹಿನಿಯ ಪ್ರಸಾರಕ್ಕೆ 502 ದಿನಗಳ ತಡೆ ನೀಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು. ತಕ್ಷಣವೇ ವಾಹಿನಿಯ ಮರುಆರಂಭಕ್ಕೆ ಎಲ್ಲ ಕ್ರಮಗಳನ್ನು ಜರುಗಿಸುವಂತೆ ತೆಲಂಗಾಣ ಹಾಗೂ ಕೇಂದ್ರ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ‘ನ್ಯಾಯ ತಡವಾಗಿಯಾದರೂ ನಮ್ಮ ಪರವಾಗಿ ಬಂದಿದೆ. ಇದು ಧರ್ಮದ ವಿಜಯ’ ಎಂದು ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ವೇಮುರಿ ರಾಧಾಕೃಷ್ಣ ಸಂತಸ ವ್ಯಕ್ತಪಡಿಸಿದ್ದರು. ಸರ್ಕಾರದ ನಡೆ ಪ್ರಜಾಪ್ರಭುತ್ವ ವಿರೋಧಿ ಹಾಗೂ ಅಕ್ರಮ ಎಂದು ಪತ್ರಕರ್ತರ ಸಂಘಟನೆಗಳು ದನಿ ಎತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT