ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ | ನೆಲ ಮಹಡಿಯಲ್ಲೇ ಕಮರುವ ಐಎಎಸ್‌, ಕೆಎಎಸ್‌ ಕನಸು

ಬಹುತೇಕ ಕೋಚಿಂಗ್‌ ಕೇಂದ್ರಗಳ ಗ್ರಂಥಾಲಯ, ಅಧ್ಯಯನ ಕೊಠಡಿಗೆ ನೆಲ ಮಹಡಿಗಳೇ ನೆಲೆ
Published 4 ಆಗಸ್ಟ್ 2024, 0:30 IST
Last Updated 4 ಆಗಸ್ಟ್ 2024, 0:30 IST
ಅಕ್ಷರ ಗಾತ್ರ

ದೆಹಲಿಯ ಓಲ್ಡ್‌ ರಾಜಿಂದರ್‌ ನಗರದಲ್ಲಿರುವ ‘ರಾವ್ಸ್ ಐಎಎಸ್‌ ಸ್ಟಡಿ ಸರ್ಕಲ್‌’ನ ನೆಲಮಹಡಿಗೆ ಈಚೆಗೆ ಮಳೆನೀರು ನುಗ್ಗಿ ಮೂವರು ಐಎಎಸ್‌ ಆಕಾಂಕ್ಷಿಗಳು ಮೃತಪಟ್ಟಿದ್ದರು.  

ದೆಹಲಿಯ ಕೋಚಿಂಗ್ ಕೇಂದ್ರದಲ್ಲಿ ನಡೆದಿರುವ ಅನಾಹುತ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಎದೆಯಲ್ಲಿ ನಡುಕ ಹುಟ್ಟಿಸಿದೆ. ದೆಹಲಿಯಲ್ಲಿ ಇದು ಮೊದಲ ಘಟನೆಯೇನಲ್ಲ. ಹಲವು ವರ್ಷಗಳಿಂದ ಇಂಥವು ನಡೆಯುತ್ತಲೇ ಇವೆ. 

ದೆಹಲಿಯಂತೆ ಬೆಂಗಳೂರೂ ಸಹ ಐಎಎಸ್‌, ಕೆಎಎಸ್‌ ಕೋಚಿಂಗ್‌ ಕೇಂದ್ರಗಳ ಹಬ್‌ ಆಗಿ ಬೆಳೆಯುತ್ತಿದೆ. ಉತ್ತರ ಕರ್ನಾಟಕದಲ್ಲಿ ಧಾರವಾಡ ಸಹ ಇದೇ ರೀತಿ ಬೆಳವಣಿಗೆ ಕಾಣುತ್ತಿದೆ. ರಾಜ್ಯದ ರಾಜಧಾನಿಯ ಬಹುತೇಕ ಕೋಚಿಂಗ್‌ ಕೇಂದ್ರಗಳು ನೆಲ ಮಹಡಿಯಲ್ಲಿ ನೆಲೆಸಿವೆ. ಮಳೆ ನೀರು ನಗುಗ್ಗಿದರೆ, ಅಗ್ನಿ ಅವಘಡ ಸಂಭವಿಸಿದರೆ ಅಗತ್ಯ ಸುರಕ್ಷತಾ ಕ್ರಮಗಳಿಗೆ ಬಹುತೇಕ ಕಡೆ ಆದ್ಯತೆಯನ್ನೇ ನೀಡಿಲ್ಲ.

ಉಜ್ವಲ ಭವಿಷ್ಯದ ಕನಸು ಹೊತ್ತ ಯುವಕ ಯುವತಿಯರು, ತರಬೇತಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿಯೂ ಮೂರನೇ ದರ್ಜೆಯ ಮನುಷ್ಯರಂತೆ ಬದುಕಬೇಕಾಗಿ ಬಂದಿರುವುದು, ಮಹತ್ವಾಕಾಂಕ್ಷೆಯ ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳ ಅವ್ಯವಸ್ಥೆಗೆ ಬಲಿಪಶುಗಳಾಗುತ್ತಿರುವುದು ವ್ಯವಸ್ಥೆಯ ಲೋಪಗಳಿಗೆ ಕನ್ನಡಿ ಹಿಡಿಯುತ್ತಿದೆ. ಇಂತಹ ಅವ್ಯವಸ್ಥೆಯ ಸುತ್ತ ‘ಪ್ರಜಾವಾಣಿ’ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ...

****

ಬೆಂಗಳೂರು: ‘ಬಿ.ಎಸ್‌ಸಿ (ಕೃಷಿ) ಪದವಿ ಮುಗಿಸಿದ ನಂತರ ಎಐಎಸ್‌ ಅಧಿಕಾರಿಯಾಗುವ ಕನಸು ಹೊತ್ತು ತರಬೇತಿ ಪಡೆಯಲು ಬೆಂಗಳೂರಿಗೆ ಬಂದೆ. ಸ್ನೇಹಿತರ ಸಲಹೆಯಂತೆ ವಿಜಯನಗರದ ಚಂದ್ರಾಲೇಔಟ್‌ನ ಕೋಚಿಂಗ್‌ ಕೇಂದ್ರ ಒಂದನ್ನು ಆಯ್ಕೆ ಮಾಡಿಕೊಂಡೆ. ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರದ ಧ್ಯೇಯ, ತರಬೇತಿದಾರರ ಅರ್ಹತೆ, ಸೌಲಭ್ಯಗಳನ್ನು ಕಂಡು ಬೆರಗಾಗಿದ್ದೆ’.

‘ಕೋಚಿಂಗ್‌ ಕೇಂದ್ರಕ್ಕೆ ಭೇಟಿ ನೀಡಿದಾಗ ಸೀದಾ ಮೂರನೇ ಅಂತಸ್ತಿನಲ್ಲಿದ್ದ ಕಚೇರಿಗೆ ಕರೆದುಕೊಂಡು ಹೋಗಿದ್ದರು. ತರಬೇತಿ ಆರಂಭವಾದ ನಂತರ ವಾಹನಗಳ ನಿಲುಗಡೆಗೆ ಮೀಸಲಾಗಿದ್ದ ಜಾಗದಲ್ಲಿ ಅರ್ಧ ಬಳಸಿಕೊಂಡಿದ್ದ ನೆಲ ಮಹಡಿಯಲ್ಲೇ ತರಬೇತಿ, ಗ್ರಂಥಾಲಯದಲ್ಲೇ ಅಧ್ಯಯನ ನಡೆಸುವುದು ಕಾಯಂ ಆಯಿತು. ಮೊನ್ನೆ ದೆಹಲಿಯಲ್ಲಿ ಕೋಚಿಂಗ್‌ ಕೇಂದ್ರದ ನೆಲಮಹಡಿಗೆ ನೀರು ನುಗ್ಗಿ ಮೂವರು ಐಎಎಸ್‌ ಆಕಾಂಕ್ಷಿಗಳು ಮೃತಪಟ್ಟ ನಂತರ ಅಲ್ಲಿನ ಎಲ್ಲರೂ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇವೆ. ಕೆಲವರು ಊರಿಗೆ ಹೋದವರು ಮರಳಿ ಬಂದಿಲ್ಲ’

–ಇದು ಐಎಎಸ್‌ ಕನಸು ಹೊತ್ತು ಬೆಂಗಳೂರಿಗೆ ಬಂದ ಉತ್ತರ ಕರ್ನಾಟಕದ ಕೃಷಿ ಪದವೀಧರ, ಐಎಎಸ್‌ ಆಕಾಂಕ್ಷಿ ರವಿ ನಾಯಕ್‌ ಅವರ ಮಾತು. 

ಕರ್ನಾಟಕದ ರಾಜಧಾನಿ ಬೆಂಗಳೂರು ಐಎಎಸ್‌, ಕೆಎಎಸ್‌ ಮತ್ತಿತರ ಸ್ಪರ್ಧಾ ಪರೀಕ್ಷೆಗಳ ತರಬೇತಿ ಹಬ್‌ ಆಗಿ ರೂಪುಗೊಳ್ಳುತ್ತಿದೆ. ಇತರೆ ರಾಜ್ಯಗಳ ಐಎಎಸ್‌ ಸ್ಪರ್ಧಾಕಾಂಕ್ಷಿಗಳು ತರಬೇತಿ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನತ್ತ ಧಾವಿಸುತ್ತಿದ್ದಾರೆ. ಕೆಲ ಕೋಚಿಂಗ್‌ ಕೇಂದ್ರಗಳು ಅತ್ಯುತ್ತಮ ಸೌಕರ್ಯಗಳನ್ನು ಒಳಗೊಂಡಿದ್ದು, ನುರಿತ ಬೋಧಕ ವರ್ಗವನ್ನು ನೇಮಿಸಿಕೊಂಡಿದ್ದಾರೆ. ಸ್ಪರ್ಧಾ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಆಕಾಂಕ್ಷಿಗಳನ್ನು ಸೂಚಿಗಲ್ಲಿನಂತೆ ಸೆಳೆಯುತ್ತಿವೆ. ಆದರೆ, ಅಭ್ಯರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದಂತೆ ಬಹುತೇಕ ಕೋಚಿಂಗ್‌ ಸೆಂಟರ್‌ಗಳು ವಾಹನಗಳ ನಿಲುಗಡೆಗೆ ಮೀಸಲಾದ ನೆಲಮಹಡಿಯ ಜಾಗವನ್ನು ಗ್ರಂಥಾಲಯ, ಅಭ್ಯರ್ಥಿಗಳ ಅಧ್ಯಯನದ ಕೊಠಡಿಗಳಾಗಿ ಬಳಸಿಕೊಳ್ಳುತ್ತಿವೆ. ಇಂತಹ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಅಭದ್ರತೆ ಅನುಭವಿಸುತ್ತಿದ್ದಾರೆ. ದೆಹಲಿ ಘಟನೆಯ ನಂತರ ಭಯದ ವಾತಾವರಣದಲ್ಲೇ ಕಲಿಕೆ ಮುಂದುವರಿಸಿದ್ದಾರೆ.

ಬೆಂಗಳೂರಿನಲ್ಲೇ ಕೋಚಿಂಗ್‌ ಕೇಂದ್ರಗಳ ತಾಣಗಳಾಗಿ ಬೆಳೆದಿರುವ ವಿಜಯನಗರ, ಚಂದ್ರಾಲೇಔಟ್‌ ಒಳಗೊಂಡಂತೆ ಸುತ್ತಮುತ್ತಲ ಸ್ಪರ್ಧಾ ಪರೀಕ್ಷಾ ಕೇಂದ್ರಗಳಿಗೆ ‘ಪ್ರಜಾವಾಣಿ’ ತಂಡ ಭೇಟಿ ನೀಡಿದಾಗ 10ಕ್ಕೂ ಹೆಚ್ಚು ಕಡೆ ನೆಲ ಮಹಡಿಯಲ್ಲಿ ಅಭ್ಯರ್ಥಿಗಳು ಅಧ್ಯಯನದಲ್ಲಿ ತೊಡಗಿದ್ದರು. ಈ ಎಲ್ಲ ಕೇಂದ್ರಗಳಲ್ಲೂ ಗ್ರಂಥಾಲಯಗಳು ನೆಲಮಹಡಿಯಲ್ಲೇ ಇವೆ.

ಅತಿ ಹೆಚ್ಚಿನ ಸಮಯ ಕಳೆಯುವ ಜಾಗ:

ಕೋಚಿಂಗ್‌ ಕೇಂದ್ರಗಳಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳು ಹೆಚ್ಚಿನ ಸಮಯವನ್ನು ಗ್ರಂಥಾಲಯ
ಗಳಲ್ಲೇ ಕಳೆಯುತ್ತಾರೆ. ಬೋಧನಾ ತರಗತಿಗಳು ಮುಗಿದ ನಂತರ ಅಧ್ಯಯನಕ್ಕಾಗಿ ಸುದೀರ್ಘ ಅವಧಿ ಗ್ರಂಥಾಲಯಗಳಲ್ಲೇ ಕುಳಿತುಕೊಳ್ಳುತ್ತಾರೆ.

‘ಬೆಳಿಗ್ಗೆ 10ಕ್ಕೆ ಅಥವಾ 11ಕ್ಕೆ ಬೋಧನಾ ತರಗತಿಗಳು ಆರಂಭವಾದರೆ, ಸಂಜೆಯ ಒಳಗೆ ಮುಗಿಯುತ್ತವೆ. ಸಂಜೆಯ ನಂತರ ಮಧ್ಯರಾತ್ರಿವರೆಗೂ ಬಹುತೇಕರು ಗ್ರಂಥಾಲಯದಲ್ಲೇ ಓದುತ್ತಾರೆ. ಕೆಲವರು ಬೆಳಗಿನ ಜಾವದವರೆಗೂ ಅಲ್ಲೇ ಓದಿಕೊಳ್ಳುತ್ತಾ ಕುಳಿತುಬಿಡುತ್ತಾರೆ. ನೆಲ ಮಹಡಿಯಲ್ಲಿರುವ ಕಾರಣ ಅಲ್ಲಿ ಯಾವುದೇ ಸೌಕರ್ಯವಿಲ್ಲ. ಏನಾದರು ಅನಾಹುತವಾದರೆ ರಕ್ಷಿಸಲೂ ಆಗದು’ ಎನ್ನುತ್ತಾರೆ ವಿದ್ಯಾರ್ಥಿನಿ ಅಶ್ವಿನಿ.

ಓದಿಗೆ ವಾಹನಗಳ ಸದ್ದು ಅಡ್ಡಿ:

‘ನಮ್ಮ ತರಬೇತಿ ಕೇಂದ್ರದ ನೆಲ ಮಹಡಿಯ ವಾಹನ ನಿಲುಗಡೆ ಜಾಗದಲ್ಲಿ ಅರ್ಧ ಗ್ರಂಥಾಲಯಕ್ಕೆ, ಅರ್ಧ ವಾಹನಗಳ ನಿಲುಗಡೆಗೆ ಮೀಸಲಾಗಿದೆ. ಹಗಲು ವೇಳೆ ಅಲ್ಲಿ ಕುಳಿತರೆ ವಾಹನ ನಿಲುಗಡೆಗೆ ಬರುವ ವಾಹನಗಳ ಸದ್ದು ತೊಂದರೆ ಮಾಡುತ್ತದೆ. ಹಾಗಾಗಿ, ತರಗತಿಗಳು ಇಲ್ಲದಿದ್ದಾಗ ಬೋಧನಾ ಕೊಠಡಿಯಲ್ಲೇ ಕಾಲಕಳೆಯುತ್ತೇವೆ. ರಾತ್ರಿ ಸಮಯ ನೆಲ ಮಹಡಿಯ ಗ್ರಂಥಾಲಯಕ್ಕೆ ತೆರಳುತ್ತೇವೆ’ ಎನ್ನುತ್ತಾರೆ ಕೆಎಎಸ್‌ ಆಕಾಂಕ್ಷಿ ಶೋಭಾ. 

ಅಗ್ನಿ ಅವಘಡಗಳಿಗೆ ಸುರಕ್ಷತೆಯ ಕೊರತೆ:

ಕೆಲವು ಪ್ರಖ್ಯಾತ ಕೋಚಿಂಗ್‌ ಕೇಂದ್ರಗಳು ಕಟ್ಟಡದ ಮೇಲಂತಸ್ತಿನ ಮಹಡಿಗಳಲ್ಲಿ ಇವೆ. ಆದರೆ, ಅಗ್ನಿ ಅವಘಡಗಳು ಸಂಭವಿಸಿದರೆ ಅಗತ್ಯವಾದ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡಿಲ್ಲ. ಅಗ್ನಿ ಶಾಮಕ ಪರಿಕರಗಳು ಬಹುತೇಕ ಕಟ್ಟಡಗಳಲ್ಲಿ ಇಲ್ಲ. ಎರಡು ತಿಂಗಳ ಹಿಂದಷ್ಟೇ ಚಂದ್ರಾಲೇಔಟ್‌ನ ಕೋಚಿಂಗ್‌ ಕೇಂದ್ರವೊಂದರಲ್ಲಿ ವಿದ್ಯುತ್‌ ಶಾರ್ಟ್‌ಸರ್ಕಿಟ್‌ನಿಂದ ಬೆಂಕಿ ಹತ್ತಿಕೊಂಡಿತ್ತು. ತಕ್ಷಣ ಅಲ್ಲಿನ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರತರಲಾಯಿತಾದರೂ, ಗ್ರಂಥಾಲಯ ಸಂಪೂರ್ಣ ಸುಟ್ಟು ಹೋಗಿದೆ.

‘ಕೋಚಿಂಗ್‌ ಕೇಂದ್ರಗಳನ್ನು ಆರಂಭಿಸುವಾಗ ಪರವಾನಗಿ ಪಡೆಯಲು ಅಗ್ನಿ ಶಾಮಕ ಪರಿಕರಗಳನ್ನು ಅಳವಡಿಸುತ್ತಾರೆ. ನಂತರ ಅತ್ತ ಗಮನ ಹರಿಸುವುದೇ ಇಲ್ಲ. ಅಧಿಕಾರಿಗಳು ಇಂತಹ ವಿಷಯಗಳಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಎರಡು ತಿಂಗಳ ಹಿಂದೆ ಕೋಚಿಂಗ್‌ ಕೇಂದ್ರದಲ್ಲಿ ಬೆಂಕಿ ಹೊತ್ತಿಕೊಂಡ ನಂತರ ಕೆಲ ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿತ್ತು. ಆದರೆ, ಯಾರೂ ಸುರಕ್ಷತಾ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ನಿಂಗರಾಜ್‌ ಮೂರ್ತಿ.

ಅಭ್ಯರ್ಥಿಗಳ ಕನಸು ಕಮರಿಸುವ ಪಿ.ಜಿ.ಗಳು: 

ಕೋಚಿಂಗ್‌ ಕೇಂದ್ರಗಳಿಗೆ ದಾಖಲಾಗುವ ಅಭ್ಯರ್ಥಿಗಳು ಮೊದಲು ಹುಡುಕುವುದು ಸಮೀಪದ ಪೇಯಿಂಗ್‌ ಗೆಸ್ಟ್‌ಹೌಸ್‌ಗಳನ್ನು (ಪಿ.ಜಿ). ಇಂತಹ ಅಭ್ಯರ್ಥಿಗಳನ್ನೇ ಕೇಂದ್ರವಾಗಿಸಿಕೊಂಡು ಬೆಂಗಳೂರಿನಲ್ಲಿ ಸಾಕಷ್ಟು ಪಿ.ಜಿ.ಗಳು ತಲೆ ಎತ್ತಿವೆ. ಐಎಎಸ್‌, ಕೆಎಎಸ್‌ನಂತಹ ಸ್ಪರ್ಧಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಬರುವ ಅಭ್ಯರ್ಥಿಗಳು ತಡರಾತ್ರಿವರೆಗೂ ಕೋಚಿಂಗ್‌ ಕೇಂದ್ರಗಳಲ್ಲಿ ಅಧ್ಯಯನ ನಡೆಸುವ ಕಾರಣ ಕೇಂದ್ರಕ್ಕೆ ಸಮೀಪದ ಪಿ.ಜಿ. ಅಥವಾ ಮನೆಗಳನ್ನೇ ಹುಡುಕುತ್ತಾರೆ. ಅಭ್ಯರ್ಥಿಗಳ ಇಂತಹ ಅನಿವಾರ್ಯತೆ ಮನವರಿಕೆಯಾಗಿರುವ ಮನೆಗಳು ಹಾಗೂ ಪಿ.ಜಿ.ಗಳ ಮಾಲೀಕರು ಅಧಿಕ ಹಣ ಪಡೆಯುವ ಮೂಲಕ ಒಂದು ರೀತಿ ಸುಲಿಗೆ ಮಾಡುತ್ತಿದ್ದಾರೆ. 

‘ನಾನು ವಿಜಯನಗರದ ಕೋಚಿಂಗ್‌ ಕೇಂದ್ರದಲ್ಲಿ ಐದು ತಿಂಗಳ ಕೋರ್ಸ್‌ಗೆ ಪ್ರವೇಶ ಪಡೆದಿರುವೆ. ಪಿ.ಜಿ.ಗೆ ಸೇರಲು 10 ತಿಂಗಳ ಹಣವನ್ನು ಮುಂಗಡವಾಗಿ ಕೇಳುತ್ತಾರೆ. ಬರೀ ಆರು ತಿಂಗಳ ಬಾಡಿಗೆಗೆ ಕೊಡುವುದೇ ಇಲ್ಲ. ನಾನು ಪ್ರತಿ ತಿಂಗಳು ₹6 ಸಾವಿರದಂತೆ ₹60 ಸಾವಿರ ಕೊಟ್ಟ ನಂತರವೇ ಪ್ರವೇಶ ನೀಡಿದರು. ಕೋಚಿಂಗ್‌ ಕೇಂದ್ರದ ಶುಲ್ಕದ ಜೊತೆಗೆ ಮನೆಯಲ್ಲಿ ಅಷ್ಟು ಹಣ ಹೊಂದಿಸಿಕೊಡಲು ಪಟ್ಟ ಕಷ್ಟ ಹೇಳತೀರದು’ ಎನ್ನುತ್ತಾರೆ ಪಿಎಸ್‌ಐ ಹುದ್ದೆ ಆಕಾಂಕ್ಷಿ ಲಕ್ಷ್ಮಿ.

ಅಷ್ಟು ಹಣ ತೆತ್ತರೂ ಒಂದು ಕೊಠಡಿಗೆ ನಾಲ್ಕು ಐದು ಮಂದಿಯನ್ನು ಹಾಕುತ್ತಾರೆ. ಇಬ್ಬರು, ಒಬ್ಬರು ಇರಬೇಕೆಂದರೆ ಮುಗಿಯದ ಕಥೆ ಎನ್ನುವುದು ಅಭ್ಯರ್ಥಿಗಳ ಅಳಲು. ಕೆಲ ಪ್ರಕರಣಗಳಲ್ಲಿ ಇಬ್ಬರು, ಮೂವರು ಸೇರಿ ಮನೆ ಮಾಡಿಕೊಂಡಿದ್ದಾರೆ. ಇಲ್ಲೂ ಅಷ್ಟೇ, ಎಷ್ಟು ತಿಂಗಳ ಕೋರ್ಸ್‌ಗೆ ಪ್ರವೇಶ ಪಡೆದರೂ,  ಮನೆ ಬಾಡಿಗೆ ಮಾತ್ರ 11 ತಿಂಗಳಿಗೆ ನೀಡುವುದು ಕಡ್ಡಾಯ.

‘₹20 ಸಾವಿರ ಮನೆ ಬಾಡಿಗೆ ಲೆಕ್ಕದಲ್ಲಿ ಮೂವರು ಸೇರಿ ಮನೆ ಬಾಡಿಗೆ ಪಡೆದಿದ್ದೆವು. ಎಂಟು ತಿಂಗಳಿಗೆ ಕೋರ್ಸ್‌ ಮುಗಿಯಿತು. ಮನೆ ಖಾಲಿ ಮಾಡುವಾಗ 11 ತಿಂಗಳ ಬಾಡಿಗೆ ಜೊತೆಗೆ ಬಣ್ಣ ಮತ್ತಿತರೆ ದುರಸ್ತಿ ಎಂದು ಇನ್ನೊಂದು ತಿಂಗಳ ಲೆಕ್ಕದಲ್ಲಿ ಹಣ ಮುರಿದುಕೊಂಡರು. ಬೆಂಗಳೂರಿಗೆ ಬರುವವರು ಇಂತಹ ಸುಲಿಗೆಯ ಖರ್ಚುಗಳನ್ನೂ ಹೊಂದಿಸಿಕೊಂಡು ಬರಬೇಕು’ ಎನ್ನುತ್ತಾರೆ  ಈಗಾಗಲೇ ಐಎಎಸ್‌ ಮುಖ್ಯ ಪರೀಕ್ಷೆಗೆ ತರಬೇತಿ ಪಡೆದಿರುವ ಸುಶ್ಮಿತಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT