ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ ಪ್ರತಿಕ್ರಿಯೆಗಳು

Published 28 ಮೇ 2023, 15:43 IST
Last Updated 28 ಮೇ 2023, 15:43 IST
ಅಕ್ಷರ ಗಾತ್ರ

ಮುಟ್ಟಿನ ರಜೆ ಬೇಕೆ? ಬೇಡವೇ?’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಮೇ 28) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

‘ಸ್ಯಾನಿಟರಿ ಪ್ಯಾಡ್‌, ವೆಂಡಿಂಗ್‌ ಮಷೀನ್‌ ಅಳವಡಿಸಿ’

ಮುಟ್ಟಿನ ರಜೆಗಿಂತ ಅವಶ್ಯವಾದದ್ದು ಸ್ವಚ್ಛ ಶೌಚಾಲಯ ಹಾಗೂ ಸ್ಯಾನಿಟರಿ ವೆಂಡಿಗ್ ಯಂತ್ರಗಳು ಸದ್ಯದ ಅಗತ್ಯವಾಗಿದೆ. ಉದ್ಯೋಗಸ್ಥ ಮಹಿಳೆಯಾಗಿರುವ ನನಗೆ ಈ ಸಮಯದಲ್ಲಿ ನೋವು ಅನುಭವಿಸುವುದು ಸಹಜ. ರಜೆಗಿಂತ, ಅನಿವಾರ್ಯವಾಗಿ ಕೆಲ ಘಂಟೆಗಳ ವಿನಾಯಿತಿ ಸಿಕ್ಕರೆ ಅಷ್ಟೇ ಸಾಕು. ಮೊನ್ನೆ ತಾನೇ ಕ್ಷೇತ್ರ ಪ್ರವಾಸ ತೆರಳಿದ್ದಾಗ ಎಲ್ಲಾ ಕಡೆ ಸ್ವಚ್ಛ ಶೌಚಾಲಯ ಕಂಡು, ಬಳಸಿ ಸಂತಸಪಟ್ಟೆ ಹಾಗೆ ಎಲ್ಲಿಯೂ ಸ್ಯಾನಿಟರಿ ಪ್ಯಾಡ್‌ಗಳ, ವೆಂಡಿಂಗ್ ಮಷೀನ್ ಇಲ್ಲದ್ದು ಕಂಡು ಬೇಸರವಾಯಿತು. ಮೊದಲು ಎಲ್ಲಾ ಶಾಲೆಗಳಲ್ಲಿ ಅತ್ಯಗತ್ಯವಾಗಿ ಈ ವ್ಯವಸ್ಥೆ ಮಾಡಲೇಬೇಕು ಎಂಬುದು ಶಿಕ್ಷಕಿಯಾಗಿ ನನ್ನ ಕಳಕಳಿಯ ವಿನಂತಿ.

–ಆಶಾ ಸಂಗಯ್ಯ, ಶಿಕ್ಷಕಿ, ಚಿತ್ರದುರ್ಗ

‘ಮುಟ್ಟಿನ ರಜೆ ಕಡ್ಡಾಯವಾಗಿ ನೀಡಿ’

ಹೆಣ್ಣಿನ ಕಷ್ಟ ಬಲ್ಲ ಯಾರೇ ಆದರೂ ಈ ಮುಟ್ಟಿನ ರಜೆ ಬೇಡವೆಂದು ನಿರಾಕರಿಸಲಾರರು. ಆದರೆ ನಮ್ಮಲ್ಲಿ ಯಾವುದೇ ಸೌಲಭ್ಯವು ಅಗತ್ಯ ಇರುವವರಿಗೆ ಉಪಯೋಗಕ್ಕಿಂತ ಅಗತ್ಯ ಇಲ್ಲದವರೂ ದುರುಪಯೋಗ ಮಾಡಿಕೊಳ್ಳುವುದು ಹೆಚ್ಚು. ಇದಕ್ಕೆ ಇತ್ತೀಚಿನ ನಿದರ್ಶನ ಶಿಸುಪಾಲನ ರಜೆ ಮಿತಿಯನ್ನು ಮಗುವಿನ 18 ವರ್ಷ ವಯಸ್ಸಿನವರೆಗೆ ನಿಗದಿಪಡಿಸಿದ್ದು, ಅಗತ್ಯತೆ ಇಲ್ಲದವರೂ ದುರುಪಯೋಗಪಡಿಸಿಕೊಂಡಿದ್ದನ್ನು ಕಂಡಿದ್ದೇವೆ. ಆದ್ದರಿಂದ ಹೆಣ್ಣು ಮಕ್ಕಳ ಶಾಲಾ–ಕಾಲೇಜುಗಳಲ್ಲಿ ಹಾಗೂ ಕೆಲಸದ ಸ್ಥಳಗಳಲ್ಲಿ ಕಡ್ಡಾಯವಾಗಿ ಪೂರಕ ಸವಲತ್ತುಗಳೊಂದಿಗೆ ವಿಶ್ರಾಂತಿ ಕೊಠಡಿ ಇರುವುದು ಇಂದಿನ ಅಗತ್ಯವಾಗಿದೆ.

–ಕೆ.ಎಂ. ನಾಗರಾಜು, ಮೈಸೂರು

ತಿಂಗಳಿನಲ್ಲಿ ಸಾಮಾನ್ಯವಾಗಿ ಐದಾರು ದಿನಗಳವರೆಗೆ ಋತು ಚಕ್ರವಿರುತ್ತದೆ. ಅದರಲ್ಲೂ ಪ್ರಾರಂಭದ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಮುಟ್ಟಿನ ನೋವನ್ನು ಅನುಭವಿಸುತ್ತಾರೆ ಮತ್ತು ಅವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮುಜುಗರ ಉಂಟು ಮಾಡುತ್ತಿದೆ ಅದಕ್ಕಾಗಿ ಸರ್ಕಾರ ಹಾಗೂ ಖಾಸಗಿ ಶಾಲೆ, ಕಾಲೇಜು, ಕಂಪನಿ ಕಚೇರಿಗಳು ಮಹಿಳೆಯರು ಕೆಲಸ ಮಾಡುವ ಎಲ್ಲ ಕ್ಷೇತ್ರದಲ್ಲಿ ರಜೆಯನ್ನು ನೀಡಬೇಕು ಇಲ್ಲವಾದರೆ ಪ್ರತಿಯೊಂದು ಸ್ಥಳಗಳಲ್ಲಿ ಮುಟ್ಟಿನ ಹಾರೈಕೆ ಕೇಂದ್ರವನ್ನು ನಿರ್ಮಾಣ ಮಾಡಬೇಕು. ಮುಟ್ಟಾದಾಗ ಕೆಲ ಸಮಯ ಈ ಕೇಂದ್ರದಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಅನುಕೂಲಕರವಾಗಿರುತ್ತದೆ.

–ಸಂತೋಷ ಕುಮಾರ್ ಎಚ್.ಕೆ ಸಿರುಗುಪ್ಪ,ಬಳ್ಳಾರಿ

‘ಅನುಕೂಲತೆಗೆ ಬಿಟ್ಟ ವಿಷಯ’

ಮುಟ್ಟಿನ ರಜೆ ಅವಶ್ಯಕತೆ ಇದೆಯೋ ಅಥವಾ ಇಲ್ಲವೋ ಎಂಬುದು ಅವರವರ ಅನುಕೂಲತೆಗೆ ಬಿಟ್ಟ ವಿಷಯ. ಆದರೆ, ಮುಟ್ಟಿನ ಸಂದರ್ಭದಲ್ಲಿ ಹೆಣ್ಣು ಅನುಭವಿಸುವ ನೋವನ್ನು ಮಾತ್ರ ಯಾರೊಬ್ಬ ಗಂಡಸರು ಕೀಳಾಗಿ ತಿಳಿದು, ‘ಪ್ರಪಂಚದಲ್ಲಿ ಯಾರೂ ನಿನ್ನ ಹಾಗೆ ಮುಟ್ಟಾಗುವುದಿಲ್ಲವೋ!, ಎಲ್ಲರೂ ನಿನ್ನ ಹಾಗೆ ನಾಟಕ ಕುಳಿತರೆ ಅಷ್ಟೇ!’ ಎನ್ನುವ ಚುಚ್ಚು ಮಾತುಗಳನ್ನಾಡುವ ಮನಸ್ಥಿತಿಯ ಗಂಡಸರ ಮಧ್ಯೆ ಇರುವುದೇ ನಾಚಿಕೆಯ ಸಂಗತಿ. ಈ ಧೋರಣೆಯನ್ನು ಮೊದಲು ಹೋಗಲಾಡಿಸಿದರೆ ಸಾಕು. ಅವಳಿಗೆ ಎಷ್ಟೇ ಕಷ್ಟವಾದರೂ ಸಹ, ಅವಳ ಕೆಲಸಗಳನ್ನು ಅಚ್ಚುಗಟ್ಟಾಗಿ ನಿರ್ವಹಿಸುತ್ತಾಳೆ.

–ಕಲಾವತಿ ಎಸ್, ತುಮಕೂರು

ಮುಟ್ಟೆಂದು ಹೇಳಿ ರಜೆ ಪಡೆಯುವುದೇ ಬೇಡ!

ಮುಟ್ಟು 12 ವರ್ಷದ ಮಕ್ಕಳಿಂದ 50 ವರ್ಷದ ಮಹಿಳೆಯರಲ್ಲಿ ಆಗುವ ಸಹಜ ಪ್ರಕ್ರಿಯೆ. ಆದಾಗ ಕೆಲವು ಹೆಣ್ಣು–ಮಕ್ಕಳು ಮಹಿಳೆಯುರಿಗೆ ಮಾತ್ರ ಹೊಟ್ಟೆನೋವು ಸುಸ್ತು ತೊಂದರೆ ಆಗುತ್ತದೆ. ಮುಟ್ಟಾಗಿದ್ದೇನೆ ರಜೆ ಬೇಕು ಎನ್ನುವುದು ಬೇಡ. ಈಗ ಹೇಗೆ ನಡೆಯುತ್ತಿದೆ ಹಾಗೆ ನಡೆಯಲಿ. ತುಂಬಾ ತೊಂದರೆ ಆದರೆ ಮಾತ್ರ ರಜೆ ತೆಗೆದುಕೊಳ್ಳಬಹುದು. ನಾನು ಸಹ ಉದ್ಯೋಗಿಯೇ ಆಗಿದ್ದೇನೆ. ಸ್ತ್ರೀ ಎಲ್ಲವನ್ನು ನಗುತ್ತಲೆ ಸಹಿಸುವಾಗ ಈ ಮುಟ್ಟನ್ನೂ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಬಡ ಮಹಿಳೆಯರು ಮಾಡುವ ಕೆಲಸದ ಹಾಗೆ ಮಹಿಳಾ ಅಧಿಕಾರಿಗಳು ಎಲ್ಲ ಮುಟ್ಟಿನ ರಜೆ ಹಾಕಿದರೆ ಕೆಲಸ ಹೇಗೆ ಸುಸೂತ್ರವಾಗಿ ನಡೆಯುತ್ತೆ? ಹೆಂಗಸರಿಗೆ ಮುಟ್ಟುಕೂಡ ಆರೋಗ್ಯದ ಗುಟ್ಟು.

–ಪ್ರೊ. ಡಿ. ಎಸ್. ಪೂರ್ಣಿಮ, ವಿವೇಕಾನಂದ ಪದವಿ ಕಾಲೇಜು, ಬೆಂಗಳೂರು

‘ಮೂಲ ಸೌಕರ್ಯ ಕಲ್ಪಿಸಿ’

ನಿಜ, ಹೆಣ್ಣುಮಕ್ಕಳಲ್ಲಿ ಕಂಡುಬರುವ ಸ್ವಾಭಾವಿಕ ಶಾರೀರಿಕ ಕ್ರಿಯೆ ಮಾಸಿಕ ಋತುಸ್ರಾವ. ಆದರೆ, ಇದರ ಅನುಭವ ಪ್ರತಿಯೊಬ್ಬ ಹೆಣ್ಣುಮಕ್ಕಳಲ್ಲಿಯೂ ಭಿನ್ನ. ಕೆಲವರಲ್ಲಿ ಯಾವುದೇ ತೊಡಕು ತೊಂದರೆಗಳಿಲ್ಲದೆ ಸಂಭವಿಸುವ ಈ ಮಾಸಿಕ ಕ್ರಿಯೆ. ಇನ್ನೂ ಕೆಲವರನ್ನು ದೈಹಿಕವಾಗಿ ಮಾನಸಿಕವಾಗಿ ಕುಗ್ಗಿಸುತ್ತದೆ. ಇನ್ನೂ ಕೆಲವರಿಗೆ ಆ ದಿನಗಳು ಯಾತನಮಯವಾಗಿರುತ್ತವೆ. ಆ ಸಮಯದಲ್ಲಿ ಅವರು ಓದು, ಉದ್ಯೋಗ, ಆಟೋಟದಂತಹ ಚಟುವಟಿಕೆಗಳಲ್ಲಿ ಎಂದಿನಂತೆ ಆಸಕ್ತಿಯಿಂದ ಭಾಗವಹಿಸಲು ಕಷ್ಟ. ಆದರೆ, ವಿಶೇಷ ರಜೆ ಕಡ್ಡಾಯ ಮಾಡುವುದಕ್ಕಿಂತ ಶಾಲಾ ಕಾಲೇಜುಗಳಲ್ಲಿ, ಉದ್ಯೋಗ ಮಾಡುವ ಸ್ಥಳಗಳಲ್ಲಿ ಮಹಿಳೆಯರಿಗೆ ಶೌಚಾಲಯ, ಸ್ಯಾನಿಟರಿ ಪ್ಯಾಡ್, ಕುಡಿಯುವ ನೀರು, ವಿಶ್ರಾಂತಿ ವ್ಯವಸ್ಥೆ ಕಲ್ಪಿಸುವುದು ಅಗತ್ಯ.

-ಬಿ.ಎಸ್. ಚೈತ್ರ ಚಿತ್ರದುರ್ಗ

‘ಮುಟ್ಟಿನ ರಜೆ ಜಾರಿಗೊಳಿಸಿ’

ಹೆಣ್ಣು ಮಕ್ಕಳಲ್ಲಿ ಪ್ರಕೃತಿ ದತ್ತವಾಗಿ ಬಂದಿರುವ ಮುಟ್ಟು ಅದನ್ನ ಅನುಭವಿಸುವ ಹೆಣ್ಣುಮಕ್ಕಳಿಗಷ್ಟೆ ಗೊತ್ತು. ಹಾಗಾಗಿ ಮಹಿಳಾ ನೌಕರರು ಮುಟ್ಟಿನ ಸಂದರ್ಭದಲ್ಲಿ ಸಮಸ್ಯೆಗಳನ್ನ ಎದುರಿಸುತ್ತಾರೆ. ಈ ಸಂದರ್ಭದಲ್ಲಿ ಮಹಿಳಾ ನೌಕರರು ಯಾರ ಹತ್ತಿರ ಹೇಳಿಕೊಳ್ಳಲು ಸಹ ಹಿಂಜರಿಯುತ್ತಿರುತ್ತಾರೆ. ಹಾಗಾಗಿ, ಬೇರೆ ಕೆಲವೂಂದು ದೇಶಗಳಲ್ಲಿ ಮುಟ್ಟಿನ ಸಂದರ್ಭದಲ್ಲಿ ರಜೆಯನ್ನ ನೀಡುವ ಕಾನೂನು ಜಾರಿಗೂಳಿಸಿರುವಂತೆ ನಮ್ಮ ದೇಶದಲ್ಲೂ ಅಂತಹ ಕಾನೂನಿನ ಅವಶ್ಯಕತೆ ಇದೆ. ಮಹಿಳಾ ನೌಕರರು ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ಸರ್ಕಾರ ಮೂಲ ಸೌಕರ್ಯಗಳನ್ನು ಒದಗಿಸಬೇಕು.

–ರೇಖಾ ಪ್ರಕಾಶ, ಚಿತ್ರದುರ್ಗ

‘ಕಡ್ಡಾಯ ರಜೆ ಪರಿಹಾರವಲ್ಲ’

ಮಹಿಳೆಯರು ಮುಟ್ಟಾಗುವ ಮುನ್ನಾದಿನ ಅಥವಾ ಋತುಚಕ್ರದ ಸಮಯದಲ್ಲಿ ಮಾನಸಿಕ ಕಿರಿಕಿರಿ, ನೋವುಗಳು ಸಹಜ, ಅದಕ್ಕೆ ಕಡ್ಡಾಯ ರಜೆ ಪರಿಹಾರವಲ್ಲ. ಅವರು ಕೆಲಸ ಮಾಡುವ ಸ್ಥಳದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಅವರವರ ನೋವಿಗೆ ತಕ್ಕಂತೆ ಬೇಕಾದ ಪರಿಹಾರವನ್ನು ಮಾಹಿತಿ ತಂತ್ರಜ್ಞಾನದ ಮೂಲಕ ಒದಗಿಸುವ ಕೆಲಸವಾಗಬೇಕು. ಇನ್ನೂ ಮಕ್ಕಳಿಗೆ ಆ ಸಮಯದಲ್ಲಿ ಶಾಲೆ ತಪ್ಪಿಸುವುದೊಂದೆ ಪರಿಹಾರವಾಗದೆ ಮಾನಸಿಕ ಧೈರ್ಯ ತುಂಬಿ ಆ ಸಮಯದಲ್ಲಿ ಫ್ರೀ ಕೌನ್ಸೆಲಿಂಗ್ ವ್ಯವಸ್ಥೆ ನೀಡಿ ಧೈರ್ಯ ತುಂಬುವ ಕೆಲಸವಾಗಬೇಕು. ಹೆಣ್ಮಕ್ಕಳೇ ಸ್ಟ್ರಾಂಗ್ ಅನ್ನೊದನ್ನು ಮರೆಯಬಾರದು.

–ಸುಮಾ ಮಹೇಶ್, ಭಾಗ್ಯನಗರ, ಕೊಪ್ಪಳ

‘ಮುಟ್ಟಿನ ರಜೆ ಕಡ್ಡಾಯಗೊಳಿಸಿ’

ಮುಟ್ಟು ಜೈವಿಕ ಕ್ರಿಯೆಯಾದ್ದರಿಂದ ಎಲ್ಲಾ ಹೆಣ್ಣು ಮಕ್ಕಳಲ್ಲಿ ಸ್ವಾಭಾವಿಕವಾಗಿಯೇ ವಿಭಿನ್ನ ಸ್ವರೂಪಗಳಲ್ಲಿರುತ್ತದೆ. ಹೀಗಾಗಿ ಮುಟ್ಟಿನ ರಜೆಯನ್ನು ತುರ್ತು ರಜೆಯ ಅಡಿಯಲ್ಲಿ ಐಚ್ಛಿಕವಾಗಿ ಅವಶ್ಯಕತೆಗೆ ಅನುಗುಣವಾಗಿ ತೆಗೆದುಕೊಳ್ಳುವ ಸೌಲಭ್ಯವನ್ನು ಕಡ್ಡಾಯವಾಗಿ ನೀಡಲೇಬೇಕು. ಸ್ವಚ್ಛ ಹಾಗೂ ಸುರಕ್ಷಿತ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿಗಳು ಎಲ್ಲೆಡೆ ಲಭ್ಯವಿದ್ದು ನೀರು, ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಯಂತ್ರ, ಬಳಸಿದ ಪ್ಯಾಡ್‌ಗಳ ಸರಿಯಾದ ತ್ಯಾಜ್ಯ ವಿಲೇವಾರಿ ಮಾಡಬೇಕು. ಅವಶ್ಯಕ ವಸ್ತುಗಳು ಸುಲಭವಾಗಿ ಸಿಗುವಂತಿರಬೇಕು. ಕಚೇರಿಯ ಸಿಬ್ಬಂದಿಗೆ ಮುಟ್ಟಿನ ಬಗ್ಗೆ ಹಾಗೂ ಆ ಸಂದರ್ಭವನ್ನು ನಿರ್ವಹಿಸುವ ಬಗ್ಗೆ ಜಾಗೃತಿ ಮೂಡಿಸಬೇಕು.

–ಸುಮಾ ರಮೇಶ್, ರಾಜರಾಜೇಶ್ವರಿ ನಗರ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT