ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ಒಳನೋಟ | ಸೈಬರ್ ಅಪರಾಧ: ಇಲ್ಲ ಕಡಿವಾಣ
ಒಳನೋಟ | ಸೈಬರ್ ಅಪರಾಧ: ಇಲ್ಲ ಕಡಿವಾಣ
Published 28 ಅಕ್ಟೋಬರ್ 2023, 23:33 IST
Last Updated 28 ಅಕ್ಟೋಬರ್ 2023, 23:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಭಾರತೀಯರ ಜೀವನ ಮಟ್ಟ ಮತ್ತು ಆರ್ಥಿಕ ಸುಧಾರಣೆಗೆ ಇನ್ಫೊಸಿಸ್‌ ಸಂಸ್ಥಾಪಕ ಎನ್.ಆರ್‌.ನಾರಾಯಣಮೂರ್ತಿ ಅವರು ‘ಬಿಟಿಸಿ ಐಪ್ಲೆಕ್ಸ್ ಎಐ’ ಎಂಬ ಬಿಟ್‌ಕಾಯಿನ್ ಕಂಪನಿ ಆರಂಭಿಸಿದ್ದಾರೆ ಎಂಬ ವಿಡಿಯೊ ಈಚೆಗೆ ಸಂಚಲನ ಮೂಡಿಸಿತು. ‘ಈ ಕಂಪನಿಯಲ್ಲಿ ಯಾರೇ ಸಾವಿರಾರು ರೂಪಾಯಿ ಹೂಡಿದರೂ, ಒಂದೇ ವಾರದಲ್ಲಿ ಲಕ್ಷ ಅಥವಾ ಕೋಟಿ ಗಳಿಸಬಹುದು’ ಎಂದು ನಾರಾಯಣಮೂರ್ತಿ ಅವರೇ ಹೇಳಿದಂತೆ ಬಿಂಬಿಸಲಾಯಿತು.

ಇಷ್ಟಕ್ಕೆ ಸೀಮಿತವಾಗದೆ, ದೇಶದ ಪ್ರಮುಖ ಪತ್ರಿಕೆಯು ತಾನೇ ‘ಬಿಟಿಸಿ ಐಪ್ಲೆಕ್ಸ್ ಎಐ‘ನಲ್ಲಿ ಹೂಡಿಕೆ ಮಾಡಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಈ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದರೆ ಲಾಭಗಳಿಸಬಹುದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ ಎಂದು ದೃಢೀಕರಿಸುವ ವ್ಯವಸ್ಥಿತ ಪ್ರಯತ್ನವೂ ನಡೆಯಿತು. ಆದರೆ, ಸತ್ಯಾಸತ್ಯತೆ ಪರಿಶೀಲಿಸಿದಾಗ ಇದೆಲ್ಲವೂ ಸುಳ್ಳು ಮತ್ತು ವಂಚಕರ ಕೃತ್ಯ ಎಂಬ ಅಂಶ ಬಯಲಿಗೆ ಬಂತು. ಸುಳ್ಳು ಮಾಹಿತಿ ಹರಡಲಾಗಿದೆ ಎಂಬುದು ಗೊತ್ತಾಯಿತು. ‘ಇದೆಲ್ಲವೂ ಸುಳ್ಳು. ನಮ್ಮಲ್ಲಿ ಅಂಥ ಸುದ್ದಿ ಅಥವಾ ವಿಶೇಷ ವರದಿ’ ಪ್ರಕಟವಾಗಿಲ್ಲ ಎಂದು ಆ ಪತ್ರಿಕೆ ಸಾರಿ ಸಾರಿ ಹೇಳಬೇಕಾಯಿತು.

ದೇಶದ ನಿವಾಸಿಗಳ ಏಳ್ಗೆಗಾಗಿ ಉದ್ಯಮಿ ನಂದನ್ ನಿಲೇಖಣಿ ಅವರು ಕ್ರಿಪ್ಟೊ ಯೋಜನೆ ಕೈಗೊಂಡಿದ್ದಾರೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಾಗ, ಅವರೇ ಖುದ್ದು ಟ್ವಿಟರ್‌ನಲ್ಲಿ (ಈಗಿನ ಎಕ್ಸ್) ‘ಇದು ಸುಳ್ಳು ಸುದ್ದಿ. ಯಾರೂ ನಂಬಬೇಡಿ’ ಎಂದು ಸ್ಪಷ್ಟನೆ ನೀಡಬೇಕಾಯಿತು. ಉದ್ಯಮಿಗಳಾದ ಮುಖೇಶ್ ಅಂಬಾನಿ, ಗೌತಮ ಅದಾನಿ ಅವರೂ ಸಹ ಕ್ರಿಪ್ಟೊ ಕರೆನ್ಸಿ ಬಳಕೆ ಕುರಿತು ಆಸಕ್ತಿ ಹೊಂದಿದ್ದಾರೆ ಎಂಬ ಸುದ್ದಿ ಹರಿದಾಡಿತು. ಅಸಲಿಗೆ, ಅದು ಕೂಡ ಸುಳ್ಳು ಸುದ್ದಿ. ಇವೆಲ್ಲದ್ದಕ್ಕೂ ಕಾರಣವಾಗಿದ್ದು ನಕಲಿ ವೆಬ್‌ಸೈಟ್‌ಗಳು.

ಅಂತರ್ಜಾಲವನ್ನು ದುರ್ಬಳಕೆ ಮಾಡಿಕೊಂಡು, ಬೇರೆ ಬೇರೆ ಮಾರ್ಗಗಳ ಮೂಲಕ ಜನಸಾಮಾನ್ಯರನ್ನು ವಂಚಿಸುವುದನ್ನು ಕರಗತ ಮಾಡಿಕೊಂಡಿರುವ ಕಿಡಿಗೇಡಿಗಳ ಕೃತ್ಯದಿಂದ ಹಲವರು ಹಣ ಕಳೆದುಕೊಂಡಿದ್ದಾರೆ. ನಂಬಿಕೆದ್ರೋಹದಿಂದ ಆದ ಮೋಸ ಸಹಿಸಲಾಗದೇ ಮತ್ತು ಕಳೆದುಕೊಂಡ ಹಣವನ್ನೂ ಪಡೆಯಲಾಗದೇ ಕೆಲವರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಮಾನ–ಮರ್ಯಾದೆ ಹೋಗುವುದೆಂದು ಇತ್ತ ಸೈಬರ್‌ ಪೊಲೀಸರಿಗೆ ಹೇಳಲಾಗದೇ, ಇತ್ತ ಆಪ್ತರೊಂದಿಗೂ ಮುಕ್ತವಾಗಿ ಮಾತನಾಡಲಾಗದೇ ಹಲವರು ನೋವು, ಅವಮಾನ ಸಹಿಸಿಕೊಂಡು ಬದುಕುತ್ತಿದ್ದಾರೆ.

ಸೈಬರ್ ಜಾಲ ವಿಸ್ತಾರವಾದಷ್ಟು, ಅಪರಾಧ ಪ್ರಕರಣಗಳು ಲೆಕ್ಕಕ್ಕೆ ಸಿಗದಷ್ಟು ದಾಖಲಾಗುತ್ತಿವೆ. ಅಸಲಿ ಎನ್ನುವ ಮಟ್ಟಿಗೆ ನಕಲಿ ಮತ್ತು ತಿರುಚಿದ ವಿಡಿಯೊ, ವೆಬ್‌ಸೈಟ್‌ಗಳು ಸೃಷ್ಟಿಯಾಗುತ್ತಿವೆ. ಖ್ಯಾತನಾಮರ ಹೇಳಿಕೆಗಳು ಸಂಶಯಕ್ಕೆ ಎಡೆ ಮಾಡಿಕೊಡುತ್ತಿವೆ. ಪ್ರಸಿದ್ಧ ವ್ಯಕ್ತಿಗಳ ವಿಡಿಯೊ ಎಡಿಟ್ ಮಾಡಿ, ಅದಕ್ಕೆ ಅವರದ್ದೇ ಮಾದರಿಯ ಧ್ವನಿಯನ್ನು ಸೇರಿಸಿ ‘ಇಲ್ಲಸಲ್ಲದ್ದನ್ನು ಹೇಳಿಸಿ’ ಪ್ರತಿಯೊಬ್ಬರೂ ನಂಬುವಂತೆ ಮಾಡಲಾಗುತ್ತಿದೆ.

ಬಿಟ್‌ ಕಾಯಿನ್‌ ಕಂಪನಿಯಲ್ಲಿ ಹಣ ಹೂಡಿಕೆ, ಒಟಿಪಿ, ಡೆಬಿಟ್‌–ಕ್ರೆಡಿಟ್‌ ಕಾರ್ಡ್‌ ಸ್ಕಿಮ್ಮಿಂಗ್‌, ಲಿಂಕ್‌ ಕಳುಹಿಸಿ ವಂಚನೆ, ಉಡುಗೊರೆ ಆಮಿಷ, ಎನಿಡೆಸ್ಕ್‌, ಟೀಮ್‌ ವ್ಯೂವರ್‌ ಸಪೋರ್ಟ್‌, ಆನ್‌ಲೈನ್‌ ಲೋನ್‌ ಸೇರಿ ಹಲವು ಸ್ವರೂಪಗಳಲ್ಲಿ ವಂಚಕರು ಹಣ ಸುಲಿಗೆ ಮಾಡುತ್ತಾರೆ. ವೈದ್ಯ, ಎಂಜಿನಿಯರ್‌, ಪ್ರಾಧ್ಯಾಪಕ, ಉದ್ಯಮಿ, ಪೊಲೀಸ್‌, ಪತ್ರಕರ್ತ, ಬ್ಯಾಂಕ್‌ ಅಧಿಕಾರಿ, ವ್ಯಾಪಾರಸ್ಥರು ಸೇರಿ ಬೇರೆ ಬೇರೆ ಕ್ಷೇತ್ರದವರು ಮೋಸಕ್ಕೆ ಒಳಗಾಗಿದ್ದಾರೆ.

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್, ಎಕ್ಸ್‌ ಮೇಲೆಯೂ ಕಣ್ಣಿಟ್ಟಿರುವ ಕೆಲ ಕಿಡಿಗೇಡಿಗಳು, ಯುವತಿಯರದ್ದು ಸೇರಿ ಕೆಲವರ ಖಾತೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರದ್ದೇ ಚಿತ್ರಗಳನ್ನು ಬಳಸಿಕೊಂಡು ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಆಪ್ತರಿಗೆ ‘ಫ್ರೆಂಡ್‌ಶಿಪ್ ರಿಕ್ವೆಸ್ಟ್’ ಕಳುಹಿಸಿ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಾರೆ. ಸ್ನೇಹಿತರಾದ ಕೂಡಲೇ ಮೊಬೈಲ್ ನಂಬರ್ ಪಡೆದು ವಾಟ್ಸ್ಆ್ಯಪ್‌, ಎಸ್‌ಎಂಎಸ್‌ ಅಥವಾ ಮೆಸೆಂಜರ್ ಮೂಲಕ ಹಣ ಕೊಡುವಂತೆ ಪೀಡಿಸುತ್ತಾರೆ.  ಯುವತಿಯರ ಮುಖದ ಚಿತ್ರಗಳನ್ನು ನಗ್ನಚಿತ್ರಕ್ಕೆ ಅಂಟಿಸಿ, ಅದನ್ನು ಆಯಾ ಯುವತಿಯರಿಗೆ ಕಳುಹಿಸಿ, ‘ಮರ್ಯಾದೆ ಉಳಿಯಬೇಕಿದ್ದರೆ, ಹಣ ಕೊಡು’ ಎಂದು ಬೆದರಿಸುತ್ತಾರೆ.

ಹಣದ ಅಮಿಷಕ್ಕೆ ಒಳಗಾಗಿ, ವಂಚನೆಯ ಸುಳಿಯಲ್ಲಿ ಸಿಲುಕಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಕಲ್ಯಾಣ ಕರ್ನಾಟಕ ಪ್ರದೇಶದ ಹಲವಾರು ನೌಕರರು ಪ್ರತಿ ತಿಂಗಳು ಕ್ರೆಡಿಟ್ ಕಾರ್ಡ್ ಇಎಂಐ ಕಟ್ಟುವಂತಾಗಿದೆ. ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌, ಸರ್ಕಾರಿ ಯೋಜನೆಯಡಿ ಸಬ್ಸಿಡಿ ಸೇರಿ ಇತರೆ ಯೋಜನೆಗಳಿಗೆ ಅರ್ಜಿ ಹಾಕಿ, ದಾಖಲೆಗಳು ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ವಂಚಕರಿಂದ ಅರ್ಜಿದಾರರಿಗೆ ಕರೆ ಹೋಗುತ್ತವೆ. ಬ್ಯಾಂಕ್ ಅಥವಾ ಸರ್ಕಾರಿ ಕಚೇರಿಯಿಂದ ಕರೆ ಬಂದಿರಬಹುದೆಂದು ಭಾವಿಸಿ, ಎಲ್ಲಾ ದಾಖಲೆಪತ್ರಗಳ ವಿವರಣೆ ನೀಡುತ್ತಾರೆ. ಅವರು ಹೇಳಿದಂತೆ ಮಾಡುತ್ತಾರೆ. ಪ್ರಕ್ರಿಯೆ ಪೂರ್ಣಗೊಂಡು ಕರೆ ಕಡಿತಗೊಂಡು ಮತ್ತೆ ಸಂಪರ್ಕ ಸಿಗದಾದಾಗ, ಮೋಸದಿಂದ ಹಣ ಕಳೆದುಕೊಂಡಿದ್ದು ಗೊತ್ತಾಗುತ್ತದೆ.

ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ ಎಂಟು ತಿಂಗಳಲ್ಲಿ 8 ಆನ್‌ಲೈನ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಜನರು ಒಟ್ಟು ₹1.16 ಕೋಟಿ ಕಳೆದುಕೊಂಡಿದ್ದಾರೆ. ಟೆಲಿಗ್ರಾಮ್‌ ಆ್ಯಪ್‌ನಲ್ಲಿ ವಂಚನೆಯ ಜಾಲದ ಗ್ರೂಪ್‌ಗೆ ಉಚಿತವಾಗಿ ಜನರನ್ನು  ಸೇರಿಸಿಕೊಳ್ಳುವ ವಂಚಕರು, ‘ನಾವು ಕಳುಹಿಸುವ ಲಿಂಕ್‌ ಲೈಕ್‌ ಮಾಡಿ, ವಾಪಸ್‌ ಗ್ರೂಪ್‌ಗೆ ಕಳುಹಿಸಿದರೆ ಒಂದು ಲೈಕ್‌ಗೆ ಸಾವಿರಾರು ರೂಪಾಯಿ ಕೊಡುತ್ತೇವೆ’ ಎಂದು ಆಮಿಷ ಒಡ್ಡುತ್ತಾರೆ. ನಂತರ ಬ್ಯಾಂಕ್‌ನ ಗೌಪ್ಯ ವ್ಯವಹಾರಕ್ಕೆ ಸಂಬಂಧಿಸಿದ ಲಿಂಕ್‌ಗಳನ್ನು ಕಳುಹಿಸಿ, ಅವರಿಂದ ಹಣ ದೋಚುತ್ತಾರೆ.

ಆನ್‌ಲೈನ್‌ ಶಾಪಿಂಗ್‌ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿರುವ ರಾಯಚೂರಿನ ನೌಕರಸ್ಥ ಮತ್ತು ಶ್ರೀಮಂತ ಮನೆತನದ ಮಹಿಳೆಯರೂ ಹಣ ಕಳೆದುಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸಲು ಪ್ರಯತ್ನಿಸಿ ಹಣ ಕಳೆದುಕೊಂಡವರು ಬಹುತೇಕ ಸಂದರ್ಭಗಳಲ್ಲಿ ದೂರು ದಾಖಲಿಸಿಲ್ಲ. ಹೀಗಾಗಿ ವಂಚಕರ ಕೃತ್ಯಕ್ಕೆ ಕಡಿವಾಣ ಬಿದ್ದಿಲ್ಲ.

ಆನ್‌ಲೈನ್‌ ಖರೀದಿ ವೇಳೆ ಕೊಡುವ ಫೋನ್‌ ನಂಬರ್‌ನಿಂದ ವಿಳಾಸ ಪತ್ತೆ ಮಾಡಿ ವಂಚಕರು ಆಕರ್ಷಕ ಬಾಂಡ್‌ಪೇಪರ್‌ನಲ್ಲಿ ರಿಜಿಸ್ಟರ್‌ ಅಂಚೆ ಮೂಲಕ ಪತ್ರ ಕಳಿಸುತ್ತಾರೆ. ಅದನ್ನು ಸ್ವೀಕರಿಸಿದ ಬಳಿಕ ಅದರಲ್ಲಿ ಬಹುಮಾನ ಗೆದ್ದಿರುವ ಮಾಹಿತಿ ಮತ್ತು ದೂರವಾಣಿ ಸಂಖ್ಯೆ ಇರುತ್ತದೆ. ಪೇಪರ್‌ನಲ್ಲಿ ಸ್ಕ್ಯ್ರಾಚ್‌ ಮಾಡಿದರೆ ಬಹುಮಾನ ಮೊತ್ತ ಗೊತ್ತಾಗಲಿದೆ ಎಂಬ ಸಂದೇಶವೂ ಇರುತ್ತದೆ. ಸ್ಕ್ಯ್ರಾಚ್‌ ಮಾಡಿದ ಬಳಿಕ ₹1 ಲಕ್ಷ ಅಥವಾ ₹2 ಲಕ್ಷ ಗೆದ್ದಿರುವಂತೆ ಬಿಂಬಿಸಲಾಗುತ್ತದೆ. ಅದರಂತೆ ಮೊದಲು ಜಿಎಸ್‌ಟಿ ಪಾವತಿಸಿದರೆ ಪೂರ್ಣ ಮೊತ್ತ ನಿಮ್ಮದು ಎಂದು ನಂಬಿಸಲಾಗುತ್ತದೆ. ಆನ್‌ಲೈನ್‌ ಕರೆ ಮಾಡುವಂತೆ ಪತ್ರದಲ್ಲಿ ಸೂಚಿಸಿ ಶುಲ್ಕದ ಹೆಸರಲ್ಲಿ ಹಣ ಪಾವತಿಸಿಕೊಳ್ಳಲಾಗುತ್ತದೆ. ಈ ವೇಳೆ ಬ್ಯಾಂಕ್‌ನ ಖಾತೆ ಪತ್ತೆ ಮಾಡಿ, ಹಣವನ್ನು ಖಾಲಿ ಮಾಡಿರುತ್ತಾರೆ.

ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ವಿದೇಶದಿಂದ ಚಿನ್ನ ಬಂದಿದೆ ಎಂದು ಚಿನ್ನದ ಆಭರಣಗಳ ಫೋಟೋಗಳನ್ನು ಕಳುಹಿಸಿ, ನಂತರ ಪ್ರತಿಕ್ರಿಯಿಸಿದರೆ, ಆರ್‌ಬಿಐನಿಂದ ಆದಾಯ ತೆರಿಗೆ ಕಟ್ಟಿ ಚಿನ್ನ ತೆಗೆದುಕೊಳ್ಳಿ ಎನ್ನುವ ಎಸ್‌ಎಂಎಸ್‌ಗೆ ಪ್ರತಿಕ್ರಿಯಿಸಿ ಹಣ ಕಳೆದುಕೊಂಡ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

‘ಹಣ ಗೆದ್ದ ಖುಷಿಯಲ್ಲಿ ಕೆಲವರು ಯಾರಿಗೂ ಹೇಳುವುದೇ ಇಲ್ಲ. ಗೋಪ್ಯತೆ ಕಾಯ್ದುಕೊಳ್ಳಲು ಪ್ರಯತ್ನಿಸಿ, ಹಣ ಕಳೆದುಕೊಳ್ಳುತ್ತಾರೆ. ವಂಚನೆಗೆ ಒಳಗಾಗಿರುವುದು ತಿಳಿದು, ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವ ವೇಳೆಗೆ ತುಂಬಾ ತುಂಬಾ ತಡವಾಗಿರುತ್ತದೆ. ಹೀಗಾಗಿ ವಂಚಕರನ್ನು ಪತ್ತೆ ಮಾಡಲು ಮತ್ತು ಮುಂದಿನ ಕ್ರಮ ಜರುಗಿಸಲು ಕಷ್ಟವಾಗುತ್ತದೆ’ ಎಂದು ಹೇಳುತ್ತಾರೆ ರಾಯಚೂರಿನ ಸೈಬರ್ ಕ್ರೈಮ್‌ ಇನ್‌ಸ್ಪೆಕ್ಟರ್ ಮಹಾಂತೇಶ.

ಆಸಕ್ತಿಕರ ಸಂಗತಿಯೆಂದರೆ, ಬಹುತೇಕ ವಂಚಕರು ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ್‌ ರಾಜ್ಯಗಳ ಮೂಲದವರು. ಅವರು ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡಿ, ಜನರನ್ನು ಮರಳು ಮಾಡುತ್ತಾರೆ. ಬಹುತೇಕ ಮಂದಿ ಅನಕ್ಷರಸ್ಥರು ಮತ್ತು ನಿರುದ್ಯೋಗಿಗಳಾಗಿದ್ದು, ಅವರು ತಂಡ ಕಟ್ಟಿಕೊಂಡು ಸಿಕ್ಕಸಿಕ್ಕ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡುತ್ತಾರೆ. ಅವರ ಮಾತನ್ನು ಕೇಳದಿದ್ದರೆ, ಮುಂದೆ ಅಪಾಯವಾದೀತು ಎನ್ನುತ್ತಾರೆ. ಹೀಗಾಗಿ ಜನ ಹೆದರಿಕೊಳ್ಳುತ್ತಾರೆ’ ಎಂಬುದು ಕಲಬುರಗಿ ಸೈಬರ್ ಪೊಲೀಸ್ ಠಾಣೆಯ ಪಿಎಸ್‌ಐ ಸೂರ್ಯಕಾಂತ ಎಸ್‌. ಜೇವರ್ಗಿ ಅವರ ವಿವರಣೆ.

ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ ಜಿಲ್ಲೆಯಲ್ಲೂ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ. ಆನ್‌ಲೈನ್‌ನಲ್ಲಿ ವ್ಯವಹಾರ ಮಾಡಲು ಪ್ರಯತ್ನಿಸಿ ಲಕ್ಷಾಂತರ ರೂಪಾಯಿ ಕಳೆದುಕೊಂಡವರು ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಆರೋಪಿಗಳು ಶೀಘ್ರ ಪತ್ತೆಯಾಗದಿದ್ದಾಗ, ದೂರುದಾರರು ನಿರಾಸೆಗೊಂಡು ಹಣ ಮರಳುವ ಬಗ್ಗೆ ವಿಶ್ವಾಸವನ್ನೂ ಕಳೆದುಕೊಳ್ಳುತ್ತಾರೆ.

ಸಾಲ ನೀಡುವ, ಉಡುಗೊರೆ ಕೊಡುವ ನೆಪದಲ್ಲಿ, ಟಾಸ್ಕ್‌ಗಳನ್ನು ಪೂರ್ಣಗೊಳಿಸಿದರೆ ಅಥವಾ ಇಂತಿಷ್ಟು ಹಣ ಹೂಡಿದರೆ ಹೆಚ್ಚು ಹಣ ಗಳಿಸಬಹುದು ಎಂದು ನಂಬಿಸಿ, ಮನೆಯಿಂದಲೇ ಕೆಲಸ ಮಾಡಿ ಹೆಚ್ಚು ಹಣ ಗಳಿಸಬಹುದು ಎಂದು ಹೇಳಿ, ಪ್ಲಾಸ್ಟಿಕ್ ಡ್ರಮ್, ಕೀಟನಾಶಕಗಳು, ರಸಗೊಬ್ಬರ, ಬೈಕ್ ಮಾರುತ್ತೇವೆ ಎಂದು ತಿಳಿಸಿ, ಜನರನ್ನು ವಂಚಿಸುತ್ತಾರೆ. ವಂಚನೆಗೆ ಒಳಗಾದವರಲ್ಲಿ ಮುಖ್ಯ ಶಿಕ್ಷಕಿ, ಎಂಜಿನಿಯರ್‌ಗಳು, ವೈದ್ಯರು ಮತ್ತು ಸರ್ಕಾರಿ ನೌಕರರು ಸೇರಿದ್ದಾರೆ.

ಉದ್ಯೋಗ ಕೊಡಿಸುವುದಾಗಿ ಮಹಿಳೆಯೊಬ್ಬರಿಂದ ವಂಚಕರು ₹ 2 ಲಕ್ಷ ಪೀಕಿದ್ದರು. ಪೊಲೀಸರಿಗೆ ದೂರು ನೀಡಬೇಕು ಎನ್ನುವಷ್ಟರಲ್ಲಿ, ‘ನಾವೇ ಪೊಲೀಸರು. ನಿಮ್ಮ ಹಣ ವಾಪಸ್ ಕೊಡಿಸುತ್ತೇವೆ’ ಎಂದು ನಂಬಿಸಿ ಆನ್‌ಲೈನ್ ವಂಚಕರು ಆಕೆಯಿಂದ ಮತ್ತಷ್ಟು ಹಣ ಸುಲಿದ ಪ್ರಕರಣ ನಡೆದಿದೆ.

‘ಆನ್‌ಲೈನ್‌ನಲ್ಲಿ ಸ್ವಲ್ಪ ಹಣ ಕಳೆದುಕೊಂಡಿದ್ದೆ. ತಕ್ಷಣ ಸೈಬರ್ ಪೋರ್ಟಲ್‌ನಲ್ಲಿ ದೂರು ಸಲ್ಲಿಸಿದ್ದರಿಂದ ನಾನು ಹಣ ವರ್ಗಾಯಿಸಿದ್ದ ಎರಡು ಖಾತೆಗಳನ್ನು ಬ್ಲಾಕ್ ಮಾಡಿದ್ದಾರೆ. ಇದರಿಂದ ಅನುಕೂಲವಾಯಿತು. ಹಣ ಕಳೆದುಕೊಂಡವರು ಶೀಘ್ರ ದೂರು ನೀಡಬೇಕು. ಅಲ್ಲದೆ, ಪೊಲೀಸರು ಈ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುವುದು ಸಹ ಅಗತ್ಯ’ ಎಂದು ಹಣ ಕಳೆದುಕೊಂಡ ದಾವಣಗೆರೆಯ ಎಂ.ಜಿ. ಶ್ರೀಕಾಂತ್ ಹೇಳುತ್ತಾರೆ.

ಸರಾಸರಿ ಲೆಕ್ಕಾಚಾರ ಹಾಕಿದರೆ, 2022ರಲ್ಲಿ ಸೈಬರ್‌ ವಂಚಕರ ದಾಳಕ್ಕೆ ಸಿಲುಕಿ ರಾಜ್ಯದ ಜನ ಬರೋಬ್ಬರಿ ₹ 363 ಕೋಟಿ ಕಳೆದುಕೊಂಡಿದ್ದಾರೆ. ಅಂದರೆ, ದಿನಕ್ಕೆ ಸರಾಸರಿ ₹1 ಕೋಟಿ ಹಣ ವಂಚಕರ ಪಾಲಾಗಿದೆ.

ಕೋವಿಡ್‌ ಅವಧಿಯಲ್ಲಿ ಮತ್ತು ನಂತರದ ದಿನಗಳಲ್ಲಿ ಅರ್ಥವ್ಯವಸ್ಥೆಯಲ್ಲಿ ಡಿಜಿಟಲ್‌ ತಂತ್ರಜ್ಞಾನ ಬಳಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದು ಸೈಬರ್‌ ಕಳ್ಳರಿಗೆ ವರವಾಗಿದೆ. ಇದರಿಂದ ಆನ್‌ಲೈನ್‌ ವಂಚನೆಗಳ ಪ್ರಮಾಣವೂ ದ್ವಿಗುಣಗೊಂಡಿದೆ. 2019 ರಿಂದ 2022ರವರೆಗೆ ರಾಜ್ಯದ ಜನ ಬರೋಬ್ಬರಿ ₹722 ಕೋಟಿ ಕಳೆದುಕೊಂಡಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೊ (ಎನ್‌ಸಿಆರ್‌ಬಿ) ಪ್ರಕಾರ, ಸೈಬರ್‌ ಅಪರಾಧಗಳು ಹೆಚ್ಚು ನಡೆಯುವ ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆಯು ಐದು ವರ್ಷಗಳಲ್ಲಿ ಹಲವು ಪಟ್ಟು ಹೆಚ್ಚಾಗಿದೆ. 2017ರಲ್ಲಿ 2,023 ಪ್ರಕರಣಗಳು ದಾಖಲಾಗಿದ್ದವು. 2022ರಲ್ಲಿ 12,551ಕ್ಕೆ ಹೆಚ್ಚಳವಾಗಿದ್ದರೆ, ಪ್ರಸ್ತುತ ಆಗಸ್ಟ್‌ ಅಂತ್ಯಕ್ಕೆ 13,613 ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು ಮೊದಲು

ರಾಜ್ಯದಲ್ಲಿ ಸೈಬರ್‌ ಅಪರಾಧ ವಂಚನೆಗೆ ಒಳಗಾದವರ ಪಟ್ಟಿಯಲ್ಲಿ ರಾಜಧಾನಿ ಬೆಂಗಳೂರಿಗೆ ಮೊದಲ ಸ್ಥಾನ. 2022ರಲ್ಲಿ ಇಲ್ಲಿನ ಜನರಿಗೆ ₹266.70 ಕೋಟಿ ಮೊತ್ತದಷ್ಟು ವಂಚನೆಯಾಗಿದೆ. ಮೈಸೂರು ಎರಡನೇ ಸ್ಥಾನದಲ್ಲಿದ್ದು, ಇಲ್ಲಿನವರು ₹14.07 ಕೋಟಿ ಕಳೆದುಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಮೂರನೇ ಸ್ಥಾನದಲ್ಲಿದ್ದು, ₹13.82 ಕೋಟಿ ಮೊತ್ತದ ವಂಚನೆ ವರದಿಯಾಗಿದೆ.

2021ರಲ್ಲಿ ರಾಜ್ಯದಲ್ಲಿ 8132 ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗಿದ್ದವು. 2022ರಲ್ಲಿ 12,551ಕ್ಕೆ ಏರಿಕೆಯಾಗಿತ್ತು. ಪ್ರಸ್ತುತ ವರ್ಷ ಆಗಸ್ಟ್‌ ಅಂತ್ಯದವರೆಗೆ 13,613 ಪ್ರಕರಣಗಳು ದಾಖಲಾಗಿವೆ. ಅತಿಹೆಚ್ಚು ಪ್ರಕರಣಗಳು ಬೆಂಗಳೂರು ನಗರದಲ್ಲಿ ದಾಖಲಾದರೆ, ನಂತರ ಮೈಸೂರು, ಬೆಂಗಳೂರು ಗ್ರಾಮಾಂತರ, ಹುಬ್ಬಳ್ಳಿ–ಧಾರವಾಡ, ಮಂಡ್ಯ ಹಾಗೂ ಮಂಗಳೂರಿನಲ್ಲಿ ದಾಖಲಾಗಿವೆ.

ವಸೂಲಾತಿ ಕಡಿಮೆ

ಕರ್ನಾಟಕದಲ್ಲಿ 2022ರಲ್ಲಿ ಆನ್‌ಲೈನ್‌ ವಂಚನೆಗೆ ಒಳಗಾದ ಹಣದ ಪೈಕಿ ₹46.87 ಕೋಟಿ ಮಾತ್ರ ಮರುವಸೂಲಿಯಾಗಿದೆ. ಇದು ಒಟ್ಟಾರೆ ಮೊತ್ತದ ಶೇ 12ರಷ್ಟು ಮಾತ್ರ. ಹಿಂದಿನ ವರ್ಷಗಳ ಅಂಕಿ–ಅಂಶವೂ ಆಶಾದಾಯಕವಾಗಿಲ್ಲ. ಶೇ 80ಕ್ಕೂ ಹೆಚ್ಚು ಪ್ರಕರಣಗಳು ತನಿಖೆಯ ಹಂತದಲ್ಲಿವೆ. ವಂಚಕರ ವಿರುದ್ಧ ಕ್ರಮ ಆಗದಿರುವುದಕ್ಕೆ ಹಲವು ಕಾರಣಗಳಿವೆ.

‘ವಂಚನೆಗೆ ಒಳಗಾದವರು ತಡವಾಗಿ ದೂರು ದಾಖಲಿಸುವುದರಿಂದ ಆರೋಪಿಗಳ ಕುರಿತು ಸಮರ್ಪಕ ಮಾಹಿತಿ ಸಿಗುವುದಿಲ್ಲ. ವಂಚನೆಗೆ ಒಳಗಾದ ಮೊದಲ ಒಂದು ಗಂಟೆ ಅವಧಿಯನ್ನು ‘ಗೋಲ್ಡನ್‌ ಹವರ್’ ಎನ್ನುತ್ತೇವೆ. ಆ ಅವಧಿಯಲ್ಲಿ ಸಂತ್ರಸ್ತರು ಮಾಹಿತಿ ನೀಡಿದರೆ ಹಣದ ಮರುವಸೂಲಾತಿ ಅವಕಾಶ ಹೆಚ್ಚು. ಆದರೆ, ಶೇ 99ರಷ್ಟು ಪ್ರಕರಣಗಳಲ್ಲಿ ಕೆಲವು ದಿನ–ವಾರಗಳ ನಂತರ ದೂರು ದಾಖಲಾಗುತ್ತಿದೆ. ಇದು ತನಿಖೆಯ ಹಿನ್ನಡೆಗೆ ಕಾರಣವಾಗುತ್ತದೆ’ ಎಂದು ಸೈಬರ್ ಪೊಲೀಸರು ಹೇಳುತ್ತಾರೆ.

‘ಮೊದಲೆಲ್ಲ, ಸೈಬರ್ ವಂಚನೆಗೆ ಒಳಗಾದರೆ ಆ ಠಾಣೆಗೇ ಹೋಗಿ ದೂರು ನೀಡಬೇಕಿತ್ತು. ಈಗ ಎಲ್ಲಿಯಾದರೂ ದೂರು ನೀಡಬಹುದು. ಆನ್‌ಲೈನ್‌, ಇ–ಮೇಲ್‌ ದೂರು ಆದೀತು. ಹೀಗಿದ್ದೂ ವಿಳಂಬ ಮಾಡುತ್ತಾರೆ’ ಎಂಬ ಬೇಸರ ಅವರದ್ದು.

ಸೈಬರ್‌ ಅಪರಾಧಗಳಿಗೆ ಪ್ರದೇಶದ ಗಡಿ ಇಲ್ಲ. ವಿದೇಶದಲ್ಲಿ ಇದ್ದುಕೊಂಡೇ ಜನರನ್ನು ವಂಚಿಸಲು ಒಂದು ಕರೆ ಅಥವಾ ಸಂದೇಶ ಸಾಕು. ಅಪರಾಧಿಗಳನ್ನು ಹಿಡಿಯಲು ಕೆಲ ರಾಜ್ಯಗಳ ಪೊಲೀಸರಿಂದ ನಿರೀಕ್ಷಿತ ಮಟ್ಟದಲ್ಲಿ ನೆರವು ಸಿಗುವುದಿಲ್ಲ. ಸುಳಿವು ಹಿಡಿದು ಹೊರ ರಾಜ್ಯಗಳಿಗೆ ತೆರಳಿದರೂ ಭಾಷೆ ಮತ್ತು ಅಲ್ಲಿನ ಇತರ ಸಮಸ್ಯೆಗಳಿಂದ ಆರೋಪಿಗಳನ್ನು ಸುಲಭವಾಗಿ ಹಿಡಿಯಲು ಸಾಧ್ಯವಾಗುವುದಿಲ್ಲ.

ಸದ್ಯ ಬೆಂಗಳೂರು ಹೊರತುಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜಿಲ್ಲೆಗೊಂದು ಸೈಬರ್‌ ಠಾಣೆ ಇದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಸಿಬ್ಬಂದಿ ಮತ್ತು ತಂತ್ರಜ್ಞರಿಲ್ಲ. ಕೆಲ ಕಡೆ ಸಿಬ್ಬಂದಿಗೆ ತರಬೇತಿ ನೀಡಿ, ಅಪರಾಧ ಪತ್ತೆ ಪ್ರಕರಣಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ‘ಕಳ್ಳರು ವಂಚನೆಗೆ ತಕ್ಕಂತೆ ನವೀನ ಬಗೆಯ ತಂತ್ರಜ್ಞಾನ ಬಳಸುತ್ತಾರೆ. ಆದರೆ, ಅದಕ್ಕೆ ತಕ್ಕಂತೆ ಪೊಲೀಸರು ನೈಪುಣ್ಯತೆ ಬಳಸಿಕೊಳ್ಳುತ್ತಿಲ್ಲ’ ಎಂಬ ಆಕ್ಷೇಪಣೆಗಳಿವೆ.

‘ಸೈಬರ್‌ ಅಪರಾಧಗಳ ಪ್ರಕರಣಗಳ ಏರಿಕೆಗೆ ತಕ್ಕಂತೆ ತಾಲ್ಲೂಕು ಮಟ್ಟದಲ್ಲಿ ಸೈಬರ್ ಠಾಣೆಗಳ ಸ್ಥಾಪನೆ ಹಾಗೂ ಅದಕ್ಕೆ ತಕ್ಕಂತೆ ತಜ್ಞರ ನೇಮಕ, ತಂತ್ರಜ್ಞಾನ ಬಳಕೆಗೆ ಸರ್ಕಾರ ಒತ್ತು ನೀಡಬೇಕು. ಈ ಕಾರ್ಯ ನೆರವೇರುವವರೆಗೆ ಸೈಬರ್ ಅಪರಾಧಗಳನ್ನು ಪೂರ್ಣಪ್ರಮಾಣದಲ್ಲಿ ತಡೆಯುವುದು ಕಷ್ಟ’ ಎಂದು ಮೈಸೂರಿನ ಕಲಾವತಿ ಹೇಳುತ್ತಾರೆ.

ತನಿಖೆ ವಿಳಂಬಕ್ಕೆ ಕಾರಣ

ಹಣ ಕಳೆದುಕೊಂಡ ಗ್ರಾಹಕರ ಮಾಹಿತಿ ಬ್ಯಾಂಕ್‌ಗಳಿಂದ ತಡವಾಗಿ ಸಿಗುವುದರಿಂದ, ವಂಚಕರು ವರ್ಗಾಯಿಸಿಕೊಂಡ ಹಣ ಬೇರೆ ಖಾತೆಗೆ ಅಥವಾ ನಗದು ರೂಪದಲ್ಲಿ ಡ್ರಾ ಮಾಡಿರುತ್ತಾರೆ. ಬ್ಯಾಂಕ್‌ ಮಾಹಿತಿ ಮತ್ತು ಮೊಬೈಲ್‌ ನಂಬರ್‌ ಆಧರಿಸಿ ಸ್ಥಳಕ್ಕೆ ತೆರಳಿದಾಗ ಖಾತೆದಾರರ ಹೆಸರುಗಳು ದುರ್ಬಳಕೆ ಆಗಿರುವುದು ಗೊತ್ತಾಗುತ್ತದೆ.

‘ಪ್ರಕರಣದ ತನಿಖೆಯ ಅಧಿಕಾರ ಇನ್‌ಸ್ಪೆಕ್ಟರ್‌ ದರ್ಜೆಯ ಅಧಿಕಾರಿಗಳಿಗೆ ಮಾತ್ರ ಇರುವುದರಿಂದ, ಆರೋಪಿಗಳ ಪತ್ತೆಗೆ ಹೊರರಾಜ್ಯಕ್ಕೆ ತನಿಖಾಧಿಕಾರಿಯೇ ತೆರಳಬೇಕು. ಇದು ಇನ್‌ಸ್ಪೆಕ್ಟರ್‌ ಅವರಿಗೆ ಹೊರೆಯಾಗುತ್ತಿದ್ದು ತನಿಖೆಯ ವಿಳಂಬಕ್ಕೂ ಕಾರಣವಾಗಿದೆ. ಕಾಯ್ದೆ ತಿದ್ದುಪಡಿ ಮಾಡಿ ಸಬ್‌ ಇನ್‌ಸ್ಪೆಕ್ಟರ್‌ಗೂ ತನಿಖಾಧಿಕಾರ ನೀಡಬೇಕು. ಸೈಬರ್‌ ಪ್ರಕರಣದ ಆರೋಪಿ ಜಾಮೀನಿನ ಮೇಲೆ ಸುಲಭವಾಗಿ ಹೊರಗೆ ಬರಬಹುದು. ಆರೋಪ ಸಾಬೀತಾದರೆ ದಂಡದ ಮೊತ್ತ ಮತ್ತು ಶಿಕ್ಷೆಯ ಅವಧಿ ಸಹ ಕಡಿಮೆಯಿದ್ದು, ಪದೇಪದೇ ಅವನು ಅದೇ ಪ್ರಕರಣದಲ್ಲಿ ಭಾಗಿಯಾಗುತ್ತಾನೆ. ಈ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಅಗತ್ಯವಾಗಿದೆ’ ಎಂದು ಪೊಲೀಸರು ಹೇಳುತ್ತಾರೆ.

ಹುಬ್ಬಳ್ಳಿ–ಧಾರವಾಡ ಮಹಾನಗರ ಸೈಬರ್‌ ಠಾಣೆಯಲ್ಲಿ 2023ರ ಸೆಪ್ಟೆಂಬರ್ 24ರವರೆಗೆ 355 ಸೈಬರ್‌ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 60ಕ್ಕಿಂತ ಹೆಚ್ಚು ಪ್ರಕರಣಗಳು ಯುವತಿಯರ ಫೋಟೊಗಳನ್ನು ಅಶ್ಲೀಲ ಚಿತ್ರ, ವಿಡಿಯೊಗಳಿಗೆ ಎಡಿಟ್‌ ಮಾಡಿರುವುದೇ ಆಗಿವೆ.

ಸಾಮಾಜಿಕ ಜಾಲತಾಣಗಳಿಂದ ವೈಯಕ್ತಿಕ ಮಾಹಿತಿ ಕದ್ದು ಆನ್‌ಲೈನ್‌ ಆ್ಯಪ್‌ನಲ್ಲಿ ಸಾಲ ಪಡೆದ ಪ್ರಕರಣ ಸಂಖ್ಯೆ 80ಕ್ಕಿಂತಲೂ ಹೆಚ್ಚಿವೆ. ಉದ್ಯೋಗ, ವಿವಾಹದ ವೆಬ್‌ಸೈಟ್‌ ಅಲ್ಲದೇ ಬೇರೆ ಬೇರೆ ಕಡೆ ನೀಡಲಾದ ಮೊಬೈಲ್‌ ನಂಬರ್‌ ಕದ್ದು, ಉದ್ಯೋಗ, ಮದುವೆ ಆಮಿಷ ತೋರಿಸಿ ವಂಚಿಸಿದ ಪ್ರಕರಣಗಳ ಸಂಖ್ಯೆ 100ಕ್ಕೂ ಹೆಚ್ಚಿವೆ.

2018ರಿಂದ 2023ರ ಆಗಸ್ಟ್‌ವರೆಗೆ ಅವಳಿನಗರದ ಸೈಬರ್‌ ಠಾಣೆಯಲ್ಲಿ 1080 ಪ್ರಕರಣಗಳು ದಾಖಲಾಗಿದ್ದು, ಒಟ್ಟು ₹21.46 ಕೋಟಿ ವಂಚನೆಯಾಗಿದೆ. ಅವುಗಳಲ್ಲಿ ₹2.95 ಕೋಟಿ ಹಣವನ್ನು ವಿವಿಧ ಬ್ಯಾಂಕ್‌ಗಳಲ್ಲಿ ತಡೆಹಿಡಿದು, ₹1.59 ಕೋಟಿಯನ್ನು ಹಣ ಕಳೆದುಕೊಂಡವರಿಗೆ ಕೋರ್ಟ್‌ ಮುಖಾಂತರ ಹಸ್ತಾಂತರಿಸಲಾಗಿದೆ.

ಸೈಬರ್‌ ವಿಮೆ

ಡಿಜಿಟಲ್‌ ಜಗತ್ತಿನ ಪ್ರಸ್ತುತ ದಿನಗಳಲ್ಲಿ ಸ್ಟಾರ್ಟ್‌ಅಪ್‌ ಕಂಪನಿಗಳಿಗೆ ಸೈಬರ್‌ ಬೆದರಿಕೆ ಮತ್ತು ವಂಚನೆ ಸಾಮಾನ್ಯವಾಗಿದೆ. ಸೈಬರ್‌ ದಾಳಿಗಳು, ನೆಟ್‌ವರ್ಕ್‌ ಹಾನಿ, ಡೇಟಾ ಕಳವು, ವ್ಯವಹಾರದ ಅಡಚಣೆಗಳಿಂದ ಉಂಟಾಗುವ ನಷ್ಟಗಳಿಗೆ ‘ಸೈಬರ್‌ ವಿಮೆ’ ಸೌಲಭ್ಯವಿದೆ. ಇದು ಡಿಜಿಟಲ್ ವ್ಯವಹಾರಕ್ಕೆ ಸುರಕ್ಷತೆಯ ಕವಚವಾಗಿದೆ.

ದೊಡ್ಡ ಸಂಸ್ಥೆಗಳು ಸಾಮಾನ್ಯವಾಗಿ ಸೈಬರ್ ಬೆದರಿಕೆಗಳನ್ನು ಎದುರಿಸುತ್ತವೆ. ವ್ಯಾಪಕವಾದ ನೆಟ್‌ವರ್ಕ್ ರಕ್ಷಣೆ ಮತ್ತು ಅಪಾಯದ ನಿರ್ವಹಣೆಗೆ ಸೈಬರ್ ವಿಮಾ ಪಾಲಿಸಿ ನೆರವಾಗಲಿದೆ. ವಿಮೆ ಖರೀದಿಸಿದ ಕಂಪನಿಯು ಕಾನೂನು ಷರತ್ತುಗಳಿಗೆ ಒಳಪಡುತ್ತದೆ. ಸೈಬರ್‌ ದಾಳಿಯ ನಂತರ ನಷ್ಟವಾದ ಡೇಟಾಗಳನ್ನು ಮರಳಿ ಪಡೆಯಲು ಅಗತ್ಯವಾದ ವೆಚ್ಚ ಹಾಗೂ ಕಾನೂನು ವೆಚ್ಚಗಳನ್ನು ಅದು ಒಳಗೊಂಡಿರುತ್ತದೆ. ಡಿಜಿಟಲ್ ಹೆಜ್ಜೆಗುರುತು ವಿಸ್ತಾರವಾದಂತೆ ಕಾರ್ಯಾಚರಣೆಗಳು ಹೆಚ್ಚಾಗುತ್ತದೆ. ಆಗ ಸೈಬರ್ ವಿಮೆ ಅಗತ್ಯ ರಕ್ಷಣೆ ನೀಡುತ್ತದೆ.

ಆಧಾರ್‌ ಕಾರ್ಡ್‌ ನೋಂದಾಯಿಸುವಾಗ ನೀಡುವ ಬಯೋಮೆಟ್ರಿಕ್‌(ಬೆರಳಚ್ಚು)ನ್ನೇ ಹ್ಯಾಕ್‌ ಮಾಡಿ, ಆಧಾರ್‌ ದತ್ತಾಂಶ ಕದ್ದು ಅರಿವಿಗೆ ಬರದ ಹಾಗೆ ಹಣ ದೋಚುವ ವಂಚಕರ ಜಾಲ ಇತ್ತೀಚೆಗೆ ಹೆಚ್ಚಾಗಿದೆ. ಬಯೋಮೆಟ್ರಿಕ್‌ ಸಹಾಯದಿಂದ ಬ್ಯಾಂಕ್‌ನಲ್ಲಿ ಹಣ ಉಳಿತಾಯ, ಹಣ ತೆಗೆಯುವುದು, ಬ್ಯಾಲೆನ್ಸ್‌ ಎನ್‌ಕ್ವಾಯರಿ, ಮಿನಿ ಸ್ಟೇಟ್‌ಮೆಂಟ್‌, ಹಣ ವರ್ಗಾವಣೆ, ಭಿಮ್‌ ಆಧಾರ್‌ ಪೇ, ಇ–ಕೆವೈಸಿ, ಸಿಮ್‌ ಖರೀದಿ ಸೇರಿದಂತೆ ಅನೇಕ ಸೌಲಭ್ಯ ಪಡೆಯಬಹುದಾಗಿದೆ. ವಂಚಕರು ಇದನ್ನೇ ಹ್ಯಾಕ್‌ ಮಾಡಿ, ಒಟಿಪಿ ಸಹಾಯವಿಲ್ಲದೆ ಖಾತೆಯಲ್ಲಿರುವ ಹಣವನ್ನೆಲ್ಲ ದೋಚುತ್ತಿರುವ ಪ್ರಕರಣಳ ಸಂಖ್ಯೆ ಹೆಚ್ಚುತ್ತಿವೆ. https://myaadhaar.uidai.gov.in ವೆಬ್‌ಸೈಟ್‌ನಲ್ಲಿ ಅಥವಾ ಆಧಾರ ಕೇಂದ್ರಕ್ಕೆ ತೆರಳಿ ಆಧಾರ್‌ ಕಾರ್ಡ್‌ ಬಯೋಮೆಟ್ರಿಕ್‌ ಲಾಕ್‌ ಮಾಡಿಸುವ ಮೂಲಕ ಇದನ್ನು ತಡೆಯಬಹುದು. ಬೆರಳಚ್ಚು ಕೋರುವ ಯಾವುದೇ ಅಪ್ಲಿಕೇಷನ್‌ಗಳನ್ನು ಮೊಬೈಲ್‌ನಲ್ಲಿ ಬಳಕೆ ಮಾಡದಿರುವುದು ಸೂಕ್ತ ಎಂದು ಸೈಬರ್‌ ಕ್ರೈಂ ಪೊಲೀಸರು ಹೇಳುತ್ತಾರೆ.

ಸೈಬರ್‌ ಪ್ರಕರಣ ಪತ್ತೆಹಚ್ಚಲು ಸಿಬ್ಬಂದಿಗೆ ಕಾಲಕಾಲಕ್ಕೆ ತಾಂತ್ರಿಕ ತರಬೇತಿ ನೀಡಲಾಗುತ್ತದೆ. ಡಿಜಿಟಲ್‌ ಯುಗದಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಸಾರ್ವಜನಿಕರು ವ್ಯವಹರಿಸಬೇಕು
– ರೇಣುಕಾ ಸುಕುಮಾರ್‌ ಪೊಲೀಸ್ ಕಮಿಷನರ್‌ ಹುಬ್ಬಳ್ಳಿ–ಧಾರವಾಡ ಮಹಾನಗರ
ಸ್ಟಾರ್ಟ್‌ಅಪ್‌ ಕಂಪನಿಗಳು ಸೈಬರ್‌ ದಾಳಿಗೆ ಒಳಗಾದಾಗ ಡೇಟಾ ನಷ್ಟವಾಗುವ ಸಾಧ್ಯತೆ ಹೆಚ್ಚು. ಕಳೆದುಕೊಂಡ ಡೇಟಾ ಮರಳಿ ಪಡೆಯಲು ಅಥವಾ ನಷ್ಟದ ಹಣ ಭರಿಸಿಕೊಳ್ಳಲು ಸೈಬರ್‌ ವಿಮೆ ನೆರವಾಗಲಿದೆ
– ವಿನಯ್‌ ಜವಳಿ, ಉದ್ಯಮಿ
ಸೈಬರ್ ಪ್ರಕರಣಗಳ ತನಿಖೆಗೆ ಬೇಕಾದ ತಂತ್ರಾಂಶಗಳನ್ನು ಕಾಲಕಾಲಕ್ಕೆ ಅಪ್‌ಡೇಟ್‌ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ವ್ಯಾಪ್ತಿ ಮೀರಿದ ಪ್ರಕರಣಗಳು ನಡೆದರೆ ಸಿಐಡಿಗೆ ವರ್ಗಾಯಿಸುತ್ತೇವೆ.
– ರಮೇಶ್‌ ಬಾನೋತ್‌ , ಪೊಲೀಸ್ ಕಮಿಷನರ್ ಮೈಸೂರು

ಸೈಬರ್ ಸೆಕ್ಸ್ ಪ್ರಕರಣ ಹೆಚ್ಚಳ

ರಾಜ್ಯದ ಮುಖ್ಯಮಂತ್ರಿಯ ವಿಶೇಷ ಕರ್ತವ್ಯಾಧಿಕಾರಿಯೊಬ್ಬರು 2022ರಲ್ಲಿ ಮಹಾರಾಷ್ಟ್ರದ ನಾಸಿಕ್‌ಗೆ ತೆರಳಿದ ಸಂದರ್ಭದಲ್ಲಿ ಮೊಬೈಲ್‌ಗೆ ವಿಡಿಯೊ ಕರೆ ಮಾಡಿದ ಯುವತಿಯ ಮಾತಿಗೆ ಮರುಳಾಗಿ ಬೆತ್ತಲೆಯಾದರು. ಇಡೀ ವಿಡಿಯೊ ಡೌನ್‌ಲೋಡ್ ಮಾಡಿಕೊಂಡ ಯುವತಿ ಮತ್ತು ಇತರರು ‘ತಕ್ಷಣವೇ ₹ 1.50 ಲಕ್ಷ ಕೊಡದಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ನಿನ್ನದೆಲ್ಲ ಅನಾವರಣ ಆಗಲಿದೆ’ ಎಂದು ಹೆದರಿಸಿದರು. ಕೇಳಿದಷ್ಟು ಹಣ ಕೊಟ್ಟ ಬಳಿಕವೂ ಪದೇ ಪದೇ ಹಣ ಕೊಡುವಂತೆ ಪೀಡಿಸಿತೊಡಗಿದಾಗ ಅಧಿಕಾರಿಯು ಪೊಲೀಸರ ಮೊರೆ ಹೋಗಿ ದೂರು ದಾಖಲಿಸಿದರು.

ಇತ್ತೀಚೆಗೆ ಇಂಥ ಸೈಬರ್‌ ಸೆಕ್ಸ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ವಂಚಿಸುವ ಉದ್ದೇಶದಿಂದ ಕೆಲವರು ಜಾಲತಾಣದಲ್ಲಿ ಪರಿಚಯಸ್ಥರಾಗಿ ಸ್ನೇಹಿತರಾಗುತ್ತಾರೆ. ಆತ್ಮೀಯರಂತೆ ವರ್ತಿಸುವ ಅವರು ಫೇಸ್‌ಬುಕ್‌ ಇನ್‌ಸ್ಟಾಗ್ರಾಮ್‌ ಟೆಲಿಗ್ರಾಮ್‌ ಹಾಗೂ ಕೆಲ ಸಾಮಾಜಿಕ ಮಾಧ್ಯಮಗಳು ವಿಡಿಯೊ ಕಾನ್ಫರೆನ್ಸ್‌ಗಳು ಡೇಟಿಂಗ್‌ ಆ್ಯಪ್‌ಗಳು ಆನ್‌ಲೈನ್‌ ಚಾಟ್‌ ರೂಮ್‌ಗಳು ಡಾರ್ಕ್‌ ವೆಬ್‌ಸೈಟ್‌ಗಳನ್ನು ಬಳಸಿಕೊಂಡು ವೆಬ್‌ಕ್ಯಾಮ್‌ನಲ್ಲಿ ಲೈಂಗಿಕ ಪ್ರಚೋದಿಸುತ್ತಾರೆ. ಮಹಿಳೆ ಸ್ನಾನ ಮಾಡುವುದನ್ನು ಕದ್ದುಮುಚ್ಚಿ ನೋಡುವುದು ಮಹಿಳೆಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ದೃಶ್ಯಗಳನ್ನು ಚಿತ್ರೀಕರಿಸುವುದು ಮುಂತಾದ ವಿಲಕ್ಷಣ ವರ್ತನೆಗಳೂ ಹೆಚ್ಚುತ್ತಿವೆ.

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಂತಹ ಕೆಲವು ಪ್ರಕರಣಗಳ ಕುರಿತು ವಿವಿಧ ಠಾಣೆಗಳಲ್ಲಿ ಪ್ರಕರಣಗಳೂ ದಾಖಲಾಗಿವೆ. ನೆರೆಮನೆಯ ಮಹಿಳೆಯ ಸ್ನಾನದ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ ಯುವಕನೊಬ್ಬನನ್ನು ಆ ಮನೆಯವರೇ ಹಿಡಿದು ಮೂಲ್ಕಿ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದರು. ಇದಾದ ಕೆಲ ವಾರಗಳ ಬಳಿಕ ಬಂಟ್ವಾಳ ನಗರ ಠಾಣೆ ವ್ಯಾಪ್ತಿಯಲ್ಲೂ ಇಂತಹದ್ದೇ ಕೃತ್ಯದ ಬಗ್ಗೆ ಎಫ್‌ಐಆರ್ ದಾಖಲಾಯಿತು. ಉಡುಪಿಯ ಅರೆವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೇ ಶೌಚಾಲಯದ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಪ್ರಕರಣವಂತೂ ಭಾರಿ ಸುದ್ದಿಯಾಗಿತ್ತು. ‘ಮಾಧ್ಯಮಗಳಲ್ಲಿ ಸುದ್ದಿಯಾಗದ ಪ್ರಕರಣಗಳೂ ಅನೇಕ ಇವೆ. ಹದಿಹರೆಯದವರೇ ಹೆಚ್ಚಾಗಿ ಇದರಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇಂತಹ ವರ್ತನೆ ಸಮಸ್ಯೆ ಎದುರಿಸುತ್ತಿರುವ ಅನೇಕರು ಕ್ಲಿನಿಕ್‌ಗೆ ಬರುತ್ತಾರೆ. ಅಂತಹ ಅನೇಕರನ್ನು ಪೋಷಕರೇ ನಮ್ಮಲ್ಲಿಗೆ ಕರೆತರುತ್ತಾರೆ.

ಹದಿಹರೆಯದವರಿಗೆ ಲೈಂಗಿಕ ಶಿಕ್ಷಣದ ಕೊರತೆ ಇದಕ್ಕೆ ಪ್ರಮುಖ ಕಾರಣ. ಲೈಂಗಿಕ ಚಟುವಟಿಕೆಯ ಪರಿಣಾಮಗಳೇನು ಎಂಬುದರ ಅರಿವು ಅವರಿಗೆ ಇರುವುದಿಲ್ಲ’ ಎನ್ನುತ್ತಾರೆ ಮಂಗಳೂರಿನ ಮನಶಾಂತಿ ಸಂಸ್ಥೆಯ ಮಾನಸಿಕ ಆರೋಗ್ಯ ತಜ್ಞರಾದ ಡಾ.ರಮೀಳಾ ಶೇಖರ್‌. ‘ತಂತ್ರಜ್ಞಾನದ ಲಭ್ಯತೆ ಹೆಚ್ಚಿರುವುದು ಇಂತಹ ವರ್ತನೆಗೆ ಇನ್ನೊಂದು ಕಾರಣ. ಕೋವಿಡ್ ಬಳಿಕ ಹದಿಹರೆಯದವರಲ್ಲಿ ಮೊಬೈಲ್ ಬಳಕೆ‌ ಹೆಚ್ಚಾಗಿದೆ. ಕಿಶೋರಾವಸ್ಥೆ ತಲುಪುವ ಮುನ್ನವೇ ಲೈಂಗಿಕ ದೃಶ್ಯಗಳನ್ನು ನೋಡಿ ಪ್ರಚೋದನೆಗೆ ಒಳಗಾಗುತ್ತಿದ್ದಾರೆ. ಇದರ ಅರಿವು ಪೋಷಕರಿಗೆ ಇರುವುದಿಲ್ಲ. ಅಲ್ಲದೇ ಇಂತಹ ವರ್ತನೆಗೆ ಮನೋವೈಜ್ಞಾನಿಕ ಕಾರಣಗಳೂ ಇವೆ’ ಎಂದು ಹೇಳುತ್ತಾರೆ ಅವರು. ದಶಕಗಳ ಹಿಂದೆ ಇಂತಹ ವಿಲಕ್ಷಣ ಮನೋಭಾವ ಕಡಿಮೆ ಇತ್ತು. ಅನೇಕ ಕಾರಣಗಳಿಂದ ಇಂತಹ ಪ್ರಕರಣಗಳು ಈಗ ಹೆಚ್ಚಾಗಿವೆ. ಬೇರೆಯವರ ನಗ್ನ ಅಥವಾ ಖಾಸಗಿ ಲೈಂಗಿಕ ದೃಶ್ಯಗಳನ್ನು ಕದ್ದುಮುಚ್ಚಿ ನೋಡುವುದಕ್ಕೆ ಇಂಗ್ಲಿಷ್‌ನಲ್ಲಿ ‘ವೋಯೆರಿಸಂ’ ಎಂಬ ಹೆಸರಿದೆ. ಹಿಂದೆಯೂ ಇಂತಹ ವರ್ತನೆ ತೋರುವವರಿದ್ದರು. ಕದ್ದುಮುಚ್ಚಿ ನೋಡಿದ ದೃಶ್ಯಗಳನ್ನು ಸುಲಭವಾಗಿ ಚಿತ್ರೀಕರಿಸುವ ಅವಕಾಶ ಈಗ ಸಿಕ್ಕಿದೆ. ಇಂತಹ ವಿಡಿಯೊಗಳನ್ನು ಹಂಚಿಕೊಳ್ಳುವುದೂ ಈಗ ಸುಲಭ. ಅದಕ್ಕೆ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ.

‘ಮಕ್ಕಳಲ್ಲಿ ಲೈಂಗಿಕತೆ ಬಗ್ಗೆ ಕುತೂಹಲ ಸಹಜ. ಈ ಕುರಿತ ಸಂದೇಹಗಳನ್ನು ದೊಡ್ಡವರ ಜೊತೆ ಮುಕ್ತವಾಗಿ ಮಾತನಾಡಿ ನಿವಾರಿಸಿಕೊಳ್ಳುವಂತಹ ಸನ್ನಿವೇಶ ಒದಗಿಸಬೇಕು. ಲೈಂಗಿಕ ಶಿಕ್ಷಣಕ್ಕೆ ತುಂಬಾ ಮಹತ್ವ ನೀಡಬೇಕು. ಲೈಂಗಿಕ ಚಟುವಟಿಕೆಗೆ ಪರಸ್ಪರ ಸಮ್ಮತಿ ಅಗತ್ಯ. ಸಮ್ಮತಿ ಇಲ್ಲದೇ ಇಂತಹ ಚಟುವಟಿಕೆಯಲ್ಲಿ ತೊಡಗುವುದು ಅಪರಾಧ. ಅದರ ಪರಿಣಾಮಗಳು ಏನಾಗುತ್ತವೆ ಎಂಬ ಪ್ರಜ್ಞೆಯನ್ನು ಹದಿಹರೆಯದವರಲ್ಲಿ ಬೆಳೆಸಬೇಕು’ ಎಂಬುದು ಅವರ ಸಲಹೆ. ‘ಸಕಾಲದಲ್ಲಿ ಸೂಕ್ತವಾಗಿ ಚಿಕಿತ್ಸೆ ನೀಡಿ ಹದಿಹರೆಯದವರ ಇಂತಹ ವರ್ತನೆ ಸಮಸ್ಯೆಗೆ ಮುಕ್ತಿ ನೀಡಬಹುದು. ಆ ಬಳಿಕವೂ ಅವರ ಜೊತೆ ಸುರಕ್ಷಿತ ಬಾಂಧವ್ಯ ಮುಂದುವರಿಸಬೇಕು. ಅವರ ಮೇಲೆ ನಿರಂತರ ನಿಗಾ ಇಡಬೇಕು. ಚಿಕಿತ್ಸೆ ಬಳಿಕ ಅವರ ಶೈಕ್ಷಣಿಕ ಸಾಧನೆಯೂ ಸುಧಾರಣೆ ಅಗುತ್ತದೆ’ ಎಂದು ಅವರು ಹೇಳುತ್ತಾರೆ.

ಸದ್ಬಳಕೆಯಾಗದ ಮಾಹಿತಿ; ಆಗದ ಜಾಗೃತಿ

ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸಲೆಂದೇ ‘ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್’ ಇದೆ. ಅದರಲ್ಲಿ ಪ್ರಕರಣವನ್ನು ದಾಖಲಿಸಲು ಅವಕಾಶವಿದೆ. ಲೈಂಗಿಕ ಕಿರುಕುಳ ಜೀವಭಯ ಅಥವಾ ಅನ್ಯಕಾರಣದಿಂದ ನಿಮ್ಮ ಗುರುತನ್ನು ಬಹಿರಂಗ ಪಡಿಸದೇ ದೂರು ದಾಖಲಿಸಬಹುದು. ದೂರನ್ನು ದಾಖಲಿಸಿ ಅದು ಯಾವ ಹಂತದಲ್ಲಿದೆ ಎಂಬುದನ್ನು ಅರಿಯಬಹುದು. ಜನರಿಗೆ ವಂಚನೆಯಾಗದಿರಲಿ ಎಂಬ ಉದ್ದೇಶದಿಂದ ಪೊಲೀಸ್ ಇಲಾಖೆಯು ಸೈಬರ್ ಬಳಕೆ ಬೇರೆ ಬೇರೆ ಸ್ವರೂಪದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಆದರೆ ಅಪರಾಧ ಪ್ರಕರಣಗಳು ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ‘ಸೈಬರ್ ಅಪರಾಧ ನಿಯಂತ್ರಣ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಲು ಹೆಸರು ನೋಂದಾಯಿಸಬಹುದು. ಅಲ್ಲದೇ ಸೈಬರ್ ಕಾನೂನು ಮತ್ತು ಸದ್ಬಳಕೆ ಬಗ್ಗೆಯೂ ಮಾಹಿತಿ ಪಡೆಯಬಹುದು. ಆದರೆ ಇಷ್ಟೆಲ್ಲ ಮಾಹಿತಿ ಕಣಜವಿದ್ದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ ಎಂಬುದೇ ಬೇಸರದ ಸಂಗತಿ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪೋರ್ಟಲ್ ವಿಳಾಸ: https://cybercrime.gov.in

ಸಹಾಯವಾಣಿ: 1930

ಸೈಬರ್ ವಂಚನೆಯ ವಿವಿಧ ಸ್ವರೂಪಗಳು

  1. ನಕಲಿ ಖಾತೆ ಇ–ಮೇಲ್ ಸಂದೇಶ ಫೇಸ್‌ಬುಕ್‌ ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ವಿಶ್ವಾಸ ಗಳಿಸಿ ಹಣಕ್ಕೆ ಬೇಡಿಕೆ. ವಿದೇಶಿಯರ ಹೆಸರಲ್ಲಿ ಖಾತೆ ತೆರೆದು ಸ್ನೇಹದ ಕೋರಿಕೆ ಸಲ್ಲಿಸಿ ಸಂಕಷ್ಟ ತೋಡಿಕೊಂಡು ಹಣಕ್ಕೆ ಮೊರೆ ಇಡುತ್ತಾರೆ. ಇಂತಿಂಥ ಊರು ಅಥವಾ ವಿದೇಶದಲ್ಲಿ ಅಪಾಯದಲ್ಲಿ ಸಿಲುಕಿರುವ ಮತ್ತು ಹಣದ ಅಗತ್ಯವಿರುವುದಾಗಿ ಆಪ್ತರು ಸ್ನೇಹಿತರ ಹೆಸರಲ್ಲಿ ನಕಲಿ ಇ–ಮೇಲ್ ಸಂದೇಶ ಬರುತ್ತದೆ.

  2. ವಿಡಿಯೊ ಕಾಲ್ ಸಲಿಗೆ ದುರ್ಬಳಕೆ ಒಂಟಿತನದಿಂದ ಬೇಸತ್ತ ವ್ಯಕ್ತಿಗಳ ಬಗ್ಗೆ ನಿಗಾ ಇಡುವ ವಂಚಕರು ಪದೇ ಪದೇ ಸಂದೇಶ ಕಳುಹಿಸಿ ಅವರ ಮನಸ್ಸು ಗೆಲ್ಲುತ್ತಾರೆ. ಪ್ರೀತಿ ಸಲಿಗೆಯಿಂದ ಮಾತನಾಡಿ ಅವರ ತೀರ ಖಾಸಗಿ ಚಿತ್ರಗಳನ್ನು ಸಂಗ್ರಹಿಸಿ ವಿಡಿಯೊ ಕಾಲ್‌ನಲ್ಲಿ ವಿಡಿಯೊ ಡೌನ್‌ಲೋಡ್ ಮಾಡುತ್ತಾರೆ. ನಂತರ ಹಣ ನೀಡದಿದ್ದರೆ ಚಿತ್ರ ಮತ್ತು ವಿಡಿಯೊಗಳನ್ನು ಬಹಿರಂಗ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಾರೆ.

  3. ಡೆಬಿಟ್ ಕ್ರೆಡಿಟ್ ಕಾರ್ಡ್ ಸ್ಕಿಮ್ಮಿಂಗ್ ಎಟಿಎಂ ಕ್ರೆಡಿಟ್ ಕಾರ್ಡ್‌ಗಳ ಪಾಸ್‌ವರ್ಡ್ (ಪಿನ್) ಅಕ್ರಮವಾಗಿ ಸಂಗ್ರಹಿಸಿ ಆಯಾ ಕಾರ್ಡ್‌ದಾರರ ಖಾತೆಯಲ್ಲಿನ ಹಣವನ್ನು ಕದಿಯಲು ಕೆಲವರು ಪ್ರಯತ್ನಿಸುತ್ತಾರೆ. ಅದಕ್ಕಾಗಿ ವಂಚಕರು ಎಟಿಎಂ ಘಟಕಗಳ ಯಂತ್ರಗಳ ‘ಕೀ ಪ್ಯಾಡ್’ ಸ್ಪಷ್ಟವಾಗಿ ಕಾಣುವಂತೆ ರಹಸ್ಯ ಕ್ಯಾಮೆರಾ ಅಳವಡಿಸುತ್ತಾರೆ. ನಂತರ ನಕಲಿ ಕಾರ್ಡ್ ಸಿದ್ಧಪಡಿಸಿಕೊಂಡು ಪಿನ್ ಬಳಸಿ ಖಾತೆಯಲ್ಲಿನ ಹಣ ಕದಿಯುತ್ತಾರೆ.

  4. ಒಟಿಪಿ ವಂಚನೆ ಬ್ಯಾಂಕ್‌ನ ಹೆಸರಿನಲ್ಲಿ ಮೊಬೈಲ್‌ಗೆ ಸಂದೇಶ ಕಳುಹಿಸಿ ಅಥವಾ ಬ್ಯಾಂಕ್‌ನ ಪ್ರತಿನಿಧಿಗಳು ಎಂದು ಹೇಳಿ ಜನರಿಗೆ ಕರೆ ಮಾಡುವ ವಂಚಕರು ಖಾತೆಯ ಕೈವೈಸಿ ನವೀಕರಣ ಆಗಿಲ್ಲ ಎಂದು ಹೆದರಿಸುತ್ತಾರೆ. ಆಧಾರ್ ಹಾಗೂ ಖಾತೆ ವಿವರ ತೆಗೆದುಕೊಂಡು ಮೊಬೈಲ್‌ಗೆ ಬಂದ ಒನ್ ಟೈಂ ಪಾಸ್‌ವರ್ಡ್‌ (ಒಟಿಪಿ) ಪಡೆದು ವಂಚಿಸುತ್ತಾರೆ. ಮುಗ್ಧರು ಹೆಚ್ಚು ವಂಚನೆಗೆ ಒಳಗಾಗುತ್ತಾರೆ.

  5. ಆನ್‌ಲೈನ್‌ ಮಾರಾಟ ಖರೀದಿ ಬಳಸಿದ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸುವ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುವ ವಂಚಕರು ಕಾರು ಮನೆ ಸೇರಿದಂತೆ ವಿವಿಧ ವಸ್ತುಗಳು ಮಾರಾಟಕ್ಕೆ ಇವೆ ಎನ್ನುತ್ತಾರೆ. ಆದರೆ ಅವೆಲ್ಲವೂ ಸುಳ್ಳಿನಿಂದ ಕೂಡಿರುತ್ತದೆ. ನಿಖರ ಮಾಹಿತಿ ಇರುವುದಿಲ್ಲ. ವಸ್ತುಗಳ ಚಿತ್ರ ತೋರಿಸಿ ಖರೀದಿದಾರರಿಂದ ಹಣ ಪಡೆಯುತ್ತಾರೆ. ಆದರೆ ವಸ್ತುಗಳು ಖರೀದಿದಾರರಿಗೆ ಸಿಗುವುದಿಲ್ಲ.

  6. ನಿರುದ್ಯೋಗಿಗಳಿಗೂ ಸುಲಿಗೆ ನಿರುದ್ಯೋಗಗಳ ಅಸಹಾಯಕತೆ ಮತ್ತು ಸಂಕಷ್ಟ ದುರುಪಯೋಗ ಮಾಡಿಕೊಳ್ಳುವ ವಂಚಕರು ತಮ್ಮ ಮೊಬೈಲ್‌ ನಂಬರ್‌ಗಳನ್ನು ನೀಡಿ ಉದ್ಯೋಗ ಲಭ್ಯವಿದೆ ಎಂದು ಆಶಾಭಾವ ಮೂಡಿಸುತ್ತಾರೆ. ಲಂಚ ಇಲ್ಲವೇ ಶುಲ್ಕದ ರೂಪದಲ್ಲಿ ಹಣ ಪಡೆಯುತ್ತಾರೆ. ಶೈಕ್ಷಣಿಕ ಮತ್ತು ಇನ್ನಿತರ ದಾಖಲೆಪತ್ರಗಳನ್ನೂ ಪಡೆಯುತ್ತಾರೆ. ಆದರೆ ವಂಚನೆಗೆ ಒಳಗಾಗಿದ್ದು ತಡವಾಗಿ ಗೊತ್ತಾಗುತ್ತದೆ.

  7. ಉಡುಗೊರೆ ಆಮಿಷ ಲಿಂಕ್‌ನಿಂದ ಮೋಸ ಬಹುಮಾನ ಗೆಲ್ಲಬಹುದು ಉಡುಗೊರೆ ನಿಶ್ಚಿತ ಎಂದೆಲ್ಲ ಆಮಿಷವೊಡ್ಡಿ ಬೇರೆ ಬೇರೆ ಹೆಸರಿನಲ್ಲಿ ಮೊಬೈಲ್‌ಗೆ ಲಿಂಕ್ (ಎಂಬೇಡೆಡ್‌) ಸಂದೇಶ ಕಳುಹಿಸುತ್ತಾರೆ. ಇದನ್ನು ಕ್ಲಿಕ್ ಮಾಡಿ ವೈಯಕ್ತಿಕ ಮಾಹಿತಿ ದಾಖಲಿಸಿದರೆ ಖಾತೆಯಲ್ಲಿರುವ ಹಣವನ್ನು ವಂಚಕರು ವರ್ಗಾಯಿಸಿಕೊಳ್ಳುತ್ತಾರೆ. ಇದು ವಂಚನೆಯ ಜಾಲ ಎಂಬ ಸುಳಿವು ಸಿಗದಂತೆ ವ್ಯವಸ್ಥಿತವಾಗಿ ಮಾಡಲಾಗುತ್ತದೆ.

  8. ಹೂಡಿಕೆ ಟ್ರೇಡಿಂಗ್ ಆ್ಯಪ್ ವಿವಿಧ ಬ್ಯಾಂಕ್‌ಗಳಲ್ಲಿನ ಹಣದ ವ್ಯವಹಾರ ಶ್ರೀಮಂತರ ಖಾತೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ವಂಚಕರು ಷೇರು ಮಾರುಕಟ್ಟೆ ಸೇರಿದಂತೆ ವಿವಿಧ ವಲಯಗಳಲ್ಲಿ ಹಣ ಹೂಡುವಂತೆ ಪ್ರಚೋದಿಸುತ್ತಾರೆ. ಎಲ್ಲವೂ ಪಾರದರ್ಶಕವಾಗಿದೆ ಎಂಬಂತೆ ನಂಬಿಸುತ್ತಾರೆ. ಹಣ ಹೂಡಿದ ಸ್ವಲ್ಪ ಹೊತ್ತಿನಲ್ಲೇ ಅಥವಾ ದಿನಗಳಲ್ಲೇ ವಂಚಕರು ದುಡ್ಡು ಸಹಿತ ಪರಾರಿ ಆಗುತ್ತಾರೆ. ವಿವಾಹಾಂಕ್ಷಿಗಳ ಹಣವೂ ನಾಪತ್ತೆ ಮದುವೆಗೆಂದೇ ಇರುವ ವಿವಾಹಾಕಾಂಕ್ಷಿಗಳ ಜಾಲತಾಣದಲ್ಲೂ ವಂಚಕರು ಬೇರೆ ಬೇರೆ ಸ್ವರೂಪದಲ್ಲಿ ವಂಚಿಸುತ್ತಾರೆ. ನಕಲಿ ಖಾತೆ ತೆರೆದು ಮದುವೆ ಸೋಗಿನಲ್ಲಿ ಸ್ನೇಹ ಬೆಳೆಸುತ್ತಾರೆ. ಸುತ್ತಾಟ ಭೇಟಿ ಎಂದೆಲ್ಲಾ ಹೇಳಿಕೊಂಡು ಮದುವೆಯಾಗುವುದಾಗಿ ನಂಬಿಸುತ್ತಾರೆ. ಹಣ ಪಡೆದು ಸಂಕಷ್ಟ ಹೇಳಿಕೊಂಡು ಮತ್ತೆ ಸಿಗದಂತೆ ಪರಾರಿಯಾಗುತ್ತಾರೆ. ಅವರ ಪತ್ತೆ ಕಷ್ಟವಾಗುತ್ತದೆ.

ಪೂರಕ ಮಾಹಿತಿ: ಸಂತೋಷ ಜಿಗಳಿಕೊಪ್ಪ, ಮಲ್ಲಿಕಾರ್ಜುನ ನಾಲವಾರ, ಬಸವರಾಜ ಡಿ.ಕೆ, ಆರ್‌. ಜಿತೇಂದ್ರ, ಡಿ.ಎಂ. ಕುರ್ಕೆ ಪ್ರಶಾಂತ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT