ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಚಿಂತಾಜನಕ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗ! ಸಿನಿಮಾಗೆ ಬೇಕು ಜೀವಾನಿಲ
ಚಿಂತಾಜನಕ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗ! ಸಿನಿಮಾಗೆ ಬೇಕು ಜೀವಾನಿಲ
ಮುಚ್ಚಿದ ಬಂಡವಾಳ ಮರುಗಳಿಕೆ ಮಾರ್ಗ l ಒಟಿಟಿಯಲ್ಲೂ ಸ್ಪಂದನೆಯಿಲ್ಲ
Published 12 ಆಗಸ್ಟ್ 2023, 23:30 IST
Last Updated 12 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಅಭಿಲಾಷ್‌ ಪಿ.ಎಸ್‌, ವಿನಾಯಕ ಕೆ.ಎಸ್‌.

‘ಒಟಿಟಿ ವಿಚಾರದಲ್ಲಿ ಕನ್ನಡ ಚಿತ್ರರಂಗವಷ್ಟೇ ಇಷ್ಟು ಕಷ್ಟ ಅನುಭವಿಸುತ್ತಿದೆ ಎನ್ನುವುದು ನನ್ನ ಗಮನಕ್ಕೆ ಬಂದಿರುವ ವಿಷಯ. ದಕ್ಷಿಣ ಭಾರತದಲ್ಲಿ ತೆಲುಗು, ತಮಿಳು ಚಿತ್ರರಂಗದಷ್ಟೇ ಸಂಖ್ಯೆಯಲ್ಲಿ ಕನ್ನಡ ಚಿತ್ರಗಳೂ ತಯಾರಾಗುತ್ತಿವೆ. ಕನ್ನಡದ ವಿಷಯದಲ್ಲಿ ಖಂಡಿತವಾಗಿಯೂ ಒಟಿಟಿಗಳು ತಾರತಮ್ಯ ತೋರುತ್ತಿವೆ. ಅಮೆಜಾನ್‌, ನೆಟ್‌ಫ್ಲಿಕ್ಸ್‌ಗೆ ಕನ್ನಡದ ಚಂದಾದಾರರ ಸಂಖ್ಯೆಯೇನೂ ಕಮ್ಮಿ ಇಲ್ಲ. ಆದರೆ ಇವರು ಕೊಡುವ ಹೆಚ್ಚಿನ ಕಂಟೆಂಟ್‌ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯದ್ದು...’

‘ನಾತಿಚರಾಮಿ’ ಹಾಗೂ ‘ಆ್ಯಕ್ಟ್‌–1978’ ಖ್ಯಾತಿಯ ನಿರ್ದೇಶಕ ಮಂಸೋರೆ ಒಟಿಟಿಯಲ್ಲಿ ಕನ್ನಡ ಚಿತ್ರಗಳಿಗೆ ಆಗುತ್ತಿರುವ ಅನ್ಯಾಯವನ್ನು ನೇರವಾಗಿ ಪ್ರಶ್ನಿಸಿದ್ದು ಹೀಗೆ. 

‘ನಾವೀಗ ಸವಾಲಿನ ಘಟ್ಟದಲ್ಲಿದ್ದೇವೆ. ಸಿನಿಮಾ ಎಲ್ಲಿಗೆ ಮಾಡಬೇಕು; ಚಿತ್ರಮಂದಿರಕ್ಕೋ? ಒಟಿಟಿಗೋ? ಎನ್ನುವ ದ್ವಂದ್ವ ನಮ್ಮನ್ನು ತೀವ್ರವಾಗಿ ಕಾಡುತ್ತಿದೆ...’ ಹೀಗೆಂದವರು ಒಟಿಟಿಗೆ ಹೆಜ್ಜೆ ಇಟ್ಟ ಬಳಿಕ ಜನರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್‌. 

ಕೋವಿಡ್‌ ಭೀತಿ ಸರಿದು ಚಂದನವನ ಕೊಂಚ ನಿರಾತಂಕದಿಂದ ಉಸಿರಾಡಿದ ವರ್ಷ 2022. ‘ಕೆ.ಜಿ.ಎಫ್‌. ಚಾಪ್ಟರ್‌–2’, ‘777 ಚಾರ್ಲಿ’ ಹಾಗೂ ‘ಕಾಂತಾರ’ದ ಯಶಸ್ಸಿನ ಗುಂಗಿನಲ್ಲೇ ಚಂದನವನ ತೇಲಾಡಿದ ವರ್ಷವದು. ಈ ಗುಂಗಿನಲ್ಲೇ 2023ರ ಮೊದಲಾರ್ಧ ಉರುಳಿದೆ. ‘2023ರ ಜನವರಿಯಿಂದ ಜುಲೈ 28 ರವರೆಗೆ 138 ಸಿನಿಮಾಗಳು ಬಿಡುಗಡೆಗೊಂಡಿವೆ’ ಎನ್ನುತ್ತಾರೆ ಕನ್ನಡ ಚಲನಚಿತ್ರಗಳ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯಕುಮಾರ್‌. ಜುಲೈ 21ಕ್ಕೆ ತೆರೆಕಂಡ ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಈ ವರ್ಷದ ಮೊದಲ ಹಿಟ್‌ ಸಿನಿಮಾ. ನಂತರದ ವಾರದಲ್ಲಿ ತೆರೆಕಂಡ ‘ಕೌಸಲ್ಯಾ ಸುಪ್ರಜಾ ರಾಮ’, ‘ನಮೋ ಭೂತಾತ್ಮ–2’ ಕೂಡ ತುಸು ಭರವಸೆ ಮೂಡಿಸಿವೆ. ‘ಆಚಾರ್‌ ಅಂಡ್‌ ಕೋ.’ ಸಿನಿಮಾ ಕುರಿತೂ ಒಳ್ಳೆಯ ಅಭಿಪ್ರಾಯಗಳು ವ್ಯಕ್ತಗೊಂಡವು. ಆದಾಗ್ಯೂ ಒಟ್ಟಾರೆ ಉದ್ಯಮದ ಯಶಸ್ಸಿನ ಪ್ರಮಾಣ ಶೇ 5ಕ್ಕಿಂತ ಹೆಚ್ಚಾಗಿಲ್ಲ. ಇನ್ನೇನು ಈ ಸಿನಿಮಾಗಳು ಒಂದೆರಡು ವಾರ ನೆಲೆ ನಿಲ್ಲಲಿವೆ ಎನ್ನುವ ಸಂದರ್ಭದಲ್ಲಿ ರಜನಿಕಾಂತ್‌ ನಟನೆಯ ‘ಜೈಲರ್‌’ ಸಿನಿಮಾ ತೆರೆಕಂಡಿತು. ಸಿಂಹಪಾಲು ಪರದೆಗಳು ಅದರ ಪಾಲಾದವು. 

ಗಾಯ ವಾಸಿಯಾದರೂ, ಗಾಯದ ಗುರುತು ಕಾಡುವಂತೆ ನಿರೀಕ್ಷಿತ ಮಟ್ಟದಲ್ಲಿ ಚಿತ್ರಮಂದಿರಗಳತ್ತ ಜನರು ಸುಳಿಯುತ್ತಿಲ್ಲ. ಇಳಿಕೆಯಾದ ‘ಸ್ಟಾರ್ಸ್‌’ ಸಿನಿಮಾಗಳ ಸಂಖ್ಯೆ, ಬದಲಾದ ಜನರ ಸಿನಿಮಾ ನಿರೀಕ್ಷೆಯ ಹೊಡೆತಕ್ಕೆ ಏಕಪರದೆಗಳಷ್ಟೇ ಅಲ್ಲ, ಮಲ್ಟಿಪ್ಲೆಕ್ಸ್‌ಗಳೂ ಸಂಕಷ್ಟಕ್ಕೆ ಸಿಲುಕಿವೆ. 

ಮರುಗಳಿಕೆ ಕಠಿಣ: ಹಾಕಿದ ಬಂಡವಾಳದ ಮರುಗಳಿಕೆ ವಿಷಯದಲ್ಲಿ ಮುಗ್ಗರಿಸಿದ ಸಿನಿಮಾಗಳ ಸಂಖ್ಯೆ ದೊಡ್ಡದು. ‘ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ. ಹಿಂದಿ ಡಬ್ಬಿಂಗ್‌ ಹಕ್ಕುಗಳು ಹೋಗುತ್ತಿಲ್ಲ. ಸ್ಯಾಟ್‌ಲೈಟ್‌ ಹಕ್ಕುಗಳು ಸರಿಯಾಗಿ ಮಾರಾಟವಾಗುತ್ತಿಲ್ಲ. ಚಿತ್ರಮಂದಿರದಿಂದ ಮರುಗಳಿಕೆ ಬಹಳ ಕಷ್ಟವಾಗಿದೆ. ₹10 ಬಂಡವಾಳ ಹಾಕಿ ₹8 ವಾಪಸ್‌ ಬಂದರೆ ನಿರ್ಮಾಪಕ ₹2 ನಷ್ಟ ತಡೆದುಕೊಳ್ಳಬಹುದು. ಆದರೆ ಇವತ್ತು ಹಾಕಿದ ₹10 ಬಂಡವಾಳಕ್ಕೆ ₹10 ಪೂರ್ತಿಯಾಗಿ ನಷ್ಟವಾಗುತ್ತಿದೆ. ಹೀಗಾಗಿ ಸಕ್ರಿಯವಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದ ಬಹುತೇಕ ನಿರ್ಮಾಪಕರೆಲ್ಲ ಸಿನಿಮಾ ನಿರ್ಮಾಣದಿಂದಲೇ ಹಿಂದೆ ಸರಿಯುತ್ತಿದ್ದಾರೆ’ ಎನ್ನುತ್ತಾರೆ ಹಿರಿಯ ನಿರ್ಮಾಪಕ ಕೆ.ಮಂಜು.

ಬಹುತೇಕ ಹೊಸಬರ ಚಿತ್ರಗಳು ಇಂದು ಕೇವಲ ಮಲ್ಪಿಪ್ಲೆಕ್ಸ್‌ಗಳಲ್ಲಿ ತೆರೆ ಕಾಣುತ್ತಿವೆ. ಅದಕ್ಕೆ ಕಾರಣ ಏಕಪರದೆ ಚಿತ್ರಮಂದಿರಗಳ ಬಾಡಿಗೆ, ಶುಲ್ಕ ವ್ಯವಸ್ಥೆ. ‘2023ರಲ್ಲಿ ಇಲ್ಲಿಯ ತನಕ ಬಿಡುಗಡೆಯಾದ ಸಿನಿಮಾಗಳ ನಿರ್ಮಾಣಕ್ಕೆ ಕನಿಷ್ಠ ₹200 ಕೋಟಿ ಹೂಡಿಕೆ ಆಗಿರಬಹುದು. ಈ ಪೈಕಿ ಸೂಪರ್‌ಸ್ಟಾರ್‌ಗಳ ಸಿನಿಮಾಗಳನ್ನು ಹೊರಗಿಟ್ಟು, ಮಿಕ್ಕ ಸಿನಿಮಾಗಳ ಒಟ್ಟಾರೆ ಗಳಿಕೆ ಲೆಕ್ಕ ಹಾಕಿದರೆ ₹20 ಕೋಟಿ ದಾಟಿರಲಿಕ್ಕಿಲ್ಲ. ಅಂದರೆ ಉದ್ಯಮದ ನಷ್ಟ ₹180 ಕೋಟಿ. ಒಂದು ಸಿನಿಮಾ ನಿರ್ಮಾಣದ ಕಥೆ ಬದಿಗಿರಲಿ, ಬಿಡುಗಡೆಗೇ ₹15 ಲಕ್ಷ ಖರ್ಚಾಗುತ್ತಿದೆ. ಇದನ್ನೆಲ್ಲ ಗಮನಿಸಿದರೆ ಸಿನಿಮಾ ಮಾಡುವುದಕ್ಕಿಂತ ಬೇರೆ ವಹಿವಾಟು ಮಾಡುವುದು ಉತ್ತಮ ಎನಿಸುತ್ತಿದೆ’ ಎನ್ನುತ್ತಾರೆ ಕೆ.ಮಂಜು.

ಚಿತ್ರಮಂದಿರ (ಸಾಂಕೇತಿಕ ಚಿತ್ರ)
ಚಿತ್ರಮಂದಿರ (ಸಾಂಕೇತಿಕ ಚಿತ್ರ)

ಇಳಿಕೆಯಾದ ಸ್ಯಾಟಲೈಟ್‌ ಹಕ್ಕು ಮಾರಾಟ: ‘ಈ ವರ್ಷ ಬಿಡುಗಡೆಗೊಂಡ ಸಿನಿಮಾಗಳಲ್ಲಿ 20ಕ್ಕಿಂತ ಕಡಿಮೆ ಸಿನಿಮಾಗಳ ಸ್ಯಾಟ್‌ಲೈಟ್‌ ಹಕ್ಕು ಮಾತ್ರ ಮಾರಾಟವಾಗಿದೆ. ನಮ್ಮ ವಾಹಿನಿ ಎರಡು ಸಿನಿಮಾಗಳನ್ನು ಖರೀದಿಸಿದೆ. ಕಳೆದ ವರ್ಷ ನಮ್ಮ ವಾಹಿನಿ ಖರೀದಿಸಿದ್ದು ಹನ್ನೊಂದು ಚಿತ್ರಗಳನ್ನು. ಕೆಲವು ಚಿತ್ರಗಳು ನಮ್ಮದೇ ರಿಯಾಲಿಟಿ ಶೋಗಳ ತೀರ್ಪುಗಾರರ ಸಿನಿಮಾಗಳೆಂಬ ಎಂಬ ಕಾರಣಕ್ಕೆ ಖರೀದಿಯಾಗಿದ್ದವು’ ಎಂದು ಖಾಸಗಿ ವಾಹಿನಿಯ ಹೆಸರು ಹೇಳಲು ಇಚ್ಛಿಸದ ಒಬ್ಬರು ತಿಳಿಸಿದರು.

‘ಒಟಿಟಿಯವರು ನೇರವಾಗಿ ಮಲೆಯಾಳಂ ಸಿನಿಮಾ ಇದ್ದರೆ ತೆಗೆದುಕೊಂಡು ಬನ್ನಿ ಎನ್ನುತ್ತಿದ್ದಾರೆ. ಈ ಹಿಂದೆ ಡಬ್ಬಿಂಗ್‌ ಹಕ್ಕುಗಳನ್ನು ನಂಬಿಕೊಂಡೆ ಕೆಲವು ಸ್ಟಾರ್‌ಗಳ ಕನ್ನಡ ಸಿನಿಮಾಗಳು ನಿರ್ಮಾಣವಾಗುತ್ತಿದ್ದವು. ಈಗ ಹಿಂದಿ ಡಬ್ಬಿಂಗ್‌ ಹಕ್ಕುಗಳು ಮಾರಾಟವಾಗುತ್ತಿಲ್ಲ. ಆಯ್ದ ಸಿನಿಮಾಗಳ ಡಬ್ಬಿಂಗ್‌ ಹಕ್ಕು ಮಾರಾಟವಾಗುತ್ತಿದ್ದರೂ, ಖರೀದಿ ಮೊತ್ತ ಅರ್ಧದಷ್ಟು ಕಡಿಮೆಯಾಗಿದೆ. ಕೆಲವು ಸಿನಿಮಾಗಳ ವಿಮಾನದಲ್ಲಿ ಪ್ರಸಾರ ಹಕ್ಕು(ಏರ್‌ಬೋರ್ನ್‌) ಮಾರಾಟವಾಗಿದೆ’ ಎನ್ನುತ್ತಾರೆ ಸಿನಿಮಾ ಹಕ್ಕುಗಳ ಖರೀದಿ ಸಂಸ್ಥೆಗಳಾದ ಪಾಪ್ಟರ್‌ ಮತ್ತು ಅಲ್ಟ್ರಾ ಮೀಡಿಯಾ ಪ್ರತಿನಿಧಿ ನಿಖಿಲ್‌ ಪೈ.

‘ಈ ವರ್ಷ ಒಟಿಟಿ ನೇರ ಹಕ್ಕು ಮಾರಾಟಗೊಂಡಿರುವ ಕನ್ನಡ ಸಿನಿಮಾಗಳ ಸಂಖ್ಯೆ ಹತ್ತಕ್ಕಿಂತ ಹೆಚ್ಚಿಲ್ಲ. ಬೆರಳೆಣಿಕೆಯಷ್ಟು ಸಿನಿಮಾಗಳು ‘ಪ್ರೈಮ್‌ ವಿಡಿಯೊ ಡೈರೆಕ್ಟ್‌‘ (ಪಿವಿಡಿ–ವೀಕ್ಷಣೆಗೆ ಅನುಗುಣವಾಗಿ ರಾಯಲ್ಟಿ) ಕಾರ್ಯಕ್ರಮದ ಅಡಿಯಲ್ಲಿ ಅಮೆಜಾನ್‌ ಪ್ರೈಂನಲ್ಲಿ ಪ್ರಸಾರಗೊಂಡಿವೆ. ಎರಡು ಸಿನಿಮಾಗಳು 6–9 ತಿಂಗಳ ಎಕ್ಸ್‌ಕ್ಲೂಸಿವ್‌ ರೈಟ್ಸ್‌ (ಹೈಬ್ರಿಡ್‌ ಡೀಲ್‌) ಮಾದರಿಯಲ್ಲಿ ಖರೀದಿಯಾಗಿವೆ’ ಎನ್ನುವುದು ಜೀರೊ ಬಿಟ್‌ರೇಟ್‌ ಸಂಸ್ಥೆಯ ನಿರಂಜನ್‌ ನೀಡುವ ಮಾಹಿತಿ.

ಬಿಗ್‌ ಬಜೆಟ್‌, ಖ್ಯಾತ ಪ್ರೊಡಕ್ಷನ್‌ ಹೌಸ್‌, ಬಿಗ್‌ ಸ್ಟಾರ್ಸ್‌ ಹೊರತುಪಡಿಸಿದ ಹೊಸ ಕನ್ನಡ ಸಿನಿಮಾಗಳನ್ನು ಒಟಿಟಿ ವೇದಿಕೆಗಳು ನೇರವಾಗಿ ಖರೀದಿಸುತ್ತಿಲ್ಲ. ಬದಲಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸದ್ದು ಮಾಡಿದ ಸಿನಿಮಾಗಳನ್ನಷ್ಟೇ ರೆವೆನ್ಯೂ ಶೇರ್‌ (ಹಣ ಹಂಚಿಕೆ ಆಧಾರದ ಮೇಲೆ–PVOD) ಮೂಲಕ ಪಡೆಯುತ್ತಿವೆ. ‌‘ಸಿನಿಮಾವೊಂದಕ್ಕೆ ಗಂಟೆಗೆ ₹4–₹6ರವರೆಗೆ ನಮ್ಮ ಕೈಸೇರುತ್ತದೆ. ಬಿಗ್‌ ಕ್ಯಾನ್ವಾಸ್‌ ಅಥವಾ ಸ್ಟಾರ್‌ಗಳ ಸಿನಿಮಾಗಳನ್ನಷ್ಟೇ ಬಿಡುಗಡೆಗೂ ಮುನ್ನವಷ್ಟೆ ಇಂತಿಷ್ಟು ಎಂದು ನಿಗದಿಪಡಿಸಿ ಖರೀದಿಸುತ್ತಾರೆ. ಇಂಥ ಸಿನಿಮಾಗಳ ಸಂಖ್ಯೆ ಕನ್ನಡದಲ್ಲಿ ವರ್ಷಕ್ಕೆ ನಾಲ್ಕೈದು ಅಷ್ಟೇ! ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡಕ್ಕೆ ಅವಕಾಶ ಇಲ್ಲವೇ ಇಲ್ಲ. ಒಟಿಟಿಗಷ್ಟೇ ಎಂದು ನಿಶ್ಚಯ ಮಾಡಿಕೊಂಡರೆ ಆರಂಭದಿಂದಲೇ ಒಂದಿಷ್ಟು ಖರ್ಚುಗಳನ್ನು ಕಡಿಮೆ ಮಾಡಬಹುದು, ಉಳಿಸಬಹುದು’ ಎನ್ನುತ್ತಾರೆ ನಿರ್ದೇಶಕ ಜಗನ್ನಾಥ್‌.  

‘ನನ್ನ ಸಿನಿಮಾವನ್ನು ಒಟಿಟಿಗೆ ಬರುವ ಮುನ್ನ 35–40 ಸಾವಿರ ಜನರಷ್ಟೇ ಚಿತ್ರಮಂದಿರಗಳಲ್ಲಿ ನೋಡಿದ್ದಾರೆ. ಈ ಸಂದರ್ಭದಲ್ಲಿ ಜನರನ್ನು ದೂರುವ ಬದಲು, ಸಿನಿಮಾವನ್ನು ಎಲ್ಲಿಗೆ ನಿರ್ಮಾಣ ಮಾಡಬೇಕು, ಒಟಿಟಿಗಾ ಅಥವಾ ಚಿತ್ರಮಂದಿರಕ್ಕಾ ಎನ್ನುವ ಪ್ರಶ್ನೆಯನ್ನು ನಾನೇ ಕೇಳಿಕೊಳ್ಳುತ್ತಿದ್ದೇನೆ. ‘ಹೊಂದಿಸಿ ಬರೆಯಿರಿ’ ಸಿನಿಮಾವನ್ನು ಒಟಿಟಿಯಲ್ಲಿ ಎಷ್ಟು ಜನ ನೋಡಿದ್ದಾರೋ ಅಷ್ಟೇ ಜನ ಚಿತ್ರಮಂದಿರಗಳಿಗೆ ಬಂದು ನೋಡಿದ್ದರೆ ನಮಗೆ ಸುಮಾರು ₹15 ಕೋಟಿ ಕಲೆಕ್ಷನ್‌ ಆಗುತ್ತಿತ್ತು. ಒಟಿಟಿಯಲ್ಲಿ ನಮ್ಮ ಸಿನಿಮಾವನ್ನು ಸುಮಾರು 8 ಲಕ್ಷ ಗಂಟೆ ಕಾಲ ಜನರು ನೋಡಿದ್ದಾರೆ. ಇದರಿಂದ ನಮಗೆ ₹34 ಲಕ್ಷ ದೊರೆಯಿತು. ಎಲ್ಲಿಯ ₹34 ಲಕ್ಷ, ಎಲ್ಲಿಯ ₹15 ಕೋಟಿ!’ ಎನ್ನುವುದು ಜಗನ್ನಾಥ್‌ ಅವರ ಅನುಭವದ ಮಾತು. 

ಸಿನಿಮಾ ನೋಡಿ ನಿರ್ಧರಿಸಿ: ‘ಮೊದಲು ಜನರಿಗೆ ಅಂಗೈಯಲ್ಲೇ ಸಿನಿಮಾ ರುಚಿ ಹತ್ತಿಸಿದ ಈ ಒಟಿಟಿಗಳು, ಇದೀಗ ಚಿತ್ರಮಂದಿರಗಳಲ್ಲಿ ಮೂರು ವಾರ ಓಡಿದರಷ್ಟೇ ಸಿನಿಮಾವನ್ನು ಖರೀದಿಸುತ್ತೇವೆ ಎನ್ನುತ್ತಿದೆ. ಇದು ಯಾವ ರೀತಿಯ ವಾದ! ನ್ಯಾಯ? ನನಗಂತೂ ಅರ್ಥವಾಗುತ್ತಿಲ್ಲ. ‘19.20.21’ ಸಿನಿಮಾದ ಪ್ರಸ್ತಾವನೆಯನ್ನು ಸಿನಿಮಾ ನೋಡದೆಯೇ ತಿರಸ್ಕರಿದ್ದಾರೆ. ಸಿನಿಮಾ ನೋಡುವ ಸೌಜನ್ಯವನ್ನು ಅವರು ತೋರಿಸಲಿ. ಸಿನಿಮಾವನ್ನು ನೋಡದೇ ತಿರಸ್ಕರಿಸುವ ಉಡಾಫೆತನ ಕನ್ನಡ ಸಿನಿಮಾಗಳ ಮೇಲೆ ಏಕೆ ಎನ್ನುವುದು ನನ್ನ ಪ್ರಶ್ನೆ’ ಎಂದು ತಮ್ಮ ಅಸಮಾಧಾನವನ್ನು ನಿರ್ದೇಶಕ ಮಂಸೋರೆ ಹೊರಹಾಕುತ್ತಾರೆ.

ನಟಿ, ನಿರ್ಮಾಪಕಿ ರಮ್ಯಾ ಅವರು ‘ಒಟಿಟಿಯವರು ತಮಿಳು, ತೆಲುಗು ಅಷ್ಟೇ ಯಾಕೆ ಮಲಯಾಳಂ ಸಿನಿಮಾಗಳನ್ನು ಖರೀದಿಸುತ್ತಾರೆ. ಆದರೆ ಕನ್ನಡ ಸಿನಿಮಾಗಳನ್ನು ಖರೀದಿಸುತ್ತಿಲ್ಲ’ ಎಂದು ಒಂದು ರಾಷ್ಟ್ರೀಯ ಮಾಧ್ಯಮದ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ್ದರು.

ಸದ್ಯದ ಸ್ಥಿತಿಯಲ್ಲಿ ‘ಅಮೆಜಾನ್‌ ಪ್ರೈಂ’ ಒಂದೇ ಕನ್ನಡದ ಮುಖ್ಯ ಒಟಿಟಿ ವೇದಿಕೆಯಾಗಿ ಗುರುತಿಸಿಕೊಳ್ಳುತ್ತಿದೆ. ಈ ವರ್ಷ ಬಿಡುಗಡೆಯಾದ ಸಿನಿಮಾಗಳ ಪೈಕಿ 'ಆರ್ಕೆಸ್ಟ್ರಾ ಮೈಸೂರು’, ‘ಕಬ್ಜ’, ‘ರಾಘವೇಂದ್ರ ಸ್ಟೋರ್ಸ್‌’, ‘ಗುರುದೇವ ಹೊಯ್ಸಳ’, ‘ರಾಘು’, ‘ಹೊಂದಿಸಿ ಬರೆಯಿರಿ’, ‘ಲವ್‌ ಬರ್ಡ್ಸ್‌’, ‘ಡೇರ್‌ ಡೆವಿಲ್‌ ಮುಸ್ತಾಫಾ’ ಹೀಗೆ ಬೆರಳೆಣೆಕೆಯಷ್ಟೇ ಸಿನಿಮಾಗಳು ಇಲ್ಲಿವೆ. ಉಳಿದಂತೆ ಇತರೆ ಯಾವ ಒಟಿಟಿ ವೇದಿಕೆಯೂ ಒಂದೇ ಒಂದು ಕನ್ನಡ ಸಿನಿಮಾವನ್ನು ಈ ವರ್ಷ ಖರೀದಿಸಿಲ್ಲ. ಈ ಅಂಕಿ–ಅಂಶವೇ ಕನ್ನಡ ಸಿನಿಮಾಗಳಿಗೆ ಎದುರಾಗಿರುವ ‘ಒಟಿಟಿ ಬರ’ಕ್ಕೆ ಕನ್ನಡಿ ಹಿಡಿಯುತ್ತದೆ.    

ಕನಕಪುರದ ವಾಣಿ ಚಿತ್ರಮಂದಿರ
ಕನಕಪುರದ ವಾಣಿ ಚಿತ್ರಮಂದಿರ

ಚಿತ್ರಮಂದಿರಗಳು ಮುಚ್ಚುತ್ತಿವೆ!: ‘ಈ ವರ್ಷ ಕನ್ನಡ ಮಾತ್ರವಲ್ಲ, ಇತರ ಭಾಷೆಗಳ ಯಶಸ್ಸು ಕೂಡ ಕಡಿಮೆ. ‘ಪಠಾಣ್‌’, ‘ಪೊನ್ನಿಯಿನ್‌ ಸೆಲ್ವನ್‌–2’, ‘ಕೇರಳ ಸ್ಟೋರಿ’ ಚಿತ್ರಗಳು ಕೊಂಚ ಜನರನ್ನು ಚಿತ್ರಮಂದಿರಕ್ಕೆ ಕರೆ ತಂದವು. ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಇತ್ತೀಚಿನ ದಿನದಲ್ಲಿ ಜನರನ್ನು ಚಿತ್ರಮಂದಿರಕ್ಕೆ ಕರೆತಂದ ಹೊಸಬರ ಸಿನಿಮಾ. ಸ್ಟಾರ್‌ ಇಲ್ಲದ ಸಿನಿಮಾಗಳಿಂದ ಶುಕ್ರವಾರ, ಶನಿವಾರ, ಭಾನುವಾರ ತಲಾ ಶೋಗೆ ಸರಾಸರಿ ₹2,000 ಸಂಗ್ರಹವಾಗುತ್ತಿದೆ. ಒಂದು ಶೋಗೆ ₹65,000 ಸಂಗ್ರಹವಾಗಬೇಕು. ಈಗಿನ ಸ್ಥಿತಿ ನೋಡಿದರೆ ಚಿತ್ರಮಂದಿರ ಮುಚ್ಚಿ ಅಪಾರ್ಟ್‌ಮೆಂಟ್‌ ಮಾಡುವ ಆಲೋಚನೆಯಿದೆ’ ಎನ್ನುತ್ತಾರೆ ಬೆಂಗಳೂರಿನ ಶ್ರೀನಿವಾಸ, ತುಳಸಿ ಚಿತ್ರಮಂದಿರಗಳ ಮಾಲೀಕರು ಹಾಗೂ ಚಿತ್ರ ನಿರ್ಮಾಪಕರೂ ಆಗಿರುವ ದೇವೇಂದ್ರ ರೆಡ್ಡಿ.

‘ರಾಜ್ಯದ 150ಕ್ಕೂ ಅಧಿಕ ಚಿತ್ರಮಂದಿರಗಳು ದೊಡ್ಡ ಚಿತ್ರಗಳು ಬಿಡುಗಡೆಗೊಂಡಾಗ ಮಾತ್ರ ಬಾಗಿಲು ತೆರೆಯುತ್ತವೆ. ರಾಜ್ಯದಲ್ಲಿ ಹೆಸರಿಗೆ 650 ಏಕಪರದೆ ಚಿತ್ರಮಂದಿರಗಳಿರಬಹುದು. ರೋಗಿ ಬಂದಾಗ ಆಸ್ಪತ್ರೆ ಆರಂಭ ಎನ್ನುವಂತಾಗಿದೆ ಸ್ಥಿತಿ. ಆದಾಯ ಗಳಿಸಿಕೊಡಬಲ್ಲ ಆರೆಂಟು ಸಿನಿಮಾಗಳು ವರ್ಷಕ್ಕೆ ಸಿಗುತ್ತಿಲ್ಲ’ ಎನ್ನುತ್ತಾರೆ ಸಿನಿಮಾ ವಿತರಕ ಮಾರ್ಸ್‌ ಸುರೇಶ್‌. 

ಸೂಪರ್‌ಸ್ಟಾರ್‌ ಸಿನಿಮಾಗಳ ಕೊರತೆ: ತುಮಕೂರಿನ ಮಾರುತಿ ಚಿತ್ರಮಂದಿರದ ಮಾಲೀಕರು ಬಾಡಿಗೆ ಕಟ್ಟಲಾಗದ, ಸಿಬ್ಬಂದಿ ವೇತನ ನೀಡಲಾಗದ ದುಃಸ್ಥಿತಿಯ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಸ್ಟಾರ್‌ಗಳು ವರ್ಷ–ಎರಡು ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. 1980ರ ದಶಕದಂತೆ ಪ್ರತಿ ಸೂಪರ್‌ ಸ್ಟಾರ್‌ಗಳು ವರ್ಷಕ್ಕೆ ಕನಿಷ್ಠ 3–4 ಸಿನಿಮಾ ಮಾಡಬೇಕು. ವರ್ಷಕ್ಕೆ 25–30 ಸ್ಟಾರ್‌ ಸಿನಿಮಾ ಬಂದರೆ ಮಾತ್ರ ಚಿತ್ರಮಂದಿರ ಮತ್ತು ಚಿತ್ರರಂಗದ ಉಳಿವು ಎಂಬುದು ಬಹುತೇಕ ಚಿತ್ರಮಂದಿರ ಮಾಲೀಕರ ಅಭಿಪ‍್ರಾಯ.

ಕನ್ನಡಕ್ಕೆ ಕೊನೆ ಸ್ಥಾನ: ‘ದಕ್ಷಿಣ ಭಾರತದ ಚಿತ್ರರಂಗದಲ್ಲಿ ವಹಿವಾಟುವಾರು ನೋಡಿದರೆ ಕನ್ನಡ ಕೊನೆಯ ಸ್ಥಾನದಲ್ಲಿದೆ. ಚಿತ್ರಮಂದಿರ ಬದಿಗಿಟ್ಟು ಎಲ್ಲ ಹಕ್ಕುಗಳ ಮಾರಾಟದ ದೃಷ್ಟಿಯಿಂದ ಪಟ್ಟಿ ನೋಡಿದರೆ ಮಲಯಾಳಂಗೆ ಮೊದಲ ಸ್ಥಾನ. ‘ಮಲಯಾಳಂನ ಹತ್ತು ಸಿನಿಮಾ ಹಕ್ಕುಗಳ ಖರೀದಿಗಾಗಿ ವಾಹಿನಿಗಳು, ಒಟಿಟಿಗೆ ಕಳುಹಿಸಿದರೆ ಒಂಬತ್ತಕ್ಕೆ ಬೆಲೆ ಎಷ್ಟು ನೀಡಬಹುದೆಂಬ ಪ್ರತಿಕ್ರಿಯೆ ಬರುತ್ತಿದೆ. ಆದರೆ ಕನ್ನಡದ ಹತ್ತು ಸಿನಿಮಾ ಕಳುಹಿಸಿದರೆ ಒಂದಕ್ಕೆ ಬೆಲೆ ನಿಗದಿಯಾಗಿ ಬಂದರೆ ಸಾಧನೆ ಎಂಬ ಸ್ಥಿತಿ ಇದೆ. ಈ ವಿಷಯದಲ್ಲಿ ಮಲಯಾಳಂ ಅಗ್ರಸ್ಥಾನದಲ್ಲಿದೆ. ತಮಿಳು, ತೆಲುಗು ನಂತರದ ಸ್ಥಾನದಲ್ಲಿವೆ’ ಎನ್ನುತ್ತಾರೆ ಪಾಪ್ಟರ್‌ ಮತ್ತು ಅಲ್ಟ್ರಾ ಮೀಡಿಯಾ ಪ್ರತಿನಿಧಿ ನಿಖಿಲ್‌ ಪೈ.

ತೆಲುಗಿನ ‘ಬಲಗಂ’, ‘ದಾಸ್ ಕಾ ಧಮ್ಕಿ’, ‘ವಿರೂಪಾಕ್ಷ’, ತಮಿಳಿನ ‘ಪಾತು ತಲ’, ‘ಪಿಚ್ಚೈಕಾರನ್‌ 2’, ಮಲಯಾಳಂನ ‘2018’, ‘ರೋಮಾಂಚನಂ’, ‘ಪಾಚುಂ ಅದ್ಭುತವೆಳಕಂ’, ‘ಇರಟ್ಟ’ ಸಿನಿಮಾಗಳು ಗಳಿಕೆವಾರು ಯಶಸ್ಸು ದಾಖಲಿಸಿವೆ. ಮೊನ್ನೆಯಷ್ಟೇ ತೆರೆಕಂಡ ‘ಜೈಲರ್‌’ ತಮಿಳು ಸಿನಿಮಾ ರಜನೀಕಾಂತ್ ಕಾರಣದಿಂದಾಗಿ ಸದ್ದು ಮಾಡುತ್ತಿದೆ. ಇದರ ಹೊರತಾಗಿ ಕೆಲ ಸಿನಿಮಾಗಳು ಒಟಿಟಿಗೆ ಬಂದ ನಂತರ ಜನಪ್ರಿಯಗೊಂಡಿವೆ. ಬಾಲಿವುಡ್‌ನಿಂದಲೂ ಚಿತ್ರಮಂದಿರಕ್ಕೆ ಜನರನ್ನು ಕರೆತಂದ ಚಿತ್ರಗಳ ಸಂಖ್ಯೆ ಈ ವರ್ಷ ಬಹಳ ಕಡಿಮೆ. 

ಪರಿಹಾರವೇನು?

‘ಒಬ್ಬನೇ ಸಾವಿರ ಕೋಟಿ ರೂಪಾಯಿ ಬಾಚಿಕೊಂಡು ಹೋದರೆ ಉದ್ಯಮ ಹೇಗೆ ಉಳಿಯುತ್ತದೆ? 100 ಸಿನಿಮಾ ₹1000 ಕೋಟಿ ಹಂಚಿಕೊಳ್ಳಬೇಕು. ಚಿತ್ರಗಳು ಬಿಡುಗಡೆಯಾಗಿ 8 ವಾರಗಳ ಬಳಿಕ ಒಟಿಟಿಗೆ ಬರಬೇಕು. ಟಿಕೆಟ್‌ ದರ ಕೂಡ ಪ್ರೇಕ್ಷಕರಿಗೆ ಹೊರೆಯಾಗದಂತಿರಬೇಕು’ ಎನ್ನುತ್ತಾರೆ ಮಾರ್ಸ್‌ ಸುರೇಶ್‌.

ಡೇಟ್ಸ್‌ ನೋಡಿ ಸಿನಿಮಾ ಮಾಡಬೇಡಿ: ‘ತುಂಬ ಸಲ ದೊಡ್ಡ ಸ್ಟಾರ್‌ ನಟನ ಡೇಟ್‌ ಸಿಕ್ಕಿದೆ ಎಂದು ಸಿನಿಮಾ ಮಾಡುತ್ತೇವೆ. ಅದು ಪ್ರೇಕ್ಷಕರ ದೃಷ್ಟಿಕೋನದಲ್ಲಿ ವರ್ಕ್‌ ಆಗದಿರುವ ಸಾಧ್ಯತೆಯಿದೆ. ಹೊಂಬಾಳೆ ಫಿಲ್ಮ್ಸ್‌ನಲ್ಲಿ ಮೊದಲು ಕಥೆ ನೋಡುತ್ತೇವೆ. ತುಂಬ ಸಲ ಕಥೆ ಚೆನ್ನಾಗಿರುತ್ತದೆ. ಕಥೆಯನ್ನು ಸಮರ್ಥವಾಗಿ ತೆರೆಯ ಮೇಲೆ ಕಟ್ಟಿಕೊಡಬಲ್ಲ ನಿರ್ದೇಶಕನೂ ಮುಖ್ಯವಾಗುತ್ತಾನೆ. ಇದರ ನಂತರ ಕಥೆಗೆ ಸೂಕ್ತ ನಾಯಕನನ್ನು ಹುಡುಕುತ್ತೇವೆ. ವಿತರಕರಿಗೆ ಇಂದು ಚಿತ್ರಮಂದಿರದಲ್ಲಿ ತುಂಬ ದಿನ ಓಡಬಲ್ಲ ಸಿನಿಮಾಗಳು ಅಗತ್ಯವಿದೆ. ರಾಜ್‌ಕುಮಾರ್‌ ಸಿನಿಮಾಗಳಿಗೆ ಬರುತ್ತಿದ್ದ ಜನ ಈಗ ಮತ್ತೆ ಚಿತ್ರಮಂದಿರಕ್ಕೆ ಬರುವಂತಾಗಬೇಕು. ಅಂತಹ ಸಿನಿಮಾಗಳು ಅಗತ್ಯವಿದೆ. ಅಂತಿಮವಾಗಿ ಕಥೆಗಾರರು ಮತ್ತು ನಿರ್ದೆಶಕರನ್ನೇ ಉತ್ತೇಜಿಸಬೇಕು. ಅವರೇ ಚಿತ್ರರಂಗದ ಅಡಿಪಾಯ’ ಎನ್ನುತ್ತಾರೆ ಹೊಂಬಾಳೆ ಫಿಲ್ಮ್ಸ್‌ನ ಚಲುವೆಗೌಡ.

ಮಂಸೋರೆ
ಮಂಸೋರೆ
ನಮ್ಮಂತಹ ಪ್ರಯೋಗಶೀಲ ಸಿನಿಮಾಗಳಿಗೆ ಒಟಿಟಿ ಅದ್ಭುತ ವೇದಿಕೆಯಾಗಿದೆ. ‘ರಾಘು’ ಸಿನಿಮಾ ಕನ್ನಡದಲ್ಲಷ್ಟೇ ಬಿಡುಗಡೆಯಾಗಿತ್ತು. ಒಟಿಟಿಗೆ ಬಂದ ಬಳಿಕ ತಮಿಳು ತೆಲುಗು ಪ್ರೇಕ್ಷಕರೂ ಸಿನಿಮಾ ನೋಡಿ ಟ್ವೀಟ್‌ ಮಾಡಿದ್ದಾರೆ. ಒಟಿಟಿಯಲ್ಲಿ ಬಿಡುಗಡೆಯಾದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಸಿನಿಮಾಗೆ ಉತ್ತಮವಾದ ಪ್ರಚಾರ ನೀಡಿದರೆ ರೆವೆನ್ಯೂ ಶೇರಿಂಗ್‌ ಮಾದರಿಯೂ ಆದಾಯದ ವೇದಿಕೆಯಾಗುತ್ತದೆ.
–ಆನಂದ್‌ ರಾಜ್‌ ‘ರಾಘು’ ಸಿನಿಮಾ ನಿರ್ದೇಶಕ.
ಹೊಸಬರ ಸಿನಿಮಾಗಳಿಗೆ ಸವಾಲುಗಳಿಲ್ಲ ಎಂದಲ್ಲ. ಆದರೆ ಸೋಲಿಗೆ ಯಾರನ್ನೋ ದೂರಲು ಸಾಧ್ಯವಿಲ್ಲ. ನಾವು ಈ ಸವಾಲುಗಳನ್ನು ದಾಟುವುದನ್ನು ಕಲಿಯುತ್ತ ಹೋಗುತ್ತೇವೆ. ಚಿತ್ರಮಂದಿರದಲ್ಲಿ ಜನ ಬಂದಿಲ್ಲ ಎಂಬ ಕಾರಣಕ್ಕೆ ಬೇರೆ ಯಾವ ವೇದಿಕೆಗಳು ಸಿಗದಂತಾಗಿರುವುದು ನಿಜ.
–ಸುನೀಲ್‌ ಮೈಸೂರು ‘ಆಕೆಸ್ಟ್ರಾ ಮೈಸೂರು’ ಸಿನಿಮಾ ನಿರ್ದೇಶಕ.
ಹರೀಶ್‌ ಮಲ್ಯ
ಹರೀಶ್‌ ಮಲ್ಯ
‘ಇವತ್ತು ಹಾಲು ಮೊಸರನ್ನು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡುವ ಕಾಲಘಟ್ಟದಲ್ಲಿದ್ದೇವೆ. ಸದ್ಯ ಮನರಂಜನೆಗಾಗಿ ಸಿನಿಮಾವನ್ನೇ ಹೋಗಿ ನೋಡಬೇಕು ಅಂತಿಲ್ಲ. ಅತ್ಯುತ್ತಮ ಸಿನಿಮಾಗಳು ಅಂಗೈ ತುದಿಯಲ್ಲಿ ಒಟಿಟಿಯಲ್ಲಿ ಸಿಗುತ್ತಿವೆ. ಚಿತ್ರಮಂದಿರದ ಎಫೆಕ್ಟ್‌ ಕೂಡ ಇವತ್ತು ಮನೆಯಲ್ಲೇ ಸಿಗುತ್ತದೆ. ಇಷ್ಟೆಲ್ಲ ಸವಾಲುಗಳನ್ನು ಮೀರಿದ ಸಿನಿಮಾ ಗೆಲ್ಲುತ್ತದೆ.
–ಹರೀಶ್‌ ಮಲ್ಯ ಸಿನಿಮಾ ಪ್ರೇಮಿ ಹಾಗೂ ವಿಮರ್ಶಕ  

ಈ ವರ್ಷ 2 ಸಿನಿಮಾ ಖರೀದಿ!

‘ಈ ವರ್ಷ ‘ವೇದ’ ಮತ್ತು ‘ಕಬ್ಜ’ ಸಿನಿಮಾಗಳ ಸ್ಯಾಟ್‌ಲೈಟ್‌ ಹಕ್ಕು ಖರೀದಿಸಿದ್ದೇವೆ. ‘ವೇದ’ ಹಿಂದಿನ ವರ್ಷದ ಅಂತ್ಯದಲ್ಲಿ ಬಿಡುಗಡೆಗೊಂಡ ಸಿನಿಮಾ. ವಾಹಿನಿಯಲ್ಲಿ ಒಂದು ಸಿನಿಮಾ ಖರೀದಿಸಿ ಪ್ರಸಾರ ಮಾಡಿದರೆ ಅದರ ಮೊದಲ ಪ್ರಸಾರದಲ್ಲಿ ಬರುವ ಜಾಹೀರಾತುಗಳಿಂದ ನಮಗೆ ಖರೀದಿ ಹಣ ಮರುಗಳಿಕೆಯಾಗಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಹಕ್ಕಿನ ಬೆಲೆ ಹೆಚ್ಚಾಗಿದ್ದು ಖರೀದಿ ಹಣ ಮರುಗಳಿಕೆ ಕಷ್ಟವಾಗಿದೆ. 2018ರಿಂದ ನಮ್ಮ ವಾಹಿನಿ 130ಕ್ಕೂ ಹೆಚ್ಚು ಸಿನಿಮಾಗಳನ್ನು ಖರೀದಿಸಿತ್ತು. ಆದರೆ ಕಳೆದ ವರ್ಷದಿಂದ ಸಿನಿಮಾ ಹಕ್ಕು ಖರೀದಿ ಕಷ್ಟವಾಗಿದೆ. ಹೊಸ ಸಿನಿಮಾಗಳಿಗೆ ಟಿಆರ್‌ಪಿ ಬರುವುದಿಲ್ಲ. ಸ್ಟಾರ್‌ ಸಿನಿಮಾಗಳು ದುಬಾರಿ. ಹೀಗಾಗಿ ವರ್ಷಕ್ಕೆ ಆರೆಂಟು ಸಿನಿಮಾಗಳನ್ನು ಖರೀದಿಸಲು ಮಾತ್ರ ಸಾಧ್ಯವಾಗುತ್ತಿದೆ’ ಎನ್ನುತ್ತಾರೆ ಕಲರ್ಸ್‌ ಕನ್ನಡ ವಾಹಿನಿ ಮುಖ್ಯಸ್ಥ ಪ್ರಶಾಂತ್‌ ನಾಯಕ್‌.  ‘ಒಟಿಟಿಗೆ ಖರೀದಿಸಿದಾಗಲೂ ಹೊಸ ಚಂದಾದಾರಿಕೆ ಗುರಿ ಇರುತ್ತದೆ. ಜೊತೆಗೆ ನಾವು ಪ್ರಚಾರ ಮಾಡಲು ಒಂದಷ್ಟು ಲಕ್ಷ ಖರ್ಚಾಗುತ್ತದೆ. ಅದರ ಅರ್ಧದಷ್ಟು ಆದಾಯ ಮರಳಿ ಬರುವುದಿಲ್ಲ. ಡಬ್ಬಿಂಗ್‌ ಸಿನಿಮಾಗಳು ಇದಕ್ಕಿಂತ ಹೆಚ್ಚಿನ ಟಿಆರ್‌ಪಿ ನೀಡುತ್ತವೆ. ಬೇರೆ ಭಾಷೆಗಳಂತೆ ನಮ್ಮಲ್ಲಿಯೂ ಚಿತ್ರಮಂದಿರಗಳಲ್ಲಿ ಗೆಲ್ಲುವ ಸಿನಿಮಾಗಳ ಸಂಖ್ಯೆ ಹೆಚ್ಚಿದ್ದರೆ ಸ್ಯಾಟ್‌ಲೈಟ್‌ ಹಕ್ಕು ಖರೀದಿ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ’ ಎಂಬುದು ಪ್ರಶಾಂತ್‌ ನಾಯಕ್‌ ಅಭಿಮತ.

ಪ್ರಶಾಂತ್‌ ನಾಯಕ್‌
ಪ್ರಶಾಂತ್‌ ನಾಯಕ್‌

‘ಡೈನಾಮಿಕ್‌ ಪ್ರೈಸಿಂಗ್‌’ ಚರ್ಚೆ

ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ‘ಡೈನಾಮಿಕ್‌ ಪ್ರೈಸಿಂಗ್‌’ ಮಾದರಿಯನ್ನು ಜಾರಿಗೆ ತರುವ ಕುರಿತು ಕನ್ನಡದ ಪ್ರಮುಖ ವಿತರಕ ಸಂಸ್ಥೆ ಕೆಆರ್‌ಜಿ ಸ್ಟುಡಿಯೋಸ್‌ ಚಿಂತಿಸುತ್ತಿದೆ. ಈ ಕುರಿತು ಟ್ವೀಟ್‌ ಒಂದರಲ್ಲಿ ನಿರ್ಮಾಪಕ ಕಾರ್ತಿಕ್‌ ಗೌಡ ಹೀಗಂದಿದ್ದಾರೆ. ‘ಸಿನಿಮಾವೊಂದು ನಿಗದಿತ ಟಿಕೆಟ್‌ ದರದೊಂದಿಗೆ ಆರಂಭವಾಗಲಿದ್ದು ಪ್ರೇಕ್ಷಕರ ಸಂಖ್ಯೆ ಹೆಚ್ಚಿದಂತೆ ಹಂತ ಹಂತವಾಗಿ ಟಿಕೆಟ್‌ ದರ ಏರಿಕೆ ಮಾಡುವ ಮಾದರಿ ಇದಾಗಿದೆ. ಈ ಕುರಿತು ಪ್ರದರ್ಶಕರ ಜೊತೆ ಕೆಆರ್‌ಜಿ ಮಾತುಕತೆ ನಡೆಸುತ್ತಿದೆ. ಉದಾಹರಣೆಗೆ ಆರಂಭದಲ್ಲಿ ಶೇ 25 ಸೀಟುಗಳು ಭರ್ತಿಯಾಗುವವರೆಗೆ ಒಂದು ಟಿಕೆಟ್‌ ದರ ₹50 ಇರಲಿದ್ದು ನಂತರದಲ್ಲಿ ಪ್ರತಿ ಶೇ 10 ಸೀಟುಗಳ ಭರ್ತಿಗೆ ಟಿಕೆಟ್‌ ದರ ಶೇ 20 ಏರಿಕೆ ಮಾಡಿದರೆ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆಯೂ ಏರಿಕೆಯಾಗಲಿದೆ. ಕೆಲವು ಮಲ್ಟಿಪ್ಲೆಕ್ಸ್‌ಗಳು ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿರುವ ಸಿನಿಮಾಗಳಿಗೆ ಇದೇ ಮಾದರಿ ಅನುಸರಿಸುತ್ತಿವೆ’ ಎಂದಿದ್ದಾರೆ ಕಾರ್ತಿಕ್‌.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT