ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಒಳನೋಟ | ಕಾನೂನಿದೆ; ರಕ್ಷಣೆ ಇಲ್ಲ!
ಒಳನೋಟ | ಕಾನೂನಿದೆ; ರಕ್ಷಣೆ ಇಲ್ಲ!
ಜನರ ಶೋಕಿಗಾಗಿ ಅಪಾಯ ಎದುರಿಸುತ್ತಿರುವ ಕಾಡುಪ್ರಾಣಿಗಳು
Published 4 ನವೆಂಬರ್ 2023, 20:33 IST
Last Updated 4 ನವೆಂಬರ್ 2023, 20:33 IST
ಅಕ್ಷರ ಗಾತ್ರ

‘ನಮ್ಮದು ಕೃಷಿ ಕುಟುಂಬ. ಮಗನಿಗೆ ವ್ಯವಸಾಯ ಬಿಟ್ಟರೆ ಬೇರೆ ವೃತ್ತಿ ಗೊತ್ತಿಲ್ಲ. ಅವನಿಗೆ ಚಿನ್ನದ ಪೆಂಡೆಂಟ್‌ ಮಾಡಿಸಿಕೊಟ್ಟಿದ್ದು ನಾನೇ. ಆದರೆ, ಅದರೊಳಗಿರುವ ಹುಲಿ ಉಗುರು ಅಸಲಿಯೋ ಅಥವಾ ನಕಲಿಯೋ ಎಂಬುದು ನನಗೆ ತಿಳಿದಿಲ್ಲ’

‘ರಾಜಕಾರಣಿಗಳ ಮಕ್ಕಳು, ಸಿನಿಮಾ ನಟರು ಕೂಡ ಪೆಂಡೆಂಟ್‌ ಧರಿಸಿದ್ದಾರಲ್ಲವೇ? ತಪಾಸಣೆಗೂ ಮೊದಲು ಅವರಿಗೆ ಅರಣ್ಯ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಆದರೆ, ನನ್ನ ಮಗನನ್ನು ಏಕಾಏಕಿ ಬಂಧಿಸಿದ್ದಾರೆ. ಅವರಿಗೊಂದು ನ್ಯಾಯ; ನಮಗೊಂದು ನ್ಯಾಯವೇ?’ 

‘ಬಿಗ್‌ಬಾಸ್’ ಸ್ಪರ್ಧಿ ವರ್ತೂರು ಸಂತೋಷ್‌ ಅವರ ತಾಯಿ ಮಂಜುಳಾ ಅವರು, ತಮ್ಮ ಮಗನ ಬಂಧನದ ವೇಳೆ ಮಾಧ್ಯಮಗಳ ಮೂಲಕ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಮುಂದಿಟ್ಟಿದ್ದ ಪ್ರಶ್ನೆ ಇದು. ಸದ್ಯ ಸಂತೋಷ್‌ಗೆ ಜಾಮೀನು ಸಿಕ್ಕಿದೆ. ಆದರೆ, ಅವರ ತಾಯಿ ಕೇಳಿದ ಪ್ರಶ್ನೆಗೆ ಉತ್ತರ ಮಾತ್ರ ಕನ್ನಡಿಯೊಳಗಿನ ಗಂಟಾಗಿದೆ. 

ಹುಲಿ ಉಗುರು ಪೆಂಡೆಂಟ್‌ ಧರಿಸಿದ್ದ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲೆಯ ಖಾಂಡ್ಯ ಮಾರ್ಕಂಡೇಶ್ವರ ದೇವಸ್ಥಾನದ ಅರ್ಚಕರಾದ ಕೃಷ್ಣಾನಂದ ಹೊಳ್ಳ ಹಾಗೂ ನಾಗೇಂದ್ರ ಜೋಯಿಸ್‌ ಅವರನ್ನೂ ಬಂಧಿಸಲಾಯಿತು. ಸದ್ಯ ವಶಪಡಿಸಿಕೊಂಡಿರುವ ಎಲ್ಲಾ ಪೆಂಡೆಂಟ್‌ಗಳನ್ನು ಪರಿಶೀಲನೆಗಾಗಿ ಇಲಾಖೆಯು ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆಗೆ ಕಳುಹಿಸಿಕೊಟ್ಟಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್‌ 40ರ ಅನ್ವಯ ಪರಿಚ್ಛೇದ 1ರ ಅಡಿ ನಿರ್ದಿಷ್ಟಪಡಿಸಿದ ಯಾವುದೇ ಬಂಧಿತ ಪ್ರಾಣಿ, ಪ್ರಾಣಿಗಳ ಅವಯವ, ಟ್ರೋಫಿ ಅಥವಾ ಸಂಸ್ಕರಿಸದಿರುವ ಟ್ರೋಫಿ ಇಟ್ಟುಕೊಳ್ಳುವಂತಿಲ್ಲ.

ಇದೇ ಸೆಕ್ಷನ್‌ನ 2ಎ ಅನ್ವಯ ಪ್ರಮಾಣ ಪತ್ರ ಹೊಂದಿರುವ ವ್ಯಕ್ತಿ ಹೊರತುಪಡಿಸಿ ಉಳಿದವರು ವನ್ಯಜೀವಿ ಟ್ರೋಫಿಗಳನ್ನು ಸಂಗ್ರಹಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಅಂತಹ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲು ಸಹಾಯಕ ಅರಣ್ಯಾಧಿಕಾರಿ ದರ್ಜೆಗಿಂತ ಕಡಿಮೆ ಇಲ್ಲದ ದರ್ಜೆಯ ಅಧಿಕಾರಿಗೆ ಸೆಕ್ಷನ್‌ 41ರ ಅಡಿ ಅವಕಾಶ ಕಲ್ಪಿಸಲಾಗಿದೆ. ಆದರೆ, ವಿಚಾರಣೆ ಹಾಗೂ ತಪಾಸಣೆಗೂ ಮೊದಲು ಸಂಬಂಧಪಟ್ಟವರಿಗೆ ಮೊದಲು ನೋಟಿಸ್‌ ನೀಡಬೇಕಿದೆ ಎಂದು ಕಾಯ್ದೆ ಹೇಳುತ್ತದೆ. 

ಸಂತೋಷ್‌ ಹಾಗೂ ಅರ್ಚಕರ ಬಂಧನ ಪ್ರಕರಣದಲ್ಲಿ ಅರಣ್ಯ ಅಧಿಕಾರಿಗಳು ತಳೆದ ಇಬ್ಬುಗೆಯ ನೀತಿಯು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಸೆಲೆಬ್ರಿಟಿ ಮತ್ತು ಪ್ರಭಾವಿಗಳಾದ ನಟ ದರ್ಶನ್‌, ಜಗ್ಗೇಶ್‌, ನಿಖಿಲ್‌ ಕುಮಾರಸ್ವಾಮಿ, ಮೃಣಾಲ್ ಹೆಬ್ಬಾಳಕರ ವಿರುದ್ಧ ತಕ್ಷಣ ಬಂಧನದಂತಹ ಕಾನೂನು ಕ್ರಮಕ್ಕೆ ಮುಂದಾಗದಿರುವ ಅಧಿಕಾರಿಗಳ ಹಿಂಜರಿಕೆ ಹಿಂದೆ ರಾಜಕಾರಣಿಗಳ ಒತ್ತಡವಿರುವ ಸಾಧ್ಯತೆಯಿದೆ ಎಂಬುದು ಜನರ ಆರೋಪ.

ವನ್ಯಜೀವಿಗಳ ಟ್ರೋಫಿ ಇರಿಸಿಕೊಳ್ಳಲು ಅರಣ್ಯಇಲಾಖೆಯ ಪರವಾನಗಿ ಖಂಡಿತವಾಗಿಯೂ ಬೇಕಾಗುತ್ತದೆ. ‘ಯಾವುದೇ ವ್ಯಕ್ತಿಯ ಮನೆಯಲ್ಲಿ ವನ್ಯಜೀವಿ ಟ್ರೋಫಿ‌ಗಳನ್ನು ಸಂಗ್ರಹಿಸಿ ಇರಿಸಿಕೊಳ್ಳುವುದು ಕಾನೂನುಬಾಹಿರವಾಗಲಿದೆ. ಪೂರ್ವಿಕರಿಂದ ಪಡೆದಿದ್ದರೂ ಅಂತಹ ಟ್ರೋಫಿಗಳಿಗೆ ಸೆಕ್ಷನ್‌ 42ರ ಅನ್ವಯ ಒಡೆತನದ ಪ್ರಮಾಣಪತ್ರ ಇರಬೇಕು’ ಎನ್ನುತ್ತಾರೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮಲ್ಲೇಶಪ್ಪ.

ದೇಶದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ 1,800ಕ್ಕೂ ಹೆಚ್ಚು ಪ್ರಾಣಿಗಳು, ಸಸ್ಯಗಳು, ಪಕ್ಷಿಗಳು, ಜಲಚರಗಳು, ಉಭಯವಾಸಿಗಳು, ಸರೀಸೃಪಗಳ ಬೇಟೆ ಹಾಗೂ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

ಜಾಗತಿಕ ಮಟ್ಟದ ಅಕ್ರಮ ವ್ಯಾಪಾರದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆಗೆ ಅಗ್ರಸ್ಥಾನವಿದೆ. ಎರಡನೇ ಸ್ಥಾನದಲ್ಲಿ ಶಸ್ತ್ರಾಸ್ತ್ರಗಳ ಮಾರಾಟ ದಂಧೆಯಿದೆ. ನಂತರದ್ದು ವನ್ಯಜೀವಿಗಳ ವ್ಯಾಪಾರವಾಗಿದೆ. ವನ್ಯಜೀವಿಗಳ ಅಪರಾಧ ಮತ್ತು ವ್ಯಾಪಾರ ತಡೆಗೆ ಶ್ರಮಿಸುತ್ತಿರುವ ‘ಟ್ರಾಫಿಕ್‌’ ಸಂಸ್ಥೆಯ ವರದಿ ಪ್ರಕಾರ ಜಾಗತಿಕವಾಗಿ ವನ್ಯಜೀವಿ ವ್ಯಾಪಾರದ ವಾರ್ಷಿಕ ವಹಿವಾಟು ₹1.90 ಲಕ್ಷ ಕೋಟಿಯಷ್ಟಿದೆ. ಇದಕ್ಕೆ ಚೀನಾವೇ ಅತಿದೊಡ್ಡ ಮಾರುಕಟ್ಟೆ.

ಚೀನಿಯರು ಸಾಂಪ್ರದಾಯಿಕ ಔಷಧ ಪ್ರಿಯರು. ಕಾಡುಪ್ರಾಣಿಗಳ ಅವಯವಗಳಿಂದ ತಯಾರಿಸಿದ ಔಷಧ ಸೇವಿಸುತ್ತಾರೆ. ಹುಲಿಯ ಮೂಳೆಗಳಿಗೆ ಸಂಧಿವಾತ ಗುಣಪಡಿಸುವ ಶಕ್ತಿಯಿದೆ ಎಂಬುದು ಅವರ ನಂಬಿಕೆ. ಅದರ ಬಾಲವನ್ನು ಚರ್ಮವ್ಯಾಧಿ ಔಷಧ ತಯಾರಿಕೆಗೆ ಬಳಸುತ್ತಾರೆ.

ಗೃಹ ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ಆನೆಗಳ ದಂತಗಳನ್ನು ಬಳಸಲಾಗುತ್ತಿದೆ. ಅವುಗಳಿಂದ ತಯಾರಿಸಿದ ದೇವರ ಮೂರ್ತಿ, ನೆಕ್‌ಲೆಸ್‌, ಬ್ರಾಸ್‌ಲೆಟ್‌, ಕಿವಿಯೋಲೆ ಹಾಗೂ ಕಲಾಕೃತಿಗಳಿಗೆ ಅಪಾರ ಬೇಡಿಕೆಯಿದೆ. ಜಪಾನ್‌ನಲ್ಲಿ ಭಾರತೀಯರಂತೆ ಪೆನ್‌ ಬಳಸಿ ಸಹಿ ಹಾಕುವುದಿಲ್ಲ. ಅಲ್ಲಿನವರು ತಮ್ಮದೇ ಆದ ‘ಸಹಿ ಮುದ್ರೆ’ ಹೊಂದಿರುತ್ತಾರೆ. ಸಿರಿವಂತರ ಮನೆಗಳಲ್ಲಿ ದಂತಗಳಿಂದ ತಯಾರಿಸಿದ ಠಸ್ಸೆಗಳಿರುತ್ತವೆ.

ಚಿರತೆಯ ಚರ್ಮ, ಹಲ್ಲುಗಳು, ಕರಡಿಯ ಪಿತ್ತಕೋಶವನ್ನು ಸಾಂಪ್ರದಾಯಿಕ ಔಷಧ ತಯಾರಿಕೆಗೆ ಬಳಲಾಗುತ್ತದೆ. ಜಿಂಕೆಯ ಕೊಂಬುಗಳನ್ನು ಪ್ರತಿಷ್ಠಿತರ ಮನೆಗಳಲ್ಲಿ ಅಲಂಕಾರಿಕವಾಗಿ ಬಳಸಲಾಗುತ್ತದೆ. ಒಂಟಿಕೊಂಬಿನ ಘೇಂಡಾಮೃಗಗಳ ಬದುಕಿಗೂ ನೆಮ್ಮದಿ ಇಲ್ಲ. ಅವುಗಳ ಕೊಂಬಿನಿಂದ ತಯಾರಿಸಿದ ವಸ್ತುಗಳಿಗೆ ಬೇಡಿಕೆ ಇರುವುದರಿಂದ ಎಗ್ಗಿಲ್ಲದೆ ಹತ್ಯೆ ನಡೆದಿದೆ. ಕುಂಚ ತಯಾರಿಕೆಗಾಗಿ ಮುಂಗುಸಿಗಳ ಬಾಲ ಬಳಸಲಾಗುತ್ತದೆ. 

ಈಗ ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದೆ. ಈ ವೇಳೆ ಗೂಬೆ ಬಲಿ ಕೊಟ್ಟರೆ ಸಂಪತ್ತು ವೃದ್ಧಿಸುತ್ತದೆ ಎಂಬ ಮೌಢ್ಯವು ಉತ್ತರ ಭಾರತದ ಹಲವೆಡೆ ಚಾಲ್ತಿಯಲ್ಲಿದೆ. ಪೂಜೆ  ವೇಳೆ ಅವುಗಳ ತಲೆಬುರುಡೆ, ಪುಕ್ಕ, ಹೃದಯ, ರಕ್ತ ಇತ್ಯಾದಿ ಇಡುತ್ತಾರೆ.

ವನ್ಯಜೀವಿ ಕಾಯ್ದೆಯ ಯಶಸ್ವಿ ಅನುಷ್ಠಾನಕ್ಕೆ ತಳಮಟ್ಟದಲ್ಲಿ ವನ್ಯಜೀವಿ ತಜ್ಞರ ಕೊರತೆ ಇದೆ. ಜಿಲ್ಲಾಮಟ್ಟದಲ್ಲಿ ವನ್ಯಜೀವಿ ಅಪರಾಧ ತಡೆ ದಳ ರಚಿಸಬೇಕು.
ಕೇಶವ ಎಚ್‌. ಕೊರ್ಸೆ, ಪರಿಸರ ತಜ್ಞ

ಕಣಜ ಗೂಬೆ, ಮೀನು ಗೂಬೆ, ಕಂದು ಗಿಡುಗ ಗೂಬೆ, ಕಂದು ಕಾಡುಗೂಬೆ ಸೇರಿದಂತೆ 16 ಪ್ರಭೇದಕ್ಕೆ ಸೇರಿದ ಗೂಬೆಗಳು ವನ್ಯಜೀವಿ ಮಾರಾಟ ಜಾಲಕ್ಕೆ ಸಿಲುಕಿರುವುದು ಟ್ರಾಫಿಕ್‌ ಹಾಗೂ ವರ್ಲ್ಡ್‌ವೈಡ್‌ ಲೈಫ್‌ ಫಂಡ್‌ ನಡೆಸಿದ ಅಧ್ಯಯನಗಳಿಂದ ಬಹಿರಂಗಗೊಂಡಿದೆ.

ಹುಲಿ ಬೇಟೆ ಮತ್ತು ಸಂಸಾರ್‌ ಚಂದ್‌: ಹರಿಯಾಣದ ಬವಾರಿಯಾ ಹಾಗೂ ಮಧ್ಯಪ್ರದೇಶದ ಕಟ್ನಿ ಬುಡಕಟ್ಟು ಜನರು ಹುಲಿಗಳ ಕಳ್ಳಬೇಟೆಯಲ್ಲಿ ನಿಷ್ಣಾತರು. ಪ್ಲಾಸ್ಟಿಕ್‌ ಹೂಗಳ ಮಾರಾಟದ ನೆಪದಲ್ಲಿ ಇವರು ಅರಣ್ಯದ ಅಂಚಿನ ಗ್ರಾಮಗಳ ಹೊರವಲಯದಲ್ಲಿ ಟೆಂಟ್‌ ಹಾಕುತ್ತಾರೆ. ಬಳಿಕ ರಾತ್ರಿವೇಳೆ ಅರಣ್ಯ ಪ್ರವೇಶಿಸಿ ಜಾ ಟ್ರಾಪ್ ಅಳವಡಿಸಿ ಅಲ್ಲಿನ ಗುಹೆಗಳು, ಕಲ್ಲಿನ ಪೊಟರೆಗಳಲ್ಲಿಯೇ ತಂಗುತ್ತಾರೆ.

ಹುಲಿಯು ಜಾ ಟ್ರಾಪ್‌ಗೆ ಸಿಲುಕಿದ ತಕ್ಷಣವೇ ಅದರ ಕಣ್ಣುಗಳಿಗೆ ಚೂಪಾದ ಭರ್ಜಿಯಿಂದ ಚುಚ್ಚುತ್ತಾರೆ. ಬಳಿಕ ಅದರ ತಲೆಗೆ ದೊಣ್ಣೆಗಳಿಂದ ಹೊಡೆದು ಸಾಯಿಸುತ್ತಾರೆ. ಬಳಿಕ ಅದರ ಅವಯವಗಳನ್ನು ಬೇರ್ಪಡಿಸಿ ಕಳ್ಳಸಾಗಣೆದಾರರಿಗೆ ತಲುಪಿಸುವಲ್ಲಿ ಸಿದ್ಧಹಸ್ತರು.

ದೇಶದ ಕುಖ್ಯಾತ ವನ್ಯಜೀವಿ ಕಳ್ಳಸಾಗಣೆದಾರನಾಗಿದ್ದ ಸಂಸಾರ್ ಚಂದ್‌ (ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾನೆ) ನಡೆಸುತ್ತಿದ್ದ ವ್ಯಾಪಾರಕ್ಕೆ ಬುಡಕಟ್ಟು ಜನರೇ ದಾಳವಾಗಿದ್ದರು. ಅವರಿಗೆ ಹಣ ನೀಡಿ ಹುಲಿಗಳ ಹತ್ಯೆಗಾಗಿ ವಿವಿಧ ರಾಜ್ಯಗಳ ಸಂರಕ್ಷಿತ ಪ್ರದೇಶಕ್ಕೆ ಕಳುಹಿಸುತ್ತಿದ್ದ. ಈತ ಕಳ್ಳಬೇಟೆಯಲ್ಲಿ ಪರಿಣತರಾಗಿದ್ದ. ಅರಣ್ಯದ ಒಳಗಿರುವ ಹಾಗೂ ಅದರ ಅಂಚಿನ ಜನರಿಗೂ  ಆಮಿಷವೊಡ್ಡಿ ಪ್ರಾಣಿಗಳ ಹತ್ಯೆಗೆ ಪ್ರಚೋದಿಸುತ್ತಿದ್ದ. ಆತನ ಪತ್ನಿ ರಾಣಿ ಹಾಗೂ ಪುತ್ರ ಆಕಾಶನದ್ದೂ ಇದೇ ವೃತ್ತಿ. ಇಂತಹ ಕಳ್ಳಸಾಗಣೆದಾರರ ಮೂಲಕವೇ ವನ್ಯಜೀವಿ ಉತ್ಪನ್ನಗಳು ಸುಲಭವಾಗಿ ಭಾರತದ ಗಡಿ ದಾಟಿ ಚೀನಿಯರ ಮನೆಗಳನ್ನು ಸೇರುತ್ತವೆ ಎನ್ನುತ್ತಾರೆ ವನ್ಯಜೀವಿ ತಜ್ಞರು.

ಮಾರಾಟ ಜಾಲ ಸಕ್ರಿಯ: ರಾಜ್ಯದಲ್ಲೇ ಅತಿಹೆಚ್ಚಿನ ಸಂಖ್ಯೆಯ ಹುಲಿಗಳು, ಆನೆಗಳಿಗೆ ಆಶ್ರಯ ನೀಡಿರುವ ಹಿರಿಮೆಯು ಚಾಮರಾಜನಗರ, ಮೈಸೂರು ಮತ್ತು ಕೊಡಗು ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ ಸಲ್ಲುತ್ತದೆ. ಇಲ್ಲಿ ಕಳ್ಳಬೇಟೆಗೆ ಇತ್ತೀಚಿನ ವರ್ಷಗಳಲ್ಲಿ ಕಡಿವಾಣ ಬಿದ್ದಿದ್ದರೂ, ಪ್ರಾಣಿಗಳ ಆಯವಯ ಸಂಗ್ರಹ, ಮಾರಾಟ, ಕಳ್ಳಸಾಗಣೆ ಜಾಲ ಸಕ್ರಿಯವಾಗಿದೆ.

ಕೊಡಗಿನಲ್ಲಿ ಹುಲಿ ಉಗುರು, ಮೀಸೆ, ಚರ್ಮ ಹಾಗೂ ಆನೆ ದಂತ ಮಾರಾಟ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕಳೆದ ಜನವರಿಯಲ್ಲಿ ಚಾಮರಾಜನಗರ ಜಿಲ್ಲೆಯ ಪಿ.ಜಿ. ಪಾಳ್ಯದ ಬಳಿ ಹುಲಿಯ 40 ಉಗುರು, ಎರಡು ಹಲ್ಲುಗಳ ಸಾಗಣೆಗೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳು ಅರಣ್ಯ ಸಂಚಾರ ದಳದ ಕೈಗೆ ಸಿಕ್ಕಿಬಿದ್ದಿದ್ದು, ಇದಕ್ಕೆ ನಿದರ್ಶನ.

2022ರ ನವೆಂಬರ್‌ನಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಎಚ್‌.ಡಿ. ಕೋಟೆ ತಾಲ್ಲೂಕಿನ ತಾರಕ ಗ್ರಾಮದ ಕೃಷಿ ಜಮೀನೊಂದರಲ್ಲಿ ಹಾಕಿದ್ದ ಉರುಳಿಗೆ ಸಿಲುಕಿ ಹುಲಿ ಮೃತಪಟ್ಟಿತ್ತು. ಅದೇ ವರ್ಷದ ಡಿಸೆಂಬರ್‌ನಲ್ಲಿ ನಾಗರಹೊಳೆ ಸಿಂಗನೂರು ಗಸ್ತಿನಲ್ಲಿ ಎಂಟು ವರ್ಷದ ಕಾಡುಕೋಣ ಗುಂಡೇಟಿಗೆ ಬಲಿಯಾಗಿತ್ತು.

ಕೊಡಗು ಜಿಲ್ಲೆಯಲ್ಲಿ ವನ್ಯಜೀವಿ ಮಾಫಿಯಾ ಸಕ್ರಿಯವಾಗಿದೆ. ಈ ಬಗ್ಗೆ ಗುಪ್ತಚರ ವಿಭಾಗದವರು ಹೆಚ್ಚು ಜಾಗ್ರತೆವಹಿಸಬೇಕು.
ಕರ್ನಲ್ ಸಿ.ಪಿ. ಮುತ್ತಣ್ಣ, ಪರಿಸರವಾದಿ, ಕೊಡಗು

ಈ ವರ್ಷದ ಅಕ್ಟೋಬರ್‌ನಲ್ಲೂ ಕಚುವಿನಹಳ್ಳಿ ಮೀಸಲು ಅರಣ್ಯದಲ್ಲಿ ಕಾಟಿ ಬೇಟೆಯಾಡಿ ಮಾಂಸಕ್ಕಾಗಿ ದೇಹದ ಭಾಗಗಳನ್ನು ಕತ್ತರಿಸಿಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.

‘ಕಾನನದಲ್ಲಿರುವ ಬುಡಕಟ್ಟು ಜನರಿಗೆ ಕಾಡಿನ ಬಗ್ಗೆ ಅಪಾರ ಜ್ಞಾನ ಇರುತ್ತದೆ. ಕಾಡಂಚಿನ ಜನರಿಗೂ ವನ್ಯಪ್ರಾಣಿಗಳ ಬಗ್ಗೆ ಅರಿವಿರುತ್ತದೆ. ಬೇಟೆಯಾಡುವುದು ಅವರಿಗೆ ಸುಲಭ. ಸಂಘಟಿತ ವನ್ಯಜೀವಿ ವ್ಯಾಪಾರ ಜಾಲದ ಬಲೆಗೆ ಇಂತಹ ಜನರು ಸುಲಭವಾಗಿ ಬೀಳುತ್ತಾರೆ. ದುಡ್ಡಿನ ಆಸೆ ತೋರಿಸಿ ಪ್ರಾಣಿಗಳ ಹತ್ಯೆಗೆ ಪ್ರಚೋದಿಸುವ ಸಾಧ್ಯತೆ ಹೆಚ್ಚಿರುತ್ತದೆ’ ಎನ್ನುತ್ತಾರೆ ಅಧಿಕಾರಿಗಳು.

ಕೃತಕ ಉಗುರು: ಹುಲಿಯನ್ನು ಹತ್ಯೆಗೈದು ಅದರ ಉಗುರು ಸಂಗ್ರಹಿಸಲಾಗುತ್ತದೆ. ಅರಣ್ಯದಲ್ಲಿ ಸಹಜವಾಗಿ ಮೃತಪಟ್ಟಾಗಲೂ ಉಗುರು ಸಂಗ್ರಹಿಸುವ ಬೇಟೆಗಾರರು ಇದ್ದಾರೆ. ಕರ್ನಾಟಕದಲ್ಲಿ ದನದ ಕೊಂಬುಗಳನ್ನು ಬಳಸಿ ಹುಲಿ ಉಗುರಿನ ಮಾದರಿ ತಯಾರಿಸುವ ಕೆಲವು ಬುಡಕಟ್ಟು ಸಮುದಾಯಗಳು ಇವೆ. ಅವರ ಮಾತಿನ ಮೋಡಿಗೆ ಸಿಲುಕಿ, ಖರೀದಿಸಿ ಮೋಸ ಹೋಗುವವರೂ ಇದ್ದಾರೆ. ರಾಮನಗರ, ಮಡಿಕೇರಿ, ಮೈಸೂರು ಭಾಗದಲ್ಲಿ ಇಂತಹವರು ಹೆಚ್ಚಾಗಿ ಸಕ್ರಿಯರಾಗಿದ್ದಾರೆ.

ತಮಿಳುನಾಡಿನ ಬೇಟೆಗಾರರ ಹಾವಳಿ: ಚಾಮರಾಜ ನಗರದ ಗಡಿಕ್ಕೆ ಹೊಂದಿಕೊಂಡಿರುವ ತಮಿಳುನಾಡಿಗೆ ಸೇರಿದ ಗ್ರಾಮಗಳಲ್ಲಿ ನಾಡ ಬಂದೂಕು ಸಿದ್ಧಪಡಿಸುವವರು ಇದ್ದಾರೆ.‌ ಹಳೆಯ ಬ್ಯಾಟರಿಗಳಲ್ಲಿರುವ ಲೋಹ ಕರಗಿಸಿ ಮಾಡುವ ಗುಂಡುಗಳನ್ನು ಇವುಗಳಲ್ಲಿ ಬಳಸುತ್ತಾರೆ. 2015ರಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ 15 ಬಂದೂಕುಗಳನ್ನು ವಶಪಡಿಸಿಕೊಂಡಿದ್ದರು. ಹಾಗಾಗಿಯೇ, ಮಲೆಮಹದೇಶ್ವರ ವನ್ಯಧಾಮ ಮತ್ತು ಕಾವೇರಿ ವನ್ಯಧಾಮದಲ್ಲಿ ಆಗಾಗ್ಗೆ ಬೇಟೆ ಪ್ರಕರಣಗಳು ವರದಿಯಾಗುತ್ತಿವೆ.

‘ಕಾವೇರಿ ನದಿ ದಾಟಿ ಅರಣ್ಯ ಪ್ರವೇಶಿಸುವ ಇವರು ಜಿಂಕೆ, ಮೊಲ, ಕಾಟಿ ಸೇರಿದಂತೆ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಾರೆ. ಬೇಟೆಯ ಬಳಿಕ ಬಂದೂಕುಗಳನ್ನು ಮನೆಗೆ ತೆಗೆದುಕೊಂಡು ಹೋಗುವುದಿಲ್ಲ. ಕಾಡಂಚಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್‌ನಿಂದ ಸುತ್ತಿ ಮಣ್ಣಿನಲ್ಲಿ ಹೂತಿಡುತ್ತಾರೆ. ಬೇಟೆಗೆ ಹೋಗುವಾಗ ಇವುಗಳನ್ನು ತೆಗೆದುಕೊಂಡು ಹೋಗುತ್ತಾರೆ’ ಎನ್ನುತ್ತಾರೆ ಪರಿಸರವಾದಿಗಳು.

ಈ ಎರಡೂ ವನ್ಯಜೀವಿ ಧಾಮಗಳಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಬೇಟೆಗಾರರ ನಡುವೆ ಗುಂಡಿನ ಚಕಮಕಿ ನಡೆದ ಹಲವು ದೃಷ್ಟಾಂತಗಳಿವೆ. ಕೆಲವು ತಿಂಗಳ ಹಿಂದೆ ಅರಣ್ಯ ಸಿಬ್ಬಂದಿಯ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬೇಟೆಗಾರನೊಬ್ಬ ಕಾವೇರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಕೊಡಗು ಜಿಲ್ಲೆಯಲ್ಲಿ ವನ್ಯಜೀವಿ ಅಪರಾಧ ಚಟುವಟಿಕೆಗಳಲ್ಲಿ ಹೊಸಬರು ಭಾಗಿಯಾಗುತ್ತಿರುವುದು ಅರಣ್ಯ ಇಲಾಖೆಯ ತನಿಖೆಯಿಂದ ಬಹಿರಂಗ ಗೊಂಡಿದೆ.

ಇಲಾಖೆಯಲ್ಲಿ ದಾಖಲಾಗಿರುವ ಅಂಕಿಅಂಶ ಗಮನಿಸಿದರೆ ಜಿಂಕೆ, ಕಡವೆ, ಕಾಟಿ, ಮೊಲ, ಕಾಡು ಬೆಕ್ಕು, ಉಡ, ಅಪರೂಪದ ಅಳಿಲುಗಳು ಬೇಟೆಗಾರರ ಹಸಿವೆಗೆ ‘ಆಹಾರ’ವಾಗುತ್ತಿವೆ.

ರಕ್ತಚಂದನ ಕಳ್ಳಸಾಗಣೆ: ಕಾಯ್ದೆಯ ಸೆಕ್ಷನ್ 17ಎ ಪ್ರಕಾರ ಕೇಂದ್ರ ಸರ್ಕಾರ ಅಧಿಸೂಚನೆ ಮೂಲಕ ಗುರುತು ಮಾಡಿದ ಯಾವುದೇ ಪ್ರದೇಶ ಹಾಗೂ ಅರಣ್ಯ ಪ್ರದೇಶದಿಂದ ಯಾವುದೇ ನಿರ್ದಿಷ್ಟಪಡಿಸಿದ ಸಸ್ಯಗಳನ್ನು ಕೀಳುವಂತಿಲ್ಲ. ನಾಶ ಹಾಗೂ ಸ್ವಾಧೀನಪಡಿಸಿಕೊಳ್ಳುವಂತಿಲ್ಲ. ಆದರೆ, ಅಮೂಲ್ಯ ಮರಗಳು, ಔಷಧೀಯ ಸಸ್ಯಗಳ ಕಳ್ಳಸಾಗಣೆ ನಿರಂತರವಾಗಿ ನಡೆಯುತ್ತಿದೆ. ಆಂಧ್ರಪ್ರದೇಶದ ಜೊತೆ ಗಡಿ ಹಂಚಿಕೊಂಡಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಕ್ತಚಂದನ ಕಳ್ಳಸಾಗಣೆ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿವೆ.

ಬಂಡೀಪುರದಲ್ಲಿ ವಿಶೇಷ ಹುಲಿ ಸಂರಕ್ಷಣಾ ಪಡೆ ರಚನೆಯಾದ ಬಳಿಕ ಹುಲಿಗಳ ಅಸಹಜ ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.
ಪಿ. ರಮೇಶ್‌ಕುಮಾರ್, ನಿರ್ದೇಶಕ, ಬಂಡೀಪುರ

ಕೋಲಾರದಲ್ಲಿ 2022ರ ಆಗಸ್ಟ್‌ನಲ್ಲಿ 870 ಕೆ.ಜಿ ರಕ್ತಚಂದನ ವಶಕ್ಕೆ ಪಡೆಯಲಾಗಿತ್ತು. ಚಿಕ್ಕಬಳ್ಳಾಪುರದ ಪೆರೇಸಂದ್ರ ಸಮೀಪದ ಸಾದಲಿ ಕ್ರಾಸ್‌ನಲ್ಲಿ ಇತ್ತೀಚೆಗೆ ಇನೊವಾ ಪಲ್ಟಿ ಆಗಿತ್ತು. ಅದರಲ್ಲಿ ರಕ್ತಚಂದನದ 24 ತುಂಡುಗಳು ಪತ್ತೆಯಾಗಿದ್ದವು. ಇದೇ ರೀತಿ ರಾಜ್ಯದಲ್ಲೂ ಮರಗಳ್ಳತನ ಮಲೆನಾಡಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಬೇಡಿಕೆ ಇರುವವರೆಗೆ ಮರಗಳ್ಳತನ, ಕಾಡುಪ್ರಾಣಿ ಹತ್ಯೆ ನಡೆಯುತ್ತಿರುತ್ತದೆ. ಬೇಡಿಕೆಯೇ ಇಲ್ಲವಾದರೆ ಇದು ನಿಲ್ಲುತ್ತದೆ. ಎಲ್ಲಾ ಉಗುರಿನಲ್ಲಿ ಇರುವುದು ಕೆರಾಟಿನ್‌. ಹುಲಿಯ ಉಗುರು ಧರಿಸಿದ ಮಾತ್ರಕ್ಕೆ ಹುಲಿ ಆಗುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನ ಶ್ರೀಸಾಮಾನ್ಯರಿಂದ ಸೆಲೆಬ್ರಿಟಿವರೆಗೆ ಹರಡಿದರೆ ಮಾತ್ರ ಕಾಡುಪ್ರಾಣಿಗಳಿಗೆ ರಕ್ಷಣೆ ಸಿಗುತ್ತದೆ.

‘ಟ್ರೋಫಿ ಘೋಷಣೆಗೆ ಈಗ ಅವಕಾಶವಿಲ್ಲ’
‘2002ರಲ್ಲಿ ವನ್ಯಜೀವಿ (ರಕ್ಷಣಾ) ತಿದ್ದುಪಡಿ ಅಧಿನಿಯಮ ಜಾರಿಗೊಂಡಿತು. ಇದರ ಆಧಾರದ ಮೇಲೆಯೇ 2003ರಲ್ಲಿ ವನ್ಯಜೀವಿ ಟ್ರೋಫಿಗಳ ಘೋಷಣೆಗೆ 180 ದಿನಗಳ ಕಾಲಾವಕಾಶ ನೀಡಲಾಗಿತ್ತು. ಈಗ ಘೋಷಿಸಿಕೊಳ್ಳಲು ಸಾಧ್ಯವಿಲ್ಲ. ಟ್ರೋಫಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲಿಸಲು ಸರ್ಕಾರದ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ’ ಎಂದು ರಾಜ್ಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್‌ ಪುಷ್ಕರ್‌ ತಿಳಿಸಿದರು. ‘ಕಾಯ್ದೆಯಡಿ ಮತ್ತೆ ಟ್ರೋಫಿಗಳ ಘೋಷಣೆಗೆ ಅವಕಾಶ ಕಲ್ಪಿಸಲು ಸಾಧ್ಯ ಇದೆಯೇ ಎಂಬ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲು ಸರ್ಕಾರದ ಮಟ್ಟದಲ್ಲಿ ನಿರ್ಧರಿಸಲಾಗಿದೆ’ ಎಂಬುದು ಅವರ ವಿವರಣೆ.
ನಾಗರಹೊಳೆಯಲ್ಲಿ ಈ ವರ್ಷ ಕಾಟಿ ಬೇಟೆ ಪ್ರಕರಣ ಹೊರತುಪಡಿಸಿದರೆ ಇತರೆ ವನ್ಯಜೀವಿ ಹತ್ಯೆ ನಡೆದಿಲ್ಲ. ಅಪರಾಧದ ಮೇಲೆ ನಿಗಾ ಇಡಲಾಗಿದೆ.
ಹರ್ಷಕುಮಾರ್ ಚಿಕ್ಕನರಗುಂದ, ನಿರ್ದೇಶಕ, ನಾಗರಹೊಳೆ

ಉದುರಿದ ನವಿಲು ಗರಿ ಸಂಗ್ರಹಕ್ಕೆ ಅವಕಾಶ

ನವಿಲುಗಳು ಸಹಜವಾಗಿ ಉದುರಿಸುವ ಗರಿಗಳ ಸಂಗ್ರಹ, ಅವುಗಳಿಂದ ಕಲಾಕೃತಿ ರಚಿಸಲು ಮತ್ತು ಅವುಗಳನ್ನು ದೇಶದ ಗಡಿಯೊಳಗಷ್ಟೇ ಮಾರಾಟ ಮಾಡಲು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಅವಕಾಶ ಕಲ್ಪಿಸಲಾಗಿದೆ.

ಕಾಯ್ದೆಗೆ 1991ರಲ್ಲಿ ತರಲಾದ ತಿದ್ದುಪಡಿಯಲ್ಲಿ ಈ ಅಂಶಗಳನ್ನು ಸೇರಿಸಲಾಗಿತ್ತು. ಆದರೆ, ಈ ವಿನಾಯಿತಿಯನ್ನು ದುರ್ಬಳಕೆ ಮಾಡಿಕೊಂಡು, ರಾಷ್ಟ್ರಪಕ್ಷಿಯನ್ನು ಕೊಂದು ಗರಿ ಸಂಗ್ರಹಿಸುವ ಕೃತ್ಯವನ್ನು ಸರ್ಕಾರ ಗುರುತಿಸಿತ್ತು. 2014ರ ವೇಳೆಗೆ ಅಂತಹ ಕೃತ್ಯಗಳು ಹೆಚ್ಚು ವರದಿಯಾದವು. ಹಾಗಾಗಿ, ಕೇಂದ್ರ ಅರಣ್ಯ ಸಚಿವಾಲಯವು ಅದೇ ವರ್ಷದ ಮೇ 7ರಂದು ವಿಸ್ತೃತ ಅಧಿಸೂಚನೆ  ಹೊರಡಿಸಿತ್ತು.

‘ನವಿಲನ್ನು ಪರಿಚ್ಛೇದ–1ರಲ್ಲಿ ಪಟ್ಟಿ ಮಾಡಲಾಗಿದೆ. ಆದರೂ, ದೇಶದ ಗಡಿಯೊಳಗೆ ನವಿಲು ಗರಿ ಸಾಗಣೆ, ವರ್ಗಾವಣೆ ಮತ್ತು ವ್ಯಾಪಾರಕ್ಕೆ ಈ ಕಾಯ್ದೆಯ 43, 44(4) ಮತ್ತು 49(ಎ) ಸೆಕ್ಷನ್‌ಗಳ ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ. ದೇಶದಾದ್ಯಂತ ಹಲವೆಡೆ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಉದ್ದೇಶಗಳಿಗೆ ನವಿಲು ಗರಿಯನ್ನು ಬಳಸಲಾಗುತ್ತದೆ ಮತ್ತು ದೇಶದೊಳಗೆ ಮುಕ್ತವಾಗಿ ವ್ಯಾಪಾರಕ್ಕೆ ಅವಕಾಶವಿದೆ’ ಎಂದು ವಿಸ್ತೃತ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಈ ಅಧಿಸೂಚನೆಯ 5ನೇ ಸೆಕ್ಷನ್‌ನಲ್ಲಿ ‘ಜೀವಂತ ನವಿಲಿನಿಂದ ಗರಿಗಳನ್ನು ಕೀಳುವುದು ಮತ್ತು ನವಿಲನ್ನು ಕೊಂದು ಆನಂತರ ಗರಿಗಳನ್ನು ಕೀಳುವುದು ಕಾನೂನುಬಾಹಿರವಾಗಿದೆ’ ಎಂದು ವಿವರಿಸಲಾಗಿದೆ.

ಪೂರಕ ಮಾಹಿತಿ: ಸೂರ್ಯನಾರಾಯಣ ವಿ., ಕೆ.ಎಸ್‌. ಗಿರೀಶ, ಮೋಹನ್ ಕುಮಾರ್‌, ಕೆ. ಓಂಕಾರಮೂರ್ತಿ, ಡಿ.ಎಂ. ಕುರ್ಕೆ ಪ್ರಶಾಂತ, ಗಣಪತಿ ಹೆಗಡೆ, ಬಿ.ಜೆ. ಧನ್ಯಪ್ರಸಾದ್
ಆಧಾರ: ರಾಜ್ಯ ಅರಣ್ಯ ಇಲಾಖೆ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT