ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಚೇತರಿಕೆಗೆ ಕಾಯುತ್ತಿದೆ ಹೆಂಚು ಉದ್ಯಮ

ಐದು ಶತಮಾನದ ಕೈಗಾರಿಕೆಗೆ ಸಿಗುತ್ತಿಲ್ಲ ಸರ್ಕಾರದ ನೆರವು
Published 30 ಡಿಸೆಂಬರ್ 2023, 23:16 IST
Last Updated 30 ಡಿಸೆಂಬರ್ 2023, 23:16 IST
ಅಕ್ಷರ ಗಾತ್ರ

ಮಂಗಳೂರು: ‘ನಾನು ವಾಸವಾಗಿರುವ  ಹೆಂಚಿನ ಮನೆ 40 ವರ್ಷಗಳಿಗೂ ಹಳೆಯದು. ಕೆಲ ವರ್ಷಗಳ ಹಿಂದೆ ಹೆಂಚಿನ ಮನೆಯನ್ನು ಕೆಡವಿ ಕಾಂಕ್ರೀಟ್‌ ಕಟ್ಟಡ ನಿರ್ಮಿಸಿರುವ ಅಕ್ಕಪಕ್ಕದ ಮನೆಯವರು ಈಗ ಸೆಖೆ ತಾಳಲಾಗದೇ ಪರಿತಪಿಸುತ್ತಿದ್ದಾರೆ. ಆರ್‌ಸಿಸಿ ಮನೆಗಳಿಗೆ ಹೋಲಿಸಿದರೆ, ಹೆಂಚಿನ ಮನೆಯೊಳಗೆ ತಾಪ ಬಹಳ ಕಡಿಮೆ.’

‘ಚಾವಣಿ ದುರಸ್ತಿಗೆ ಕಾರ್ಮಿಕರು ಸಿಗುವುದಿಲ್ಲ ಎಂಬ ಕೊರತೆ ಬಿಟ್ಟರೆ, ಹೆಂಚಿನ ಮನೆಯೇ ಒಳ್ಳೆಯದು. ಹೊರಗಡೆ ಎಷ್ಟೇ ಉಷ್ಣಾಂಶ ಇದ್ದರೂ ಮನೆಯಲ್ಲಿ ಸದಾ ತಂಪಾಗಿರುಗುತ್ತದೆ...’ ಮಂಗಳೂರಿನ ಗೋರಿಗುಡ್ಡೆ ನಿವಾಸಿ ವಿನಾಯಕ ಅವರು ತಮ್ಮ ಹೆಂಚಿನ ಮನೆಯ ಅನುಕೂಲವನ್ನು ವಿವರಿಸಿದ್ದು ಹೀಗೆ.

ದೃಢತೆಯಲ್ಲಿ ಮಂಗಳೂರು ಹೆಂಚಿನದು ಒಂದು ಕೈ ಮೇಲೆ. ಇದಕ್ಕೆ ಕಾರಣ ಕರಾವಳಿಯಲ್ಲಿ ಲಭಿಸುವ ವಿಶೇಷ ಆವೆಮಣ್ಣು. ಈ ಮಣ್ಣಿನಲ್ಲಿ ಅಂಟಿನ ಅಂಶ ಜಾಸ್ತಿ ಮತ್ತು ಮರಳಿನ ಅಂಶ ಕಡಿಮೆ. ಈ ಮಣ್ಣನ್ನು ಚೆನ್ನಾಗಿ ಹದಗೊಳಿಸಿ ತಯಾರಿಸುವ ಹೆಂಚು ಎಳ್ಳಿನಿತೂ ನೀರನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಹೆಚ್ಚು ಬಾಳಿಕೆ ಬರುತ್ತದೆ ಎಂಬ ಕಾರಣಕ್ಕಾಗಿಯೇ ‘ಮಂಗಳೂರು ಹೆಂಚು’ ಹೆಸರುವಾಸಿ.

ದೇಶ ವಿದೇಶಗಳಲ್ಲಿ ಕಟ್ಟಡಗಳನ್ನು ತಂಪಾಗಿಡುತ್ತಾ, ಖ್ಯಾತಿಯ ಉತ್ತುಂಗದಲ್ಲಿದ್ದ ‘ಮಂಗಳೂರು ಹೆಂಚು’  ಉದ್ಯಮ ನಿಧಾನವಾಗಿ ‘ನೆಲ’ಕಚ್ಚಿದೆ.  ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲ ಸೂರು ಸೋ‌ರದಂತೆ ಕಾಪಾಡುತ್ತಾ ಬಂದಿದ್ದ ಈ ಉದ್ದಿಮೆಯೇ ಈಗ ಸೊರಗಿದೆ.

ನಗರೀಕರಣ, ನಗರಗಳಲ್ಲಿ ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್‌ ಸಮುಚ್ಚಯದ ಸಂಸ್ಕೃತಿ ಹೆಚ್ಚುತ್ತಿದ್ದಂತೆ ಹೆಂಚು ಬಳಕೆ ಕಡಿಮೆಯಾಗುತ್ತಾ ಸಾಗಿದೆ. ಹಳ್ಳಿಯ ಜನರಲ್ಲೂ ‘ಕಾಂಕ್ರೀಟ್‌’ ಪ್ರೀತಿ ಹೆಚ್ಚಿದಂತೆ ಹೆಂಚಿನ ಬೇಡಿಕೆ ಮತ್ತಷ್ಟು ಕುಸಿಯಿತು. ಮೂರು ದಶಕಗಳ ಈಚೆಗೆ ವಿವಿಧ ಕಾರಣಗಳಿಂದಾಗಿ ಹೆಂಚಿನ ಕಾರ್ಖಾನೆಗಳು ಒಂದೊಂದಾಗಿ ಬಾಗಿಲು ಹಾಕಿವೆ. ಈ ಉದ್ದಿಮೆಯನ್ನೇ ನೆಚ್ಚಿಕೊಂಡಿದ್ದ ಸಾವಿರಾರು ಕಾರ್ಮಿಕರು ಬೇರೆ ಕೆಲಸಗಳತ್ತ ಮುಖ ಮಾಡಿದ್ದಾರೆ. ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5, ಉಡುಪಿ ಜಿಲ್ಲೆಯಲ್ಲಿ 11 ಕಾರ್ಖಾನೆಗಳಷ್ಟೇ ಉಳಿದಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ 16 ಕಾರ್ಖಾನೆಗಳೂ ಮುಚ್ಚಿವೆ. ‌ಬೆರಳೆಣಿಕೆಯಷ್ಟು ಮಾಲೀಕರು ಹೆಂಚಿನ ಜೊತೆಗೆ ಸುಟ್ಟ ಮಣ್ಣಿನ ನೆಲಹಾಸು ಮೊದಲಾದ ಉತ್ಪನ್ನಗಳನ್ನು ತಯಾರಿಸುವ ಮೂಲಕ ತಮ್ಮ ಕಾರ್ಖಾನೆಗಳನ್ನು ಕಷ್ಟಪಟ್ಟು ಉಳಿಸಿಕೊಂಡಿದ್ದಾರೆ.

ಕರಾವಳಿಗೂ, ಹೆಂಚು ತಯಾರಿಕೆಗೂ 500 ವರ್ಷಗಳಿಗೂ ಹಿಂದಿನ ನಂಟು ಇದೆ. 1500–1531ರ ನಡುವೆ ಮಲಬಾರ್‌ ಕರಾವಳಿ ತೀರಕ್ಕೆ ಭೇಟಿ ನೀಡಿದ್ದ ಪೋರ್ಚುಗೀಸ್‌ ಪ್ರವಾಸಿಗ ಡ್ಯೂರೆಟ್‌ ಬರ್ಬೋಸಾ, ‘ಆವೆಮಣ್ಣನ್ನು ಸುಟ್ಟು ಹೆಂಚು ತಯಾರಿಸುವುದು ಇಲ್ಲಿನ ಜನರ ಮುಖ್ಯ ಉದ್ಯೋಗ’ ಎಂದು ಉಲ್ಲೇಖಿಸಿದ್ದರು. ಹೆಂಚು ತಯಾರಿಕೆಗೆ ಇಲ್ಲಿ ಕೈಗಾರಿಕೆಯ ಸ್ಪರ್ಶ ನೀಡಿದ್ದು ಜರ್ಮನಿಯ ಬಾಸೆಲ್‌ ಮಿಷನ್‌.  ಆವೆಮಣ್ಣಿನಿಂದ ಹೆಂಚು ತಯಾರಿಸುವ ತರಬೇತಿ ಪಡೆದಿದ್ದ ಜರ್ಮನಿಯ ಮಿಷನರಿ ಸಿ.ಜಿ. ಆಂಡ್ರ್ಯೂ ಪ್ಲೆಬ್ಸ್‌ ಮಂಗಳೂರಿನ ಮಣ್ಣು ಹೆಂಚು ತಯಾರಿಗೆ ಸೂಕ್ತ ಎಂದು ಮನಗಂಡಿದ್ದರು. 1864ರಲ್ಲಿ ಇಲ್ಲಿನ ಬಲ್ಮಠದಲ್ಲಿ ಬಾಸೆಲ್‌ ಮಿಷನ್‌ ವತಿಯಿಂದ ಅಚ್ಚಿನಲ್ಲಿ ಹೆಂಚನ್ನು ತಯಾರಿಸಿದರು. 1865ರಲ್ಲಿ ಮಂಗಳೂರಿನ ಜಪ್ಪುವಿನಲ್ಲಿ ಬಾಸೆಲ್‌ ಮಿಷನ್‌ ಹೆಂಚಿನ ಕಾರ್ಖಾನೆಯನ್ನು ಆರಂಭಿಸಿತು. 12 ಕಾರ್ಮಿಕರೊಂದಿಗೆ ಆರಂಭವಾದ ಈ ಕಾರ್ಖಾನೆ 1880ರಲ್ಲಿ ವರ್ಷಕ್ಕೆ 10 ಲಕ್ಷಕ್ಕೂ ಹೆಚ್ಚು ಹೆಂಚು ತಯಾರಿಸುವ ಮಟ್ಟಕ್ಕೆ ಬೆಳೆದಿತ್ತು. 

1882ರಲ್ಲಿ ಕುದ್ರೊಳಿಯಲ್ಲಿ ಬಾಸೆಲ್‌ ಮಿಷನ್‌ ಎರಡನೇ ಹೆಂಚಿನ ಕಾರ್ಖಾನೆಯನ್ನು, 1886ರಲ್ಲಿ ಉಡುಪಿಯ ಮಲ್ಪೆಯಲ್ಲಿ ಮೂರನೇ ಕಾರ್ಖಾನೆಯನ್ನು ಆರಂಭಿಸಿತು. ಆನಂತರ ರಾಜ್ಯದ ಕರಾವಳಿಯುದ್ದಕ್ಕೂ ಅನೇಕ ಹೆಂಚಿನ ಕಾರ್ಖಾನೆಗಳು ಸ್ಥಾಪನೆಯಾದವು. ಈ ಎಲ್ಲ ಕಾರ್ಖಾನೆಗಳ ಹೆಂಚುಗಳೂ ‘ಮಂಗಳೂರು ಟೈಲ್ಸ್‌’ ಎಂದೇ ಖ್ಯಾತವಾದವು. 1914ರ ಮೊದಲ ಜಾಗತಿಕ ಯುದ್ಧದ ಸಂದರ್ಭದಲ್ಲಿ ಬಾಸೆಲ್‌ ಮಿಷನ್‌ಗೆ ನಿರ್ಬಂಧ ಹೇರಿದಾಗ ಈ ಕಾರ್ಖಾನೆಗಳು ‘ಕಾಮನ್ವೆಲ್ತ್‌ ಟ್ರಸ್ಟ್‌ ಲಿಮಿಟೆಡ್‌’ಗೆ ಹಸ್ತಾಂತರವಾದವು ಎಂಬುದನ್ನು ‘ಭಾರತದಲ್ಲಿ ಬಾಸೆಲ್‌ ಮಿಷನ್‌’ ಕೃತಿಯಲ್ಲಿ ಪೀಟರ್‌ ವಿಲ್ಸನ್‌ ಪ್ರಭಾಕರ್‌ ಉಲ್ಲೇಖಿಸಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಮಂಗಳೂರು ಹೆಂಚಿನ ಉದ್ಯಮ ಜನಪ್ರಿಯತೆಯ ಉತ್ತುಂಗದಲ್ಲಿತ್ತು. ಆಗ ಹೆಂಚು ತಯಾರಿಸುವ ಮತ್ತಷ್ಟು ಕಾರ್ಖಾನೆಗಳು ಕರಾವಳಿಯುದ್ದಕ್ಕೂ ಹುಟ್ಟಿಕೊಂಡವು. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 90ಕ್ಕೂ ಹೆಚ್ಚು ಹೆಂಚಿನ ಕಾರ್ಖಾನೆಗಳು ಅಸ್ತಿತ್ವದಲ್ಲಿದ್ದವು. ಈ ಉದ್ದಿಮೆ ಕರಾವಳಿಯ ಜನಜೀವನದ ಜೀವನಾಡಿಯಾಗಿ  ಬೆಳೆದಿತ್ತು. ನಮ್ಮ ದೇಶದ ವಿವಿಧ ರಾಜ್ಯಗಳಿಗೆ ಮಾತ್ರವಲ್ಲ, ಮ್ಯಾನ್ಮಾರ್, ಇಂಡೋನೇಷ್ಯಾ, ಆಸ್ಟ್ರೇಲಿಯಾ, ಫಿಜಿ, ಆಫ್ರಿಕಾ ಖಂಡದ ವಿವಿಧ ರಾಷ್ಟ್ರಗಳು ಮತ್ತು ಕೊಲ್ಲಿ ರಾಷ್ಟ್ರಗಳಿಗೂ ಮಂಗಳೂರು ಹೆಂಚು ಭಾರಿ ಪ್ರಮಾಣದಲ್ಲಿ ರಫ್ತಾಗುತ್ತಿತ್ತು. ಇದು ಕರಾವಳಿಯ ಆರ್ಥಿಕತೆಗೂ ಶಕ್ತಿ ತುಂಬಿತ್ತು.

1880ರ ದಶಕದಲ್ಲಿ ಮಂಗಳೂರಿನಲ್ಲಿ ಆರಂಭವಾದ ಹೆಂಚು ಉದ್ದಿಮೆ ಕ್ರಮೇಣ ಕರಾವಳಿಯುದ್ದಕ್ಕೂ ವಿಸ್ತರಿಸಿತ್ತು. ಕಾರವಾರದಿಂದ ಕಾಸರಗೋಡಿನವರೆಗೆ ಅಲ್ಲಲ್ಲಿ‌ ಹೆಂಚಿನ‌ ಕಾರ್ಖಾನೆಗಳು ತಲೆಎತ್ತಿದ್ದವು. ಇವುಗಳಲ್ಲಿ ತಯಾರಾಗುತ್ತಿದ್ದ ‘ಮಂಗಳೂರು ಹೆಂಚು’ ಕರಾವಳಿಯಲ್ಲಷ್ಟೇ ಅಲ್ಲ, ದೇಶ ವಿದೇಶಗಳಲ್ಲಿ ಮನೆ ಮಾತಾಗಿತ್ತು. ‌‌

ಕುಲುಮೆಯಲ್ಲಿ 30 ಗಂಟೆ ಬೇಯುವ ಹೆಂಚು

ಹೆಂಚು ತಯಾರಿಸುವ ಆವೆಮಣ್ಣನ್ನು ಕೊಳೆಯಿಸಲಾಗುತ್ತದೆ. ನಂತರ ಅದನ್ನು  ಮಿಶ್ರಣ ಮಾಡಿ ಹದಗೊಳಿಸುವ ಯಂತ್ರದಲ್ಲಿ ಹಾಕಲಾಗುತ್ತದೆ. ಕಸ–ಕಶ್ಮಲ ಹಾಗೂ ಇತರ ಘನ ಪದಾರ್ಥಗಳನ್ನು ಬೇರ್ಪಡಿಸಲಾಗುತ್ತದೆ. ನಂತರ ಪಗ್‌ ಮಿಲ್‌ ಮೂಲಕ ಹಾಯಿಸಿ ಮಣ್ಣಿನಲ್ಲಿರುವ ನೀರಿನಂಶವನ್ನು ಹೀರಿ ತೆಗೆಯಲಾಗುತ್ತದೆ. ನಂತರ ಅದಕ್ಕೆ ತೈಲವನ್ನು ಸೇರಿಸಲಾಗುತ್ತದೆ. ಹೀಗೆ ಹದಗೊಂಡ ಮಣ್ಣನ್ನು ಅಚ್ಚಿಗೆ ಹಾಕಿ ಹೆಂಚನ್ನು ತಯಾರಿಸಲಾಗುತ್ತದೆ. ಬಳಿಕ ಹೆಂಚನ್ನು ಒಣಗಿಸಿ, ಕುಲುಮೆಯಲ್ಲಿ ಬೇಯಿಸಲಾಗುತ್ತದೆ ಎಂದು ವಿವರಿಸುತ್ತಾರೆ ಮಂಗಳೂರು ಸಮೀಪದ ಕೈಕಂಬದ ‘ಗಣೇಶ್‌ ಟೈಲ್ಸ್‌’ ಕಾರ್ಖಾನೆ ಮಾಲೀಕ ಗೋವರ್ಧನ ಶೆಟ್ಟಿ.

‘ಒಂದೊಂದು ಕುಲುಮೆಯಲ್ಲೂ ನಾಲ್ಕು ಗೂಡು (ಛೇಂಬರ್‌)ಗಳಿರುತ್ತವೆ. ಅವುಗಳಲ್ಲಿ ಏಕಕಾಲದಲ್ಲಿ 10 ಸಾವಿರಕ್ಕೂ ಹೆಚ್ಚು ಹೆಂಚುಗಳನ್ನು ಬೇಯಿಸಬಹುದು. ಅವು ಸರಿಸುಮಾರು 30 ಗಂಟೆ ಕುಲುಮೆಯಲ್ಲಿ 800ರಿಂದ 900 ಡಿಗ್ರಿ ಸೆಂಟಿಗ್ರೇಡ್‌ ಉಷ್ಣತೆಯಲ್ಲಿ ಬೇಯುತ್ತವೆ. ಅವು ಒಂದು ವಾರ ಗೂಡಿನ ಒಳಗೆ ಇರುತ್ತವೆ. ಬಿಸಿ ಆರಿದ ಬಳಿಕ ಅವುಗಳನ್ನು ಹೊರತೆಗೆಯಲಾಗುತ್ತದೆ. ಈ ರೀತಿ ಸಿದ್ಧಗೊಳ್ಳುವ ಹಂಚು ನೂರಾರು ವರ್ಷಗಳ ಬಳಿಕವೂ ಗಟ್ಟಿಮುಟ್ಟಾಗಿಯೇ ಇರುತ್ತದೆ’ ಎನ್ನುತ್ತಾರೆ ಅವರು.

ಆವೆಮಣ್ಣು– ಆಡಳಿತ ಯಂತ್ರದ ಕೆಂಗಣ್ಣು

ಕರಾವಳಿಯ ಅಳಿವೆ ಪ್ರದೇಶಗಳಲ್ಲಿ ಹೆಂಚು ತಯಾರಿಸಲು ಬೇಕಾಗುವ ಆವೆಮಣ್ಣು ಈ ಹಿಂದೆ ಯಥೇಚ್ಛವಾಗಿ ಸಿಗುತ್ತಿತ್ತು. ಹಾಗಾಗಿ ಹೆಂಚಿನ ಉದ್ಯಮಕ್ಕೆ ಮಣ್ಣನ್ನು ಹೊಂದಿಸುವುದು ಹೊರೆ ಎನಿಸುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಆವೆಮಣ್ಣಿರುವ ಗದ್ದೆಗಳನ್ನು ಹುಡುಕಿಕೊಂಡು ಹೋಗಬೇಕಾದ ಸ್ಥಿತಿ ಇದೆ. ಮಣ್ಣು ಸಿಕ್ಕರೂ, ಅದನ್ನು ಬಳಸುವುದಕ್ಕೆ  ಅಧಿಕಾರಿಗಳ ಕಿರಿಕಿರಿ ಎಂದು ದೂರುತ್ತಾರೆ ಹೆಂಚಿನ ಕಾರ್ಖಾನೆ ಮಾಲೀಕರು.

‘ನಾವು ಸರ್ಕಾರದ ಜಾಗದಲ್ಲಿ ಮಣ್ಣು ತೆಗೆಯುತ್ತಿಲ್ಲ. ಜಾಗದ ಮಾಲೀಕರಿಗೆ ದುಡ್ಡು ಕೊಟ್ಟು ಆವೆಮಣ್ಣು ಖರೀದಿಸುತ್ತೇವೆ. ಅದನ್ನೂ ತೆಗೆಯಲು ಪರವಾನಗಿ ಪಡೆಯಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ. ಆವೆಮಣ್ಣಿನ ಸಾಗಾಟಕ್ಕೂ ಅಡ್ಡಿಪಡಿಸುತ್ತಾರೆ. ಅವರ ‘ಕೈ ಬಿಸಿ’ ಮಾಡದಿದ್ದರೆ ಕಾರ್ಖಾನೆಯಲ್ಲಿ ದಾಸ್ತಾನು ಮಾಡಿದ ಆವೆಮಣ್ಣಿಗೂ ದಂಡ ವಿಧಿಸುತ್ತಾರೆ. ಬಳ್ಳಾರಿ ಗಣಿಗಾರಿಕೆಗೆ ಸಂಬಂಧಿಸಿದ ವಿವಾದದ ಬಳಿಕ ಈ ಸಮಸ್ಯೆ ಶುರುವಾಗಿದೆ.  ಪ್ರತಿ ಕಾರ್ಖಾನೆಗೆ ವರ್ಷಕ್ಕೆ 250ಕ್ಕೂ ಹೆಚ್ಚು ಲೋಡ್‌ ಮಣ್ಣು ಬೇಕು. ಇದನ್ನು ಹೊಂದಿಸುವುದೇ ಕಷ್ಟವಾಗಿದೆ’ ಎಂದು ಹೆಂಚಿನ ಕಾರ್ಖಾನೆ ಮಾಲೀಕರೊಬ್ಬರು ಅಲವತ್ತು ಕೊಂಡರು. 

‘ನೆಲಮಟ್ಟದಿಂದ ನಾಲ್ಕೈದು ಅಡಿಗಿಂತ ಕೆಳಗಿರುವ ಮಣ್ಣು ಸರ್ಕಾರದ ಸ್ವತ್ತು ಎಂಬುದು ಅಧಿಕಾರಿಗಳ ವಾದ. ಅದಕ್ಕೆ ರಾಯಧನ ನಿಗದಿಪಡಿಸಿ ಎಂದರೆ, ಅದನ್ನೂ ಮಾಡುವುದಿಲ್ಲ. ಆವೆಮಣ್ಣನ್ನು ತೆಗೆಯುವುದನ್ನು ಗಣಿಗಾರಿಕೆ ಎಂದು ಪರಿಗಣಿಸಬಾರದು. ಆವೆಮಣ್ಣು ಬಳಕೆಗೆ ಸರ್ಕಾರ ಸ್ಪಷ್ಟ ನೀತಿ ರೂಪಿಸಬೇಕು. ಹೆಂಚು ತಯಾರಿಸಲು ಆವೆಮಣ್ಣಿನ ಕೊರತೆ ಆಗದಂತೆ ಸರ್ಕಾರ ಕ್ರಮವಹಿಸಬೇಕು’ ಎಂದು ಒತ್ತಾಯಿಸುತ್ತಾರೆ ಕುಂದಾಪುರದ ಹೆಂಚಿನ ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷರಾಗಿರುವ ‘ಪ್ರಭಾಕರ್‌ ಟೈಲ್ಸ್‌’ ಕಾರ್ಖಾನೆಯ ಪ್ರಕಾಶ್‌ ಟಿ.ಸೋನ್ಸ್‌.

‘ಈಗ ಬಹುತೇಕ ಹೆಂಚಿನ ಕಾರ್ಖಾನೆಗಳು ಮುಚ್ಚಿವೆ. ಕಾಲದ ಅಗತ್ಯಕ್ಕೆ ಅನುಗುಣವಾಗಿ ಕಾರ್ಖಾನೆಗಳ ಯಾಂತ್ರೀಕರಣ ಮಾಡದಿರುವುದು ಇದಕ್ಕೆ ಕಾರಣ. ಯಾಂತ್ರೀಕರಣಕ್ಕೆ ಒತ್ತು ನೀಡಿದ್ದರಿಂದ ಕುಂದಾಪುರದಲ್ಲಿ 10 ಕಾರ್ಖಾನೆಗಳು ಉಳಿದಿವೆ. ಮಧ್ಯಪ್ರದೇಶ, ಒಡಿಶಾದಲ್ಲೂ ಹೆಂಚು ಉತ್ಪಾದನೆ ಬಹುತೇಕ ಸ್ಥಗಿತವಾಗಿದೆ. ಕೋವಿಡ್‌ಗೆ ಮುಂಚೆ ನೆಲಕಚ್ಚಿದ್ದ ಹೆಂಚಿಗೆ ನಂತರ ಬೇಡಿಕೆ ಕುದುರಿದೆ. ಯಾವುದೇ ಉದ್ದಿಮೆ ಯಶಸ್ವಿಯಾಗಬೇಕಾದರೆ ಉತ್ಪನ್ನದ ಮೊತ್ತದ ಶೇ 25ಕ್ಕಿಂತ ಹೆಚ್ಚು ಪಾಲು ಕಾರ್ಮಿಕರ ಸಂಬಳಕ್ಕೆ ವಿನಿಯೋಗವಾಗಬಾರದು. ಆದರೆ ಹೆಂಚಿನ ಉದ್ದಿಮೆಯಲ್ಲಿ ಉತ್ಪನ್ನದ ಶೇ 60ಕ್ಕೂ ಹೆಚ್ಚು ಮೊತ್ತ ಕಾರ್ಮಿಕರ ಸಂಬಳಕ್ಕೆ ಬಳಕೆಯಾಗುತ್ತದೆ. ಸರ್ಕಾರದ ವಿಶೇಷ ನೆರವಿಲ್ಲದೇ ಈ ಉದ್ದಿಮೆಯನ್ನು ಮುಂದುವರಿಸುವುದು ಕಷ್ಟ’ ಎನ್ನುತ್ತಾರೆ ಅವರು.‌

ಜಿಎಸ್‌ಟಿಯ ಬರೆ

‘ಮೊದಲೇ ನಷ್ಟದ ಹಾದಿ ಹಿಡಿದಿದ್ದ ಹೆಂಚಿನ ಉದ್ದಿಮೆಗೆ ಸರ್ಕಾರ ಜಿಎಸ್‌ಟಿಯ ಬರೆ ಹಾಕಿದೆ. ಆರಂಭದಲ್ಲಿ ಶೇ 5ರಷ್ಟು ಜಿಎಸ್‌ಟಿ ಇತ್ತು. ಮೂರು ವರ್ಷಗಳ ಹಿಂದೆ ಅದನ್ನು ಶೇ 12ಕ್ಕೆ ಹೆಚ್ಚಿಸಲಾಗಿದೆ. ಇದು ಕಾರ್ಖಾನೆಗಳಿಗೆ ಮತ್ತಷ್ಟು ಹೊರೆಯಾಗಿದೆ. ಜಿಎಸ್‌ಟಿಯಿಂದ ವಿನಾಯಿತಿ ನೀಡಿದರೆ ಈ ಉದ್ದಿಮೆ ತಕ್ಕಮಟ್ಟಿಗೆ ಚೇತರಿಸಿಕೊಳ್ಳಲಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ’  ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕುಂದಾಪುರದಲ್ಲಿರುವ ‘ಮಂಗಳೂರು ಟೈಲ್ಸ್‌’ ಫ್ಯಾಕ್ಟರಿಯ ಮಾಲೀಕ ಕೆ.ಸೀತಾರಾಮ ನಕ್ಕಿತ್ತಾಯ. 

‘ಹೆಂಚು ತಯಾರಿಸುವ ಮಣ್ಣಿಗೆ ಸೀಮೆ ಎಣ್ಣೆಯನ್ನು ಮಿಶ್ರಣಮಾಡ ಬೇಕಾಗುತ್ತದೆ. ಹಿಂದೆ ಸೀಮೆ ಎಣ್ಣೆ ಅಗ್ಗವಾಗಿ ಹಾಗೂ ಯಥೇಚ್ಛ ಸಿಗುತ್ತಿತ್ತು. ಈಗಂತೂ ಕರಾವಳಿಯಲ್ಲಿ ಎಲ್ಲೂ ಸೀಮೆ ಎಣ್ಣೆಯೇ ಸಿಗದ ಸ್ಥಿತಿ ಇದೆ. ಬಿಳಿ ಸೀಮೆ ಎಣ್ಣೆ ಸಿಕ್ಕಿದರೂ ಅದಕ್ಕೆ ಲೀಟರ್‌ಗೆ ₹70 ವರೆಗೂ ದರ ಇದೆ’ ಎಂದು ಅವರು ಅಲವತ್ತುಕೊಂಡರು.

ನುರಿತ ಕಾರ್ಮಿಕರ ಕೊರತೆ

‘ಹೆಂಚು ಉದ್ದಿಮೆಗೆ ಕೌಶಲಯುಕ್ತ ಕಾರ್ಮಿಕರು ಬೇಕು. ಆದರೆ ಇತ್ತೀಚೆಗೆ ನುರಿತ ಕಾರ್ಮಿಕರು ಸಿಗುತ್ತಿಲ್ಲ. ಈಗಿನ ತಲೆಮಾರಿನ ಸ್ಥಳೀಯ ಯುವಜನರು ಹೆಂಚಿನ ಕಾರ್ಖಾನೆಗೆ ಕೆಲಸಕ್ಕೆ ಬರಲು ಆಸಕ್ತಿ ತೋರಿಸುತ್ತಿಲ್ಲ. ಹಿರಿಯ ಕಾರ್ಮಿಕರು ನಿವೃತ್ತಿಯಾದ ಬಳಿಕ ಉತ್ತರ ಭಾರತದ ಕೆಲವು ಕಾರ್ಮಿಕರನ್ನು ಕೆಲಸಕ್ಕೆ ಹಾಕಿಕೊಂಡೆವು. ಆದರೆ ಅವರು ಊರಿಗೆ ಹೋದರೆ ಮತ್ತೆ ಕೆಲಸಕ್ಕೆ ಮರಳುತ್ತಾರೆ ಎಂಬ ಖಾತರಿ ಇಲ್ಲ’ ಎಂದು ಗೋವರ್ಧನ ಶೆಟ್ಟಿ ತಿಳಿಸಿದರು.

ನಂದಾದೀಪದಂತೆ ಬೆಳಗುತ್ತಿದ್ದ ಕರಾವಳಿಯ ಹೆಂಚು ಉದ್ಯಮ, ನಿಧಾನವಾಗಿ ಆರುವ ಸ್ಥಿತಿ ತಲುಪಿದೆ. ಕಾರ್ಮಿಕ ಸಮಸ್ಯೆ, ಸೀಮೆಎಣ್ಣೆಯ ಅಲಭ್ಯತೆ, ಸಿಗದ ಆವೆಮಣ್ಣು ಮುಂತಾದ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ಉದ್ಯಮ ಮಾಯವಾಗುವುದಂತು ಖಚಿತ.

ಮಂಗಳೂರು ಸಮೀಪದ ಕೈಕಂಬದಲ್ಲಿರುವ ಗಣೇಶ್ ಟೈಲ್ಸ್‌ ಕಾರ್ಖಾನೆಯಲ್ಲಿ ಆವೆಮಣ್ಣಿನ ಇಟ್ಟಿಗೆ ತಯಾರಿ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಂಗಳೂರು ಸಮೀಪದ ಕೈಕಂಬದಲ್ಲಿರುವ ಗಣೇಶ್ ಟೈಲ್ಸ್‌ ಕಾರ್ಖಾನೆಯಲ್ಲಿ ಆವೆಮಣ್ಣಿನ ಇಟ್ಟಿಗೆ ತಯಾರಿ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಂಗಳೂರು ಸಮೀಪದ ಕೈಕಂಬದಲ್ಲಿರುವ ಗಣೇಶ್ ಟೈಲ್ಸ್‌  ಕಾರ್ಖಾನೆ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಂಗಳೂರು ಸಮೀಪದ ಕೈಕಂಬದಲ್ಲಿರುವ ಗಣೇಶ್ ಟೈಲ್ಸ್‌  ಕಾರ್ಖಾನೆ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಅಚ್ಚು ಹಾಕಿದ ಹೆಂಚುಗಳನ್ನು ಒಳಗಿಸಲು ಜೋಡಿಸುತ್ತಿರುವ ಕಾರ್ಮಿಕ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಅಚ್ಚು ಹಾಕಿದ ಹೆಂಚುಗಳನ್ನು ಒಳಗಿಸಲು ಜೋಡಿಸುತ್ತಿರುವ ಕಾರ್ಮಿಕ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಅಚ್ಚಿನಲ್ಲಿ ತಯಾರಾದ ಹಸಿ ಹಸಿ ಹೆಂಚು –ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಅಚ್ಚಿನಲ್ಲಿ ತಯಾರಾದ ಹಸಿ ಹಸಿ ಹೆಂಚು –ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಅಚ್ಚು ಹಾಕಿದ ಹೆಂಚುಗಳನ್ನು ಒಳಗಿಸಲು ಒಯ್ಯುತ್ತಿರುವ ಕಾರ್ಮಿಕ ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಅಚ್ಚು ಹಾಕಿದ ಹೆಂಚುಗಳನ್ನು ಒಳಗಿಸಲು ಒಯ್ಯುತ್ತಿರುವ ಕಾರ್ಮಿಕ ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಾರುಕಟ್ಟೆಗೆ ಒಯ್ಯಲು ಸಿದ್ಧವಾಗಿರುವ ಹೆಂಚಿನ ಉತ್ಪನ್ನಗಳನ್ನು ಜೋಡಿಸುತ್ತಿರುವ ಕಾರ್ಮಿಕರು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಾರುಕಟ್ಟೆಗೆ ಒಯ್ಯಲು ಸಿದ್ಧವಾಗಿರುವ ಹೆಂಚಿನ ಉತ್ಪನ್ನಗಳನ್ನು ಜೋಡಿಸುತ್ತಿರುವ ಕಾರ್ಮಿಕರು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಗೋವರ್ಧನ್ ಶೆಟ್ಟಿ
ಗೋವರ್ಧನ್ ಶೆಟ್ಟಿ
ಹೆಂಚಿಗೆ ಈಗ ಮತ್ತೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಕಾರ್ಮಿಕರ ಕೊರತೆ ಆವೆಮಣ್ಣಿನ ಅಭಾವದಂತಹ ಬಿಕ್ಕಟ್ಟಿನಿಂದಾಗಿ ಕಾರ್ಖಾನೆ ಮುನ್ನಡೆಸುವುದು ಕಷ್ಟ.
ಗೋವರ್ಧನ ಶೆಟ್ಟಿ, ಮಾಲೀಕರು ಗಣೇಶ್‌ ಟೈಲ್ಸ್‌ ಫ್ಯಾಕ್ಟರಿ ಕೈಕಂಬ
ರಾಜೇಂದ್ರ ಕಲ್ಬಾವಿ
ರಾಜೇಂದ್ರ ಕಲ್ಬಾವಿ
ಆರ್‌ಸಿಸಿ ಚಾವಣಿಗೆ ಹೆಂಚು ಹೊದಿಸುವುದರಿಂದ ಕಟ್ಟಡದೊಳಗಿನ ಉಷ್ಣಾಂಶ 3ರಿಂದ 4 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಕಡಿಮೆಯಾಗುತ್ತದೆ. ಇದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ
ರಾಜೇಂದ್ರ ಕಲ್ಬಾವಿ, ದಕ್ಷಿಣ ಕನ್ನಡ ಜಿಲ್ಲೆಯ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ
ಪ್ರಕಾಶ ಟಿ.ಸೋನ್ಸ್‌
ಪ್ರಕಾಶ ಟಿ.ಸೋನ್ಸ್‌
ಆರ್‌ಸಿಸಿ ಚಾವಣಿಯ ಸರ್ಕಾರಿ ಕಟ್ಟಡಗಳಿಗೆ ಹೆಂಚು ಹೊದಿಸಬೇಕು. ಇದರಿಂದ ಕಟ್ಟಡವೂ ಅಂದವಾಗಿ ಕಾಣಿಸುತ್ತದೆ. ಕಟ್ಟಡದೊಳಗಿನ ಉಷ್ಣಾಂಶವೂ ತಗ್ಗುತ್ತದೆ. ಹೆಂಚು ತಯಾರಿಗೂ ಉತ್ತೇಜನ ಸಿಗುತ್ತದೆ
ಪ್ರಕಾಶ್‌ ಟಿ.ಸೋನ್ಸ್‌ ಕುಂದಾಪುರ ಹೆಂಚಿನ ಕಾರ್ಖಾನೆ ಮಾಲೀಕರ ಸಂಘ ಅಧ್ಯಕ್ಷ
ಪರಿಸರಸ್ನೇಹಿ ಹೆಂಚು– ಹಲವು ರೂಪಾಂತರ
ಜನರ ಬದಲಾದ ಅಭಿರುಚಿಗಳಿಗೆ ಅನುಗುಣವಾಗಿ ಸಾಂಪ್ರದಾಯಿಕ ಹೆಂಚು ಈಚಿನ ದಶಕಗಳಲ್ಲಿ ಹೊಸರೂಪಗಳನ್ನು ಪಡೆದಿದೆ. ಚಾವಣಿಗೆ ಬಳಸುವ ಹೆಂಚಿನ ಆಕಾರ ಗಾತ್ರದಲ್ಲಿ ಹೆಚ್ಚೇನೂ ವ್ಯತ್ಯಾಸವಾಗಿಲ್ಲ. ನೋಡಲು ಆಕರ್ಷಕವಾಗಿ ಕಾಣಿಸುವ ಪುಟ್ಟ ಹೆಂಚುಗಳೂ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆವೆಮಣ್ಣಿನ ಹೂದಾನಿ ಹೂಕುಂಡ ಕೆಲವು ಗೃಹಾಲಂಕಾರ ಆಕೃತಿಗಳನ್ನು ಹಾಗೂ ‘ಹಾಲೊ ಬ್ಲಾಕ್‌’ಗಳನ್ನೂ ಕೆಲವು ಹೆಂಚಿನ ಕಾರ್ಖಾನೆಗಳು ತಯಾರಿಸುತ್ತಿವೆ. ಹೆಚ್ಚುತ್ತಿರುವ ತಾಪಮಾನ ಜನರು ಪರಿಸರ ಸ್ನೇಹಿ ಕಟ್ಟಡ ಶೈಲಿಯನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಹೊರಗೆಷ್ಟೇ ಬಿಸಿಲಿದ್ದರೂ ಕಟ್ಟಡವನ್ನು ತಂಪಾಗಿಡಬಲ್ಲ ಹೆಂಚನ್ನು ಕಾಂಕ್ರೀಟ್‌ ಚಾವಣಿಗಳಿಗೂ ಹೊದಿಸಲು ಜನ ಬಯಸುತ್ತಿದ್ದಾರೆ. ಇದು ಹೆಂಚಿನ ಉದ್ಯಮಕ್ಕೆ ಮತ್ತೆ ಚೇತರಿಕೆಯ ಅವಕಾಶವನ್ನು ಒದಗಿಸಿದೆ. ಈ ಉದ್ದಿಮೆ ಮತ್ತೆ ಗತವೈಭವಕ್ಕೆ ಮರಳುವ ಆಶಾಭಾವ ಮೂಡಿಸಿದೆ. ಉಷ್ಣಾಂಶ 3 ಡಿಗ್ರಿಗಳಷ್ಟು ಇಳಿಕೆ: ‘ಆರ್‌ಸಿಸಿ ಬದಲು ಹೆಂಚಿನ ಛಾವಣಿ ನಿರ್ಮಿಸಿದರೆ ಕಟ್ಟಡದೊಳಗಿನ ಉಷ್ಣಾಂಶ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಬಲ್ಲುದು. ಹೆಂಚಿನ ಉಷ್ಣ ನಿರೋಧಕ ಗುಣ ಇದಕ್ಕೆ ಕಾರಣ. ಹೆಂಚಿನ ಚಾವಣಿಯಲ್ಲಿ ಪಕ್ಕಾಸಿನ ಕೆಳಗಡೆ ಗಾಳಿಯಾಡಲು ಅವಕಾಶವಿರುತ್ತದೆ. ಇದು ಕೂಡಾ ತಾಪ ಕಡಿಮೆಗೊಳಿಸಲು ಸಹಕಾರಿ. ಹೆಂಚಿನ ಸೀಲಿಂಗ್‌ ಹಾಗೂ ಫಾಲ್ಸ್‌ ಸೀಲಿಂಗ್‌ ಎರಡನ್ನೂ ಅಳವಡಿಸಿದರೆ ಕಟ್ಟಡದ ಉಷ್ಣಾಂಶ ಮತ್ತಷ್ಟು ಕಡಿಮೆಯಾಗುತ್ತದೆ. ಹೆಂಚಿನ ಚಾವಣಿ  ಮತ್ತು ಕಾಂಕ್ರೀಟ್‌ ಚಾವಣಿಗಳ ನಿರ್ಮಾಣ ವೆಚ್ಚದಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ’ ಎನ್ನುತ್ತಾರೆ ವಾಸ್ತುಶಿಲ್ಪಿ ಸತೀಶ್‌ ರಾವ್‌ ಇಡ್ಯಾ.

ಆರ್‌ಸಿಸಿಗೆ ಹೆಂಚಿನ ಹೊದಿಕೆ ‘ಆರ್‌ಸಿಸಿ ಕಟ್ಟಡದೊಳಗಿನ ಉಷ್ಣಾಂಶ ಕಡಿಮೆಮಾಡಲು ಹೆಂಚು ನೆರವಾಗುತ್ತದೆ. ಆರ್‌ಸಿಸಿ ಚಾವಣಿಗೆ ಹೆಂಚು ಹೊದಿಸುವ ವಿಧಾನ ಈಚೆಗೆ ಜನಪ್ರಿಯವಾಗುತ್ತಿದೆ. ಮಂಗಳೂರಿನಲ್ಲೇ 100ಕ್ಕೂ ಹೆಚ್ಚು ಆರ್‌ಸಿಸಿ ಚಾವಣಿಗಳಿಗೆ ಹೆಂಚು ಹೊದಿಸಿದ್ದೇವೆ. ಹೆಂಚಿನ ಹೋಲೊ ಬ್ಲಾಕ್‌ ಅಥವಾ ಇಟ್ಟಿಗೆಗಳಿಂದ ಗೋಡೆ ಕಟ್ಟಿದರೆ ಅದಕ್ಕೆ ಗಾರೆ ಮಾಡುವ ಅಗತ್ಯವಿಲ್ಲ. ಅದು ನೋಡಲೂ ಚೆನ್ನಾಗಿರುತ್ತದೆ. ಇದರಿಂದ ಕಟ್ಟಡದೊಳಗಿನ ವಾತಾವರಣ ತಂಪಾಗಿರುತ್ತದೆ. ಹೊಸತಾಗಿ ಮನೆ ನಿರ್ಮಿಸುವವರು ಈ ಬಗ್ಗೆ ಆಸಕ್ತಿ ತೊರಿಸುತ್ತಿದ್ದಾರೆ’ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲೆಯ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ. ‘ಗೋಡೆಗಳಿಗೆ ನೆಲಕ್ಕೆ ಹಾಸುವ ಆವೆಮಣ್ಣಿನ ಟೈಲ್‌ಗಳು ಮಾರುಕಟ್ಟೆಗೆ ಬಂದಿವೆ. ಹೆಂಚಿನ ಚಾವಣಿಯ ತಳಭಾಗದಲ್ಲಿ ಅಳವಡಿಸುವ ಸೀಲಿಂಗ್‌ ಹೆಂಚುಗಳೂ ಆಕರ್ಷಕ ವಿನ್ಯಾಸಗಳಲ್ಲಿ ಲಭ್ಯ. ಜನರ ಅಭಿರುಚಿಗೆ ತಕ್ಕಂತೆ ಹೆಂಚಿನ ಉದ್ದಿಮೆಯಲ್ಲಾದ ಮಾರ್ಪಾಡಿನಿಂದಾಗಿ ಈಗಿರುವ ಹೆಂಚಿನ ಕಾರ್ಖಾನೆಗಳು ಉಸಿರಾಡುವಂತಾಗಿದೆ’ ಎನ್ನುತ್ತಾರೆ ಹೆಜಮಾಡಿಯ ಉಮಾ ಹೆಂಚಿನ ಕಾರ್ಖಾನೆಯ ಮಾಲೀಕ ರಾಮಕೃಷ್ಣ. ‘ಕೆಲ ವರ್ಷಗಳ ಹಿಂದೆ ಬೇಡಿಕೆ ಇದ್ದಾಗ ಮಾತ್ರ ಹೆಂಚು ತಯಾರಿಸಿ ಉಳಿದ ಅವಧಿಯಲ್ಲಿ ಸುಟ್ಟ ಇಟ್ಟಿಗೆ ತಯಾರಿಸುತ್ತಿದ್ದೆವು. ಈಚಿನ ವರ್ಷಗಳಲ್ಲಿ ಹೆಂಚಿಗೆ ಮತ್ತೆ ಬೇಡಿಕೆ ಕುದುರುತ್ತಿದೆ. ಪರಿಸರ ಸ್ನೇಹಿ ಎಂಬ ಕಾರಣಕ್ಕೆ ಹೆಂಚನ್ನು ಜನ ಇಷ್ಟಪಡುತ್ತಿದ್ದಾರೆ. ಕೆಲವೊಮ್ಮೆ ಬೇಡಿಕೆ ಇದ್ದರೂ ಹೆಂಚು ಪೂರೈಸಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಗೋವರ್ಧನ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT