ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ‘ದೇಶದ್ರೋಹ’ದ ನಾಗಾಲೋಟ

Last Updated 16 ಫೆಬ್ರವರಿ 2021, 19:17 IST
ಅಕ್ಷರ ಗಾತ್ರ

ಕಳೆದ ಐದಾರು ವರ್ಷಗಳಿಂದ ಮಾನವ ಹಕ್ಕುಗಳ ಕಾರ್ಯಕರ್ತರು, ಕಲಾವಿದರು, ವಿಶ್ವವಿದ್ಯಾಲಯಗಳ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ವಿರುದ್ಧ ‘ದೇಶದ್ರೋಹ’ದ ಆರೋಪ ಹೊರಿಸುತ್ತಿರುವುದು ಹೆಚ್ಚಾಗಿದೆ. ಇದಕ್ಕೆ ಇತ್ತೀಚಿನ ಸೇರ್ಪಡೆ ಪರಿಸರ ಕಾರ್ಯಕರ್ತೆ ಬೆಂಗಳೂರಿನ ದಿಶಾ ರವಿ ಬಂಧನ ಪ್ರಕರಣ. ಈ ಹಿಂದೆ ಅರುಂಧತಿ ರಾಯ್, ಬಿನಾಯಕ್ ಸೇನ್, ವ್ಯಂಗ್ಯಚಿತ್ರಕಾರ ಅಸೀಮ್ ತ್ರಿವೇದಿ, ಅಸಾದುದ್ದೀನ್‌ ಒವೈಸಿ, ಪ್ರವೀಣ್ ತೊಗಾಡಿಯಾ ಮೊದಲಾದವರ ವಿರುದ್ಧ ಇದೇ ಅಸ್ತ್ರ ಪ್ರಯೋಗಿಸಲಾಗಿದೆ.

***

ಸೆಕ್ಷನ್ 124 ಎ
ಭಾರತೀಯ ದಂಡ ಸಂಹಿತೆಯ ‘ಸೆಕ್ಷನ್ 124 ಎ’ ದೇಶದ್ರೋಹ ಏನು ಎಂಬುದನ್ನು ವ್ಯಾಖ್ಯಾನಿಸುತ್ತದೆ. ಸರ್ಕಾರದ ವಿರುದ್ಧ ಅಸಮಾಧಾನವನ್ನು ಪ್ರಚೋದಿಸುವ ಪ್ರಯತ್ನಗಳು ದೇಶದ್ರೋಹ ಪ್ರಕರಣ ಎನಿಸಿಕೊಳ್ಳುತ್ತವೆ. ಅಂದರೆ ಯಾವುದೇ ವ್ಯಕ್ತಿಯು ಮಾತಿನಿಂದ, ಬರವಣಿಗೆಯ ಮೂಲಕ ಅಥವಾ ಚಿಹ್ನೆಗಳ ಮೂಲಕ ಸರ್ಕಾರದ ವಿರುದ್ಧ ದ್ವೇಷವನ್ನು ಅಥವಾ ತಿರಸ್ಕಾರವನ್ನು ಹುಟ್ಟಿಸಲು ಯತ್ನಿಸಿದರೆ ಅಥವಾ ಅದಕ್ಕೆ ಪ್ರಚೋದಿಸಿದರೆ ಅದು ದೇಶದ್ರೋಹ ಎನಿಸಿಕೊಳ್ಳುತ್ತದೆ. ಆದರೆ ದ್ವೇಷ, ತಿರಸ್ಕಾರ ಅಥವಾ ಅಸಮಾಧಾನವನ್ನು ಪ್ರಚೋದಿಸದ ಮತ್ತು ಉತ್ತೇಜಿಸದ ಹೇಳಿಕೆಗಳು ಈ ವಿಭಾಗದ ಅಡಿಯಲ್ಲಿ ಅಪರಾಧ ಎನಿಸುವುದಿಲ್ಲ.

ಶಿಕ್ಷೆ ಏನು?
ದೇಶದ್ರೋಹದಡಿ ದಾಖಲಾಗುವ ಪ್ರಕರಣವು ಜಾಮೀನುರಹಿತ ಅಪರಾಧ ವಾಗಿದೆ. ಸೆಕ್ಷನ್ 124 ಎ ಅಡಿ 3 ವರ್ಷದಿಂದ ಜೀವಾವಧಿವರೆಗೂ ಶಿಕ್ಷೆ ನೀಡಬಹುದು. ದಂಡವನ್ನೂ ಹಾಕಬಹುದು. ಈ ಕಾನೂನಿನಡಿಯಲ್ಲಿ ಆರೋಪ ಹೊರಿಸಲಾದ ವ್ಯಕ್ತಿಗೆ ಸರ್ಕಾರಿ ಉದ್ಯೋಗವನ್ನು ನಿರ್ಬಂಧಿಸಲಾಗಿದೆ. ಅಗತ್ಯವಿದ್ದಾಗ ನ್ಯಾಯಾಲಯಕ್ಕೆ ಹಾಜರಾಗಬೇಕು.

ಪ್ರಮುಖ ಪ್ರಕರಣಗಳು
ಪ್ರಧಾನಿಗೆ ಪತ್ರ ಬರೆದ ಅಪರಾಧ

2019ರ ಜುಲೈನಲ್ಲಿ ದೇಶದ ವಿವಿಧ ಕ್ಷೇತ್ರದ 49 ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದರು. ದೇಶದಲ್ಲಿ ಗುಂಪುಹಲ್ಲೆ ಮತ್ತು ಹತ್ಯೆಗಳ ಸಂಖ್ಯೆ ಏರಿಕೆಯದ ಸಂದರ್ಭದಲ್ಲಿ ಈ ಗಣ್ಯರು ಪ್ರಧಾನಿಗೆ ಪತ್ರ ಬರೆದಿದ್ದರು. ಇದೇ ಸಂದರ್ಭದಲ್ಲಿ ದೇಶದಾದ್ಯಂತ ‘ನಾಟ್‌ ಇನ್‌ ಮೈ ನೇಮ್‌’ ಹೆಸರಿನ ಚಳವಳಿಯೂ ನಡೆಯುತ್ತಿತ್ತು. ಪತ್ರ ಬರೆದಿದ್ದ ಗಣ್ಯರು ಈ ಚಳವಳಿಯ ಮುಂದಾಳತ್ವ ವಹಿಸಿದ್ದರು. ಇವರೆಲ್ಲರ ವಿರುದ್ಧ 2019ರ ಅಕ್ಟೋಬರ್‌ನಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ರಾಮಚಂದ್ರ ಗುಹಾ, ಅಡೂರು ಗೋಪಾಲಕೃಷ್ಣನ್, ಮಣಿರತ್ನಂ, ಅಪರ್ಣಾ ಸೆನ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಭೀಮಾ ಕೋರೆಗಾಂವ್‌ ಹಿಂಸಾಚಾರ ಪ್ರಕರಣ
ಮರಾಠರ ವಿರುದ್ಧ ಪರಿಶಿಷ್ಟರು ಯುದ್ಧದಲ್ಲಿ ಜಯಗಳಿಸಿದ ಭೀಮಾ ಕೋರೆಗಾಂವ್ ವಿಜಯೋತ್ಸವದ 200ನೇ ವರ್ಷಾಚರಣೆ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೇಶದ 19 ಗಣ್ಯರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಇವರಲ್ಲಿ ತೆಲುಗು ಕವಿ ವರವರ ರಾವ್, ಮಾನವ ಹಕ್ಕುಗಳ ಹೋರಾಟಗಾರರಾದ ಗೌತಮ್ ನವಲಖಾ, ಸುಧಾ ಭಾರದ್ವಾಜ್, ಸ್ಟ್ಯಾನ್‌ಸ್ವಾಮಿ ಸೇರಿದಂತೆ 19 ಜನರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು, ಸರ್ಕಾರ ಉರುಳಿಸಲು ಸಂಚು ಆರೋಪದಲ್ಲಿ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿದೆ. ಈ ಪ್ರಕರಣದ ತನಿಖೆ ಮತ್ತು ವಿಚಾರಣೆ ಪ್ರಗತಿಯಲ್ಲಿ ಇದೆ.

<em><strong>ಬರಹಗಾರ ವರವರ ರಾವ್ ಅವರನ್ನು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ 2018ರಲ್ಲಿ ಬಂಧಿಸಿ ಪುಣೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು –ಸಂಗ್ರಹ ಚಿತ್</strong></em>
ಬರಹಗಾರ ವರವರ ರಾವ್ ಅವರನ್ನು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ 2018ರಲ್ಲಿ ಬಂಧಿಸಿ ಪುಣೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು –ಸಂಗ್ರಹ ಚಿತ್

ರೈತರ ಹೋರಾಟ ಬೆಂಬಲಕ್ಕೂ ಹಣೆಪಟ್ಟಿ
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟದಲ್ಲಿ ಭಾಗಿಯಾಗಿರುವವರು ಮತ್ತು ಹೋರಾಟಕ್ಕೆ ಬೆಂಬಲ ನೀಡುತ್ತಿರುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಜನವರಿ 26ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರದ ಆರೋಪಿಗಳಲ್ಲಿ ಕೆಲವರ ವಿರುದ್ಧ ದೇಶದ್ರೋಹ ಮತ್ತು ಕಾನೂನುಬಾಹಿರ ಚಟುವಟಿಕೆ ನಡೆಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ.

ಪ್ರತಿಭಟನೆಯ ‘ಟೂಲ್‌ಕಿಟ್‌’ ರೂಪಿಸಿದ ಆರೋಪದ ಮೇಲೆ ಮೂವರ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿದೆ. ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಯತ್ನದ ವಿರುದ್ಧ ಟ್ವೀಟ್ ಮಾಡಿದ ಸಂಸದ ಶಶಿ ತರೂರ್‌, ಹಿರಿಯ ಪತ್ರಕರ್ತ ರಾಜ್‌ದೀಪ್‌ ಸರ್ದೇಸಾಯಿ, ನ್ಯಾಷನಲ್‌ ಹೆರಾಲ್ಡ್‌ನ ಮೃಣಾಲ್‌ ಪಾಂಡೆ, ಕೌಮಿ ಆವಾಜ್‌ನ ಜಾಫರ್ ಆಘಾ, ದಿ ಕ್ಯಾರವನ್‌ ಸುದ್ದಿ ಸಮೂಹದ ಅನಂತ್‌ ನಾಥ್‌ ಮತ್ತು ವಿನೋದ್‌ ಜೋಶ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿವೆ.

ಅತ್ಯಾಚಾರ ವಿರೋಧಿ ಹೋರಾಟ
2019ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದರ ವಿರುದ್ಧ ಉತ್ತರ ಪ್ರದೇಶದಲ್ಲಿ ಭಾರಿ ಪ್ರತಿಭಟನೆ ಮತ್ತು ಹಿಂಸಾಚಾರ ನಡೆದಿತ್ತು. ಸರ್ಕಾರವನ್ನು ಉರುಳಿಸಲು ಈ ಹೋರಾಟ ನಡೆಸಲಾಗುತ್ತಿದೆ ಎಂಬ ಆರೋಪದಲ್ಲಿ ಹಲವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಕೇರಳ ಪತ್ರಕರ್ತ ಸಿದ್ದಿಕಿ ಕಪ್ಪನ್ ಮತ್ತು ಇನ್ನೂ ಮೂವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ 2019 ಮತ್ತು 2020ರಲ್ಲಿ ದೇಶದ ಹಲವೆಡೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾ
ದವರ ವಿರುದ್ಧ 200ಕ್ಕೂ ಹೆಚ್ಚು ದೇಶದ್ರೋಹದ ಪ್ರಕರಣಗಳು ದಾಖಲಾಗಿವೆ.

ಕನ್ಹಯ್ಯ ಕುಮಾರ್ ಮತ್ತು ಇತರರು
2016ರ ಫೆಬ್ರವರಿ 9ರಂದು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಕ್ಯಾಂಪಸ್‌ನಲ್ಲಿ ಸಂಸತ್ ಮೇಲಿನ ದಾಳಿಯ ಅಪರಾಧಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ದಿನವನ್ನು ಸ್ಮರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೆಎನ್‌ಯು ವಿದ್ಯಾರ್ಥಿ ಸಂಘದ ಅಂದಿನ ಅಧ್ಯಕ್ಷ ಕನ್ಹಯ್ಯ ಕುಮಾರ್ ಮೆರವಣಿಗೆಯ ನೇತೃತ್ವ ವಹಿಸಿದ್ದರು ಎಂಬ ಆರೋಪದ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿದೆ.

ಕನ್ಹಯ್ಯ ಕುಮಾರ್ ಮತ್ತು ಇತರ 9 ಜನರನ್ನು ಬರುವ ಮಾರ್ಚ್ 15ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ. ಸೈಯದ್ ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ, ಅಕ್ವಿಬ್ ಹುಸೇನ್, ಮುಜೀಬ್ ಹುಸೇನ್ ಗಟೂ, ಮುನೀಬ್ ಹುಸೇನ್ ಗಟೂ, ಉಮರ್ ಗುಲ್, ರಯೀದ್ ಬಶೀರ್ ಮೊದಲಾದವರು ವಿಚಾರಣೆಗೆ ಹಾಜರಾಗಬೇಕಿದೆ.

ಕೂಡಂಕುಳಂ ಪ್ರತಿಭಟನಕಾರರು
ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ 8,856 ಜನರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. 2012–13ರಲ್ಲಿ ಕೂಡಂಕುಳಂನಲ್ಲಿ ಅಣುಸ್ಥಾವರ ಸ್ಥಾಪನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಆರೋಪ ಇವರ ಮೇಲಿದೆ. ಸೆಕ್ಷನ್ 124 ಎ,
ಸೆಕ್ಷನ್ 121 ಸೇರಿದಂತೆ ಡಜನ್‌ಗಟ್ಟಲೆ ಪ್ರಕರಣಗಳನ್ನು ಇವರು ಎದುರಿಸುತ್ತಿದ್ದಾರೆ.

ಶರ್ಜೀಲ್‌ ಇಮಾಮ್‌ ಭಾಷಣ
ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಅಲಿಗಡ ವಿಶ್ವವಿದ್ಯಾಲಯಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಜೆಎನ್‌ಯು ಪಿಎಚ್‌ಡಿ ವಿದ್ಯಾರ್ಥಿ ಶರ್ಜೀಲ್‌ ಇಮಾಮ್‌ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಕಳೆದ ವರ್ಷ ಇಮಾಮ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ‘ಶರ್ಜೀಲ್‌ ಮಾಡಿದ ಭಾಷಣ ದ್ವೇಷಕ್ಕೆ ಪ್ರಚೋದನೆ ನೀಡಿದ್ದು, ಇದರಿಂದಾಗಿಯೇ ಜಾಮಿಯಾ ಆವರಣದಲ್ಲಿ ಗಲಭೆ ನಡೆಯಿತು’ ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಹಾರ್ದಿಕ್ ಪಟೇಲ್ ಮೀಸಲು ಚಳವಳಿ
ಗುಜರಾತ್‌ನಲ್ಲಿ ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಹಾರ್ದಿಕ್ ಪಟೇಲ್ ಅವರು 2015ರಲ್ಲಿ ಬೃಹತ್ ಹೋರಾಟ ನಡೆಸಿದ್ದರು. ಈ ವೇಳೆ ಅವರ ವಿರುದ್ಧ ದೇಶದ್ರೋಹ ಆರೋಪ ಹೊರಿಸಿ ಜೈಲಿಗೆ ಕಳುಹಿಸಲಾಗಿತ್ತು. ಗಲಭೆ ಮತ್ತು ಪಿತೂರಿ ನಡೆಸಿದ ಆರೋಪ ಅವರ ಮೇಲಿದ್ದವು. ನಂತರದ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಅವರು ಈಗ ಪಕ್ಷದ ಗುಜರಾತ್ ಘಟಕದ ಕಾರ್ಯಾಧ್ಯಕ್ಷ ಆಗಿದ್ದಾರೆ.

ಆಳ–ಅಗಲ: ‘ದೇಶದ್ರೋಹ’ದ ನಾಗಾಲೋಟ

ವೈಕೋಗೆ ಶಿಕ್ಷೆ
ತಮಿಳುನಾಡಿನ ಎಂಡಿಎಂಕೆ ಮುಖ್ಯಸ್ಥ ವಿ. ಗೋಪಾಲಸ್ವಾಮಿ (ವೈಕೋ) ಅವರಿಗೆ ದೇಶದ್ರೋಹ ಪ್ರಕರಣದಲ್ಲಿ ಹೈಕೋರ್ಟ್‌ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ, ₹10,000 ದಂಡ ಪಾವತಿಸುವಂತೆ ಸೂಚಿಸಿತ್ತು. 2009ರಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀಲಂಕಾದ ಎಲ್‌ಟಿಟಿಇ ಪರವಾದ ನಿಲುವು ವ್ಯಕ್ತಪಡಿಸಿ, ಭಾರತದ ವಿರುದ್ಧ ಮಾತನಾಡಿದ್ದರು ಎಂಬ ಆರೋಪ ಹೊರಿಸಲಾಗಿತ್ತು. ಈ ಕಾರಣಕ್ಕೆ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿತ್ತು.

ಅಸೀಮ್ ತ್ರಿವೇದಿ ವ್ಯಂಗ್ಯ ಚಿತ್ರ
ಕಾನ್ಪುರ ಮೂಲದ ಕಲಾವಿದ ಅಸೀಮ್ ತ್ರಿವೇದಿ ಅವರು ಆಕ್ಷೇಪಾರ್ಹ ವ್ಯಂಗ್ಯಚಿತ್ರ ರಚಿಸಿದ್ದಾರೆ ಎಂಬ ಆರೋಪದ ಮೇಲೆ ದೇಶದ್ರೋಹ ಮೊಕದ್ದಮೆ ಹೂಡಲಾಗಿತ್ತು. ಭ್ರಷ್ಟಾಚಾರದ ವಿರುದ್ಧ ವ್ಯಂಗ್ಯಚಿತ್ರ ಅಭಿಯಾನ ನಡೆಸಿದ್ದ ಅವರನ್ನು 2012ರಲ್ಲಿ ಬಂಧಿಸಲಾಗಿತ್ತು.

ಕರ್ನಾಟಕದಲ್ಲೂ ಹಲವು ಪ್ರಕರಣ
ಐಪಿಸಿ 124ಎ ಅಡಿ, ದೇಶದ್ರೋಹದ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕಳೆದ ಒಂದು ದಶಕದಲ್ಲಿ ರಾಜ್ಯದಲ್ಲಿ ದೇಶದ್ರೋಹದ ಸುಮಾರು 50 ಪ್ರಕರಣಗಳು ದಾಖಲಾಗಿವೆ. 2019ರಲ್ಲಿ ಇಂಥ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. 2018ರಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದರೆ, 2019ರಲ್ಲಿ 22 ಪ್ರಕರಣಗಳು ದಾಖಲಾಗಿದ್ದವು.

ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿದ ಸಂದರ್ಭದಲ್ಲಿ ದೇಶದ ಕೆಲವು ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ಅಂಥ ಪ್ರತಿಭಟನೆಯೊಂದರಲ್ಲಿ ಮೈಸೂರಿನ ನಳಿನಿ ಎಂಬುವವರು ‘ಫ್ರೀ ಕಾಶ್ಮೀರ್‌’ ಎಂದು ಬರೆದಿದ್ದ ಫಲಕವನ್ನು ಹಿಡಿದಿದ್ದರು. ಇದಾಗಿ ಸ್ವಲ್ಪ ದಿನಗಳಲ್ಲೇ ಬೆಂಗಳೂರಿನ ಟೌನ್‌ಹಾಲ್‌ ಬಳಿ ನಡೆದ ಪ್ರತಿಭಟನೆಯಲ್ಲಿ ಆರ್ದ್ರಾ ಎಂಬ ಯುವತಿಯೂ ಅಂಥದ್ದೇ ಫಲಕವನ್ನು ಹಿಡಿದಿದ್ದರು. ಈ ಇಬ್ಬರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಹೋರಾಟಗಳ ಸಂದರ್ಭದಲ್ಲಿ ಇಂಥ ಹಲವು ಪ್ರಕರಣಗಳು ದಾಖಲಾದವು. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ರ್‍ಯಾಲಿಯೊಂದರಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಅವರ ಸಮ್ಮುಖದಲ್ಲಿ ಅಮೂಲ್ಯಾ ಲಿಯೊನಾ ಎಂಬ ಯುವತಿ ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂದು ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಯಿತು. ಅವರನ್ನು ವೇದಿಕೆಯಿಂದಲೇ ಪೊಲೀಸರು ಎಳೆದೊಯ್ದಿದ್ದರು. ದೇಶದ್ರೋಹಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಹೆಚ್ಚು ಸುದ್ದಿ ಮಾಡಿದ್ದ ಘಟನೆ ಇದಾಗಿತ್ತು.

ಇನ್ನೂ ಕೆಲವು ಪ್ರಕರಣಗಳಲ್ಲಿ ಸರ್ಕಾರವೇ ಮುಜುಗರಕ್ಕೆ ಒಳಗಾಗಿದ್ದಿದೆ. ಬೀದರ್‌ನ ಶಾಲೆಯೊಂದರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಮಕ್ಕಳಿಂದ ನಾಟಕ ಮಾಡಿಸಲಾಗಿತ್ತು. ಅಲ್ಲಿ ಸರ್ಕಾರದ ವಿರುದ್ಧದ ಹೋರಾಟಕ್ಕೆ ಶಾಲಾ ಮಕ್ಕಳನ್ನು ಬಳಸಲಾಗಿದೆ ಎಂದು ಶಾಲೆಯ ಆಡಳಿತ ಮಂಡಳಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಣ್ಣ ಮಕ್ಕಳನ್ನು ಸಹ ವಿಚಾರಣೆಗೆ ಒಳಪಡಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

ಆನೆಗೊಂದಿ ಉತ್ಸವದಲ್ಲಿ ಕವಿ ಸಿರಾಜ್ ಬಿಸರಹಳ್ಳಿ ಎಂಬುವರು ಸಿಎಎ ವಿರೋಧಿಸಿ ‘ನಿಮ್ಮ ದಾಖಲೆ ಯಾವಾಗ ನೀಡುತ್ತೀರಿ’ ಎಂಬ ಕವನ ಓದಿದ್ದರು. ಇವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರದ ದಿನಗಳಲ್ಲಿ ಇದು ಸರ್ಕಾರಕ್ಕೆ ಸಾಕಷ್ಟು ಮುಜುಗರ ಉಂಟುಮಾಡಿತು. ಸರ್ಕಾರದ ಕ್ರಮವನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲೇ ಆ ಕವನವನ್ನು ಓದಿದ್ದರು.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸುದ್ದಿ ಮಾಡಿದ್ದ ಪ್ರಕರಣಗಳು ಇವು. ಇದಾದ ನಂತರ ಈಗ ದಿಶಾ ರವಿ ಅವರ ಪ್ರಕರಣ ಹೆಚ್ಚು ಸದ್ದು ಮಾಡುತ್ತಿದೆ.

* ಶೇ 65ರಷ್ಟು ಪ್ರಕರಣಗಳು 2014ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ದಾಖಲಾಗಿವೆ

* ಎನ್‌ಡಿಎ ಅವಧಿಯಲ್ಲಿ ಪಾಟಿದಾರ್ ಮೀಸಲಾತಿ, ಜಾಟ್ ಮೀಸಲಾತಿ ಹೋರಾಟಗಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರರೋಧಿ ಹೋರಾಟಗಾರರ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ

* ಯುಪಿಎ-2 ಅವಧಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಶೇ 32ರಷ್ಟು ಪ್ರಕರಣಗಳು ಕೂಡುಕುಳಂ ಅಣುಸ್ಥಾವರ ವಿರೋಧಿ ಹೋರಾಟಗಾರರ ವಿರುದ್ಧ ದಾಖಲಾಗಿವೆ

ಆಳ–ಅಗಲ: ‘ದೇಶದ್ರೋಹ’ದ ನಾಗಾಲೋಟ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT