ಸುಶ್ರಾವ್ಯ ಸಂಗೀತದ ಮೂಲಕ ಜನರನ್ನು ಸದಾ ಮುದಗೊಳಿಸುತ್ತಿದ್ದ ಅಫ್ಗಾನಿಸ್ತಾನದ ಬಾಲ್ಕ್ ಜಿಲ್ಲೆಯಲ್ಲಿ ಇರುವ ಏಕೈಕ ಎಫ್‌ಎಂ ರೇಡಿಯೊದಲ್ಲಿ ಈಗ ಹಾಡುಗಳು ಬಿತ್ತರವಾಗುತ್ತಿಲ್ಲ. ಬದಲಿಗೆ ಧಾರ್ಮಿಕತೆಯನ್ನು ಹೆಚ್ಚಿಸುವ ಉದ್ದೇಶದ ಪಠಣಗಳು, ಸರ್ಕಾರದ ವಿರುದ್ಧದ ಹೇಳಿಕೆಗಳು ಮಾತ್ರ ಪ್ರಸಾರ ಆಗುತ್ತಿವೆ. ಇಡೀ ದೇಶದ ಸ್ಥಿತಿಯ ರೂಪಕದಂತೆ ಇದು ಕಾಣಿಸುತ್ತಿದೆ.

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಉಗ್ರಗಾಮಿ ಸಂಘಟನೆಯನ್ನು ಹದ್ದುಬಸ್ತಿನಲ್ಲಿ ಇರಿಸಲು ನಿಯೋಜಿಸಲಾಗಿದ್ದ ಅಮೆರಿಕ ಸೇನೆಯನ್ನು ಅಲ್ಲಿಂದ ಬಹುತೇಕ ತೆರವು ಮಾಡಲಾಗಿದೆ. ಸೇನೆಯನ್ನು ಸೆಪ್ಟೆಂಬರ್ ಹೊತ್ತಿಗೆ ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದಾಗಿನಿಂದಲೇ ತಾಲಿಬಾನ್ ತನ್ನ ಬಾಹುಗಳನ್ನು ಅಗಲಿಸಲು ಆರಂಭಿಸಿತ್ತು. ಅಮೆರಿಕ ಸೇನೆಯು ಹಿಂದಕ್ಕೆ ಸರಿಯುವುದು ಆರಂಭವಾದ ಬಳಿಕ ತಾಲಿಬಾನ್ ಆಕ್ರಮಣವು ತೀವ್ರಗೊಂಡಿದೆ.

ಓದಿ:ಅಫ್ಗಾನ್ ಶಾಂತಿ ಸ್ಥಾಪನೆಗೆ ನೆರವು ಹೊರತು ಖಾತರಿದಾರ ಅಲ್ಲ: ಪಾಕಿಸ್ತಾನ ಹೇಳಿಕೆ

1996ರಿಂದ 2001ರವರೆಗೆ ಅಫ್ಗಾನಿಸ್ತಾನವನ್ನು ಆಳಿದ್ದ ಮೂಲಭೂತವಾದಿ ತಾಲಿಬಾನ್, ಜನರ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿತ್ತು. ಮತ್ತೆ, ಅದೇ ಆಳ್ವಿಕೆ ಬೇರೊಂದು ರೀತಿಯಲ್ಲಿ ಅಫ್ಗಾನಿಸ್ತಾನದಲ್ಲಿ ಸ್ಥಾಪನೆಯಾಗುವ ಲಕ್ಷಣಗಳು ಕಾಣಿಸುತ್ತಿವೆ.

ಒಂದರ ನಂತರ ಒಂದರಂತೆ ಜಿಲ್ಲೆಗಳನ್ನು ತಾಲಿಬಾನ್ ವಶಕ್ಕೆ ಪಡೆಯುತ್ತಿದೆ. ಅಫ್ಗಾನಿಸ್ತಾನ ಸರ್ಕಾರದ ಸೇನೆಯು ಅಲ್ಲಲ್ಲಿ ನಡೆದ ಯುದ್ಧದಲ್ಲಿ ಸೋಲು ಒಪ್ಪಿಕೊಳ್ಳುತ್ತಿದೆ ಅಥವಾ ಪರಾರಿಯಾಗುತ್ತಿದೆ. ದೇಶದ ಶೇ 85ರಷ್ಟು ಭಾಗ ತನ್ನ ನಿಯಂತ್ರಣದಲ್ಲಿ ಇದೆ ಎಂದು ತಾಲಿಬಾನ್ ಹೇಳಿಕೊಳ್ಳುತ್ತಿದೆ. ಇದನ್ನು ಸ್ವತಂತ್ರವಾಗಿ ದೃಢಪಡಿಸಿಕೊಳ್ಳಲು ಸಾಧ್ಯವೇನೂ ಇಲ್ಲ ಎಂದು ಬಿಬಿಸಿ ವರದಿ ಮಾಡಿದೆ.

ರಾಜಧಾನಿ ಕಾಬೂಲ್ ಮತ್ತು ಸುತ್ತಲಿನ ಪ್ರದೇಶಗಳಷ್ಟೇ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರದ ನಿಯಂತ್ರಣದಲ್ಲಿ ಇದೆ ಎಂಬ ವರದಿಗಳೂ ಇವೆ. ಅಫ್ಗಾನಿಸ್ತಾನವು ಸಂಪೂರ್ಣವಾಗಿ ತಾಲಿಬಾನ್ ನಿಯಂತ್ರಣಕ್ಕೆ ಒಳಪಡಲು ಕೆಲವೇ ದಿನಗಳು ಸಾಕು ಎಂದೂ ವಿಶ್ಲೇಷಕರು ಹೇಳುತ್ತಿದ್ದಾರೆ.

ಪ್ರಜಾಪ್ರಭುತ್ವ ದೇಶವಾಗಿರುವ ಅಫ್ಗಾನಿಸ್ತಾನವನ್ನು ಮುಸ್ಲಿಂ ರಾಷ್ಟ್ರವಾಗಿ ಪರಿವರ್ತಿಸಬೇಕು ಎಂಬುದು ತಾಲಿಬಾನ್‌ನ ಗುರಿ. ಅಮೆರಿಕದ ಮಧ್ಯ ಪ್ರವೇಶದಿಂದಾಗಿ ತಾಲಿಬಾನ್ ಪಡೆಗಳಿಗೆ 2001ರಲ್ಲಿ ಸೋಲಾಯಿತು. ಆದರೆ, ಸಂಘಟನೆಯು ತನ್ನ ನೆಲೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳಲಿಲ್ಲ. ಅಳಿದುಳಿದ ಬಲವನ್ನು ಕ್ರೋಡೀಕರಿಸಿಕೊಂಡ ಉಗ್ರಗಾಮಿ ಸಂಘಟನೆಯು, ಅಮೆರಿಕ ಅಥವಾ ಬೇರಾವುದೇ ದೇಶದ ಸೇನೆಯು ಅಫ್ಗಾನಿಸ್ತಾನದಲ್ಲಿ ಇಲ್ಲದ ಕಾರಣ ಹೆಚ್ಚು ಬಲಯುತವಾಗಿದೆ.

ಓದಿ:ಅಫ್ಗಾನಿಸ್ತಾನದ ಶೇ. 85 ರಷ್ಟು ಭೂಪ್ರದೇಶ ನಮ್ಮ ನಿಯಂತ್ರಣದಲ್ಲಿದೆ: ತಾಲಿಬಾನ್

ಮೂಲಭೂತವಾದಿ ಆಳ್ವಿಕೆಯು ಮತ್ತೆ ನೆಲೆಯೂರಲಿದೆ ಎಂಬುದರ ಸುಳಿವುಗಳು ಈಗಾಗಲೇ ಕಾಣಿಸಿಕೊಂಡಿವೆ. ತಾಲಿಬಾನ್ ನಿಲುವು ಮೃದುವಾಗಬಹುದು ಎಂಬ ನಿರೀಕ್ಷೆ ಅಲ್ಲಿನ ಜನರಲ್ಲಿ ಇತ್ತು. ಆದರೆ, ತನ್ನ ಸಂಪೂರ್ಣ ನಿಯಂತ್ರಣಕ್ಕೆ ಒಳಪಟ್ಟ ಪ್ರದೇಶಗಳಲ್ಲಿ ಹಲವು ನಿರ್ಬಂಧಗಳನ್ನು ತಾಲಿಬಾನ್ ಹೇರಿದೆ. ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಜಾರಿಯಲ್ಲಿದ್ದ ರೀತಿಯ ನಿಯಮಗಳನ್ನು ಅನುಸರಿಸಬೇಕು ಎಂಬ ಕರಪತ್ರಗಳನ್ನು ಉಗ್ರರು ಹಂಚಿದ್ದಾರೆ ಎಂದು ಕೆಲವು ಪ್ರದೇಶಗಳ ಜನರು ಹೇಳಿದ್ದಾಗಿ ವರದಿಯಾಗಿದೆ.

ಮಹಿಳೆಯರು ಮನೆಯಿಂದ ಹೊರಗೆ ಬರುವಾಗ ಕಾಲಿನಿಂದ ತಲೆಯವರೆಗೆ ವಸ್ತ್ರದಲ್ಲಿ ಮುಚ್ಚಿಕೊಳ್ಳಬೇಕು, ಜತೆಗೆ ಒಬ್ಬ ಪುರುಷ ಇರಲೇಬೇಕು ಎಂಬಂತಹ ನಿಯಮಗಳು ಹಿಂದೆ ಜಾರಿಯಲ್ಲಿ ಇದ್ದವು. ಮತ್ತೆ ಅದೇ ಯುಗಕ್ಕೆ ಮರಳಬೇಕಾಗಬಹುದು ಎಂಬ ಕಳವಳ ಜನರಲ್ಲಿ ಮೂಡಿದೆ.

ಹೆಜ್ಜೆ ಹಿಂದಿಕ್ಕಿದ ಅಮೆರಿಕ

2,500 –ಪ್ರಸ್ತುತ ಅಫ್ಗಾನಿಸ್ತಾನದಲ್ಲಿರುವ ಅಮೆರಿಕ ಯೋಧರ ಸಂಖ್ಯೆ

8,000 – ಈಗಅಫ್ಗಾನಿಸ್ತಾನದಲ್ಲಿರುವ ‘ನ್ಯಾಟೊ’ ಸೈನಿಕರ ಸಂಖ್ಯೆ

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಎರಡು ದಶಕದಿಂದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಅಮೆರಿಕದ ಸೇನಾ ಕಾರ್ಯಾಚರಣೆ ಕೊನೆಯಾಗಲಿದೆ. ಇದೇ ಆಗಸ್ಟ್ 31ರಂದು ಸೇನೆಯು ಅಲ್ಲಿಂದ ವಾಪಾಸಗಲಿದೆ. ಈ ಪ್ರಕ್ರಿಯೆಸುರಕ್ಷಿತ ಮತ್ತು ಕ್ರಮಬದ್ಧ ರೀತಿಯಲ್ಲಿ ಆಗಲಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಎರಡು ದಿನಗಳ ಹಿಂದಷ್ಟೇ ಘೋಷಣೆ ಮಾಡಿದ್ದರು.

ಅಮೆರಿಕವು ಅಂದುಕೊಂಡ ರೀತಿ ತನ್ನ ಗುರಿಗಳನ್ನು ಸಾಧಿಸಿದ್ದು, ಸೇನೆ ಹಿಂತೆಗೆದುಕೊಳ್ಳಲು ಇದು ಸೂಕ್ತ ಸಮಯ ಎಂದು ಬೈಡನ್ ಹೇಳಿದ್ದರು. ಅಮೆರಿಕದ ಸೈನ್ಯವನ್ನು ಹಿಂತೆಗೆದುಕೊಂಡ ಕೂಡಲೇ ತಾಲಿಬಾನ್ ಉಗ್ರರುಅಫ್ಗಾನಿಸ್ತಾನವನ್ನು ಸ್ವಾಧೀನಪಡಿಸಿಕೊಳ್ಳಲಿದ್ದಾರೆ ಎಂಬ ವರದಿಗಳನ್ನು ಬೈಡನ್ ಅವರು ತಳ್ಳಿಹಾಕಿದ್ದರು. ಆದರೆ ಈ ಘೋಷಣೆ ಮಾಡಿದ ಕೂಡಲೇ ತಾಲಿಬಾನ್ ತನ್ನ ಚಟುವಟಿಕೆಗಳನ್ನು ಸಕ್ರಿಯಗೊಳಿಸಿದೆ.

‘ಅಫ್ಗಾನಿಸ್ತಾನ ಸರ್ಕಾರ ಮತ್ತು ಅಲ್ಲಿನ ನಾಯಕತ್ವ ಜೊತೆಯಾಗಿ ಕೆಲಸ ಮಾಡಬೇಕಿದೆ. ಅವರಿಗೆ ಆಡಳಿತ ನಡೆಸುವ ಸಾಮರ್ಥ್ಯಕ್ಕೆ ತಕ್ಕ ಸೇನೆ ಇದೆ. ಸಾಕಷ್ಟು ಸವಲತ್ತುಗಳಿವೆ. ಆದರೆ ಅವರು ಅದನ್ನು ಮಾಡುತ್ತಾರೆಯೇ ಎಂಬುದು ಪ್ರಶ್ನೆ. ಅಗತ್ಯ ಬಿದ್ದಾಗ ಎಲ್ಲಕ್ಷೇತ್ರಗಳಲ್ಲೂ ನಾವು ಸಹಾಯಕ್ಕೆ ನಿಲ್ಲುತ್ತೇವೆ’ ಎಂದು ಅವರು ತಿಳಿಸಿದ್ದಾರೆ.

ನ್ಯಾಟೊ ಮಿತ್ರರಾಷ್ಟ್ರಗಳು ಸೇರಿ ‘ಅಫ್ಗಾನ್ ರಾಷ್ಟ್ರೀಯ ಸೇನೆ’ಯಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 3 ಲಕ್ಷ ಸೇನಾ ಸಿಬ್ಬಂದಿಯನ್ನು ತರಬೇತುಗೊಳಿಸಿವೆ.

ಸೇನಾ ವಾಪಸಾತಿಯ ಬಳಿಕ ಅಫ್ಗಾನ್‌ನಲ್ಲಿ ರಾಜತಾಂತ್ರಿಕ ಹಿಡಿತ ಮುಂದುವರಿಸು ವುದು, ತಾಲಿಬಾನ್ ಹಿಡಿತಕ್ಕೆ ಸಿಗದಂತೆ ನೋಡಿಕೊಳ್ಳುವುದು ಹಾಗೂ ವಿಮಾನ ನಿಲ್ದಾಣವನ್ನು ರಕ್ಷಿಸುವ ಜವಾಬ್ದಾರಿಗಳು ಅಮೆರಿಕಕ್ಕೆ ಆದ್ಯತೆಯ ವಿಷಯಗಳಾಗಿವೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಮತ್ತು ಅಫ್ಗಾನಿಸ್ತಾನಕ್ಕೆ ಅಮೆರಿಕ ನೇಮಿಸಿರುವ ವಿಶೇಷ ಪ್ರತಿನಿಧಿ ಜಲ್ಮೇ ಖಲೀಲ್‌ಜಾದ್ ಅವರು ಸೇನಾ ವಾಪಸಾತಿ ಪ್ರಕ್ರಿಯೆಯ ಮುಂಚೂಣಿಯಲ್ಲಿ ಕೆಲಸ ಮಾಡಿದ್ದಾರೆ. ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಮಧ್ಯಸ್ಥಗಾರರೊಂದಿಗೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯನ್ನು ಇವರಿಗೆ ವಹಿಸಲಾಗಿತ್ತು.

ಚೀನಾ ಜತೆಗೆ ಸರಸ

ತಾಲಿಬಾನಿಗಳ ಮೇಲುಗೈಯಿಂದಾಗಿ ಭಾರತಕ್ಕೆ ಹಿನ್ನಡೆಯಾದಂತೆ ಆಗಿದೆ. 20 ವರ್ಷಗಳ ಹಿಂದೆ ತಾಲಿಬಾನಿಗಳ ಬಲ ಕುಗ್ಗಿದ ನಂತರ, ಅಫ್ಗಾನಿಸ್ತಾನ ಮರುನಿರ್ಮಾಣಕ್ಕೆ ಅಲ್ಲಿನ ಸರ್ಕಾರದ ಜತೆ ಭಾರತ ಕೈಜೋಡಿಸಿತ್ತು. ನೂತನ ಸಂಸತ್ ಭವನ, ಹೆದ್ದಾರಿಗಳು, ಜಲಾಶಯಗಳು, ಜಲವಿದ್ಯುತ್ ಘಟಕಗಳ ನಿರ್ಮಾಣಕ್ಕಾಗಿ ಭಾರತ ಸರ್ಕಾರವು ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿದೆ.

ಭಾರತ ನಿರ್ಮಾಣ ಮಾಡಿದ್ದ ಸಂಸತ್ ಭವನವನ್ನು, ತಾಲಿಬಾನಿಗಳು ಧ್ವಂಸ ಮಾಡಿದ್ದರು. ಆ ಸಂಸತ್ ಭವನವನ್ನು ಎರಡನೇ ಬಾರಿಗೆ ನಿರ್ಮಾಣ ಮಾಡಿಕೊಟ್ಟಿದೆ. ಭಾರತ-ಅಫ್ಗಾನಿಸ್ತಾನದ ಮಧ್ಯೆ ವಾಣಿಜ್ಯ ಸಂಬಂಧ ಮತ್ತು ಸರಕು ಸಾಗಣೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇರಾನ್ ಮೂಲಕ ವಾಣಿಜ್ಯ ಕಾರಿಡಾರ್ ನಿರ್ಮಾಣಕ್ಕೆ ನೆರವು ನೀಡುತ್ತಿದೆ. ಇಂತಹ ಸಂದರ್ಭದಲ್ಲೇ ತಾಲಿಬಾಲಿಗಳು ಮೇಲುಗೈ ಸಾಧಿಸಿದ್ದಾರೆ. ಭಾರತವು ನಿರ್ಮಾಣ ಮಾಡಿಕೊಟ್ಟಿದ್ದ ಬಹುತೇಕ ಸವಲತ್ತುಗಳನ್ನು ಈಗ ತಾಲಿಬಾನಿಗಳು ವಶಕ್ಕೆ ಪಡೆದಿದ್ದಾರೆ. ಇದು ಭಾರತಕ್ಕೆ ಆಗಿರುವ ದೊಡ್ಡ ಹಿನ್ನಡೆ.

ಇದೇ ಸಂದರ್ಭದಲ್ಲಿ ಅಫ್ಗಾನಿಸ್ತಾನದ ಮರುನಿರ್ಮಾಣಕ್ಕೆ ಚೀನಾದ ಬಂಡವಾಳವನ್ನು ತಾಲಿಬಾನಿಗಳು ಆಹ್ವಾನಿಸಿದ್ದಾರೆ. ಈಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಾಲಿಬಾನ್ ವಕ್ತಾರ ಸುಹೇಲ್ ಶಹೀನ್, ‘ನಾವು ಚೀನಾವನ್ನು ಸ್ನೇಹಿತ ಎಂದು ಪರಿಗಣಿಸುತ್ತೇವೆ. ಅಫ್ಗಾನಿಸ್ತಾನದ ಮರುನಿರ್ಮಾಣದಲ್ಲಿ ಚೀನಾವು ಬಂಡವಾಳ ಹೂಡಬಹುದು. ಚೀನಾ ಬಂಡವಾಳ ಹೂಡಿದರೆ, ಅವರ ಇಲ್ಲಿನ ಎಲ್ಲಾ ಸ್ವತ್ತುಗಳು, ನೌಕರರು ಮತ್ತು ನಾಗರಿಕರಿಗೆ ಏನೂ ಆಗುವುದಿಲ್ಲ ಎಂಬ ಭರವಸೆಯನ್ನು ನಾವು ನೀಡುತ್ತೇವೆ. ಅವರಿಗೆ ಭದ್ರತೆ ಒದಗಿಸುತ್ತೇವೆ’ ಎಂದು ಹೇಳಿದ್ದಾರೆ.

ಈ ಆಹ್ವಾನವನ್ನು ತಿರಸ್ಕರಿಸದಿರುವ ಮೂಲಕ ಚೀನಾ ಜಾಣ್ಮೆ ತೋರಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಅಫ್ಗಾನಿಸ್ತಾನದಲ್ಲಿ ತಾಮ್ರ, ಕಲ್ಲಿದ್ದಲು, ಕಬ್ಬಿಣ, ಕೋಬಾಲ್ಟ್, ಪಾದರಸ, ಚಿನ್ನ, ಲಿಥಿಯಂ ಮತ್ತು ತೋರಿಯಂನ ಭಾರಿ ನಿಕ್ಷೇಪಗಳಿವೆ. ಅದರ ಮೇಲೆ ಚೀನಾ ಕಣ್ಣಿಟ್ಟಿದೆ. ಹೀಗಾಗಿಯೇ ತಾಲಿಬಾನ್ ಆಹ್ವಾನವನ್ನು ಚೀನಾ ಒಪ್ಪಿಕೊಳ್ಳುವ ಸಾಧ್ಯತೆ ಅತ್ಯಧಿಕವಾಗಿದೆ ಎಂದು ತಜ್ಞರು
ಅಭಿಪ್ರಾಯಪಟ್ಟಿದ್ದಾರೆ.

ತಾಲಿಬಾನ್ ಜತೆಗೆ ಜೈಶಂಕರ್ ಮಾತುಕತೆ?

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ತಾಲಿಬಾನ್ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ತಾಲಿಬಾನ್ ಪ್ರತಿನಿಧಿಗಳ ಗುಂಪನ್ನು ಭಾರತದ ನಿಯೋಗವು ಭೇಟಿಯಾಗಿದೆ. ಕತಾರ್‌ನ ಸಚಿವರ ಮೂಲಕ ದೋಹಾದಲ್ಲಿ ಈ ಭೇಟಿ ನಡೆದಿದೆ ಎಂಬ ಊಹಾಪೋಹ ಹಬ್ಬಿದೆ.

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಇತ್ತೀಚೆಗೆ ನೀಡಿದ್ದ ಹೇಳಿಕೆ ಇದಕ್ಕೆ ಪುಷ್ಟಿ ನೀಡಿತ್ತು. ‘ತಾಲಿಬಾನ್ ಜೊತೆ ಭಾರತ ಮಾತುಕತೆ ನಡೆಸುವುದಾದರೆ, ಪಾಕಿಸ್ತಾನದ ಜೊತೆ ಏಕೆ ಮಾತನಾಡಬಾರದು’ ಎಂದು ಅವರು ಪ್ರಶ್ನಿಸಿದ್ದರು.

ಈ ವರದಿಯನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ. ‘ಮಾತುಕತೆ ನಡೆದಿದೆ ಎಂಬುದಾಗಿ ಕೆಲವು ಪತ್ರಕರ್ತರು ಮಾಡಿದ ಟ್ವೀಟ್‌ಗಳನ್ನು ಆಧರಿಸಿ ಮಾಧ್ಯಮಗಳು ಮಾಡಿರುವ ವರದಿಗಳು ತಪ್ಪಿನಿಂದ ಕೂಡಿವೆ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ತಿಳಿಸಿದ್ದಾರೆ.

ಉಗ್ರರ ಏಳು–ಬೀಳು

l1979–1989ರ ಅವಧಿಯಲ್ಲಿ ಅಫ್ಗಾನಿಸ್ತಾನವು ಸೋವಿಯತ್ ರಷ್ಯಾ ಅಧೀನದಲ್ಲಿತ್ತು. ಆ ಕಾಲದಲ್ಲಿ, ಪಾಕಿಸ್ತಾನದ ಸುನ್ನಿ ಮುಸ್ಲಿಂ ಶಾಲೆಗಳಲ್ಲಿ ಕಲಿತ ಯುವಕರು ಅಫ್ಗಾನಿಸ್ತಾನದಿಂದ ಪರಾರಿಯಾದರು

l1990ರ ದಶಕದಲ್ಲಿ ಅಫ್ಗಾನಿಸ್ತಾನವು ಆಂತರಿಕ ಯುದ್ಧದಿಂದಾಗಿ ಕ್ಷೋಭೆಗೊಂಡಿತ್ತು. ಒಕ್ಕಣ್ಣ ಯೋಧ ಮುಲ್ಲಾ ಒಮರ್‌ನ ನೇತೃತ್ವದಲ್ಲಿ ಕಾಂದಹಾರ್‌ನಲ್ಲಿ ತಾಲಿಬಾನ್ ರೂಪುಗೊಂಡಿತು

lಸುವ್ಯವಸ್ಥೆ, ನ್ಯಾಯ ಸ್ಥಾಪನೆಯ ಭರವಸೆಯಿಂದಾಗಿ ತಾಲಿಬಾನ್‌ನ ಜನಪ್ರಿಯತೆ ಹೆಚ್ಚಿತು, 1994ರಲ್ಲಿ ಕಾಂದಹಾರ್ ನಗರವು ತಾಲಿಬಾನ್ ಕೈವಶವಾಯಿತು, 1996ರಲ್ಲಿ ರಾಜಧಾನಿ ಕಾಬೂಲ್ ವಶವಾಯಿತು

l2001ರ ಅಕ್ಟೋಬರ್‌ನಲ್ಲಿ ಅಮೆರಿಕ ಮತ್ತು ಮಿತ್ರಕೂಟವು ತಾಲಿಬಾನ್ ವಿರುದ್ಧ ವಾಯುದಾಳಿ ಆರಂಭಿಸಿತು. ಡಿಸೆಂಬರ್ ಹೊತ್ತಿಗೆ ತಾಲಿಬಾನ್ ನಾಯಕರು ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಿಗೆ ಪರಾರಿಯಾದರು

l2013ರಲ್ಲಿ ಒಮರ್ ಸತ್ತ. ಅಲ್ಲಿಯವರೆಗೆ ತಾಲಿಬಾನ್‌ಗೆ ಆತನದೇ ನಾಯಕತ್ವ. ಈಗ, ಹೈಬತ್ ಉಲ್ಲಾ ಅಖುಂದ್‌ಜಾದಾ ನಾಯಕನಾಗಿದ್ದಾನೆ

lಅಮೆರಿಕದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಸಂಬಂಧ 2020ರ ಫೆಬ್ರುವರಿ 29ರಂದು ಅಮೆರಿಕ ಮತ್ತು ತಾಲಿಬಾನ್ ನಡುವೆ ಒಪ್ಪಂದಾಯಿತು. ಇದು ತಾಲಿಬಾನ್ ಮತ್ತೆ ತಲೆ ಎತ್ತಲು ಅನುವು ಮಾಡಿಕೊಟ್ಟಿತು

ಆಧಾರ: ರಾಯಿಟರ್ಸ್, ಎಎಫ್‌ಪಿ, ಬಿಬಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.