ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಪಶ್ಚಿಮ ಘಟ್ಟ ಸೊರಗುತಿದೆ ನೋಡಿದಿರಾ

Last Updated 15 ಫೆಬ್ರುವರಿ 2021, 4:10 IST
ಅಕ್ಷರ ಗಾತ್ರ

ಪರಿಸರ ಸಂರಕ್ಷಣೆಯ ಅಂತರರರಾಷ್ಟ್ರೀಯ ಒಕ್ಕೂಟವು (ಐಯುಸಿಎನ್) ‘ಐಯುಸಿಎನ್ ವರ್ಲ್ಡ್ ಹೆರಿಟೇಜ್ ಔಟ್‌ಲುಕ್–3’ ಎಂಬ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಯುನೆಸ್ಕೊ ವಿಶ್ವ ಪಾರಂಪರಿಕ ತಾಣವೆಂಬ ಹೆಗ್ಗಳಿಕೆಯ ಪಶ್ಚಿಮ ಘಟ್ಟ ಎದುರಿಸುತ್ತಿರುವ ಅಪಾಯಗಳ ಬಗ್ಗೆ ಬೆಳಕು ಚೆಲ್ಲಿದೆ.

***

ತನ್ನೊಡಲಲ್ಲಿ ಹತ್ತಾರು ನದಿಗಳಿಗೆ ಜನ್ಮನೀಡುವ ಪಶ್ಚಿಮ ಘಟ್ಟ ಹಾಗೂ ಅದಕ್ಕೆ ಹಸಿರು ಚಾದರ ಹೊದಿಸಿರುವ ಕಾನನ ಸೊಬಗಿನ ಖನಿ. ಅಪರೂಪದ ಜೀವರಾಶಿ ಹಾಗೂ ಸಸ್ಯಪ್ರಭೇದಗಳ ಗೂಡು ಎನಿಸಿರುವ ಘಟ್ಟ ಸೊರಗುತ್ತಿದೆ. ಪರಿಸರ ಸಂರಕ್ಷಣೆಯ ಅಂತರರರಾಷ್ಟ್ರೀಯ ಒಕ್ಕೂಟವು (ಐಯುಸಿಎನ್) ‘ಐಯುಸಿಎನ್ ವರ್ಲ್ಡ್ ಹೆರಿಟೇಜ್ ಔಟ್‌ಲುಕ್–3’ ಎಂಬ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಯುನೆಸ್ಕೊ ವಿಶ್ವ ಪಾರಂಪರಿಕ ತಾಣವೆಂಬ ಹೆಗ್ಗಳಿಕೆಯ ಪಶ್ಚಿಮ ಘಟ್ಟ ಎದುರಿಸುತ್ತಿರುವ ಅಪಾಯಗಳ ಬಗ್ಗೆ ಬೆಳಕು ಚೆಲ್ಲಿದೆ.

ಮಾನವ ಹಸ್ತ‌ಕ್ಷೇಪವು ಪಶ್ಚಿಮ ಘಟ್ಟಕ್ಕೆ ಅಕ್ಷರಶಃ ಶಾಪವಾಗಿ ಪರಿಣಮಿಸಿದೆ. ಘಟ್ಟ ಪ್ರದೇಶದಲ್ಲಿ ಏರಿಕೆಯಾಗುತ್ತಿರುವ ಜನಸಂಖ್ಯೆ, ನಗರೀಜಕರಣ, ಹವಾಮಾನ ವೈಪರೀತ್ಯದಿಂದ ಘಟ್ಟ ನಲುಗುತ್ತಿದೆ ಎಂದು ವರದಿ ಬೊಟ್ಟು ಮಾಡಿದೆ. 2013 ಮತ್ತು 2017ರ ವರದಿಗಳನ್ನು ಆಧಾರವಾಗಿಟ್ಟುಕೊಂಡು 2020ರ ವರದಿಯನ್ನು ತಯಾರಿಸಲಾಗಿದೆ. ಜಗತ್ತಿನ 252 ನೈಸರ್ಗಿಕ ಪಾರಂಪರಿಕ ತಾಣಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಅರಣ್ಯದೊಳಗೆ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಂದ ಮಳೆಕಾಡಿನ ಪರಿಸರ ಭಾರಿ ಒತ್ತಡದಲ್ಲಿದೆ. ವನ್ಯಜೀವಿ ಕಾರಿಡಾರ್‌ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರ ಪರಿಣಾಮ ಮಾನವ–ಪ್ರಾಣಿ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಅರಣ್ಯಗಳಲ್ಲಿ ಸೂಕ್ತ ಆವಾಸಸ್ಥಾನ ದೊರೆಯದ ಪ್ರಾಣಿಗಳು ನಾಡಿದ ದಾರಿ ಹಿಡಿಯುತ್ತಿವೆ.

ಅರಣ್ಯದೊಳಗೆ ರಸ್ತೆ ನಿರ್ಮಾಣ, ವಿದ್ಯುತ್ ಉತ್ಪಾದನಾ ಘಟಕಗಳ ನಿರ್ಮಾಣ, ಕುಡಿಯುವ ನೀರಿಗಾಗಿ ಕೈಗೊಂಡ ಯೋಜನೆಗಳು, ಕೃಷಿ ಜಮೀನು ವಿಸ್ತರಣೆ, ಮೇವಿಗಾಗಿ ಕಾಡು ಸುತ್ತುವ ಜಾನುವಾರುಗಳಿಂದ ಘಟ್ಟದ ಅರಣ್ಯ ಪ್ರಮಾಣ ಕುಸಿಯುತ್ತಿದೆ. ವರದಿ ಪ್ರಕಾರ, ಶೇ 40ರಷ್ಟು ಮೂಲ ಕಾಡು ನಾಶವಾಗಿದೆ. ಕನಿಷ್ಟಪಕ್ಷ ಸಂರಕ್ಷಿತ ಅರಣ್ಯದಲ್ಲಾದರೂ ವನ್ಯಜೀವಿ ಕಾರಿಡಾರ್‌ಗಳನ್ನು ಉಳಿಸಿದರೆ, ಪ್ರಾಣಿಗಳು ನೆಮ್ಮದಿಯಿಂದ ಉಸಿರಾಡಬಲ್ಲವು.

ಘಟ್ಟದ ವ್ಯಾಪ್ತಿಯಲ್ಲಿಸುಮಾರು 5 ಕೋಟಿ ಜನರು ಜೀವನ ಸಾಗಿಸುತ್ತಿದ್ದಾರೆ. ಕಾಡಂಚನ್ನು ಒತ್ತುವರಿ ಮಾಡಿ ತೋಟ ಮಾಡುವ ಪರಿಪಾಟ ನಿಲ್ಲದಿದ್ದಲ್ಲಿ ಅಪರೂಪದ ಸಸ್ಯಪ್ರಭೇದಗಳು ನಾಶವಾಗುವ ಅಪಾಯವಿದೆ.ಈ ಬೆಟ್ಟಸಾಲುಗಳನ್ನು ಕಡಿದು ರಸ್ತೆ ಅಥವಾ ಇತರೆ ಕಾಮಗಾರಿ ನಡೆಸಿದ್ದರ ಪರಿಣಾಮಕರ್ನಾಟಕದ ಕೊಡಗು, ಕೇರಳದ ಇಡುಕ್ಕಿ ಮೊದಲಾದೆಡೆ ಇತ್ತೀಚೆಗೆ ಗುಡ್ಡಗಳು ಕುಸಿದಿವೆ. ಘಟ್ಟದಿಂದ ಕೆಳಭಾಗಕ್ಕೆ ನೀರು ಹರಿದುಬರಲು ರಸ್ತೆಬದಿ ನಿರ್ಮಿಸಿರುವ ಅಡ್ಡಗೋಡೆಗಳು ಬಿಡುವುದಿಲ್ಲ. ನೀರಿನ ಒತ್ತಡ ಎದುರಿಸುವ ಬೆಟ್ಟವು ರಸ್ತೆಗೆ ಮಗುಚಿ ಬೀಳುತ್ತದೆ.

ಇವೆಲ್ಲ ವಿದ್ಯಮಾನಗಳು ನೇರವಾಗಿ ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತವೆ. ಸವಾಲುಗಳ ಸಾಲುಗಳು ಘಟ್ಟವನ್ನು ನಲುಗಿಸಿವೆ.

ಅಪಾಯಗಳು
1. ಜಾನುವಾರು ಮೇಯಿಸುವುದು:
ಪಶ್ಚಿಮ ಘಟ್ಟ ಸಂರಕ್ಷಿತ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸುವುದನ್ನು ಅತ್ಯಂತ ದೊಡ್ಡ ಅಪಾಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಸಂರಕ್ಷಿತ ಪ್ರದೇಶದ ಹೊರವಲಯದಲ್ಲಿ ಮಾನವ ವಸತಿ ಪ್ರದೇಶದ ವ್ಯಾಪ್ತಿ ಹಿಗ್ಗುತ್ತಿದೆ. ಹೀಗಾಗಿ ಸಂರಕ್ಷಿತ ಪ್ರದೇಶದ ಹೊರಗೆ ಜಾನುವಾರುಗಳಿಗೆ ಮೇವಿನ ಲಭ್ಯತೆ ಕಡಿಮೆಯಾಗಿದೆ. ಜಾನುವಾರುಗಳು ಸಂರಕ್ಷಿತ ಪ್ರದೇಶದ ಒಳಗೆ ಮೇಯುತ್ತವೆ. ಇದರಿಂದ ಸಂರಕ್ಷಿತ ಪ್ರದೇಶದಲ್ಲಿನ ಕಾಡೆಮ್ಮೆ, ಕಾಡುಕೋಣ, ಸಾಂಬಾರ್‌ಗಳಿಗೆ (ದೊಡ್ಡ ಜಾತಿಯ ಜಿಂಕೆ) ಮೇವಿನ ಕೊರತೆಯಾಗುತ್ತಿದೆ. ಇದಕ್ಕಿಂತಲೂ ಮುಖ್ಯವಾಗಿ ಜಾನುವಾರುಗಳಲ್ಲಿನ ಅಂಥ್ರಾಕ್ಸ್ ರೋಗವು ಈ ವನ್ಯಜೀವಿಗಳಿಗೆ ಹರಡುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ

2. ಬೆಳೆಗಳು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬೆಳೆಯುವ ವಾಣಿಜ್ಯ ಬೆಳೆಗಳೂ ಪಶ್ಚಿಮ ಘಟ್ಟಕ್ಕೆ ಅಪಾಯ ತಂದೊಡ್ಡಿವೆ. ಸಂರಕ್ಷಿತ ಪ್ರದೇಶದ ಹೊರಗಿನ ಪ್ರದೇಶದಲ್ಲಿ ಶೇ 93ರಷ್ಟು ಪ್ರದೇಶವನ್ನು ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗಿದೆ. ಎಸ್ಟೇಟ್‌ಗಳು, ನೆಡುತೋಪುಗಳು, ಜಲಾಶಯಗಳು, ಕುರುಚಲು ಕಾಡು ಮತ್ತು ಮಾನವ ವಸತಿ ಪ್ರದೇಶಗಳು ಈ ಜಾಗದಲ್ಲಿ ವ್ಯಾಪಿಸಿವೆ. ಪಶ್ಚಿಮ ಘಟ್ಟದ ಹಲವು ಪ್ರದೇಶದಲ್ಲಿ ಕಾಫಿ ಪ್ರಮುಖ ಬೆಳೆ. ಕಾಫಿ ಬೆಳೆಯುವ ಪ್ರದೇಶದ ವಿಸ್ತರಣೆಯಿಂದಾಗಿ ಕಾಡು ನಾಶವಾಗಿದೆ. ಅಲ್ಲದೆ, ಕಾಫಿ ಬೆಳೆಯುವ ಜಮೀನು ನಾಶವಾಗಿದೆ. ಇದರಿಂದ ಈ ಪ್ರದೇಶದಲ್ಲಿ ಇದ್ದ ಹಸಿರಿನ ಹೊದಿಕೆ ಕಡಿಮೆಯಾಗಿದೆ. ಅಕೇ‍ಶಿಯಾ, ನೀಲಗಿರಿ ಮತ್ತು ರಬ್ಬರ್ ಮರಗಳಿಂದಾಗಿ ಮಣ್ಣಿನಲ್ಲಿ ಕೆಲವು ಪೋಷಕಾಂಶಗಳ ಪ್ರಮಾಣ ವಿಪರೀತವಾಗಿ ಕಡಿಮೆಯಾಗಿದೆ. ಬಳಕೆಯಾಗದಂತಹ ಪೋಷಕಾಂಶಗಳ ಪ್ರಮಾಣ ವಿಪರೀತಮಟ್ಟದಲ್ಲಿ ಏರಿಕೆಯಾಗಿದೆ. ಇದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿದೆ. ಅಲ್ಲದೆ, ಕೆಲವು ಸ್ವರೂಪದ ಕೀಟಗಳು ಮತ್ತು ಸೂಕ್ಷ್ಮಾಣು ಜೀವಿಗಳುನಾಶವಾಗಿವೆ.

ಚಿಕ್ಕಮಗಳೂರು ಸಮೀಪ ಭೂಕುಸಿತ ಉಂಟಾಗಿದ್ದ ಜಾಗದಲ್ಲಿ ತಜ್ಞರಿಂದ ಪರಿಶೀಲನೆ –ಸಂಗ್ರಹ ಚಿತ್ರ
ಚಿಕ್ಕಮಗಳೂರು ಸಮೀಪ ಭೂಕುಸಿತ ಉಂಟಾಗಿದ್ದ ಜಾಗದಲ್ಲಿ ತಜ್ಞರಿಂದ ಪರಿಶೀಲನೆ –ಸಂಗ್ರಹ ಚಿತ್ರ

3. ಪ್ರವಾಸೋದ್ಯಮ: ಪಶ್ಚಿಮ ಘಟ್ಟದ ಹಲವು ಪ್ರದೇಶಗಳಲ್ಲಿ ಪ್ರವಾಸೋದ್ಯಮ ವ್ಯಾಪಕವಾಗಿ ಬೆಳೆದಿದೆ. ಹೋಂ ಸ್ಟೇಗಳು, ರೆಸಾರ್ಟ್‌ಗಳು, ಅಡ್ವೆಂಚರ್ ಕ್ಲಬ್‌ಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಇವೆಲ್ಲವನ್ನು ನಿಭಾಯಿಸುವಷ್ಟು ನೀರು ಮತ್ತು ವಸತಿ ಲಭ್ಯವಿಲ್ಲ. ಹೀಗಾಗಿ ವಸತಿ ಪ್ರದೇಶಗಳು ವಿಸ್ತರಣೆಯಾಗುತ್ತಿವೆ. ಇದರಿಂದ ನೀರಿನ ಕೊರತೆ ಕಾಡುತ್ತಿದೆ. ಕೊಳಚೆ ನೀರಿನ ಪ್ರಮಾಣವೂ ಏರಿಕೆಯಾಗಿದೆ. ಇವು ಇಲ್ಲಿನ ಜೀವವೈವಿಧ್ಯ ನಾಶಕ್ಕೆ ಕಾರಣವಾಗುತ್ತಿದೆ

4. ವಿದ್ಯುತ್ ಯೋಜನೆಗಳು: ಪಶ್ಚಿಮ ಘಟ್ಟದಲ್ಲಿ ಇರುವ ಜಲವಿದ್ಯುತ್ ಯೋಜನೆಗಳು ಈಗಾಗಲೇ ಸಾಕಷ್ಟು ಕಾಡನ್ನು ನಾಶ ಮಾಡಿವೆ. ಜಲಾಶಯಗಳ ನಿರ್ಮಾಣದಿಂದ ವನ್ಯಜೀವಿಗಳ ಆವಾಸ ಸ್ಥಾನದ ವಿಸ್ತೀರ್ಣ ಕುಗ್ಗಿದೆ ಮತ್ತು ಅವುಗಳ ಕಾರಿಡಾರ್ ನಾಶವಾಗಿದೆ. ಸಂರಕ್ಷಿತ ಪ್ರದೇಶದ ಹೊರವಲಯದಲ್ಲಿ ಇನ್ನೂ ಸುಮಾರು 50 ಜಲವಿದ್ಯುತ್ ಯೋಜನೆಗಳು ಜಾರಿಯ ವಿವಿಧ ಹಂತದಲ್ಲಿವೆ. ಈಚಿನ ವರ್ಷಗಳಲ್ಲಿ ಭಾರತ ಸರ್ಕಾರವು ನವೀಕರಿಸಬಹುದಾದ ಶಕ್ತಿಗಳಲ್ಲಿ ಪವನವಿದ್ಯುತ್‌ಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಇದು ಎರಡು ಅಲಗಿನ ಕತ್ತಿ. ಒಂದೆಡೆ ಮಾಲಿನ್ಯರಹಿತವಾಗಿ ವಿದ್ಯುತ್ ದೊರೆಯುತ್ತದೆ. ಆದರೆ, ಕಾಡು ನಾಶವಾಗುತ್ತದೆ. ವಿಂಡ್‌ಮಿಲ್‌ಗಳನ್ನು ಎತ್ತರದ ಪ್ರದೇಶದಲ್ಲಿ ಸ್ಥಾಪಿಸಲು ಕಾಡಿನಲ್ಲಿ ರಸ್ತೆ ನಿರ್ಮಾಣ, ರಸ್ತೆ ಅಗಲೀಕರಣ, ನಿರ್ಮಾಣ ಕಾಮಗಾರಿ, ಗ್ರೌಂಡ್‌ ಸ್ಟೇಷನ್‌ಗಳ ನಿರ್ಮಾಣ, ವಿದ್ಯುತ್ ಪೂರೈಕೆ ಜಾಲ ಎಂದು ಸಾವಿರಾರು ಎಕರೆಯಷ್ಟು ಅರಣ್ಯ ನಾಶವಾಗಿದೆ. ಲಕ್ಷಾಂತರ ಮರಗಳನ್ನು ಕಡಿಯಲಾಗುತ್ತಿದೆ. ವಿಂಡ್‌ಮಿಲ್‌ ಇರುವ ಪ್ರದೇಶದಲ್ಲಿ ಶಬ್ದಮಾಲಿನ್ಯವು ಅಪಾಯಕಾರಿಮಟ್ಟದಲ್ಲಿ ಏರಿಕೆಯಾಗಿದೆ. ಮರಗಿಡಗಳ ನಾಶ ಮಾತ್ರವಲ್ಲದೆ, ಹಲವು ಸೂಕ್ಷ್ಮಾಣು ಜೀವಿಗಳು, ಕೀಟಗಳು ಮತ್ತು ವನ್ಯಜೀವಿಗಳ ಆವಾಸ ಸ್ಥಾನ ನಾಶವಾಗಿದೆ

-ಸ್ಥಳೀಯ ಪ್ರಭೇದವಲ್ಲದ ಸಸ್ಯಗಳು ವಿಪರೀತ ಪ್ರಮಾಣದಲ್ಲಿ ಬೆಳೆಯುತ್ತಿರುವುದರಿಂದ ಸಹಜ ಕಾಡು ನಾಶವಾಗಿದೆ. ಪಶ್ಚಿಮ ಘಟ್ಟದ ಸಂರಕ್ಷಿತ ಪ್ರದೇಶಕ್ಕೂ ಲಂಟಾನಾ ಹರಡಿದೆ. ಇದು ಇರುವೆಡೆ ಸ್ಥಳೀಯ ಸಸ್ಯಗಳ ಬೆಳವಣಿಗೆ ಕುಂಠಿತವಾಗಿದೆ. ಅಕೇಶಿಯಾ ನೆಡುತೋಪುಗಳೂ ಇಂತಹದ್ದೇ ದುಷ್ಪರಿಣಾಮ ಬೀರಿವೆ

ಸಂರಕ್ಷಣೆಗೆ ಶಿಫಾರಸುಗಳು
* ಏಕಸ್ವರೂಪದ ನೀತಿಗಳು:
ಪಶ್ಚಿಮ ಘಟ್ಟವು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳದಲ್ಲಿ ಹರಡಿದೆ. ಇಷ್ಟೂ ರಾಜ್ಯಗಳಲ್ಲಿ ಪಶ್ಚಿಮ ಘಟ್ಟ ಸಂರಕ್ಷಣೆಗೆ ಜಾರಿಯಲ್ಲಿರುವ ಕಾನೂನಿನಲ್ಲಿ ಭಾರಿ ವ್ಯತ್ಯಾಸವಿದೆ. ಇದರಿಂದ ಏಕರೀತಿಯ ಸಂರಕ್ಷಣೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಏಕರೂಪದ ಕಾನೂನು ಜಾರಿಗೆ ತರಬೇಕು

* ಪಶ್ಚಿಮ ಘಟ್ಟ ಪ್ರದೇಶ ಸಂರಕ್ಷಣೆಯನ್ನು ಒಂದು ರಾಷ್ಟ್ರೀಯ ನೀತಿ ಅಥವಾ ಯೋಜನೆಯಾಗಿ ಪರಿಗಣಿಸಬೇಕು. ಈ ಮೂಲಕ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಈ ಸಂಬಂಧ ಈವರೆಗೆ ಬಂದಿರುವ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು

* ಪಶ್ಚಿಮ ಘಟ್ಟ ಸಂರಕ್ಷಣೆಯಲ್ಲಿ ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವಾಗಬೇಕು. ನಾಗರಿಕರನ್ನು ಒಳಗೊಂಡು ಜಾರಿಗೆ ತಂದ ಸಂರಕ್ಷಣಾ ಯೋಜನೆಗಳು ಹೆಚ್ಚು ಪರಿಣಾಮಕಾರಿಯಾಗಬಲ್ಲವು

* ಪಶ್ಚಿಮ ಘಟ್ಟದಲ್ಲಿನ ಸಂರಕ್ಷಿತ ಪ್ರದೇಶಗಳ ಭದ್ರತೆಗೆ ವಿಶೇಷ ತರಬೇತಿ ಪಡೆದ ಸಿಬ್ಬಂದಿಯ ಅವಶ್ಯಕತೆ ಇದೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಪರಿಣತಿ ಪಡೆದ ಸಿಬ್ಬಂದಿಯನ್ನೇ ನಿಯೋಜಿಸುವ ಕೆಲಸವಾಗಬೇಕು

* ಪಶ್ಚಿಮ ಘಟ್ಟದ ಹಲವು ಸಸಿಗಳು ಮತ್ತು ಜೀವಿಗಳ ಬಗ್ಗೆ ಇನ್ನೂ ಅಧ್ಯಯನ ನಡೆದಿಲ್ಲ. ಇಂತಹ ವಿಶಿಷ್ಟ ಪ್ರಭೇದಗಳ ಸಂಖ್ಯೆ, ಆವಾಸ ಸ್ಥಾನ ಮತ್ತು ವ್ಯಾಪ್ತಿಯ ಬಗ್ಗೆ ಯಾವುದೇ ದತ್ತಾಂಶ ಲಭ್ಯವಿಲ್ಲ. ಈ ದತ್ತಾಂಶವನ್ನು ಸಿದ್ಧಪಡಿಸುವ ಕೆಲಸವಾಗಬೇಕು. ಆಗ ಅವುಗಳ ಸಂರಕ್ಷಣೆ ಸುಲಭವಾಗುತ್ತದೆ

ಆಧಾರ: ಐಯುಸಿಎನ್ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT