ಶುಕ್ರವಾರ, ಜನವರಿ 27, 2023
26 °C

ಆಳ-ಅಗಲ: ರಾಷ್ಟ್ರೀಯ ಶಿಕ್ಷಣ ನೀತಿ–2020ಕ್ಕೆ 1 ವರ್ಷ- ಶಿಕ್ಷಣ ನೀತಿ ಜಾರಿಯ ಫಜೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇಶದ ಶಿಕ್ಷಣ ವ್ಯವಸ್ಥೆಯ ಚಹರೆಯನ್ನು ಸಮಗ್ರವಾಗಿ ಬದಲಾಯಿಸುವ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶಿಕ್ಷಣ ನೀತಿ–2020 ಜಾರಿಗೆ ಬಂದು ಜುಲೈ 29ಕ್ಕೆ (ಗುರುವಾರ) ಒಂದು  ವರ್ಷ ಪೂರ್ಣಗೊಂಡಿದೆ. ಕೇಂದ್ರ ಸಚಿವ ಸಂಪುಟವು ಕಳೆದ ವರ್ಷ ಜುಲೈ 29ರಂದು ಹೊಸ ಶಿಕ್ಷಣ ನೀತಿಗೆ ಅನುಮೋದನೆ ಕೊಟ್ಟಿತ್ತು. 34 ವರ್ಷದ ಹಿಂದೆ ಅಂದರೆ, 1986ರಲ್ಲಿ ಜಾರಿಗೆ ಬಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯು ಅಲ್ಲಿವರೆಗೆ ಜಾರಿಯಲ್ಲಿತ್ತು. 

‘ಕಲಿಕೆಯ ಚಿತ್ರಣವನ್ನೇ ಬದಲಾಯಿಸಲು, ಶಿಕ್ಷಣವನ್ನು ಸಮಗ್ರವಾಗಿಸಿ ಸ್ವಾವಲಂಬಿ ಭಾರತ ಕಟ್ಟಲು ಗಟ್ಟಿ ಅಡಿಪಾಯ ಹಾಕಲು ರಾಷ್ಟ್ರೀಯ ಶಿಕ್ಷಣ ನೀತಿ–2020 ಮಾರ್ಗದರ್ಶಿ ತತ್ವವಾಗಿದೆ’ ಎಂದು ಹೊಸದಾಗಿ ನೇಮಕವಾಗಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನೀತಿ ಜಾರಿಗೆ ಬಂದು ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನೀತಿ ಜಾರಿಯಲ್ಲಿ ಈವರೆಗೆ ಆಗಿರುವ ಪ್ರಗತಿ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ಅವರು ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗಿದೆ. ‌

ಕೇಂದ್ರ ಸರ್ಕಾರವು ಭಾರಿ ಮಹತ್ವಾಕಾಂಕ್ಷೆಯಿಂದ ಶಿಕ್ಷಣ ನೀತಿಯನ್ನು ರೂಪಿಸಿದ್ದರೂ ಅದರ ಜಾರಿಯಲ್ಲಿ ಅಷ್ಟು ಉತ್ಸಾಹ ಕಂಡಿಲ್ಲ. ಅದಕ್ಕೆ ಹಲವು ಕಾರಣಗಳೂ ಇವೆ. ಶಿಕ್ಷಣ ನೀತಿಯು ಪ್ರತಿಪಾದಿಸುವ ಭಾಷಾ ನೀತಿಯ ಬಗ್ಗೆ ಕೆಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ. ಈಗ ಇರುವ ಸ್ಥಿತಿಯಲ್ಲಿ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದರೆ ಹಲವು ಸಮಸ್ಯೆಗಳು ಎದುರಾಗಲಿವೆ ಎಂದು ತಮಿಳುನಾಡು ಸರ್ಕಾರವು ಪ್ರತಿಪಾದಿಸಿದೆ. ಶಿಕ್ಷಣ ನೀತಿಯ ಬಗ್ಗೆ ವಿವಿಧ ರಾಜ್ಯಗಳು ಹೊಂದಿರುವ ಆಕ್ಷೇಪಗಳು ಕೂಡ ನೀತಿ ಜಾರಿ ವಿಳಂಬವಾಗಲು ಕಾರಣವಾಗಿದೆ. 

ಈ ಶೈಕ್ಷಣಿಕ ವರ್ಷದಿಂದಲೇ ಹೊಸ ನೀತಿ ಜಾರಿಗೆ ಬರಲಿದೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿಯಾಗಿದ್ದ ಸಿ.ಎನ್‌.ಅಶ್ವತ್ಥನಾರಾಯಣ ಅವರು ಇತ್ತೀಚೆಗೆ ಹೇಳಿದ್ದರು. ಕೋವಿಡ್‌ ಸಾಂಕ್ರಾಮಿಕದ ನಡುವೆಯೇ ಹೊಸ ನೀತಿಯು ಜಾರಿಗೆ ಬಂದಿದೆ. ನೀತಿ ಜಾರಿಯಾಗುವ ಮೊದಲೇ ಶಾಲೆ–ಕಾಲೇಜುಗಳು ಮುಚ್ಚಿದ್ದವು. ಇದು ಕೂಡ ನೀತಿ ಜಾರಿ ವಿಳಂಬಕ್ಕೆ ಕಾರಣ ಎನ್ನಲಾಗಿದೆ. 

ಅನುಷ್ಠಾನಕ್ಕೆ ಹಲವು ತೊಡಕುಗಳು

‘ನೂತನ ಶಿಕ್ಷಣ ನೀತಿ ಅನುಷ್ಠಾನ ಮಾಡುವಲ್ಲಿ ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದ ವಿಳಂಬವಾಗುತ್ತಿದೆ’ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ವಾಸ್ತವ ಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಹಲವು ರಾಜ್ಯಗಳು ಈ ನೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ. ಈ ನೀತಿಯ ಅಧ್ಯಯನಕ್ಕೆ ತಜ್ಞರ ಸಮಿತಿಗಳನ್ನು ರಚಿಸಿವೆ

‘ಅನುಷ್ಠಾನಕ್ಕೆ ಕಾರ್ಯಯೋಜನೆಯಿಲ್ಲ’

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರವು ಸ್ಪಷ್ಟವಾದ ಕಾರ್ಯಯೋಜನೆಯನ್ನು ರೂಪಿಸಿಲ್ಲ ಎಂದು ಹಲವು ರಾಜ್ಯಗಳು ಆರೋಪಿಸಿವೆ. 2022-23ನೇ ಸಾಲಿನಲ್ಲಿ ಮೊದಲ ಹಂತದಲ್ಲಿ ಪ್ರಾಥಮಿಕ ಶಿಕ್ಷಣವನ್ನು ನೂತನ ಶಿಕ್ಷಣ ನೀತಿಗೆ ಅನುಗುಣವಾಗಿ ಆರಂಭಿಸಲು ಕೇಂದ್ರ ಸರ್ಕಾರವು ಗುರಿ ಹಾಕಿಕೊಂಡಿದೆ. ಆದರೆ, ಅದನ್ನು ಅನುಷ್ಠಾನಕ್ಕೆ ತರುವುದು ಹೇಗೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.

‘ಈಗ ರಾಜ್ಯ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಿಕ್ಷಣವನ್ನು ಮತ್ತು ವಿವಿಧ ಮಂಡಳಿಗಳು ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿವೆ. 5+3+3+4 ವರ್ಷಗಳ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣದ ಮೇಲ್ವಿಚಾರಣೆ ನೋಡಿಕೊಳ್ಳುವುದು ಯಾರು ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿಲ್ಲ. ಪ್ರಾಧಿಕಾರಗಳು ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತವೆ ಎಂದಷ್ಟೇ ಹೇಳಿದೆ. ಶಿಕ್ಷಣ ಇಲಾಖೆಯೇ ಇದರ ಮೇಲ್ವಿಚಾರಣೆ ನೋಡಿಕೊಳ್ಳಬೇಕೆ? ಅಥವಾ ಇದಕ್ಕಾಗಿ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕೆ ಎಂಬುದನ್ನು ಸರ್ಕಾರವು ಸ್ಪಷ್ಟಪಡಿಸಿಲ್ಲ. ಅಥವಾ ತಮಗೆ ಅಗತ್ಯವಿರುವಂತೆ ನೀತಿಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆಯೇ ಎಂಬುದನ್ನೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿಲ್ಲ’ ಎಂದು ಪಶ್ಚಿಮ ಬಂಗಾಳ ಸರ್ಕಾರವು ರಚಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಅಧ್ಯಯನ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

‘ಏಕರೂಪದ ಶಿಕ್ಷಣ ತರವಲ್ಲ’

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದಾದ್ಯಂತ ಏಕರೂಪದ ಶಿಕ್ಷಣವನ್ನು ಜಾರಿಗೆ ತರಬೇಕು ಎಂದು ಹೇಳುತ್ತದೆ. ಪಠ್ಯಕ್ರಮ, ಬೋಧನಾಕ್ರಮ ಮತ್ತು ಮೌಲ್ಯಮಾಪನ ವಿಧಾನ ಏಕಪ್ರಕಾರದಲ್ಲಿ ಇರಲಿದೆ ಎಂದು ಈ ನೀತಿ ಹೇಳುತ್ತದೆ. ಆದರೆ ಏಕರೂಪದ ಶಿಕ್ಷಣ ತರವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ರಾಜ್ಯದ ಸಂಸ್ಕೃತಿಗೆ ಅನುಗುಣವಾಗಿ ಪಠ್ಯಕ್ರಮ ಮತ್ತು ಬೋಧನಾಕ್ರಮವನ್ನು ರೂಪಿಸಬೇಕಾಗುತ್ತದೆ. ಆದರೆ ನೂತನ ಶಿಕ್ಷಣ ನೀತಿಯು ಈ ಅಂಶಗಳನ್ನು ಪರಿಗಣಿಸದೆ ಏಕರೂಪದ ಶಿಕ್ಷಣ ಬೇಕು ಎಂದು ಹೇಳುತ್ತದೆ’ ಎಂದು ಪಶ್ಚಿಮ ಬಂಗಾಳ ಸರ್ಕಾರವು ರಚಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಅಧ್ಯಯನ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

‘ರಾಜ್ಯಗಳ ಅಧಿಕಾರ ಕಸಿಯುವ ನೀತಿ’

ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಅಂದರೆ ಶಿಕ್ಷಣಕ್ಕೆ ಸಂಬಂಧಿಸಿದ ನೀತಿಗಳು, ಕಾನೂನುಗಳನ್ನು ರೂಪಿಸುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಚರ್ಚಿಸಿ, ಒಮ್ಮತದ ಮೇರೆಗೆ ನಿರ್ಧಾರಕ್ಕೆ ಬರಬೇಕಾಗುತ್ತದೆ. ಕಡ್ಡಾಯ ಶಿಕ್ಷಣ ಮತ್ತು ಸರ್ವಶಿಕ್ಷಣ ಅಭಿಯಾನ ಹೊರತುಪಡಿಸಿ ಶಾಲಾ ಶಿಕ್ಷಣದ ನೀತಿಗಳನ್ನು ರೂಪಿಸುವ ಸಂಪೂರ್ಣ ಅಧಿಕಾರ ರಾಜ್ಯಗಳ ಕೈಯಲ್ಲಿದೆ. ಆದರೆ ನೂತನ ಶಿಕ್ಷಣ ನೀತಿಯು ರಾಜ್ಯಗಳ ಈ ಅಧಿಕಾರವನ್ನು ಕಸಿದುಕೊಂಡಿದೆ ಎಂದು ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಆರೋಪಿಸಿವೆ.

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಇಲ್ಲ. ಏಕಪಕ್ಷೀಯವಾಗಿ ಈ ನೀತಿಯನ್ನು ರೂಪಿಸಿದೆ. ಈ ಮೂಲಕ ರಾಜ್ಯಗಳ ಅಧಿಕಾರವನ್ನು ಕಸಿದುಕೊಂಡಿದೆ. ನೀತಿಯನ್ನು ಜಾರಿಗೆ ತಂದು, ಆನಂತರ ರಾಜ್ಯದ ಅಧಿಕಾರಿಗಳನ್ನು ಚರ್ಚೆಗೆ ಆಹ್ವಾನಿಸಲಾಗಿದೆ. ಚುನಾಯಿತ ಸರ್ಕಾರ ಮತ್ತು ಶಿಕ್ಷಣ ಸಚಿವರನ್ನು ಬದಿಗೊತ್ತಿ, ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಈ ಕಾರಣದಿಂದಲೇ ಸಭೆಗೆ ನಾವು ಹಾಜರಾಗಿಲ್ಲ’ ಎಂದು ತಮಿಳುನಾಡು ಸರ್ಕಾರ ಇದೇ ಮೇ ತಿಂಗಳಿನಲ್ಲಿ ಹೇಳಿತ್ತು.

‘ಶಿಕ್ಷಣ ನೀತಿಯನ್ನು ಹೇರಿಕೆ ರೀತಿಯಲ್ಲಿ ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಸಮವರ್ತಿ ಪಟ್ಟಿಯ ಪ್ರಕಾರ ಶಿಕ್ಷಣಕ್ಕೆ ಸಂಬಂಧಿಸಿದ ನೀತಿ ರೂಪಿಸುವಲ್ಲಿ ರಾಜ್ಯ ಸರ್ಕಾರಗಳೂ ಸಮನಾದ ಅಧಿಕಾರ ಹೊಂದಿವೆ. ಅದನ್ನು ಕಸಿದುಕೊಂಡು, ತ್ರಿಭಾಷಾ ಸೂತ್ರವನ್ನು ಜಾರಿಗೆ ತನ್ನಿ ಎನ್ನುತ್ತಿದೆ. ಇದನ್ನು ನಾವು ಒಪ್ಪುವುದಿಲ್ಲ’ ಎಂದು ತಮಿಳುನಾಡು ಸರ್ಕಾರ ಸ್ಪಷ್ಟಪಡಿಸಿದೆ.

ಹೊಸ ದಿಕ್ಕಿಗೆ ಸಾಗುವ ಮಹತ್ವಾಕಾಂಕ್ಷೆ...

ಹೊಸ ಶಿಕ್ಷಣ ನೀತಿಯು 21ನೇ ಶತಮಾನದ ತಂತ್ರಜ್ಞಾನ ಯುಗಕ್ಕೆ ಮಕ್ಕಳನ್ನು ಸಜ್ಜುಗೊಳಿಸುವುದು ಸೇರಿದಂತೆ ಮಹತ್ವದ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡಿದೆ. ಪಠ್ಯಕ್ರಮ, ತರಗತಿ ವರ್ಗೀಕರಣ, ಆರಂಭದ ಕಲಿಕೆ, ಭಾಷೆ, ಕಲಿಕೆ ಜೊತೆ ಕೌಶಲ ತರಬೇತಿ, ಉನ್ನತ ಶಿಕ್ಷಣ ಹಾಗೂ ಪರೀಕ್ಷೆ ಸರಳೀಕರಣದಂತಹ ಹತ್ತಾರು ಬದಲಾವಣೆಗಳ ಆಶಯವನ್ನು ಹೊಂದಿದೆ. 

ಹೊಸ ಶಿಕ್ಷಣ ನೀತಿಯ ಪ್ರಮುಖ ಸುಧಾರಣೆಗಳಲ್ಲಿ ಮಹತ್ವದ್ದು ಎಂದು ಪರಿಗಣಿಸಲಾಗಿರುವುದು ಆರಂಭಿಕ ಶಿಕ್ಷಣ. ಮಕ್ಕಳ ಆರಂಭಿಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ಉದ್ದೇಶವನ್ನು ನೀತಿ ಹೊಂದಿದೆ. ಶಾಲಾ ವಿದ್ಯಾಭ್ಯಾಸದಿಂದ ವಂಚಿತರಾಗಿರುವ ಸುಮಾರು 2 ಕೋಟಿ ಮಕ್ಕಳನ್ನು 2030ರ ವೇಳೆಗೆ ಮರಳಿ ಶಾಲೆಗೆ ಕರೆತರುವ ಮಹತ್ವದ ಉದ್ದೇಶವನ್ನು ನೀತಿ ಪ್ರಸ್ತಾಪಿಸಿದೆ. 

ಭಾಷಾ ನೀತಿಯಲ್ಲಿ ಬದಲಾವಣೆಗಳನ್ನು ತರಲಾಗಿದೆ. ವಿದ್ಯಾರ್ಥಿಯು ಇಂತಹದ್ದೇ ಭಾಷೆ ಕಲಿಯಬೇಕು ಎಂಬ ಹೇರಿಕೆಯನ್ನು ಕೈಬಿಡಲಾಗಿದೆ. ಮಾಧ್ಯಮಿಕ ಹಂತದಲ್ಲಿ ಮಕ್ಕಳಿಗೆ ವಿದೇಶಿ ಭಾಷೆಗಳನ್ನು ಕಲಿಯಲೂ ಅವಕಾಶ ನೀಡುವ ವಾಗ್ದಾನ ನೀಡಿದೆ. ಮಾತೃಭಾಷೆ ಅಥವಾ ಸ್ಥಳೀಯ ಭಾಷೆ ಅಥವಾ ಪ್ರಾದೇಶಿಕ ಭಾಷೆಯನ್ನು ಕನಿಷ್ಠ 5ನೇ ತರಗತಿಯವರೆಗೆ ಬೋಧನಾ ಮಾಧ್ಯಮವಾಗಿ ಬಳಸಬೇಕು. 8ನೇ ತರಗತಿ ಮತ್ತು ಅದಕ್ಕೂ ಹೆಚ್ಚಿನ ಶಿಕ್ಷಣಕ್ಕೂ ಅದು ಅನ್ವಯವಾದರೆ ತೊಂದರೆಯಿಲ್ಲ ಎಂದು ತಿಳಿಸಿದೆ. ಈ ಮೂಲಕ ಭಾಷಾ ಮಾಧ್ಯಮ ಗೊಂದಲಕ್ಕೆ ಸ್ಪಷ್ಟತೆ ದೊರಕಿಸುವ ಯತ್ನ ಮಾಡಿದೆ.  

ತರಗತಿಗಳ ವರ್ಗೀಕರಣದಲ್ಲಿ ಗುರುತರ ಬದಲಾವಣೆಯ ಗುರಿ ಹಾಕಿಕೊಳ್ಳಲಾಗಿದೆ. ಈಗಿರುವ 10+2 ರಚನೆಯ ಬದಲಾಗಿ, 5 + 3 + 3 + 4 ರಚನೆ ಪ್ರಸ್ತಾಪಿಸಲಾಗಿದೆ. ಇದರ ಪ್ರಕಾರ ಮಗುವಿನ ಪ್ರಾಥಮಿಕ ಶಿಕ್ಷಣ 3ನೇ ವರ್ಷದಿಂದ ಆರಂಭವಾಗುತ್ತದೆ. ವಿದ್ಯಾರ್ಥಿಯ 18ನೇ ವರ್ಷದವರೆಗೆ ತರಗತಿಗಳನ್ನು ವರ್ಗೀಕರಣ ಮಾಡಲಾಗಿದೆ. 

ವಿವರಿಸಿ ಹೇಳುವುದಾದರೆ, ಹೊಸ ವ್ಯವಸ್ಥೆಯು ಮೂರು ವರ್ಷಗಳ ಅಂಗನವಾಡಿ ಅಥವಾ ಶಾಲಾಪೂರ್ವ ಕಲಿಕೆಯೊಂದಿಗೆ 12 ವರ್ಷಗಳ ಶಾಲಾ ಶಿಕ್ಷಣವನ್ನು ಹೊಂದಿರುತ್ತದೆ. 5 ಅಥವಾ 6ನೇ ವರ್ಷಕ್ಕೆ ಶಾಲೆಗೆ ಸೇರಿಸುವ ಪದ್ಧತಿ ಕೊನೆಯಾಗಲಿದೆ. 3ರಿಂದ 6 ವರ್ಷ ವಯಸ್ಸಿನವರನ್ನು ಶಾಲಾ ಪಠ್ಯಕ್ರಮದ ಅಡಿಯಲ್ಲಿ ತರಲಾಗುತ್ತಿದೆ. ಈ ವಯಸ್ಸು ಮಗುವಿನ ಮಾನಸಿಕ ಸಾಮರ್ಥ್ಯಗಳ ಅಭಿವೃದ್ಧಿಗೆ ನಿರ್ಣಾಯಕ ಹಂತವೆಂದು ಜಾಗತಿಕವಾಗಿ ಗುರುತಿಸಲಾಗಿದೆ.

ಮಕ್ಕಳಿಗೆ ಶಾಲಾ ಅವಧಿಯಲ್ಲೇ ವೃತ್ತಿಪರ ಶಿಕ್ಷಣ ನೀಡಿ ಸನ್ನದ್ಧಗೊಳಿಸುವ ಮಹತ್ವಾಕಾಂಕ್ಷೆಯನ್ನು ಸರ್ಕಾರ ವ್ಯಕ್ತಪಡಿಸಿದೆ. ಈ ದಿಸೆಯಲ್ಲಿ 6ನೇ ತರಗತಿಯಿಂದ ಶಾಲೆಗಳಲ್ಲಿ ವೃತ್ತಿಪರ ಶಿಕ್ಷಣ ಪ್ರಾರಂಭವಾಗಲಿದ್ದು, ಇಂಟರ್ನ್‌ಶಿಪ್ ಒಳಗೊಂಡಿರುತ್ತದೆ. ಈಗಿರುವ ಸಾರಾಂಶ ರೂಪದ  ಮೌಲ್ಯಮಾಪನದ ವಿಧಾನ ಬದಲಾಗಲಿದ್ದು, ನಿಯಮಿತ ಮತ್ತು ರಚನಾತ್ಮಕ ಮೌಲ್ಯಮಾಪನಕ್ಕೆ ಮಕ್ಕಳು, ಶಿಕ್ಷಕರು ಸಿದ್ಧರಾಗಬೇಕಿದೆ. ಹೀಗೆ ಮಾಡುವುದರಿಂದ ಸಾಮರ್ಥ್ಯ ಆಧರಿತ ಕಲಿಕೆಯನ್ನು ಉತ್ತೇಜಿಸಿದಂತಾಗುತ್ತದೆ. ಮಕ್ಕಳಲ್ಲಿ ವಿಶ್ಲೇಷಣೆ, ವಿಮರ್ಶಾತ್ಮಕ ಚಿಂತನೆ ಮತ್ತು ಪರಿಕಲ್ಪನೆ ರೂಪಿಸುವುದು ಮೊದಲಾದ ಉನ್ನತ ಕೌಶಲಗಳು ಬೆಳಯುತ್ತವೆ ಎಂದು ನೀತಿಯು ಹೇಳಿದೆ.

ಪರೀಕ್ಷಾ ವ್ಯವಸ್ಥೆ ಸುಧಾರಣೆ ಆಗಲಿದೆ ಎಂಬ ಭರವಸೆಯನ್ನು ಹೊಸ ನೀತಿ ನೀಡಿದೆ. 3, 5 ಮತ್ತು 8ನೇ ತರಗತಿಯಲ್ಲಿ ಪರೀಕ್ಷೆಗಳು ಇರಲಿವೆ. ಇದನ್ನು ಸೂಕ್ತ ಪ್ರಾಧಿಕಾರ ನಡೆಸುತ್ತದೆ. 10 ಮತ್ತು 12ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ಎಂದಿನಂತೆ ಇರಲಿವೆ. ಆದರೆ ಅವುಗಳನ್ನು ಸಮಗ್ರ ಅಭಿವೃದ್ಧಿ ದೃಷ್ಟಿಕೋನದೊಂದಿಗೆ ಮರುವಿನ್ಯಾಸಗೊಳಿಸಲಾಗುತ್ತದೆ. ಹುಟ್ಟು ಅಥವಾ ಇತರೆ ಕಾರಣದಿಂದ ಯಾವುದೇ ಮಗು ಕಲಿಕೆಯಿಂದ ವಿಮುಖವಾಗಬಾರದು ಎಂಬುದು ಹೊಸ ನೀತಿಯ ಧ್ಯೇಯವಾಗಿದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರು, ಅಂಗವಿಕಲರಿಗೆ ವಿಶೇಷ ಒತ್ತು ನೀಡವುದು ನೀತಿಯ ಆಶಯವಾಗಿದೆ. ಉನ್ನತ ಶಿಕ್ಷಣದಲ್ಲೂ ಸುಧಾರಣೆಯ ಗುರಿಯಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಹೊಂದಿಕೊಳ್ಳುವ ಪಠ್ಯಕ್ರಮದೊಂದಿಗೆ ಸಮಗ್ರ ಪದವಿಪೂರ್ವ ಶಿಕ್ಷಣವು 3 ಅಥವಾ 4 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ವಿದ್ಯಾರ್ಥಿ ಮೇಲೆ ಯಾವುದೇ ಒತ್ತಡ ಇರುವುದಿಲ್ಲ. ತರಗತಿ ಬೋಧನೆಗೆ ತಂತ್ರಜ್ಞಾನದ ನೆರವು ಬಳಸಿಕೊಳ್ಳಲಾಗುವುದು ಎಂದು ನೀತಿಯು ಹೇಳಿದೆ. 

ಆಧಾರ: ಪಿಟಿಐ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು