ಗುರುವಾರ , ಜೂನ್ 4, 2020
27 °C

ಫ್ಯಾಕ್ಟ್‌ಚೆಕ್| ಸರ್ಕಾರ ಪ್ರತಿ ಊರಿಗೂ ಹೆಲಿಕಾಪ್ಟರ್‌ನಿಂದ ದುಡ್ಡು ಸುರಿಯುತ್ತದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಡ್ಡಿ ಇಲ್ಲ, ಸಾಲ ಅಲ್ಲ, ಹೆಲಿಕಾಪ್ಟರ್‌ನಿಂದ ಪ್ರತಿ ಊರಿಗೂ ದುಡ್ಡು- 'ಹೆಲಿಕಾಪ್ಟರ್ ಮನಿ' ಎಂದು ಪಬ್ಲಿಕ್ ಟಿವಿ ಸುದ್ದಿವಾಹಿನಿಯಲ್ಲಿ ಪ್ರಸಾರವಾಗಿರುವ ಸುದ್ದಿಯ ಸ್ಕ್ರೀನ್‌ಶಾಟ್  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

ಈ ಬಗ್ಗೆ  ಫ್ಯಾಕ್ಟ್‌ಚೆಕ್ ನಡೆಸಿದ ಪಿಐಬಿ, ಸರ್ಕಾರ ಈ ರೀತಿಯ ಕಾರ್ಯಗಳನ್ನು ಮಾಡುವುದಿಲ್ಲ ಎಂದು ಟ್ವೀಟಿಸಿದೆ.

ಏನಿದು ಹೆಲಿಕಾಪ್ಟರ್ ಮನಿ?
ಹೆಲಿಕಾಪ್ಟರ್ ಮನಿ ಎಂದರೆ  ಹೆಲಿಕಾಪ್ಟರ್ ಮೂಲಕ ಊರುಗಳಿಗೆ  ದುಡ್ಡು ಸುರಿಯುವುದು ಎಂದರ್ಥವಲ್ಲ. ಇದು ದೇಶದ ಆರ್ಥಿಕ ಸುಧಾರಣೆಯ ಮಾರ್ಗಗಳಲ್ಲೊಂದಾಗಿದೆ. ಅಮೆರಿಕದ ಆರ್ಥಿಕ ತಜ್ಞ ಮಿಲ್ಟನ್ ಫ್ರೈಡ್‌ಮ್ಯಾನ್ ಈ ಪದವನ್ನು ಟಂಕಿಸಿದ್ದರು. 'ಹೆಲಿಕಾಪ್ಟರ್ ಮನಿ'  ನೀತಿಯ ಮೂಲಕ ಆರ್‌ಬಿಐ ನೇರವಾಗಿ ಹಣದ ವಹಿವಾಟನ್ನು ಹೆಚ್ಚಿಸುತ್ತದೆ. ಅಂದರೆ ದೇಶದಲ್ಲಿ ದುಡ್ಡು ಚಲಾವಣೆಯಾಗುವಂತೆ ಮಾಡುತ್ತದೆ. ಆರ್ಥಿಕ ಬೆಳವಣಿಗೆ ನಿಂತು ಹೋದಾಗ ಜನರಲ್ಲಿ ಕೊಳ್ಳುವ ಶಕ್ತಿ ಹೆಚ್ಚಿಸುವುದರ ಜತೆಗೆ  ಹೆಚ್ಚು ಹಣ ಖರ್ಚಾಗುವಂತೆ ಮಾಡಿ ಹಣ ಚಲಾವಣೆಯಾಗುವಂತೆ ಮಾಡುವುದೇ ಇದರ ಉದ್ದೇಶ.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಕರ ರಾವ್  ಏಪ್ರಿಲ್ 12ರಂದು  ಹೆಲಿಕಾಪ್ಟರ್ ಮನಿ ಮೂಲಕ ರಾಜ್ಯಗಳಿಗೆ ನೆರವಾಗಬೇಕು,   ಕೇಂದ್ರೀಯ ಬ್ಯಾಂಕ್ ಈ ಬಗ್ಗೆ ಗಮನಹರಿಸಬೇಕೆಂಬ ಸಲಹೆ ಮುಂದಿಟ್ಟಿದ್ದರು. ಜಿಡಿಪಿಯಿಂದ ಶೇ.5 ರಷ್ಟು ಫಂಡ್ ರಾಜ್ಯಗಳಿಗೆ ನೀಡಿದರೆ ಆರ್ಥಿಕ ಬಿಕ್ಕಟ್ಟು ಪರಿಹರಿಸಬಹುದು ಎಂದು ಅವರು ಹೇಳಿದ್ದರು.

ಪಬ್ಲಿಕ್ ಟಿವಿಗೆ ಶೋಕಾಸ್ ನೋಟಿಸ್

2020 ಏಪ್ರಿಲ್ 15 ರಾತ್ರಿ8.3ಕ್ಕೆ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಹೆಲಿಕಾಪ್ಟರ್ ಮನಿ- ಹೆಲಿಕಾಪ್ಟರ್‌ನಲ್ಲಿ  ಸುರೀತಾರಾ ಮೋದಿ ಎಂಬ ಕಾರ್ಯಕ್ರಮ ಸುಳ್ಳಿನಿಂದ ಕೂಡಿದ್ದು, ಬ್ರಾಡ್‌ಕಾಸ್ಟಿಂಗ್ ನೀತಿ ಮತ್ತು ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ಇಡೀ ದೇಶ ಕೋವಿಡ್ -19 ವಿರುದ್ಧ ಹೋರಾಡುತ್ತಿರುವಾಗ ರೋಗದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಜನರಿಗೆ ಮಾಹಿತಿ ನೀಡುವ ಬದಲು ಸುಳ್ಳು ಸುದ್ದಿ ಹಬ್ಬಿಸಿ ಆತಂಕ ಮತ್ತು ಜನರಲ್ಲಿ ಗಲಿಬಿಲಿ ಉಂಟುಮಾಡಿದ್ದಕ್ಕಾಗಿ ಕೇಬಲ್ ಟೆಲಿವಿಷನ್ ನೆಟ್ವರ್ಕ್ಸ್ (ರೆಗ್ಯುಲೇಷನ್ ) ಕಾಯ್ದೆ 1995 ಮತ್ತು ನಿಯಮಗಳನುಸಾರ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೊ (ಪಿಐಬಿ),  ಪಬ್ಲಿಕ್ ಟಿವಿ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಚ್.ಆರ್. ರಂಗನಾಥ್ ಅವರಿಗೆ ಶೋಕಾಸ್ ನೋಟಿಸ್ ಕಳುಹಿಸಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು