ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯು ಪ್ರತಿಭಟನೆ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ 9 ಫೇಕ್‌ ಪೋಸ್ಟ್‌ಗಳು

Last Updated 22 ನವೆಂಬರ್ 2019, 16:52 IST
ಅಕ್ಷರ ಗಾತ್ರ

ನವದೆಹಲಿ: ಹಾಸ್ಟೆಲ್ ಶುಲ್ಕ ಏರಿಕೆ ಖಂಡಿಸಿ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು)ಪ್ರತಿಭಟನೆ ಮುಂದುವರಿದಿದೆ. ಶುಲ್ಕ ಏರಿಕೆಯ ನಿರ್ಧಾರ ಕೈ ಬಿಡುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿರುವ ವಿದ್ಯಾರ್ಥಿಗಳು ಕ್ಯಾಂಪಸ್ ಒಳಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯ ದನಿ ಬಲಗೊಳ್ಳುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಜೆಎನ್‌ಯು ಪ್ರತಿಭಟನೆಗೆ ಸಂಬಂಧಿಸಿದ ಫೇಕ್ ಪೋಸ್ಟ್‌ಗಳು ಹರಿದಾಡುತ್ತಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗುತ್ತಿರುವ ಮತ್ತು ಆಗಿರುವಫೇಕ್‌ ಪೋಸ್ಟ್‌ಗಳನ್ನು ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿದ್ದು, ಅವುಗಳು ಹೀಗಿವೆ.

1. ಇದು ಜೆಎನ್‌ಯು ಹಾಸ್ಟೆಲ್ ಕೋಣೆ ಅಲ್ಲ
ಎರಡು ಬೆಡ್‌ಗಳಿರುವ ಒಂದು ಸುಸಜ್ಜಿತ ಕೋಣೆಯ ಚಿತ್ರ. ಅದರ ಜತೆಗಿರುವ ಒಕ್ಕಣೆ ಹೀಗೆ. ಈಗ 10ಕ್ಕೆ ಚಹಾ, ಸಮೋಸ ಸಿಗುವುದಿಲ್ಲ. ಅಂತದರಲ್ಲಿ ನಮ್ಮ ತೆರಿಗೆ ಹಣದಿಂದ ಜೆಎನ್‌ಯುವಿನಲ್ಲಿ ಉಚಿತವಾಗಿ ತಿನ್ನುವವರಿಗೆ ದೆಹಲಿಯಲ್ಲಿ ಈ ರೀತಿ ಕೋಣೆ ₹10ಗೆ ಸಿಗುತ್ತದೆ ಎಂದಿದೆ. ಐ ಸಪೋರ್ಟ್ ಪಿಎಂಎಂಬ ಪುಟದಲ್ಲಿ ನವೆಂಬರ್ 14ರಂದು ಈಪೋಸ್ಟ್ ಶೇರ್ ಆಗಿತ್ತು.

ಫ್ಯಾಕ್ಟ್‌ಚೆಕ್
ಫೋಟೊವನ್ನುಯಾಂಡೆಕ್ಸ್‌ನಲ್ಲಿ ರಿವರ್ಸ್ ಸರ್ಚ್ ಮಾಡಿದಾಗ ಈ ವೆಬ್‌ಸೈಟ್‌ನಲ್ಲಿ ಫೋಟೊ ಸಿಕ್ಕಿದೆ. ವಿವಿಧ ಆಯಾಮಗಳಲ್ಲಿ ಕೋಣೆಯ ಫೋಟೊ ಅಪ್‌ಲೋಡ್ ಆಗಿದ್ದು ಸ್ಟೂಡೆಂಟ್ಸ್ ಇನ್ ಹೌಸಿಂಗ್ ಎಂದು ವಿವರಣೆ ನೀಡಲಾಗಿದೆ.

‘Students Inn Housing’ ಎಂದು ಫೇಸ್‌ಬುಕ್‌ನಲ್ಲಿ ಸರ್ಚ್ ಮಾಡಿದಾಗ ದೆಹಲಿಯಲ್ಲಿರುವ ಪೇಯಿಂಗ್ ಗೆಸ್ಟ್ (ಪಿಜಿ) ಫೋಟೊ ಇದಾಗಿದೆ. ಇದೇ ಫೋಟೊ ಮೇ16, 2018ರಂದು ಶೇರ್ ಆಗಿತ್ತು.

ಜೆಎನ್‌ಯುವಿನ ಹಾಸ್ಟೆಲ್ ಕೋಣೆ ಹೇಗಿದೆ ಎಂದು ಆಲ್ಟ್‌ನ್ಯೂಸ್ ಅಲ್ಲಿನ ವಿದ್ಯಾರ್ಥಿಗಳಲ್ಲಿ ಕೇಳಿದಾಗ ಅವರು ಕಳುಹಿಸಿಕೊಟ್ಟ ಫೋಟೊ ಹೀಗಿದೆ.

ಕೃಪೆ: ಆಲ್ಟ್‌ನ್ಯೂಸ್
ಕೃಪೆ: ಆಲ್ಟ್‌ನ್ಯೂಸ್

ಅಂದರೆ ವೈರಲ್ ಪೋಸ್ಟ್‌ನಲ್ಲಿ ತೋರಿಸಿರುವ ಫೋಟೊ ಮತ್ತು ಜೆಎನ್‌ಯು ವಿದ್ಯಾರ್ಥಿಗಳು ಕಳುಹಿಸಿಕೊಟ್ಟ ಹಾಸ್ಟೆಲ್ ಕೋಣೆಯ ಫೋಟೊಗೆ ಇರುವ ಅಂತರ ಇಲ್ಲಿ ಸ್ಪಷ್ಟವಾಗಿದೆ .

2. ಮದ್ಯದ ಬಾಟಲಿ ಹಿಡಿದಿರುವ ಯುವತಿ
'ಮದ್ಯದ ಬಾಟಲಿ ಹಿಡಿದುಕೊಂಡಿರುವ ಯುವತಿ, ಪಕ್ಕದಲ್ಲಿಯೇ ಸಿಗರೇಟ್ ಪ್ಯಾಕ್. ಕ್ಲಾಸಿಕ್ ಸಿಗರೇಟ್ ಪ್ಯಾಕ್‌ವೊಂದರ ಬೆಲೆ ₹300. ಇದು ಜೆಎನ್‌ಯು ವಿದ್ಯಾರ್ಥಿನಿ. ಹೀಗಿರುವವರು ಹಾಸ್ಟೆಲ್ ಶುಲ್ಕ ಏರಿಕೆ ಮಾಡಿದ್ದಕ್ಕೆ ಪ್ರತಿಭಟಿಸುತ್ತಿದ್ದಾರೆ' ಎಂಬ ಟ್ವೀಟ್ ಇದು. ಇನ್ನೊಂದು ಟ್ವೀಟ್‌ನಲ್ಲಿ ಕಾಂಡೊಮ್‌ನ್ನು ಹ್ಯಾರ್‌ಬ್ಯಾಂಡ್‌ನಂತೆ ಬಳಸಿರುವ ಯುವತಿಯ ಫೋಟೊ ಮತ್ತು ಯುವತಿಯೊಬ್ಬಳು ಪಾರದರ್ಶಕ ಬಟ್ಟೆ ತೊಟ್ಟು ಪ್ರತಿಭಟಿಸುತ್ತಿರುವ ಚಿತ್ರ ಶೇರ್ ಮಾಡಲಾಗಿತ್ತು.

ಜೆಎನ್‌ಯು ಬಗ್ಗೆ ಹೆಚ್ಚೇನು ವಿವರಿಸಬೇಕಾಗಿಲ್ಲ. ಕೂದಲು ಕಟ್ಟಲು ಕಾಂಡೋಮ್ ಮತ್ತು ನಗ್ನ ಪ್ರತಿಭಟನೆ ಎಂಬ ಶೀರ್ಷಿಕೆಯನ್ನು ಆ ಫೋಟೊಗಳಿಗೆ ನೀಡಲಾಗಿತ್ತು.

ಫ್ಯಾಕ್ಟ್‌ಚೆಕ್
ಮೇಲೆ ಹೇಳಿರುವ ಫೋಟೊಗಳನ್ನು ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ ಅವು ಜೆಎನ್‌ಯುಗೆ ಸಂಬಂಧಿಸಿದ ಫೋಟೊಗಳು ಅಲ್ಲ ಎಂಬುದು ತಿಳಿಯುತ್ತದೆ. ಮದ್ಯದ ಬಾಟಲಿ ಹಿಡಿದಿರುವ ಯುವತಿಯ ಫೋಟೊ 2016ರಲ್ಲಿಅಪ್‌ಲೋಡ್ ಆಗಿರುವ ಬ್ಲಾಗ್‌ವೊಂದರಲ್ಲಿದೆ. ಕಾಂಡೋಮ್‌ನ್ನು ಹ್ಯಾರ್‌ಬ್ಯಾಂಡ್ ಆಗಿ ಬಳಸಿರುವ ಆ ಚಿತ್ರ 2017ರಲ್ಲಿ ಟ್ವಿಟರ್‌ನಲ್ಲಿ ಶೇರ್ ಆದ ಚಿತ್ರವಾಗಿದೆ.

3. ಸಿಪಿಐ ನಾಯಕಿಯನ್ನು ಜೆಎನ್‌ಯು ವಿದ್ಯಾರ್ಥಿಯನ್ನಾಗಿ ಮಾಡಿದರು!

ಈಕೆ ಜೆಎನ್‌ಯು ಅಂತಿಮ ವರ್ಷ ವಿದ್ಯಾರ್ಥಿನಿ ಎಂಬ ಒಕ್ಕಣೆಯೊಂದಿಗೆ ಹಿರಿಯ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆಗಿದೆ.

ಫ್ಯಾಕ್ಟ್‌ಚೆಕ್
ಈ ಚಿತ್ರದಲ್ಲಿರುವುದು ಸಿಪಿಐ ನಾಯಕಿ ಅನ್ನಿ ರಾಜಾ. ಇವರು ಜೆಎನ್‌ಯು ವಿದ್ಯಾರ್ಥಿನಿ ಅಲ್ಲ. ಲೈಂಗಿಕ ದೌರ್ಜನ್ಯ ಆರೋಪವನ್ನು ಎದುರಿಸುತ್ತಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ 2019 ಮೇ ತಿಂಗಳಲ್ಲಿ ನ್ಯಾಯಾಲಯಕ್ಲೀನ್‌ಚಿಟ್ ನೀಡಿತ್ತು. ಇದನ್ನು ಖಂಡಿಸಿ ಸುಪ್ರೀಂಕೊರ್ಟ್ ಹೊರಗಡೆ ನಡೆದ ಪ್ರತಿಭಟನೆಯಲ್ಲಿ ಅನ್ನಿ ರಾಜಾ ಭಾಗಿಯಾಗಿದ್ದರು. ಆ ವೇಳೆ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುತ್ತಿರುವ ಚಿತ್ರ ಇದಾಗಿದೆ.

4. 45ರ ಹರೆಯದ ಕಾಂಗ್ರೆಸ್ ನೇತಾರ ಅಬ್ದುಲ್ ರಾಜಾ ಜೆಎನ್‌ಯು ವಿದ್ಯಾರ್ಥಿ
ಇವರು 45ರ ಹರೆಯದ ಕಾಂಗ್ರೆಸ್ ನೇತಾರ ಅಬ್ದುಲ್ ರಾಜಾ. ಇವರು ಜೆಎನ್‌ಯು ವಿದ್ಯಾರ್ಥಿ ಎಂಬ ಬರಹದೊಂದಿಗೆ #ShutDownJNU ಎಂಬ ಹ್ಯಾಶ್‌ಟ್ಯಾಗ್ ಬಳಸಿದ ಟ್ವೀಟೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಫ್ಯಾಕ್ಟ್‌ಚೆಕ್
ಈ ಚಿತ್ರದಲ್ಲಿರುವವರು ಶುಭಂ ಬೋಕಡೆ.ವಯಸ್ಸು 23, ಜೆಎನ್‌ಯುನಲ್ಲಿ ಎಂಎ ಲಿಂಗ್ವಿಸ್ಟಿಕ್ ವಿದ್ಯಾರ್ಥಿ. ವೈರಲ್ ಪೋಸ್ಟ್‌‌ ಬಗ್ಗೆ ಆಲ್ಟ್ ನ್ಯೂಸ್ ಜತೆ ಮಾತನಾಡಿದ ಶುಭಂ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ಫೇಕ್, ಅದರಲ್ಲಿ ಬರೆದಿರುವುದೂ ಸುಳ್ಳು. ಇದು ಮುಸ್ಲಿಮರನ್ನು ಟಾರ್ಗೆಟ್ ಮಾಡಿರುವುದು ಎಂಬುದು ಸ್ಪಷ್ಟ. ಒಂದು ವೇಳೆ 45ರ ಹರೆಯದ ಅಬ್ದುಲ್ ರಾಜಾ ಇಲ್ಲಿಯ ವಿದ್ಯಾರ್ಥಿಯೇ ಆಗಿದ್ದರೆ ತಪ್ಪೇನು? 45ರ ಹರೆಯದ ವ್ಯಕ್ತಿ ನ್ಯಾಯವಾದ ಬೆಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾನೆ ಎಂದರೆ ಅದರಲ್ಲೇನಿದೆ ತಪ್ಪು?ಕೆಲವೊಬ್ಬರಿಗೆ ಮಾತ್ರ ಎಂಬುದಕ್ಕೆ ಸೀಮಿತವಾಗದೆ ಕೊನೆಯ ಸಾಲಿನಲ್ಲಿನಿಂತ ವ್ಯಕ್ತಿಗೂ ಅವಕಾಶ ಸಿಗುವಂತೆ ಮಾಡುವುದೇ ಶಿಕ್ಷಣ ಎಂದಿದ್ದಾರೆ ಶುಭಂ.

5. ಮೊಹರಂ ಮೆರವಣಿಗೆಯಲ್ಲಿ ಗಾಯವಾದ ಮಹಿಳೆಯನ್ನು ಜೆಎನ್‌ಯು ವಿದ್ಯಾರ್ಥಿ ಎಂದರು
ಮಹಿಳೆಯೊಬ್ಬಳ ತಲೆಯಿಂದ ರಕ್ತ ಸುರಿಯುತ್ತಿದೆ. ನವದೆಹಲಿಯಲ್ಲಿ ಜೆಎನ್‌ಯುವಿದ್ಯಾರ್ಥಿಗಳು ಮತ್ತು ಪೊಲೀಸ್ ನಡುವಿನ ಸಂಘರ್ಷದಲ್ಲಿ ಗಾಯಗೊಂಡ ಮಹಿಳೆ ಎಂದು ಈ ಫೋಟೊ ಶೇರ್ ಆಗಿತ್ತು.

ಫ್ಯಾಕ್ಟ್‌ಚೆಕ್
ಇಲ್ಲಿರುವ ಚಿತ್ರ ಭಾರತದ್ದು ಅಲ್ಲ. ಶಿಯಾ ನ್ಯೂಸ್ ವೆಬ್‌ಸೈಟ್ಜಫರಿಯಾ ನ್ಯೂಸ್ ಡಾಟ್ ಕಾಮ್ ‌ನಲ್ಲಿ ಫೆಬ್ರುವರಿ 2005ರಂದು ಪ್ರಕಟವಾದ ಲೇಖನದಲ್ಲಿದೆ ಈ ಚಿತ್ರವಿದೆ. ಮೊಹರಂ ಹಬ್ಬದ 10ನೇ ದಿನವಾದ ಅಶುರಾ ಆಚರಣೆಯ ಫೊಟೊ ಇದಾಗಿದೆ.

6. 30ರ ಹರೆಯದ ಯುವಕನನ್ನು 47ರ ಹರೆಯದ ಮೊಯ್ನುದ್ದೀನ್ ಎಂದರು!
ಈ ಮೊಯ್ನುದ್ದೀನ್. 47ರ ಹರೆಯದ ಈ ವ್ಯಕ್ತಿ ಜೆಎನ್‌ಯು ವಿದ್ಯಾರ್ಥಿ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ನಲ್ಲಿ ಉಲ್ಲೇಖಿಸಿದಂತೆ ಈತ 30 ವರ್ಷಗಳ ಹಿಂದೆ ಅಂದರೆ 1989ರಲ್ಲಿ ವಿಶ್ವವಿದ್ಯಾಲಯಕ್ಕೆ ಸೇರಿದ್ದ.ಕೂದಲು ಇಲ್ಲದ ಈ ವ್ಯಕ್ತಿ ಹಲವು ವರ್ಷದಿಂದ ಇಲ್ಲಿಯೇ ಇದ್ದಾನೆ. ರೂಂ ಬಾಡಿಗೆ ₹10 , ಉಚಿತ ಆಹಾರ, ಸ್ಟೈಪೆಂಡ್, ಕಾಂಡೋಮ್ ನೀಡುವ ಯಂತ್ರ, ಒಬ್ಬ ಕ್ರಾಂತಿಕಾರಿಗೆ ಇನ್ನೇನು ಬೇಕು? ಎಂಬ ಬರಹದೊಂದಿಗೆ ಈ ಪೋಸ್ಟ್ ಶೇರ್ ಆಗಿದೆ.

ಫ್ಯಾಕ್ಟ್‌ಚೆಕ್
ಈ ಫೋಟೊದಲ್ಲಿರುವುದು ಜೆಎನ್‌ಯು ವಿದ್ಯಾರ್ಥಿ ಪಂಕಜ್ ಮಿಶ್ರಾ. ಈತನ ವಯಸ್ಸು 47 ಅಲ್ಲ, 30. ಇಲ್ಲಿ ಎಂಫಿಲ್ ವಿದ್ಯಾರ್ಥಿಯಾಗಿದ್ದಾರೆ ಮಿಶ್ರಾ.

7. ಹೈದರಾಬಾದ್ ಪ್ರತಿಭಟನೆ ಫೋಟೊವನ್ನೂ ಶೇರ್ ಮಾಡಿದರು
ವೃದ್ದಾಪ್ಯ ಪಿಂಚಣಿ ಪಡೆಯುವ ಹೊತ್ತಲ್ಲಿ ಈ ಆಂಟಿ ಏನು ಕಲಿಯಲು ಬಂದಿದ್ದಾರೆ ಎಂಬ ಬರಹದೊಂದಿಗೆ ಮಹಿಳೆಯೊಬ್ಬರನ್ನು ಪೊಲೀಸರು ಎಳೆಯುತ್ತಿರುವ ಫೋಟೊ ಟ್ವೀಟ್ ಆಗಿತ್ತು. ಇದೇ ಫೋಟೊವನ್ನು ಇನ್ನೊಬ್ಬರು ಟ್ವೀಟಿಸಿದ್ದು ಈಕೆ ಜೆಎನ್‌ಯುನಲ್ಲಿ ಏನು ಕಲಿಯುತ್ತಿದ್ದಾರೆ ಎಂದಿದ್ದಾರೆ. ಈ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಶೇರ್ ಆಗಿತ್ತು.

ಫ್ಯಾಕ್ಟ್‌ಚೆಕ್
ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ತಿಳಿದು ಬಂದ ವಿಷಯಏನೆಂದರೆ ಇದು ಆಂಧ್ರ ಪ್ರದೇಶದಲ್ಲಿ ನಡೆದ ಪ್ರತಿಭಟನೆಯ ಚಿತ್ರ. ಕನಿಷ್ಠ ವೇತನಕ್ಕಾಗಿ ಹೈದರಾಬಾದ್‌ನ ಲೇಬರ್ ಕಮಿಷನರ್ ಕಚೇರಿಯಲ್ಲಿ ಈ ಮಹಿಳೆ ಪ್ರತಿಭಟನೆ ನಡೆಸಿದ್ದರು. ಈ ಚಿತ್ರವನ್ನುಔಟ್‌ಲುಕ್ ಪ್ರಕಟಿಸಿತ್ತು.2017, ಸೆಪ್ಟೆಂಬರ್ 19ರಂದು ಪಿಟಿಐ ಕ್ಲಿಕ್ಕಿಸಿದ ಫೋಟೊ ಇದಾಗಿದೆ.

8.ನಿರ್ಭಯಾಅತ್ಯಾಚಾರ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆಯ ಫೋಟೊ
ಮಹಿಳೆಯೊಬ್ಬರ ಮೇಲೆ ಪೊಲೀಸ್ ಲಾಠಿ ಚಾರ್ಚ್ ಮಾಡುತ್ತಿರುವ ಫೋಟೊ ಜೆಎನ್‌ಯು ಪ್ರತಿಭಟನೆಯದ್ದು ಎಂದು ಹೇಳಲಾಗಿತ್ತು.

ಫ್ಯಾಕ್ಟ್‌ಚೆಕ್
ಈ ಫೋಟೊ 2012ರಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣ ಖಂಡಿಸಿ ನವದೆಹಲಿಯಲ್ಲಿ ನಡೆದ ಪ್ರತಿಭಟನೆಯದ್ದಾಗಿದೆ.

9.ಪ್ರತಿಭಟನೆಯಲ್ಲಿರುವುದು 43ರ ಹರೆಯದ ಮಹಿಳೆ ಅಲ್ಲ
ಜೀನ್ಯೂಸ್‌ನಲ್ಲಿ ಪ್ರಸಾರವಾದ ವಿಡಿಯೊ ದೃಶ್ಯದಿಂದ ಸೆರೆ ಹಿಡಿದ ಫೋಟೊವೊಂದರಲ್ಲಿ ಈಕೆಯ ವಯಸ್ಸು 43. ಜೆಎನ್‌ಯು ವಿದ್ಯಾರ್ಥಿನಿ. ಈಕೆಯ ಮಗಳು ಮೋನಾ ಕೂಡಾ ಜೆಎನ್‌ಯುನಲ್ಲಿ ಕಲಿಯುತ್ತಿದ್ದಾಳೆ ಎಂಬ ಫೇಕ್ ಪೋಸ್ಟ್ ಹರಿಬಿಡಲಾಗಿತ್ತು


ಫ್ಯಾಕ್ಟ್‌ಚೆಕ್
ಈಕೆ ಜೆಎನ್‌ಯು ವಿದ್ಯಾರ್ಥಿನಿ. ಈಕೆಯ ವಯಸ್ಸು 43 ಅಲ್ಲ 23.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT