ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಲ್ ಸಂದೇಶ ನಿರ್ಲಕ್ಷಿಸಿ: ವಿದ್ಯುತ್ ಚಾಲಿತ ಟ್ಯಾಕ್ಸಿ ಸೇವೆ ಟಾಟಾ ಕಂಪನಿಯದಲ್ಲ

Last Updated 31 ಮಾರ್ಚ್ 2022, 12:58 IST
ಅಕ್ಷರ ಗಾತ್ರ

ವೈರಲ್ ಆದ ಸುದ್ದಿ
ಓಲಾ ಮತ್ತು ಊಬರ್ ಟ್ಯಾಕ್ಸಿ ಸೇವೆಗಳ ಬಗ್ಗೆ ಎಲ್ಲರಿಗೆ ಗೊತ್ತಿದೆ. ಇದೀಗ ದೇಶದ ಪ್ರತಿಷ್ಠಿತ ಟಾಟಾ ಕಂಪನಿ ಕೂಡ ಮುಂಬಯಿ ಮತ್ತು ಪುಣೆ ನಗರಗಳ ಮೂಲಕ ಕಾರ್-ಇ (Car E) ಹೆಸರಿನಲ್ಲಿ ಟ್ಯಾಕ್ಸಿ ಸೇವೆಗಳನ್ನು ಆರಂಭಿಸಿದೆ. ದೇಶವು ಸಂಕಷ್ಟ ಸ್ಥಿತಿಯಲ್ಲಿರುವಾಗ ಟಾಟಾ ಕಂಪನಿಯು ಯಾವತ್ತೂ ನೆರವು ನೀಡಿದೆ. ಸಾಧ್ಯವಿದ್ದಷ್ಟೂ ಇದನ್ನು ಶೇರ್ ಮಾಡಿ ಮತ್ತು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬಳಸಿ ಎಂಬ ಒಕ್ಕಣೆಯುಳ್ಳ ವಾಟ್ಸ್ಆ್ಯಪ್ ಸಂದೇಶಗಳು ಆ್ಯಪ್ ಲಿಂಕ್ ಸಹಿತವಾಗಿ ಸಾಕಷ್ಟು ಹರಿದಾಡಿವೆ. ಈ ಸಂದೇಶದ ಹಿಂದಿರುವ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪ್ರಜಾವಾಣಿ ಪ್ರಯತ್ನಿಸಿದಾಗ, ಈ ಸಂದೇಶದಲ್ಲಿರುವ ಮಾಹಿತಿ ದಾರಿ ತಪ್ಪಿಸುವಂತಿದೆ ಎಂಬುದು ಬಯಲಾಯಿತು.

ವಾಟ್ಸ್ಆ್ಯಪ್ ಸಂದೇಶ
ವಾಟ್ಸ್ಆ್ಯಪ್ ಸಂದೇಶ

ಪರಿಶೀಲನೆ ನಡೆಸಿದ್ದು ಹೇಗೆ?
ವಾಟ್ಸ್ಆ್ಯಪ್ ಮೂಲಕ ಬಂದ ಸಂದೇಶದಲ್ಲಿರುವ Cab E cars ಕುರಿತು ಗೂಗಲ್ ಸರ್ಚ್ ಎಂಜಿನ್ ಮೂಲಕ ಹುಡುಕಾಡಿದಾಗ ದೊರೆತಿದ್ದು Cabecars.in ಎಂಬ ಜಾಲತಾಣ. ಇದರಲ್ಲಿರುವ "About" ವಿಭಾಗವನ್ನು ನೋಡಿದಾಗ, ಕ್ಯಾಬ್ ಇ ಹೆಸರಿನಲ್ಲಿ ಟ್ಯಾಕ್ಸಿ ಸೇವೆ ಆರಂಭವಾಗಿದ್ದು ನಿಜ. Cab-eez ಇನ್ಫ್ರಾ ಟೆಕ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯು 'ಕ್ಯಾಬ್-ಇ' ಬ್ರ್ಯಾಂಡ್ ಹೆಸರಿನಲ್ಲಿ ಟ್ಯಾಕ್ಸಿ ಸೇವೆ ಆರಂಭಿಸಿದ್ದು ಕೂಡ ಹೌದು. ಆದರೆ, ಇದೊಂದು ಖಾಸಗಿ ಕಂಪನಿಯಾಗಿದ್ದು, ಟಾಟಾ ಸಂಸ್ಥೆಗೂ ಕ್ಯಾಬ್-ಇ ಸೇವೆಗೂ ಸಂಬಂಧವಿಲ್ಲ ಎಂಬುದು ಮನದಟ್ಟಾಯಿತು.

ಅಲ್ಲದೆ, ವೆಬ್ ತಾಣದಲ್ಲಿ, ಈ ಕಂಪನಿಯ ಸಂಸ್ಥಾಪಕರ ಕುರಿತಾಗಿ ವಿವರವೂ ಇದೆ. ಇದೇ ಜಾಲತಾಣ 'Our Team' ವಿಭಾಗವನ್ನು ನೋಡಿದರೆ, ಕುಲದೀಪ್ ಘೋಷ್ ಎಂಬವರು ಈ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಿಇಒ. ಇಂದ್ರನೀಲ್ ಚಕ್ರವರ್ತಿ ಎಂಬವರು ಸಹ ಸಂಸ್ಥಾಪಕ ಹಾಗೂ ಸಿಒಒ. ನಿತಿನ್ ಶರ್ಮಾ ಎಂಬವರು ಕೂಡ ಸಹ ಸಂಸ್ಥಾಪಕರಾಗಿದ್ದು, ಸಿಎಫ್ಒ ಕೂಡ ಆಗಿದ್ದಾರೆ. ಹೀಗಾಗಿ, ಈ ಕಂಪನಿಗೂ ರತನ್ ಟಾಟಾ ಅವರಿಗೂ ಸಂಬಂಧವಿಲ್ಲ ಎಂಬುದು ಮನದಟ್ಟಾಯಿತು.

ಕಾರ್-ಇ ಕಂಪನಿಯ ಜಾಲತಾಣದಲ್ಲಿರುವ ಸಂಸ್ಥಾಪಕರ ವಿವರ
ಕಾರ್-ಇ ಕಂಪನಿಯ ಜಾಲತಾಣದಲ್ಲಿರುವ ಸಂಸ್ಥಾಪಕರ ವಿವರ

ಇದನ್ನು ದೃಢಪಡಿಸಲು ಮತ್ತಷ್ಟು ಹುಡುಕಿದಾಗ, ಕ್ಯಾಬ್ ಇ ಕಂಪನಿಯು ಫೇಸ್‌ಬುಕ್, ಟ್ವಿಟರ್, ಲಿಂಕ್ಡ್-ಇನ್ ಖಾತೆಗಳನ್ನೂ ಹೊಂದಿದ್ದು, ಇವೆಲ್ಲವೂ ಅಧಿಕೃತವೆಂದು ಗಮನಕ್ಕೆ ಬರುತ್ತದೆ. ಅದರ ಫೇಸ್‌ಬುಕ್ ತಾಣದಲ್ಲಿ ಈ ರೀತಿಯಾಗಿ ವೈರಲ್ ಆಗಿರುವ ಸಂದೇಶಕ್ಕೆ ಸ್ಪಷ್ಟನೆಯೂ ದೊರೆತಿದೆ. ಅದು ಇಲ್ಲಿದೆ.

ಇದರ ಅನುಸಾರ, "ಟಾಟಾ ಕಂಪನಿಯು ಕ್ಯಾಬ್-ಇ ಹೆಸರಿನಲ್ಲಿ ಮುಂಬಯಿ-ಪುಣೆಗಳಲ್ಲಿ ಕ್ಯಾಬ್ ಸೇವೆ ಪ್ರಾರಂಭಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಂದೇಶಗಳು ಹರಿದಾಡುತ್ತಿರುವುದು ನಿಜ. ಆದರೆ, ನಮ್ಮದು ಖಾಸಗಿ ಮಾಲೀಕತ್ವದ ಸಂಸ್ಥೆಯಾಗಿದ್ದು, ಟಾಟಾದ ಯಾವುದೇ ಪಾಲುದಾರಿಕೆ ಇರುವುದಿಲ್ಲ. ದಯವಿಟ್ಟು ಇಂತಹಾ ಸಂದೇಶಗಳನ್ನು, ಗಾಳಿಸುದ್ದಿಯನ್ನು ನಿರ್ಲಕ್ಷಿಸಿ" ಎಂದು ಬರೆಯಲಾಗಿದೆ.

ಇಷ್ಟಲ್ಲದೆ, ಕ್ಯಾಬ್-ಇ ಜಾಲತಾಣದಲ್ಲಿ ದೊರೆತಿದ್ದ ಸಂಪರ್ಕ ಸಂಖ್ಯೆಯನ್ನು ಸಂಪರ್ಕಿಸಿ ಮಾತನಾಡಿದಾಗಲೂ, ಅಲ್ಲಿನ ಅಧಿಕಾರಿಗಳು ಟಾಟಾ ಸಂಸ್ಥೆಗೂ ತಮಗೂ ಯಾವುದೇ ಸಂಬಂಧವಿಲ್ಲ, ತಮ್ಮದು ಖಾಸಗಿ ಸಂಸ್ಥೆ ಎಂಬುದನ್ನು ಸ್ಪಷ್ಟಪಡಿಸಿದರು.

ಅಂತಿಮ ನಿರ್ಣಯ
ಮುಂಬಯಿಯಲ್ಲಿ ಟಾಟಾ ಕಂಪನಿಯು ಕ್ಯಾಬ್ ಸೇವೆ ಆರಂಭಿಸಿಲ್ಲ ಮತ್ತು 'ಕ್ಯಾಬ್-ಇ' ಹೆಸರಿನಲ್ಲಿ ವಿದ್ಯುತ್ ಚಾಲಿತ ಟ್ಯಾಕ್ಸಿ ಸೇವೆಯನ್ನು ಒದಗಿಸುತ್ತಿರುವ ಖಾಸಗಿ ಸಂಸ್ಥೆಗೂ, ಟಾಟಾ ಕಂಪನಿಗೂ ಸಂಬಂಧ ಇಲ್ಲ.

ರೇಟಿಂಗ್:ಇದು ದಾರಿ ತಪ್ಪಿಸುವ ಮಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT