‘ಉರುಳುಗಾಲಿ’ಯಲ್ಲಿಫಿಟ್‌ನೆಸ್ ಖಯಾಲಿ!

ಶುಕ್ರವಾರ, ಏಪ್ರಿಲ್ 26, 2019
36 °C

‘ಉರುಳುಗಾಲಿ’ಯಲ್ಲಿಫಿಟ್‌ನೆಸ್ ಖಯಾಲಿ!

Published:
Updated:
Prajavani

ನಸುಕಿನ 6 ಗಂಟೆಗೆ ಹುಬ್ಬಳ್ಳಿಯ ಇಂದಿರಾ ಗ್ಲಾಸ್‌ ಹೌಸ್‌ ಆವರಣಕ್ಕೆ ಪೋಷಕರು ಮತ್ತು ಮಕ್ಕಳು ದಾಂಗುಡಿ ಇಡುತ್ತಾರೆ. ಮಕ್ಕಳು ಅವಸರ ಅವಸರವಾಗಿ ಕಾಲಿಗೆ ಶೂ ಕಟ್ಟಿಕೊಂಡು, ಉರುಳು ಗಾಲಿಗಳನ್ನು ಜೋಡಿಸಿಕೊಳ್ಳುತ್ತಾರೆ. ತಲೆಗೆ ಕ್ಯಾಪ್‌, ಮಂಡಿ ಮತ್ತು ಮೊಣಕೈಗೆ ಗಾರ್ಡ್‌ಗಳನ್ನು ಕಟ್ಟಿಕೊಂಡು ಸೈನಿಕರಂತೆ ಸಾಲಾಗಿ ನಿಲ್ಲುತ್ತಾರೆ. ಪೋಷಕರು ನಗೆಯರಳಿಸಿ, ಮಕ್ಕಳತ್ತ ಕೈ ಬೀಸುತ್ತಾರೆ...

ಈ ದೃಶ್ಯ ಇಲ್ಲಿ ಪ್ರತಿದಿನವೂ ಕಂಡು ಬರುತ್ತದೆ. ಹೌದು, ಮಕ್ಕಳಿಗೆ ‘ರೋಲರ್‌ ಸ್ಕೇಟಿಂಗ್‌’ ಕಲಿಸಲೆಂದು ಪೋಷಕರು ನಸುಕಿನಲ್ಲಿಯೇ ಎದ್ದು, ಅವರನ್ನು ಅಣಿಗೊಳಿಸಿ, ಸ್ಕೇಟಿಂಗ್‌ ರಿಂಕ್‌ಗೆ ಕರೆ ತರುತ್ತಾರೆ. ರಿಂಕ್‌ ಸುತ್ತ ಇರುವ ಹಸಿರು ವಾತಾವರಣ ಮಕ್ಕಳ ಉತ್ಸಾಹವನ್ನು ನೂರ್ಮಡಿಗೊಳಿಸುತ್ತದೆ.

‘ಕೈಝನ್‌ ರೋಲರ್‌ ಸ್ಕೇಟಿಂಗ್‌ ಅಕಾಡೆಮಿ’ ವತಿಯಿಂದ ಆಯೋಜಿಸಿರುವ ‘ಸ್ಕೇಟಿಂಗ್‌ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ’ ದಲ್ಲಿ ಪಾಲ್ಗೊಂಡ ಮಕ್ಕಳು ಅರ್ಧಗಂಟೆ ‘ವಾರ್ಮ್‌ಅಪ್‌’ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಮೊದಲಿಗೆ ತಲೆಯಿಂದ ಪಾದದವರೆಗೆ ಸರಳ ವ್ಯಾಯಾಮಗಳನ್ನು ಮಾಡುತ್ತಾರೆ. ನಂತರ ತುದಿಬೆರಳ ಮೇಲೆ ನಡಿಗೆ, ಹಿಮ್ಮಡಿ ಮೇಲೆ ನಡಿಗೆ, ವಿ–ಶೇಪ್‌ ನಡಿಗೆ ಮಾಡುವ ಮೂಲಕ ದೇಹ ಮತ್ತು ಮನಸ್ಸನ್ನು ಸ್ಕೇಟಿಂಗ್‌ ಕ್ರೀಡೆಗೆ ಸಿದ್ಧಗೊಳಿಸುತ್ತಾರೆ. ಅಂತಿಮವಾಗಿ ಸೂರ್ಯ ನಮಸ್ಕಾರ, ಭುಜಂಗಾಸನ, ಉತ್ತಿತ ದ್ವಿಪಾದಾಸನ, ನೌಕಾಸನ, ವೀರಭದ್ರಾಸನ, ಸಿಂಹಾಸನ ಮುಂತಾದ ಆಸನಗಳನ್ನು ಮಾಡಿ ‘ದೈಹಿಕ ಮತ್ತು ಮಾನಸಿಕ ಸಮತೋಲನ’ಕ್ಕೆ ಒತ್ತು ನೀಡುತ್ತಾರೆ.   

3ರಿಂದ 15 ವರ್ಷದೊಳಗಿನ ಮಕ್ಕಳು ಸಾಲಾಗಿ ನಿಂತು ರಿಂಕ್‌ನ ಸುತ್ತ ಉರುಳುಗಾಲಿಗಳ ಮೇಲೆ ಗಿರಕಿ ಹೊಡೆಯುತ್ತಾರೆ. ಹೀಗೆ 30ರಿಂದ 45 ನಿಮಿಷಗಳ ಕಾಲ ಸ್ಕೇಟಿಂಗ್‌ ಮಾಡಿ, ಬೆವರು ಸುರಿಸುತ್ತಾರೆ. ರಿಂಕ್‌ನಲ್ಲಿ ಸುತ್ತುವಾಗ ಇತರರೊಂದಿಗೆ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಸಾಗುತ್ತಾರೆ. ರಿಂಕ್‌ನ ಸುತ್ತ ನಿಂತಿರುವ ಪೋಷಕರು ಚಪ್ಪಾಳೆ ತಟ್ಟುತ್ತಾ, ಕೂಗುತ್ತಾ ಪ್ರೋತ್ಸಾಹಿಸುತ್ತಾರೆ. ಸ್ಕೇಟಿಂಗ್‌ ಸೇರಿದ ನಾಲ್ಕೈದು ದಿನಗಳಲ್ಲಿ ಮೂವ್‌ಮೆಂಟ್‌ ಆರಂಭವಾಗಿ, 10ರಿಂದ 12 ದಿನಗಳಲ್ಲಿ ಪೋಷಕರೇ ನಿಬ್ಬೆರಗಾಗುವಂತೆ ಪುಟ್ಟ ಪುಟ್ಟ ಮಕ್ಕಳು ಉರುಳುಗಾಲಿಗಳ ಮೇಲೆ ಅದ್ಭುತ ಪ್ರದರ್ಶನ ನೀಡುತ್ತಾರೆ. 15 ದಿನಗಳ ಬೇಸಿಕ್‌ ಕ್ಯಾಂಪ್‌ ಪೂರ್ಣಗೊಳಿಸಿದವರು ಅಡ್ವಾನ್ಸ್‌ ಕ್ಯಾಂಪ್‌ಗೆ ಸೇರಿ, ಸ್ಪರ್ಧೆಗಳಿಗೆ ತರಬೇತಿ ಪಡೆಯುತ್ತಾರೆ.

ದೇಹ, ಮನಸ್ಸು ಸದೃಢ!

‘ರೋಲರ್ ಸ್ಕೇಟಿಂಗ್‌ನಿಂದ ಹಲವಾರು ಲಾಭಗಳಿವೆ. ಒಂದು ಗಂಟೆ ಸ್ಕೇಟಿಂಗ್‌ ಅಭ್ಯಾಸ ಮಾಡಿದರೆ, 500 ಕ್ಯಾಲೊರಿ ಕರಗುತ್ತದೆ. ರಕ್ತನಾಳಗಳು ವಿಕಸನಗೊಂಡು ಹೃದಯದ ಆರೋಗ್ಯ ವೃದ್ಧಿಯಾಗುತ್ತದೆ. ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಿಗುತ್ತದೆ. ಖಿನ್ನತೆ ಮತ್ತು ಒತ್ತಡ ನಿವಾರಣೆ ಮಾಡಿ, ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುತ್ತದೆ. ಆತ್ಮವಿಶ್ವಾಸ ಪುಟಿಯುವಂತೆ ಮಾಡಿ, ಸಕಾರಾತ್ಮಕ ಧೋರಣೆ ಬೆಳೆಸುತ್ತದೆ. ಸ್ನಾಯುಗಳನ್ನು ಸದೃಢಗೊಳಿಸಿ, ದೈಹಿಕ ಕ್ಷಮತೆ ನೀಡುತ್ತದೆ. ರಕ್ತದಲ್ಲಿರುವ ಗ್ಲುಕೋಸ್‌ ಪ್ರಮಾಣ ತಗ್ಗಿಸಿ, ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ದೇಹ ಮತ್ತು ಮನಸ್ಸಿಗೆ ಚೈತನ್ಯ ತುಂಬುತ್ತದೆ. ಹೀಗೆ ದೇಹ ಮತ್ತು ಮನಸ್ಸಿನ ‘ಫಿಟ್‌ನೆಸ್‌’ ಕಾಪಾಡಿಕೊಳ್ಳಲು ಸ್ಕೇಟಿಂಗ್‌ ಅತ್ಯುತ್ತಮ ಕ್ರೀಡೆ’ ಎನ್ನುತ್ತಾರೆ ತರಬೇತುದಾರ ಈರಣ್ಣ ಕಾಡಪ್ಪನವರ್‌.  

ಅಂಧರಿಗೂ ತರಬೇತಿ!

ಅಂಧರಿಗೆ ನಡೆದಾಡುವುದೇ ದೊಡ್ಡ ಚಾಲೆಂಜ್‌. ಆದರೆ ಅಂಧರು ಕೂಡ ಸ್ಕೇಟಿಂಗ್‌ ಮಾಡಬಲ್ಲರು ಎಂಬುದನ್ನು ಈರಣ್ಣ  ನಿರೂಪಿಸಿದ್ದಾರೆ. ನಾನೂ ಪಾಟೀಲ ಮತ್ತು ರವಿ ಹಿರೇಮಠ ಎಂಬ ಇಬ್ಬರು ಅಂಧರಿಗೆ ತರಬೇತಿ ನೀಡಿ, ಅವರನ್ನು ಸ್ಕೇಟಿಂಗ್‌ ಪಟುಗಳನ್ನಾಗಿ ಮಾಡಿದ್ದಾರೆ. ಮೊದಲಿಗೆ ನಾನೂ ಪಾಟೀಲ ಎಂಬ ಅಂಧ ವಿದ್ಯಾರ್ಥಿಯನ್ನು ಆಯ್ಕೆ ಮಾಡಿಕೊಂಡು, ಯೋಗ ತರಬೇತಿ ನೀಡುತ್ತಾರೆ. ನಂತರ ಸ್ಪರ್ಶ ಜ್ಞಾನದ ಮೂಲಕ ಸ್ಕೇಟಿಂಗ್‌ ಕೌಶಲವನ್ನು ತಿಳಿಸುತ್ತಾರೆ. 2000ನೇ ಇಸವಿಯಲ್ಲಿ ನಾನೂ ಪಾಟೀಲ ಹುಬ್ಬಳ್ಳಿಯಿಂದ ಕಾರವಾರದವರೆಗೆ 165 ಕಿ.ಮೀ. ದೂರದ ‘ಸ್ಕೇಟಿಂಗ್‌ ಮ್ಯಾರಥಾನ್‌’ ಅನ್ನು 3 ದಿನಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸುತ್ತಾನೆ. ದಾರಿಯುದ್ದಕ್ಕೂ ಸೂಚನೆಗಳನ್ನು ನೀಡುತ್ತಾ, ಶಿಷ್ಯನನ್ನು ಯಶಸ್ವಿಯಾಗಿ ದಡ ಮುಟ್ಟಿಸಿದ ಕೀರ್ತಿ ಈರಣ್ಣ ಅವರಿಗೆ ಸಲ್ಲುತ್ತದೆ. 

ಅಬಾಲ ವೃದ್ಧರಾದಿಯಾಗಿ ಎಲ್ಲರನ್ನೂ ಆಕರ್ಷಿಸುತ್ತದೆ ಸ್ಕೇಟಿಂಗ್‌. ಆರಂಭಿಕ ಹಂತದಲ್ಲಿ ‘ಸ್ಕೇಟಿಂಗ್‌ ರಿಂಕ್‌’ ಅಗತ್ಯ. ನಂತರ ಮನೆಗಳ ಒಳಗೆ, ಆವರಣದಲ್ಲಿ, ರಸ್ತೆಗಳ ಮೇಲೆ ಹೀಗೆ ಎಲ್ಲೆಂದರಲ್ಲಿ ರೋಲರ್‌ ಸ್ಕೇಟಿಂಗ್‌ ಮಾಡಬಹುದು. ನಗರ ಮತ್ತು ಪಟ್ಟಣಗಳಲ್ಲಿ ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ವಾಹನಗಳ ಮಧ್ಯೆಯೇ ಸ್ಕೇಟಿಂಗ್‌ ಪಟುಗಳು ಲೀಲಾಜಾಲವಾಗಿ ಹೋಗುತ್ತಾರೆ. ಇತರ ಕ್ರೀಡಾಪಟುಗಳಂತೆ, ಸ್ಕೇಟಿಂಗ್‌ ಪಟುಗಳು ಗಾಯಗೊಳ್ಳುವುದು ಅಪರೂಪ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !