ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣಬೆಗಳ ಲೋಕ ಬಗ್ಗೆ ನಿಮಗೆಷ್ಟು ಗೊತ್ತು? ಅಣಬೆಗಳಲ್ಲಿವೆ ಹೇರಳ ಪೋಷಕಾಂಶಗಳು!

ಅಣಬೆಗಳು ಶಿಲೀಂಧ್ರ‍್ರ (Fungi) ಗಳೆಂಬ ವಿಶೇಷ ಗುಂಪಿಗೆ ಸೇರಿದ ಜೀವಿಗಳು.
Published 10 ಸೆಪ್ಟೆಂಬರ್ 2023, 23:38 IST
Last Updated 10 ಸೆಪ್ಟೆಂಬರ್ 2023, 23:38 IST
ಅಕ್ಷರ ಗಾತ್ರ

–ಲೇಖನ: ಡಾ. ಎಸ್. ಶಿಶುಪಾಲ

ಮುಂಗಾರಿನ ಮಳೆ ಬಿದ್ದೊಡನೆ ಗೊಬ್ಬರದ ಗುಂಡಿ, ಗೆದ್ದಲಿನ ಹುತ್ತ, ಮುರಿದು ಬಿದ್ದ ಮರ, ಉದುರಿದ ಎಲೆಗಳ ಸಂದು-ಗೊಂದು, ತೇವಾಂಶವಿರುವ ಮಣ್ಣು ಮುಂತಾದ ಕಡೆಗಳಲ್ಲಿ ಕಾಣುವ ನಾಯಿಕೊಡೆಗಳನ್ನು ಅಣಬೆ ( mushroom) ಎನ್ನುವರು. ಮಳೆ ಬರುವವರೆಗೂ ಕಾಲಗರ್ಭದಲ್ಲಿ ಅಡಗಿರುವ ಈ ಜೀವಿಗಳು ಎಲ್ಲಿಂದಲೋ ತಕ್ಷಣ ಉದ್ಭವವಾದಂತೆ ಕಂಡುಬರುತ್ತವೆ.

ಬಣ್ಣ, ಆಕಾರ, ಗಾತ್ರದಲ್ಲಿ ಅದೇನು ವೈವಿಧ್ಯ? ಅಬ್ಬಬ್ಬ. ಎದ್ದುಕಾಣುವ ಬಣ್ಣಗಳು, ಆಕರ್ಷಕ ಆಕಾರಗಳು ಮತ್ತು ಕೆಲವು ವಿಷಯುಕ್ತವಾಗಿರುವುದರಿಂದ ಜನರು ಇವುಗಳ ಬಗ್ಗೆ ವಿಶೇಷ ಕುತೂಹಲ ಹೊಂದಿದ್ದಾರೆ.

ಅಣಬೆಗಳು ಶಿಲೀಂಧ್ರ‍್ರ (Fungi) ಗಳೆಂಬ ವಿಶೇಷ ಗುಂಪಿಗೆ ಸೇರಿದ ಜೀವಿಗಳು. ಇವು ಸಾವಯವ ವಸ್ತುಗಳಲ್ಲಿ ಬೆಳೆಯುವ ಕೊಳೆತಿನಿಗಳು ಅಥವಾ ಪೂತಿಭಕ್ಷಕರು (Saprophytes). ಕೊಳೆಯುತ್ತಿರುವ ವಸ್ತುಗಳ ನಡುವೆ ಕಣ್ಣಿಗೆ ಕಾಣದಂತೆ ಹತ್ತಿಯ ಎಳೆಯಂತಹ ಶಿಲೀಂಧ್ರದ ತಂತು (Hypha)ಗಳ ಜಾಲದ ರಚನೆಯಿರುವ ಕವಕಜಾಲ (Mycelium) ವಾಗಿರುತ್ತದೆ. ಕಣ್ಣಿಗೆ ಕಾಣದ ಈ ಜಾಲವು ಭೂಮಿಯ ಮಣ್ಣಿನೊಳಗೆ ಅಥವಾ ಮರದ ಬೊಡ್ಡೆಯೊಳಗೆ ಹರಡಿರುತ್ತದೆ

ಮಳೆ ಬಿದ್ದೊಡನೆ ಸಾಕಷ್ಟು ತೇವಾಂಶ ಸಿಗುವುದರಿಂದ ಇವುಗಳ ಶರೀರ ವಿಕಸನಗೊಂಡು ಸಂತಾನೋತ್ಪತ್ತಿಗಾಗಿ ಮಾರ್ಪಾಡಾಗುವ ಫಲಕಾಯವೇ (Fruiting body) ಕಣ್ಣಿಗೆ ಕಾಣುವ ಅಣಬೆ. ಫಲಕಾಯಗಳ ಗಾತ್ರ ಮತ್ತು ಆಕಾರಗಳನ್ನು ಗಮನಿಸಿ ಅಣಬೆಗಳನ್ನು ಉನ್ನತ ಶಿಲೀಂಧ್ರಗಳ ಗುಂಪಿಗೆ ಸೇರಿಸಲಾಗಿದೆ. ಫಲಕಾಯಗಳಲ್ಲಿ ಉತ್ಪಾದಿಸುವ ಲಕ್ಷಗಟ್ಟಲೇ ಬೀಜಕಣಗಳಿಂದ (Spores) ಅವುಗಳ ಸಂತಾನಭಿವೃದ್ಧಿಯಾಗುವುದು.

ಅಣಬೆಗಳ ವೈವಿಧ್ಯ

ವಿಶ್ವದಲ್ಲಿ ಅಂದಾಜು 14 ಸಾವಿರ ಅಣಬೆ ಪ್ರಭೇದಗಳನ್ನು ಗುರುತಿಸಲಾಗಿದೆ. ಅಣಬೆಗಳ ಫಲಕಾಯವು ಒಂದು ಪ್ರಕೃತಿಯ ವಿಶಿಷ್ಟ ಸೃಷ್ಟಿಯೇ ಸರಿ. ಅವುಗಳು ಸಣ್ಣ ಸೂಜಿ ಗಾತ್ರದಿಂದ ಹಿಡಿದು ಹಸುವಿನ ತಲೆಗಿಂತ ದೊಡ್ಡದಿರಬಹುದು. ಕೆಲವು ಅಣಬೆಗಳು ಮೂರು ಅಡಿಗಳಿಗಿಂತಲೂ ಹೆಚ್ಚು ಎತ್ತರವಿರುವುದನ್ನು ದಾಖಲಿಸಲಾಗಿದೆ. ಕೆಲವು ಅಣಬೆಗಳು ಕೊಡೆ ಆಕಾರದಲ್ಲಿದ್ದರೆ ಮತ್ತೆ ಕೆಲವು ಮಾಂಸದ ಮುದ್ದೆಯಂತೆ ಕಾಣುತ್ತವೆ. ಅಚ್ಚ ಬಿಳಿ ಬಣ್ಣದಿಂದ ಹಿಡಿದು ರಕ್ತಕೆಂಪು ಬಣ್ಣದವರೆಗೆ ವಿವಿಧ ಬಣ್ಣಗಳನ್ನು ಕಾಣಬಹುದು. ಕೆಲವು ಅಣಬೆಗಳು ಜೈವಿಕ ಪ್ರಕಾಶ (Bioluminescence)ವನ್ನು ಹೊಂದಿರುತ್ತವೆ. ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳಲ್ಲಿ ಅತೀ ಹೆಚ್ಚು ಅಣಬೆ ವೈವಿಧ್ಯವನ್ನು ಕಾಣಬಹುದು.

ಪರಿಸರದಲ್ಲಿ ಅಣಬೆಗಳ ಪಾತ್ರ

ತಮ್ಮ ಅಪೂರ್ವ ಕಿಣ್ವಗಳಿಂದ ಸಾವಯವ ರಾಸಾಯನಿಕಗಳನ್ನು ಜೀರ್ಣಿಸುವ ಅಣಬೆಗಳು ಮಣ್ಣನ್ನು ಫಲವತ್ತುಗೊಳಿಸುತ್ತವೆ. ಪರಿಸರದಲ್ಲಿ ಲಭ್ಯವಿರುವ ಸಸ್ಯ ಮತ್ತು ಪ್ರಾಣಿಜನ್ಯ ಸಾವಯವ ವಸ್ತುಗಳನ್ನು ಕರಗಿಸಿ ಅಲ್ಲಿನ ಪೋಷಕಾಂಶಗನ್ನು ತಾವು ಹೀರಿಕೊಂಡು ಸಸ್ಯಗಳಿಗೂ ಹಂಚುತ್ತವೆ. ಕೆಲವು ಅಣಬೆ ಪ್ರಭೇದಗಳು ಮರಗಳ ಬೇರುಗಳ ಜೊತೆಗೆ ಸೇರೆಕೊಂಡು ಶಿಲೀಂಧ್ರ ಬೇರು (Mycorrhiza) ಎಂಬ ಸಹಜೀವನ ನಡೆಸುತ್ತವೆ. ಸಾರರಹಿತ ಮಣ್ಣಿನಲ್ಲಿ ಮರಗಳು ಚೆನ್ನಾಗಿ ಬೆಳೆಯಲು ಈ ಅಣಬೆಗಳು ಅವಶ್ಯಕವಾಗಿದ್ದು ಅರಣ್ಯಿಕರಣಕ್ಕೆ ಸಹಕಾರಿ. ಮಳೆಕಾಡು ಮತ್ತು ಕೃಷಿ ಭೂಮಿಯಲ್ಲಿ ಲಬ್ಯವಿರುವ ಅಘಾದ ಪ್ರಮಾಣದ ಸಾವಯವ ವಸ್ತುಗಳ ಜೀರ್ಣಿಸುವ ಕ್ರಿಯೆಯಲ್ಲಿ ಮುಖ್ಯವಾಗಿ ಪಾಲುಗೊಂಡು ಜೈವಿಕ ಭೂ ರಸಾಯನ ಚಕ್ರ(Biogeochemical cycle) ದಲ್ಲಿ ವಿಭಜಕ (Decomposers)ಗಳ ಪಾತ್ರ ವಹಿಸುತ್ತವೆ. ಕೆಲವು ಪ್ರಭೇದದ ಸಸ್ಯಗಳಿಗೆ ರೋಗಕಾರಕಗಳು ಆಗಿವೆ.

ಅಣಬೆಗಳಲ್ಲಿನ ಪೋಷಕಾಂಶಗಳು

ಅಣಬೆಗಳಲ್ಲಿ ಅತೀ ಹೆಚ್ಚಿನ ಪ್ರೊಟೀನ್ ಅಂಶಗಳಿವೆ.  ಅವಶ್ಯಕವಾದ ಬಹುತೇಕ ಎಲ್ಲಾ ರೀತಿಯ ಅಮೈನೊಅಮ್ಲಗಳು ಲಭ್ಯವಿರುತ್ತದೆ. ನಾರಿನಂಶ, ವಿಟಮಿನ್-ಡಿ, ಪೊಟಾಸಿಯಂ, ಕಬ್ಬಿಣ, ತಾಮ್ರ, ಮ್ಯಾಂಗನೀಸ್ ಮುಂತಾದ ಲವಣಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ಲೊವಸ್ಟಾಟಿನ್, ಲೆಂಟಿನಾನ್, ಲೆಕ್ಟಿನ್, ರ‍್ಗೊಯೊನಿನ್, ಕಾರ್ಡಿಸೈಪಿನ್ ಮುಂತಾದ ಉಪಯುಕ್ತ ಔಷಧಿ ಅಂಶಗಳಿವೆ. ಕೊಬ್ಬು-ರಹಿತ ಆಹಾರವಾಗಿಯೂ ಬಳಕೆಯಲ್ಲಿದೆ. ಗುಡ್ಡಗಾಡು ಜನರು ತಿನ್ನುವ ಅಣಬೆಗಳನ್ನು ಪತ್ತೆ ಹಚ್ಚುವಲ್ಲಿ ನಿಷ್ಣಾತರು. ಈ ವಿಷಯವನ್ನು ಅವರು ತಲತಲಾಂತರಗಳಿಂದ ಅರಿತಿದ್ದಾರೆ. ಈ ಉಪಯುಕ್ತ ಜ್ಞಾನವನ್ನು ಅಣಬೆ ಶಾಸ್ತ್ರಜ್ಞರು ದಾಖಲಿಸಿ ಬಳಸಿಕೊಳ್ಳಬೇಕಾದ ಅಗತ್ಯವಿದೆ.

ಅಣಬೆ ಕೃಷಿ: ಕೆಲವು ಪ್ರಭೇದಗಳು ತಿನ್ನಲು ಯೋಗ್ಯವಾಗಿದ್ದರೆ ಮತ್ತೆ ಕೆಲವು ವಿಷಪೂರಿತವಾಗಿದ್ದು ತಿಂದರೆ ಮಾರಣಾಂತಿಕವಾಗಬಲ್ಲದು. ತಿನ್ನುವ ಕೆಲವು ಪ್ರಭೇದಗಳನ್ನು ಗುರುತಿಸಿ, ಹುಲ್ಲು ಮತ್ತು ಇತರೆ ಸಾವಯವ ವಸ್ತುಗಳನ್ನು ಬಳಸಿ ಅಣಬೆ ಕೃಷಿ ಮಾಡಲಾಗುತ್ತದೆ. ದೊಡ್ಡ ಹೋಟೆಲ್‌ಗಳಲ್ಲಿ ವಿವಿಧ ಸ್ವಾದಿಷ್ಟ ಅಣಬೆ ಖಾದ್ಯಗಳನ್ನು ತಯಾರಿಸಿ ಜನರನ್ನು ಆಕರ್ಷಿಸಲಾಗುತ್ತಿದೆ.

ವಿಶ್ವದಲ್ಲಿ ಅತಿಹೆಚ್ಚು ಬೆಳೆಯುವ ಅಣಬೆ ಪ್ರಭೇದವೆಂದರೆ ಅಗ್ಯಾರಿಕಸ್ ಬೈಸ್ಪೊರಸ್ (Agaricus bisporus).. ಇದರ ಮೌಲ್ಯ ವಿಶ್ವ ಮಾರುಕಟ್ಟೆಯಲ್ಲಿ ವಾರ್ಷಿಕ 10 ಬಿಲಿಯನ್ ಡಾಲರ್‌ಗೂ ಹೆಚ್ಚು! ವೈಟ್ ಬಟನ್ ಮಶುರೂಮ್ ಎಂದು ಕರೆಯಲ್ಪಡುವ ಈ ಅಣಬೆಯು ಭಾರತದಲ್ಲಿ ಬೆಳೆಯುವ ಅಣಬೆಗಳಲ್ಲಿ ಶೇ 73 ರಷ್ಟಿದೆ. ಭಾರತದಲ್ಲಿ  ₹ 80 ಕೋಟಿಗೂ ಅಧಿಕ ಮೌಲ್ಯದ ಅಣಬೆಯನ್ನು ಬೆಳೆದು ಬೇರೆ ದೇಶಗಳಿಗೆ ರಪ್ತು ಮಾಡಲಾಗುತ್ತಿದೆ. ಭಾರತದಲ್ಲಿ ಹೆಚ್ಚು ಪ್ರಮಾಣದ ಅಣಬೆ ಕೃಷಿ ಪಂಜಾಬ್, ಹರಿಯಾಣ ಮತ್ತು ಗುಜರಾತ್ ರಾಜ್ಯಗಳಲ್ಲಿದೆ. ಕರ್ನಾಟಕದಲ್ಲಿಯೂ   700 ಟನ್‌ಗಳಷ್ಟು ಅಣಬೆಯನ್ನು ಬೆಳೆಸುತ್ತಾರೆ. ಇಂತಹ ಬಹು ಉಪಯೋಗಿ ಜೀವಿಯ ಜೀವನಶೈಲಿ ವೈಜ್ಞಾನಿಕ ಕುತೂಹಲಕ್ಕೆ ಕಾರಣವಾಗಿದೆ.

( ಲೇಖಕರು: ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ ಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT