ಶನಿವಾರ, ಆಗಸ್ಟ್ 15, 2020
24 °C

ಹಲಸಿಗೊಂದು ದಿನ!

ರವಿಶಂಕರ ದೊಡ್ಡಮಾಣಿ Updated:

ಅಕ್ಷರ ಗಾತ್ರ : | |

ಆ ಹುಡುಗಿಯ ಕೈಗೆ ಅಂಟಿದ ಹಲಸಿನ ಮೇಣ ಈಗಲೂ ಹಾಗೆಯೇ ಇದೆ, ಹುಡುಗನ ಭುಜದಲ್ಲಿ ಹಲಸಿನ ಮುಳ್ಳುಗಳು ಚುಚ್ಚಿದ ಗುರುತು ಇನ್ನೂ ಮಾಸಿಲ್ಲ. ಮೆಟ್ಟುಕತ್ತಿಯಲ್ಲಿ ಕುಳಿತ ಅಧ್ಯಾಪಕರ ಮುಖ ಬೆವರಿದೆ. ಆದರೂ ಇವರೆಲ್ಲರ ಮುಖದಲ್ಲಿ ಸಂತಸದ ಛಾಯೆ ಗರಿಗೆದರಿದೆ. ಊರಲೆಲ್ಲಾ ನಡೆಯುವ ಹಲಸು ಹಬ್ಬಗಳ ಸಾಲು, ತಮ್ಮ ಶಾಲೆಯಲ್ಲೂ ಅಂತಹ ಒಂದು ಹಲಸು ಮೇಳಕ್ಕೆ ರೂಪು ನೀಡುವ ಕನಸು ಮೂಡಿಸಿತ್ತು. ಆ ಕನಸು ಇಂದು ನನಸಾಗುವ ಸಂಭ್ರಮ ಅವರಿಗೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೀಯಪದವು ವಿದ್ಯಾವರ್ಧಕ ಹಿರಿಯ ಮಾಧ್ಯಮಿಕ ಶಾಲೆಯ ಆವರಣದಲ್ಲಿ ಇತ್ತೀಚೆಗೆ ನಡೆದ ‘ಹಲಸಿನ ಮೇಳ’ ದ ದೃಶ್ಯವಿದು.

ಅಲಕ್ಷಿತ ಕಲ್ಪವೃಕ್ಷವಾಗಿದ್ದ ಹಲಸನ್ನು ಪ್ರವರ್ಧಮಾನಕ್ಕೆ ತರಲು ಜಿಲ್ಲೆಯ ವಿವಿಧೆಡೆ ಅವಿರತ ಪ್ರಯತ್ನಗಳು ನಡೆಯುತ್ತಿರುವ ಬೆನ್ನಲ್ಲೇ, ಆ ಮಹಾತ್ಕಾರ್ಯಕ್ಕೆ ಜಿಲ್ಲೆಯ ಹಲವು ಶಾಲೆಗಳೂ ಕೈ ಜೋಡಿಸಿವೆ. ಮುಳ್ಳೇರಿಯದ ಸರ್ಕಾರಿ ಪ್ರೌಢಶಾಲೆ, ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ, ಪುಣಚದ ಶ್ರೀದೇವಿ ಪ್ರೌಢಶಾಲೆ, ಮುಜುಂಗಾವಿನ ಶ್ರೀ ಭಾರತೀ ವಿದ್ಯಾಪೀಠ, ಧರ್ಮತ್ತಡ್ಕದ ಶ್ರೀದುರ್ಗಾಪರಮೇಶ್ವರೀ ಪ್ರೌಢಶಾಲೆಯಲ್ಲಿ ಹಲಸಿನ ಮೇಳದ ಜತೆಗೆ ವಿದ್ಯಾರ್ಥಿಗಳಿಗೆ ಹಲಸಿನ ಮೌಲ್ಯವರ್ಧನೆಯ ಕುರಿತು ಪ್ರಾತ್ಯಕ್ಷಿಕೆ ಆಯೋಜಿಸಿದ್ದವು. ಇವುಗಳಲ್ಲಿ ನಾನು ಹತ್ತಿರದಿಂದ ಗಮನಿಸಿದ್ದು ಮೀಯಪದುವಿನ ವಿದ್ಯಾವರ್ಧಕ ಹಿರಿಯ ಮಾಧ್ಯಮಿಕ ಶಾಲೆ.

ಈ ಶಾಲೆಯ ವ್ಯವಸ್ಥಾಪಕ ಜಯಪ್ರಕಾಶ್ ತೊಟ್ಟೆತ್ತೋಡಿ, ಮೂಲತಃ ಕೃಷಿಕರು. ಹಲಸಿನ ಬಗ್ಗೆ ತೀವ್ರ ಪ್ರೀತಿಯುಳ್ಳವರು. ಅವರಿಗೆ ನಮ್ಮ ಶಾಲೆಯಲ್ಲೂ ಹಲಸು ಹಬ್ಬ ಆಯೋಜಿಸಬೇಕೆಂಬ ಯೋಚನೆ ಬಂತು. ಶಾಲೆಯಲ್ಲಿ ವರ್ಷಕ್ಕೊಮ್ಮೆ ‘ಹಲಸಿನ ಡೇ’ ಆಚರಿಸಬೇಕೆಂದು ತೀರ್ಮಾನಿಸಿ, ಅಧ್ಯಾಪಕರಿಗೆ ಸೂಚಿಸಿದರು. ಸೂಚಿಸಿದ್ದು ಮಾತ್ರವಲ್ಲ, ತಮ್ಮ ಮನೆಯಿಂದ ಜತೆಗೆ ಸಮೀಪದ ರೈತರ ತೋಟದಿಂದ ಐವತ್ತಕ್ಕೂ ಹೆಚ್ಚು ಹಲಸಿನ ಕಾಯಿಗಳನ್ನು ತರಿಸಿದರು. ತಂದ ಕಾಯಿಗಳನ್ನು ಅಧ್ಯಾಪಕರು ಕೊಚ್ಚಿದರು, ಮಕ್ಕಳು ಸೊಳೆ ಬಿಡಿಸಿದರು. ಶಿಕ್ಷಕಿಯರು ದೊಡ್ಡ ಹಂಡೆಯಲ್ಲಿ ಸೊಳೆಯನ್ನು ತುಂಬಿಸಿ ಉಪ್ಪು ಬೆರೆಸಿದರು.

‘ಮೇಳದ ಆಯೋಜನೆ ಕೇವಲ ಸೊಳೆಯನ್ನು ಆಯ್ದು ಉಪ್ಪಿನಲ್ಲಿ ಹಾಕುವುದಕ್ಕೆ ಮಾತ್ರ ಸೀಮಿತವಾಗಬಾರದು. ಮೌಲ್ಯವರ್ಧನೆಯ ಕಡೆಗೆ ಗಮನ ನೀಡಬೇಕು, ಆ ಬಗ್ಗೆ ಮಕ್ಕಳಿಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿ ಹೇಳಬೇಕು. ನಾವು ಆ ಬಗ್ಗೆ ಈ ಬಾರಿ ಗಮನ ಹರಿಸಿದ್ದು ಸಾಕಾಗಲಿಲ್ಲ. ಮುಂದೆ ಖಂಡಿತವಾಗಿಯೂ ಅಂತಹ ಪ್ರಯತ್ನ ಕೈಗೊಳ್ಳುತ್ತೇವೆ’ ಎಂದವರು ಶಾಲೆಯ ಕನ್ನಡ ಶಿಕ್ಷಕ ರಾಜಾರಾಮ ರಾವ್.

ಮೇಷ್ಟ್ರು ಹೀಗೆ ಮಾತನಾಡುತ್ತಿರುವಾಗಲೇ, ಬಾಲಕ ಧನ್ವಿ, ಈ ಕಡೆ ಬಿದ್ದಿದ್ದ ಹಲಸಿನ ಬೀಜವನ್ನೆಲ್ಲ ಮತ್ತೊಂದು ಪಾತ್ರೆಗೆ ತುಂಬಿಸಿಕೊಂಡ. ಅವನ ಅಮ್ಮ, ಬೀಜ ಒಣಗಿಸಿ, ಪುಡಿ ಮಾಡಿ, ಇದರಿಂದ ಬಿಸ್ಕೆಟ್ ತಯಾರಿಸಿ ಕೊಡುತ್ತಾರಂತೆ, ಈ ಬೀಜದಿಂದ ಮಧ್ಯಾಹ್ನದ ಊಟಕ್ಕೆ ರಸಂ ಪೌಡರ್, ಸಂಜೆಯ ಬಾಯಾರಿಕೆ ತಣಿಸಲು ಕಷಾಯದ ಹುಡಿಯನ್ನು ಮಾಡಿ ಇರಿಸಿಕೊಂಡಿದ್ದರು. ಅವನಿಗೆ, ಹಲಸಿನ ಬೀಜವನ್ನು ಕೆಜಿಗೆ ₹ 30ರಂತೆ ಖರೀದಿಸುವವರೂ ಇದ್ದಾರೆ ಎಂಬುದು ಗೊತ್ತಿತ್ತು.

ಅವನ ಜತೆಗಿದ್ದವರಲ್ಲಿ ಒಬ್ಬ ಹುಡುಗ ‘ನನ್ನ ಅಜ್ಜ, ಅವರ ಬಾಲ್ಯದಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ಕೂಲಿಗಾಗಿ ಹಲಸಿನ ಬೀಜವನ್ನು ಸಂಭಾವನೆಯಾಗಿ ಕೊಡುತ್ತಿದ್ದರಂತೆ’ ಎಂದು ತಾನು ಕೇಳಿದ್ದ ಕಥೆಯನ್ನು ಹೇಳುತ್ತಿದ್ದ.

'ಬ್ರಿಟಿಷರು ನಮ್ಮ ಊರು ಬಿಟ್ಟು ಹೊರಡುವ ತನಕವೂ ಹಲಸಿನ ಬೀಜಕ್ಕೆ ಅಷ್ಟೊಂದು ಗೌರವವಿತ್ತಂತೆ. ಮುಂದೆ ಹಣದ ಬಳಕೆ ವ್ಯಾಪಕವಾಗುತ್ತಿದ್ದಂತೆ ಬಾರ್ಟರ್ ಪದ್ಧತಿ ಬದಿಗೆ ಸರಿಯಿತು' ಎಂದು ವಿವರಿಸುತ್ತಿದ್ದಾಗ ತಾವು ವಿವರಣೆ ನೀಡಲು ಕಷ್ಟಪಟ್ಟಿದ್ದ ವಿಚಾರವನ್ನೇ ಮಕ್ಕಳ ಬಾಯಿಯಿಂದ ಕೇಳಿಸಿಕೊಂಡ ಸಮಾಜ ವಿಜ್ಞಾನದ ಶಿಕ್ಷಕರು ಪಕ್ಕದಲ್ಲೇ ಹಾದುಹೋದರು.

ಮೇಳದ ವಿಶೇಷವೆಂದರೆ, ಶಿಕ್ಷಕರು ಮಕ್ಕಳಿಗೆ ಒಬ್ಬೊಬ್ಬರ ಮನೆಯಿಂದ ಒಂದೊಂದು ತರಹದ ಖಾದ್ಯಗಳನ್ನು ತರಲು ಹೇಳಿದ್ದರು. ಮಕ್ಕಳು ಖುಷಿಯಿಂದ ಅಮ್ಮಂದಿರ ಬಳಿ ವೈವಿಧ್ಯಮಯ ಖಾದ್ಯಗಳನ್ನು ಮಾಡಿಸಿಕೊಂಡು ಬಂದಿದ್ದರು. ಶಾಲೆಗೆ ಬರುವ ಹೊತ್ತಿಗೆ ಒಬ್ಬೊಬ್ಬರ ಬ್ಯಾಗಲ್ಲಿ ಅಮ್ಮ ಕೊಟ್ಟ ಹಲಸಿನ ದೋಸೆ, ಇನ್ನು ಕೆಲವು ಪಾತ್ರೆಗಳ ಒಳಗೆ ಇಡ್ಲಿ, ಮತ್ತೆ ಕೆಲವು ಕೊಟ್ಟಿಗೆ – ಕಡುಬು ಇದ್ದವು.

ಮೇಳದಲ್ಲಿ ಜೋಡಿಸುವ ಮುನ್ನವೇ, ಕಾಯಲು ವ್ಯವಧಾನವಿಲ್ಲದ ಹುಡುಗರು ಒಂದೊಂದೇ ಬ್ಯಾಗಿನಿಂದ ಚಿಪ್ಸ್, ಬೋಂಡ, ಕೇಕ್, ಚಾಕಲೇಟ್, ಹಲ್ವ ತಗೊಂಡು ತಿನ್ನತೊಡಗಿದ್ದರು. ಹೊಟ್ಟೆ ತುಂಬುವಷ್ಟು ಇಲ್ಲದಿದ್ದರೂ ನಾಲಿಗೆಗೆ ರುಚಿ ಸೋಕಿಸಿದರು.

ಶಾಲೆಯಲ್ಲಿ ಗಂಟೆ ಬಾರಿಸಿತು. ತರಗತಿ ಕೊಠಡಿಯಲ್ಲಿದ್ದ ಹುಡುಗಿಯರು ಪ್ರಾಂಗಣಕ್ಕೆ ಬಂದು ತಾವು ತಂದಿದ್ದ ಹಲಸಿನ ಹಣ್ಣಿನ ಕೇಕ್, ಬೀಜದ ಪುಡಿಯಿಂದ ತಯಾರಿಸಿದ ಚಕ್ಕುಲಿ, ಬಿಸ್ಕೆಟ್, ಜಾಮೂನ್, ರಸಂ ಪೌಡರ್, ಸೊಳೆಯಿಂದ ತಯಾರಿಸಿದ ವಡೆ, ಜಾಮ್, ಹಲ್ವಾ, ಸ್ಕ್ವಾಶ್, ಬನ್ಸ್, ಪಾಯಸ, ಬೇಳೆ ಹೋಳಿಗೆ, ದೋಸೆ, ಹಪ್ಪಳ, ಸೆಂಡಿಗೆ, ಉಂಡಲಕಾಳು, ಚಿಪ್ಸ್, ಹಲಸಿನ ಸೊಳೆಯ ರೊಟ್ಟಿ, ಸುಟ್ಟೇವು, ಗುಜ್ಜೆ ಮಂಚೂರಿ, ಕಬಾಬ್, ಗೆಣಸಲೆ... ಓಹ್.. ಪಟ್ಟಿ ಉದ್ದವಾಗುತ್ತಿತ್ತು. ಅವೆಲ್ಲ ತಿನಿಸುಗಳನ್ನು ಜೋಡಿಸಿದರು. ಎಲ್ಲವೂ ಹಲಸಿನ ಉತ್ಪನ್ನಗಳೇ. ವಸ್ತು ಪ್ರದರ್ಶನದಲ್ಲಿ ಇಟ್ಟಂತೆ ಹಲಸಿನ ಖಾದ್ಯಗಳನ್ನು ಜೋಡಿಸಲಾಗಿತ್ತು. ಮಕ್ಕಳು ಅಮ್ಮನಿಗೆ ಹೇಳಲು ಬೇಕಾದ ‘ರೆಸಿಪಿ’ಯನ್ನೆಲ್ಲ ಪರಸ್ಪರ ಕೇಳಿ ಬರೆದುಕೊಂಡರು.

ಶಾಲೆಯಲ್ಲಿ ಅಂದು ಮಧ್ಯಾಹ್ನದ ಬಿಸಿಯೂಟಕ್ಕೂ ಹಲಸಿನಕಾಯಿ ಪಲ್ಯ, ಹಲಸಿನ ಬೇಳೆ ಹುಡಿಯ ಸಾರು, ಗುಜ್ಜೆ ಸಾಂಬಾರು, ಹಲಸಿನಹಣ್ಣಿನ ಪಾಯಸ ರೆಡಿಯಾಗಿತ್ತು. ಮೇಳದಲ್ಲಿ ‘ಅನ್ನ ಮತ್ತು ಮಜ್ಜಿಗೆಯನ್ನು ಮಾತ್ರ ಇವರಿಗೆ ಹಲಸಿನಿಂದ ಮಾಡಲು ಸಾಧ್ಯವಾಗಲಿಲ್ಲ’ ಎಂದು ಯಾರದ್ದೋ ಮಾತು ಕೇಳಿಬಂತು. ಅದು ಕುಹಕವೋ, ಕುತೂಹಲವೋ...

ಎಲ್ಲೋ ಓದಿದ ನೆನಪು, ‘ಮಕ್ಕಳ ಮನಸ್ಸಿನಲ್ಲಿ ಒಂದು ಭಾವನೆ ಮೂಡಿದರೆ, ಅದು ಅವರೇ ಗೋಡೆಯಲ್ಲಿ ಬರೆದ ಅಕ್ಷರಗಳಂತೆ ಅಚ್ಚಳಿಯದೆ ಉಳಿಯಬಲ್ಲುದು’ ಎಂದು. ಹಾಗೆ ಶಾಲೆಯಲ್ಲಿ ವರ್ಷಕ್ಕೊಮ್ಮೆ ಹಲಸಿನ ದಿನ ಆಯೋಜಿಸುವುದರಿಂದ, ವಿದ್ಯಾರ್ಥಿಗಳಲ್ಲಿ ಹಲಸಿನ ಬಗ್ಗೆ ಪ್ರೀತಿ ಹುಟ್ಟುತ್ತದೆ, ಜಂಕ್‌ಫುಡ್ ಬಗೆಗಿನ ವ್ಯಾಮೋಹವನ್ನೂ ನಿಧಾನವಾಗಿ ಕರಗಿಸಬಹುದು. 

ಶ್ರೀರಾಮ ಕಾಲೇಜಿನಲ್ಲಿ…

ಕಲ್ಲಡ್ಕದ ಶ್ರೀರಾಮ ಪದವಿ ಕಾಲೇಜಿನ ವಾಣಿಜ್ಯ ಸಂಘ ಆಯೋಜಿಸಿದ್ದ ಹಲಸು ಮೇಳದಲ್ಲಿ ವಿದ್ಯಾರ್ಥಿಗಳೇ ತಯಾರಿಸಿದ್ದ 30 ವೆರೈಟಿಯ ಹಲಸಿನ ಖಾದ್ಯಗಳನ್ನು, ಹದಿನೈದು ಕೌಂಟರ್ ಗಳಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಹಲಸಿನ ಜಾಮ್, ಚಿಪ್ಸ್, ಜ್ಯಾಕ್‍ರೋಲ್, ಸೀಡ್‍ವಡಾ, ಬೋಂಡಾ, ಗಟ್ಟಿ, ಕ್ಷೀರಾ, ಹಲಸಿನ ಗೋಬಿ, ಪಾನಿಪುರಿ, ಜ್ಯೂಸ್, ಉಂಡುಲಗ, ಸಮೊಸ, ಬಜ್ಜಿ, ಚಾಟ್ಸ್, ಉಪ್ಪಿನ ಸೋಳೆ, ಬೇಯಿಸಿದ ಬೇಳೆ ಗಾರಿಗೆ, ಅಪ್ಪ, ಐಸ್‍ಕ್ರೀಂ, ಹಪ್ಪಳ, ಸಂಡಿಗೆ, ಸೋಂಟೆಯಂತಹ ಖಾದ್ಯಗಳಿದ್ದವು.

ವಿದ್ಯಾರ್ಥಿಗಳೇ ಯೋಜನೆ ರೂಪಿಸಿ, ಖರ್ಚು ವೆಚ್ಚದ ಜವಾಬ್ದಾರಿಯನ್ನು ತಾವೇ ನಿಭಾಯಿಸಿದ್ದರು. ಉತ್ಪನ್ನಗಳ ಮಾರಾಟದ ನಂತರ ಲಾಭಾಂಶದ ವಿವರಣೆ ಮಂಡನೆಗೆ ಶಿಕ್ಷಕರು ಸೂಚಿಸಿದ್ದರು.

ಖಾದ್ಯಗಳ ಜತೆಗೆ ತುಳುವ, ಬರಿಕೆ, ಚಂದ್ರಬರಿಕೆ, ಮುಂಡೆ ಹಲಸು, ರುದ್ರಾಕ್ಷಿ ಹಲಸು, ಕೆಂಪುಹಲಸು, ರಾಜರುದ್ರಾಕ್ಷಿ, ಅಂಟಿಲ್ಲದ ಹಲಸಿನಂತಹ ಹಲವು ಜಾತಿಯ ಹಣ್ಣುಗಳ ರುಚಿ ಸವಿಯಲು ಅವಕಾಶವಿತ್ತು.

ಹಲಸಿನ ವಿವಿಧ ತಳಿಗಳ ಪರಿಚಯ, ಗಿಡಗಳ ಮಾರಾಟ ಹಾಗೂ ಕಸಿಕಟ್ಟುವ ತರಬೇತಿಯನ್ನೂ ಆಯೋಜಿಸಿದ್ದರು. ಮಳೆಯನ್ನು ಲೆಕ್ಕಿಸದೇ ರೈತರು, ಮಹಿಳೆಯರು, ಬೇರೆ ಬೇರೆ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಸುಮಾರು ನಾಲ್ಕು ಸಾವಿರ ಮಂದಿ ಮೇಳದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಬೆನ್ನುತಟ್ಟಿದರು ಎನ್ನುತ್ತಾರೆ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕಿ ಸ್ವರ್ಣಗೌರಿ.

ವಿಜ್ಞಾನಸಂಘದ ವಿದ್ಯಾರ್ಥಿಗಳು ಹಲಸಿನ ವಿವಿಧ ಉಪಯೋಗ ಹಾಗೂ ವೈವಿಧ್ಯದ ಬಗ್ಗೆ 15 ನಿಮಿಷದ ಪ್ರಾತ್ಯಕ್ಷಿಕೆ ನೀಡಿದರು.

ವಿದ್ಯಾರ್ಥಿಗಳೇ ಆಯೋಜಿಸಿದ್ದ ಈ ಮೇಳದಿಂದಾಗಿ ತಮ್ಮ ಗೆಳೆಯರೂ ಸೇರಿದಂತೆ ಸಾರ್ವಜನಿಕರಲ್ಲಿ ಹಲಸಿನ ಬಗೆಗಿನ ಪ್ರೀತಿಯನ್ನು ವೃದ್ಧಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು