ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿಗೆ ಹೋಗಿದ್ರಂತೆ... ಮೈಲಾರಿ ಹೋಟೆಲ್‌ಗೆ ಹೋಗಿದ್ರಾ?

Last Updated 17 ಅಕ್ಟೋಬರ್ 2019, 9:53 IST
ಅಕ್ಷರ ಗಾತ್ರ

ಮೈಸೂರಿಗೆ ಹೋಗಿದ್ರಂತೆ. ಹೇಗಿದೆ ಅರಮನೆ? ಹಾಂ, ಮೈಲಾರಿ ಹೋಟೆಲ್‌ನಲ್ಲಿ ಮಸಾಲೆ ದೋಸೆ ತಿಂದ್ರಾ? ಈಗಲೂ ಹಾಗೆ ಇದೆಯಾ ಟೇಸ್ಟು? ಎಲ್ಲಿಂದಲೋ ಬಂದು ಮೈಸೂರಿಗೆ ಭೇಟಿ ನೀಡಿ ಹಿಂತಿರುಗುವ ಜನರನ್ನು ಅಕ್ಕಪಕ್ಕದ ಮನೆಯವರು, ಸಂಬಂಧಿಕರು ಕೇಳುವ ಪ್ರಶ್ನೆ ಇದು. ಇದು ಕೇವಲ ಪ್ರಶ್ನೆ ಅಲ್ಲ; ಅದೊಂದು ಭಾವನಾತ್ಮಕ ಸಂಬಂಧ.

ಅರಮನೆ ನಗರಿಯೊಂದಿಗೆ ತಳಕು ಹಾಕಿಕೊಂಡಿರುವ ಹೆಸರು ಮಸಾಲೆ ದೋಸೆ. ಅದರಲ್ಲೂ ಗರಿಗರಿಯಾದ ಈ ದೋಸೆಯನ್ನು ಮೈಲಾರಿ ಹೋಟೆಲ್‌ನಲ್ಲಿ ತಿಂದ್ರೆ ಮತ್ತಷ್ಟು ಮಜಾ. ಇಲ್ಲಿ ತುಂಬಾ ಹೊತ್ತು ಕಾದು ದೋಸೆ ತಿಂದ್ರೇನೇ ಒಂದು ಗತ್ತು.

ಈಗಂತೂ ಗಲ್ಲಿಗೊಂದರಂತೆ ಮೈಲಾರಿ ಹೋಟೆಲ್‌ಗಳು ಹುಟ್ಟಿಕೊಳ್ಳುತ್ತಿವೆ. ಹಿಂದೆ ಮುಂದೆ ಬೇರೆ ಹೆಸರು ಇಟ್ಟುಕೊಂಡು ಮಧ್ಯದಲ್ಲಿ ಮಾತ್ರ ಮೈಲಾರಿ ಎಂಬ ಬ್ರ್ಯಾಂಡ್‌ ಸೇರಿಸಿಬಿಡುತ್ತಾರೆ. ಇದು ಮೈಲಾರಿ ಎಂಬ ಹೆಸರು ಮಾಡಿರುವ ಮ್ಯಾಜಿಕ್‌. ಆದರೆ, ಟೇಸ್ಟಿಗೆ ಮಾತ್ರ ಒಂದೇ ಬ್ರ್ಯಾಂಡ್‌.

ಮೈಸೂರಿನ ನಜರ್‌ಬಾದ್ ಮುಖ್ಯರಸ್ತೆಯಲ್ಲಿ ಇರೋ ಹೋಟೆಲ್ ಮಾತ್ರ ಒರಿಜಿನಲ್‌ ಕಣ್ರಿ. ಅದು ಗೊತ್ತಾಗಲಿ ಎಂದೇ ‘ಒರಿಜಿನಲ್ ವಿನಾಯಕ ಮೈಲಾರಿ’ ಎಂಬ ಬೋರ್ಡು ನೇತುಬಿಟ್ಟಿದ್ದಾರೆ. ಇದು ಅಸಲಿ ಮೈಲಾರಿ ಹೋಟೆಲ್‌ ಕೂಡ. ಗ್ರಾಹಕರು ಗೊಂದಲಕ್ಕೆ ಒಳಗಾಗುವುದು ಬೇಡವೆಂದು ಈ ರೀತಿ ಫಲಕ ಹಾಕಿದ್ದಾರಂತೆ.

ಒಂದೆರಡು ಪುಟ್ಟ ಕೊಠಡಿಯ ಹೋಟೆಲ್‌ ಇಂದಿಗೂ ತನ್ನ ಘಮಲು ಉಳಿಸಿಕೊಂಡಿದೆ. ಗರಿಗರಿಯಾದ ಮಸಾಲೆ ದೋಸೆ, ಹೂವಿನಷ್ಟೇ ಕೋಮಲವಾದ ಬಿಸಿ ಬಿಸಿ ತುಪ್ಪದ ಖಾಲಿ ದೋಸೆ, ನಾಲಿಗೆಗೆ ಚಟ ಹಿಡಿಸುವ ಕಾಯಿ ಚಟ್ನಿ, ಆಲೂಗಡ್ಡೆ ಪಲ್ಯ, ಸಾಗು. ಅಬ್ಬಬ್ಬಾ, ಜೀವನದಲ್ಲೊಮ್ಮೆ ತಿನ್ನಲೇಬೇಕು. ಜೊತೆಗೆ ಇಡ್ಲಿ, ಬಿಸಿಬಿಸಿ ಕಾಫಿ, ಚಹಾ ಕೂಡ ಉಂಟು.

ಗ್ರಾಹಕರ ನೆಚ್ಚಿನ ತಿನಿಸು ತಾಣ ಎನಿಸಿರುವ ಈ ಹೋಟೆಲ್‌ಗೆ 80 ವರ್ಷಗಳ ಇತಿಹಾಸವಿದೆ. ಮೈಲಾರಸ್ವಾಮಿ ಎಂಬುವರು ಇದನ್ನು ಸ್ಥಾಪಿಸಿದ್ದರು. ಸದ್ಯಕ್ಕೆ ಅವರ ಪುತ್ರ ಎಂ. ರಾಜಶೇಖರ್‌ ಹೋಟೆಲ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ರಾಜಕಾರಣಿಗಳಿಂದ ಹಿಡಿದು ಸಿನಿಮಾ ತಾರೆಯರವರೆಗೆ ಇದು ಹಾಟ್‌ ಫೇವರಿಟ್‌ ಹೋಟೆಲ್‌. ವರನಟ ರಾಜಕುಮಾರ್‌ ಅವರು ಮೈಸೂರಿಗೆ ಶೂಟಿಂಗ್‌ಗೆಂದು ಬಂದಾಗಲೆಲ್ಲಾ ಸೆಟ್‌ನ ಹುಡುಗರೊಂದಿಗೆ ಇಲ್ಲಿಗೆ ಬರುತ್ತಿದ್ದರಂತೆ. ಪ್ರವಾಸಕ್ಕೆ ಬರುವ ವಿದೇಶಿಗರೂ ಈ ಹೋಟೆಲ್‌ ಹುಡುಕಿಕೊಂಡು ಬರುತ್ತಾರೆಂದರೆ ಎಷ್ಟರ ಮಟ್ಟಿಗೆ ಫೇಮಸ್‌ ಆಗಿರಬಹುದು ನೋಡಿ.

‘ಮೈಲಾರಿ ಹೋಟೆಲ್‌ನ ಯಾವುದೇ ಶಾಖೆ ಇಲ್ಲ. ಇರುವುದು ಇದೊಂದೇ ಹೋಟೆಲ್. ಗುಣಮಟ್ಟದಲ್ಲಿ ಯಾವತ್ತೂ ರಾಜಿ ಮಾಡಿಕೊಂಡಿಲ್ಲ. ಅದೇ ಪ್ರೀತಿ, ಅದೇ ವಿಶ್ವಾಸ, ಅದೇ ನಮ್ಮ ಸೀಕ್ರೆಟ್’ ಎಂದು ಖಡಕ್‌ ಆಗಿ ಹೇಳುತ್ತಾರೆ ಹೋಟೆಲ್‌ ಮಾಲೀಕರು.

ಫೋಟೊ: ಸವಿತಾ ಬಿ.ಆರ್.

(2019ರ ಸುಧಾ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾಗಿದ್ದ ಲೇಖನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT