ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಹರಿ: ಘಮಗುಡುವ ಕರಡಿ ಈ ಹಲಸು

ಅಕ್ಷರ ಗಾತ್ರ

ಈಗ ಮಾವ್ನೆಣ್ಣು ಅಳಿಸ್ನಣ್ಣಿನ ಕಾಲ. ಎಲ್ಲೆಲ್ಲೂ ಅವುಗಳದ್ದೇ ಸುಗ್ಗಿಯೋ ಸುಗ್ಗಿ. ಈ ಆ್ಯಪಲ್ಲು ದ್ರಾಕ್ಷಿ ಬರೋದ್ಕಿಂತ ಮುಂಚೆ ಯಾರಾರ ಅತಿಥಿಗಳು ಮನೆಗೆ ಹೋದ್ರೆ ಉದ್ದುಕೆ ಮಾವ್ನೆಣ್ಣ ಹೆಚ್ಚಿ ತಟ್ಟೆಗೆ ಹಾಕಿ ತಂದು ಮುಂದುಕೆ ಇಕ್ಕರು. ಈಗ್ಲೂ ಕೆಲವು ಕಡೆ ಅಂಗೆ ಮಾಡಬಹುದು. ಮಾವ್ನೆಣ್ಣು ಹಿಂಗೆ ಬೀದಿಗೆ ಬಂದ್ರುವೆ ಅಳಿಸ್ನೆಣ್ಣಿಗೆ ಮಾತ್ರ ಮಡಿ ಮೈಲ್ಗೆ ಜಾಸ್ತಿ. ಈಗ ಅಲ್ಲಲ್ಲೆ ಪ್ಲೇಟುಗಳೊಳಗೆ, ಬಸ್‌ನಲ್ಲಿ ಮಾರುವ ಬಾಟ್ಲಿಗಳೊಳಗೆ ಅರುಶ್ಣುಗೆ, ಕೆಂಪುಗೆ ತೊಳೆಗಳು ಕಾಣಿಸಬಹುದು. ಆದ್ರೆ ಹಿಂದೆ ಈ ಅಳಿಸ್ನೆಣ್ಣು ಹೀಗೆ ಬೀದಿಗೆ ಬಿದ್ದಿದ್ದೆ ಇಲ್ಲ. ಅಳಿಸ್ನಣ್ಣಿನ ಘಮ ಘಮ ಊರೆಲ್ಲ ಸೆಲೆ ಹೊಡೆಯಂಗೆ ಬಡುದ್ರುವೆ, ಈ ವಾಸ್ನೆ ಯಾರಮನೆ ಹೆಂಚಿನ ಸಂದಿಲಾಸಿ ಬತ್ತಾ ಐತೆ ಅಂತ ಗೊತ್ತಾಗ್ತಿರ್ಲಿಲ್ಲ. ಅಪ್ಪ ಅವ್ದಿರು ಯಾರ್‍ಗೂ ಕಾಣುಸ್ದಂಗೆ ಅಳಿಸ್ನಣ್ಣ ತಂದು ಮಡಿಕೆ ಸಾಲ ಸಂದಿಗೆ ದೂಕಿರರು. ಅದು ಬಲ್ತು ಕಳ್ತಂಗೆ ಕಳ್ತಂಗೆ ಚೂರು ಚೂರೆ ವಾಸ್ನೆನ ಬಿಟ್ಕೊಡಕೆ ಶುರುವಾಗದು.

ತೊಳೆ(ಸೊಳೆ)ಗಳನ್ನು ಸೀಳುಗಳನ್ನಾಗಿಸವು ಮುನ್ನ
ತೊಳೆ(ಸೊಳೆ)ಗಳನ್ನು ಸೀಳುಗಳನ್ನಾಗಿಸವು ಮುನ್ನ

ಕಾಯಾಗಿರೊ ಅದುನ್ನ ಅಣ್ಣಾಗೈತ ಯಂಗ ಅಂತ ಮೂಗ ಅಳ್ಳಿಸ್ಕೆಂಡು ಹೋಗಿ ಅದರ ಮೈಯ್ಯಿಗೆ ಒಡ್ಡಿವು. ವಾಸ್ನೆ ದೂರದಲ್ಲಿ ಐತೆ ಎನ್ನುವಾಗ ಇನ್ನು ಮುಂದುಕ್ಕೆ ಮೂಗ ಹಾನ್ಸಕೋಗಿ ಅದರ ಮುಳ್ಳುಗಳು ಮೂಗಿನ ತುದಿಗೆ ಪ್ರೆಸ್ ಆದದ್ದೂ ಇದೆ. ಕೆಲವು ಹಣ್ಣುಗಳು ವಾಸ್ನೆ ಬಿಟ್ಕೊಡ್ದಲೆ ಕಳ್ಳಾಟ ಆಡ್ತವೆ ಅಂತ ಕುಡ್ಳು ಮೂತಿ ತಗಂಡು ಉಂಡೆ ಹಾಕಿ ಸ್ವಾಡೆನೆಲ್ಲ ಬಗೆಮಾಡಿದಾಗ ಹಣ್ಣಿನ ಸಿಬಿರು ಸಿಕ್ಕದು. ಅದುನ್ನ ಬಾಯ್ಗಿಕ್ಕೆಂಡ್ರೆ ಒಂಚೂರು ಸಿಹಿ ಮಿಶ್ರಿತ ಉಳ್ಳುಗಿರದು.

ಇಂಥ ಕಿಲಾಡಿ ಅಳಿಸ್ನಣ್ಣುನ್ನ ಕುಯ್ಬೇಕು ಅಂದ್ರೆ ಮನೆಯ ಹಿರಿಯರು ಮಕ್ಳು ಮರಿನೆಲ್ಲ ಕರ್‍ದು ಸುತ್ತುಕು ಕುಂಡ್ರಿಸ್ಕೆಂಡು, ಕದ ಮುಂದುಕ್ಕೆ ಬಿಟ್ಕಂಡು, ಕೆಳಿಕೊಂದು ಗೋಣಿಚೀಲ ಆಕ್ಯಂಡು, ಎಲ್ಲರ ಕೈಗು ಅರಳೆಣ್ಣೆ ಸವರಿ ಚರ ಚರನ ಕುಯ್ದು ಎರಡು ಪಾಲು ಮಾಡಿ, ಅಲ್ಲಿಂದ ಬತ್ತಿದ್ದ ಅಂಟನ್ನ ಅದರ ಮುಳ್ಳಲ್ಲೆ ಸವರಿ ತೆಗೆದು, ಒಂದೊಂದು ಪಟ್ಟೆನ ಎಲ್ಲರ ಕೈಗು ಕೊಡೋರು. ಬೆಳಕಿನಲ್ಲಿ ಎಂದೂ ಅಳಿಸ್ನಣ್ಣುನ್ನ ಕುಯ್ದಿದ್ದೆ ಇಲ್ಲ. ಮಂದ ದೀಪದ ಬೆಳಕಿನಲ್ಲಿ ಅಳಿಸ್ನಣ್ಣು ಕುಯ್ತಿದ್ನ ಕಣ್ಬಿಟ್ಕಂಡು ನೋಡ್ತಿದ್ದ ಮಕ್ಕಳಿಗೆ ಅವರಜ್ಜಿ ಹೇಳ್ತಿದ್ದ ಕರಡಿಗೆ ಪ್ರಿಯವಾದ ಅಳಸಿನ ಹಣ್ಣಿನ ಕಥೆ ರೆಲೆ ಆಗ್ತಿತ್ತೊ ಏನೊ! ಹೊಸ ಫಲವನ್ನ ದೇವ್ರಿಗೆ ಅಂತ ಎಡೆ ಕೊಡೋರು. ಅಲ್ಲಿ ಪೂಜಾರ್‍ರು ತೊಳೆ ಸೀಳಿ ಕಾಯಿ ಬೆಲ್ಲ ಹಾಕಿ ಇನ್ನೂ ರುಚಿ ಕಟ್ಟಂಗೆ ಮಾಡಿರರು.

ಆಗಿನ ಹಣ್ಣುಗಳು, ಈಗಿನಂಗೆ ಹೈಬ್ರಿಡ್ ಅದು ಇದು ಉದ್ದುಕೆ ದಪ್ಪಗೆ ಇದ್ದುದು ಕಮ್ಮಿ ಅನ್ಸುತ್ತೆ. ಸಣ್ಣದಾಗಿದ್ರು ತೊಳೆಗಳು ತುಂಬಿರವು. ಒಳಗಡೆ ತೊಳೆಗಳು ಅವಿತಿರುವ ಬಗೆಯನ್ನು ಅದರ ಬಾಹ್ಯ ಆಕಾರದಲ್ಲೆ ಕೆಲವುಕಡೆ ಉಂಡುಂಡ್ಗೆ, ಇನ್ನ ಕೆಲವು ಕಡೆ ಹೊಟ್ಟೆ ಒಳಿಕೋದಂಗೆ ಇದ್ದು ಬಿಟ್ಟುಕೊಡವು. ನಾವೆಲ್ಲ ಒಂದೆರೆಡು ಪಟ್ಟೆ ತಿಂದು, ಸಾಕಾಗದಿದ್ದರೆ ತೊಳೆ ಪಕ್ಕದಲ್ಲೇ ಇರ್ತಿದ್ದ ಹಣ್ಣಿನ ಬಣ್ಣದ್ದೇ ಇದ್ದ ಗಟ್ಟಿ ಸ್ವಾಡೆಗಳನ್ನ ಜಬ್ಬುತ್ತಿದ್ದೆವು. ಹಣ್ಣು ತಿನ್ನೋರು ತಿಂತಾ ಇದ್ರೆ ಅವ್ವ ಬಿಸಾಡುವ ಬೀಜಗಳನ್ನ ಒಂದ್ಕಡೆ ಗುಡ್ಡಿಗೆ ಆಕ್ಯಂಡು ಅವುನ್ನ ಒಣಗಿಸಿ ಸುಟ್ಟುಕೊಡೋದರ ಕಡೆಗೆ ಇಲ್ಲವೇ ಅಳಸಿನ ಬೀಜದ ಬಸ್ಸಾರು ಮಾಡೋದ್ರ ಕಡೆಗೆ ಜಾಗೃತಿವಹಿಸುತ್ತಿತ್ತು. ‘ಈ ಅಳಿಸ್ನಣ್ಣು ಕುಯ್ದು ಪಾಲಾಕದು ಒಂದೇ ಆ ಹಂದಿ ಸೂಡಾಡದು ಒಂದೇ’ ಅಂತ ಕುಯ್ಯುತ್ತಿದ್ದ ಯಾರೋ ಹೇಳಿದ್ದ ನೆನಪು. ಆ ನಂತರ ತೊಳೆ ಖಾಲಿಯಾಗಿರುವ ಸ್ವಾಡೆಗಳನ್ನು ದನ ಕರಿಗೆ ಆಗ್ತವೆ ಅಂತ ಅದರ ಸ್ವಾಟೆಗೆ ಹಿಡಿಯೋ ಗಾತ್ರಕ್ಕು ಕುಯ್ದು ಒಂದು ಮೊರುಕ್ಕೆ ಅದ್ನೆಲ್ಲ ಎತ್ಕೆಂಡಿರರು. ಇನ್ನ ದನ ಕರ ಇಲ್ದರು ತಗಂಡೋಗಿ ಊರು ಮುಂದಲ ತಿಪ್ಪೆಗೆ ಸ್ವಾಡೆಗಳನ್ನ ಸುರ್ದಿರರು. ಆ ಸ್ವಾಡೆಗಳನ್ನ ನೋಡಿದಾಗ್ಲೆ ಗೊತ್ತಾಗ್ತಿತ್ತು ನೆನ್ನೆ ಮೊನ್ನೆಯಿಂದ ಘಮಗುಡುತ್ತಿದ್ದವ ಈ ಕರಡಿಯೇ ಎಂದು.

ಈಗ ಎಲ್ಲೆಲ್ಲೂ ಹಲಸೆ, ಆದರೆ ಆಗಿನಂತೆ ತಿನ್ನುವ ಬಾಯಿಗಳೇ ಇಲ್ಲದಂತಾಗಿವೆ.

ಕಡುಗೆಂಪುಹಲಸುಹಣ್ಣಿನ ಸೊಳೆ
ಕಡುಗೆಂಪುಹಲಸುಹಣ್ಣಿನ ಸೊಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT