ಜೋಳದ ರೊಟ್ಟಿ ತಟ್ಟುವುದನ್ನು ಕಲಿಯಬೇಕು

7
ಸೆಲೆಬ್ರಿಟಿ ಅಡುಗೆ

ಜೋಳದ ರೊಟ್ಟಿ ತಟ್ಟುವುದನ್ನು ಕಲಿಯಬೇಕು

Published:
Updated:
Deccan Herald

ನನಗೆ ಅಡುಗೆ ಮಾಡುವುದು ಅಂದ್ರೆ ತುಂಬ ಇಷ್ಟ. ಕಾಲೇಜು ಹೋಗುತ್ತಿದ್ದಾಗ ಸಣ್ಣ ಪುಟ್ಟ ಅಡುಗೆ ಮಾಡುತ್ತಿದ್ದೆ. ಆದರೆ ಈಗ ಸಿನಿಮಾ, ಚಿತ್ರೀಕರಣ ಎಂದು ಅಡುಗೆ ಮನೆಗೆ ಹೋಗುವುದೇ ಕಡಿಮೆ. ಆದರೆ ಸಮಯ ಸಿಕ್ಕಾಗಲೆಲ್ಲಾ ಅಮ್ಮನಿಗೆ ಸಹಾಯ ಮಾಡುತ್ತಿರುತ್ತೇನೆ. 

ನನಗೆ ಹೊಸ ಹೊಸ ಅಡುಗೆಗಳ ರುಚಿ ನೋಡುವುದು ತುಂಬಾ ಇಷ್ಟ. ಬೇರೆ ಸ್ಥಳಕ್ಕೆ ಹೋದಾಗ ಅಲ್ಲಿನ ಹೊಸ ರುಚಿ ಆಸ್ವಾದಿಸುತ್ತೇನೆ. ಮನೆಯಲ್ಲಿ ಅಮ್ಮನದೇ ಅಡುಗೆ ಜವಾಬ್ದಾರಿ. ಆದರೆ ನನಗೂ ಕೆಲವು ಅಡುಗೆ ಮಾಡಲು ಬರುತ್ತದೆ. ರಸಂ, ಚಿತ್ರಾನ್ನ, ಹೀರೇಕಾಯಿ ಚಟ್ನಿ, ಬಗೆ ಬಗೆ ಅನ್ನಗಳು, ಚಪಾತಿ, 3–4 ಬಗೆ ದೋಸೆಗಳು, ಪಡ್ಡು, ಕೊಬ್ಬರಿ ಚಟ್ನಿ ರುಚಿಯಾಗಿ ಮಾಡುತ್ತೇನೆ. ಅಮ್ಮ ಬೇರೆ ಕೆಲಸದಲ್ಲಿ ಬ್ಯುಸಿ ಇದ್ದರೆ ಅಥವಾ ಹೊರಗಡೆ ಹೋಗಿದ್ದರೆ ಗೊತ್ತಿರುವ ಅಡುಗೆಗಳಿಂದ ಮನೆಯನ್ನು ಮ್ಯಾನೇಜ್‌ ಮಾಡುತ್ತೇನೆ. 

ನಾನು, ನನ್ನ ತಂಗಿ ಎಂದಾದರೊಮ್ಮೆ ಅಡುಗೆ ಸ್ಪರ್ಧೆ ನಡೆಸುತ್ತಿದ್ದೆವು. ಯಾರು ಚೆನ್ನಾಗಿ ಮಾಡಿದ್ದಾರೆ ಎಂದು ಅಮ್ಮ ಹೇಳುತ್ತಿದ್ದರು. ನಾನು ಮಾಡಿದ ಮೊದಲ ಅಡುಗೆ ರಸಂ. ತಂಗಿಯೂ ಅದನ್ನೇ ಮಾಡಿದ್ದಳು. ಅಮ್ಮ ಆಕೆ ಮಾಡಿದ್ದ ರಸಂಗೆ ಹೆಚ್ಚು ಮಾರ್ಕ್ಸ್‌ ಕೊಟ್ಟಿದ್ದರು. ನಾನು ಮಾಡಿದ್ದ ಟೊಮೆಟೊ ರಸಂನ ರುಚಿ ಕೆಟ್ಟದ್ದಾಗಿತ್ತಂತೆ. 

ನಾವು ಹುಬ್ಬಳ್ಳಿ ಕಡೆಯವರು. ಅಮ್ಮ ಹುಬ್ಬಳ್ಳಿ, ಬೆಂಗಳೂರು ಕಡೆಯ ಎಲ್ಲಾ ಅಡುಗೆಗಳನ್ನೂ ಚೆನ್ನಾಗಿ ಮಾಡುತ್ತಾರೆ. ಅಮ್ಮ ಮಾಡುವ ಬಿರಿಯಾನಿ, ಪಲಾವ್, ಜೋಳದ ರೊಟ್ಟಿಯ ರುಚಿ ಅದ್ಭುತವಾಗಿರುತ್ತದೆ. ನನಗೂ ಅವುಗಳನ್ನೆಲ್ಲಾ ಕಲಿತುಕೊಳ್ಳಬೇಕೆಂಬ ಆಸೆಯಿದೆ. ಮುಂದೆ ನಾನು ಅವರ ಹಾಗೇ ರುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸಬೇಕು ಎಂಬಾಸೆಯಿದೆ. ಆದರೆ ನನಗೆ ಜೋಳದ ರೊಟ್ಟಿ ಮಾಡಲು ಬರುವುದೇ ಇಲ್ಲ. ಅದಕ್ಕೆ ಎಣ್ಣೆ ಹಾಕದೇ ಹಾಗೇ ತಟ್ಟುತ್ತಾರೆ. ಅದಕ್ಕೆ ತುಂಬ ಶಕ್ತಿ ಬೇಕು. ನೀರಿನಲ್ಲಿ ಕೈ ಅದ್ದಿಕೊಂಡು, ನೀರು ಇಟ್ಟುಕೊಂಡೇ ರೊಟ್ಟಿ ತಟ್ಟುತ್ತಾರೆ. ನಾನು ಹಾಗೇ ಮಾಡಿದರೆ, ರೊಟ್ಟಿಯನ್ನು ತವಾಕ್ಕೆ ಹಾಕುವಷ್ಟರಲ್ಲಿ ಹರಿದು ಹೋಗುತ್ತದೆ. ಅದಕ್ಕೆ ಎಷ್ಟು ನೀರು ಬೇಕು ಎಂಬುದು ಗೊತ್ತೇ ಆಗುವುದಿಲ್ಲ. ಮರಳಿ ಯತ್ನ ಅಂತಾರಲ್ಲಾ? ರೊಟ್ಟಿ ತಟ್ಟುವುದನ್ನು ಕಲಿಯಲೇಬೇಕು. 

ನಮ್ಮ ಮನೆಯಲ್ಲಿ ಹಬ್ಬ ಹರಿದಿನಗಳಲ್ಲಿ ವಿಶೇಷ ಅಡುಗೆ ಇದ್ದೇ ಇರುತ್ತದೆ. ಮೊನ್ನೆ ನಾಗರ ಪಂಚಮಿಗೆ ಅಮ್ಮ ರವೆ ಲಡ್ಡು, ಎಳ್ಳುಂಡೆ, ಶೇಂಗಾ ಉಂಡೆ, ಅಂಟಿನುಂಡೆ ಮಾಡಿದ್ದರು. ಇನ್ನೂ ಅದು ಖಾಲಿಯಾಗಿಲ್ಲ. ಅಷ್ಟರಲ್ಲಾಗಲೇ ವರಮಹಾಲಕ್ಷ್ಮೀ ಹಬ್ಬ ಬಂದಿದೆ. ಈ ಹಬ್ಬವನ್ನು ಪ್ರತಿವರ್ಷ ಮನೆಯಲ್ಲಿ ಸರಳವಾಗಿ ಆಚರಿಸುತ್ತೇವೆ. ಆದರೆ ಹಬ್ಬದಡುಗೆ ಮಾತ್ರ ಜೋರಿರುತ್ತದೆ. ಪುಳಿಯೋಗರೆ, ಚಿತ್ರಾನ್ನ, ಗೋಧಿ ಹುಗ್ಗಿ, ರವೆ ಸಜ್ಜೆ, ಕಜ್ಜಾಯವನ್ನು ಮಾಡುತ್ತಾರೆ. ನಾನೂ ಹಬ್ಬದ ದಿನಕ್ಕೆ ಕಾಯುತ್ತಿದ್ದೇನೆ.

ಗೋಧಿ ಹುಗ್ಗಿ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು: 2 ಕಪ್‌ ಗೋಧಿ ನುಚ್ಚು, 5 ಕಪ್‌ ಬೆಲ್ಲ, ಏಲಕ್ಕಿ 5, ಒಣ ಕೊಬ್ಬರಿ ಅರ್ಧ ಬಟ್ಟಲು, 1 ಕಪ್‌ ಗಸಗಸೆ, 100 ಗ್ರಾಂ ಗೋಡಂಬಿ–ದ್ರಾಕ್ಷಿ, 1/2 ಕಪ್‌ ಕಡ್ಲೆಬೇಳೆ. 

ಮಾಡುವ ವಿಧಾನ: ಗೋಧಿ ನುಚ್ಚು ಹಾಗೂ ಕಡ್ಲೆ ಬೇಳೆಯನ್ನು ಮಿಶ್ರ ಮಾಡಬೇಕು. ಕುಕ್ಕರ್‌ಗೆ 10 ಕಪ್‌ ನೀರು ಹಾಕಿ ಅದಕ್ಕೆ ಗೋಧಿ, ಕಡ್ಲೆಬೇಳೆ ಮಿಶ್ರಣ ಹಾಕಬೇಕು. 10– 12 ವಿಶಲ್‌ ಕೂಗಿಸಬೇಕು. ಇದು ಚೆನ್ನಾಗಿ ಬೆಂದ ಮೇಲೆ 5 ಕಪ್‌ ಬೆಲ್ಲ ಹಾಕಿ, ಕುದಿಸಬೇಕು. ಈಗ ಮತ್ತೊಂದು ಪಾತ್ರೆಯಲ್ಲಿ ಗಸಗಸೆ, ಗೋಡಂಬಿ, ದ್ರಾಕ್ಷಿ, ಒಣ ಕೊಬ್ಬರಿಯನ್ನು ತುಪ್ಪದಲ್ಲಿ ಹುರಿದುಕೊಂಡು ಸಿದ್ಧವಾಗಿರುವ ಪಾಯಸಕ್ಕೆ ಹಾಕಿ, 5 ನಿಮಿಷ ಕುದಿಸಿದರೆ ಗೋಧಿ ಹುಗ್ಗಿ ಸಿದ್ಧ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !