ಬುಧವಾರ, ಆಗಸ್ಟ್ 4, 2021
20 °C

ವಿಶ್ವ ಆಹಾರ ಸುರಕ್ಷತಾ ದಿನ: ಆರೋಗ್ಯಕ್ಕೆ ಹಿತವಾಗಿರಲಿ ಸಂಗ್ರಹಿಸಿದ ಆಹಾರ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ಆಹಾರ ಸುರಕ್ಷತೆ ಇಂದಿನ ದಿನಗಳಲ್ಲಿ ನಿಜಕ್ಕೂ ಸವಾಲೇ ಸರಿ. ಆಹಾರ ಸುರಕ್ಷತೆಗೂ ಕೆಲವೊಂದು ಸ್ಮಾರ್ಟ್‌ ವಿಧಾನಗಳನ್ನು ಅನುಸರಿಸಿದರೆ ಪೌಷ್ಟಿಕಾಂಶದ ಮೌಲ್ಯವನ್ನು ಉಳಿಸಿ, ಆಹಾರ ಕಲುಷಿತವಾಗದಂತೆ ತಡೆಯಬಹುದು ಎನ್ನುತ್ತಾರೆ ತಜ್ಞರು.

ವಿಶ್ವದಲ್ಲಿ ವರ್ಷಕ್ಕೆ ಸುಮಾರು 600 ಮಿಲಿಯನ್‌ ಮಂದಿ ಆಹಾರದಿಂದ ಹರಡುವ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಜೊತೆಗೆ 10ರಲ್ಲಿ ಒಬ್ಬರು ಕಲುಷಿತ ಆಹಾರ ಸೇವಿಸಿ ಸಾವನ್ನಪ್ಪುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ ಪ್ರತಿವರ್ಷ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ಆಹಾರದಿಂದ ಹರಡುವ ರೋಗಗಳಿಗೆ ಬಲಿಯಾಗುತ್ತಿದ್ದಾರೆ.

ಜೂನ್ 7 ವಿಶ್ವ ಆಹಾರ ಸುರಕ್ಷತಾ ದಿನ. ಈ ಸಂದರ್ಭದಲ್ಲಿ ಆಹಾರ ಸಂಗ್ರಹಿಸಲು ಸರಿಯಾದ ಮಾರ್ಗ ಯಾವುದು ಹಾಗೂ ಆಹಾರ ಕಲುಷಿತಗೊಳ್ಳುವುದನ್ನು ತಡೆಯವುದು ಹೇಗೆ ಎಂಬ ಮಾರ್ಗಗಳ ಬಗ್ಗೆ ನಾವು ಯೋಚಿಸಬೇಕು. 

ಅಸಮರ್ಪಕ ಅಡುಗೆ ಕ್ರಮ, ಬಳಸಲು ಯೋಗ್ಯವಲ್ಲದ ಆಹಾರದ ಬಣ್ಣಗಳನ್ನು ಬಳಸುವುದು ಮಾತ್ರವಲ್ಲದೇ ಅಸಮರ್ಪಕ ಆಹಾರ ಶೇಖರಣೆಯಿಂದಲೂ ಆಹಾರ ಕಲುಷಿತಗೊಳ್ಳಬಹುದು. ಇದರಿಂದ ಕಾಯಿಲೆಗಳು ಹರಡುವ ಅಪಾಯವೂ ಹೆಚ್ಚು. ಹಾಗಾದರೆ ದಿನಬಳಕೆಯ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ಯಾವ ರೀತಿ ಸಂಗ್ರಹಿಸಬಹುದು ಎಂಬುದರ ಕುರಿತು ಕೆಲವೊಂದು ಟಿಪ್ಸ್ ಇಲ್ಲಿದೆ.

ಗಾಜಿನ ಪಾತ್ರೆಗಳನ್ನು ಬಳಸಿ

ಪ್ಲಾಸ್ಟಿಕ್‌ ಪಾತ್ರೆಗಳಲ್ಲಿ ದೇಹಕ್ಕೆ ಹಾನಿ ಉಂಟು ಮಾಡುವ ರಾಸಾಯನಿಕಗಳಾದ ಗ್ಲೈಮ್‌, ಬಿಸ್ಪಿನಾಲ್‌ ಎ ಹಾಗೂ ಥಾಲೇಟ್ ಅಂಶಗಳು ಅಧಿಕವಿರುತ್ತದೆ. ಅಂತಹ ಪ್ಲಾಸ್ಟಿಕ್‌ ಡಬ್ಬಿಗಳಲ್ಲಿ ಆಹಾರ ಸಂಗ್ರಹಿಸುವುದರಿಂದ ತಿನ್ನುವ ಆಹಾರಕ್ಕೆ ನೇರವಾಗಿ ನಾವೇ ರಾಸಾಯನಿಕ ಸಿಂಪಡಿಸಿದಂತಿರುತ್ತದೆ. ಆ ಕಾರಣಕ್ಕೆ ನಿಮ್ಮ ಮನೆಯ ದಿನಬಳಕೆ ವಸ್ತುಗಳನ್ನು ಆದಷ್ಟು ಗಾಜಿನ ಡಬ್ಬಿಗಳಲ್ಲಿ ತುಂಬಿಸಿಡುವುದು ಉತ್ತಮ. ಬೇಳೆಕಾಳುಗಳು, ಅಕ್ಕಿ, ಟೀ ಪುಡಿ ಮುಂತಾದವುಗಳನ್ನು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿಡುವುದು ಉತ್ತಮ. 

ಕತ್ತರಿಸಿದ ಹಣ್ಣುಗಳನ್ನು ಗಾಳಿಗೆ ತೆರೆದಿಡಬೇಡಿ

ಹಣ್ಣುಗಳನ್ನು ಕತ್ತರಿಸಿದ ಮೇಲೆ ಎಂದಿಗೂ ತೆರೆದಿಡಬೇಡಿ. ಅರ್ಧ ಭಾಗ ತಿಂದು ಉಳಿದರ್ಧ ಭಾಗವನ್ನು ಆಮೇಲೆ ತಿನ್ನುತ್ತೇನೆ ಎಂದುಕೊಂಡು ಫ್ರಿಜ್‌ನಲ್ಲಿ ಇಡುತ್ತೀರಿ. ಆದರೆ ಫ್ರಿಜ್‌ನಲ್ಲಿ ಇಡುವಾಗಲೂ ಅವುಗಳನ್ನು ಮುಚ್ಚದೇ ತೆರೆದಿಡುವುದು ಒಳ್ಳೆಯದಲ್ಲ. ಅವುಗಳನ್ನು ಗಾಳಿಯಾಡದ ಪಾತ್ರೆಗಳಲ್ಲಿ ಮಚ್ಚಿ ಇಡುವುದು ಉತ್ತಮ. ಕತ್ತರಿಸಿದ ಹಣ್ಣುಗಳನ್ನು ಇಡಲೆಂದೇ ತೆಳುವಾದ ಪ್ಲಾಸ್ಟಿಕ್‌ ಕವರ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇವುಗಳಲ್ಲಿ ಕತ್ತರಿಸಿದ ಹಣ್ಣುಗಳನ್ನು ಮುಚ್ಚಿ ಇಡುವುದು ಉತ್ತಮ.

ನೆನೆಸಿಟ್ಟ ಆಹಾರ ಪದಾರ್ಥಗಳನ್ನು ಹೀಗೆ ಸಂಗ್ರಹಿಸಿಡಿ

ನೆನೆಸಿಟ್ಟ ಮಾಂಸ, ಬೇಳೆಕಾಳುಗಳಂತ ಆಹಾರ ಪದಾರ್ಥಗಳನ್ನು ಎಂದಿಗೂ ಫ್ರಿಜ್‌ನಲ್ಲಿ ತೆರೆದಿಡಬೇಡಿ. ಅದನ್ನು ಗಾಳಿಯಾಡದ ಪಾತ್ರೆಗಳಲ್ಲಿ ಅಥವಾ ಅಲ್ಯೂಮಿನಿಯಂ ಹೊದಿಕೆಯಿಂದ ಮುಚ್ಚಿಡಿ. ಹೊದಿಕೆ ಮುಚ್ಚುವ ಮೊದಲು ಪಾತ್ರೆಗಳ ಒಳಗೆ ಗಾಳಿಯಾಡಲು ಜಾಗ ಇದೆಯೇ ಎಂದು ಪರಿಶೀಲಿಸಿ. ಪಾತ್ರೆಯ ಮೇಲ್ಭಾಗಕ್ಕೆ ಸರಿಯಾಗಿ ಹೊದಿಕೆ ಮುಚ್ಚಿ. ಈ ರೀತಿ ಮಾಡುವುದರಿಂದ ಆಹಾರದ ಮಾಲಿನ್ಯವನ್ನು ತಡೆಯಬಹುದು. ನೆನೆಸಿಟ್ಟ ಆಹಾರ ಪದಾರ್ಥಗಳನ್ನು ಮೂರು ದಿನಗಳ ಒಳಗೆ ಬಳಸಬೇಕು.

ಹಾಲನ್ನು ಹೀಗೆ ಬಳಸಿ 

ಈಗ ತಾನೇ ಹಿಂಡಿದ ಹಾಲನ್ನು ಬಳಸುವುದಾದರೆ ಸರಿಯಾದ ಕ್ರಮದಲ್ಲಿ ಫ್ರಿಜ್‌ನಲ್ಲಿಟ್ಟು ಕುಡಿಯಬಹುದು. ಆದರೆ ಪ್ಯಾಕೆಟ್ ಹಾಲು ಬಳಸುವುದಾದರೆ ಮೊದಲು ಹಾಲನ್ನು ಕಾಯಿಸಿ, ನಂತರ ತಣ್ಣಗಾಗಲು ಬಿಡಿ. ನಂತರ ಅದನ್ನು  ಫ್ರಿಜ್‌ನಲ್ಲಿಡಿ. ಇದರಿಂದ ನೀವು ಕೆಲದಿನಗಳ ಕಾಲ ಆ ಹಾಲನ್ನು ಬಳಸಲು ಯೋಗ್ಯವಾಗಿರುತ್ತದೆ. ಟೆಟ್ರಾ ಪ್ಯಾಕ್‌ ಬಳಸುವುದಾದರೆ ಕೇವಲ ಮೂರು ದಿನಗಳ ಕಾಲ ಮಾತ್ರ ಬಳಸಿ. ಅದಕ್ಕಿಂತ ಹೆಚ್ಚು ದಿನ ಅದನ್ನು ಉಪಯೋಗಿಸಬೇಡಿ. ಬೆಣ್ಣೆ, ಪನ್ನೀರ್‌ನಂತಹ ವಸ್ತುಗಳನ್ನು ಅವುಗಳ ಪ್ಯಾಕ್‌ನಲ್ಲೇ ಫ್ರಿಜ್‌ನಲ್ಲಿ ಇಟ್ಟು ಬಳಸಬಹುದು. ಆದರೆ ಯಾವುದೇ ವಸ್ತುಗಳಾಗಲಿ ಬಹಳ ದಿನಗಳ ಕಾಲ ಇಟ್ಟು ಬಳಸುವುದು ಸೂಕ್ತವಲ್ಲ.

ಪ್ಲಾಸ್ಟಿಕ್‌ ಪಾತ್ರೆಯಲ್ಲಿ ಬಿಸಿನೀರು, ಆಹಾರ ಹಾಕಬೇಡಿ

ಪ್ಲಾಸ್ಟಿಕ್‌ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅನೇಕರು ಪ್ಲಾಸ್ಟಿಕ್‌ ಪಾತ್ರೆಗಳಲ್ಲಿ ಬಿಸಿ ಪದಾರ್ಥಗಳನ್ನು ಹಾಕುತ್ತಾರೆ. ಇದು ತುಂಬಾನೇ ಅಪಾಯಕಾರಿ. ಮನೆಯಲ್ಲಿ ಆದಷ್ಟು ಸ್ಟೀಲ್ ಹಾಗೂ ಅಲ್ಯೂಮಿನಿಯಂ ಪಾತ್ರೆಗಳನ್ನೇ ಬಳಸಿ. ನೀರು ಕುಡಿಯಲು ಲೋಹದ ಬಾಟಲಿಗಳನ್ನು ಬಳಸಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು