ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕನ್‌ ಕರಿಮನೆಯಿಂದಲೇ ಕರೆಯುತಿದೆ!

Last Updated 7 ಜುಲೈ 2018, 20:31 IST
ಅಕ್ಷರ ಗಾತ್ರ

ಮಾಂಸಾಹಾರಿಗಳು ಚಿಕನ್ ಖಾದ್ಯಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ; ಆದರೆ ಮನೆಯಲ್ಲಿ ತಯಾರಿಸಿ ತಿನ್ನುವುದೆಂದರೆ ಬೋರು. ಹೋಟೆಲ್‌ಗೆ ಹೋಗಿ ಇಷ್ಟಪಟ್ಟು ತಿನ್ನುತ್ತಾರೆ. ಅದರ ಬದಲು ಅದೇ ಖಾದ್ಯಗಳನ್ನು ರುಚಿಯಾಗಿಯೂ ಶುಚಿಯಾಗಿಯೂ ಮನೆಯಲ್ಲಿ ತಯಾರಿಸಿಕೊಂಡು ತಿಂದರೆ ಆರೋಗ್ಯಕ್ಕೂ ಹಿತ, ಬಾಯಿಗೂ ರುಚಿ ಎನ್ನುತ್ತಾರೆ, ಎಸ್. ಶಂಷಾದ್ ಬೇಗಂ

ಪೆಪ್ಪರ್ ಚಿಕ್ಕನ್ ಡ್ರೈ

ಬೇಕಾಗುವ ಸಾಮಗ್ರಿಗಳು:ಚಿಕನ್ – 1/2ಕೆ.ಜಿ., ಈರುಳ್ಳಿ - 2, ಗರಂಮಸಾಲೆ - 2ಟೀ ಚಮಚ, ಹಸಿಮೆಣಸಿನ ಕಾಯಿ - 3 , ಕರಿಬೇವು - ಸ್ಪಲ್ಪ, ದನಿಯಾ - 2ಟೀ ಚಮಚ, ಜೀರಿಗೆಪುಡಿ - 1ಟೀ ಚಮಚ, ಸೋಂಪು - 1ಟೀ ಚಮಚ, ಕೊತ್ತಂಬರಿ ಸೊಪ್ಪು -ಸ್ಪಲ್ಪ, ಎಣ್ಣೆ - 3ಟೀ ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ - 2ಟೀ ಚಮಚ, ಅರಿಸಿನ - 1ಟೀ ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಕರಿಮೆಣಸು ಪುಡಿ - 2ಟೀ ಚಮಚ, ನಿಂಬೆಹಣ್ಣಿನ ರಸ - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸೋಂಪು ಹಾಕಿ ಚಟಪಟಾಯಿಸಿ, ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗು ಸೀಳಿದ ಹಸಿಮಣಸಿಕಾಯಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ, ನಂತರ ಎಲ್ಲಾ ಮಸಾಲೆಪುಡಿಗಳನ್ನು ಹಾಗೂ ಉಪ್ಪು ಹಾಕಿ, ಚಿಕನ್‌ ತುಂಡುಗಳನ್ನು ಹಾಕಿ ಚೆನ್ನಾಗಿ ಬೆರೆಸಿ, ಸ್ವಲ್ಪ ನೀರು ಸೇರಿಸಿ, 30 ರಿಂದ 40 ನಿಮಿಷಗಳವರೆಗೆ ಬೇಯಿಸಿ.

ಚಿಕನ್‌ಬೆಂದ ನಂತರ ಕರಿಮೆಣಸಿನಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಇದಕ್ಕೆ ನಿಂಬೆರಸ ಹಾಗು ಕತ್ತರಿಸಿದ ಕೊತ್ತಂಬರಿಸೊಪ್ಪನ್ನು ಸೇರಿಸಿ. ಪೆಪ್ಪರ್ ಚಿಕನ್‌ಡ್ರೈಯನ್ನು ರೋಟಿ ಅಥವಾ ನಾನ್ ಜೊತೆ ಸೇವಿಸಿ.

***

ಚೆಟ್ಟಿನಾಡ್ ಚಿಕನ್‌ ಕರಿ

ಬೇಕಾಗುವ ಸಾಮಗ್ರಿಗಳು: ಚಿಕನ್‌ – 1ಕೆ.ಜಿ., ಕರಿಬೇವು - 1ಕಟ್ಟು, ಸಣ್ಣಗೆ ಕತ್ತರಿಸಿದ ಈರುಳ್ಳಿ - 3, ಸಣ್ಣಗೆ ಕತ್ತರಿಸಿದ ಟೊಮೆಟೊ - 4, ಮೆಣಸಿನಕಾಯಿ ಪುಡಿ - 1ಟೀ ಚಮಚ, ಅರಿಸಿನ - 1/2ಟೀ ಚಮಚ, ಗಸಗಸೆ - 2ಟೀ ಚಮಚ, ದನಿಯಾ - 1ಟೀ ಚಮಚ, ಸೋಂಪು - 1ಟೀ ಚಮಚ, ಜೀರಿಗೆ - 1ಟೀ ಚಮಚ, ಚಕ್ಕೆ - 1, ಏಲಕ್ಕಿ - 3, ಲವಂಗ - 5, ಕೆಂಪು ಮೆಣಸಿನಕಾಯಿ - 4 ರಿಂದ 5, ಕರಿಮೆಣಸು - 6 ರಿಂದ 8 ಕಾಳು, ನುಣ್ಣಗೆ ಕತ್ತರಿಸಿದ ಶುಂಠಿ–ಬೆಳ್ಳುಳ್ಳಿ - 2ಟೀ ಚಮಚ, ತುರಿದ ತೆಂಗು - 11/2 ಕಪ್‌, ನಿಂಬೆರಸ - 2ಟೀ ಚಮಚ, ಎಣ್ಣೆ - 100ಮಿ.ಲಿ, ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಒಂದು ಟೀ ಚಮಚ ಎಣ್ಣೆಯಲ್ಲಿ ಜೀರಿಗೆ, ಚಕ್ಕೆ, ಸೋಂಪು, ಲವಂಗ, ಏಲಕ್ಕಿ, ಕೆಂಪು ಮೆಣಸಿನಕಾಯಿ, ಕರಿಮೆಣಸು ಹಾಗು ದನಿಯಾ – ಇವುಗಳನ್ನು ಸ್ವಲ್ಪ ಹೊತ್ತು ಕರಿಯಿರಿ, ನಂತರ ಇದಕ್ಕೆ ನುಣ್ಣಗೆ ಕತ್ತರಿಸಿದ ಶುಂಠಿ + ಬೆಳ್ಳುಳ್ಳಿ ಹಾಕಿ ಕಡಿಮೆ ಉರಿಯಲ್ಲಿ ಹುರಿಯಿರಿ. ಉರಿ ಆಫ್ ಮಾಡಿ, ಇದಕ್ಕೆ ಸ್ವಲ್ಪ ನೀರು ಹಾಕಿ ತಣ್ಣಗಾಗಲು ಇಟ್ಟು ನುಣ್ಣಗೆ ರುಬ್ಬಿಕೊಳ್ಳಿ.

ಉಳಿದ ಎಣ್ಣೆಯಲ್ಲಿ ನುಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಇದಕ್ಕೆ ಅರಿಸಿನ, ಕೆಂಪು ಮೆಣಸಿನಕಾಯಿಯ ಪುಡಿ, ಅರ್ಧ ಕಟ್ಟು ಕರಿಬೇವು ಹಾಗೂ ರುಬ್ಬಿದ ಮಸಾಲೆ ಹಾಕಿ ಮಸಾಲೆಯ ಮೇಲೆ ಎಣ್ಣೆ ತೇಲಾಡುವವರೆಗೂ ಬೇಯಿಸಿ.

ಇದಕ್ಕೆ ಚಿಕನ್‌ ತುಂಡುಗಳು, ನುಣ್ಣಗೆ ಕತ್ತರಿಸಿದ ಟೊಮೆಟೊ ಸೇರಿಸಿ ಬೇಯಿಸಿ, ಉಪ್ಪು ಹಾಗೂ ಸ್ವಲ್ಪ ನೀರು ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ. ಚೆಟ್ಟಿನಾಡ್ ಚಿಕನ್‌ ಕರಿಯನ್ನು ಗೀರ್ ರೈಸ್, ರೋಟಿ, ದೋಸೆ ಜೊತೆ ಸೇವಿಸಿ.

***

ಸ್ಪೈಸಿ ಚಿಕ್ಕನ್ 65

ಬೇಕಾಗುವ ಸಾಮಗ್ರಿಗಳು: ಚಿಕನ್‌ – 1/2ಕೆ.ಜಿ., ಕರಿಬೇವು - ಸ್ವಲ್ಪ ಎಲೆಗಳು, ನುಣ್ಣಗೆ ಕತ್ತರಿಸಿದ ಈರುಳ್ಳಿ - 1, ಶುಂಠಿ–ಬೆಳ್ಳುಳ್ಳಿ ಪೇಸ್ಟ್ - 2ಟೀ ಚಮಚ, ಅರಿಸಿನ ಪುಡಿ - 1/2ಟೀ ಚಮಚ, ಕೆಂಪು ಮೆಣಸಿನಕಾಯಿ ಪುಡಿ - 1ಟೀ ಚಮಚ, ದನಿಯಾ - 2ಟೀ ಚಮಚ, ಜೀರಿಗೆ ಪುಡಿ - 1ಟೀ ಚಮಚ, ಸಾಸಿವೆ - 1/2ಟೀ ಚಮಚ, ಮೆಣಸಿನಕಾಯಿ – 4-5, ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಎಣ್ಣೆ - 50ಮಿ.ಲಿ. ಉಫ್ಫು ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಚಿಕನ್‌ ತುಂಡುಗಳನ್ನು ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಅರಿಸಿನಪುಡಿ, ದನಿಯಾ ಪುಡಿ, ಜೀರಿಗೆ ಪುಡಿ ಹಾಗೂ ಸ್ವಲ್ಪ ಎಣ್ಣೆಯಲ್ಲಿ ಚೆನ್ನಾಗಿ ಬೆರೆಸಿ ಅರ್ಧ ಗಂಟೆ ನೆನೆಸಿಡಿ.

ಬಾಣಲಿಯಲ್ಲಿ ಎಣ್ಣೆ ಬಿಸಿ ಮಾಡಿ ನುಣ್ಣಗೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಬೇಯಿಸಿ. ನಂತರ ನೆನೆಸಿದ ಚಿಕ್ಕನ್ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 30 ನಿಮಿಷಗಳ ಕಾಲ ಬೇಯಿಸಿ, ಬೆಂದ ನಂತರ ಬದಿಯಲ್ಲಿಡಿ.
ಒಂದು ಸಣ್ಣ ಒಗ್ಗರಣೆ ಪಾತ್ರೆಯಲ್ಲಿ ಬೆಚ್ಚಗಿನ ಎಣ್ಣೆಯಲ್ಲಿ ಸಾಸಿವೆ, ಕೆಂಪುಮೆಣಸಿನಕಾಯಿ ಹಾಗೂ ಕರಿಬೇವು ಹಾಕಿ. ಈ ಒಗ್ಗರಣೆಯನ್ನು ಬೆಂದ ಚಿಕನ್‌ನಲ್ಲಿ ಹಾಕಿ ಪುನ: 10 ನಿಮಿಷಗಳ ಕಾಲ ಬೇಯಿಸಿ, ಬಿಸಿ ಬಿಸಿಯಾಗಿ ರೋಟಿ ಜೊತೆ ಸೇವಿಸಿ.
***

ಚಿಕನ್‌ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು
: ಚಿಕನ್‌ – 1/2ಕೆ.ಜಿ. ಅಕ್ಕಿ/ಸಿರಿಧಾನ್ಯಗಳು - 1/2ಕೆ.ಜಿ., ಈರುಳ್ಳಿ – 2ರಿಂದ3 , ಶುಂಠಿ–ಬೆಳ್ಳುಳ್ಳಿ ಪೇಸ್ಟ್ - 3ಟೀ ಚಮಚ, ಹಸಿ ಮೆಣಸಿನಕಾಯಿ - 4ರಿಂದ 5, ಕೆಂಪು ಮೆಣಸಿನಕಾಯಿ ಪುಡಿ - 1ಟೀ ಚಮಚ, ಗರಂ ಮಸಾಲೆ - 1/2ಟೀ ಚಮಚ, ದನಿಯಾ - 1ಟೀ ಚಮಚ, ಅರಿಸಿನಪುಡಿ - 1/4ಟೀ ಚಮಚ, ಮೊಸರು - 2ಟೇಬಲ್‌ ಚಮಚ, ನಿಂಬೆಹಣ್ಣು - 1, ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 1/2ಕಟ್ಟು , ಪುದಿನಾ – 1/2ಕಟ್ಟು, ಟೊಮೆಟೊ - 4, ಎಣ್ಣೆ - 100ಮಿ.ಲಿ., ತುಪ್ಪ - 2ಟೀ ಚಮಚ, ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಈರುಳ್ಳಿಯನ್ನು ಬೆಚ್ಚಗಿನ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಹಸಿ ಮೆಣಸಿನಕಾಯಿಯನ್ನು ಹುರಿದುಕೊಳ್ಳಿ. ಇದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಇದಕ್ಕೆ ತೊಳೆದ ಚಿಕನ್‌ ತುಂಡುಗಳನ್ನು ಹಾಕಿ ಬೇಯಿಸಿ. ಇದಕ್ಕೆ ಕತ್ತರಿಸಿದ ಟೊಮೆಟೊ, ಪುದಿನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನಪುಡಿ, ಅರಿಸಿನಪುಡಿ, ದನಿಯಾ, ಗರಂ ಮಸಾಲೆ ಪುಡಿ, ಕಲಕುತ್ತಾ ಬೇಯಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, 20 ನಿಮಿಷಗಳ ಕಾಲ ಬೇಯಿಸಿ. ಚಿಕನ್ ಬೆಂದ ನಂತರ ಬದಿಯಲ್ಲಿಡಿ ಬೇರೆ ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ. ನೀರು ಕುದಿಯುವಾಗ ಅರ್ಧ ಗಂಟೆ ಕಾಲ ನೆನೆಸಿದ ಅಕ್ಕಿ/ಸಿರಿಧಾನ್ಯ ಹಾಕಿ ಬೇಯಿಸಿ. ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ಅಕ್ಕಿ/ಸಿರಿಧಾನ್ಯ ಅರ್ಧ ಬೆಂದ ನಂತರ ನೀರನ್ನು ಬಸಿಯಿರಿ.

ನಂತರ ಒಲೆಯ ಮೇಲೆ ಹೆಂಚು ಇಟ್ಟು, ಬೆಂದ ಚಿಕನ್‌ ಮಸಾಲೆಯ ಪಾತ್ರೆಯನ್ನು ಇಟ್ಟು, ಬಸಿದ ಅಕ್ಕಿಯನ್ನು ಹಾಕಿ ಅದರ ಮೇಲೆ ತುಪ್ಪವನ್ನು ಪಸರಿಸಿ. ನಂತರ ಪುದಿನಾ ಹಾಗೂ ಕೊತ್ತಂಬರಿ ಸೊಪ್ಪನ್ನು ಉದುರಿಸಿ ತಟ್ಟೆಯನ್ನು ಬಿಗಿಯಾಗಿ ಮುಚ್ಚಿ 30 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. ನಂತರ ಚೆನ್ನಾಗಿ ಕಲಕಿ. ಬಿಸಿ ಬಿಸಿ ಬಿರಿಯಾನಿಯನ್ನು ಈರುಳ್ಳಿ ರಾಯತ ಜೊತೆ ಸೇವಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT