ಗುರುವಾರ , ಫೆಬ್ರವರಿ 20, 2020
27 °C

ವಾವ್! ಒಮ್ಮೆ ರುಚಿ ನೋಡಿ ಒಣಮೀನು ಸಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾವಳಿ ಭಾಗದ ಸಮುದ್ರ ತೀರಗಳಿಗೆ ಹೋದರೆ ಘಮ್ಮನೆ ಒಣಮೀನಿನ ವಾಸನೆ ಮೂಗಿಗೆ ಬಡಿಯುವುದು ಸಾಮಾನ್ಯ. ಹಸಿಮೀನು ಹಾಗೂ ಅದರ ಖಾದ್ಯಗಳು ಕೇವಲ ಒಂದೆರಡು ದಿನಕ್ಕಷ್ಟೇ ಆದರೆ ಒಣಮೀನನ್ನು ಕೆಡದಂತೆ ವರ್ಷಗಳ ಕಾಲ ಇಡಬಹುದು. ಹಸಿಮೀನು ಸಿಗದ ಸಮಯದಲ್ಲಿ ಒಣಮೀನಿನ ಖಾದ್ಯಗಳೇ ಕರಾವಳಿಗರಿಗೆ ಊಟ ಸೇರುವಂತೆ ಮಾಡುವುದು. ಉಪ್ಪು, ಹುಳಿ, ಖಾರ ಕೊಂಚ ಜಾಸ್ತಿ ಸೇರಿಸಿ ಮಾಡುವ ಒಣಮೀನಿನ ಸಾರಿನ ರುಚಿಯನ್ನು ತಿಂದೇ ನೋಡಬೇಕು. ಒಣಸಿಗಡಿಗೆ ಒಣಕೊಬ್ಬರಿ ಸೇರಿಸಿ ಚಟ್ನಿಪುಡಿ ಮಾಡಿದರೆ 15 ದಿನಗಳ ಕಾಲ ಉಪ್ಪಿನಕಾಯಿಯಂತೆ ನೆಂಚಿಕೊಳ್ಳಬಹುದು. ಇವೆಲ್ಲದರ ರುಚಿಯನ್ನು ನೀವು ಒಮ್ಮೆ ಮಾಡಿ ಸವಿಯಿರಿ ಎನ್ನುತ್ತಾರೆ ರೇಷ್ಮಾ

  • ಒಣ ಸಿಗಡಿ ಚಟ್ನಿಪುಡಿ

ಬೇಕಾಗುವ ಸಾಮಗ್ರಿಗಳು: ಒಣಸಿಗಡಿ – 1/2 ಕಪ್, ಒಣಮೆಣಸು - 4, ಕೊತ್ತಂಬರಿ – 1/2 ಚಮಚ, ಜೀರಿಗೆ – 1/4 ಚಮಚ, ಕಾಳುಮೆಣಸು – 1/4 ಚಮಚ, ಹುಳಿ – ಸಣ್ಣ ಉಂಡೆ, ಒಣಕೊಬ್ಬರಿ – 1/2 ಕಪ್, ಉಪ್ಪು- ರುಚಿಗೆ

ತಯಾರಿಸುವ ವಿಧಾನ: ಮೊದಲು ಸಿಗಡಿಯನ್ನು ಘಮ್ಮನೆ ಹುರಿದುಕೊಂಡು ಬದಿಗಿರಿಸಿಕೊಳ್ಳಿ. ನಂತರ ಮೇಲೆ ಹೇಳಿದ ಸಾಮಗ್ರಿಗಳನ್ನು ನೀರು ಸೇರಿಸದೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಹುರಿದ ಸಿಗಡಿಯನ್ನು ಸೇರಿಸಿ ಚೆನ್ನಾಗಿ ಕಲೆಸಿ. ಇದು ರುಚಿಕರವಾಗಿದ್ದು ಕೆಲ ದಿನಗಳ ಕಾಲ ಕೆಡದಂತೆ ಇಡಬಹುದು.

  • ಒಣಮೀನಿನ ಚಟ್ನಿ

ಬೇಕಾಗುವ ಸಾಮಗ್ರಿಗಳು: ಒಣಮೀನು – 7, ಹಸಿಮೆಣಸು ಅಥವಾ ಒಣಮೆಣಸು – 4, ಕಾಯಿ - 3/4 ಕಪ್, ಜೀರಿಗೆ – 1 ಚಮಚ, ಕೊತ್ತಂಬರಿ – 1 ಟೇಬಲ್ ಚಮಚ, ಅರಿಸಿನ – ಚಿಟಿಕೆ, ಹುಳಿ – ನಿಂಬೆಗಾತ್ರ, ಬೆಳ್ಳುಳ್ಳಿ – 3 ಎಸಳು, ಈರುಳ್ಳಿ – ½, ಉಪ್ಪು – ಅಗತ್ಯವಿದ್ದರೆ.

ತಯಾರಿಸುವ ವಿಧಾನ: ಒಣಮೀನು ಹೊರತುಪಡಿಸಿ ಎಲ್ಲ ಸಾಮಗ್ರಿಗಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಒಣಮೀನನ್ನು ಘಮ್ಮನೆ ಎಣ್ಣೆಯಿಲ್ಲದೇ ಹುರಿದುಕೊಳ್ಳಿ. ಅದು ತಣ್ಣಗಾದ ಮೇಲೆ ಚಿಕ್ಕ ಚಿಕ್ಕದಾಗಿ ಕತ್ತರಿಸಿ ಚಟ್ನಿಯೊಂದಿಗೆ ಸೇರಿಸಿ ಕಲೆಸಿ. ಈಗ ಚಟ್ನಿ ರೆಡಿ.

  • ಶಾಡಿ, ಬಂಗುಡೆ ಒಣ ಮೀನಿನ ಫ್ರೈ

ಬೇಕಾಗುವ ಸಾಮಗ್ರಿಗಳು: ಶಾಡಿ ಅಥವಾ ಬಂಗುಡೆ – 3 ಮೀನು, ಖಾರದ ಪುಡಿ – 2 ಚಮಚ, ಫಿಶ್ ಫ್ರೈ ಮಸಾಲ – 1 ಚಮಚ, ಸೂಜಿರವೆ – 2 ಚಮಚ, ಉಪ್ಪು – ಸ್ವಲ್ಪ (ಮೀನು ಉಪ್ಪಿರುತ್ತದೆ)

ತಯಾರಿಸುವ ವಿಧಾನ: ಮೀನನ್ನು ಹೊರತುಪಡಿಸಿ ಮೇಲೆ ಹೇಳಿದ ಸಾಮಗ್ರಿಗಳನ್ನು ಸೇರಿಸಿ ನೀರು ಹಾಕದೆ ಕಲೆಸಿಕೊಳ್ಳಿ. ಅದಕ್ಕೆ ಒಣಮೀನಿನ ತುಂಡು ಸೇರಿಸಿ ಸ್ವಲ್ಪ ಹೊತ್ತು ಇಡಿ. ಆಮೇಲೆ ಕಾವಲಿಗೆ ಎರಡು ಚಮಚ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಮೀನನ್ನು ಅದರ ಮೇಲೆ ಹಾಕಿ. ಅದು ಒಂದು ಕಡೆ ಬೆಂದ ಮೇಲೆ ಮಗುಚಿ ಹಾಕಿ ಮುಚ್ಚಿಡಿ. ಆಮೇಲೆ ಸ್ವಲ್ಪ ಹೊತ್ತು ಬಿಟ್ಟು ಗ್ಯಾಸ್ ಆಫ್ ಮಾಡಿ. ಈಗ ರುಚಿಯಾದ ಒಣಮೀನಿನ ಫ್ರೈ ತಿನ್ನಲು ಸಿದ್ಧ.

  • ಒಣ ಮೀನು ಸಾರು

ಬೇಕಾಗುವ ಸಾಮಗ್ರಿಗಳು: ಒಣಮೀನು – 10 ರಿಂದ 12, ಒಣಮೆಣಸು – 7, ತೆಂಗಿನತುರಿ - 1 ಕಪ್ , ಕೊತ್ತಂಬರಿ – 1 ಟೇಬಲ್ ಚಮಚ, ಜೀರಿಗೆ – 1 ಟೀ ಚಮಚ, ಕಾಳುಮೆಣಸು – ಒಂದೂವರೆ ಚಮಚ, ಹುಳಿ – ನಿಂಬೆಹಣ್ಣಿನ ಗಾತ್ರ, ಅರಿಸಿನ ಪುಡಿ – 1/2ಚಮಚ, ಈರುಳ್ಳಿ – ½ ಕತ್ತರಿಸಿದ್ದು, ಬೆಳ್ಳುಳ್ಳಿ – 4 ಎಸಳು , ಟೊಮೆಟೊ – 1, ಶುಂಠಿ – 1ಚಿಕ್ಕದು, ಉಪ್ಪು –ರುಚಿಗೆ

ತಯಾರಿಸುವ ವಿಧಾನ: ಒಣಮೀನನ್ನು ನೀರಿನಲ್ಲಿ ತೊಳೆದು 5 ನಿಮಿಷಗಳ ನೆನೆಸಿ ಇಡಬೇಕು. ನಂತರ ಮೇಲೆ ಹೇಳಿದ ಸಾಮಗ್ರಿಗಳನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಪದಾರ್ಥವನ್ನು ಮಣ್ಣಿನ ಪಾತ್ರೆಯಲ್ಲಿ 10 ನಿಮಿಷಗಳ ಕಾಲ ಕುದಿಸಬೇಕು. ನಂತರ ನೆನೆಸಿದ ಒಣಮೀನು ಸೇರಿಸಬೇಕು. ಅದು ಕುದಿಯುತ್ತಿರಬೇಕಾದರೆ ಹೆಚ್ಚಿದ ಟೊಮೆಟೊ ಹಾಗೂ ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ, 5 ನಿಮಿಷಗಳ ಕಾಲ ಕುದಿಸಬೇಕು. ಈಗ ರುಚಿಯಾದ ಖಾರವಾದ ಒಣಮೀನಿನ ಸಾರು ರೆಡಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು