ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿ ಉಪವಾಸಕ್ಕೆ ಸಾಬಕ್ಕಿ ಕಿಚಡಿ, ತಂಪು

Last Updated 20 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""
""
""

ತಂಪು

ಬೇಕಾಗುವ ಸಾಮಗ್ರಿಗಳು: ಹಾಲು– 1 ಲೀಟರ್‌, ಸಕ್ಕರೆ– ಮುಕ್ಕಾಲು ಕಪ್‌, ಬಾದಾಮಿ, ಗೋಡಂಬಿ, ಪಿಸ್ತಾ– ತಲಾ ಕಾಲು ಕಪ್‌, ಸೋಂಪು– 2 ಟೀ ಚಮಚ, ಏಲಕ್ಕಿ ಪುಡಿ– 2 ಟೀ ಚಮಚ, ಗಸಗಸೆ– 2 ಟೀ ಚಮಚ, ದಾಲ್ಚಿನ್ನಿ– ಅರ್ಧ ಟೀ ಚಮಚ, ಕೇಸರಿ ದಳ– ಸ್ವಲ್ಪ.

ತಯಾರಿಸುವ ವಿಧಾನ: ಬಾದಾಮಿಯನ್ನು ಬಿಸಿ ನೀರಲ್ಲಿ 10 ನಿಮಿಷಗಳ ಕಾಲ ನೆನೆಹಾಕಿದ ನಂತರ ಮೇಲಿನ ಸಿಪ್ಪೆ ಸುಲಿಯಿರಿ. ನಂತರ ಬಾದಾಮಿ, ಪಿಸ್ತಾ, ಗೋಡಂಬಿ, ದಾಲ್ಚಿನ್ನಿ, ಗಸಗಸೆ, ಸೋಂಪು, ಏಲಕ್ಕಿ ಎಲ್ಲವನ್ನೂ ಸೇರಿಸಿ ಪುಡಿ ಮಾಡಿ. ಇದಕ್ಕೆ ಕಾಲು ಕಪ್‌ ಹಾಲು ಸೇರಿಸಿ ಅರೆದು ಪೇಸ್ಟ್‌ ಮಾಡಿ. ದಪ್ಪ ತಳದ ಪ್ಯಾನ್‌ಗೆ ಹಾಲು ಮತ್ತು ಕೇಸರಿ ದಳ ಸೇರಿಸಿ ಕುದಿಸಿ. ಇದಕ್ಕೆ ಸಕ್ಕರೆ ಸೇರಿಸಿ. ಕುದಿ ಬಂದ ನಂತರ ಅರೆದಿಟ್ಟುಕೊಂಡ ಪೇಸ್ಟ್‌ ಸೇರಿಸಿ ಮತ್ತೆ ಸಣ್ಣ ಉರಿಯಲ್ಲಿ ಐದು ನಿಮಿಷ ಕುದಿಸಿ. ತಣ್ಣಗಾದ ನಂತರ ಫ್ರಿಜ್‌ನಲ್ಲಿ ಇಟ್ಟು ಆಮೇಲೆ ಕುಡಿಯಿರಿ.

ಆಲೂಗೆಡ್ಡೆ– ಸಿಹಿಗುಂಬಳದ ದೋಸೆ

ಬೇಕಾಗುವ ಸಾಮಗ್ರಿಗಳು: ಆಲೂಗೆಡ್ಡೆ–1, ಸಿಹಿಗುಂಬಳದ ದೊಡ್ಡ ಹೋಳು–1, ಬಾರ್ಲಿ ಹಿಟ್ಟು– 1 ಕಪ್‌, ಶೇಂಗಾರ್‌ ಅಥವಾ ವಾಟರ್‌ ಚೆಸ್ಟ್‌ನಟ್‌ (ನೀರಿನಲ್ಲಿ ಬೆಳೆಯುವ ಈ ಸಸ್ಯದ ಬೀಜಗಳು, ಹಿಟ್ಟು ಮಾರುಕಟ್ಟೆಯಲ್ಲಿ ಲಭ್ಯ) ಹಿಟ್ಟು– ಅರ್ಧ ಕಪ್‌, ಮೊಸರು– ಕಾಲು ಕಪ್‌, ಹಸಿ ಮೆಣಸಿನಕಾಯಿ– 2, ಶುಂಠಿ– ಒಂದು ಚೂರು, ಕತ್ತರಿಸಿದ ಕೊತ್ತಂಬರಿ ಸೊಪ್ಪು– ಅರ್ಧ ಕಪ್‌, ಎಣ್ಣೆ, ಉಪ್ಪು.

ತಯಾರಿಸುವ ವಿಧಾನ: ಶುಂಠಿ ಮತ್ತು ಹಸಿ ಮೆಣಸಿನಕಾಯಿ ಜಜ್ಜಿಕೊಳ್ಳಿ. ಆಲೂಗೆಡ್ಡೆ ಹಾಗೂ ಸಿಹಿಗುಂಬಳಕಾಯಿ ತುರಿದುಕೊಳ್ಳಿ. ಇದನ್ನು ಉಪ್ಪು ನೀರಿನಲ್ಲಿ ನೆನೆಸಿಡಿ. ಎರಡೂ ಹಿಟ್ಟನ್ನು ಪಾತ್ರೆಗೆ ಹಾಕಿ. ಶುಂಠಿ– ಮೆಣಸಿನಕಾಯಿ ಪೇಸ್ಟ್‌, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ. ತುರಿದುಕೊಂಡ ಆಲೂ ಮತ್ತು ಸಿಹಿಗುಂಬಳಕಾಯಿಯನ್ನು ಹಿಂಡಿ ನೀರು ತೆಗೆದು ಹಾಕಿ. ಇದನ್ನು ಹಿಟ್ಟಿಗೆ ಸೇರಿಸಿ ಕಲೆಸಿ. ಅರ್ಧ ತಾಸು ಹಾಗೇ ಇಡಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ. ತವಾ ಬಿಸಿ ಮಾಡಿ, ಹಿಟ್ಟನ್ನು ಅದರ ಮೇಲೆ ಹರಡಿ. ಸ್ವಲ್ಪ ಎಣ್ಣೆಯನ್ನು ಹಾಕಿ. ಕೆಂಪಗಾಗುವವರೆಗೆ ಬೇಯಿಸಿ. ಇದನ್ನು ತೆಂಗಿನಕಾಯಿ ಚಟ್ನಿ ಜೊತೆ ಸವಿಯಿರಿ.

ಸಾಬಕ್ಕಿ ಕಿಚಡಿ

ಬೇಕಾಗುವ ಸಾಮಗ್ರಿಗಳು: ಸಾಬಕ್ಕಿ ಅಥವಾ ಸಾಬೂದಾಣೆ– 2 ಕಪ್‌, ಹುರಿದ ಶೇಂಗಾ– ಅರ್ಧ ಕಪ್‌, ಬೇಯಿಸಿದ ಆಲೂಗೆಡ್ಡೆ– 2, ಹಸಿ ಮೆಣಸಿನಕಾಯಿ– 6, ಎಣ್ಣೆ– 4 ಟೀ ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ಅರಿಸಿನ ಸ್ವಲ್ಪ, ಕಲ್ಲುಪ್ಪು ಸ್ವಲ್ಪ.

ತಯಾರಿಸುವ ವಿಧಾನ: ಸಾಬಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಒಂದು ತಾಸು ನೆನೆಹಾಕಿ. ಹುರಿದ ಶೇಂಗಾವನ್ನು ಪುಡಿ ಮಾಡಿ. ಒಂದು ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಶೇಂಗಾ ಪುಡಿ, ಜಜ್ಜಿದ ಹಸಿ ಮೆಣಸಿನಕಾಯಿ ಹಾಗೂ ನೆನೆ ಹಾಕಿದ ಸಾಬಕ್ಕಿಯನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಇದಕ್ಕೆ ಕಲ್ಲುಪ್ಪನ್ನು ಹಾಕಿ. ಆಗಾಗ ಸೌಟಿನಲ್ಲಿ ತಿರುವಿ. ಬೆಂದ ನಂತರ ಬೇಯಿಸಿದ ಆಲೂಗೆಡ್ಡೆಯನ್ನು ಕೈಯಲ್ಲಿ ಹಿಸುಕಿ ಇದಕ್ಕೆ ಸೇರಿಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ.

ಹುರಿಗಡಲೆ ತಂಬಿಟ್ಟು

ಬೇಕಾಗುವ ಸಾಮಗ್ರಿಗಳು: ಹುರಿಗಡಲೆ– 1 ಕಪ್‌, ತುರಿದ ಒಣ ಕೊಬ್ಬರಿ– ಅರ್ಧ ಕಪ್‌, ತುರಿದ ಬೆಲ್ಲ– ಅರ್ಧ ಕಪ್‌, ತುಪ್ಪ– ಅರ್ಧ ಕಪ್‌, ಗಸಗಸೆ– 1 ಟೀ ಚಮಚ, ಏಲಕ್ಕಿ– 2.

ತಯಾರಿಸುವ ವಿಧಾನ: ಹುರಿಗಡಲೆಯನ್ನು ಬಿಸಿ ಮಾಡಿ. ಇದರ ಜೊತೆ ಏಲಕ್ಕಿ ಸೇರಿಸಿ ನಯವಾದ ಪುಡಿ ಮಾಡಿಕೊಳ್ಳಿ. ಗಸಗಸೆಯನ್ನು ಹುರಿದಿಟ್ಟುಕೊಳ್ಳಿ. ನಂತರ ಒಣ ಕೊಬ್ಬರಿ ತುರಿಯನ್ನೂ ಬಿಸಿ ಮಾಡಿ. ಇದನ್ನೂ ನಯವಾದ ಪುಡಿ ಮಾಡಿಕೊಳ್ಳಿ. ಒಂದು ಪ್ಯಾನ್‌ನಲ್ಲಿ ತುಪ್ಪ ಬಿಸಿ ಮಾಡಿ, ಇದಕ್ಕೆ ಬೆಲ್ಲ ಹಾಕಿ ಸೌಟಿನಿಂದ ತಿರುವಿ. ಎರಡೂ ಚೆನ್ನಾಗಿ ಮಿಶ್ರವಾದ ನಂತರ ನೊರೆ ಬರಲಾರಂಭಿಸುತ್ತದೆ. ಈಗ ಪುಡಿ ಮಾಡಿದ ತೆಂಗಿನ ತುರಿ, ಗಸಗಸೆ ಸೇರಿಸಿ. ಕೊನೆಗೆ ಹುರಿಗಡಲೆ ಪುಡಿಯನ್ನು ಹಾಕಿ, ಸ್ಟವ್‌ನಿಂದ ಕೆಳಗಿಳಿಸಿ. ಬೇಕಿದ್ದರೆ ಸ್ವಲ್ಪ ತುಪ್ಪ ಸೇರಿಸಿ. ಈ ಮಿಶ್ರಣವನ್ನು ತಂಬಿಟ್ಟು ಆಕಾರದಲ್ಲಿ ಅಥವಾ ಉಂಡೆಯ ತರಹ ಮಾಡಿ ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT