100ಕ್ಕೂ ಹೆಚ್ಚು ದಂಪತಿಗಳಿಗೆ ಉಚಿತ ಸಾಮೂಹಿಕ ಷಷ್ಠಿಪೂರ್ತಿ

7

100ಕ್ಕೂ ಹೆಚ್ಚು ದಂಪತಿಗಳಿಗೆ ಉಚಿತ ಸಾಮೂಹಿಕ ಷಷ್ಠಿಪೂರ್ತಿ

Published:
Updated:

ಬೆಂಗಳೂರು: ನವ ವಧು–ವರರಂತೆ ಶೃಂಗರಿಸಿಕೊಂಡು, ಕೈ–ಕೈ ಹಿಡಿದು ಹಸೆಮಣೆಯತ್ತ ಹೆಜ್ಜೆ ಹಾಕುತ್ತಿದ್ದ ಹಿರಿಯ ಜೀವಗಳಿಗೆ ಭಾನುವಾರ ಉಚಿತ ಸಾಮೂಹಿಕ ಷಷ್ಠಿಪೂರ್ತಿ ಕಾರ್ಯಕ್ರಮ ನೆರವೇರಿತು.

ಮಂಗಳವಾದ್ಯದ ಮದುವೆ ಮನೆಯಂತೆ ಕಂಗೊಳಿಸುತ್ತಿದ್ದ ಸ್ವತಂತ್ರ ಉದ್ಯಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ದಂಪತಿಗಳು ಭಾಗವಹಿಸಿದ್ದರು. ಸಾಯಿಬಾಬಾ ಇಂಟರ್ ನ್ಯಾಷನಲ್ ಫೌಂಡೇಷನ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. 

‘ಷಷ್ಠಿಪೂರ್ತಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರಿಂದ ಮದುವೆ ದಿನಗಳ ನೆನಪುಗಳು ಮತ್ತೆ ಮರುಕಳಿಸಿದಂತಾಗಿವೆ. ಎಲ್ಲರಿಗೂ ಷಷ್ಠಿಪೂರ್ತಿ ಆಚರಿಸಿಕೊಳ್ಳುವ ಭಾಗ್ಯ ಸಿಗುವುದಿಲ್ಲ, ಸಿಕ್ಕರೆ ಅದೇ ಧನ್ಯ. ದಾಂಪತ್ಯದ ಬಂಡಿಯ ಜೋಡೆತ್ತುಗಳು, ಏಳು ಬೀಳಿನ ನಡುವೆ ಸಾಗಿ ಬಂದ ದಾರಿಯ ಕುರುಹುಗಳನ್ನು ಹಿಂತಿರುಗಿ ನೋಡುವ ಸದಾವಕಾಶ ಇಂದಿನ ಯುವ ದಂಪತಿಗಳಿಗೂ ಸಿಗಲಿ’ ಎನ್ನುತ್ತಾರೆ ಸುಂಕದಕಟ್ಟೆಯ ಕಲ್ಲಯ್ಯ, ಅಮರಾವತಿ ದಂಪತಿ.

‘ನನ್ನ ರಾಣಿಯ ಮೋಹಕ ನಗುವಿಗೆ ಬಿದ್ದು, ಪ್ರೀತಿಯ ಸೆಳೆತದಿಂದ ನಡೆದ ಮದುವೆ ದಿನಗಳ ನೆನಪುಗಳನ್ನು ತಂದು ಕೊಟ್ಟ ಷಷ್ಠಿಪೂರ್ತಿ ಸಂಭ್ರಮದಲ್ಲಿ ಭಾಗವಹಿಸಿ ಧನ್ಯರಾಗಿದ್ದೇವೆ. ಮತ್ತೊಮ್ಮೆ ಹೊಸ ಜೀವನಕ್ಕೆ ಕಾಲಿಟ್ಟಂತಾಗಿದೆ. ಮದುವೆಯ ಮಹತ್ವ ಅರಿಯುವ ಕಿಂಚಿತ್ತು ವ್ಯವಧಾನ ಇಂದಿನ ಪೀಳಿಗೆಗಿಲ್ಲ. ಮನ ಬಂದಂತೆ ಕಟ್ಟಿಕೊಳ್ಳುವ ಸಂಬಂಧಗಳಿಗೆ ರಕ್ಷಣೆಯ ಬೇಲಿ ಇಲ್ಲ. ವಿಚ್ಛೇದನಗಳೆ ಹೆಚ್ಚಾಗಿರುವಾಗ ಷಷ್ಠಿಪೂರ್ತಿಯ ಮಾತೆಲ್ಲಿ. ನಿಜ ದಾಂಪತ್ಯದ ಅರಿವಾದರೂ ಹೇಗಾದೀತು’ ಎಂಬ ಕಾವ್ಯಮಯ ಮಾತು ಸಿದ್ಧರಾಯ, ಶೃತಿ ದಂಪತಿ ಅವರದ್ದು. 

‘ನೂರೆಂಟು ಗೊಡವೆಗಳ ನಡುವೆಯೂ ಸಮಾಜ, ಕುಟುಂಬಕ್ಕೆ ಮಾದರಿಯಾಗುವಂತೆ 60–70 ವರ್ಷ ಸಹಬಾಳ್ವೆ ನಡೆಸಿಕೊಂಡು ಬಂದಿರುವ ಸಾವಿರಾರು ದಂಪತಿಗಳನ್ನು ನೋಡಿ, ಯುವ ದಂಪತಿಗಳು ಸ್ಫೂರ್ತಿ ಪಡೆದರೆ ನಮ್ಮ ಪ್ರಯತ್ನ ಸಾರ್ಥಕ’ ಎಂಬುದು ಫೌಂಡೇಷನ್‌ ಅಧ್ಯಕ್ಷ ಬಾಬಾ ಆದೇಶ್‌ ಗುರೂಜಿ ಅವರ ಅಭಿಪ್ರಾಯ.

‘ಏನೇ ಬಂದರೂ ಹಿಡಿದ ಕೈ ಬಿಡದೆ, ಕಷ್ಟ–ಸುಖಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು, ಸಹಬಾಳ್ವೆಯಿಂದ ಮುನ್ನಡೆದಾಗ ಮಾತ್ರ ದಾಂಪತ್ಯ ಜೀವನ ಸಾರ್ಥಕ’ ಎಂಬ ಮಾತು ನಾರಾಯಣಸ್ವಾಮಿ ದಂಪತಿ ಅವರದ್ದು.   

ಉಗ್ರ ರಥ ಶಾಂತಿ ಹೋಮ, ಧನ್ವಂತರಿ ಹೋಮ ಸೇರಿದಂತೆ, ಪ್ರಾರ್ಥನೆ, ಲೋಕ ಕಲ್ಯಾಣಕ್ಕಾಗಿ, ಪ್ರಕೃತಿ ವಿಕೋಪಗಳಿಂದ ಶಾಂತಿ, ಸರ್ವ ಜನಾಂಗದ ಶ್ರೇಯೋಭಿವೃದ್ಧಿಗಾಗಿ, ಆಯುರಾರೋಗ್ಯ ಐಶ್ವರ್ಯ ಅಭಿವೃದ್ಧಿಗಾಗಿ ವಿಶೇಷ ಪೂಜೆ, ಹೋಮ ನಡೆದವು. 

ಉಚಿತ ಷಷ್ಠಿಪೂರ್ತಿ ಕಾರ್ಯಕ್ರಮವಾಗಿದ್ದರೂ, ಹೋಮದ ಸಂಕಲ್ಪಕ್ಕೆ ₹1,001, ಹೋಮದಲ್ಲಿ ಪೋಷಕರು ಭಾಗವಹಿಸಲು ₹5,001 ಹಾಗೂ ಸಂಪೂರ್ಣ ಹೋಮ ಪ್ರಾಯೋಜಕರು ಮತ್ತು ರಾಜ ಪೋಷಕರಿಗೆ ₹25,000 ಎಂಬ ಶುಲ್ಕಗಳನ್ನು ವಿಧಿಸಲಾಗಿತ್ತು. ಆಸಕ್ತರು ಇವುಗಳಲ್ಲಿ ಭಾಗವಹಿಸಿದ್ದರು.

* ಷಷ್ಠಿಪೂರ್ತಿ ಸಂಭ್ರಮದಲ್ಲಿ ಭಾಗವಹಿಸಿದ್ದರಿಂದ ನಮ್ಮ ಮದುವೆ ದಿನದ ನೆನಪುಗಳು ಮರುಕಳಿಸಿವೆ. ಎಲ್ಲರಿಗೂ ಷಷ್ಠಿಪೂರ್ತಿ ಆಚರಿಸಿಕೊಳ್ಳುವ ಭಾಗ್ಯ ಸಿಗುವುದಿಲ್ಲ.

- ಕಲ್ಲಯ್ಯ– ಅಮರಾವತಿ ದಂಪತಿ, ಸುಂಕದಕಟ್ಟೆ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !